ಸೆಗಣಿ, ಗೋಮೂತ್ರದ ಮಧ್ಯೆ ಭಾರತದ ಶಿಕ್ಷಣ ವ್ಯವಸ್ಥೆ

Photo| NDTV
ಈ ದೇಶದಲ್ಲಿ ದಲಿತರು ದೇವಸ್ಥಾನ ಪ್ರವೇಶ ಮಾಡುತ್ತಾರೆ ಎಂಬ ಆತಂಕದಿಂದ ವರ್ಷಗಟ್ಟಲೆ ದೇವಸ್ಥಾನಗಳಿಗೇ ಬೀಗ ಹಾಕಿದ ಉದಾಹರಣೆಗಳಿವೆ. ಶಾಲೆ ಕಾಲೇಜುಗಳಲ್ಲಿ ದಲಿತರು, ದುರ್ಬಲ ವರ್ಗದ ಜನರು ಕಾಲಿಡುತ್ತಾರೆ ಎನ್ನುವ ಕಾರಣಕ್ಕಾಗಿಯೇ ಹಂತಹಂತವಾಗಿ ಸರಕಾರಿ ಶಾಲೆಗಳನ್ನೇ ಮುಚ್ಚಿಸುವ ಸಂಚುಗಳು ನಡೆಯುತ್ತಿವೆ. ಸರಕಾರಿ ಶಾಲೆಗಳು ದುರ್ಬಲ, ಕೆಳಜಾತಿಯ ಜನರ ಶಿಕ್ಷಣದ ಹಕ್ಕುಗಳನ್ನು ಪೂರೈಸುತ್ತಿರುವುದು ಹಲವರಿಗೆ ಸಹಿಸುವ ವಿಷಯವಲ್ಲ. ಇದೇ ಕಾರಣಕ್ಕೆ ದಲಿತರ, ಅಲ್ಪಸಂಖ್ಯಾತರ ಸ್ಕಾಲರ್ಶಿಪ್ಗಳಿಗೂ ಸರಕಾರ ಹಂತಹಂತವಾಗಿ ಕತ್ತರಿ ಹಾಕುತ್ತಾ ಬರುತ್ತಿದೆ. ಒಂದು ಕಾಲದಲ್ಲಿ, ಮುಸ್ಲಿಮರು ವಿದ್ಯಾವಂತರಾಗಬೇಕು, ಮುಖ್ಯವಾಹಿನಿಗೆ ಬರಬೇಕು ಎನ್ನುವ ಕೂಗು ಪ್ರಗತಿಪರ ವಲಯದಿಂದ ಕೇಳಿ ಬರುತ್ತಿತ್ತು. ನರೇಂದ್ರ ಮೋದಿಯವರೇ ಒಮ್ಮೆ ಜೋರ್ಡಾನ್ ದೊರೆ ಅತಿಥಿಯಾಗಿ ಭಾಗವಹಿಸಿದ ಸಮಾವೇಶವೊಂದರಲ್ಲಿ ‘ಮುಸ್ಲಿಮರು ಒಂದು ಕೈಯಲ್ಲಿ ಕುರ್ಆನ್ ಮತ್ತೊಂದು ಕೈಯಲ್ಲಿ ಕಂಪ್ಯೂಟರ್ನ್ನು ಹೊಂದಿರಬೇಕು’ ಎಂದು ಕರೆ ನೀಡಿದ್ದರು. ಇದೀಗ ನೋಡಿದರೆ, ಮುಸ್ಲಿಮರು ಅತ್ಯಧಿಕ ಸಂಖ್ಯೆಯಲ್ಲಿ ವಿದ್ಯಾವಂತರಾಗುವುದನ್ನು, ಕಾಲೇಜುಗಳಿಗೆ ಅಡಿಯಿಡುವುದನ್ನು ಗಮನಿಸಿ ಶಾಲಾ ಕಾಲೇಜುಗಳನ್ನೇ ಮುಚ್ಚಿ ಸುವಂತಹ ಕೃತ್ಯಗಳಿಗೆ ಸರಕಾರವೇ ಮುಂದಾಗುತ್ತಿದೆ.
