ಬಸವಣ್ಣರ ತತ್ವಗಳ ಮರ್ಯಾದೆಗೇಡು ಹತ್ಯೆ!

ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ತರುಣಿಯನ್ನು ಆಕೆಯ ತಂದೆ ಮತ್ತು ಕುಟುಂಬದ ಇತರ ಸದಸ್ಯರು ಸೇರಿ ಬರ್ಬರವಾಗಿ ಹತ್ಯೆಗೈದ ಅಮಾನವೀಯ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಉತ್ತರ ಭಾರತ, ನೆರೆಯ ಆಂಧ್ರ, ತಮಿಳುನಾಡಿನಲ್ಲಿ ಇಂತಹ ಹತ್ಯೆಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದನ್ನು ಕನ್ನಡಿಗರಾದ ನಾವು ಓದಿ ಬೆಚ್ಚಿ ಬೀಳುತ್ತಿದ್ದೆವು. ಇತ್ತೀಚೆಗೆ ಈ ಪಿಡುಗು ಕರ್ನಾಟಕಕ್ಕೂ ಕಾಲಿಟ್ಟಿದೆ. ವಿಪರ್ಯಾಸವೆಂದರೆ, ಮಾಧ್ಯಮಗಳು ಈ ಅಮಾನವೀಯ ಹತ್ಯೆಗೆ ‘ಮರ್ಯಾದಾ ಹತ್ಯೆ’ ಎನ್ನುವ ಗೌರವಪೂರ್ಣ ಹೆಸರನ್ನೂ ದಯಪಾಲಿಸಿದೆ. ಒಂದು ನಾಡಿಗಾಗಲಿ, ಒಂದು ಜಾತಿಗಾಗಲಿ, ಮನುಷ್ಯ ಕುಲಕ್ಕಾಗಲಿ ಯಾವ ರೀತಿಯಲ್ಲೂ ಗೌರವವನ್ನು ತಾರದ, ಮನುಷ್ಯನ ಕ್ರೌರ್ಯ ಮತ್ತು ಜಾತಿಯ ಅಹಂಕಾರಗಳನ್ನು ತೆರೆದಿಡುವ ಇದು ನಿಜವಾದ ಅರ್ಥದಲ್ಲಿ ‘ಮರ್ಯಾದೆಗೇಡು ಹತ್ಯೆ’ಯಾಗಿದೆ. ರಾಜ್ಯದಲ್ಲಿ ಈ ಮರ್ಯಾದೆಗೇಡು ಹತ್ಯೆ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಕರ್ನಾಟಕದ ಪಾಲಿಗೆ ಇದು ಖಂಡಿತಾ ಶೋಭೆಯಲ್ಲ. 12ನೇ ಶತಮಾನದಲ್ಲಿ ಅಂತರ್ಜಾತಿಯ ವಿವಾಹಗಳಿಗೆ ಕರೆ ನೀಡಿದ್ದ ಬಸವಣ್ಣ ಹುಟ್ಟಿದ ನಾಡು ನಮ್ಮದು. ಸ್ವತಃ ಬಸವಣ್ಣರೇ ಜಾತಿಯನ್ನು ಅಳಿಸುವುದಕ್ಕೆ ಅಂತರ್ಜಾತಿಯ ವಿವಾಹವನ್ನು ಏರ್ಪಡಿಸಿದ್ದರು. ಎಲ್ಲ ಶೋಷಿತ ಸಮುದಾಯವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಸಮುದಾಯವಾಗಿದೆ ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮ. ಇದೀಗ ಬಸವಣ್ಣ ಹುಟ್ಟಿದ ಕನ್ನಡ ನಾಡು, ದಲಿತ ಯುವಕನನ್ನು ಮದುವೆಯಾದ ಹೆಣ್ಣಿನ ಬರ್ಬರ ಕೊಲೆಗೆ ಸಾಕ್ಷಿಯಾಗಿದೆ. ಇದು ಬಸವಣ್ಣ ಸಾರಿ ಹೋದ ತತ್ವಕ್ಕೆ ಮಾತ್ರವಲ್ಲ, ಅಂಬೇಡ್ಕರ್ ಅವರ ಜಾತ್ಯತೀತ ಸಮಾಜದ ಕನಸಿಗೆ ಆದ ಬಹುದೊಡ್ಡ ಆಘಾತವಾಗಿದೆ. ವಿಪರ್ಯಾಸವೆಂದರೆ, ಜಾತಿ ಶ್ರೇಷ್ಠತೆಗಾಗಿ ತನ್ನ ಪುತ್ರಿಯನ್ನು ಕೊಲೆಗೈದವರೂ ಬಸವಣ್ಣರ ಅನುಯಾಯಿಗಳೇ.
