ರೂಪಾಯಿ ಪತನಕ್ಕೆ ತಟ್ಟೆ ಬಡಿದರೆ ಸಾಕೆ?

ಸಾಂದರ್ಭಿಕ ಚಿತ್ರ (PTI)
ಡಾಲರ್ ಮುಂದೆ ರೂಪಾಯಿಯ ಬೆಲೆ ದಯನೀಯವಾಗಿ ಕೆಳಗಿಳಿಯುತ್ತಿದೆ. ಈ ವೇಗವು ಭಾರತದ ಆರ್ಥಿಕತೆಯ ಭವಿಷ್ಯವನ್ನು ಜಗತ್ತಿನ ಮುಂದೆ ಬಿಡಿಸಿಡುತ್ತಿದೆ. ಡಾಲರ್ನ ಮುಂದೆ ಭಾರತದ ರೂಪಾಯಿ ಕೆಳಗಿಳಿಯುತ್ತಿರುವುದು ಇದೇ ಮೊದಲೇನೂ ಅಲ್ಲ. ಯುಪಿಎ ಅಧಿಕಾರಾವಧಿಯಲ್ಲೂ ರೂಪಾಯಿಗೆ ಡಾಲರ್ ಮುಂದೆ ವಿಶೇಷ ಮರ್ಯಾದೆಯೇನೂ ಸಿಗುತ್ತಿರಲಿಲ್ಲ. ಆದರೆ, ಡಾಲರ್ನ ಎದುರು ರೂಪಾಯಿ ಪತನವಾದಂತೆಲ್ಲ ಅದನ್ನು ದೇಶ ಗಂಭೀರವಾಗಿ ತೆಗೆದುಕೊಳ್ಳುತ್ತಿತ್ತು. ಆರ್ಥಿಕ ತಜ್ಞರು ಅವುಗಳನ್ನು ಗಂಭೀರ ವಿಶ್ಲೇಷಣೆಗಳಿಗೆ ಒಳಪಡಿಸುತ್ತಿದ್ದರು. ಸಂಸತ್ನಲ್ಲಿ ಅದು ಚರ್ಚೆಯ ವಿಷಯವಾಗುತ್ತಿತ್ತು. ಈ ಹಿಂದೆ ವಿರೋಧ ಪಕ್ಷವಾಗಿದ್ದ ಕಾಲದಲ್ಲಿ ರೂಪಾಯಿಯ ದೈನೇಸಿ ಸ್ಥಿತಿಯನ್ನು ಮುಂದಿಟ್ಟುಕೊಂಡು ಬಿಜೆಪಿಯು ಯುಪಿಎ ಸರಕಾರದ ಮೇಲೆ ತೀವ್ರ ದಾಳಿಗಳನ್ನು ಮಾಡಿತ್ತು.ರೂಪಾಯಿ ಬೆಲೆ ಇಳಿಕೆಗೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ನರೇಂದ್ರ ಮೋದಿಯವರು ಹೊಣೆ ಮಾಡಿದ್ದರು. ಮಾತ್ರವಲ್ಲ, ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದರೆ, ಡಾಲರ್ನ ಮುಂದೆ ರೂಪಾಯಿ ಬೆಲೆ ಪಡೆದುಕೊಳ್ಳುತ್ತದೆ ಎಂದು ದೇಶವನ್ನು ನಂಬಿಸಲಾಗಿತ್ತು. ಆದರೆ ಆ ನಂಬಿಕೆ ಹುಸಿಯಾಗಿದೆ. ಮಾತ್ರವಲ್ಲ, ಸಂಸತ್ ಅಧಿವೇಶನದಲ್ಲಿ ರೂಪಾಯಿ ಸ್ಥಿತಿ ಚರ್ಚೆಗೆ ಅರ್ಹವೇ ಅಲ್ಲದ ವಿಷಯವಾಗಿದೆ. ಬಿಜೆಪಿಯು ‘ವಂದೇಮಾತರಂ’ ಹಾಡಿನ ಕುರಿತಂತೆ ಚರ್ಚಿಸಿ ಇಡೀ ಕಲಾಪದ ಉದ್ದೇಶವನ್ನು ವ್ಯರ್ಥಗೊಳಿಸಿದೆ.
ಕೇಂದ್ರ ಸರಕಾರದ ಆರ್ಥಿಕ ನೀತಿಗಳು ರೂಪಾಯಿಯ ಇಂದಿನ ಸ್ಥಿತಿಗೆ ನೇರ ಕಾರಣವಾಗಿದೆ. ಈ ಹಿಂದೆ, ನೋಟು ನಿಷೇಧವನ್ನು ಮಾಡಿದಾಗ, ದೇಶದೊಳಗಿರುವ ಕಪ್ಪು ಹಣವೆಲ್ಲ ಪತ್ತೆಯಾಗಿ ರೂಪಾಯಿಯ ಬೆಲೆ ಏಕಾಏಕಿ ಡಾಲರ್ ಮುಂದೆ ಏರಿಕೆಯಾಗುತ್ತದೆ ಎಂದು ದೇಶದ ಜನರನ್ನು ಮೋದಿ ನೇತೃತ್ವದ ಸರಕಾರ ನಂಬಿಸಿತ್ತು. ರಾಜಕೀಯ ನಾಯಕರ ಈ ಮಾತುಗಳನ್ನು ನಂಬಿ ಈ ದೇಶದ ಲಕ್ಷಾಂತರ ಮಂದಿ ಬ್ಯಾಂಕುಗಳ ಮುಂದೆ ಕ್ಯೂ ನಿಂತಿದ್ದರು. ದೈನಂದಿನ ವ್ಯವಹಾರಗಳಲ್ಲಿ ನಾಶ, ನಷ್ಟವಾದರೂ ಅದನ್ನು ‘ದೇಶಕ್ಕಾಗಿ’ ಸಹಿಸಿಕೊಂಡರು. ನೋಟು ನಿಷೇಧದಿಂದ ಕಪ್ಪು ಹಣ ಬರಲಿಲ್ಲ. ಇದೇ ಸಂದರ್ಭದಲ್ಲಿ ರೂಪಾಯಿಯ ಬೆಲೆ ಮಾತ್ರ ಇಳಿಯುತ್ತಲೇ ಬಂತು. ಇದಾದ ಬಳಿಕ ಲಾಕ್ಡೌನ್ ಭಾರತದ ಅಳಿದುಳಿದ ಭರವಸೆಯನ್ನೂ ಇಲ್ಲವಾಗಿಸಿತು. ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಮೂಲಕ ಸ್ವದೇಶಿ ಆರ್ಥಿಕತೆಯ ಬಗ್ಗೆ ಮೋದಿ ಭರವಸೆಯ ಮಾತುಗಳನ್ನಾಡಿದ್ದರು. ವಿದೇಶದಿಂದ ಬಂಡವಾಳವನ್ನು ತರುತ್ತೇನೆ ಎಂದು ವಿಮಾನ ಏರಿ ಹಲವು ದೇಶಗಳನ್ನು ಸುತ್ತಿದರು. ಸ್ವದೇಶಿ ಆರ್ಥಿಕತೆಗೆ ಒತ್ತು ನೀಡುತ್ತಿದ್ದೇನೆ ಎಂದರು. ದೇಶದ ಸಾರ್ವಜನಿಕ ಸೊತ್ತುಗಳನ್ನೆಲ್ಲ ಒಂದೊಂದಾಗಿ ಖಾಸಗಿಯವರಿಗೆ ಮಾರಿದರು. ಭಾರತದ ಆರ್ಥಿಕತೆಯನ್ನು ಅದಾನಿ, ಅಂಬಾನಿ ಕೇಂದ್ರವಾಗಿಟ್ಟುಕೊಂಡು ರೂಪಿಸಿದರು. ಅತ್ತ ಸಾವಿರಾರು ಕೋಟಿ ರೂಪಾಯಿಗಳನ್ನು ನಮ್ಮ ಬ್ಯಾಂಕುಗಳಿಗೆ ವಂಚಿಸಿ ಬೃಹತ್ ಉದ್ಯಮಿಗಳು ವಿದೇಶ ಸೇರಿದರು. ಸ್ವಿಸ್ ಬ್ಯಾಂಕ್ನಿಂದ ಕಪ್ಪು ಹಣ ಬರುವುದು ದೂರದ ಮಾತಾಯಿತು. ಈಗ ನೋಡಿದರೆ, ರೂಪಾಯಿ ದರ ದಯನೀಯವಾಗಿ ಕೆಳಗಿಳಿಯುತ್ತಿದೆ. ಮೋದಿಯವರು ಸಂಸತ್ನಲ್ಲಿ ‘ವಂದೇ ಮಾತರಂ’ ಭಜಿಸುತ್ತಿದ್ದಾರೆ. ಇದೊಂದು ರೀತಿಯಲ್ಲಿ ಕೊರೋನ ವೈರಸ್ನ್ನು ಓಡಿಸಲು ತಟ್ಟೆಗಳನ್ನು ಬಡಿಯಲು ಕರೆ ನೀಡಿದಂತೆ.
