‘ನಿತೀಶ್ ಸೇತು’ ನಾಮಕರಣ ಬಿಹಾರಕ್ಕೆ ದೊರೆತ ಗೌರವವೇ?

Photo: x.com/Indianinfoguide
ಬಿಹಾರ ಸರಕಾರ ರಾಜಧಾನಿ ಪಾಟ್ನಾ ಮತ್ತು ವೈಶಾಲಿಯನ್ನು ಸಂಪರ್ಕಿಸುವ ಆರು ಪಥಗಳ ಗಂಗಾ ಸೇತುವೆಗೆ ‘ನಿತೀಶ್ ಸೇತು’ ಎಂದು ಹೆಸರಿಟ್ಟಿದೆ. ದೇಶದ ಅತಿ ಉದ್ದದ ನದಿ ಸೇತುವೆ ಇದೆನ್ನಲಾಗಿದ್ದು, ನವೆಂಬರ್ 21ರಂದು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಬಿಹಾರವನ್ನು ನಿತೀಶ್ ಕುಮಾರ್ ಮೂಲಕವೇ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದ ಬಿಜೆಪಿ ಈಗ ಸೇತುವೆಗೆ ಹೆಸರಿಟ್ಟು ಗೌರವಿಸಿದಂತೆ ಬಿಂಬಿಸುತ್ತಲೇ, ಅವರನ್ನು ರಾಜಕೀಯವಾಗಿ ಮೌನವಾಗಿಸುತ್ತಿರುವಂತಿದೆ. ಮೋದಿ ಬಂದಾಗಿನಿಂದಲೂ ದೇಶದಲ್ಲಿ ನಡೆದಿರುವ ನಾಮಕರಣ ಮತ್ತು ಮರುನಾಮಕರಣ ರಾಜಕಾರಣ ಈಗ ಇದರೊಂದಿಗೆ ಮತ್ತೊಂದು ಅತಿರೇಕಕ್ಕೆ ಮುಟ್ಟಿದೆ. ಹೆಸರಿಡುವ ಮತ್ತು ಆ ಮೂಲಕವೇ ವಿರೋಧಿಗಳನ್ನು ಮುಗಿಸಿಬಿಡುವ ಜಾಣ ಕಣ್ಣಾಮುಚ್ಚಾಲೆಯಾಟ ಇದು.
ಸೇತುವೆ ಹೆಸರನ್ನು ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅಧಿಕೃತವಾಗಿ ಘೋಷಿಸಿದ್ದಾರೆ. ಆದರೆ ಜೆಡಿಯು ಕಾರ್ಯಾಧ್ಯಕ್ಷ ಸಂಜಯ್ ಝಾ ಪ್ರಕಾರ, ಸ್ವತಃ ಮೋದಿಯವರೇ ಈ ಸೇತುವೆಗೆ ನಿತೀಶ್ ಹೆಸರಿಡುವಂತೆ ಸಲಹೆ ನೀಡಿದ್ದರು. ವ್ಯವಸ್ಥಿತ ಪ್ರಚಾರ ನಿರತ ಮಾಧ್ಯಮಗಳು ಮತ್ತು ರಾಜಕೀಯ ನಾಯಕರ ಮೋದಿ ಗುಣಗಾನ ಮಂಡಳಿಯ ಭಾಗವೆಂಬಂತಿರುವ ಝಾ ಈ ವಿಷಯವನ್ನು ಎತ್ತಿಹೇಳಿರುವುದರಲ್ಲಿ ಅಚ್ಚರಿಯೇನಿಲ್ಲ. ವಿರೋಧ ಪಕ್ಷಗಳು ಅವಮಾನವೆಂದು ಈ ಕ್ರಮಕ್ಕೆ ಅಸಮಾಧಾನಗೊಂಡಿರುವಾಗಲೇ, ಇದು ಮೋದಿಯವರು ನಿತೀಶ್ ಅವರಿಗೆ ಸಲ್ಲಿಸುತ್ತಿರುವ ಗೌರವವೆಂದು ಝಾ ಹೇಳುತ್ತಿದ್ದಾರೆ. ಬಿಹಾರ ರಾಜಕೀಯದಲ್ಲಿ ನಿತೀಶ್ ಕುಮಾರ್ ಅಪ್ರಸ್ತುತವಾಗಿದ್ದಾರೆ ಎಂಬ ಸಂದೇಶವನ್ನು ಈ ಮೂಲಕ ರವಾನಿಸಲು ಬಿಜೆಪಿ ನೊಡುತ್ತಿದೆ ಎಂದು ಆರ್ಜೆಡಿ ಆರೋಪಿಸಿದೆ. ಇತ್ತೀಚಿನ ಎಂಎಲ್ಸಿ ಚುನಾವಣೆಯಲ್ಲಿನ ಹಿನ್ನಡೆಯ ನಂತರ ಸಿಟ್ಟಾಗಿರುವ ಜೆಡಿಯು ಪಕ್ಷವನ್ನು ಸಮಾಧಾನಪಡಿಸಲು ಬಿಜೆಪಿ ಈ ನಿರ್ಧಾರ ಕೈಗೊಂಡಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.
