ಕನ್ನಡ ಉಳಿಸುವ ವಿಧಾನ ಇದೇನಾ?
PC: shiksha. Com
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಹಂಪಿಯ ಕನ್ನಡ ವಿವಿಯ ಶೋಚನೀಯ ಆರ್ಥಿಕ ಸ್ಥಿತಿ ಸದ್ಯಕ್ಕೆ ತೀವ್ರ ಚರ್ಚೆಗೆ ಕಾರಣವಾಗಿದೆ. ಒಂದೆಡೆ, ಕನ್ನಡದ ಉಳಿವಿಗಾಗಿ ಖಾಸಗಿ ಉದ್ಯಮಗಳಲ್ಲಿ ಮೀಸಲಾತಿಯನ್ನು ಜಾರಿಗೆ ತರುವ ಮಾತುಗಳನ್ನಾಡುತ್ತಿರುವ ಸರಕಾರ, ಇನ್ನೊಂದೆಡೆ ಕನ್ನಡ ಪರಂಪರೆಯನ್ನು ಎತ್ತಿ ಹಿಡಿಯುವ ಮಹತ್ವದ ಪಾತ್ರ ನಿರ್ವಹಿಸುತ್ತಿರುವ ಕನ್ನಡ ವಿ.ವಿ.ಯ ಅವಸಾನಕ್ಕೆ ಕಾರಣವಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಕನ್ನಡ ವಿಶ್ವವಿದ್ಯಾನಿಲಯ ಮುಚ್ಚುತ್ತಿರುವ ಹೊತ್ತಿನಲ್ಲೇ ಸಂಸ್ಕೃತ ವಿಶ್ವವಿದ್ಯಾನಿಲಯಕ್ಕೆ ಅದ್ದೂರಿಯ ಸಿದ್ಧತೆ ನಡೆಯುತ್ತಿದೆ.
ವಿಶ್ವವಿದ್ಯಾನಿಲಯ ತನ್ನ ತಾತ್ಕಾಲಿಕ/ಗುತ್ತಿಗೆ ಆಧಾರಿತ ಸಿಬ್ಬಂದಿಗೆ ಕಳೆದ 15 ತಿಂಗಳುಗಳಿಂದ ವೇತನ ಪಾವತಿ ಮಾಡಿಲ್ಲ. ಯಾಕೆಂದರೆ ಸರಕಾರ ಅನುದಾನ ನೀಡಿಲ್ಲ. ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಈ ವಿಶ್ವವಿದ್ಯಾನಿಲಯಕ್ಕೆ ತಕ್ಷಣಕ್ಕೆ ಈ ವೇತನ ಪಾವತಿಗೇ 3.5 ಕೋಟಿ ರೂ. ಬೇಕಾಗಿದೆ. ಅದರ ಒಟ್ಟಾರೆ ಇತರ ಅಗತ್ಯಗಳ ಬಗ್ಗೆ ಇನ್ನೂ ಮಾಹಿತಿ ಇಲ್ಲ. ದಶಕದ ಹಿಂದೆ ಏನಿಲ್ಲವೆಂದರೂ 5 ಕೋಟಿ ರೂ. ಅನುದಾನ ಲಭ್ಯವಾಗುತ್ತಿತ್ತು ಎಂದಿರುವ ಉಪಕುಲಪತಿಗಳು ತದನಂತರ ವರ್ಷ ವರ್ಷ ಈ ಅನುದಾನ ಇಳಿಮುಖವಾಗುತ್ತಲೇ ಬಂದಿರುವ ವ್ಯಂಗ್ಯವನ್ನು ಬಿಚ್ಚಿಟ್ಟಿದ್ದಾರೆ
2013-14ನೇ ಸಾಲಿನಲ್ಲಿ ರೂ.5.2 ಕೋಟಿ ಅನುದಾನ ಲಭ್ಯವಾಗಿದ್ದರೆ ಬಿಜೆಪಿ ಆಡಳಿತಾವಧಿಯಲ್ಲಿ ಈ ಅನುದಾನ ಕೇವಲ ರೂ. 50 ಲಕ್ಷಕ್ಕಿಳಿದಿದೆ. ಆದರೆ ಕಾಂಗ್ರೆಸ್ ಸರಕಾರ ಬಂದ ಮೇಲೂ ಪರಿಸ್ಥಿತಿ ಸುಧಾರಿಸಿಲ್ಲ. ಕಳೆದ ಸಾಲಿಗೆ ಈ ಮೊತ್ತ ಕೇವಲ ರೂ. 1.51 ಕೋಟಿಯಾಗಿದ್ದರೆ ಈ ಸಾಲಿನಲ್ಲಿ ಘೋಷಿಸಿದ ಅನುದಾನ ರೂ.1.91 ಕೋಟಿ. ದಶಕದ ಹಿಂದಿನ ಅನುದಾನ ಪ್ರಮಾಣ ಗಮನಿಸಿದರೆ ಈಗ ಅದು ಏನಿಲ್ಲವೆಂದರೂ ರೂ. 15 ಕೋಟಿಗೆ ಸಮ. ತನ್ನ 700 ಎಕರೆ ವಿಶಾಲವಾದ ಕ್ಯಾಂಪ್, ಹಾಸ್ಟೆಲ್ಗಳು, ಕಟ್ಟಡಗಳ ನಿರ್ವಹಣೆಗೇ ವರ್ಷಕ್ಕೆ 5 ಕೋಟಿ ರೂ. ಬೇಕಾಗುತ್ತದೆ. ವಿದ್ಯಾರ್ಥಿಗಳ ಫೀ ಮೂಲಕ ಬರುವ ಮೊತ್ತ ಅಲ್ಪ. ಸರಕಾರಿ ವಿವಿಯೊಂದು ತನ್ನ ವೆಚ್ಚಕ್ಕೆ ವಿದ್ಯಾರ್ಥಿಗಳ ಕಿಸೆಗೆ ಕೈಯಿಕ್ಕುವ ಅವಕಾಶ ಇಲ್ಲ.
ಸರಕಾರವೋ ಕನ್ನಡದ ಬಗ್ಗೆ ಎದೆ ಉಬ್ಬಿಸಿ ಮಾತಾಡುತ್ತಿದ್ದರೆ, ದೇಶದಲ್ಲೇ ಅಪರೂಪವಾದ ತನ್ನ ವಿವಿಯ ಆರೋಗ್ಯದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ವಿವಿಯ ಅನುದಾನಕ್ಕಾಗಿ ಅಂಗಲಾಚುವ ಪತ್ರಗಳೆಲ್ಲಾ ಉನ್ನತ ಶಿಕ್ಷಣ ಇಲಾಖೆ-ವಿತ್ತ ಇಲಾಖೆಗಳ ನಡುವೆ ವಾಲಿಬಾಲ್ ತರ ಹಾರಾಡುತ್ತಿದೆ ಎಂದು ವರದಿ ಹೇಳುತ್ತಿದೆ. ಈ ಗುತ್ತಿಗೆ ಆಧಾರದ ನೌಕರರಲ್ಲಿ ಅತಿಥಿ ಉಪನ್ಯಾಸಕರೂ ಇದ್ದಾರೆ. ಹಳಬರೆಲ್ಲಾ ನಿವೃತ್ತಿ ಆದ ಮೇಲೆ ಈಗ ಕೇವಲ 47 ಖಾಯಂ ಬೋಧಕರಿದ್ದಾರಂತೆ! ಈ ಹುದ್ದೆಗಳನ್ನು ತುಂಬುವ ಪ್ರಕ್ರಿಯೆ ಯಾವ ಹಂತದಲ್ಲಿದೆ ಗೊತ್ತಿಲ್ಲ. ಇದರೊಂದಿಗೇ ಹಾಸ್ಟೆಲ್ಗಳನ್ನು ನಿರ್ವಹಿಸುವ ವೆಚ್ಚ ವರ್ಷ ವರ್ಷ ಏರುತ್ತಿದೆ..
ಕಳೆದ ವರ್ಷ ವಿದ್ಯುತ್ ಬಿಲ್ ಕಟ್ಟಲಾರದೇ ಕೂತಿದ್ದ ವಿವಿಗೆ ಸರಕಾರ ಒಂದು ಕೋಟಿ ರೂ. ನೀಡಿ ಅದನ್ನು ವಿದ್ಯುತ್ ಬಿಲ್ ಪಾವತಿಗೇ ಬಳಸಿ ಎಂದಿತ್ತು. ಸ್ಥಳೀಯ ಮುನ್ಸಿಪಾಲಿಟಿಯೂ ಕಟ್ಟಡ ತೆರಿಗೆ ಎಂದು ರೂ. 16 ಲಕ್ಷಕ್ಕೆ ಬೇಡಿಕೆ ಇರಿಸಿದೆ.