ಆತಂಕಕಾರಿ ಸಂಗತಿಯೆಂದರೆ, ರೂಪಾಯಿ ಬೆಲೆ ಇಳಿಕೆಯಾಗುತ್ತಿರುವ ಈ ದಿನಗಳಲ್ಲಿ ಬಿಕ್ಕಟ್ಟಿಗೆ ಮುಖಾಮುಖಿಯಾಗುವ ಬದಲು ಸರಕಾರ ಪಲಾಯನ ದಾರಿಗಳನ್ನು ಹುಡುಕುತಿದೆ. ಈ ಹಿಂದೆ ವಿತ್ತ ಸಚಿವರು ‘ರೂಪಾಯಿ ಬೆಲೆ ಇಳಿಕೆಯಾಗುತ್ತಿಲ್ಲ. ಬದಲಿಗೆ ಡಾಲರ್ ಬೆಲೆ ಏರಿಕೆಯಾಗುತ್ತಿದೆ’ ಎನ್ನುವ ಹೇಳಿಕೆಯನ್ನು ನೀಡಿ ಸರಕಾರದ ಮಾನ ಉಳಿಸಲು ಯತ್ನಿಸಿದ್ದರು. ಇದು ತೀವ್ರ ವ್ಯಂಗ್ಯ ತಮಾಷೆಗೀಡಾಗುತ್ತಿದ್ದಂತೆಯೇ, ‘ಹಿಂದೆಯೂ ಬೆಲೆ ಇಳಿಕೆಯಾಗಿತ್ತು. ಭಾರತದ ಪಾಲಿಗೆ ಇದು ಹೊಸತಲ್ಲ’ ಎನ್ನುವ ರೀತಿಯಲ್ಲಿ ಸರಕಾರವನ್ನು ಸಮರ್ಥಿಸತೊಡಗಿದರು. ಯುಪಿಎ ಸರಕಾರದ ಅವಧಿಯಲ್ಲಿ ರೂಪಾಯಿ ಪತನವನ್ನು ತೋರಿಸಿಯೇ ಎನ್ಡಿಎ ಅಧಿಕಾರದೆಡೆಗೆ ದಾಪುಗಾಲು ಇಟ್ಟಿತು. ಸರಕಾರದಿಂದ ರೂಪಾಯಿ ಪತನವನ್ನು ತಡೆಯುವುದು ಸಾಧ್ಯವಿಲ್ಲವಾದರೂ, ಪತನದ ವೇಗವನ್ನು ನಿಯಂತ್ರಿಸೀತು ಎಂದು ಭಾವಿಸಲಾಗಿತ್ತು. ಆದರೆ ಸರಕಾರ ತೆಗೆದುಕೊಂಡ ಬೇಜವಾಬ್ದಾರಿ ಆರ್ಥಿಕ ನೀತಿಗಳು ರೂಪಾಯಿ ಬೆಲೆ ಇನ್ನಷ್ಟು ಕುಸಿಯುವುದಕ್ಕೆ ಕಾರಣವಾಯಿತು. ಈ ವಾಸ್ತವವನ್ನು ಒಪ್ಪಿಕೊಂಡು ದೇಶದ ಆರ್ಥಿಕತೆಯನ್ನು ಸದೃಢಗೊಳಿಸುವ ಕಡೆಗೆ ಸರಕಾರ ಹೆಜ್ಜೆಯಿಡಬೇಕು. ಆದರೆ ಈಗ ‘ಡಾಲರ್ ಮುಂದೆ ಬೆಲೆ ಇಳಿಕೆಯಾಗುವುದರಲ್ಲೇ ಭಾರತೀಯರಿಗೆ ಲಾಭವಿದೆ’ ಎಂದು ನಂಬಿಸಲು ಹೊರಟಿದೆ.
ಡಾಲರ್ ಏರಿಕೆಯಾದರೆ ರಫ್ತುದಾರರಿಗೆ ಲಾಭವಿದೆ. ಹಾಗೆಯೇ ಅನಿವಾಸಿ ಭಾರತೀಯರೂ ಇದರ ಲಾಭವನ್ನು ತನ್ನದಾಗಿಸಿಕೊಳ್ಳಬಹುದು ಎಂದು ತಲೆಬುಡವಿಲ್ಲದ ಸಮರ್ಥನೆಗೆ ಇಳಿಯುವುದಕ್ಕೂ ಸರಕಾರ ಹಿಂದು ಮುಂದು ನೋಡಿಲ್ಲ. ಮುಖ್ಯವಾಗಿ ಸರಕಾರಕ್ಕೆ ಸಲಹೆ ಸೂಚನೆಗಳನ್ನು ನೀಡುವ ನುರಿತ ಆರ್ಥಿಕ ತಜ್ಞರ ಕೊರತೆ ಅದರ ಸ್ಪಷ್ಟೀಕರಣದಲ್ಲಿ ಮತ್ತು ಪಲಾಯನದಲ್ಲಿ ಎದ್ದು ಕಾಣುತ್ತದೆ. ಇತ್ತೀಚೆಗೆ ಅಮೆರಿಕವು ಭಾರತದ ಮೇಲೆ ಹೇರುತ್ತಿರುವ ಸುಂಕದ ಕಾರಣದಿಂದಾಗಿ ರಫ್ತಿನ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗುತ್ತಿದೆ. ಇದು ಭಾರತದ ಗಾಯಗಳ ಮೇಲೆ ಎಳೆದ ಬರೆಯೇ ಸರಿ. ಇತ್ತೀಚೆಗೆ ರಫ್ತಿನ ಪ್ರಮಾಣದಲ್ಲಿ ತೀವ್ರ ಇಳಿಕೆಯಾಗಿದೆ. ಅಷ್ಟೇ ಅಲ್ಲ, ಅಮೆರಿಕದಲ್ಲಿರುವ ಅನಿವಾಸಿಗಳನ್ನು ಹಂತಹಂತವಾಗಿ ಗಡಿಪಾರು ಮಾಡಲು ಆ ದೇಶ ಬೇರೆ ಬೇರೆ ನೆಪಗಳನ್ನು ಹುಡುಕುತ್ತಿದೆ. ದೇಶದಲ್ಲಿ ಬಂಡವಾಳ ಹೂಡಿಕೆಯೂ ಕಡಿಮೆಯಾಗುತ್ತಿದೆ. ಶೇರು ಮಾರುಕಟ್ಟೆಯ ಏಳು ಬೀಳುಗಳಿಂದಾಗಿ ಕಳೆದ ಜನವರಿಯಿಂದ 1.48 ಲಕ್ಷ ಕೋಟಿ ರೂ. ಬಂಡವಾಳವನ್ನು ಹೂಡಿಕೆ ಸಂಸ್ಥೆಗಳು ಹಿಂಪಡೆದಿವೆ. ಇವೆಲ್ಲವೂ ರೂಪಾಯಿಯ ಮೇಲೆ ದುಷ್ಪರಿಣಾಮ ಉಂಟು ಮಾಡಿವೆ. ವಿಪರ್ಯಾಸವೆಂದರೆ, ಡಾಲರ್ ಮುಂದೆ ಮಲೇಶ್ಯ, ಫಿಲಿಪ್ಪೀನ್ಸ್, ಥಾಯ್ಲೆಂಡ್ ರಾಷ್ಟ್ರಗಳು ಸ್ಥಿರವಾಗಿ ನಿಂತಿವೆ. ಏಶ್ಯದಲ್ಲಿ ಭಾರತದ ರೂಪಾಯಿಗಷ್ಟೇ ಈ ದಯನೀಯ ಸ್ಥಿತಿಯಿದೆ. ಇವೆಲ್ಲಕ್ಕೂ ಪ್ರಧಾನಿ ಮೋದಿಯವರು ಉತ್ತರಿಸಬೇಕು. ಸಂಸತ್ ಅಧಿವೇಶನದಲ್ಲಿ ಇದು ಚರ್ಚೆಯಾಗಬೇಕು. ಆದರೆ, ಸಂಸತ್ನಲ್ಲಿ ವಂದೇ ಮಾತರಂ ಹೆಸರಿನಲ್ಲಿ ತಟ್ಟೆ ಬಾರಿಸಿ ‘ರೂಪಾಯಿ ಸಮಸ್ಯೆ’ಯನ್ನು ನಿವಾರಿಸಲಾಯಿತು.
