ಕೋಮಾದಲ್ಲಿರುವ ಮನುಷ್ಯತ್ವ, ದಯಾಮರಣವೆನ್ನುವ ಆತ್ಮವಂಚನೆ

ಹರೀಶ್ ರಾಣಾ (Photo credit: indiatoday.in)
ಹನ್ನೆರಡು ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಯುವಕನ ದಯಾಮರಣಕ್ಕೆ ಸುಪ್ರೀಂಕೋರ್ಟ್ ಬುಧವಾರ ಅನುಮತಿ ನೀಡಿದೆ. 2018ರಲ್ಲಿ ದಯಾಮರಣಕ್ಕೆ ಅನುಮತಿ ನೀಡುವ ಮಾರ್ಗಸೂಚಿಗಳನ್ನು ರೂಪಿಸಿದ ಬಳಿಕ, ವೈಯಕ್ತಿಕ ಪ್ರಕರಣದಲ್ಲಿ ನ್ಯಾಯಾಲಯ ಇದೇ ಮೊದಲ ಬಾರಿಗೆ ದಯಾಮರಣದ ಆದೇಶವನ್ನು ನೀಡಿದೆ. ಈ ದೇಶದಲ್ಲಿ ದಯಾಮರಣದ ಬಗ್ಗೆ ತೀವ್ರ ಚರ್ಚೆಯನ್ನು ಹುಟ್ಟಿಸಿ ಹಾಕಿದ್ದು ಅರುಣಾ ಶಾನ್ಭಾಗ್ ಪ್ರಕರಣ. ತಾನು ಕೆಲಸ ಮಾಡುತ್ತಿದ್ದ ಮುಂಬೈನ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲೇ ವಾರ್ಡ್ಬಾಯ್ನಿಂದ ಬರ್ಬರ ಹಲ್ಲೆ, ಅತ್ಯಾಚಾರಕ್ಕೊಳಗಾಗಿ ಸುಮಾರು 42 ವರ್ಷ ಕೋಮಾದಲ್ಲಿದ್ದ ಅರುಣಾ ಅವರಿಗೆ ದಯಾಮರಣ ನೀಡುವ ಕುರಿತಂತೆ ನ್ಯಾಯಾಲಯದಲ್ಲಿ ಸುದೀರ್ಘ ಹೋರಾಟ ನಡೆದಿತ್ತು. ಆದರೆ ಸುಪ್ರೀಂಕೋರ್ಟ್ 2011ರಲ್ಲಿ ದಯಾಮರಣವನ್ನು ಸ್ಪಷ್ಟವಾಗಿ ನಿರಾಕರಿಸಿತ್ತು. ಅವರು 2015ರಲ್ಲಿ ತಮ್ಮ ಪ್ರಾಣವನ್ನು ತೊರೆದರು. ಇದೀಗ ದಯಾಮರಣಕ್ಕೆ ಅನುಮತಿ ಪಡೆದಿರುವ ಹರೀಶ್ ರಾಣಾ ಘಾಜಿಯಾಬಾದ್ ಮೂಲದವರು. ಪಂಜಾಬ್ ವಿಶ್ವವಿದ್ಯಾನಿಲಯದ ಬಿ. ಟೆಕ್ ವಿದ್ಯಾರ್ಥಿಯಾಗಿದ್ದ ಈತ ತಾನು ವಾಸವಿದ್ದ ವಸತಿಗೃಹದ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದು ಕೋಮಾದಲ್ಲಿದ್ದರು. ಅರುಣಾ ಅವರಿಗೆ ಸಿಗದ ‘ದಯಾಮರಣದ’ ಭಾಗ್ಯ, ರಾಣಾಗೆ ಸಿಕ್ಕಿದೆ. ಕೋರ್ಟ್ ಅನುಮತಿ ನೀಡಿದೆ ಎನ್ನುವ ಕಾರಣಕ್ಕೆ ಮನುಷ್ಯರೆಂದು ಕರೆಸಿಕೊಳ್ಳುವ ನಾವು ಈ ದಯಾಮರಣದ ಹೆಸರಿನಲ್ಲಿ ನಮ್ಮಿಂದ ನಡೆಯಲ್ಪಡುವ ‘ಪರೋಕ್ಷ ಹತ್ಯೆ’ಯ ಪಾಪಪ್ರಜ್ಞೆಯಿಂದ ಸಂಪೂರ್ಣ ಮುಕ್ತರೇನೂ ಅಲ್ಲ. ಯಾಕೆಂದರೆ ದಯೆ ಮತ್ತು ಮರಣ ಯಾವತ್ತೂ ಜೊತೆಯಾಗಿ ಸಾಗುವುದಿಲ್ಲ. ದಯೆಯು ‘ಬದುಕಿ’ನ ಜೊತೆಗೆ ಜಂಟಿಯಾಗಬೇಕೇ ಹೊರತು, ಮರಣದ ಜೊತೆಯಲ್ಲ. ‘ದಯಾ ಮರಣ’ವೆನ್ನುವುದು ಮನುಷ್ಯ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸೃಷ್ಟಿಸಿಕೊಂಡ ಪದವಾಗಿದೆ. ಹಾಗಾದರೆ, ನ್ಯಾಯಾಲಯ ಹರೀಶ್ ರಾಣಾ ಪ್ರಕರಣದಲ್ಲಿ ಏನನ್ನು ಮಾಡಬಹುದಿತ್ತು? ಆತನ ಆರೈಕೆ, ಅದಕ್ಕೆ ಬೇಕಾದ ಆರ್ಥಿಕ ಮತ್ತು ವೈದ್ಯಕೀಯ ಸವಲತ್ತುಗಳನ್ನು ಪೂರ್ಣ ಪ್ರಮಾಣದಲ್ಲಿ ಒದಗಿಸುವುದು ನ್ಯಾಯಾಲಯ ತೋರಿಸಬಹುದಾದ ನಿಜವಾದ ಅರ್ಥದ ದಯೆಯಾಗಿತ್ತು. ಆದರೆ ಅವುಗಳನ್ನು ಒದಗಿಸುವ ಶಕ್ತಿ ತನಗಿಲ್ಲ ಎನ್ನುವ ಹತಾಶೆಯಿಂದ ಮರಣವನ್ನೇ ದಯೆಯಾಗಿ ನೀಡಿದೆ. ಆದುದರಿಂದಲೇ, ದಯೆ ಮತ್ತು ಮನುಷ್ಯತ್ವವೆನ್ನುವ ಪದಗಳ ಹಿರಿಮೆಯನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ದಯಾಮರಣದ ಸರಿ-ತಪ್ಪುಗಳ ಕುರಿತಂತೆ ಚರ್ಚೆ ಮುಂದುವರಿಯುವುದು ಅತ್ಯಗತ್ಯವಾಗಿದೆ.
ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಕೊಂದು ತನ್ನ ಬದುಕಿನ ದಾರಿಯನ್ನು ಸುಗಮ ಮಾಡಿಕೊಳ್ಳಲು ನೆಪಗಳನ್ನು ಹುಡುಕುವ ದಿನಗಳು ಇವು. ಪ್ರತಿಯೊಬ್ಬರೂ ತಾವು ಮಾಡುವ ಹತ್ಯೆಗಳಿಗೆ ತಮ್ಮದೇ ಆದ ಸಮರ್ಥನೆಗಳನ್ನು ನೀಡುತ್ತಾರೆ. ಸದ್ಯಕ್ಕೆ ದೇಶದಲ್ಲಿ ಮಾತ್ರವಲ್ಲ, ವಿಶ್ವದಲ್ಲೇ ಸಾವುಗಳು ಬೇರೆ ಬೇರೆ ಹೆಸರಿನಲ್ಲಿ ವಿಜೃಂಭಿಸುತ್ತಿವೆ. ಧರ್ಮ ರಕ್ಷಣೆ, ಭಯೋತ್ಪಾದನೆ ನಿಗ್ರಹ, ಶಾಂತಿ ಸ್ಥಾಪನೆ, ದೇಶ ರಕ್ಷಣೆ ಹೀಗೆ ಬಗೆ ಬಗೆಯ ಸಮರ್ಥನೆಗಳ ಮೂಲಕ ಅಮಾಯಕರನ್ನು ಕೊಲ್ಲುತ್ತಾ ಬರಲಾಗುತ್ತಿದೆ. ಕೊಲ್ಲುವುದಕ್ಕೆ ಸಾವಿರ ನೆಪಗಳು, ಸಾವಿರ ದಾರಿಗಳು. ‘ದಯಾ ಮರಣ’ ತುಸು ಭಿನ್ನವಾದುದು. ಇಲ್ಲಿ, ಓರ್ವ ಸಂತ್ರಸ್ತನೇ ಮರಣವನ್ನು ಬೇಡಿ ಪಡೆದುಕೊಳ್ಳುವಂತಹದ್ದು. ಬದುಕಿಗಿಂತ ಮರಣವೇ ಒಳಿತು ಎಂದು ತೀರ್ಮಾನಕ್ಕೆ ಬಂದವರಿಗೆ ನಾಗರಿಕ ಸಮಾಜ ಮಾಡುವ ಮಹದುಪಕಾರ ‘ದಯಾ ಮರಣ’. ಇತ್ತೀಚೆಗೆ ನಮ್ಮದೇ ದೇಶದಲ್ಲಿ ವೃದ್ಧ ದಂಪತಿ ರಾಷ್ಟ್ರಪತಿಗೆ ‘ದಯಾ ಮರಣ’ದ ಅರ್ಜಿಯನ್ನು ಸಲ್ಲಿಸಿದ್ದರು. ಅಂದಹಾಗೆ ಅವರು ಯಾವುದೇ ಮಾರಕ ರೋಗಗಳಿಂದ ನರಳುತ್ತಿರಲಿಲ್ಲ. ಅವರನ್ನು ಕುಟುಂಬ ಸದಸ್ಯರು ಬೀದಿ ಪಾಲಾಗಿಸಿದ್ದರು. ಬದುಕುವುದಕ್ಕೆ ಅವರಿಗೆ ಯಾವುದೇ ಆಸರೆಯಿರಲಿಲ್ಲ. ಆತ್ಮಹತ್ಯೆ ಅಪರಾಧವಾಗಿರುವುದರಿಂದ, ನಮಗೆ ದಯಾ ಮರಣವನ್ನು ದಯಪಾಲಿಸಿ ಎಂದು ಅವರು ಸರಕಾರಕ್ಕೆ ಮನವಿ ಮಾಡಿದ್ದರು. ‘ದಯಾ ಮರಣ’ ಹೇಗೆ ಮಾನವೀಯತೆಯ ಸೋಲು ಕೂಡ ಆಗಿರಬಹುದು ಎನ್ನುವುದಕ್ಕೆ ಮೇಲಿನ ಮನವಿಯೇ ಉದಾಹರಣೆ. ಈ ದಂಪತಿಯ ಬದುಕು ನರಕಸದೃಶವಾಗಿತ್ತು. ಆದರೆ ಅದಕ್ಕೆ ಪರಿಹಾರ ಖಂಡಿತವಾಗಿಯೂ ಮರಣ ಅಲ್ಲ. ಅವರನ್ನು ಬೀದಿ ಪಾಲಾಗಿಸಿದವರೊಳಗೆ ಮಾನವೀಯತೆಯನ್ನು ಬಿತ್ತುವುದೇ ಸಮಸ್ಯೆಗೆ ಪರಿಹಾರ. ಜೊತೆಗೆ ಆ ವೃದ್ಧರ ಬದುಕನ್ನು ಸಹನೀಯಗೊಳಿಸಲು ಬೇಕಾದ ಆರ್ಥಿಕ ಮತ್ತು ಮಾನಸಿಕ ನೆರವುಗಳನ್ನು ನೀಡುವುದು. ಇದನ್ನು ನಾವು ರೋಗಿಗಳಿಗೂ ಅನ್ವಯಿಸಬಹುದು.
