ತಿರುಚಿದ ವೀಡಿಯೊಗಳಿಗೆ ಗೃಹ ಸಚಿವರೇ ಬಲಿಯಾದರೆ?

ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು, ದ್ವೇಷಗಳನ್ನು ಹರಡುವ ಶಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಗೃಹಸಚಿವರು ಆಗಾಗ ನೀಡುತ್ತಿರುತ್ತಾರೆ. ಸುಳ್ಳು ಸುದ್ದಿಗಳನ್ನು ಹರಡುವುದು, ಭಾಷಣಗಳನ್ನು ವಿರೂಪಗೊಳಿಸಿ ಅವುಗಳನ್ನು ಜನರಿಗೆ ತಲುಪಿಸುವುದು ಇತ್ತೀಚೆಗೆ ವ್ಯಾಪಕವಾಗಿ ನಡೆಯುತ್ತಿದ್ದು, ಇದರ ವಿರುದ್ಧ ಗೃಹ ಇಲಾಖೆ ಜಾಗೃತಿಯನ್ನು ಮೂಡಿಸುತ್ತಾ ಬರುತ್ತಿದೆ. ದುರದೃಷ್ಟವೆಂದರೆ, ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾದ ಸರಕಾರವೇ ಇಂತಹ ಜಾಲತಾಣಗಳ ವದಂತಿಗಳಿಗೆ ಬಲಿಯಾಗುತ್ತಿರುವುದು. ವಿಶ್ವಾಸಾರ್ಹವಾದ ವಿಷಯಗಳನ್ನು ಎತ್ತಿ ವಿಧಾನಸಭೆಯಲ್ಲಿ ಚರ್ಚೆ ನಡೆಸಬೇಕಾಗಿದ್ದ ವಿರೋಧ ಪಕ್ಷದ ನಾಯಕರು, ತಮ್ಮ ಮಾತುಗಳಿಗೆ, ಆರೋಪಗಳಿಗೆ ಸಾಮಾಜಿಕ ಜಾಲತಾಣಗಳನ್ನು ಅವಲಂಬಿಸುತ್ತಿರುವುದು ಆತಂಕಕಾರಿಯಾಗಿದೆ. ಸರಕಾರ ಕೂಡ ಜಾಲತಾಣಗಳ ಜಾಲಕ್ಕೆ ಬಲಿ ಬಿದ್ದು ಅವುಗಳಿಗೆ ಪ್ರತಿಕ್ರಿಯಿಸುವಂತಹ ಬೇಜವಾಬ್ದಾರಿತನವನ್ನು ಪ್ರದರ್ಶಿಸುತ್ತಿದೆ. ಗೃಹ ಇಲಾಖೆ ಸಾಮಾಜಿಕ ಜಾಲತಾಣಗಳ ಬಗ್ಗೆ ಜನರನ್ನು ಜಾಗೃತಿಗೊಳಿಸುವ ಮೊದಲು ಸರಕಾರದೊಳಗಿರುವ ಸಚಿವರನ್ನು, ವಿರೋಧ ಪಕ್ಷದ ನಾಯಕರನ್ನು, ಶಾಸಕರನ್ನು ಜಾಗೃತಿಗೊಳಿಸಲು ತುರ್ತಾಗಿ ಮುಂದಾಗಬೇಕು. ಆ ಬಳಿಕ ಜನರನ್ನು ಎಚ್ಚರಿಸುವ ಕೆಲಸ ನಡೆಯಬೇಕು.