ಇತ್ತೀಚೆಗೆ ವಿಧಾನಸಭೆಯಲ್ಲಿ ಬಹಿಷ್ಕಾರ ವಿರೋಧಿ ಕಾನೂನಿಗೆ ಅಂಗೀಕಾರ ನೀಡಲಾಯಿತು. ಈ ಕಾಯಿದೆಯ ಪ್ರಕಾರ ಯಾವುದೇ ವ್ಯಕ್ತಿ, ಕುಟುಂಬ, ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸಿದರೆ ಒಂದು ಲಕ್ಷ ರೂಪಾಯಿವರೆಗೆ ದಂಡ, ಮೂರು ವರ್ಷದವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಲು ಹಾಗೂ ಸ್ವಯಂ ಪ್ರೇರಿತವಾಗಿ ದೂರು ನೀಡಲು ಅವಕಾಶವಿದೆ. ಈ ನಾಡಿನಲ್ಲಿ ಬಹಿಷ್ಕಾರದ ಹಿಂದೆಯೂ ಜಾತಿಯ ರಾಡಿಯೇ ಕೆಲಸ ಮಾಡುತ್ತಿದೆ. ದೇವಸ್ಥಾನದ ಕಂಬವನ್ನು ಮುಟ್ಟಿದರೆ, ದೇವಸ್ಥಾನದೊಳಗೆ ಪ್ರವೇಶಿಸಿದರೆ ಕೆಳ ಜಾತಿಯ ಮೇಲೆ ಬಹಿಷ್ಕಾರ ಹಾಕಲಾಗುತ್ತದೆ. ಬಹಿಷ್ಕಾರವೆನ್ನುವುದು ಜಾತೀಯತೆಯ ಇನ್ನೊಂದು ಭೀಕರ ಮುಖವಾಗಿದೆ. ವಿಪರ್ಯಾಸವೆಂದರೆ, ಮಾರ್ಯಾದೆಗೇಡು ಹತ್ಯೆಯನ್ನು ಒಂದು ಕ್ರೈಂ ಅಥವಾ ಅಪರಾಧವಾಗಿ ಗುರುತಿಸಲಾಗುತ್ತದೆಯೇ ಹೊರತು, ಅದರ ಹಿಂದಿರುವ ಜಾತಿ ಮನಸ್ಥಿತಿಯನ್ನು ಗುರುತಿಸುವ ಕೆಲಸ ಈ ವರೆಗೆ ಆಗಿಲ್ಲ. ಮರ್ಯಾದೆಗೇಡು ಹತ್ಯೆಯ ನೇರ ಬಲಿ ಪಶು ಮಹಿಳೆಯಾಗಿರುತ್ತಾಳೆ. ಒಬ್ಬ ಮೇಲ್‌ಜಾತಿಯ ಪುರುಷ ಕೆಳಜಾತಿಯ ಮಹಿಳೆಯನ್ನು ವರಿಸಿದಾಗ ಹತ್ಯೆಗಳು ನಡೆಯುವುದು ತೀರಾ ಕಡಿಮೆ. ಹೆಚ್ಚೆಂದರೆ, ಹಾಗೆ ಮದುವೆಯಾದ ವ್ಯಕ್ತಿಯನ್ನು ಸಮುದಾಯ ತನ್ನ ಜಾತಿಯಿಂದ, ಕುಟುಂಬದಿಂದ ಹೊರಹಾಕಬಹುದು. ಆದರೆ ಯಾವಾಗ ಮೇಲ್‌ಜಾತಿಯ ಮಹಿಳೆ ಕೆಳಜಾತಿಯ ಪುರುಷನನ್ನು ಮದುವೆಯಾಗುತ್ತಾಳೆಯೋ ಆಗ ಜಾತಿ ಎನ್ನುವ ನಾಗರ ಹೆಡೆ ಬಿಚ್ಚುತ್ತದೆ. ಮೇಲ್‌ಜಾತಿಯ ಜನರಿಗೆ ಮುಖ್ಯವಾಗಿ ಪುರುಷರಿಗೆ ತಮ್ಮ ಕುಟುಂಬ, ಮರ್ಯಾದೆಯ ಪ್ರಶ್ನೆ ಎದುರಾಗುತ್ತದೆ. ತಮ್ಮದೇ ಸಮುದಾಯಕ್ಕೆ ಸೇರಿದ್ದರೂ ತರುಣಿಯನ್ನು ಹತ್ಯೆ ಮಾಡಿ ಕಳೆದು ಹೋದ ಮರ್ಯಾದೆಯನ್ನು ಮತ್ತೆ ಗಳಿಸುವ ಪ್ರಯತ್ನ ನಡೆಸುತ್ತಾರೆ. ಬಹುತೇಕ ಪ್ರಕರಣಗಳಲ್ಲಿ ಇಬ್ಬರನ್ನೂ ಕೊಂದು ಹಾಕಲಾಗುತ್ತದೆ. ತಮ್ಮ ಮನೆ ಮಗಳನ್ನು ಕೊಂದು ಹಾಕಲು ಸಿದ್ಧರಿದ್ದಾರೆ ಆದರೆ ಒಬ್ಬ ಕೆಳ ಜಾತಿಯ ಯುವಕನ ಜೊತೆಗೆ ಮದುವೆಯಾಗಿ ಸುಖ ಸಂಸಾರ ನಡೆಸುವುದನ್ನು ನೋಡಲು ಮೇಲ್‌ಜಾತಿಯ ಜನರು ಸಿದ್ಧರಿಲ್ಲ ಎನ್ನುವುದನ್ನು ಇಂತಹ ಘಟನೆಗಳು ಹೇಳುತ್ತವೆ.
ಭಾರತವು ಇಂತಹ ಮರ್ಯಾದೆಗೇಡು ಹತ್ಯೆಗಳಿಗಾಗಿ ವಿಶ್ವದಲ್ಲೇ ಕುಖ್ಯಾತ ದೇಶವಾಗಿ ಗುರುತಿಸಲ್ಪಡುತ್ತಿದೆ. ವಿಶ್ವದಲ್ಲಿ ಅಧಿಕೃತ ಅಂಕಿಅಂಶಗಳ ಪ್ರಕಾರ ವಾರ್ಷಿಕವಾಗಿ 5,000 ಮಹಿಳೆಯರು ‘ಮರ್ಯಾದೆ, ಗೌರವ’ದ ಹೆಸರಿನಲ್ಲಿ ಮರ್ಯಾದೆ ಗೇಡು ಜನರಿಂದ ಹತ್ಯೆಯಾಗುತ್ತಿದ್ದಾರೆ. ಅವರಲ್ಲಿ ಮೂರನೇ ಒಂದು ಭಾಗದಷ್ಟು ಜನರು ಭಾರತಕ್ಕೆ ಸೇರಿದವರಾಗಿದ್ದಾರೆ. ಭಾರತದ ಬಳಿಕ ಈ ಮರ್ಯಾದೆಗೇಡು ಹತ್ಯೆಯ ‘ಗೌರವ’ಕ್ಕೆ ಪಾಕಿಸ್ತಾನ ಸೇರ್ಪಡೆಯಾಗುತ್ತದೆ. ವಾಸ್ತವವಾಗಿ ವಿಶ್ವದಲ್ಲಿ ಪ್ರತಿವರ್ಷ 20,000 ಮಹಿಳೆಯರು ಗೌರವದ ಹೆಸರಿನಲ್ಲಿ ಕುಟುಂಬ ಸದಸ್ಯರಿಂದ ಹತ್ಯೆಯಾಗುತ್ತಿದ್ದಾರೆ. ಆದರೆ ಅಧಿಕೃತವಾಗಿ ಇವು ಮರ್ಯಾದೆಗೇಡು ಹತ್ಯೆಯಾಗಿ ಗುರುತಿಸಲ್ಪಡುವುದಿಲ್ಲ. ಭಾರತ. ಇರಾನ್, ಜೋರ್ಡಾನ್‌ನಂತಹ ದೇಶಗಳಲ್ಲಿ ಇಂತಹ ಹತ್ಯೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಭಾರತದಲ್ಲಿ ಜಾತಿ ವ್ಯವಸ್ಥೆ ವರ್ಷದಿಂದ ವರ್ಷಕ್ಕೆ ಬಲವಾಗುತ್ತಿರುವುದು ಇಂತಹ ಹತ್ಯೆಗಳು ಹೆಚ್ಚುವುದಕ್ಕೆ ಕಾರಣವಾಗಿದೆ. ಉತ್ತರ ಭಾರತದಲ್ಲಿ ಇಂತಹ ಕೃತ್ಯಗಳನ್ನು ಸಮಾಜ ಅಪರಾಧವೆಂದು ನೋಡುವುದಿಲ್ಲ. ಬದಲಿಗೆ ಅದನ್ನು ಒಂದು ‘ವೀರ ಕೃತ್ಯ’ವಾಗಿ ಪರಿಗಣಿಸುತ್ತದೆ. ಇಂತಹ ಹತ್ಯೆಗಳು ನಡೆದಾಗ ಹತ್ಯೆಗೈದ ಜನರನ್ನು ಬಹಿರಂಗವಾಗಿ ಸಮರ್ಥಿಸುವುದನ್ನು ನಾವು ಅಸಹಾಯಕರಾಗಿ ನೋಡಬೇಕಾಗುತ್ತದೆ. ಹುಬ್ಬಳ್ಳಿಯಲ್ಲಿ ನಡೆದ ಕೃತ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಸಮರ್ಥಿಸಿದ್ದಾರೆ. ಹತ್ಯೆಗೈಯಲ್ಪಟ್ಟ ಗರ್ಭಿಣಿ ತರುಣಿಯನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ವಿಪರ್ಯಾಸವೆಂದರೆ, ಇಂತಹ ಹತ್ಯೆಯನ್ನು ಸಮರ್ಥಿಸುವುದೆಂದರೆ ಒಂದು ಕೊಲೆ ಕೃತ್ಯದಲ್ಲಿ ಶಾಮೀಲಾಗುವುದು ಮಾತ್ರವಲ್ಲ, ಜಾತೀಯತೆಯನ್ನು ಬಹಿರಂಗವಾಗಿ ಬೆಂಬಲಿಸಿದಂತೆಯೂ ಕೂಡ. ಇಷ್ಟಾದರೂ ಈ ಸಮರ್ಥನೆ ಮಾಡಿದವರ ವಿರುದ್ಧ ಪೊಲೀಸ್ ಇಲಾಖೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ.
ಇಂತಹ ಹತ್ಯೆಗಳಲ್ಲಿ ಪೊಲೀಸ್ ಇಲಾಖೆಯೂ ಆರೋಪಿಗಳ ಜೊತೆಗೆ ಶಾಮೀಲಾಗುತ್ತದೆ. ಪೊಲೀಸ್ ಇಲಾಖೆಯು ಬಲಿಷ್ಟ ಜಾತಿಗಳ ನಿಯಂತ್ರಣದಲ್ಲಿರುವುದು ಇದಕ್ಕೆ ಮುಖ್ಯ ಕಾರಣ. ಪುರುಷ ಪ್ರಧಾನ ಮನಸ್ಥಿತಿ ಈ ವ್ಯವಸ್ಥೆಯನ್ನು ನಿಯಂತ್ರಿಸುವುದು ಇನ್ನೊಂದು ಕಾರಣ. ಇಂತಹ ಗೌರವ ಹತ್ಯೆಯ ವಿರುದ್ಧ ಪ್ರತ್ಯೇಕ ಕಠಿಣ ಕಾನೂನೊಂದು ಜಾರಿಗೊಳಿಸುವ ಅಗತ್ಯವಿದೆ. ಮುಖ್ಯವಾಗಿ ಅಂತರ್ಜಾತಿಯ ವಿವಾಹವಾಗುವ ಜೋಡಿಗಳಿಗೆ ಪೂರ್ಣ ಪ್ರಮಾಣದ ಭದ್ರತೆ ನೀಡುವುದು, ಸಮಾಜ ಅವರನ್ನು ಒಂಟಿಯಾಗಿಸದಂತೆ ನೋಡಿಕೊಳ್ಳುವುದು ಪೊಲೀಸ್ ಇಲಾಖೆಯ ಕರ್ತವ್ಯವಾಗಬೇಕು. ಸಾಧಾರಣವಾಗಿ ಅಂತರ್ಜಾತಿಯ ವಿವಾಹವಾದಾಕ್ಷಣ ಆ ದಂಪತಿ ಪರೋಕ್ಷವಾಗಿ ಸಾಮಾಜಿಕ ಬಹಿಷ್ಕಾರವನ್ನು ಎದುರಿಸಬೇಕಾಗುತ್ತದೆ. ಹೆಣ್ಣು ತನ್ನ ಮನೆ, ಕುಟುಂಬದಿಂದ ಏಕಾಏಕಿ ಬೇರ್ಪಡುತ್ತಾಳೆ. ಸಮಾಜ ಆಕೆಯನ್ನು ಅತ್ಯಂತ ನಿಕೃಷ್ಟವಾಗಿ ನಡೆಸಿಕೊಳ್ಳುತ್ತದೆ. ಆಕೆ ಪ್ರತಿ ದಿನವನ್ನು ಜೀವಭಯದಿಂದ ಕಳೆಯಬೇಕಾಗುತ್ತದೆ. ಆಕೆ ಆ ಬಹಿಷ್ಕಾರಕ್ಕೆ ಮಣಿಯದೆ ಕೆಳಜಾತಿಯ ಯುವಕನ ಜೊತೆಗೆ ಬಾಳಿ ತೋರಿಸಿದಾಗ ಅಂತಿಮವಾಗಿ ಕುಟುಂಬ ಆಕೆಯನ್ನು ಕೊಲ್ಲುವ ನಿರ್ಧಾರಕ್ಕೆ ಬರುತ್ತದೆ. ಅಂತರ್‌ಜಾತಿಯ ವಿವಾಹಕ್ಕೆ ಸರಕಾರ ಪ್ರೋತ್ಸಾಹ ನೀಡುತ್ತದೆಯೇನೋ ನಿಜ. ಆದರೆ, ಮೇಲ್ ಜಾತಿಯ ಯುವತಿಯೊಬ್ಬಳು ದಲಿತನನ್ನು ಮದುವೆಯಾದರೆ ಅದನ್ನು ಸಹಿಸುವ ಮನಸ್ಥಿತಿಯನ್ನು ವ್ಯವಸ್ಥೆ ಇನ್ನೂ ಹೊಂದಿಲ್ಲ. ಅಂತಹ ಮಹಿಳೆಯರಿಗೆ ನಮ್ಮ ಕಾನೂನು ವ್ಯವಸ್ಥೆ ಆರ್ಥಿಕವಾಗಿ, ಮಾನಸಿಕವಾಗಿ ಧೈರ್ಯವನ್ನು ನೀಡಬೇಕು. ಈ ನಿಟ್ಟಿನಲ್ಲಿ ಮರ್ಯಾದೆಗೇಡು ಹತ್ಯೆಗಳಿಗೆ ಲಗಾಮು ಹಾಕಲು ಒಂದು ಕಠಿಣ ಕಾನೂನಿನ ಅಗತ್ಯವಿದೆ.