‘ಸಾವೇ ಒಳ್ಳೆಯದು’ ಎಂದು ರೋಗಿಗಳು ಬಯಸುವ ಅತ್ಯಂತ ವೇದನಾದಾಯಕ ರೋಗವೆಂದರೆ ಕ್ಯಾನ್ಸರ್. ಸಾವು ಎದುರುಗಡೆ ಬಂದು ನಿಂತಿದೆ. ಗುಣಮುಖರಾಗುವ ಯಾವ ಸಾಧ್ಯತೆಗಳೂ ಇಲ್ಲ. ಜೊತೆಗೆ ಮಾರಣಾಂತಿಕ ವೇದನೆ. ಹೇಗೂ ಸಾಯುವವರಾಗಿರುವ ಕಾರಣ ಅವರಿಗೆ ಮರಣವನ್ನು ನಾವು ದಯೆಯ ರೂಪದಲ್ಲಿ ನೀಡಬಹುದೇ? ಇದು ಚರ್ಚೆಗೆ ಅರ್ಹವಾಗಿರುವ ಮತ್ತು ನಮ್ಮ ಮಾನವೀಯತೆಗೆ ಸವಾಲು ಹಾಕುವಂತಹ ಪ್ರಶ್ನೆಯಾಗಿದೆ. ಕ್ಯಾನ್ಸರ್ಗೆ ಔಷಧಿಗಳಿವೆ. ಆದರೆ ಆ ಔಷಧಿಗಳು ಮತ್ತು ನೋವು ನಿವಾರಕಗಳು ತೀರಾ ದುಬಾರಿ. ಈ ಕಾರಣದಿಂದಲೇ ಬಹುತೇಕ ಕ್ಯಾನ್ಸರ್ ರೋಗಿಗಳು ಮರಣವನ್ನು ಅಪೇಕ್ಷಿಸುತ್ತಾರೆ. ಇಲ್ಲಿ ನಾಗರಿಕ ಸಮಾಜದ ಹೊಣೆಗಾರಿಕೆ ಏನೆಂದರೆ, ಆ ಕ್ಯಾನ್ಸರ್ ಔಷಧಿಗಳನ್ನು ಅಗ್ಗದ ದರದಲ್ಲಿ ದೊರಕುವಂತೆ ಮಾಡುವುದು ಅಥವಾ ರೋಗಿಗಳಿಗೆ ಔಷಧಿಗಳನ್ನು ಪಡೆಯಲು ಆರ್ಥಿಕ ನೆರವು ನೀಡುವುದು. ಇಂದು ವಿವಿಧ ಕಂಪೆನಿಗಳ ಸ್ವಾರ್ಥ, ದುರಾಸೆಯ ಕಾರಣದಿಂದ ಈ ಔಷಧಿಗಳು ದುಬಾರಿಯಾಗಿವೆ. ರೋಗಿಗಳಿಗೆ ಔಷಧಿಗಳನ್ನು ಒದಗಿಸಲಾಗದ ನಮ್ಮ ವೈಫಲ್ಯವನ್ನು ಮುಚ್ಚಿ ಹಾಕಲು ಮರಣಕ್ಕೆ ದಯೆಯ ಮುಖವಾಡ ತೊಡಿಸಲು ನಾವಿಂದು ಮುಂದಾಗಿದ್ದೇವೆ.
ಈ ದೇಶದ ಲಕ್ಷಾಂತರ ವೃದ್ಧರು ತಮ್ಮ ಮಕ್ಕಳ ಬೇಜವಾಬ್ದಾರಿಯಿಂದಾಗಿ ವೃದ್ಧಾಶ್ರಮದಲ್ಲಿ ಅಥವಾ ಬೀದಿಯಲ್ಲಿ ಬದುಕು ಸವೆಸುತ್ತಿದ್ದಾರೆ. ನಾವು ಈ ವೃದ್ಧರನ್ನು ಸಮಸ್ಯೆಯೆಂದು ತಿಳಿದುಕೊಳ್ಳದೆ, ಅವರನ್ನು ಬೀದಿಗೆ ಅಥವಾ ವೃದ್ಧಾಶ್ರಮಕ್ಕೆ ತಳ್ಳಿದ ಕುಟುಂಬವನ್ನು ಸಮಸ್ಯೆಯಾಗಿ ಪರಿಗಣಿಸಬೇಕು ಮತ್ತು ಅದಕ್ಕೆ ಚಿಕಿತ್ಸೆಯನ್ನು ನೀಡಬೇಕು. ರೋಗಗ್ರಸ್ತನಾಗಿ ಜೀವರಕ್ಷಕ ಉಪಕರಣಗಳಲ್ಲಿ ಗುಟುಕು ಜೀವ ಉಳಿಸಿಕೊಂಡಿರುವ ಮನುಷ್ಯತ್ವಕ್ಕೆ ಚಿಕಿತ್ಸೆಯ ಅಗತ್ಯವಿದೆಯೇ ಹೊರತು, ರೋಗ ಪೀಡಿತರಾಗಿ ಮರಣವನ್ನು ಎದುರಿಸುತ್ತಿರುವ ರೋಗಿಗಳಿಗೆ ಮರಣವನ್ನು ದಯಪಾಲಿಸುವುದಲ್ಲ. ತೀರಾ ಅಪರೂಪದ ಪ್ರಕರಣಗಳಲ್ಲಿ ದಯಾಮರಣ ಪ್ರಯೋಜನಕ್ಕೆ ಬರಬಹುದೇನೋ. ಆದರೆ, ಹೆಚ್ಚಿನ ಸಂದರ್ಭಗಳಲ್ಲಿ ಇದು ದುರುಪಯೋಗವಾಗುವ ಸಾಧ್ಯತೆಗಳಿವೆ. ಇತ್ತೀಚೆಗೆ ಒಬ್ಬ ತರುಣ ತನ್ನ ವೃದ್ಧ ತಾಯಿಯನ್ನು ಮಹಡಿಯಿಂದ ನೂಕಿ ಕೊಂದು ಹಾಕಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಆತನ ದೃಷ್ಟಿಯಲ್ಲಿ ಅವನು ತಾಯಿಗೆ ನೀಡಿದ್ದು ‘ದಯಾ ಮರಣ’ವೇ ಆಗಿತ್ತು. ಆದರೆ ಕಾನೂನಿಗೆ ವಿರುದ್ಧವಾಗಿತ್ತು. ವೃದ್ಧ ತಾಯಿ, ತಂದೆಯರನ್ನು ಸಾಕಲು ಅಥವಾ ನೋಡಿಕೊಳ್ಳಲು ಹೆಣಗಾಡುವ ಇಂತಹ ಲಕ್ಷಾಂತರ ಜನರು ಈ ದೇಶದಲ್ಲಿದ್ದಾರೆ. ಇವರು ‘ದಯಾ ಮರಣ’ವನ್ನು ದುರುಪಯೋಗ ಪಡಿಸಿಕೊಂಡು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಒಬ್ಬ ಸಾವು ಬದುಕಿನ ನಡುವೆ ಒದ್ದಾಡುತ್ತಿರುವಾಗ ಗರಿಷ್ಠ ಪ್ರಮಾಣದಲ್ಲಿ ಆತನ ಸೇವೆ ಮಾಡಿ, ಆತನಿಗೆ ಬೇಕಾದ ನೆರವುಗಳನ್ನು ನೀಡಿ ಆತನ ಬದುಕನ್ನು ಸಹ್ಯ ಮಾಡಿಕೊಡುವುದು ಮನುಷ್ಯನ ಹೊಣೆಗಾರಿಕೆ. ಈ ಹೊಣೆಗಾರಿಕೆಯನ್ನು ನಿರ್ವಹಿಸಲು ಎಲ್ಲರೂ ಸಿದ್ಧರಾದಲ್ಲಿ ‘ದಯಾ ಮರಣ’ವೆನ್ನುವ ಪರೋಕ್ಷ ಕೊಲೆಯೊಂದರಲ್ಲಿ ಭಾಗಿಯಾಗುವುದರಿಂದ ನಾವೆಲ್ಲರೂ ಪಾರಾಗಬಹುದು. ದಯಾಮರಣವನ್ನು ಅಪೇಕ್ಷಿಸಿ ಬರುವವರಿಗೆ ಬೇಕಾದ ಬದುಕುವ ಸವಲತ್ತುಗಳನ್ನು ಒದಗಿಸುವುದಕ್ಕೆ ನ್ಯಾಯಾಲಯ ಒಂದು ನೀತಿಯನ್ನು ರೂಪಿಸಲು ಸರಕಾರಕ್ಕೆ ಆದೇಶ ನೀಡಬೇಕು. ಆರೋಗ್ಯವಂತರಂತೆಯೇ ಭಯಾನಕ, ಮಾರಕ ರೋಗಗಳಿಂದ ಬಾಧಿತರಾದವರಿಗೂ ಈ ಭೂಮಿಯಲ್ಲಿ ಬದುಕುವ ಹಕ್ಕಿದೆ. ಆದರೆ ಕೋಮಾದಲ್ಲಿರುವ ಸರಕಾರವನ್ನು ಮೊದಲು ಎಚ್ಚರಿಸುವ ಕೆಲಸ ನಡೆಯಬೇಕು ಅಥವಾ ಕೋಮಾದಲ್ಲಿರುವ ಈ ಸರಕಾರಕ್ಕೆ ‘ದಯಾಮರಣ’ವನ್ನು ಘೋಷಿಸಿ ಮನುಷ್ಯಕುಲವನ್ನು ಕಾಪಾಡುವ ಪ್ರಯತ್ನವನ್ನು ನ್ಯಾಯಾಲಯ ಮಾಡಬೇಕು.







