ಮತದಾರರ ಪರಿಷ್ಕರಣೆಯೋ? ಪೌರತ್ವ ಪರಿಷ್ಕರಣೆಯೋ?

ಚುನಾವಣಾ ಆಯೋಗ | PC : PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಭಾರತೀಯ ಚುನಾವಣಾ ಆಯೋಗವು ಬಿಹಾರದಲ್ಲಿ ನಡೆಸುತ್ತಿರುವ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿವಾದ ಇದೀಗ ಸುಪ್ರೀಂಕೋರ್ಟ್ನ ಮೆಟ್ಟಿಲೇರಿದೆ. ಗುರುವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಆಯೋಗಕ್ಕೆ ತೀಕ್ಷ್ಣ ಪ್ರಶ್ನೆಗಳನ್ನು ಮುಂದಿಟ್ಟಿತ್ತು. ಮತದಾರ ಪರಿಷ್ಕರಣೆಯಲ್ಲಿ ಮತದಾರರನ್ನು ಗುರುತಿಸುವ ಪ್ರಮುಖ ದಾಖಲೆಗಳಾಗಿ ಆಧಾರ್ ಕಾರ್ಡ್, ಮತದಾರ ಗುರುತು ಚೀಟಿ ಮತ್ತು ಪಡಿತರ ಚೀಟಿಗಳನ್ನು ಸ್ವೀಕರಿಸುವುದಕ್ಕೆ ಇರುವ ಅಡ್ಡಿಯೇನು ಎಂದು ಅದು ಕೇಳಿತ್ತು. ಪರಿಷ್ಕರಣೆಯ ಸಮಯ ಮತ್ತು ಅದನ್ನು ನಡೆಸುವ ವಿಧಾನವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಒಪ್ಪಿಕೊಂಡಿರುವ ಸುಪ್ರೀಂಕೋರ್ಟ್ ಮುಂದಿನ ವಿಚಾರಣೆಯನ್ನು ಜುಲೈ 28ಕ್ಕೆ ನಿಗದಿ ಪಡಿಸಿದೆ. ಪರಿಷ್ಕರಣೆಯ ಹೆಸರಿನಲ್ಲಿ ಬಿಹಾರ ವಿಧಾನಸಭಾ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಗೊಂದಲ ಸೃಷ್ಟಿಸುವ ಚುನಾವಣಾ ಆಯೋಗದ ದುರುದ್ದೇಶ ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಇದೊಂದು ರೀತಿಯಲ್ಲಿ ಬೇಲಿಯೇ ಹೊಲ ಮೇಯುವುದಕ್ಕೆ ಮುಂದಾದಂತೆ. ಚುನಾವಣೆಯಲ್ಲಿ ಅಕ್ರಮ ಮತದಾರರನ್ನು ತಡೆಯುವುದಷ್ಟೇ ಅಲ್ಲ, ಅರ್ಹ ಮತದಾರರು ಯಾವುದೇ ಕಾರಣದಿಂದ ಮತದಾನದಿಂದ ವಂಚಿರಾಗದಂತೆ ನೋಡಿಕೊಳ್ಳುವುದು ಆಯೋಗದ ಹೊಣೆಗಾರಿಕೆಯಾಗಿದೆ. ಆದರೆ ಬಿಹಾರದಲ್ಲಿ ಚುನಾವಣಾ ಆಯೋಗವು ಗರಿಷ್ಠ ಮಟ್ಟದಲ್ಲಿ ಅರ್ಹ ಮತದಾರರನ್ನು ಚುನಾವಣೆಯಿಂದ ಹೊರಗಿಡಲು ಯತ್ನಿಸುತ್ತಿರುವಂತಿದೆ.
