ಒಳ ಮೀಸಲಾತಿ: ನಿಜವಾದ ಶತ್ರುಗಳ ಬಗ್ಗೆ ಎಚ್ಚರವಿರಲಿ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕೊನೆಗೂ ಒಳಮೀಸಲಾತಿಗೆ ಸಂಬಂಧಿಸಿ ರಾಜ್ಯ ಸಚಿವ ಸಂಪುಟವು ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದೆ. ಒಳಮೀಸಲಾತಿಗೆ ಸಂಬಂಧಿಸಿ ರಾಜ್ಯ ಸರಕಾರಗಳಿಗೆ ಸುಪ್ರೀಂಕೋರ್ಟ್ ಅಧಿಕಾರ ನೀಡಿದ ಬೆನ್ನಿಗೇ ಸುಮಾರು ಒಂದು ವರ್ಷಗಳ ಬಳಿಕ ಇದೀಗ ಸಿದ್ದರಾಮಯ್ಯ ನೇತೃತ್ವದ ಸರಕಾರ, ನ್ಯಾ. ನಾಗಮೋಹನ್ ದಾಸ್ ಅವರ ವರದಿಯನ್ನು ಕೆಲವು ತಿದ್ದುಪಡಿಗಳೊಂದಿಗೆ ಜಾರಿಗೊಳಿಸಲು ಮುಂದಾಗಿದೆ. ಹೊಲೆಯ ಅಂದರೆ ಬಲಗೈ ಸಮುದಾಯಗಳಿಗೆ ಶೇ. 6, ಮಾದಿಗ ಮತ್ತು ಇತರ ಉಪಜಾತಿಗಳಿಗೆ ಅಂದರೆ ಎಡಗೈ ಸಮುದಾಯಗಳಿಗೆ ಶೇ. 6 ಹಾಗೂ ಇತರ ಸ್ಪಶ್ಯ ಸಮುದಾಯಗಳಿಗೆ ಶೇ. 5ರಂತೆ ಹಂಚಿಕೆ ಮಾಡಿ ಸಂಪುಟ ನಿರ್ಧಾರ ತೆಗೆದುಕೊಂಡಿದ್ದು, ಶೀಘ್ರದಲ್ಲೇ ಇದನ್ನು ಜಾರಿಗೊಳಿಸುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ. ಒಳ ಮೀಸಲಾತಿಗಾಗಿ ದಲಿತ ಸಮುದಾಯದೊಳಗೆ ಸುಮಾರು ಎರಡೂವರೆೆ ದಶಕಗಳ ಸುದೀರ್ಘ ಹೋರಾಟ ನಡೆದುಕೊಂಡು ಬಂದಿದೆ. ಶೇ. 17 ಮೀಸಲಾತಿಯ ಬಹುಪಾಲನ್ನು ದಲಿತ ಸಮುದಾಯದೊಳಗಿರುವ ಪ್ರಬಲ ಗುಂಪುಗಳು ತಮ್ಮದಾಗಿಸಿಕೊಳ್ಳುತ್ತಿದ್ದು ಮಾದಿಗ ಸೇರಿದಂತೆ ಹಲವು ದುರ್ಬಲ ಸಮುದಾಯಗಳು ಮೀಸಲಾತಿಯ ಸೌಲಭ್ಯಗಳಿಂದ ವಂಚಿತವಾಗಿವೆ ಎನ್ನುವ ಆರೋಪ ಬಹುಕಾಲದಿಂದ ಕೇಳಿ ಬರುತ್ತಿತ್ತು. ಪರಿಣಾಮವಾಗಿ ಮಾದಿಗ ಮತ್ತು ಸಂಬಂಧಿಸಿದ ಉಪ ಜಾತಿಗಳು ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅತ್ಯಂತ ನಿಕೃಷ್ಟ ಪ್ರಾತಿನಿಧ್ಯಗಳನ್ನು