ನೀಟ್ ಪರೀಕ್ಷೆಯಲ್ಲಿ ಅಕ್ರಮ: ಶಿಕ್ಷಣ ವ್ಯವಸ್ಥೆಯ ಮೇಲೆ ನಡೆದ ಭಯೋತ್ಪಾದನಾ ದಾಳಿ

ಸಾಂದರ್ಭಿಕ ಚಿತ್ರ (AI)
ನೀಟ್ನಲ್ಲಿ ನಡೆದ ಹಗರಣ ಈ ದೇಶದ ಶಿಕ್ಷಣ ವ್ಯವಸ್ಥೆಯ ಮೇಲೆ ನಡೆದ ಉಗ್ರಗಾಮಿ ದಾಳಿಯಾಗಿದೆ. ಈ ಸೋರಿಕೆ ಯಾವುದೇ ಅಣು ಸ್ಥಾವರದ ವಿಕಿರಣಗಳ ಸೋರಿಕೆಗಳಷ್ಟೇ ಅಪಾಯಕಾರಿಯಾದುದು. ಒಂದು ಪರೀಕ್ಷೆಯ ಯಶಸ್ಸು ಅಥವಾ ವೈಫಲ್ಯಗಳಿಗಷ್ಟೇ ಈ ಸೋರಿಕೆ ಸೀಮಿತವಲ್ಲ. ನೀಟ್ನಲ್ಲಿ ನಡೆಯುವ ಯಾವುದೇ ಅಕ್ರಮಗಳು ಈ ದೇಶದ ವೈದ್ಯಕೀಯ ಸೇವೆಯಲ್ಲಿ ಅತ್ಯಂತ ಗಂಭೀರ ಪರಿಣಾಮವನ್ನು ಬೀರುತ್ತದೆ. ವೈದ್ಯರಾಗುವುದಕ್ಕೆ ನಿಜವಾಗಿಯೂ ಅರ್ಹತೆಯಿರುವ ನೂರಾರು ವಿದ್ಯಾರ್ಥಿಗಳ ಅವಕಾಶವನ್ನು ಈ ಸೋರಿಕೆ ಕಿತ್ತುಕೊಂಡಿದೆ ಮಾತ್ರವಲ್ಲ, ವೈದ್ಯಕೀಯ ಕ್ಷೇತ್ರವನ್ನು ಪ್ರವೇಶಿಸಲು ಯಾವ ಅರ್ಹತೆಯೂ ಇಲ್ಲದ ಅಭ್ಯರ್ಥಿಗಳ ಕೈಗೆ ವೈದ್ಯಕೀಯ ಕತ್ತರಿಯನ್ನು ನೀಡಿದೆ. ಇಂತಹ ಅಭ್ಯರ್ಥಿಗಳು ಭವಿಷ್ಯದಲ್ಲಿ ವೈದ್ಯರಾಗಿ ಬಂದರೆ ಈ ದೇಶದ ವೈದ್ಯಕೀಯ ಕ್ಷೇತ್ರದ ಸ್ಥಿತಿಯೇನಾಗಬೇಕು? ಈ ಹಿಂದಿನ ಹಲವು ಪರೀಕ್ಷೆಗಳಲ್ಲಿ ಸೋರಿಕೆ ನಡೆದಿಲ್ಲ ಎಂದಾಕ್ಷಣ, ಅಲ್ಲಿ ಅಕ್ರಮಗಳು ನಡೆದೇ ಇಲ್ಲ ಎಂದು ಹೇಳುವಂತಿಲ್ಲ. ಅಕ್ರಮಗಳು ಬೆಳಕಿಗೆ ಬರುವುದು ಆಕಸ್ಮಿಕವಾಗಿ. ಆರೋಪಿಗಳು ಮಾಡುವ ಎಡವಟ್ಟುಗಳಿಂದ. ಕೆಲವೊಮ್ಮೆ ಅಕ್ರಮಗಳು ಬಯಲಾಗುವುದೇ ಇಲ್ಲ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ, ಶಿಕ್ಷಣ ವ್ಯವಸ್ಥೆಗೆ, ವೈದ್ಯಕೀಯ ಕ್ಷೇತ್ರಕ್ಕೆ ಆಗುವ ಭಾರೀ ಅನ್ಯಾಯ ಯಾರ ಗಮನಕ್ಕೂ ಬರುವುದಿಲ್ಲ. 2024ರಲ್ಲಿ ನೀಟ್ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಅನುಮಾನ ಬಂದಿರುವುದು ಫಲಿತಾಂಶ ಹೊರ ಬಿದ್ದ ಬಳಿಕ. ಸುಮಾರು 67 ಮಂದಿಗೆ ಆ ಬಾರಿ ಪ್ರಥಮ ರ್ಯಾಂಕ್ ಬಂದಾಗ ಪ್ರಶ್ನೆ ಪತ್ರಿಕೆಯಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಯಿತು. 