ಅಂದಿನದು ತುರ್ತುಪರಿಸ್ಥಿತಿಯಾದರೆ ಇಂದಿನದು ಯಾವ ಸ್ಥಿತಿ?

PC: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
1974ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಇಂದಿನ ಪ್ರಧಾನಿ ಮೋದಿ ಸರಕಾರ ಅದ್ದೂರಿಯಾಗಿ ಆಚರಿಸಿದೆ. ದೇಶದಲ್ಲಿ ನಡೆಯುತ್ತಿರುವ ತುರ್ತುಪರಿಸ್ಥಿತಿಯ ಕರಾಳ ದಿನದ ಆಚರಣೆಯ ಹಿಂದೆ ಎರಡು ಮನಸ್ಥಿತಿಗಳಿವೆ. ಒಂದು ಮನಸ್ಥಿತಿ, ತುರ್ತುಪರಿಸ್ಥಿತಿಯ ಕರಾಳ ದಿನವನ್ನು ಸಂಭ್ರಮಿಸಿದರೆ, ಇನ್ನೊಂದು ಮನಸ್ಥಿತಿ, ಇಂದಿನ ಮೋದಿ ಸರಕಾರದ ಅಘೋಷಿತ ತುರ್ತುಪರಿಸ್ಥಿತಿಯನ್ನು ಎದುರಿಸುವುದಕ್ಕಾಗಿ ಈ ದಿನವನ್ನು ನೆಪವಾಗಿ ಬಳಸಿಕೊಳ್ಳುತ್ತಿದೆ. ಇನ್ನೊಮ್ಮೆ ಅಂತಹದೊಂದು ಪರಿಸ್ಥಿತಿ ಈ ದೇಶಕ್ಕೆ ಎದುರಾಗಬಾರದು ಎನ್ನುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿಯನ್ನು ಮೂಡಿಸಲು ಹಿಂದೆಲ್ಲ ತುರ್ತುಪರಿಸ್ಥಿತಿಯ ದಿನವನ್ನು ನೆನಪಿಸಲಾಗುತ್ತಿತ್ತು. ಆದರೆ ಇಂದು ತುರ್ತುಪರಿಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ಆ ಹಿರಿಯರೆಲ್ಲ, ಗೊಂದಲದಲ್ಲಿದ್ದಾರೆ. ಯಾಕೆಂದರೆ, ಘೋಷಿತ ತುರ್ತುಪರಿಸ್ಥಿತಿಗಿಂತಲೂ, ಈಗ ಪ್ರಜಾಸತ್ತೆಯ ಮುಖವಾಡದಲ್ಲಿರುವ ಅಘೋಷಿತ ತುರ್ತುಪರಿಸ್ಥಿತಿಯೇ ಹೆಚ್ಚು ಭಯಾನಕವಾಗಿದೆ. ಕಳೆದ ಒಂದು ದಶಕದ ಮೋದಿ ನೇತೃತ್ವದ ಆಡಳಿತ ಯಾವ ತುರ್ತುಪರಿಸ್ಥಿತಿಯನ್ನು ಅಧಿಕೃತವಾಗಿ ಹೇರದೆಯೇ ಜನರನ್ನು ಕಂಗಾಲುಗೊಳಿಸಿದೆ. ಜನರ ನೋಟುಗಳನ್ನು ನಿಷೇಧಿಸಿ ಅವರು ಬ್ಯಾಂಕಿನ ಮುಂದೆ ಕ್ಯೂ ನಿಲ್ಲುವ ಸ್ಥಿತಿ ನಿರ್ಮಾಣ ಮಾಡಲಾಯಿತು. ತಮ್ಮ ಹಣವನ್ನು ಕಪ್ಪು ಹಣವಲ್ಲ ಎಂದು ಸಾಬೀತು ಪಡಿಸುವಂತಹ ಈ ಸ್ಥಿತಿ ನಿರ್ಮಾಣವಾಗಿರುವುದು ಇಂದಿರಾಗಾಂಧಿಯಿಂದ ಅಲ್ಲ, ಬದಲಿಗೆ ಪ್ರಧಾನಿ ಮೋದಿಯವರ ಅಘೋಷಿತ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ. ಕಪ್ಪುಹಣವನ್ನು ನಿರ್ಮೂಲನೆ ಮಾಡುವುದಕ್ಕಾಗಿ ನೋಟು ನಿಷೇಧವನ್ನು ಮಾಡಲಾಯಿತು ಎಂದು ಸರಕಾರ ತನ್ನನ್ನು ಸಮರ್ಥಿಸಿಕೊಳ್ಳುತ್ತಿದೆಯಾದರೂ, ಈವರೆಗೆ ನೋಟು ನಿಷೇಧದಿಂದ ವಶಪಡಿಸಿಕೊಂಡ ಕಪ್ಪು ಹಣದ ಕುರಿತ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಇದರ ಬಗ್ಗೆ ವಿವರಕೇಳಿ ಸರಕಾರವನ್ನು ಒತ್ತಾಯಿಸುವ ಸ್ಥಿತಿಯೂ ಈ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಇಲ್ಲ. ಇಂದಿರಾಗಾಂಧಿಯ ಕಾಲದ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ರಾಜಕೀಯ ನೇತಾರರು ಮತ್ತು ಪತ್ರಕರ್ತರೇ ನೇರ ಸಂತ್ರಸ್ತರಾಗಿದ್ದರು. ಆದರೆ ಪ್ರಧಾನಿ ಮೋದಿ ನೇತೃತ್ವದ ಅಘೋಷಿತ ತುರ್ತುಪರಿಸ್ಥಿತಿಯ ಪರಿಣಾಮಗಳನ್ನು ಉಣ್ಣುತ್ತಿರುವುದು ಈ ದೇಶದ ಬಡವರು, ತಳಸ್ತರದ ಜನರಾಗಿದ್ದಾರೆ.
ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಿಕೆಯ ಸಂದರ್ಭದಲ್ಲಿ ಈ ದೇಶದ ಜನರ ಬಳಿ ‘‘ನಿಮ್ಮ ಪೌರತ್ವವನ್ನು ಸಾಬೀತು ಪಡಿಸಿ’’ ಎಂದು ಕೇಳಿರಲಿಲ್ಲ. ಇಂದು ಅಸ್ಸಾಮಿನಂತಹ ರಾಜ್ಯಗಳಲ್ಲಿ ತಮ್ಮ ಪೌರತ್ವವನ್ನು ಸಾಬೀತುಪಡಿಸಲಾಗದೆ ನೂರಾರು ಜನರು ಬಂಧನ ಕೇಂದ್ರದಲ್ಲಿದ್ದಾರೆ. ಇವರಲ್ಲಿ ಬಹುತೇಕರು ವಲಸೆ ಕಾರ್ಮಿಕರು, ರೈತರು, ಬಡವರು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಕಾರ್ಮಿಕರಿಗೆ, ರೈತರಿಗೆ ಇಂತಹ ಸ್ಥಿತಿನಿರ್ಮಾಣವಾಗಿರಲಿಲ್ಲ. ಬದಲಿಗೆ ಬ್ಯಾಂಕ್ ರಾಷ್ಟ್ರೀಕರಣ, ಭೂಸುಧಾರಣೆಯಂತಹ ಮಹತ್ವದ ಕಾಯ್ದೆಗಳನ್ನು ಜಾರಿಗೆ ತರಲು ಇಂದಿರಾಗಾಂಧಿ ಪ್ರಯತ್ನಿಸಿದ್ದರು. ದುಡಿಯುವ ಬಡವರಿಗೆ ಅವರ ಭೂಮಿಯ ಹಕ್ಕನ್ನು ನೀಡಲು ಈ ತುರ್ತುಪರಿಸ್ಥಿತಿಯ ಸಂದರ್ಭವನ್ನು ಬಳಸಿಕೊಳ್ಳಲು ಹಲವು ರಾಜ್ಯಗಳು ಶ್ರಮಿಸಿದವು. ಅವುಗಳಲ್ಲಿ ಕರ್ನಾಟಕ ಕೂಡ ಒಂದು. ಉಳುವವನಿಗೆ ಭೂಮಿಯ ಹಕ್ಕು ದೇವರಾಜ ಅರಸು ಕಾಲದಲ್ಲಿ ಜಾರಿಗೆ ತರಲು ನಡೆಸಿದ ಪ್ರಯತ್ನವೇ ಇಂದಿರಾಗಾಂಧಿಯನ್ನು ದಕ್ಷಿಣ ಭಾರತದಲ್ಲಿ ಜನಪ್ರಿಯಗೊಳಿಸಿತು. ಮೋದಿ ಆಡಳಿತದಲ್ಲಿ ಬಡವರ ಭೂಮಿಯನ್ನು ಕಿತ್ತುಕೊಂಡು ಬಹುರಾಷ್ಟ್ರೀಯ ಕಂಪೆನಿಗಳಿಗೆ ಕೊಡುವುದಕ್ಕಾಗಿ ಕಾನೂನುಗಳು ರಚಿಸಲ್ಪಟ್ಟವು. ಕೊರೋನ ಸಂದರ್ಭ ಯಾವುದೇ ಪೂರ್ವ ಸಿದ್ಧತೆಗಳಿಲ್ಲದೆ ಆತುರಾತುರವಾಗಿ ಘೋಷಿಸಲ್ಪಟ್ಟ ಸುಮಾರು ಎರಡು ತಿಂಗಳ ‘ಲಾಕ್ಡೌನ್’ ಯಾವುದೇ ತುರ್ತುಪರಿಸ್ಥಿತಿಗಿಂತ ಕಡಿಮೆಯಿರಲಿಲ್ಲ. ಬೀದಿಗಿಳಿದ ತಪ್ಪಿಗೆ ಜನರು ಪೊಲೀಸರ ಲಾಠಿ ಏಟು ತಿನ್ನಬೇಕಾಯಿತು. ಜನರನ್ನು ಬಲವಂತವಾಗಿ ಕೊರೋನ ನೆಪದಲ್ಲಿ ಪರೀಕ್ಷೆ ನಡೆಸಿ ಅವರನ್ನು ಆಸ್ಪತ್ರೆಯ ಪ್ರಯೋಗ ಪಶುವನ್ನಾಗಿಸಲಾಯಿತು. ಸಾವಿರಾರು ಜನರು ಈ ಸಂದರ್ಭದಲ್ಲಿ ಮರಣ ಹೊಂದಿದರು. ಗಂಗಾನದಿಯ ತಟದಲ್ಲಿ ನೂರಾರು ಮೃತದೇಹಗಳ ಅವಶೇಷಗಳು ಕಂಡು ಬಂದವು. ನರಿ ನಾಯಿಗಳು ಮೃತದೇಹಗಳನ್ನು ಎಳೆದಾಡುತ್ತಿರುವ ಫೋಟೊಗಳು ಅಂತರ್ರಾಷ್ಟ್ರೀಯ ಮಟ್ಟದ ಪತ್ರಿಕೆಗಳಲ್ಲಿ ರಾರಾಜಿಸಿದವು. ಉದ್ಯೋಗ, ಊಟವಿಲ್ಲದೆ ಜನರು ಮನೆಯೊಳಗೆ ಬಂದಿಯಾದರು. ಸಾವಿರಾರು ವಲಸೆ ಕಾರ್ಮಿಕರು ನೂರಾರು ಕಿಲೋಮೀಟರ್ ಕಾಲು ನಡಿಗೆಯಲ್ಲಿ ತಮ್ಮ ಹಳ್ಳಿಯ ಕಡೆಗೆ ಸಾಗಬೇಕಾಯಿತು.
ಅವರ ನೋವು, ಸಂಕಟಗಳನ್ನು ಕೇಳುವವರಿರಲಿಲ್ಲ. ಹಳಿಗಳ ಮೇಲೆ ನಡೆದುಕೊಂಡು ಹೋಗುತ್ತಿದ್ದ ಕಾರ್ಮಿಕರ ಮೇಲೆ ರೈಲು ಹರಿಯಿತು. ಮೃತಪಟ್ಟ ಕಾರ್ಮಿಕರ ನೋವು ದುಮ್ಮಾನಗಳ ಹೊಣೆಯನ್ನು ಸರಕಾರ ಹೊತ್ತುಕೊಳ್ಳಲಿಲ್ಲ. ಲಾಕ್ಡೌನ್ ಕಾಲದಲ್ಲಿ ಮೃತಪಟ್ಟ ವಲಸೆ ಕಾರ್ಮಿಕರ ಅಂಕಿಸಂಕಿಗಳ ವಿವರ ಸರಕಾರದ ಬಳಿ ಈಗಲೂ ಇಲ್ಲ. ಪ್ರಜಾಸತ್ತೆಯ ಮರೆಯಲ್ಲಿ ಸರಕಾರ ಮಾಡಿದ್ದೇ ಕಾನೂನು ಎಂದ ಮೇಲೆ ಈ ಕಾಲವನ್ನು ತುರ್ತುಪರಿಸ್ಥಿತಿ ಎಂದು ಕರೆಯದೇ ಇನ್ನೇನೆಂದು ಕರೆಯಬೇಕು?
ಇಂದಿರಾ ತುರ್ತುಪರಿಸ್ಥಿತಿಯ ಕಾಲದಲ್ಲಿ ಮಾಧ್ಯಮಗಳನ್ನು, ನ್ಯಾಯಾಂಗವನ್ನು ನಿಯಂತ್ರಿಸಲಾಗಿತ್ತು ಎಂದು ಬಿಜೆಪಿ ಆರೋಪ ಮಾಡುತ್ತಿದೆ. ಮೋದಿ ಆಡಳಿತದಲ್ಲಿ ನ್ಯಾಯ ವ್ಯವಸ್ಥೆ ನೀಡುತ್ತಿರುವ ತೀರ್ಪುಗಳು ಎಷ್ಟರಮಟ್ಟಿಗೆ ಸಂವಿಧಾನ ಬದ್ಧವಾಗಿವೆ? ನ್ಯಾಯ ವ್ಯವಸ್ಥೆಯ ಅತ್ಯುನ್ನತ ಸ್ಥಾನದಲ್ಲಿರುವವರನ್ನು ಸರಕಾರ, ಅಧಿಕಾರದ ಆಮಿಷವೊಡ್ಡಿ ಕೊಂಡುಕೊಳ್ಳುತ್ತಿರುವ ಬಗ್ಗೆ ವ್ಯಾಪಕ ಆರೋಪಗಳಿವೆ. ಸರಕಾರದ ಮೂಗಿನ ನೇರಕ್ಕೆ ತೀರ್ಪುಗಳು ಹೊರಬೀಳುತ್ತಿವೆ. ಮಾಧ್ಯಮಗಳು ಪ್ರಧಾನಿ ಮೋದಿಯ ವಿರುದ್ಧ ಟೀಕೆಗಳನ್ನು ಮಾಡಲು ಹೆದರುತ್ತಿದೆ. ಸರಕಾರದ ವಿರುದ್ಧ ಧ್ವನಿಯೆತ್ತುವ ಮಾಧ್ಯಮಗಳನ್ನು ಬಗ್ಗುಬಡಿಯಲಾಗುತ್ತಿದೆ. ದೇಶದ್ರೋಹದ ಆರೋಪಗಳನ್ನು ಹೊರಿಸಿ, ಬಾಯಿಮುಚ್ಚಿಸಲಾಗುತ್ತಿದೆ.