ಪಡೆಯುತ್ತಿವೆ ಎಂದು ಹೋರಾಟಗಾರರು ಪ್ರತಿಪಾದಿಸುತ್ತಾ ಬಂದಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ, ಆಂಧ್ರ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಹೋರಾಟ ವಿಸ್ತೃತ ರೂಪವನ್ನು ಪಡೆದಿದ್ದವು. ಬಿಜೆಪಿ ಆಡಳಿತ ಕಾಲದಲ್ಲಿ ರಾಜ್ಯ ಸರಕಾರ ಚುನಾವಣೆ ಸಮೀಪಿಸುತ್ತಿರುವಂತೆಯೇ ಒಳಮೀಸಲಾತಿಗೆ ಸಂಬಂಧಿಸಿ ನಿರ್ಣಯವೊಂದನ್ನು ಮಾಡಿ ಅದನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿತ್ತು. ಆ ನಿರ್ಣಯಕ್ಕೆ ರಾಜ್ಯದಲ್ಲಿ ಒಳ ಮೀಸಲಾತಿಯನ್ನು ಜಾರಿಗೊಳಿಸುವ ಸಾಮರ್ಥ್ಯವಿರಲಿಲ್ಲ. ಒಳ ಮೀಸಲಾತಿಯ ಹೆಸರಿನಲ್ಲಿ ಎಡಗೈ ಸಮುದಾಯವನ್ನು ಓಲೈಸುವ ತಂತ್ರದ ಭಾಗವಾಗಿ ಆ ನಿರ್ಣಯವನ್ನು ತೆಗೆದುಕೊಳ್ಳಲಾಗಿತ್ತು. ಆದರೆ ಯಾವಾಗ ಸುಪ್ರೀಂಕೋರ್ಟ್ ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರವನ್ನು ರಾಜ್ಯಗಳಿಗೆ ನೀಡಿತೋ ಅಲ್ಲಿಂದ ಒಳ ಮೀಸಲಾತಿಯ ಜಾರಿಗೆ ಸಂಬಂಧಿಸಿದ ನಿರ್ಣಯಕ್ಕೆ ಬಲ ಬಂತು.
ಸುಪ್ರೀಂಕೋರ್ಟ್ ಅನುಮೋದನೆ ನೀಡಿದಾಕ್ಷಣ ಅದನ್ನು ಜಾರಿಗೊಳಿಸುವುದು ರಾಜ್ಯ ಸರಕಾರಗಳಿಗೆ ಸುಲಭವಿರಲಿಲ್ಲ. ಸುಪ್ರೀಂಕೋರ್ಟ್‌ನ ಈ ಆದೇಶದ ವಿರುದ್ಧ ಉತ್ತರ ಭಾರತದಲ್ಲಿ ದೊಡ್ಡ ಪ್ರತಿಭಟನೆಗಳು ನಡೆದವು. ಒಳ ಮೀಸಲಾತಿ ಜಾರಿಮಾಡಲು ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಸರಕಾರದ ಭಾಗವಾಗಿರುವ ಹಲವು ದಲಿತ ನಾಯಕರು ಹೇಳಿಕೆ ನೀಡಿದ್ದರು.