67 ಮಂದಿಯಲ್ಲಿ ಆರು ಮಂದಿ ಒಂದೇ ಅನುಕ್ರಮದ ಸೀಟ್ ಸಂಖ್ಯೆಗಳನ್ನು ಹೊಂದಿರುವುದು ಬಳಿಕ ಬೆಳಕಿಗೆ ಬಂತು. ಅಂದರೆ, ಅಂಕಗಳಲ್ಲಿ ಸಣ್ಣ ಪುಟ್ಟ ಏರುಪೇರುಗಳು ಆಗಿದ್ದರೆ 2024ರಲ್ಲಿ ಆದ ಸೋರಿಕೆ ಚರ್ಚೆಗೇ ಬರುತ್ತಿರಲಿಲ್ಲ. ಇದೇ ರೀತಿ ಅಕ್ರಮಗಳು ನಡೆದು ಚರ್ಚೆಗೆ ಬರದ ಪರೀಕ್ಷೆಗಳನ್ನು ಸರಕಾರ ಎಷ್ಟು ಸಾರಿ ನಡೆಸಿದೆ ಎನ್ನುವುದು ಗೊತ್ತಾಗುವುದಾದರೂ ಹೇಗೆ?
ನೀಟ್ ಪರೀಕ್ಷೆಯ ಅಕ್ರಮ ಈಗಾಗಲೇ ತನ್ನ ಪರಿಣಾಮವನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಬೀರಿ ಆಗಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಮೇಲಿರುವ ವಿಶ್ವಾಸವೇ ಹೋಗಿ ಬಿಟ್ಟಿದೆ. ನೊಂದ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೂ ನಡೆದಿದೆ. ಇದು ಆತ್ಮಹತ್ಯೆಯಲ್ಲ, ವ್ಯವಸ್ಥೆ ಮಾಡಿದ ಕೊಲೆ ಎಂದು ಕಾಂಗ್ರೆಸ್ನ ಮುಖಂಡ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಈ ಆತ್ಮಹತ್ಯೆ ಒಂದು ಆರಂಭ ಮಾತ್ರ. ನೀಟ್ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳ ಮನಸ್ಥಿತಿ ಹೇಗಿರುತ್ತದೆ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಮಾನಸಿಕವಾಗಿ, ದೈಹಿಕವಾಗಿ ಭಾರೀ ಒತ್ತಡಗಳನ್ನು ಅವರು ಎದುರಿಸಬೇಕಾಗುತ್ತದೆ. ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿದ್ಯಾರ್ಥಿಗಳನ್ನು ತರಬೇತಿಗೊಳಿಸುವ ಸಂಸ್ಥೆಗಳೂ ಅವರನ್ನು ಸಾಕಷ್ಟು ಶೋಷಣೆಗೀಡು ಮಾಡುತ್ತವೆ. ಅವೆಲ್ಲದರಿಂದ ಪಾರಾಗಿ ಪರೀಕ್ಷೆ ಬರೆದು ಹೊರಬಂದರೆ, ಇದೀಗ ಸೋರಿಕೆಯ ಭಯ. ಮುಂದಿನ ದಿನಗಳಲ್ಲಾದರೂ ತಾವು ಬರೆಯುವ ಪರೀಕ್ಷೆ ವಿಶ್ವಾಸಾರ್ಹತೆಯಿಂದ ಕೂಡಿರುತ್ತದೆ ಎಂದು ಅವರು ನಂಬುವುದು ಹೇಗೆ? ಹಾಗೆ ನಂಬುವುದಕ್ಕೆ ಬೇಕಾಗಿರುವ ಯಾವ ಭರವಸೆಗಳನ್ನು ಕೇಂದ್ರ ಸರಕಾರ ನೀಡಿದೆ?