ಕೆಲ ದಿನಗಳ ಹಿಂದೆ ವಿಧಾನಸಭೆಯಲ್ಲಿ ಧರ್ಮಸ್ಥಳ ಪ್ರಕರಣ ತೀವ್ರ ಚರ್ಚೆಗೊಳಗಾಯಿತು. ಅನಾಮಿಕನೊಬ್ಬ ‘ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತಿದ್ದೇನೆ. ನನ್ನನ್ನು ಈ ಅಪರಾಧದಲ್ಲಿ ಬಳಸಿಕೊಂಡಿದ್ದಾರೆ’ ಎಂದು ದೂರು ನೀಡಿರುವ ಹಿನ್ನೆಲೆಯಲ್ಲಿ ಸಿಟ್‌ನಿಂದ ತನಿಖೆ ನಡೆಯುತ್ತಿದೆ. ಈ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನೊಬ್ಬ ಇಂತಹದೊಂದು ಗಂಭೀರ ದೂರು ನೀಡಿದಾಗ ಅದರ ಸತ್ಯಾಸತ್ಯತೆಯನ್ನು ತನಿಖೆ ನಡೆಸುವುದು ಮಾತ್ರವಲ್ಲ, ಸ್ವಯಂ ಸಾಕ್ಷಿಯಾಗಿರುವ ವ್ಯಕ್ತಿಗೆ ಗರಿಷ್ಠ ಭದ್ರತೆಯನ್ನು ನೀಡುವುದು ಸರಕಾರದ ಕರ್ತವ್ಯವಾಗಿದೆ. ಆದರೆ, ತನಿಖೆ ತನ್ನ ಗುರಿ ಮುಟ್ಟುವ ಮೊದಲೇ ವಿಧಾನಸಭೆಯಲ್ಲಿ ದೂರು ನೀಡಿದ ವ್ಯಕ್ತಿಯನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ನಡೆಯಿತು. ಸಾಮಾಜಿಕ ಜಾಲತಾಣಗಳ ಮಾಹಿತಿಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷದ ನಾಯಕ ಅಶೋಕ್ ಅವರು, ದೂರುದಾರನ ವಿರುದ್ಧ ಆರೋಪಗಳನ್ನು ಮಾಡಿದರು. ಸಾಕ್ಷಿದಾರನ ವಿವರಗಳನ್ನು ವಿಧಾನಸಭೆಯಲ್ಲಿ ಬಹಿರಂಗಪಡಿಸಿದ್ದು ಮಾತ್ರವಲ್ಲ, ಆತ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾನೆ ಎಂದೂ ಹೇಳಿದರು. ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದ ವದಂತಿಗಳನ್ನೇ ಅವರು ನಿಜವೆಂದು ತಿಳಿದುಕೊಂಡು ವಿಧಾನಸಭೆಯಲ್ಲಿ ಆರೋಪವನ್ನು ಮಾಡಿದ್ದರು. ವಿರೋಧ ಪಕ್ಷದ ನಾಯಕ ಸದನದಲ್ಲಿ ಪ್ರದರ್ಶಿಸಿದ ಈ ಬೇಜವಾಬ್ದಾರಿತನಕ್ಕಾಗಿ ಅವರನ್ನು ಖಂಡಿಸಬೇಕಾಗಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಶೋಕ್ ಮಾತಿಗೆ ಧ್ವನಿಗೂಡಿಸಿದರು. ಧರ್ಮಸ್ಥಳದ ವಿರುದ್ಧ ಸಂಚು ನಡೆದಿದೆ ಎಂದು ಅವರೂ ಆರೋಪಿಸಿದರು. ಶವಗಳನ್ನು ಹೂತಿರುವ ಆರೋಪ ಒಂದು ಸಂಚು ಎನ್ನುವುದು ಡಿ.ಕೆ. ಶಿವಕುಮಾರ್ ಅವರಿಗೆ ಗೊತ್ತಿದ್ದರೆ, ಸಿಟ್ ರಚನೆಯನ್ನು ಮಾಡಿದ್ದಾದರೂ ಯಾಕೆ? ತನಿಖೆ ಮುಗಿಯುವ ಮೊದಲೇ ‘ಇದೊಂದು ಸಂಚು’ ಎಂದು ಘೋಷಿಸುವುದು ತನಿಖೆಯ ದಾರಿ ತಪ್ಪಿಸಿದಂತಲ್ಲವೆ? ದೂರುದಾರ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದಾನೆ ಎನ್ನುವುದು ಎಷ್ಟು ನಿಜ? ಈ ಮಾಹಿತಿ ಎಷ್ಟರಮಟ್ಟಿಗೆ ವಿಶ್ವಾಸಾರ್ಹವಾದುದು? ವಿಧಾನಸಭೆಯಲ್ಲೇ ದೂರುದಾರನ ವಿರುದ್ಧ ಇಂತಹದೊಂದು ಆರೋಪ
ಮಾಡುವ ಮೂಲಕ ತನಿಖೆಯನ್ನು ಜನಪ್ರತಿನಿಧಿಗಳೇ ದಾರಿತಪ್ಪಿಸಿದಂತಾಗಲಿಲ್ಲವೆ? ಪೊಲೀಸರ ಬಿಗಿ ಭದ್ರತೆಯಲ್ಲಿರುವ ದೂರುದಾರನ ಬದುಕನ್ನು ಅಪಾಯಕ್ಕೆ ದೂಡಿದಂತಾಗಲಿಲ್ಲವೆ?
ಇದೀಗ ಇನ್ನೊಂದು ಪ್ರಕರಣವೂ ವಿಧಾನಸಭೆಯಲ್ಲಿ ಸದ್ದು ಮಾಡಿದೆ. ಕೆಲ ದಿನಗಳಿಂದ ಒಂದು ತಿರುಚಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಅದರಲ್ಲಿ ಮಹೇಶ್ ತಿಮರೋಡಿ ಎನ್ನುವ ಸಂಘಪರಿವಾರ ಮುಖಂಡ ‘‘ಮುಖ್ಯಮಂತ್ರಿ ಸಿದ್ದರಾಮಯ್ಯ 27 ಹಿಂದೂಗಳನ್ನು ಕೊಲೆ ಮಾಡಿದ್ದಾರೆ’’ ಎನ್ನುವ ಆರೋಪ ಮಾಡುತ್ತಾರೆ. ಈ ವೀಡಿಯೋವನ್ನೇ ಮುಂದಿಟ್ಟುಕೊಂಡು ವಿರೋಧ ಪಕ್ಷದ ನಾಯಕರಾದ ಅಶೋಕ್ ಅವರು, ‘‘ಮಹೇಶ್ ತಿಮರೋಡಿ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು’’ ಎಂದು ಒತ್ತಾಯಿಸುತ್ತಾರೆ. ಇಂತಹ ದ್ವೇಷ ಭಾಷಣಗಳನ್ನೇ ಹೆಗ್ಗಳಿಕೆಯನ್ನಾಗಿಸಿಕೊಂಡ ಹಲವು ಶಾಸಕರು ಬಿಜೆಪಿಯಲ್ಲಿದ್ದಾರೆ. ಇಷ್ಟಾದರೂ, ಅಶೋಕ್ ಈ ವೀಡಿಯೊದ ಬಗ್ಗೆ ಮಾತ್ರ ಸದನದಲ್ಲಿ ಮಾತನಾಡಲು ಕಾರಣವಿತ್ತು. ಧರ್ಮಸ್ಥಳದ ವಿವಾದಗಳಲ್ಲಿ ಮಹೇಶ್ ತಿಮರೋಡಿ ಹೆಸರು ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಅವರನ್ನು ಗುರಿ ಮಾಡುವ ಒಂದೇ ಒಂದು ಉದ್ದೇಶದಿಂದ, ತಿರುಚಿದ ವೀಡಿಯೊವನ್ನು ವಿಧಾನಸಭೆಯಲ್ಲಿ ತನ್ನ ದುರುದ್ದೇಶಕ್ಕೆ ಬಳಸಿಕೊಂಡರು. ಅಶೋಕ್ ಅವರ ಈ ಬೇಜವಾಬ್ದಾರಿತನ ಸದನದ ಘನತೆಗೆ
ತೀವ್ರ ಧಕ್ಕೆ ತಂದಿದೆ. ತಕ್ಷಣ ಗೃಹ ಸಚಿವರು ಈ ವೀಡಿಯೊದ ಸತ್ಯಾಂಶವೇನು ಎನ್ನುವುದನ್ನು ತಿಳಿದುಕೊಂಡು ಅದಕ್ಕೆ ಉತ್ತರಿಸಬೇಕಾಗಿತ್ತು. ಆದರೆ ಅಶೋಕ್ ‘ಎತ್ತು ಈಯಿತು’ ಎಂದಾಕ್ಷಣ ಗೃಹಸಚಿವರು ‘ಕೊಟ್ಟಿಗೆಯಲ್ಲಿ ಕಟ್ಟು’ ಎಂದು ಆದೇಶ ನೀಡಿದರು. ಅಶೋಕ್ ಆರೋಪ ಮಾಡಿದ ಬೆನ್ನಿಗೇ, ತಿಮರೋಡಿ ಮೇಲೆ ಪ್ರಕರಣ ದಾಖಲಿಸಿ ಕಠಿಣ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಗೃಹಸಚಿವರು ನೀಡಿದರು. ಬಿಜೆಪಿ ತೋಡಿದ ಹೊಂಡಕ್ಕೆ ಗೃಹಸಚಿವರು ಹಾಡುಹಗಲೇ ಬಿದ್ದು ಬಿಟ್ಟರು.