ಹಲವು ದಲಿತ ಮುಖಂಡರು ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿಯನ್ನೂ ಸಲ್ಲಿಸಿದ್ದರು. ದಕ್ಷಿಣ ಭಾರತದ ಕೆಲವು ರಾಜ್ಯಗಳಷ್ಟೇ ಇದನ್ನು ಅನುಷ್ಠಾನಗೊಳಿಸುವ ಧೈರ್ಯವನ್ನು ಪ್ರದರ್ಶಿಸಿದವು. ಸುಪ್ರೀಂಕೋರ್ಟ್ ತೀರ್ಪು ಹೊರ ಬಿದ್ದ ಬೆನ್ನಿಗೆ ಅದನ್ನು ಸ್ವಾಗತಿಸಿದವರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬರು. ತೀರ್ಪು ಹೊರ ಬಿದ್ದ ಬೆನ್ನಿಗೇ ದಲಿತರ ಗಣತಿ ಮತ್ತು ಮಾಹಿತಿ ಸಂಗ್ರಹಗಳಿಗೆ ಆದ್ಯತೆ ನೀಡಬೇಕಾಗಿತ್ತು. ಅದಾಗಲೇ
ಜಾತಿ ಗಣತಿ ವರದಿಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರವನ್ನು ತಲೆನೋವಾಗಿ ಕಾಡುತ್ತಿತ್ತು. ಆದುದರಿಂದ ಒಳ ಮೀಸಲಾತಿಗೆ ಸಂಬಂಧಿಸಿದ ಹೊಸ ತಲೆನೋವನ್ನು ಎಳೆದುಕೊಳ್ಳುವುದಕ್ಕೆ ಅವರು ಸಿದ್ಧರಿರಲಿಲ್ಲ. ಸರಕಾರದೊಳಗಿರುವ ದಲಿತ ಸಮುದಾಯದ ಸಚಿವರು ಒಳಮೀಸಲಾತಿಯ ಬಗ್ಗೆ ವಿಶೇಷ ಆಸ್ಥೆ ತೋರಿಸದಿರುವುದು ಕೂಡ ಒಳ ಮೀಸಲಾತಿ ಜಾರಿ ವಿಳಂಬವಾಗುವುದಕ್ಕೆ ಕಾರಣವಾಯಿತು. ಎಡಗೈ ಸಮುದಾಯ ಪ್ರತಿಭಟನೆ ತೀವ್ರಗೊಳಿಸುತ್ತಿದ್ದಂತೆಯೇ ರಾಜ್ಯ ಸರಕಾರ ಎಚ್ಚರವಾಯಿತು. ದಲಿತರ ಜಾತಿ ಗಣತಿಗೆ ಸಂಬಂಧಿಸಿ ವರದಿ ಸಿದ್ಧಗೊಳಿಸುವುದಕ್ಕೆ ಸರಕಾರ ನ್ಯಾ. ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು. ಅದಾಗಲೇ ಕೆಲವು ಸಂಘಟನೆಗಳು ಒಳಮೀಸಲಾತಿ ಜಾರಿಗೊಳಿಸುವುದಕ್ಕೆ ಗಡುವು ನೀಡಿದ್ದರಿಂದ, ನಾಗಮೋಹನ್ ದಾಸ್ ಆಯೋಗಕ್ಕೆ ಒತ್ತಡಗಳಿದ್ದವು.
ಈ ಒತ್ತಡಗಳ ನಡುವೆಯೇ ಸಮಿತಿ ತನ್ನ ಕರ್ತವ್ಯವನ್ನು ನಿರ್ವಹಿಸಿದೆ. ವರದಿಗಳಿಗೆ ಕೆಲವು ತಿದ್ದುಪಡಿಗಳನ್ನು ಮಾಡಿ ಇದೀಗ ಅದನ್ನು ಜಾರಿಗೊಳಿಸಲು ಸರಕಾರ ಮುಂದಾಗಿದೆ ಮಾತ್ರವಲ್ಲ, ಶೀಘ್ರವೇ ನೇಮಕಾತಿಗಳನ್ನು ಆರಂಭಿಸುವ ಭರವಸೆಯನ್ನೂ ನೀಡಿದೆ.