ಶಿಕ್ಷಣ ವ್ಯವಸ್ಥೆಯ ಮೇಲೆ ನಡೆದ ಈ ದಾಳಿ, ಪರಿಣಾಮವಾಗಿ ವಿದ್ಯಾರ್ಥಿಗಳಲ್ಲಿ ಸೃಷ್ಟಿಯಾಗಿರುವ ಭಯ ಇವೆಲ್ಲವುಗಳಿಗೆ ಸರಕಾರ ನೇರ ಹೊಣೆಯಾಗಿದೆ. ತಪ್ಪು ನಡೆದಿದೆ ಎನ್ನುವುದನ್ನು ಸರಕಾರ ಒಪ್ಪಿಕೊಂಡಿದೆಯಾದರೂ, ಆ ತಪ್ಪಿಗಾಗಿ ಸರಕಾರದೊಳಗಿರುವ ಯಾವುದೇ ಉನ್ನತ ವ್ಯಕ್ತಿಯ ತಲೆದಂಡವಾಗಿಲ್ಲ. ಅಕ್ರಮ ಬೆಳಕಿಗೆ ಬಂದ ಬೆನ್ನಿಗೇ ಕೇಂದ್ರ ಸಚಿವ ನೈತಿಕ ಹೊಣೆ ಹೊತ್ತು ರಾಜೀನಾಮೆಯನ್ನು ನೀಡಬೇಕಾಗಿತ್ತು. ಈ ಸೋರಿಕೆಯನ್ನು ತಾನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದೇನೆ ಎನ್ನುವುದನ್ನು ಆ ರಾಜೀನಾಮೆ ದೇಶಕ್ಕೆ ವ್ಯಕ್ತಪಡಿಸುತ್ತಿತ್ತು. ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಲೇ ಬೇಕಾದ ಹಲವು ಅನಿವಾರ್ಯಗಳಿತ್ತು. ಮುಖ್ಯವಾಗಿ ಪರೀಕ್ಷೆ ನಡೆಸುವ ಹಕ್ಕನ್ನು ಕೇಂದ್ರ ಸರಕಾರ ರಾಜ್ಯಗಳಿಂದ ಕಿತ್ತುಕೊಂಡು, ತಾನು ಎಲ್ಲ ವಿದ್ಯಾರ್ಥಿಗಳಿಗೂ ನ್ಯಾಯವನ್ನು ನೀಡುತ್ತೇನೆ ಎಂದು ನೀಟ್ ಪರೀಕ್ಷೆಯನ್ನು ರೂಪಿಸಿತು. ಇದರಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂದು ಹಲವು ರಾಜ್ಯಗಳು ಈ ಪರೀಕ್ಷೆಯನ್ನು ವಿರೋಧಿಸಿದವು. ಮಾತ್ರವಲ್ಲ, ಇದರ ವಿರುದ್ಧ ನಿರ್ಣಯವನ್ನೂ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಈ ಪರೀಕ್ಷೆಯನ್ನು ಜವಾಬ್ದಾರಿಯುತವಾಗಿ ನಡೆಸುವ ಹೊಣೆಗಾರಿಕೆ ಕೇಂದ್ರ ಸರಕಾರದ್ದಾಗಿತ್ತು. ದೇಶದ ಎಲ್ಲ ವಿದ್ಯಾರ್ಥಿಗಳಿಗೆ ಈ ನೀಟ್ ಮೂಲಕ ನ್ಯಾಯವನ್ನು ನೀಡುವುದು ಪಕ್ಕಕ್ಕಿರಲಿ, ಕನಿಷ್ಠ ಅಕ್ರಮಗಳಿಲ್ಲದೆ ಪರೀಕ್ಷೆಯನ್ನು ಮಾಡುವುದಕ್ಕೂ ಕೇಂದ್ರ ಸರಕಾರ ವಿಫಲವಾಗುತ್ತಾ ಬಂದಿದೆ. ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ರಾಜ್ಯಗಳಿಗೆ ಆಗಿರುವ ಅನ್ಯಾಯದ ಹೊಣೆಯನ್ನು ಕೇಂದ್ರ ಸರಕಾರ ಹೊರಲೇ ಬೇಕಾಗಿದೆ.
