ಕಾಸರಗೋಡಿನಲ್ಲಿ ಮಾತ್ರ ಕನ್ನಡ ಉಳಿದರೆ ಸಾಕೆ? ಕರ್ನಾಟಕದಲ್ಲೂ ಉಳಿಯಬೇಡವೆ?

ಇತ್ತೀಚೆಗೆ ಬೆಂಗಳೂರಿನ ಕೋಗಿಲು ಬುಲ್ಡೋಜರ್ ಪ್ರಕರಣಕ್ಕೆ ಸಂಬಂಧಿಸಿ ನೆರೆಯ ಕೇರಳ ಮುಖ್ಯಮಂತ್ರಿಯವರು ಹೇಳಿಕೆ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಜುಗರಕ್ಕೆ ತಳ್ಳಿದ್ದರು. ಇದೀಗ ಕಾಸರಗೋಡಿನಲ್ಲಿ ‘ಮಲಯಾಳಂ ಹೇರಿಕೆ’ ವಿಷಯವನ್ನು ಮುಂದಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇರಳ ಮುಖ್ಯಮಂತ್ರಿಗೆ ಪತ್ರವನ್ನು ಬರೆದಿದ್ದಾರೆ. ‘ಮಲಯಾಳಂ ಭಾಷಾ ಮಸೂದೆ-2025’ರಿಂದಾಗಿ ಕೇರಳ ಅದರಲ್ಲೂ ಕಾಸರಗೋಡಿನಲ್ಲಿರುವ ಕನ್ನಡ ಭಾಷಿಗರ ಮೇಲೆ ಮಲಯಾಳಂ ಹೇರಿದಂತಾಗುತ್ತದೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಕೇರಳ ಸರಕಾರವು ಪ್ರಸ್ತಾವಿತ ವಿಧಾನವನ್ನು ಭಾಷಾ ಅಲ್ಪಸಂಖ್ಯಾತ ಸಮುದಾಯಗಳು, ಶಿಕ್ಷಣ ತಜ್ಞರು ಮತ್ತು ನೆರೆಯ ರಾಜ್ಯಗಳೊಂದಿಗೆ ವಿಶಾಲವಾದ, ಎಲ್ಲರನ್ನು ಒಳಗೊಂಡ ಸಂವಾದದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇದಕ್ಕೆ ಕೇರಳ ಮುಖ್ಯಮಂತ್ರಿಯೂ ಪ್ರತಿಕ್ರಿಯಿಸಿದ್ದು ಕಾಸರಗೋಡು ಕನ್ನಡಿಗರ ಮೇಲೆ ನಾವು ಮಲಯಾಳಂ ಹೇರುತ್ತಿಲ್ಲ. ಭಾಷಾ ಅಲ್ಪಸಂಖ್ಯಾತರು ತಮ್ಮ ಮಾತೃಭಾಷೆ ಕಲಿಯಲು ಯಾವ ಅಡ್ಡಿಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ‘ಮಾತೃ ಭಾಷೆ ಮಲಯಾಳಂ ಅಲ್ಲದ ವಿದ್ಯಾರ್ಥಿಗಳು ರಾಷ್ಟ್ರೀಯ ಶಿಕ್ಷಣ ಪಠ್ಯ ಕ್ರಮಕ್ಕೆ ಅನುಗುಣವಾಗಿ ಶಾಲೆಯಲ್ಲಿ ಲಭ್ಯವಿರುವ ಭಾಷೆ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಕನ್ನಡಿಗರ ಭಾಷಾ ಹಕ್ಕು ರಕ್ಷಿಸುವ ಸಲುವಾಗಿ ಈ ಮಸೂದೆಯನ್ನು ತಂದಿದ್ದೇವೆ’ ಎಂದು ಮುಖ್ಯಮಂತ್ರಿ ಪಿಣರಾಯಿ ತಿಳಿಸಿದ್ದರೆ, ‘ಸಿದ್ದರಾಮಯ್ಯ ಅವರು ಮಸೂದೆ ಅಧ್ಯಯನ ಮಾಡದೆ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. ಹೊಸ ಮಸೂದೆಯಲ್ಲಿ ಮಲಯಾಳಂ ಐಚ್ಛಿಕ’ ಎಂದು ಕಾನೂನು ಸಚಿವ ಪಿ. ರಾಜೀವ್ ಸ್ಪಷ್ಟಪಡಿಸಿದ್ದಾರೆ.