ಇದೇ ಸಂದರ್ಭದಲ್ಲಿ ವರದಿಯಲ್ಲಿರುವ ಮಾಹಿತಿಗಳ ಬಗ್ಗೆ ಹಲವರ ಆಕ್ಷೇಪಗಳು ಕೇಳಿ ಬಂದಿವೆ. ವರದಿ ಜಾರಿಗೊಳಿಸುವ ಸಂದರ್ಭದಲ್ಲಿ ಕೆಲವು ದಲಿತ ನಾಯಕರು ತಮ್ಮ ಪ್ರಭಾವವನ್ನು ಬೀರಿದ್ದಾರೆ ಎನ್ನುವ ಆರೋಪಗಳಿವೆ. ನಾಗಮೋಹನ್ ದಾಸ್ ವರದಿಯಲ್ಲಿ ಅತ್ಯಂತ ಹಿಂದುಳಿದ
ಜಾತಿಗಳೆಂದು ಪರಿಗಣಿಸಲ್ಪಟ್ಟಿದ್ದ 59 ಜಾತಿಗಳನ್ನು ಪರಿಶಿಷ್ಟರೊಳಗೆ ಉಳಿದ ಜಾತಿಗಳಿಗಿಂತ ಮುಂದಿರುವ ಸ್ಪಶ್ಯ ಜಾತಿಗಳಿಗೆ ಸೇರಿಸುವುದನ್ನು ಹಲವರು ಪ್ರಶ್ನಿಸಿದ್ದಾರೆ. ಅಲೆಮಾರಿ ಸಮುದಾಯದಂತಹ ದುರ್ಬಲ ಜಾತಿಗಳು ಸ್ಪಶ್ಯ ಸಮುದಾಯಗಳ ಜೊತೆಗೆ ಸ್ಪರ್ಧಿಸಲು ಸಾಧ್ಯವೆ? ಎನ್ನುವ ಪ್ರಶ್ನೆ ಎದ್ದಿದೆ. ವರದಿ ಶಿಫಾರಸು ಮಾಡಿದ್ದ 1:6:5:4:1 ಸೂತ್ರಕ್ಕೆ ಬದಲಾಗಿ 6:6:5 ಸೂತ್ರಕ್ಕೆ ಯಾಕೆ ಬರಲಾಯಿತು? ಎಂದು ಕೆಲವರು ಕೇಳುತ್ತಿದ್ದಾರೆ. ಸರಕಾರ ಈ ಬಗ್ಗೆ ಸ್ಪಷ್ಟೀಕರಣವನ್ನು ನೀಡಬೇಕಾಗಿದೆ.
ಇದೇ ಸಂದರ್ಭದಲ್ಲಿ ಬಿಜೆಪಿಯು ಕದಡಿದ ನೀರಿನಲ್ಲಿ ಮೀನು ಹಿಡಿಯುವ ಪ್ರಯತ್ನ ನಡೆಸುತ್ತಿದೆ. ವಾಸ್ತವದಲ್ಲಿ ಮೀಸಲಾತಿಯ ಬಗ್ಗೆ ನಂಬಿಕೆಯೇ ಇಲ್ಲದ, ಜಾತಿಗಣತಿಯನ್ನು ಪರೋಕ್ಷವಾಗಿ ವಿರೋಧಿಸುತ್ತಾ ಬಂದ ರಾಜ್ಯ ಬಿಜೆಪಿಯ ನಾಯಕರು ಒಳ ಮೀಸಲಾತಿಯ ಬಗ್ಗೆ ಅತ್ಯಾಸಕ್ತಿಯನ್ನು ಯಾಕೆ ನಟಿಸುತ್ತಿದ್ದಾರೆ ಎನ್ನುವುದು ಗುಟ್ಟಿನ ವಿಷಯವಲ್ಲ. ಈ ಮೂಲಕ ಸಂಘಟಿತ ದಲಿತರನ್ನು ಒಡೆಯುವುದಷ್ಟೇ ಅವರ ಗುರಿ. ಕೇಂದ್ರ ಸರಕಾರವು ಮೇಲ್‌ಜಾತಿಯ ಬಡವರಿಗೆ ನೀಡಿದ ಶೇ. 