ಇದರಲ್ಲಿ ಸರಕಾರದೊಳಗಿರುವ ರಾಜಕಾರಣಿಗಳ ನೇರ ಪಾತ್ರವಿದೆ ಎಂದು ಅನುಮಾನಿಸಲಾಗುತ್ತಿದೆ. ಅದಕ್ಕೂ ಕಾರಣಗಳಿವೆ. ಈ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಪ್ರಮುಖ ಆರೋಪಿಗಳಿಗೆ ಬಿಜೆಪಿಯೊಂದಿಗೆ ನೇರ ಸಂಬಂಧವಿದೆ. ಬಿಜೆಪಿಯ ನಾಯಕರೊಂದಿಗೆ ನಂಟನ್ನೂ ಹೊಂದಿದ್ದಾರೆ. ಅಂದರೆ ಸರಕಾರದೊಳಗಿರುವ ಜನರ ಸಹಾಯವಿಲ್ಲದೆ ಈ ಸೋರಿಕೆ ಸಾಧ್ಯವೇ ಇಲ್ಲ ಎಂದಾಯಿತು. 2024ರಲ್ಲಿ ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಾಗ ಅದನ್ನು ಗಂಭೀರವಾಗಿ ತೆಗೆದುಕೊಂಡಿದ್ದರೆ, ಸಂಬಂಧ ಪಟ್ಟ ಸಚಿವರು ಆಗ ರಾಜೀನಾಮೆ ನೀಡುತ್ತಿದ್ದರೆ ಅಕ್ರಮ ಮರುಕಳಿಸುತ್ತಿರಲಿಲ್ಲವೇನೋ. ಮತ್ತೆ ಮತ್ತೆ ಅಕ್ರಮಗಳು ನಡೆಯುತ್ತವೆ ಎಂದಾದರೆ ನೀಟ್ ಪರೀಕ್ಷೆಯನ್ನು ರದ್ದುಗೊಳಿಸುವುದೇ ಉತ್ತಮ ಅಲ್ಲವೆ? ಈಗಾಗಲೇ ಪರೀಕ್ಷೆ ನಡೆಸುವ ಅಧಿಕಾರವನ್ನು ನಮಗೆ ಮರಳಿಸಿ ಎಂದು ರಾಜ್ಯಗಳು ಕೇಳುತ್ತಿವೆ. ತನ್ನಿಂದ ವಿಶ್ವಾಸಾರ್ಹ ಪರೀಕ್ಷೆಯನ್ನು ನಡೆಸಲು ಸಾಧ್ಯವಾಗುವುದಿಲ್ಲ ಎಂದ ಮೇಲೆ, ಅದನ್ನು ಆಯಾ ರಾಜ್ಯಗಳಿಗೆ ಒಪ್ಪಿಸುವುದರಲ್ಲೇ ಶಿಕ್ಷಣ ಕ್ಷೇತ್ರಕ್ಕೆ ಒಳಿತುಗಳಿವೆ. ರಾಜ್ಯಗಳಿಗೆ ಅಧಿಕ ಹೊಣೆಗಾರಿಕೆಯನ್ನು ನೀಡುವ ಮೂಲಕ ನೀಟ್ ಪ್ರವೇಶ ಪರೀಕ್ಷೆಯ ನಿರ್ವಹಣೆಯನ್ನು ವಿಕೇಂದ್ರೀಕರಿಸಬೇಕು ಎಂದು ಭಾರತೀಯ ಮೆಡಿಕಲ್ ಅಸೋಸಿಯೇಶನ್ ಕೂಡ ಸರಕಾರವನ್ನು ಆಗ್ರಹಿಸಿದೆ ಅಥವಾ ಎನ್ಟಿಎ ಬದಲಿಗೆ ನೂತನ ಸ್ವಾಯತ್ತ ಸಂಸ್ಥೆಯನ್ನಾದರೂ ನೇಮಿಸಬೇಕು. ನೀಟ್ ಪರೀಕ್ಷೆಯ ಸುಧಾರಣೆಗೆ ಕೇಂದ್ರ ಸರಕಾರ ನೀಡುವ ಅತಿ ದೊಡ್ಡ ಕೊಡುಗೆಯೆಂದರೆ, ತನ್ನ ತಪ್ಪನ್ನು ಒಪ್ಪಿಕೊಂಡು ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆಯನ್ನು ನೀಡಿ, ಕತ್ತಲಲ್ಲಿ ಕಂಗಾಲಾಗಿ ಕುಳಿತಿರುವ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸವನ್ನು ತುಂಬುವುದು. ಪುಲ್ಲಾಮ, ಪೆಹಲ್ಗಾಮ್ ದಾಳಿಯ ಭದ್ರತಾ ವೈಫಲ್ಯಗಳ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡದ ಸರಕಾರ, ಕನಿಷ್ಠ ಶಿಕ್ಷಣ ವ್ಯವಸ್ಥೆಯ ಮೇಲೆ ನಡೆದ ಈ ಭಯೋತ್ಪಾದನಾ ದಾಳಿಯನ್ನಾದರೂ ಗಂಭೀರವಾಗಿ ತೆಗೆದುಕೊಳ್ಳುತ್ತದೆಯೇ ಎಂದು ದೇಶ ಕಾಯುತ್ತಿದೆ.






