ಭಾರತ-ಚೀನಾ ಮೈತ್ರಿ ಅಮೆರಿಕಕ್ಕೆ ಪ್ರತ್ಯುತ್ತರ

Photo | AP
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಅಮೆರಿಕದ ಸ್ನೇಹಕ್ಕಾಗಿ ಹಾತೊರೆದು ತನ್ನ ಮಿತ್ರ ರಾಷ್ಟ್ರಗಳನ್ನೆಲ್ಲ ಒಂದೊಂದಾಗಿ ದೂರ ಮಾಡಿಕೊಂಡ ಮೋದಿ ನೇತೃತ್ವದ ಭಾರತ ಕೊನೆಗೂ ಎಚ್ಚರಗೊಂಡಿದೆ. ಭಾರತದ ಮೊತ್ತ ಮೊದಲ ಪ್ರಧಾನಿ ನೆಹರೂ ಅವರು ಅಮೆರಿಕದ ಜೊತೆಗೆ ಅಂತರ ಕಾಯ್ದುಕೊಂಡು ರಶ್ಯದ ಜೊತೆಗೆ ಯಾಕೆ ಮೃದು ನಿಲುವು ತಳೆದಿದ್ದರೂ ಎನ್ನುವುದು ಪ್ರಧಾನಿ ಮೋದಿಯವರಿಗೆ ತಡವಾಗಿಯಾದರೂ ಅರ್ಥವಾದಂತಿದೆ. ಅಮೆರಿಕದಂತಹ ಪರೋಪ ಜೀವಿಯು ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶವನ್ನು ತನ್ನ ದುರುದ್ದೇಶಗಳಿಗೆ ಹತ್ತಿರ ಮಾಡಿಕೊಳ್ಳಬಹುದೇ ಹೊರತು, ಅದು ಯಾವತ್ತೂ ಮಿತ್ರನಾಗಲು ಸಾಧ್ಯವಿಲ್ಲ ಎನ್ನುವುದು ಕಹಿ ಸತ್ಯ. ಇಷ್ಟಾದರೂ, ಅಮೆರಿಕ, ಟ್ರಂಪ್ ಎಂದು ಭಾರತದ ವಿದೇಶಾಂಗ ನೀತಿಯ ಹಿರಿಮೆಯನ್ನು ಒತ್ತೆಯಿಟ್ಟು ‘ಟ್ರಂಪ್ ಜಪ’ ಮಾಡುತ್ತಿದ್ದ ಮೋದಿ ಮತ್ತು ಅವರ ಭಕ್ತರು ಇಂಗು ತಿಂದ ಮಂಗಗಳಾಗಿದ್ದಾರೆ. ತಮ್ಮ ಕ್ಷುದ್ರ ರಾಜಕೀಯಕ್ಕೆ ಭಾರತದ ಹಿತಾಸಕ್ತಿಯನ್ನು ಬಲಿಕೊಟ್ಟ ಪ್ರಧಾನಿ ಮೋದಿಯವರು ಇದೀಗ ಯೂ ಟರ್ನ್ ಹೊಡೆಯುವುದು ಅನಿವಾರ್ಯವಾಗಿದೆ. ಅಮೆರಿಕ ತನ್ನ ನಿಜ ಮುಖವನ್ನು ಪ್ರದರ್ಶಿಸುತ್ತಿದ್ದಂತೆಯೇ, ನೆರೆಯ ಚೀನಾದ ಜೊತೆಗಿನ ಸಂಬಂಧದ ಅಗತ್ಯ ಮತ್ತು ಅನಿವಾರ್ಯತೆ ಅವರಿಗೆ ಮನವರಿಕೆಯಾಗಿದೆ. ಈ ಕಾರಣದಿಂದ ಚೀನಾದ ಕಡೆಗೆ ಮತ್ತೆ ಸ್ನೇಹದ ಹಸ್ತವನ್ನು ಚಾಚಿದ್ದಾರೆ.