10 ಮೀಸಲಾತಿಯು ಪರೋಕ್ಷವಾಗಿ ದಲಿತರಿಗೆ ಮಾಡಿದ ವಂಚನೆಯೇ ಆಗಿದೆ. ಯಾವ ಹೋರಾಟ, ಆಗ್ರಹಗಳಿಲ್ಲದೇ ಇದ್ದರೂ ಈ ಶೇ. 10 ಮೀಸಲಾತಿಯನ್ನು ಕೇಂದ್ರ ಸರಕಾರ ಜಾರಿಗೊಳಿಸಿದ ಉದ್ದೇಶ ಮೀಸಲಾತಿಯನ್ನು ಇನ್ನಷ್ಟು ದುರ್ಬಲಗೊಳಿಸುವುದಾಗಿತ್ತು. ಖಾಸಗೀಕರಣಕ್ಕೆ ಆದ್ಯತೆಗಳನ್ನು ನೀಡುತ್ತಾ ಸಾರ್ವಜನಿಕ ವಲಯದೊಳಗಿರುವ ಉದ್ಯೋಗಗಳನ್ನು ಮೋದಿ ಸರಕಾರ ಹಂತಹಂತವಾಗಿ ಇಲ್ಲವಾಗಿಸುತ್ತಿದೆ. ಹೀಗಿರುವಾಗ, ಒಳ ಮೀಸಲಾತಿ ಜಾರಿಗೊಂಡ ಬಳಿಕವೂ ಈ ಮೀಸಲಾತಿಯಿಂದ ದಲಿತರ ಸಾಮಾಜಿಕ, ಆರ್ಥಿಕ ಬದುಕು ಎಷ್ಟರಮಟ್ಟಿಗೆ ಚೇತರಿಸಿಕೊಳ್ಳಬಹುದು ಎನ್ನುವುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಈ ಹಿನ್ನೆಲೆಯಲ್ಲಿ, ಒಳ ಮೀಸಲಾತಿಯ ಹಂಚಿಕೆಯ ಹೆಸರಿನಲ್ಲಿ ದಲಿತರು ಪರಸ್ಪರರನ್ನು ಅನುಮಾನದಿಂದ ನೋಡುತ್ತಾ ಛಿದ್ರವಾಗಬಾರದು. ಒಳ ಮೀಸಲಾತಿಯ ಹಂಚುವಿಕೆಯಲ್ಲಾಗಿರುವ ವ್ಯತ್ಯಾಸ ಮನೆಯೊಳಗಿನ ವಿಷಯ. ಶತಶತಮಾನಗಳಿಂದ ಹಸಿದು ಕೂತ ಸಮುದಾಯದ ಖಾಲಿ ಬಟ್ಟಲಿಗೆ ತುತ್ತುಗಳನ್ನು ಬಡಿಸುವ ನೆಪದಲ್ಲೇ ಪರಸ್ಪರ ಬಡಿದಾಡಿಸುವ ತಂತ್ರಗಳನ್ನು ದಲಿತರು ಅರ್ಥ ಮಾಡಿಕೊಳ್ಳಬೇಕು. ಇದೇ ಸಂದರ್ಭದಲ್ಲಿ ದಲಿತರನ್ನು ಇಂದಿನ ಅಸಹಾಯಕ ಸ್ಥಿತಿಗೆ ತಳ್ಳಿದ ಹೊರಗಿನ ನಿಜವಾದ ಶತ್ರುಗಳನ್ನು ಎದುರಿಸುವುದಕ್ಕಾಗಿ ಸಂಘಟಿತವಾಗುವುದು ಎಲ್ಲಕ್ಕಿಂತ ಮುಖ್ಯ. ಈ ನಿಟ್ಟಿನಲ್ಲಿ ತಮ್ಮ ಹೋರಾಟಗಳನ್ನು ಮರು ರೂಪಿಸಿಕೊಂಡು ಮುಂದೆ ಹೆಜ್ಜೆಯಿಡಲು ಇದು ಸರಿಯಾದ ಸಮಯವಾಗಿದೆ.