ಚುನಾವಣೆ ಇನ್ನೇನು ಹತ್ತಿರವಾಗುತ್ತಿರುವಾಗ ಆತುರಾತುರವಾಗಿ ಈ ಪರಿಷ್ಕರಣೆಗೆ ಹೊರಟಿರುವುದು ಎಷ್ಟು ಸರಿ ಎನ್ನುವುದು ಮೊದಲ ಪ್ರಶ್ನೆಯಾಗಿದೆ. ಆದರೆ ಇದು ಕೇವಲ ಬಿಹಾರಕ್ಕೆ ಸೀಮಿತವಾಗಿರುವ ವಿವಾದವಲ್ಲ. ಬಿಹಾರ ವಿಧಾನಸಭಾ ಚುನಾವಣೆಗೆ ಪರಿಷ್ಕರಣೆಯ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದರೂ ಸಮಸ್ಯೆ ಪರಿಹಾರವಾಗುವುದಿಲ್ಲ. ಭವಿಷ್ಯದಲ್ಲಿ ಉಳಿದ ರಾಜ್ಯಗಳಿಗೆ ಚುನಾವಣಾ ಆಯೋಗದ ಕ್ರಮ ತಲೆನೋವಾಗಿ ಕಾಡಬಹುದು. ‘ಪರಿಷ್ಕರಣೆಯನ್ನು ತಡೆಯುವುದಕ್ಕೆ ಸಾಧ್ಯವಿಲ್ಲ’ ಎಂದು ಈಗಾಗಲೇ ಸುಪ್ರೀಂಕೋರ್ಟ್ ಮೌಖಿಕವಾಗಿ ಹೇಳಿಕೆ ನೀಡಿದೆ. ಇಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಪರಿಷ್ಕರಣೆಯನ್ನು ಯಾರೂ ಪ್ರಶ್ನಿಸುತ್ತಿಲ್ಲ ಎನ್ನುವುದನ್ನು ನ್ಯಾಯಾಲಯ ಗಮನಕ್ಕೆ ತೆಗೆದುಕೊಳ್ಳಬೇಕಾಗಿದೆ. ಮತದಾರರ ಪಟ್ಟಿಯ ಪರಿಷ್ಕರಣೆ ದೇಶಕ್ಕೆ ಹೊಸತೇನೂ ಅಲ್ಲ. ಇದೊಂದು ನಿರಂತರ ಪ್ರಕ್ರಿಯೆ. ಆದರೆ ಈ ಬಾರಿ ಚುನಾವಣಾ ಆಯೋಗವು ಹೊರಟಿರುವುದು ಅರ್ಹ ಮತದಾರರನ್ನು ಗುರುತಿಸುವ ಕೆಲಸಕ್ಕಲ್ಲ. ಬದಲಿಗೆ, ಈ ಮತದಾರರು ದೇಶದ ಪೌರರು ಹೌದೋ ಅಲ್ಲವೋ ಎನ್ನುವುದನ್ನು ಗುರುತಿಸಲು ಹೊರಟಿದೆ. ಅಂದರೆ ಮೊದಲು ಪೌರತ್ವವನ್ನು ಸಾಬೀತು ಪಡಿಸಿ ಬಳಿಕ, ಮತದಾನಕ್ಕೆ ಅರ್ಹತೆಯನ್ನು ಪಡೆದುಕೊಳ್ಳಬೇಕಾಗುತ್ತದೆ. ಮತದಾನದ ಪಟ್ಟಿಗೆ ಹೆಸರು ಸೇರಿಸಲು ಈವರೆಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಇದರ ಜೊತೆಗೆ ಮತದಾರನ ಗುರುತು ಚೀಟಿ ಇದ್ದರೆ ಸಾಕಾಗುತ್ತಿತ್ತು. ಮತದಾರರ ಪಟ್ಟಿಯಲ್ಲಿ ಹಿಂದೆ ಹೆಸರಿದ್ದವರು ಮತ್ತೆ ಹೊಸದಾಗಿ ತಮ್ಮ ಗುರುತು ಚೀಟಿಗಳನ್ನು ಒಪ್ಪಿಸಿ ಹೆಸರುಗಳನ್ನು ನಮೂದಿಸುವ ಅಗತ್ಯವಿರಲಿಲ್ಲ. ಈ ಬಾರಿ ಮತದಾರರ ಪಟ್ಟಿಗೆ ಹೆಸರು ದಾಖಲಿಸಬೇಕಾದರೆ ಈ ಹಿಂದೆ ಪಟ್ಟಿಯಲ್ಲಿ ಹೆಸರಿದ್ದರಷ್ಟೇ ಸಾಕಾಗುವುದಿಲ್ಲ. ತಾನು ಈ ದೇಶದಲ್ಲೇ ಹುಟ್ಟಿದ ಪೌರ ಎನ್ನುವುದಕ್ಕೆ ಬೇಕಾಗಿರುವ ದಾಖಲೆಗಳನ್ನು ಒಪ್ಪಿಸಿ ಪೌರತ್ವ ಹೊಂದಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ನಂಬಿಕೆ ಮೂಡಿಸಬೇಕು. ಬಳಿಕವಷ್ಟೇ ಆತನಲ್ಲಿರುವ ಆಧಾರ್ ಕಾರ್ಡ್, ಮತದಾರರ ಗುರುತು ಚೀಟಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಚುನಾವಣಾ ಆಯೋಗದ ಈ ನಿರ್ಧಾರದಿಂದಾಗಿ ಈಗಾಗಲೇ ಬಿಹಾರದಲ್ಲಿ ಶೇ. 30ಕ್ಕೂ ಅಧಿಕ ಮತದಾರರು ಮತದಾನದಿಂದ ಹೊರಗುಳಿಯಲಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಈಗಾಗಲೇ ಜನಪ್ರತಿನಿಧಿಗಳಾಗಿ ಕೆಲಸ ಮಾಡುತ್ತಿರುವವರೂ ತಮ್ಮ ಪೌರತ್ವವನ್ನು ಸಾಬೀತು ಪಡಿಸಲಾಗದ ಆತಂಕದ ಸ್ಥಿತಿಯಲ್ಲಿದ್ದಾರೆ. ತಾವು ಹುಟ್ಟಿ ಹಲವು ದಶಕಗಳು ಕಳೆದಿದ್ದು, ಈಗಾಗಲೇ ತಮ್ಮ ಬಳಿ ಆಧಾರ್ ಕಾರ್ಡ್ನಿಂದ ಹಿಡಿದು ಹಲವು ಗುರುತು ಚೀಟಿಗಳು ಇವೆ. ಇಷ್ಟಿದ್ದರೂ ತಮ್ಮ ಹುಟ್ಟಿನ ದಾಖಲೆಗಳನ್ನು ನೀಡಲಾಗದೆ ಮತದಾನದಿಂದ ಹೊರಗುಳಿಯುವ ಸನ್ನಿವೇಶ ಸೃಷ್ಟಿಯಾಗಿದೆ. ಚುನಾವಣಾ ಆಯೋಗ ನೀಡಿರುವ ಅವಧಿಯೊಳಗೆ ದಾಖಲೆಗಳನ್ನು ನೀಡುವುದಕ್ಕೆ ತಮ್ಮಿಂದ ಸಾಧ್ಯವಿಲ್ಲ ಎನ್ನುವುದು ಗ್ರಾಮೀಣ ಪ್ರದೇಶದ ನೂರಾರು ಕಾರ್ಮಿಕರ ಅಳಲಾಗಿವೆ. ಮತದಾರ ಪಟ್ಟಿಯಲ್ಲಿ ಹೆಸರು ದಾಖಲಿಸಲು ಮತದಾರರ ಗುರುತು ಚೀಟಿ, ಆಧಾರ್ ಕಾರ್ಡ್ಗಳು ಅರ್ಹತೆಯಲ್ಲ ಎಂದು ಚುನಾವಣಾ ಆಯೋಗ ಯಾಕೆ ಹೇಳುತ್ತಿದೆ ಎನ್ನುವುದು ಬಿಹಾರದ ಮಾತ್ರವಲ್ಲ ಇಡೀ ದೇಶದ ಜನರ ಪ್ರಶ್ನೆಯಾಗಿದೆ. ಇಂದು ಚುನಾವಣಾ ಪರಿಷ್ಕರಣೆಯ ಹೆಸರಿನಲ್ಲಿ ಚುನಾವಣಾ ಆಯೋಗವು ಮುಂದಾಗಿರುವುದು ದೇಶದ ಜನರ ಪೌರತ್ವವನ್ನು ಪರಿಷ್ಕರಿಸಲು. ‘ಜನರ ಪೌರತ್ವವನ್ನು ಪ್ರಶ್ನಿಸುವುದು, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೇಳುವುದು ಚುನಾವಣಾ ಆಯೋಗದ ಕೆಲಸವಲ್ಲ. ಚುನಾವಣಾ ಆಯೋಗವು ಆಧಾರ್ ಕಾರ್ಡ್, ಮತದಾನದ ಗುರುತು ಚೀಟಿಗಳನ್ನು ಪರಿಶೀಲಿಸಿ ಅದು ಅಸಲಿಯೋ ನಕಲಿಯೋ ಎನ್ನುವುದರ ಆಧಾರದಲ್ಲಿ ಒಬ್ಬ ಮತದಾನ ಮಾಡಬಹುದೋ ಮಾಡಬಾರದೋ ಎನ್ನುವುದನ್ನು ನಿರ್ಧರಿಸಬಹುದು. ಒಬ್ಬನ ಹುಟ್ಟಿನ ದಾಖಲೆಗಳನ್ನು ಪರಿಶೀಲಿಸಿ ಈತ ದೇಶದ ಪೌರ ಅಲ್ಲ ಎಂದು ನಿರ್ಧಾರಕ್ಕೆ ಚುನಾವಣಾ ಆಯೋಗ ಬರುವುದು ಹೇಗೆ? ಈಗಾಗಲೇ ಮಾಜಿ ಚುನಾವಣಾ ಆಯುಕ್ತರು ಸೇರಿದಂತೆ ಹಲವು ಸಂವಿಧಾನ ತಜ್ಞರು ಈ ಪ್ರಶ್ನೆಯನ್ನು ಕೇಳಿದ್ದಾರೆ. ಮತದಾನ ಪರಿಷ್ಕರಣೆಯ ಹೆಸರಿನಲ್ಲಿ ಈ ದೇಶದ ಜನರ ಪೌರತ್ವ ಪರಿಷ್ಕರಣೆಗೆ ಹೊರಡುವ ಮೂಲಕ ಚುನಾವಣಾ ಆಯೋಗ ತನ್ನ ಲಕ್ಷ್ಮಣ ರೇಖೆಯನ್ನು ಮೀರಿದೆ ಎನ್ನುವುದು ಅದರ ಮೇಲಿರುವ ಪ್ರಮುಖ ಆರೋಪವಾಗಿದೆ.
ಬಿಹಾರದಲ್ಲಿ ಮಾತ್ರವಲ್ಲ, ಯಾವುದೇ ರಾಜ್ಯದಲ್ಲಿಯೂ ಮತದಾನ ಪರಿಷ್ಕರಣೆಯ ನೆಪದಲ್ಲಿ ದೇಶದ ಜನರ ಪೌರತ್ವ ಪರಿಷ್ಕರಣೆ ನಡೆಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇಲ್ಲ. ಎನ್ಆರ್ಸಿಯನ್ನು ನೇರವಾಗಿ ಜಾರಿಗೊಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಮೂಲಕ ತನ್ನ ದುರುದ್ದೇಶವನ್ನು ಸಾಧಿಸಲು ಕೇಂದ್ರ ಮುಂದಾಗಿದೆ ಎನ್ನುವುದು ಸ್ಪಷ್ಟ. ಕೇಂದ್ರ ಸರಕಾರದ ಪರೋಕ್ಷ ಸೂಚನೆಯಂತೆ ಈ ‘ಅಧಿಕ ಪ್ರಸಂಗ’ಕ್ಕೆ ಆಯೋಗ ಇಳಿದಿದೆ. ಸುಪ್ರೀಂಕೋರ್ಟ್ ಚುನಾವಣಾ ಆಯೋಗದ ಕಿವಿ ಹಿಂಡಿ, ಅದರ ನಿಜವಾದ ಹೊಣೆಗಾರಿಕೆಗಳನ್ನು ಅದಕ್ಕೆ ನೆನಪಿಸಿಕೊಡಬೇಕಾಗಿದೆ.