ಮಹಿಳೆಯರು ವಿದ್ಯಾವಂತರಾಗಬೇಕು, ಮುಸ್ಲಿಮ್ ತರುಣಿಯರು ಶಿಕ್ಷಣ ಪಡೆಯಬೇಕು ಎಂದು ಘೋಷಿಸಿದ ಸರಕಾರವೇ, ಬಳಿಕ ಹಿಜಾಬ್ನ ನೆಪ ಮುಂದಿಟ್ಟು ಆಕೆಯನ್ನು ಶಾಲೆ ಪ್ರವೇಶಿಸದಂತೆ ತಡೆಯಿತು. ಮುಸ್ಲಿಮ್ ವಿದ್ಯಾರ್ಥಿನಿಯರು ಶಾಲೆ ಕಾಲೇಜುಗಳಲ್ಲಿ ಸಾಧಿಸುತ್ತಿರುವ ಸಾಧನೆಗಳನ್ನು ನೋಡಿದ ಸಂಘಪರಿವಾರ ಮತ್ತು ಸರಕಾರ ಜಂಟಿಯಾಗಿ ‘ಹಿಜಾಬ್ ವಿವಾದ’ವನ್ನು ಪ್ರಾಯೋಜಿಸಿತು. ಬಟ್ಟೆಯನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿನಿಯರಿಗೆ ಬಹಿಷ್ಕಾರವನ್ನು ಹಾಕಿತು. ಮುಸ್ಲಿಮ್ ಸಮುದಾಯದ ವಿದ್ಯಾರ್ಥಿಗಳು ಅತ್ಯುನ್ನತ ಶಿಕ್ಷಣ ಪಡೆದು ಯುಪಿಎಸ್ಸಿಯಲ್ಲಿ ಅತಿ ಹೆಚ್ಚು ಮಂದಿ ಉತ್ತೀರ್ಣಗೊಂಡಾಗ ಅದಕ್ಕಾಗಿ ಸಂತೋಷ ಪಡದೆ, ‘ಯುಪಿಎಸ್ಸಿ ಜಿಹಾದ್’ ಎಂದು ಸಂಘಪರಿವಾರ ಮೈಪರಚಿಕೊಳ್ಳತೊಡಗಿತು. ‘ಎದೆ ಸೀಳಿದರೆ ನಾಲ್ಕು ಅಕ್ಷರವಿಲ್ಲ’ ‘ಪಂಕ್ಚರ್ ಹಾಕುವವರು’ ಎಂದು ಸಾರ್ವಜನಿಕವಾಗಿ ನಿಂದನೆಗೊಳಗಾದ ಸಮುದಾಯ ಅಕ್ಷರ ಕಲಿತಾಕ್ಷಣ, ಅದನ್ನೇ ‘ಅಪರಾಧ’ವಾಗಿ ಬಿಂಬಿಸುವ ಪ್ರಯತ್ನ ನಡೆಯಿತು. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದರೂ, ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಯುಪಿಎಸ್ಸಿಯಂತಹ ಪರೀಕ್ಷೆಯಲ್ಲಿ ದುರ್ಬಲ ಸಮುದಾಯ ಸಾಧನೆ ಹೆಮ್ಮೆಯ ವಿಷಯವಾಗಬೇಕು. ಆದರೆ ಅದಕ್ಕಾಗಿ ಅಸೂಯೆ ಪಡುತ್ತಾ ಮುಸ್ಲಿಮರಿಗೆ ಶಿಕ್ಷಣವನ್ನೇ ನಿರಾಕರಿಸುವ ಮಾತುಗಳನ್ನು ಕೆಲವರು ಆಡುತ್ತಿದ್ದಾರೆ.