ಗಡಿ ವಿವಾದಗಳೇ ಭಾರತಕ್ಕೆ ಹಲವು ಶತ್ರುಗಳನ್ನು ಅನಾಯಾಸವಾಗಿ ಸೃಷ್ಟಿಸಿದೆ. ಪಾಕಿಸ್ತಾನ-ಭಾರತದ ನಡುವಿನ ಗಡಿ ಸಮಸ್ಯೆಗಳು ಪರಿಹರಿಸಲಾಗದಷ್ಟು ಉಲ್ಬಣಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಉಭಯ ದೇಶಗಳ ನಡುವಿನ ಮಾತುಕತೆಗಳು ಸಂಪೂರ್ಣ ನಿಂತುಹೋಗಿರುವುದರಿಂದ, ಸಂಘರ್ಷ ಉಲ್ಬಣಾವಸ್ಥೆ ತಲುಪಿತು. ಇತ್ತ ಚೀನಾದ ಜೊತೆಗೂ ಸುದೀರ್ಘ ಗಡಿ ಸಮಸ್ಯೆಗಳಿವೆ. ಹಾಗೆ ನೋಡಿದರೆ, ಭಾರತದ ಬಹುಮುಖ್ಯ ಭಾಗವನ್ನು ಚೀನಾ ಆಕ್ರಮಿಸಿಕೊಂಡಿದೆ ಮಾತ್ರವಲ್ಲ, ಹಲವು ಬಾರಿ ಭಾರತದ ಸೈನಿಕರ ಮೇಲೆ ನೇರ ಭೀಕರ ದಾಳಿಯನ್ನು ನಡೆಸಲು ಪ್ರಯತ್ನಿಸಿದೆ. ಭಾರತದ ಸೇನೆಯೂ ಅಷ್ಟೇ ಸಮರ್ಥವಾಗಿ ಇದಕ್ಕೆ ಉತ್ತರಿಸಿದೆಯಾದರೂ, 2020ರಲ್ಲಿ ಗಲ್ವಾನ್ ಸಂಘರ್ಷ ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಭಾರೀ ಆಘಾತವನ್ನು ನೀಡಿತು. ಚೀನಾ ಅರುಣಾಚಲ ಪ್ರದೇಶದ ಮೇಲೆ ಪದೇಪದೇ ಹಕ್ಕು ಸಾಧಿಸಲು ಯತ್ನಿಸುತ್ತಿದೆ. ಆದರೆ ಗಡಿ ವಿವಾದಗಳನ್ನೇ ಮುಂದಿಟ್ಟುಕೊಂಡು ಉಭಯ ದೇಶಗಳು ಇತರ ಸಂಬಂಧಗಳನ್ನು ಕಡಿದುಕೊಳ್ಳುತ್ತಾ ಹೋಗುವುದು ಅಪಾಯಕಾರಿ. ನೆಹರೂ ಕಾಲದಲ್ಲಿ ಚೀನಾ ಅತಿಕ್ರಮಣ ನಡೆಸಿದಾಗ ಭಾರತ ಎರಡು ಹೆಜ್ಜೆ ಹಿಂದಿಡಲು ಇದೇ ಕಾರಣ. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶವು ಚೀನಾದಂತಹ ಬಲಿಷ್ಠ ದೇಶದ ವಿರುದ್ಧ ಸಂಘರ್ಷಕ್ಕಿಳಿಯುವುದಕ್ಕಿಂತ, ಬೇರೆ ಬೇರೆ ವಲಯಗಳಲ್ಲಿ ಸಂಬಂಧಗಳನ್ನು ಬೆಳೆಸುತ್ತಾ ಒಂದರಲ್ಲಿ ಕಳೆದುಕೊಂಡದ್ದನ್ನು ಮತ್ತೊಂದರಲ್ಲಿ ಪಡೆಯುತ್ತಾ ಹೋಗುವುದು ಮುತ್ಸದ್ದಿತನ. ಕಳೆದ ಒಂದು ದಶಕದಲ್ಲಿ ಚೀನಾದ ಜೊತೆಗೆ ಹಳಸಿದ ಸಂಬಂಧದ ಲಾಭವನ್ನು ನೆರೆಯ ಪಾಕಿಸ್ತಾನ ತನ್ನದಾಗಿಸಲು ಯತ್ನಿಸಿತು. ಅಮೆರಿಕದ ಜೊತೆಗೆ ಸಂಬಂಧ ದುರ್ಬಲಗೊಳ್ಳುತ್ತಾ ಬಂದಾಗ ಪಾಕಿಸ್ತಾನ ಚೀನಾದ ಜೊತೆಗೆ ಸಂಬಂಧ ಸುಧಾರಿಸಲು ಪ್ರಯತ್ನಿಸಿತು. ಇದೇ ಸಂದರ್ಭದಲ್ಲಿ ಚೀನಾ ಹೆದರಿಸಿದಷ್ಟು ಭಾರತ ತನಗೆ ವಿಧೇಯನಾಗಿರುತ್ತದೆ ಎನ್ನುವುದು ಅಮೆರಿಕದ ಲೆಕ್ಕಾಚಾರ. ಈ ಕಾರಣದಿಂದಲೇ ಚೀನಾದ ಕಡೆಗೆ ಬೆರಳು ತೋರಿಸಿ ಅಮೆರಿಕ ತನ್ನ ಉದ್ದೇಶವನ್ನು ಸಾಧಿಸಿಕೊಳ್ಳುತ್ತಾ ಬರುತ್ತಿತ್ತು. ಇದೀಗ ಅಮೆರಿಕ ಬಿಟ್ಟ ಸುಂಕಾಸ್ತ್ರ ಭಾರತಕ್ಕೆ ವಾಸ್ತವದ ದರ್ಶನ ಮಾಡಿಸಿದೆ. ತನ್ನ ನೆರೆಹೊರೆಯ ಜೊತೆಗಿನ ಸಂಬಂಧ ಸುಧಾರಣೆಯ ಅಗತ್ಯ ಅದಕ್ಕೆ ಮನಗಂಡಿದೆ.
ಗಲ್ವಾನ್ ಘರ್ಷಣೆಯ ಬಳಿಕ ಗಡಿಭಾಗದಲ್ಲಿ ಚೀನಾ ನಡೆಸುತ್ತಿರುವ ಅತಿಕ್ರಮಗಳು ತೀವ್ರ ಚರ್ಚೆಯಲ್ಲಿದೆ. ಚೀನಾದೊಂದಿಗೆ ಸ್ನೇಹ ಹಸ್ತ ಚಾಚುತ್ತಿದ್ದಂತೆಯೇ ವಿರೋಧ ಪಕ್ಷಗಳು ಈ ಅತಿಕ್ರಮಗಳನ್ನು ಮುಂದಿಟ್ಟುಕೊಂಡು ಪ್ರಧಾನಿಯನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ಯತ್ನಿಸುತ್ತಿದೆ. ಗಡಿ ಭಾಗದ ಅತಿಕ್ರಮಗಳನ್ನು ಪ್ರಧಾನಿ ಮೋದಿಯವರು ಚೀನಾ ಅಧ್ಯಕ್ಷರಲ್ಲಿ ಪ್ರಸ್ತಾಪಿಸಲಿ ಎಂದು ಒತ್ತಾಯಿಸುತ್ತಿವೆ. ಇದು ಸಾಧ್ಯವಲ್ಲ. ಗಡಿ ಭಾಗದ ಚೀನಾ ಅತಿಕ್ರಮಗಳನ್ನು ಮುನ್ನೆಲೆಗೆ ತಂದರೆ ಮಾತುಕತೆ ಮುಂದುವರಿಯಲಾರದು ಎನ್ನುವುದು ಈ ವಿರೋಧ ಪಕ್ಷಗಳಿಗೂ ಚೆನ್ನಾಗಿ ಗೊತ್ತಿವೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಗಡಿ ಅತಿಕ್ರಮಗಳನ್ನು ಬದಿಗಿಟ್ಟು, ಉಳಿದ ವ್ಯಾಪಾರ ಸಂಬಂಧಗಳನ್ನು ಸುಧಾರಿಸುವ ಕಡೆಗೆ ಗಮನ ನೀಡಬೇಕಾಗಿದೆ. ಅಮೆರಿಕದ ಸವಾಲುಗಳನ್ನು ಎದುರಿಸಲು ಚೀನಾದಂತಹ ಬಲಿಷ್ಠ ನೆರೆ ದೇಶಗಳ ಜೊತೆಗೆ ಸ್ನೇಹ ಸೌಹಾರ್ದ ಬೆಳೆಸುವುದು ಅತ್ಯಗತ್ಯ. ಚೀನಾದ ಉತ್ಪನ್ನಗಳಿಗೆ ಅತಿ ದೊಡ್ಡ ಗ್ರಾಹಕರು ಭಾರತದಲ್ಲೂ ಇರುವುದರಿಂದ ಈ ಸಂಬಂಧ ಸುಧಾರಣೆ ಚೀನಾದ ಅಗತ್ಯವೂ ಕೂಡ. ಈ ನಿಟ್ಟಿನಲ್ಲಿ ಉಭಯ ದೇಶಗಳು ಪರಸ್ಪರ ವಿಧಿಸಿಕೊಂಡಿರುವ ನಿಷೇಧಗಳನ್ನು ಪುನರಾವಲೋಕನ ಮಾಡಿಕೊಳ್ಳುತ್ತಿರುವುದು ಶ್ಲಾಘನೀಯವಾಗಿದೆ. ಕೊರೋನದ ನೆಪದಲ್ಲಿ ಚೀನಾ-ಭಾರತದ ನಡುವೆ ನೇರ ವಿಮಾನಯಾನವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಅದನ್ನು ಪುನರಾರಂಭಗೊಳಿಸುವ ಬಗ್ಗೆ ಮಾತುಕತೆ ನಡೆದಿದೆ. ಚೀನಾ ಪ್ರಜೆಗಳಿಗೆ ವೀಸಾ ಸಂಬಂಧ ನಿಲುವನ್ನು ಭಾರತ ಸಡಿಲಗೊಳಿಸಿದೆ. ಚೀನಾದ ಹಲವು ಉತ್ಪನ್ನಗಳಿಗೆ ಭಾರತ ನಿಷೇಧ ಹೇರಿತ್ತು. ಇದಕ್ಕೆ ಪ್ರತಿಯಾಗಿ ಚೀನಾವೂ ಭಾರತದ ವಿರುದ್ಧ ಹಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಉಭಯ ದೇಶಗಳು ಅವುಗಳಿಂದ ಹಿಂದೆ ಸರಿದು ಪರಸ್ಪರ ಸಹಕಾರ ನೀಡುವಂತಾಗಬೇಕು. ಹಾಗೆಯೇ ಚೀನಾದ ಸಾಧನೆಗಳು, ಅಭಿವೃದ್ಧಿಗೆ ತೆಗೆದುಕೊಂಡ ಕಠಿಣ ಕ್ರಮಗಳು ಭಾರತಕ್ಕೆ ಮಾದರಿಯಾಗಬೇಕು. ಚೀನಾದ ಜೊತೆಗೆ ಸಂಘರ್ಷಕ್ಕಿಂತ ಸ್ನೇಹ ಸಂಬಂಧದಲ್ಲೇ ಭಾರತದ ಭವಿಷ್ಯವಿದೆ.
