ಇದು ನ್ಯಾಯ ನಿರಾಕರಣೆ ಅಲ್ಲವೇ?

ಉಮರ್ ಖಾಲಿದ್ , ಶರ್ಜೀಲ್ ಇಮಾಮ್ | Photo Credit : PTI
ಒಬ್ಬ ವ್ಯಕ್ತಿಯನ್ನು ವಿಚಾರಣೆಯಿಲ್ಲದೆ ಹಾಗೂ ಕನಿಷ್ಠ ಜಾಮೀನು ಕೂಡ ಇಲ್ಲದೆ ಎಷ್ಟು ತಿಂಗಳು ಅಥವಾ ಎಷ್ಟು ವರ್ಷ ಸೆರೆಮನೆಯಲ್ಲಿ ಇಡಬಹುದು? ಈ ಪ್ರಶ್ನೆಗೆ ಎಲ್ಲೂ ಉತ್ತರ ಸಿಗದ ವ್ಯವಸ್ಥೆಯಲ್ಲಿ ನಾವಿದ್ದೇವೆ. ದಿಲ್ಲಿಯ ಜವಾಹರಲಾಲ್ ನೆಹರೂ (ಜೆಎನ್ಯು)ವಿಶ್ವವಿದ್ಯಾನಿಲಯದ ಪ್ರತಿಭಾವಂತ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿ ನಾಯಕರಾಗಿದ್ದ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಇವರಿಬ್ಬರನ್ನು ಜೈಲಿಗೆ ಹಾಕಿ ಆರು ವರ್ಷಗಳಾದವು. ಇನ್ನೂ ವಿಚಾರಣೆಯಿಲ್ಲ, ಜಾಮೀನು ಮೇಲೆ ಬಿಡುಗಡೆಯೂ ಇಲ್ಲ. 2020ರಲ್ಲಿ ದಿಲ್ಲಿಯ ಈಶಾನ್ಯ ಭಾಗದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಇವರನ್ನು ಸೇರಿಸಿ ಎಂಟು ಮಂದಿಯನ್ನು ಬಂಧಿಸಲಾಗಿತ್ತು. ಈ ಗಲಭೆಗೂ ಇವರಿಗೂ ಯಾವುದೇ ಸಂಬಂಧ ಕಂಡುಬರದಿದ್ದರೂ ಇವರನ್ನು ಬಂಧಿಸಿ ಸೆರೆಮನೆಗೆ ಕಳಿಸಲಾಯಿತು. ಆರೋಪ ಹೊರಿಸಿ ಜೈಲಿಗೆ ಹಾಕಿಸಿದ ಸರಕಾರಕ್ಕೆ ಅಥವಾ ತನಿಖಾ ಸಂಸ್ಥೆಗಳಿಗೆ ಹಾಗೂ ಪೊಲೀಸರಿಗೆ ಇವರಿಬ್ಬರ ಮೇಲಿನ ಆರೋಪವನ್ನು ಸಾಬೀತು ಮಾಡಲು ಆಗಿಲ್ಲ. ಆರೋಪಗಳ ಪುರಾವೆಗಳಿಗಾಗಿ ಇನ್ನೂ ತಡಕಾಡುತ್ತಲೇ ಇದ್ದಾರೆ. ಆದರೆ ಇವರಿಬ್ಬರು ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋದಾಗ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅಡ್ಡಗಾಲು ಹಾಕುವುದನ್ನು ಬಿಟ್ಟರೆ ಬೇರೇನನ್ನೂ ಮಾಡಲು ಆಗಿಲ್ಲ.
ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ತಮ್ಮನ್ನು ದೀರ್ಘ ಕಾಲದಿಂದ ವಿಚಾರಣೆ ನಡೆಸದೆ ಜೈಲಿನಲ್ಲಿ ಇಟ್ಟಿರುವುದು ಮಾನವ ಹಕ್ಕುಗಳು ಹಾಗೂ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅರ್ಜಿಯನ್ನು ಸಲ್ಲಿಸುತ್ತಲೇ ಬಂದಿದ್ದಾರೆ. ಈ ಸಲ ಕೂಡ ದಿಲ್ಲಿ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್ ಬಾಜಪೇಯಿ ಅವರು ಇವರಿಬ್ಬರಿಗೆ ಜಾಮೀನು ನೀಡಲು ನಿರಾಕರಿಸಿದ್ದಾರೆ. ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆ(ಯುಎಪಿಎ) ಅಡಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕಳೆದ ಜನವರಿ 5ರಂದು ಜಾಮೀನು ನೀಡಲು ನಿರಾಕರಿಸಿತ್ತು. ಆನಂತರ ಇವರು ಹೊಸದಾಗಿ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ಅದನ್ನೂ ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಆನಂತರ ಮತ್ತೊಂದು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನ ಮತ್ತೊಂದು ಪೀಠವು ‘ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಜಾಮೀನು ನಿರಾಕರಿಸಬೇಕು ಎನ್ನುವ ನಿಯಮವು ಯುಎಪಿಎಗೂ ಅನ್ವಯವಾಗುತ್ತದೆ ಎಂದು ಉಲ್ಲೇಖಿಸಿದೆ’ ಎಂದು ಇವರು ಈ ಬಾರಿ ಅರ್ಜಿಯಲ್ಲಿ ತಿಳಿಸಿದ್ದರು.
ಸುಮಾರು 6 ವರ್ಷಗಳಿಂದ ತಾವಿಬ್ಬರೂ ಜೈಲಿನಲ್ಲಿ ಇದ್ದರೂ ತಮ್ಮ ಮೇಲೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಆರೋಪಗಳ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ ಎಂಬುದು ಇವರ ಅರ್ಜಿಯಲ್ಲಿ ಅಡಕವಾದ ಮಹತ್ವದ ಅಂಶವಾಗಿದೆ. ಆದರೆ ಪದೇ ಪದೇ ಅರ್ಜಿಗಳನ್ನು ಸಲ್ಲಿಸಿದ್ದರೂ ಯಾವ ಪ್ರಯೋಜನವೂ ಆಗಿಲ್ಲ ಎಂಬುದು ಇವರ ಅಸಮಾಧಾನಕ್ಕೆ ಕಾರಣವಾದ ಅಂಶವಾಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗ, ಶಾಸಕಾಂಗ ಸೇರಿದಂತೆ ಎಲ್ಲೂ ನ್ಯಾಯ ಸಿಗದಿದ್ದಾಗ ಕೊನೆಗೆ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ. ಅಲ್ಲೂ ನ್ಯಾಯ ಎಂಬುದು ಕನಸಿನ ಗಂಟಾದಾಗ ಸಹಜವಾಗಿ ಯಾವುದೇ ವ್ಯಕ್ತಿ ಹತಾಶನಾಗುತ್ತಾನೆ. ಉಮರ್ ಖಾಲಿದ್ ಮತ್ತು ಅವರ ಜೊತೆ ಜೈಲಿಗೆ ಹಾಕಲ್ಪಟ್ಟವರು ಈಗ ಇದೇ ಸ್ಥಿತಿಯಲ್ಲಿ ಇದ್ದಾರೆ. ಕಾನೂನಿನ ಎದುರು ಎಲ್ಲರೂ ಸಮಾನರು ಎಂಬ ಮಾತು ಈಗ ಅರ್ಥವನ್ನು ಕಳೆದುಕೊಂಡಿದೆ. ಇವತ್ತಿನ ವ್ಯವಸ್ಥೆಯಲ್ಲಿ ಕೆಲವರು ಹೆಚ್ಚು ಸಮಾನರಾಗಿರುತ್ತಾರೆ. ಇದಕ್ಕೆ ಉಮರ್ ಖಾಲಿದ್ ಪ್ರಕರಣವೇ ಒಂದು ಉದಾಹರಣೆಯಾಗಿದೆ. ಯಾವುದೇ ಲಿಖಿತ ಆರೋಪವಿಲ್ಲದೆ, ವಿಚಾರಣೆಯಿಲ್ಲದೆ ಆರು ವರ್ಷಗಳ ಕಾಲ ಜೈಲಿನಲ್ಲಿ ಇಡಲಾಗಿದೆ. ಇದು ಅನ್ಯಾಯದ ಪರಮಾವಧಿಯಲ್ಲದೆ ಬೇರೇನೂ ಅಲ್ಲ.