ದಕ್ಷಿಣ ಭಾರತದ ರಾಜ್ಯದಲ್ಲಿ ಸರಕಾರಿ ವೈದ್ಯಕೀಯ ಕಾಲೇಜುಗಳಿಗಾಗಿ ಹೋರಾಟ, ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಜಮ್ಮುವಿನಲ್ಲಿ ಶ್ರೀಮಾತಾ ವೈಷೋದೇವಿ ನಾರಾಯಣ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮಾನ್ಯತೆಯನ್ನು ನೆಪಗಳನ್ನು ತೆಗೆದು ರದ್ದುಗೊಳಿಸಿದಾಗ ಅದನ್ನು ಸಂಘಪರಿವಾರ ಕಾರ್ಯಕರ್ತರು ಸಂಭ್ರಮಿಸಿ ಸ್ವಾಗತಿಸಿದರು. ಸಾರ್ವಜನಿಕವಾಗಿ ಸಿಹಿ ಹಂಚಿದರು. 2016ರಲ್ಲಿ ಈ ಆಸ್ಪತ್ರೆ ಉದ್ಘಾಟನೆ ಮಾಡಿದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಜಮ್ಮು ಮತ್ತು ಕಾಶ್ಮೀರದ ಯುವ ಸಮುದಾಯಕ್ಕೆ ಶಿಕ್ಷಣದ ಹೆಬ್ಬಾಗಿಲು ತೆರೆಯಿತು ಎಂಬರ್ಥದಲ್ಲಿ ಮಾತನಾಡಿದ್ದರು. ಆಸ್ಪತ್ರೆಯಲ್ಲಿನ ಸೌಲಭ್ಯಗಳ ಬಗ್ಗೆ ಪ್ರಶಂಸಿಸುತ್ತಾ ಅದನ್ನು ಕೇಂದ್ರ ಸರಕಾರದ ಸಾಧನೆಯೆಂಬಂತೆ ಕೊಚ್ಚಿಕೊಂಡಿದ್ದರು. ಆದರೆ ಇತ್ತೀಚೆಗೆ ಏಕಾಏಕಿ ಕಾಲೇಜಿನ ಅನುಮತಿಯನ್ನು ನಿರಾಕರಿಸಲಾಯಿತು. ಕಾರಣವಿಷ್ಟೆ. ಕಳೆದ ಬಾರಿಯ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕಾಲೇಜಿನಲ್ಲಿ ಪ್ರವೇಶ ಪಡೆದ 50 ವಿದ್ಯಾರ್ಥಿಗಳಲ್ಲಿ 44 ವಿದ್ಯಾರ್ಥಿಗಳು ಅಲ್ಪಸಂಖ್ಯಾತರು ಅಥವಾ ಮುಸ್ಲಿಮರು. ಇದು ಜಮ್ಮುವಿನ ಸಂಘಪರಿವಾರದ ಕೆಂಗಣ್ಣಿಗೆ ಕಾರಣವಾಯಿತು. ನೀಟ್ ಪರೀಕ್ಷೆಯೆನ್ನುವುದು ಧರ್ಮಾಧಾರಿತವಲ್ಲ. ಅದು ಅರ್ಹತೆಯನ್ನು ಆಧರಿಸಿಕೊಂಡಿದೆ. ದೇಶಾದ್ಯಂತ ನೀಟ್ ಪರೀಕ್ಷೆಯ ಮೂಲಕವೇ ವಿದ್ಯಾರ್ಥಿಗಳ ಆಯ್ಕೆ ನಡೆಯುತ್ತದೆ. ಹೀಗಿದ್ದರೂ, 44 ಅರ್ಹ ಮುಸ್ಲಿಮ್ ವಿದ್ಯಾರ್ಥಿಗಳ ಕಾಲೇಜು ಸೇರ್ಪಡೆಯನ್ನು ಸ್ಥಳೀಯ ಸಂಘಪರಿವಾರ ವಿರೋಧಿಸಿತು. ಹಾಗಾದರೆ ಸಂಘಪರಿವಾರ ಏನನ್ನು ನಿರೀಕ್ಷಿಸುತ್ತದೆ? ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಹೊರಗಿಟ್ಟು ಕಳಪೆ ಸಾಧನೆ ಮಾಡಿದವರನ್ನು ವೈದ್ಯಕೀಯ ಕಾಲೇಜಿಗೆ ಸೇರ್ಪಡೆ ಮಾಡಬೇಕೆ? ಸರಕಾರಕ್ಕೆ ಈ ಪ್ರತಿಭಟನೆ ನುಂಗಲಾರದ ತುತ್ತಾಯಿತು. ಅಂತಿಮವಾಗಿ ಸೂಕ್ತ ಸಿಬ್ಬಂದಿಯಿಲ್ಲ ಎಂಬ ನೆಪವನ್ನು ಮುಂದಿಟ್ಟುಕೊಂಡು ವೈದ್ಯಕೀಯ ಕೋರ್ಸ್ನ್ನೇ ರದ್ದುಗೊಳಿಸಿತು. ದ್ವೇಷ ಗೆದ್ದಿತು, ಶಿಕ್ಷಣ ಸೋತಿತು. ಅಲ್ಲಿ ಅವಕಾಶ ಪಡೆದ 44 ಮುಸ್ಲಿಮ್ ವಿದ್ಯಾರ್ಥಿಗಳ ಜೊತೆಗೆ ಇತರ ಹಿಂದೂ ಮತ್ತು ಸಿಖ್ ವಿದ್ಯಾರ್ಥಿಗಳೂ ಆ ಕಾಲೇಜಿನಲ್ಲಿ ಕಲಿಯುವ ಅವಕಾಶದಿಂದ ವಂಚಿತರಾದರು. ‘ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿ. ಅದು ದಕ್ಷಿಣ ಭಾರತೀಯರ ಅವಕಾಶಗಳನ್ನು ಕಿತ್ತುಕೊಳ್ಳುತ್ತಿದೆ’ ಎಂಬ ದಕ್ಷಿಣ ರಾಜ್ಯಗಳ ಆಗ್ರಹವನ್ನು ಈ ಮೂಲಕ ಕೇಂದ್ರ ಸರಕಾರವೇ ಸಮರ್ಥಿಸಿದಂತಾಗಿದೆ. ಧರ್ಮದ ಹೆಸರು ಹೇಳಿ ನೀಟ್ ಪರೀಕ್ಷೆಯ ಅರ್ಹ ವಿದ್ಯಾರ್ಥಿಗಳನ್ನು ವೈದ್ಯಕೀಯ ಕಾಲೇಜಿನಿಂದ ಹೊರಗಿಡಬಹುದಾದರೆ, ಪ್ರಾದೇಶಿಕತೆಯ ಹೆಸರಿನಲ್ಲಿ ನೀಟ್ನ್ನು ಯಾಕೆ ತಿರಸ್ಕರಿಸಬಾರದು? ಎನ್ನುವ ಪ್ರಶ್ನೆಗೆ ಬಲ ಬಂದಿದೆ.