ಕಾಸರಗೋಡು ಕನ್ನಡಿಗರ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಳಜಿ ಅಭಿನಂದನೀಯ. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂದು ಕಯ್ಯಾರ ಕಿಂಞಣ್ಣ ರೈ, ಬಿ. ಎಂ. ಇದಿನಬ್ಬ ಸೇರಿದಂತೆ ಹಲವು ಸಾಹಿತಿಗಳು, ಕನ್ನಡ ಪರ ಹೋರಾಟಗಾರರು ಈ ಹಿಂದೆ ಧ್ವನಿಯೆತ್ತಿದ್ದರು. ಆದರೆ ಇಂದು ಕಾಸರಗೋಡು ಕರ್ನಾಟಕಕ್ಕೆ ಸೇರುವುದು ದೂರದ ಮಾತಾಗಿದೆ. ಕರ್ನಾಟಕ ಪರ ಹೋರಾಟ ಕಾಸರಗೋಡಿನಲ್ಲಿ ತಣ್ಣಗಾಗಿದ್ದು, ಹೊಸ ತಲೆಮಾರು ಕೇರಳವನ್ನೇ ತಮ್ಮ ರಾಜ್ಯವಾಗಿ ಸ್ವೀಕರಿಸಿ ಬೆಳೆಯುತ್ತಿದೆೆ. ಇಂತಹ ಸಂದರ್ಭದಲ್ಲಿ ಅಲ್ಲಿರುವ ಕನ್ನಡ ಭಾಷಿಗರ ಹಿತಕಾಯುವ ಬಗ್ಗೆ ರಾಜ್ಯ ಸರಕಾರ ಕೇರಳಕ್ಕೆ ಒತ್ತಡಗಳನ್ನು ಹಾಕಬಹುದಾಗಿದೆ. ಕಾಸರಗೋಡನ್ನು ಕೇರಳಕ್ಕೆ ಬಿಟ್ಟುಕೊಟ್ಟರೂ ಅಲ್ಲಿರುವ ಕನ್ನಡಿಗರ ಹಿತಾಸಕ್ತಿಯನ್ನು ರಾಜ್ಯ ಮರೆತಿಲ್ಲ ಎನ್ನುವುದನ್ನು ಈ ಮೂಲಕ ಕೇರಳ ಸರಕಾರಕ್ಕೆ ಸ್ಪಷ್ಟ ಪಡಿಸಿದಂತಾಗಿದೆ. ಕೇರಳ ಸರಕಾರವು ಸ್ಪಷ್ಟೀಕರಣವನ್ನು ನೀಡಿರುವುದರಿಂದ, ಕರ್ನಾಟಕದ ರಾಜಕಾರಣಿಗಳು ಅನಗತ್ಯ ವಿವಾದಗಳನ್ನು ಸೃಷ್ಟಿಸುವುದು ಸ್ವತಃ ಕಾಸರಗೋಡಿನಲ್ಲಿರುವ ಕನ್ನಡಿಗರಿಗೂ ಬೇಕಾಗಿಲ್ಲ. ಯಾಕೆಂದರೆ, ಕಾಸರಗೋಡಿನ ಜನರು ಹಲವು ದಶಕಗಳಿಂದ ಅತ್ತ ಕೇರಳಕ್ಕೂ ಇತ್ತ ಕರ್ನಾಟಕಕ್ಕೂ ಸಲ್ಲದವರಂತೆ ಅತಂತ್ರ ಸ್ಥಿತಿಯನ್ನು ಅನುಭವಿಸುತ್ತಾ ಬಂದಿದ್ದಾರೆ. ಹಿರಿಯ ತಲೆಮಾರು ಕಾಸರಗೋಡು ಕರ್ನಾಟಕಕ್ಕೆ ಸೇರುತ್ತದೆ ಎನ್ನುವ ಆಸೆಯೊಂದಿಗೆ ಜೀವ ಹಿಡಿದು ಬದುಕಿದ್ದರು. ಆದರೆ ಹೊಸ ತಲೆಮಾರು, ಕೇರಳ ರಾಜ್ಯದೊಂದಿಗೆ ಮಾನಸಿಕವಾಗಿ ಬೆಸೆದು ಬಾಳುವ ಪ್ರಯತ್ನವನ್ನು ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕದ ಅನಗತ್ಯ ಹಸ್ತಕ್ಷೇಪ ಕನ್ನಡ-ಮಲಯಾಳಂ ಸಂಘರ್ಷಕ್ಕೆ ಕಾರಣವಾಗಿ ಅವರಿಗೆ ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸಬಹುದು.