ಅನಗತ್ಯ ಆಮದುಗಳನ್ನು ಕಡಿಮೆಗೊಳಿಸಿ, ಡಾಲರ್ನ ಮೇಲಿನ ಅವಲಂಬನೆಯಿಂದ ಭಾರತವು ನಿಧಾನಕ್ಕಾದರೂ ಸ್ವತಂತ್ರವಾಗಬೇಕು. ಈ ನಿಟ್ಟಿನಲ್ಲಿ ಸ್ವದೇಶಿ ಆರ್ಥಿಕತೆಯನ್ನು ಸದೃಢಗೊಳಿಸಲು ಸರಕಾರ ಕ್ರಮ ತೆಗೆದುಕೊಳ್ಳಬೇಕು. ಭಾರತವು ತನ್ನ ಆರ್ಥಿಕ ನೀತಿಗಳನ್ನು ಮರು ಪರಿಶೀಲಿಸಬೇಕು. ನೆರೆಹೊರೆಯ ಜೊತೆಗೆ ಅನಗತ್ಯ ದ್ವೇಷ ರಾಜಕಾರಣಕ್ಕೆ ಆದ್ಯತೆ ನೀಡದೆ ವ್ಯಾಪಾರ ವಿನಿಮಯ ಸಂಬಂಧಗಳನ್ನು ಸುಧಾರಿಸುವ ಬಗ್ಗೆ ಯೋಚನೆ ಮಾಡಬೇಕು. ಡಾಲರ್ ಕೇಂದ್ರಿತವಾದ ಆಮದುಗಳನ್ನು ಕಡಿತಗೊಳಿಸಿ ಇರಾನ್ನಂತಹ ದೇಶಗಳ ಜೊತೆಗೆ ವ್ಯವಹಾರಗಳನ್ನು ವಿಸ್ತರಿಸುವ ದಾರಿಗಳನ್ನು ಕಂಡುಕೊಳ್ಳಬೇಕು. ಅಮೆರಿಕದ ಒತ್ತಡಕ್ಕೆ ಮಣಿದು ರಶ್ಯದ ಜೊತೆಗೆ ಭಾರತ ಎಂದಿಗೂ ಸಂಬಂಧವನ್ನು ಕಡಿದುಕೊಳ್ಳಬಾರದು. ಇದೇ ಸಂದರ್ಭದಲ್ಲಿ, ನೆರೆಯ ಚೀನಾದ ಜೊತೆಗೆ ಗಡಿ ವಿಷಯಗಳನ್ನು ಮಾತುಕತೆಯಲ್ಲಿ ಪರಿಹರಿಸಿಕೊಳ್ಳುತ್ತಾ ಇತರ ಆರ್ಥಿಕ ಸಂಬಂಧಗಳಿಗೆ ಒತ್ತು ನೀಡಬೇಕು. ದೇಶದೊಳಗೆ ಸರಕಾರದ ನೇತೃತ್ವದಲ್ಲೇ ಜಾರಿಯಲ್ಲಿರುವ ದ್ವೇಷ ರಾಜಕಾರಣ ಆರ್ಥಿಕತೆಯ ಮೇಲೆಯೂ ಪರಿಣಾಮ ಬೀರಿದೆ. ಮೊತ್ತ ಮೊದಲು ದೇಶದಲ್ಲಿ ವ್ಯಾಪಾರ, ಉದ್ದಿಮೆಗಳನ್ನೂ ಕಾಡುತ್ತಿರುವ ಕೋಮು ರಾಜಕೀಯಗಳಿಗೆ ಔಷಧಿ ಹುಡುಕಬೇಕು. ಸೌಹಾರ್ದ-ಅಭಿವೃದ್ಧಿ ಒಂದೇ ನಾಣ್ಯದ ಎರಡು ಮುಖಗಳು. ರೂಪಾಯಿಯು ತನ್ನ ಬೆಲೆಯನ್ನು ಮತ್ತೆ ಪಡೆದುಕೊಳ್ಳಬೇಕಾದರೆ, ಮೊದಲು ಭಾರತದಲ್ಲಿ ರಾಜಕೀಯವು ಮೌಲ್ಯ ಪಡೆದುಕೊಳ್ಳಬೇಕು. ರಾಜಕಾರಣಿಗಳು ಪ್ರಬುದ್ಧರಾಗಿ, ವಿವೇಕಿಗಳಾಗಿ ಕ್ಷುಲ್ಲಕ ರಾಜಕೀಯ ಬದಿಗಿಟ್ಟು ದೇಶದ ಹಿತಾಸಕ್ತಿಯ ಬಗ್ಗೆ ಚಿಂತನೆ ಮಾಡಿದಾಗ ಮಾತ್ರ ಇದು ಸಾಧ್ಯ.