ಒಂದೆಡೆ ವೈದ್ಯಕೀಯ ಕಾಲೇಜುಗಳನ್ನು ಮುಚ್ಚಿಸುತ್ತಾ ಇನ್ನೊಂದೆಡೆ ಸೆಗಣಿಯಿಂದ, ಪಂಚಗವ್ಯದಿಂದ ಕ್ಯಾನ್ಸರ್ಗಳಿಗೆ ಔಷಧಿ ಹುಡುಕಲು ಸರಕಾರ ಕೋಟಿ ಗಟ್ಟಲೆ ಹಣ ಸುರಿಯುವ ಮೂಲಕ ಸುದ್ದಿಯಲ್ಲಿದೆ. ನಾನಾಜಿ ದೇಶ್ಮುಖ್ ಪಶುವೈದ್ಯಕೀಯ ವಿಜ್ಞಾನ ವಿವಿಯಲ್ಲಿ ಹಸುವಿನ ಸೆಗಣಿ, ಮೂತ್ರ ಬಳಸಿ ಕ್ಯಾನ್ಸರ್ಗೆ ಔಷಧಿ ಹುಡುಕಲು ಮೂರೂವರೆ ಕೋಟಿ ರೂಪಾಯಿ ವ್ಯಯ ಮಾಡಿತ್ತು. ಆದರೆ ಫಲಿತಾಂಶ ಮಾತ್ರ ಶೂನ್ಯ. ಇದೀಗ ಮಂಜೂರಾದ ಹಣದಲ್ಲಿ 2 ಕೋಟಿ ರೂಪಾಯಿ ಅವ್ಯವಹಾರವಾಗಿರುವುದು ಬಹಿರಂಗವಾಗಿದೆ. ಇದೇ ಸಂದರ್ಭದಲ್ಲಿ ವಿಶ್ವದ ಟಾಪ್ 100 ರ್ಯಾಂಕಿಂಗ್ ಪಟ್ಟಿಯಲ್ಲಿ ಈ ಬಾರಿಯೂ ಭಾರತದ ವಿಶ್ವವಿದ್ಯಾನಿಲಯಗಳ ಹೆಸರಿಲ್ಲ. ಭಾರತದ ವಿಶ್ವವಿದ್ಯಾನಿಲಯಗಳು ಇಂದು ಮೌಢ್ಯಗಳಿಗೆ, ಜಾತಿ ರಾಜಕೀಯಗಳಿಗಾಗಿಯಷ್ಟೇ ಸುದ್ದಿಯಾಗುತ್ತಿವೆ. ವಿದೇಶಗಳ ವಿದ್ಯಾರ್ಥಿಗಳನ್ನು ನಮ್ಮ ವಿಶ್ವವಿದ್ಯಾನಿಲಯಗಳು ಆಕರ್ಷಿಸುವುದಿರಲಿ, ಭಾರತದ ವಿದ್ಯಾರ್ಥಿಗಳ ವಲಸೆಗಳು ಹೆಚ್ಚುತ್ತಿವೆ. ಈಗಾಗಲೇ ಗಮನಾರ್ಹ ಸಾಧನೆಗಳನ್ನು ಮಾಡಿರುವ ಕೆಲವು ವಿಶ್ವವಿದ್ಯಾನಿಲಯಗಳು ಆರೆಸ್ಸೆಸ್ ಹಸ್ತಕ್ಷೇಪದಿಂದಾಗಿ ಹಿನ್ನಡೆ ಅನುಭವಿಸುತ್ತಿವೆ. ದಲಿತರನ್ನು, ಮಹಿಳೆಯರನ್ನು, ಅಲ್ಪಸಂಖ್ಯಾತರನ್ನು ವ್ಯವಸ್ಥಿತವಾಗಿ ಹೊರಗಿಟ್ಟು, ಆಧುನಿಕ, ವೈಜ್ಞಾನಿಕ, ವೈಚಾರಿಕ ದೃಷ್ಟಿಕೋನಗಳ ಜಾಗದಲ್ಲಿ ಸೆಗಣಿ, ಗೋಮೂತ್ರ ಕೇಂದ್ರಿತ ಶಿಕ್ಷಣ ವ್ಯವಸ್ಥೆಯು ಭಾರತದ ಭವಿಷ್ಯವನ್ನು ಇನ್ನಷ್ಟು ನಿರಾಶದಾಯಕವಾಗಿಸಿದೆ. ಸೆಗಣಿ, ಗೋಮೂತ್ರದಲ್ಲಿ ಒದ್ದಾಡುತ್ತಿರುವ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಮೇಲೆತ್ತುವ ಬಗ್ಗೆ ಸರಕಾರ ಇನ್ನಾದರೂ ಯೋಚಿಸದಿದ್ದರೆ, ಭಾರತ ಮತ್ತೆ ಸ್ವಾತಂತ್ರ್ಯಪೂರ್ವದ ಅಂಧಕಾರದತ್ತ ಸಾಗುವುದರಲ್ಲಿ ಅನುಮಾನವಿಲ್ಲ.