ಮಲಯಾಳಂ ದ್ರಾವಿಡ ಭಾಷೆಗಳಲ್ಲಿ ಒಂದು. ಅದು ಕೇರಳದ ರಾಜ್ಯ ಭಾಷೆ. ರಾಜ್ಯದಲ್ಲಿ ತನ್ನ ಭಾಷೆಯನ್ನು ಉಳಿಸಿ ಬೆಳೆಸುವುದಕ್ಕೆ ಕ್ರಮ ತೆಗೆದುಕೊಂಡರೆ ಅದನ್ನು ಆಕ್ಷೇಪಿಸುವಂತಿಲ್ಲ. ಕಾಸರಗೋಡಿನಲ್ಲಿ ಕನ್ನಡ-ಮಲಯಾಳಂ ಜೊತೆಯಾಗಿ ಹೆಜ್ಜೆಯಿಟ್ಟು ಮುಂದೆ ಸಾಗುವುದು ಅನಿವಾರ್ಯವಾಗಿದೆ. ಈ ವಾಸ್ತವವನ್ನು ಈಗಾಗಲೇ ಕಾಸರಗೋಡಿನ ಕನ್ನಡಿಗರೂ ಅರ್ಥಮಾಡಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕದ ಬಿಜೆಪಿ ನಾಯಕರು ಕಾಸರಗೋಡಿನ ಬಗ್ಗೆ, ಅಲ್ಲಿನ ಕನ್ನಡಿಗರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಇದೇ ಸಂಘಪರಿವಾರ ಮತ್ತು ಬಿಜೆಪಿಯ ನಾಯಕರು ಕೊರೋನ ಕಾಲದಲ್ಲಿ ಕಾಸರಗೋಡಿನ ಜನರೊಂದಿಗೆ ಹೇಗೆ ವರ್ತಿಸಿದ್ದರು ಎನ್ನುವುದು ಕಾಸರಗೋಡು ಕನ್ನಡಿಗರು ಇನ್ನೂ ಮರೆತಿಲ್ಲ. ಕಾಸರಗೋಡು ಕರ್ನಾಟಕದ ಆಸ್ತಿ ಎಂದು ಬೊಬ್ಬಿಡುತ್ತಿದ್ದ ದಕ್ಷಿಣ ಕನ್ನಡದ ಜನಪ್ರತಿನಿಧಿಗಳು ಕೊರೋನ ಕಾಲದಲ್ಲಿ ಕಾಸರಗೋಡಿನ ಕನ್ನಡಿಗರನ್ನು ಗಡಿದಾಟಿ ಮಂಗಳೂರಿಗೆ ಆಗಮಿಸಲು ಅವಕಾಶ ನೀಡಲಿಲ್ಲ. ಆಸ್ಪತ್ರೆಗಳಿಗಾಗಿ ಕಾಸರಗೋಡಿನ ದೊಡ್ಡ ಸಂಖ್ಯೆಯ ಜನರು ಮಂಗಳೂರನ್ನೇ ಆಶ್ರಯಿಸುತ್ತಾ ಬಂದಿದ್ದರು. ಕೊರೋನ ಕಾಲದಲ್ಲಿ ಆಂಬ್ಯುಲೆನ್ಸ್‌ನಲ್ಲಿ ತುರ್ತು ಚಿಕಿತ್ಸೆಗಾಗಿ ಮಂಗಳೂರಿಗೆ ಆಗಮಿಸುತ್ತಿದ್ದ ಕಾಸರಗೋಡಿನ ಜನರನ್ನು ‘ಕೇರಳಿಗರು’ ಎಂಬ ಹಣೆ ಪಟ್ಟಿ ಕಟ್ಟಿ ಅವರನ್ನು ತಡೆಯಲಾಯಿತು. ಕಾಡಿಬೇಡಿದರೂ ಅವರನ್ನು ಕರ್ನಾಟಕದೊಳಗೆ ಬಿಜೆಪಿ ಮತ್ತು ಸಂಘಪರಿವಾರ ನಾಯಕರು ಬಿಟ್ಟುಕೊಟ್ಟಿರಲಿಲ್ಲ. ಆಗ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಸ್ತಿತ್ವದಲ್ಲಿತ್ತು. ಕಾಸರಗೋಡಿನ ಕನ್ನಡಿಗರ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿರುವ ವಿರೋಧ ಪಕ್ಷದ ನಾಯಕ ಅಶೋಕ್, ಕನ್ನಡದ ಭಾಗವೇ ಆಗಿರುವ ಬೆಳಗಾವಿಯಲ್ಲಿ ಕನ್ನಡಿಗರ ದುಸ್ಥಿತಿಯ ಬಗ್ಗೆ ಎಷ್ಟು ಮಾತನಾಡಿದ್ದಾರೆ? ಬೆಳಗಾವಿ ಗಡಿಯಲ್ಲಿ ಮರಾಠಿ ಭಾಷಿಗರು ಕನ್ನಡ ಧ್ವಜಕ್ಕೆ ಅವಮಾನಿಸುತ್ತಿರುವುದರ ಬಗ್ಗೆ ಸಂಘಪರಿವಾರವಾಗಲಿ, ಬಿಜೆಪಿ ಮುಖಂಡರಾಗಲಿ ಧ್ವನಿಯೆತ್ತಿದ ಉದಾಹರಣೆಯಿಲ್ಲ. ಬಿಜೆಪಿ ನಾಯಕರು ಕಾಸರಗೋಡಿನಲ್ಲಿ ಕನ್ನಡ ಉಳಿಸುವ ಬಗ್ಗೆ ಮಾತನಾಡುವ ಮೊದಲು ಬೆಳಗಾವಿಯ ಗಡಿಭಾಗದಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಮಾತನಾಡಬೇಕು. ಹಾಗೆಯೇ ರಾಜ್ಯ ಸರಕಾರ ಕಾಸರಗೋಡಿನ ಕನ್ನಡದ ಬಗ್ಗೆ ಕಾಳಜಿ ವಹಿಸಿದಂತೆಯೇ ಕರ್ನಾಟಕದಲ್ಲಿಯೂ ಕನ್ನಡ ಉಳಿಸುವ ಬಗ್ಗೆ ಕಾಳಜಿವಹಿಸಬೇಕು.