ವಿಪರ್ಯಾಸವೆಂದರೆ, ಆ ವೀಡಿಯೊ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಅವರದಾಗಿತ್ತು. ಭಾಷಣವೊಂದರಲ್ಲಿ ‘‘ಮುಖ್ಯಮಂತ್ರಿ ಸಿದ್ದರಾಮಯ್ಯ 27 ಹಿಂದೂಗಳನ್ನು ಕೊಂದಿದ್ದಾರೆ’’ ಎಂದು ಅವರು ನೇರವಾಗಿ ಆರೋಪ ಮಾಡಿದ್ದರು. ಈ ಸಂಬಂಧ ಅವರ ಮೇಲೆ ಪ್ರಕರಣವೂ ದಾಖಲಾಗಿತ್ತು. ಆದರೆ ಈವರೆಗೆ ಅವರ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಳ್ಳಲು ಸರಕಾರ ಯಶಸ್ವಿಯಾಗಿಲ್ಲ. ಪೂಂಜಾ ಹೇಳಿಕೆಯನ್ನು ತಿಮರೋಡಿಯವರು ಪತ್ರಿಕಾಗೋಷ್ಠಿಯೊಂದರಲ್ಲಿ ಮರು ಪ್ರಸ್ತಾಪಿಸಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಿಂದೂಗಳ ಕೊಲೆಗಾರ ಎಂದು ಕರೆದಿರುವುದು ತಿಮರೋಡಿಯಲ್ಲ, ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಎನ್ನುವುದು ಬಟಾಬಯಲಾಗಿದೆ. ತಿಮರೋಡಿಯ ವಿರುದ್ಧ ವಿಧಾನಸಭೆಯಲ್ಲಿ ಧ್ವನಿಯೆತ್ತಿದ ಬಿಜೆಪಿಯ ಮುಖಂಡರು ತಮ್ಮದೇ ಪಕ್ಷದ ಶಾಸಕ ಹರೀಶ್ ಪೂಂಜಾ ಅವರ ವಿರುದ್ಧ ಮಾತನಾಡುತ್ತಾರೆಯೆ? ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಒತ್ತಾಯಿಸುತ್ತಾರೆಯೇ? ತಿಮರೋಡಿ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕೊಚ್ಚಿಕೊಂಡ ಸಚಿವರು ಶಾಸಕ ಹರೀಶ್ ಪೂಂಜಾ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದು ಹೇಗೆ? ವಿಪರ್ಯಾಸವೆಂದರೆ, ಬೆಳ್ತಂಗಡಿಯ ಬೀದಿಯಲ್ಲಿ ನಿಂತು ‘ಸಿದ್ದರಾಮಯ್ಯ 27 ಹಿಂದೂಗಳನ್ನು ಕೊಂದಿದ್ದಾರೆ’ ಎಂದು ಆರೋಪ ಮಾಡಿದ ಶಾಸಕ ಹರೀಶ್ ಪೂಂಜಾ ವಿಧಾನಸಭೆಯಲ್ಲಿ ‘ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವೀಡಿಯೊಗಳ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಸರಕಾರಕ್ಕೆ ಆಗ್ರಹಿಸುತ್ತಾರೆ.
ತಕ್ಷಣ ಅವರನ್ನು ಹಿಡಿದು ಬೆಂಡೆತ್ತಬೇಕಾಗಿದ್ದ ಆಳುವ ಪಕ್ಷದ ನಾಯಕರು ಆತನ ಆಗ್ರಹಕ್ಕೆ ಬೆಪ್ಪುತಕ್ಕಡಿಗಳಂತೆ ತಲೆಯಾಡಿಸುತ್ತಾರೆ. ಯಾವುದೇ ಹೋಮ್ ವರ್ಕ್‌ಗಳಿಲ್ಲದೆ ಸದನ ಪ್ರವೇಶ ಮಾಡುವ ಶಾಸಕರಿಗೆ ಸಾಮಾಜಿಕ ಜಾಲತಾಣಗಳು ಮಾಹಿತಿಗಳ ಕಣಜವಾಗಿ ಕಾಣುವುದು ಸಹಜವೇ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಂದ ವೀಡಿಯೊಗಳು, ವದಂತಿಗಳನ್ನು ಆಧರಿಸಿ ಶಾಸಕರು, ಸಚಿವರು ವಿಧಾನಸಭೆಯಲ್ಲಿ ಚರ್ಚೆಯನ್ನು ನಡೆಸುವಂತಹ ಸ್ಥಿತಿ ನಿರ್ಮಾಣವಾಗಿರುವುದು ಬೌದ್ಧಿಕವಾಗಿ ನಮ್ಮ ಜನಪ್ರತಿನಿಧಿಗಳು ಎಷ್ಟು ದಿವಾಳಿ ಎದ್ದು ಹೋಗಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.