ಹೆಸರಿಡುವುದು ಬಿಜೆಪಿಗೆ ಮಾರ್ಕೆಟಿಂಗ್ ಶೋಕಿ ಮಾತ್ರವಲ್ಲದೆ, ವಿರೋಧಿಗಳನ್ನು ದಮನಿಸುವ, ಕುಗ್ಗಿಸುವ ಹಿಕಮತ್ತು ಕೂಡ ಆಗಿದೆ. ಆಸರೆಯಾದ ಮರವನ್ನೇ ದುರ್ಬಲಗೊಳಿಸುವ ಬಂದಳಿಕೆಯಂತೆ ತನ್ನ ಮಿತ್ರಪಕ್ಷಗಳನ್ನೆಲ್ಲ ಬಿಜೆಪಿ ತಿಂದುಹಾಕಿರುವುದು ಕಳೆದೊಂದು ದಶಕಕ್ಕಿಂತ ಹೆಚ್ಚಿನ ಸಮಯದಲ್ಲಿ ಮತ್ತೆ ಮತ್ತೆ ಕಂಡಿದೆ. ಮೈತ್ರಿಕೂಟದ ಶಿವಸೇನೆ ಮತ್ತು ಎನ್ಸಿಪಿಯನ್ನು ಒಡೆದದ್ದು ಒಂದು ಬಗೆಯಾದರೆ, ಪ್ರಬಲ ವಿರೋಧಿ ಪಕ್ಷಗಳಾಗಿದ್ದ ಟಿಎಂಸಿ ಮತ್ತು ಎಎಪಿಯನ್ನು ಹೋಳಾಗಿಸಿದ್ದು ಮತ್ತೊಂದು ಬಗೆ. ಮಣಿಯದ ನಾಯಕರನ್ನು ಅಣಕಿಸಿ ಎದೆಗುಂದಿಸುವ ತಂತ್ರವಾಗಿ ರಾಹುಲ್ ಗಾಂಧಿಯವರನ್ನು ಪಪ್ಪು ಎಂದು ಕರೆದದ್ದು ಇದೇ ಬಿಜೆಪಿ. ಇತ್ತೀಚೆಗೆ ಅವರನ್ನು ಎಲ್ಲದಕ್ಕೂ ಗೊಣಗುವವರು ಎಂಬರ್ಥದಲ್ಲಿ ನಾರಾಜ್ ಫೂಫಾ ಎಂದು ಅವಹೇಳನ ಮಾಡಲಾಯಿತು. ಸೋನಿಯಾ ಗಾಂಧಿಯವರನ್ನು ಅತ್ಯಂತ ಅಸಭ್ಯ ಭಾಷೆಯಿಂದ ಕರೆದವರು ಕೂಡ ಮೋದಿಯಾದಿಯಾಗಿ ಇದೇ ಬಿಜೆಪಿಗರು. ಪ್ರಶ್ನಿಸುವವರನ್ನು ಅರ್ಬನ್ ನಕ್ಸಲ್, ದಿಮಾಗಿ ನಕ್ಸಲ್ ಎಂದು ಮೋದಿ ಕರೆಯುತ್ತಾರೆ. ಪ್ರತಿಭಟಿಸುವವರಿಗೆ ಆಂದೋಲನ ಜೀವಿಗಳೆಂದು ಹೆಸರಿಟ್ಟು ಹಂಗಿಸಿದ್ದಾರೆ. ಒಂದಿಡೀ ಅಲ್ಪಸಂಖ್ಯಾತ ಸಮುದಾಯವನ್ನು ನುಸುಳುಕೋರರು ಎಂದು ಕರೆಯುತ್ತ ನಿರಂತರ ದ್ವೇಷ, ಅಸಹನೆ ತೋರಿಸುತ್ತಿದ್ದಾರೆ.