ಹಾಗೆಯೇ ಪಾಕಿಸ್ತಾನದ ಜೊತೆಗೂ ಬಿಗಡಾಯಿಸಿರುವ ಸಂಬಂಧವನ್ನು ಸರಿಪಡಿಸಲು ಮುಂದಾಗಬೇಕು. ಚೀನಾದ ಜೊತೆಗೆ ಗಡಿ ಸಮಸ್ಯೆಗಳನ್ನು ಬದಿಗಿಟ್ಟು ಬೇರೆ ವಿಷಯಗಳನ್ನು ಚರ್ಚಿಸಲು ಸಾಧ್ಯ ಎಂದಾದರೆ, ಪಾಕಿಸ್ತಾನ-ಭಾರತದ ನಡುವೆ ಅದು ಯಾಕೆ ಸಾಧ್ಯವಾಗುವುದಿಲ್ಲ? ಕಾಶ್ಮೀರದ ವಿಷಯದಲ್ಲಿ ಮೂರನೇ ದೇಶದ ಮಧ್ಯಸ್ಥಿಕೆಯಿಲ್ಲದೆಯೇ ಮಾತುಕತೆ ಮುಂದುವರಿಯಬೇಕು. ಪಾಕಿಸ್ತಾನದ ಜೊತೆಗೆ ಭಾರತ ಸಂಬಂಧ ಸುಧಾರಣೆ ಮಾಡಿಕೊಳ್ಳುವುದು ಅಮೆರಿಕಕ್ಕೆ ಇಷ್ಟವಿಲ್ಲದ ಸಂಗತಿಯಾಗಿದೆ. ಹಾಗೆ ಸುಧಾರಣೆಯಾದರೆ ಅಮೆರಿಕದ ಅನಿವಾರ್ಯತೆ, ಅಗತ್ಯ ಉಭಯ ದೇಶಗಳಿಗೂ ಇಲ್ಲವಾಗುತ್ತದೆ. ಅಮೆರಿಕದ ಶಸ್ತ್ರಾಸ್ತ್ರ ವ್ಯಾಪಾರದ ಮೇಲೂ ದುಷ್ಪರಿಣಾಮವಾಗುತ್ತದೆ. ಪಾಕಿಸ್ತಾನ ದುರ್ಬಲ ದೇಶವೆನ್ನುವ ಕಾರಣಕ್ಕಾಗಿ ಅದರ ಜೊತೆಗೆ ಭಾರತ ಸಂಘರ್ಷವನ್ನು ಬಯಸುವುದು, ಚೀನಾವು ಭಾರತದ ಗಡಿಯಲ್ಲಿ ನಡೆಸುತ್ತಿರುವ ಅತಿಕ್ರಮಣದ ಪರೋಕ್ಷ ಸಮರ್ಥನೆಯಾಗುತ್ತದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ಚೀನಾವು ಪರೋಕ್ಷವಾಗಿ ಪಾಕಿಸ್ತಾನಕ್ಕೆ ನೆರವಾಗಿತ್ತು ಎನ್ನುವ ವಾಸ್ತವವನ್ನು ನಾವು ಒಪ್ಪಿಕೊಳ್ಳಬೇಕು. ಚೀನಾದ ಜೊತೆಗೆ ಸಂಬಂಧ ಸುಧಾರಣೆಯಾಗಬೇಕಾದರೆ, ಪಾಕಿಸ್ತಾನದ ಜೊತೆಗೂ ಕೆಲವು ವಿಷಯಗಳಲ್ಲಿ ಭಾರತ ಮೃದು ನಿಲುವನ್ನು ತಳೆಯಬೇಕು. ಇದು ಗಡಿಭಾಗದ ಭಯೋತ್ಪಾದನಾ ದಾಳಿಗಳು ನಿಲ್ಲುವುದಕ್ಕೆ ಪರೋಕ್ಷವಾಗಿ ಸಹಾಯ ಮಾಡಲೂ ಬಹುದು. ಒಟ್ಟಿನಲ್ಲಿ ಇಂದು ಅಮೆರಿಕ ಎನ್ನುವ ಗೋಮುಖ ವ್ಯಾಘ್ರವನ್ನು ಎದುರಿಸಲು ಭಾರತ ತನ್ನ ವಿದೇಶಾಂಗ ನೀತಿಯನ್ನು ಹೊಸದಾಗಿ ಅವಲೋಕನ ಮಾಡುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಚೀನಾದ ಜೊತೆಗೆ ಪ್ರಧಾನಿ ಮೋದಿ ನಡೆಸುತ್ತಿರುವ ಮಾತುಕತೆಗಳು ಶ್ಲಾಘನೀಯವಾಗಿದೆ.