ಇವೆಲ್ಲಾ ಗೋಳು ಸರಕಾರಕ್ಕೆ ಗೊತ್ತಿಲ್ಲದ್ದೇನಲ್ಲ. ಭೌತಿಕ ಮೂಲಸಂರಚನೆಗಳ ನಿರ್ವಹಣೆ, ಗುತ್ತಿಗೆ ಆಧಾರಿತ ನೌಕರರ ವೇತನ ಇವೆಲ್ಲವೂ ಸಹಜ ವೆಚ್ಚಗಳು. ಬಿಜೆಪಿ ಸರಕಾರ ಸಂಸ್ಕೃತ ವಿವಿಗೆ ನೀಡಿದ ಪೋಷಣೆಯನ್ನು ಸಾಂಪ್ರದಾಯಿಕ ವಿವಿಗಳಿಗೆ ನೀಡಿಲ್ಲ. ಅಷ್ಟೇಕೆ ಜಿಲ್ಲೆಗೊಂದು ವಿವಿ ಎಂಬ ಹೆಸರಲ್ಲಿ ಅನುದಾನ, ಜಮೀನು ನೀಡದೆ ಬೋರ್ಡು ತಗಲಿಸಿ ಕೂರುವ ಏರ್ಪಾಟು ಮಾಡಿದೆ. ಇದರ ಅಸಂಬದ್ಧತೆ ಗೊತ್ತಿದ್ದೂ ಕಾಂಗ್ರೆಸ್ ಸರಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನು ಎಲ್ಲಾ ವಿವಿಗಳಲ್ಲೂ ಸಾವಿರಾರು ಖಾಯಂ ಬೋಧಕರ ಹುದ್ದೆ ಖಾಲಿ ಇದೆ. ಇಂಥಾ ಪಡಿಪಾಟಲಿಗೆ ವಿವಿಗಳನ್ನು ತಳ್ಳಿ ಈ ವಿವಿಗಳು ವಿಶ್ವದರ್ಜೆಯ ಶಿಕ್ಷಣ ಸಂಶೋಧನೆಗಳನ್ನು ಕೈಗೊಳ್ಳುವ ಬಗೆ ಹೇಗೆ? ಸ್ಪರ್ಧಾತ್ಮಕವಾಗಿ ಕೆಲಸ ಮಾಡುವುದು ಹೇಗೆ?
ಇನ್ನೊಂದೆಡೆ ಸ್ಪರ್ಧಾತ್ಮಕತೆ ಅಂದರೆ ಕಂಪೆನಿಗಳಿಗೆ ಬೇಕಾದ ವೃತ್ತಿಪರ ಕೋರ್ಸುಗಳನ್ನು ಸಿದ್ಧಪಡಿಸುವುದು ಎಂಬ ಭ್ರಮಾತ್ಮಕ ನಿಲುವೂ ಢಾಳಾಗಿದೆ. ಹೆಸರಾಂತ ವಿವಿಗಳು ಇಂತಹ ಉದ್ಯೋಗ ನೀಡುವ ಕೋರ್ಸುಗಳ ಮೂಲಕ ಮಾನ್ಯತೆ ಪಡೆದಿದ್ದಲ್ಲ. ಅವು ಮೂಲಭೂತ ಸಂಶೋಧನೆ, ಜ್ಞಾನ ಪ್ರಮೇಯಗಳನ್ನು ಕೈಗೆತ್ತಿಕೊಂಡಿರುವ ಕಾರಣ ಹೆಸರು ಪಡೆದಿವೆ. ಹಂಪಿಯ ಕನ್ನಡ ವಿವಿಯ ಸಂಶೋಧನಾ ಮಟ್ಟ ಹೇಗಿದೆ ಎಂಬುದರ ಬಗ್ಗೆ ಸರಕಾರ ಪ್ರತ್ಯೇಕವಾಗಿ ತಜ್ಞರ ಸಮಿತಿಯೊಂದರ ಮೂಲಕ ಪರಾಮರ್ಶೆ ನಡೆಸುವ ಅಗತ್ಯವಿದೆ.
ಚೀನಾ, ಜರ್ಮನಿ, ಸ್ವೀಡನ್, ಇಟಲಿ ಈ ಎಲ್ಲಾ ದೇಶಗಳಲ್ಲೂ ಆಯಾ ದೇಶ ಭಾಷೆಗಳಲ್ಲೇ ಶಿಕ್ಷಣ ಸಂಶೋಧನೆ ನಡೆಯುತ್ತಾ ಅವು ವಿಶ್ವದ ಗಮನ ಸೆಳೆಯುತ್ತ ಬಂದಿರುವುದನ್ನು ಗಮನಿಸಿದರೆ ನಮ್ಮ ಕನ್ನಡ ವಿಶ್ವವಿದ್ಯಾನಿಲಯ ಎಲ್ಲಿದೆ ಎಂಬುದು ಪತ್ತೆ ಮಾಡಲು ಮೇಧಾವಿಗಳೇ ಬೇಕಿಲ್ಲ. ಇವೆಲ್ಲಕ್ಕಿಂತ ಮೊದಲು ವಿಶ್ವವಿದ್ಯಾನಿಲಯವು ಭೌತಿಕವಾಗಿ ಕಾರ್ಯ ನಿರ್ವಹಿಸಲು ಬೇಕಾದ ಅನುದಾನವೇ ನೀಡದಿದ್ದರೆ ವಿವಿಯ ಕಾರ್ಯಕ್ಷಮತೆಯ ಬಗ್ಗೆ ಕೇಳುವ ನೈತಿಕ ನೆಲೆಯೂ ಸರಕಾರಕ್ಕಿರುವುದಿಲ್ಲ.
ಹಂಪಿ ವಿವಿಯು ಈ ಹಿಂದಿನ ಬಿಜೆಪಿ ಸರಕಾರದ ಬಳಿ ಮೂಲಭೂತ ಅಗತ್ಯಗಳಿಗಾಗಿ ಬೇಡಿಕೆ ಇಟ್ಟಾಗಲೆಲ್ಲ ಅದನ್ನು ತಿರಸ್ಕರಿಸುತ್ತಾ ಬಂತು. ಆದೇ ಸಂದರ್ಭದಲ್ಲಿ ಬೊಮ್ಮಾಯಿ ನೇತೃತ್ವದ ಸರಕಾರ ರಾಜ್ಯದಲ್ಲಿ ಸಂಸ್ಕೃತ ವಿವಿ ಸ್ಥಾಪನೆಗೆ 100 ಎಕರೆ ಭೂಮಿ, 359 ಕೋಟಿ ರೂಪಾಯಿ ಅನುದಾನವನ್ನು ನೀಡಲು ಮುಂದಾಯಿತು. ಇಷ್ಟಕ್ಕೂ ಕರ್ನಾಟಕದಲ್ಲಿ ಸಂಸ್ಕೃತ ಮಾತೃಭಾಷಿಗರ ಸಂಖ್ಯೆ ಎಷ್ಟು ಎಂದು ಲೆಕ್ಕ ಹಾಕಿದರೆ ನಿರಾಶೆಯಾಗುತ್ತದೆ. ದೈನಂದಿನ ವ್ಯವಹಾರದಲ್ಲಾಗಲಿ, ಶೈಕ್ಷಣಿಕ ಬದುಕಿನಲ್ಲಾಗಲಿ ಯಾವ ರೀತಿಯಲ್ಲೂ ಪ್ರಧಾನ ಪಾತ್ರವನ್ನು ನಿರ್ವಹಿಸದ ಸಂಸ್ಕೃತಕ್ಕಾಗಿ ಒಂದು ವಿಶ್ವವಿದ್ಯಾನಿಲಯ ತೆರೆಯಲು ಮುಂದಾಗುವ ಸರಕಾರ, ಆ ಹಣದ ಅರ್ಧವನ್ನು ಕನ್ನಡ ವಿವಿಯ ಉಳಿಕೆಗೆ ಬಳಸಿದ್ದರೆ ಇಂದು ಹಂಪಿ ಕನ್ನಡ ವಿವಿ ಸ್ಥಿತಿ ಇಲ್ಲಿಗೆ ಬಂದು ಮುಟ್ಟುತ್ತಿರಲಿಲ್ಲ. ದಶಕಗಳ ಹಿಂದೆ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕು ಎಂದು ಭಾರೀ ಹೋರಾಟಗಳು ಆರಂಭವಾದವು. ಈ ಸ್ಥಾನಮಾನದಿಂದ ಕನ್ನಡಕ್ಕೆ ದಕ್ಕಿದ್ದೇನು ಎನ್ನುವುದು ಯಾರಿಗೂ ಸ್ಪಷ್ಟವಿಲ್ಲ. ಇರುವ ವಿಶ್ವವಿದ್ಯಾನಿಲಯವನ್ನೇ ಉಳಿಸಿಕೊಳ್ಳಲು ಸಾಧ್ಯವಾಗದೇ ಇರುವಾಗ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ ಎಂದು ಬೀಗುವುದರಲ್ಲಿ ಏನು ಅರ್ಥವಿದೆ?