ಮೋದಿ ಸರಕಾರ ಹೆಸರು ಬದಲಾವಣೆಯನ್ನಂತೂ ತನ್ನ ಪ್ರಮುಖ ರಾಜಕೀಯ ಅಜೆಂಡಾ ಎಂಬಂತೆ ಮಾಡಿಕೊಂಡು ಬಂದಿದೆ. ಜಿ-20 ಶೃಂಗಸಭೆಯ ಔತಣಕೂಟದ ಆಹ್ವಾನ ಪತ್ರಿಕೆಯಲ್ಲಿ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲಾಗಿ ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು ನಮೂದಿಸಿದ್ದು ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ನೆಹರೂ ಕಾಲದಿಂದ ಹಿಡಿದು ಯುಪಿಎ ಅವಧಿಯವರೆಗಿನ ಯೋಜನೆಗಳು ಮತ್ತು ಸಾಂಸ್ಥಿಕ ಹೆಸರುಗಳನ್ನು ಬದಲಿಸಿರುವುದು ನೆಹರೂ-ಗಾಂಧಿ ಕುಟುಂಬದ ಕೊಡುಗೆಗಳನ್ನು ಮರೆಮಾಚುವ ರಾಜಕೀಯ ತಂತ್ರವೆಂದು ವಿರೋಧ ಪಕ್ಷಗಳು ಟೀಕಿಸುತ್ತವೆ. ಮುಸ್ಲಿಮ್ ಮತ್ತು ಮೊಗಲ್ ಇತಿಹಾಸದ ಕುರುಹುಗಳನ್ನು ಅಳಿಸಿಹಾಕುವುದು ಕೂಡ ಬಿಜೆಪಿಯ ರಾಜಕೀಯ ಶ್ರದ್ಧೆಗಳಲ್ಲಿ ಒಂದಾಗಿದೆ. ಇವನ್ನೆಲ್ಲ ವಸಾಹತುಶಾಹಿ ಮನಸ್ಥಿತಿಯಿಂದ ಮುಕ್ತಿ ಹೊಂದುವ ಕ್ರಮವೆಂದು ಬಿಜೆಪಿ ಹೇಳಿಕೊಳ್ಳುತ್ತದೆ. ಬ್ರಿಟಿಷ್ ಮತ್ತು ಮೊಗಲ್ ಆಳ್ವಿಕೆಯ ಗುಲಾಮಗಿರಿ ಸಂಕೇತಗಳನ್ನು ತೊಡೆದುಹಾಕಿ, ಭಾರತೀಯ ಸಂಸ್ಕೃತಿ ಮತ್ತು ಸ್ವಾಭಿಮಾನವನ್ನು ಮರುಸ್ಥಾಪಿಸುವುದು ತನ್ನ ಉದ್ದೇಶ ಎನ್ನುತ್ತದೆ. ಆದರೆ, ಬ್ರಿಟಿಷರಿಗಿಂತ ಕ್ರೂರ ಮತ್ತು ದಮನಕಾರಿ ಸಂಘಿ ನಿಲುವನ್ನು ಹೇರುವ, ನಿಜವಾದ ಸ್ವಾಭಿಮಾನವನ್ನು ಹಣಿದುಹಾಕುವ, ಮುಸ್ಲಿಮರ ವಿರುದ್ಧದ ಅಸಹಿಷ್ಣುತೆಯ ಮತ್ತೊಂದು ಮುಖವೇ ಇದಾಗಿದೆ ಎಂಬುದು ಸ್ಪಷ್ಟ. ಯುಪಿಎ ಸರಕಾರದ ಅವಧಿಯ ಮನರೇಗಾ ಸೇರಿದಂತೆ ಕೇಂದ್ರ ಸರಕಾರದ 35ಕ್ಕೂ ಹೆಚ್ಚು ಯೋಜನೆಗಳ ಹೆಸರುಗಳನ್ನು ಮೋದಿ ಸರಕಾರ ಬದಲಾಯಿಸಿದೆ. ಮನರೇಗಾವನ್ನು ವಿಬಿ-ಜಿ ರಾಮ್ ಜಿ ಎಂದು ಬದಲಿಸಿದ್ದರಲ್ಲಿನ ಕಸರತ್ತಿನ ಉದ್ದೇಶವೇನೆಂಬುದು ರಹಸ್ಯವಲ್ಲ. ಗಾಂಧಿ, ನೆಹರೂ, ಇಂದಿರಾ ಹೆಸರುಗಳನ್ನು ತೆಗೆಯುವುದರಲ್ಲಿ ಮೋದಿ ಸರಕಾರಕ್ಕೆ ಇನ್ನಿಲ್ಲದ ಆಸಕ್ತಿ. ಹಾಗೆಯೇ ಯೋಜನಾ ಆಯೋಗವನ್ನು ನೀತಿ ಆಯೋಗ ಎಂದು ಬದಲಿಸಲಾಗಿದೆ. ಪಿಎಂಒ ಅನ್ನು ಸೇವಾ ತೀರ್ಥ ಎಂದು ಕರೆಯಲಾಗಿದೆ. ರಾಜಭವನಗಳಿಗೆ ಲೋಕಭವನ ಎಂದು ಮರುನಾಮಕರಣ ಮಾಡಲಾಗಿದೆ. ದಿಲ್ಲಿಯ ಐತಿಹಾಸಿಕ ರಾಜಪಥಕ್ಕೆ ಕರ್ತವ್ಯ ಪಥ ಎಂದು, ಗುಜರಾತ್ನ ಮೊಟೆರಾ ಕ್ರಿಕೆಟ್ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಕ್ರೀಡಾಂಗಣ ಎಂದು ಹೆಸರಿಡಲಾಗಿದೆ. ಉತ್ತರ ಪ್ರದೇಶದ ಅಲಹಾಬಾದ್ ಅನ್ನು ಪ್ರಯಾಗರಾಜ್ ಎಂದು ಬದಲಿಸಲು 300 ಕೋಟಿ ರೂ.ಗಳಿಗೂ ಹೆಚ್ಚು ಖರ್ಚಾಗಿದೆ ಎಂದು ವರದಿಗಳು ಹೇಳುತ್ತವೆ. ಮೊಗಲ್ಸರೈ ಜಂಕ್ಷನ್ ಅನ್ನು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ ಎಂದು ಮರುನಾಮಕರಣ ಮಾಡಲಾಗಿದೆ. ಮಹಾರಾಷ್ಟ್ರದ ಔರಂಗಾಬಾದ್ ಅನ್ನು ಛತ್ರಪತಿ ಸಂಭಾಜಿನಗರ ಮತ್ತು ಅಹಮದ್ನಗರವನ್ನು ಅಹಲ್ಯಾನಗರ ಎಂದು ಮರಾಠಾ ರಾಣಿಯ ಹೆಸರಿನೊಂದಿಗೆ ಬದಲಿಸಲಾಗಿದೆ.
ಕೋಟಿಗಟ್ಟಲೆ ದುಂದು ವೆಚ್ಚ ಮಾಡಿ ಹೆಸರು ಬದಲಿಸುವುದರಿಂದ ಬಡವರ ಕಷ್ಟಗಳೇನಾದರೂ ಬಗೆಹರಿಯುತ್ತವೆಯೆ, ಜನರ ಜೀವನಮಟ್ಟ ಸುಧಾರಿಸುತ್ತದೆಯೆ ಎಂಬುದು ಪ್ರಶ್ನೆ. ಆದರೆ ಅಂಥ ಕಳಕಳಿಯಾಗಲಿ, ಕಾಳಜಿಯಾಗಲಿ ಬಿಜೆಪಿಗೆ ಇಲ್ಲ. ಅದರ ರಾಜಕೀಯವೇ ಬೇರೆ. ಕೋಟಿ ಉದ್ಯೋಗಗಳ ಕಥೆ ಹೇಳಿಕೊಂಡು ಬಂದಿದ್ದ ಮೋದಿ ಸರಕಾರ ಕಳೆದ 12 ವರ್ಷಗಳಲ್ಲಿ ನಿರುದ್ಯೋಗದ ಬಗ್ಗೆ ಕಿಂಚಿತ್ತೂ ಚಿಂತೆ ಮಾಡಿಲ್ಲ. ಲಕ್ಷಾಂತರ ಯುವಕರ ಸಬಲೀಕರಣಕ್ಕೆ ಎನ್ನಲಾಗಿದ್ದ ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ ಸಾವಿರಾರು ಕೋಟಿ ರೂ. ಹಗರಣದ ಗೂಡಾಗಿರುವ ಆರೋಪಗಳಿವೆಯೇ ಹೊರತು, ಉಪಯೋಗಕ್ಕೆ ಒದಗಿಲ್ಲ. ಬೆಲೆಯೇರಿಕೆಯಲ್ಲಿ ಜನ ಬೆಂದುಹೋಗುತ್ತಿದ್ದಾರೆ. ಹೆಸರುಗಳ ಆಟದಲ್ಲೇ ಹನ್ನೆರಡು ವರ್ಷ ಕಳೆದಿರುವ ಮೋದಿ ರಾಜಕೀಯವಂತೂ ವಿರೋಧಿಗಳಿಗೆ ಬಲೆ ಹೆಣೆಯುವುದರಲ್ಲೇ ಮುಳುಗಿದೆ.