ಈ ದೇಶದಲ್ಲಿ ಈಗ ತುರ್ತುಪರಿಸ್ಥಿತಿ ಇಲ್ಲ ಎಂದಾದರೆ, ಉಮರ್ ಖಾಲಿದ್ರಂತಹ ನೂರಾರು ಯುವಕರು ಯಾಕೆ ಜೈಲಿನಲ್ಲಿ ಕೊಳೆಯುತ್ತಿದ್ದಾರೆ? ಫಾದರ್ ಸ್ಟ್ಯಾನ್ ಸ್ವಾಮಿ ಜೈಲಿನಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಯಾಕೆ ಸಾಯಬೇಕಾಯಿತು? ಮಾಡದ ತಪ್ಪಿಗೆ ವಿಚಾರಣಾ ಕೈದಿಯಾಗಿ ಶಿಕ್ಷೆ ಅನುಭವಿಸಿ ಜರ್ಜರಿತರಾಗಿ, ಜೈಲಿನಿಂದ ಹೊರ ಬಂದ ಕೆಲವೇ ದಿನಗಳಲ್ಲಿ ಸಾಯಿಬಾಬಾ ಯಾಕೆ ಸಾಯಬೇಕಾಗಿತ್ತು? ಕಾಶ್ಮೀರದಲ್ಲಿ ಜನರು ಕಳೆದ ಐದು ವರ್ಷಗಳಿಂದ ಅನುಭವಿಸುತ್ತಿರುವ ಸ್ಥಿತಿಯನ್ನು ಏನೆಂದು ಕರೆಯಬೇಕು? ಮಣಿಪುರದಲ್ಲಿ ಕಳೆದ ಎರಡು ವರ್ಷಗಳಿಂದ ಸಂಭವಿಸುತ್ತಿರುವ ಸಾವು ನೋವುಗಳಿಗೆ ಇಂದಿರಾಗಾಂಧಿ ಹೊಣೆಯೆ? ಪ್ರಧಾನಿ ಮೋದಿಯವರು ಯಾಕೆ ಒಮ್ಮೆಯೂ ಮಣಿಪುರಕ್ಕೆ ಭೇಟಿ ನೀಡಲಿಲ್ಲ? ಒಕ್ಕೂಟ ವ್ಯವಸ್ಥೆ ಯಾಕೆ ದಿನದಿಂದ ದಿನಕ್ಕೆ ದುರ್ಬಲವಾಗುತ್ತಿದೆ? ಕೇಂದ್ರದ ಸರ್ವಾಧಿಕಾರದ ವಿರುದ್ಧ ರಾಜ್ಯಗಳೇಕೆ ದೊಡ್ಡ ಮಟ್ಟದಲ್ಲಿ ಧ್ವನಿಯೆತ್ತುತ್ತಿವೆ? ಈ ಪ್ರಶ್ನೆಗಳಿಗೆ ಪ್ರಧಾನಿ ಮೋದಿಯವರು ತುರ್ತುಪರಿಸ್ಥಿತಿಯ 50ನೇ ವರ್ಷದಲ್ಲಿ ದೇಶದ ಜನತೆಗೆ ಉತ್ತರಿಸುವಂತಾಗಲಿ. ಇಂದಿರಾಗಾಂಧಿಯ ಕಾಲದ ತುರ್ತುಪರಿಸ್ಥಿತಿಯ ಅಂದಿನ ಕರಾಳ ದಿನಗಳಿಗಾಗಿ ಪ್ರಧಾನಿ ಮೋದಿಯವರು ಸುರಿಸುತ್ತಿರುವ ಮೊಸಳೆ ಕಣ್ಣೀರು, ಇಂದಿನ ಅಘೋಷಿತ ತುರ್ತು ಪರಿಸ್ಥಿತಿಯಿಂದ ಕಂಗೆಟ್ಟಿರುವ ಜನರನ್ನು ಅಣಕಿಸುವಂತಿದೆ. ಈ ಅಘೋಷಿತ ತುರ್ತುಪರಿಸ್ಥಿತಿಯ ದಿನಗಳನ್ನು ಕೊನೆಗಾಣಿಸಿ, ಪ್ರಜಾಸತ್ತೆಯನ್ನು ಎತ್ತಿ ಹಿಡಿಯಲು ಸಂಘಟಿತ ಹೋರಾಟ ನಡೆಸಲು ತುರ್ತುಪರಿಸ್ಥಿತಿಯ 50ನೇ ವರ್ಷ ದೇಶಕ್ಕೆ ಹೊಸ ಸ್ಫೂರ್ತಿಯನ್ನು ನೀಡುವಂತಾಗಲಿ.