ದಿಲ್ಲಿ ಗಲಭೆಗೆ ಸಂಬಂಧಿಸಿದಂತೆ ಜನ ಜಂಗುಳಿಯನ್ನು ಉದ್ದೇಶಿಸಿ ಅತ್ಯಂತ ಪ್ರಚೋದನಕಾರಿ ಮಾತುಗಳನ್ನು ಆಡಿದ್ದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ಕಪಿಲ್ ಮಿಶ್ರಾ ಅವರಂತಹ ಬಿಜೆಪಿ ನಾಯಕರು ಯಾವುದೇ ಕಾನೂನಿನ ಹೆದರಿಕೆಯಿಲ್ಲದೆ ಓಡಾಡಿಕೊಂಡಿದ್ದಾರೆ. ‘‘ಗೋಲಿ ಮಾರೋ ಸಾಲೋಂಕೋ’’ ಎಂದು ಅತ್ಯಂತ ಪ್ರಚೋದನಕಾರಿ ಮಾತುಗಳನ್ನು ಬಹಿರಂಗವಾಗಿ ಆಡಿದ ಅನುರಾಗ್ ಠಾಕೂರ್ ಮೇಲೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.ಈತ ಕೇಂದ್ರ ಮಂತ್ರಿಯಾದ ಕಾರಣಕ್ಕಾಗಿ ಈ ವಿಶೇಷ ರಿಯಾಯಿತಿ ನೀಡಲಾಗಿದೆಯೇ? ಮಂತ್ರಿಗೊಂದು ಕಾನೂನು, ಸಾಮಾನ್ಯ ಪ್ರಜೆಗೊಂದು ಕಾನೂನು ಎಂಬುದಿದೆಯೇ?
ಅನುರಾಗ್ ಠಾಕೂರ್ ಪ್ರಕರಣ ಒಂದು ಕಡೆಯಾದರೆ ಮಾಲೆಗಾಂವ್ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿಗಳಾದ ಕರ್ನಲ್ ಪುರೋಹಿತ್, ಪ್ರಜ್ಞಾ ಸಿಂಗ್ ಠಾಕೂರ್ ಮತ್ತಿತರರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿ ಎರಡು ವರ್ಷಗಳಾಗುತ್ತಾ ಬಂತು. ನ್ಯಾಯಾಲಯದ ನ್ಯಾಯ ದಾನದ ತಕ್ಕಡಿ ಇತ್ತೀಚೆಗೆ ಒಂದೊಂದು ಕಡೆ ವಾಲುವುದು ಸಾಮಾನ್ಯ ಸಂಗತಿಯಾಗಿದೆ. ಕಳೆದ ಆರು ವರ್ಷಗಳಿಂದ ವಿಚಾರಣೆಯಿಲ್ಲದೆ ಜೈಲಿನಲ್ಲಿ ಇರುವ ಉಮರ್ ಖಾಲಿದ್ ಮತ್ತು ಅವರ ಎಂಟು ಮಂದಿ ಜೊತೆಗಾರರ ಪಾಲಿಗೆ ನ್ಯಾಯ ಎಂಬುದು ಮರೀಚಿಕೆಯಾಗಿದೆ.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಮತ್ತು ಪರಿವಾರದ ಸಿದ್ಧಾಂತದ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದವರನ್ನೆಲ್ಲ ಜೈಲಿಗೆ ದೂಡುವುದು ಈಗ ಸಾಮಾನ್ಯವಾಗಿದೆ. ಎಲ್ಲರನ್ನೂ ಯುಎಪಿಎ ಅಡಿಯಲ್ಲಿ ಬಂಧಿಸಿ ವಿಚಾರಣೆಯಿಲ್ಲದೆ ಬಂಧನದಲ್ಲಿ ಇಡುವುದು ಅನ್ಯಾಯದ ಪರಮಾವಧಿಯಾಗಿದೆ. ಯಾವುದೇ ಆರೋಪವಿಲ್ಲದೆ ಬಂಧಿಸಿ, ಜೈಲಿಗೆ ಹಾಕಿ ನಂತರ ಸಾಕ್ಷ್ಯಾಧಾರಗಳಿಗಾಗಿ ತಡಕಾಡುವುದು ಸರಿಯಲ್ಲ. ಇದು ಸಂವಿಧಾನದ 21ನೇ ವಿಧಿಯ (ಜೀವ ಮತ್ತು ವೈಯಕ್ತಿಕ ಸ್ವಾತಂತ್ರ್ಯ ರಕ್ಷಣೆ) ಉಲ್ಲಂಘನೆಯಾಗಿದೆ. ಇದನ್ನು ಪ್ರಜಾಪ್ರಭುತ್ವವಾದಿಗಳೆಲ್ಲರೂ ಖಂಡಿಸಬೇಕಾಗಿದೆ.