ಕಾಸರಗೋಡಿನ ಕನ್ನಡಿಗರ ಸ್ಥಿತಿ ಪಕ್ಕಕ್ಕಿರಲಿ, ದಕ್ಷಿಣ ಕನ್ನಡದಲ್ಲಿ ಕನ್ನಡ ಭಾಷೆಯ ಸ್ಥಿತಿಗತಿಯ ಬಗ್ಗೆ ಸರಕಾರಕ್ಕೆ ಎಷ್ಟು ಗೊತ್ತಿದೆ? ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳು ಒಂದೊಂದಾಗಿ ಮುಚ್ಚಿತ್ತಿರುವಂತೆಯೇ ಕನ್ನಡ ಮಾತನಾಡುವವರ ಸಂಖ್ಯೆಯೂ ಇಳಿಮುಖವಾಗುತ್ತಿದೆ. ದಕ್ಷಿಣಕನ್ನಡದಲ್ಲಿ ಬಹುಸಂಖ್ಯಾತರು ತುಳು ಮಾತೃಭಾಷಿಗರು. ಉಳಿದಂತೆ ಬ್ಯಾರಿ, ಕೊಂಕಣಿ ಮೊದಲಾದ ಉಪಭಾಷೆಗಳನ್ನು, ಮನೆ ಭಾಷೆಗಳನ್ನು ಆಡುವವರೇ ಅಧಿಕ. ದಕ್ಷಿಣ ಕನ್ನಡದ ಬಹುಸಂಖ್ಯಾತರು ಕನ್ನಡ ಕಲಿಯುವುದೇ ಶಾಲೆಯ ಮೆಟ್ಟಿಲು ತುಳಿದ ಬಳಿಕ. ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡದಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಸಾಲು ಸಾಲಾಗಿ ತೆರೆಯುತ್ತಿವೆ. ಕನ್ನಡ ಮಾತೃಭಾಷಿಗರಲ್ಲದ ಪೋಷಕರು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನೇ ನೆಚ್ಚಿಕೊಳ್ಳುತ್ತಿದ್ದಾರೆ. ಹೆಚ್ಚೆಂದರೆ ಇವರ ಮಕ್ಕಳು ಕನ್ನಡವನ್ನು ಒಂದು ಪಠ್ಯವಾಗಿ ಮಾತ್ರ ಓದುತ್ತಾರೆ. ಎಸ್ಸೆಸೆಲ್ಸಿ ತಲುಪಿದರೂ ವಿದ್ಯಾರ್ಥಿಗಳು ಕನ್ನಡ ಮಾತನಾಡುವುದಿರಲಿ, ಸರಿಯಾಗಿ ಕನ್ನಡದಲ್ಲಿ ಒಂದು ವಾಕ್ಯವನ್ನು ಬರೆಯುವ ಸಾಮರ್ಥ್ಯವನ್ನೂ ಹೊಂದಿರುವುದಿಲ್ಲ. ಇವರಿಗೆ ಕನ್ನಡವನ್ನು ತಲುಪಿಸುವ ಬಗೆ ಹೇಗೆ ಎನ್ನುವುದರ ಬಗ್ಗೆ ಸರಕಾರ ಯೋಚಿಸಬೇಕಾಗಿದೆ. ಹಾಗೆಯೇ ಬೆಂಗಳೂರಿನಂತಹ ನಗರಗಳಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಬಗ್ಗೆ ಸರಕಾರ ಕಾರ್ಯಕ್ರಮವನ್ನು ಹಾಕಿಕೊಳ್ಳಬೇಕು. ಕನ್ನಡ ಭಾಷಿಗರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ನೀಡುವ ಬಗ್ಗೆ, ರಾಜ್ಯದ ಸರಕಾರಿ ಕಚೇರಿಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕನ್ನಡವನ್ನು ಸಂವಹನ ಭಾಷೆಯಾಗಿ ಬಳಸುವ ಬಗ್ಗೆ ಯೋಜನೆಗಳನ್ನು ರೂಪಿಸಬೇಕು. ತನ್ನ ನೆಲದಲ್ಲಿ ಮಲಯಾಳಂ ಉಳಿಸಲು ಕೇರಳ ಸರಕಾರ ರೂಪಿಸುತ್ತಿರುವ ಯೋಜನೆಗಳು ಕರ್ನಾಟಕ ಸರಕಾರಕ್ಕೆ ರಾಜ್ಯದಲ್ಲಿ ಕನ್ನಡ ಉಳಿಸಿ ಬೆಳೆಸುವುದಕ್ಕೆ ಸ್ಫೂರ್ತಿಯಾಗಲಿ.







