ಕಸಾಪ ಅಧ್ಯಕ್ಷರ ಸಚಿವ ಸ್ಥಾನಮಾನ ವಾಪಸ್ ಸ್ವಾಗತಾರ್ಹ ಕ್ರಮ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕನ್ನಡ ಸಾಹಿತ್ಯ ಪರಿಷತ್ ಮತ್ತು ಅದರ ಅಧ್ಯಕ್ಷರು ಇತ್ತೀಚಿನ ದಿನಗಳಲ್ಲಿ ಸಾಹಿತ್ಯೇತರ ಕಾರಣಗಳಿಗಾಗಿ ಸುದ್ದಿಯಲ್ಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‌ನ ಒಳಗಿನಿಂದಲೇ ಅಧ್ಯಕ್ಷರ ಸರ್ವಾಧಿಕಾರ ಮತ್ತು ಅವಿವೇಕದ ನಿಲುಗಳ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿವೆ. ಸಾಹಿತ್ಯ ಪ್ರಜಾಸತ್ತಾತ್ಮಕವಾದ ಧ್ವನಿಗಳನ್ನು ಎತ್ತಿ ಹಿಡಿಯಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಪೂರಕವಾಗಿರಬೇಕು. ಆದರೆ ಸಾಹಿತ್ಯ ಪರಿಷತ್‌ನಲ್ಲೇ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನವಾಗುತ್ತಿದೆ, ಅಧ್ಯಕ್ಷರು ಸರ್ವಾಧಿಕಾರಿಯಂತೆ ಕಾರ್ಯಾಚರಿಸುತ್ತಿದ್ದಾರೆ ಎನ್ನುವ ಆರೋಪಗಳು ಕೆಲವು ಸಮಯದಿಂದ ಕೇಳಿ ಬರುತ್ತಿವೆ. ಇದೇ ಹೊತ್ತಿಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಅವರ ಕಾರ್ಯವೈಖರಿಯನ್ನು ಆಕ್ಷೇಪಿಸಿ ಕೆಲವು ಸಾಹಿತಿಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ, ಅವರಿಗಿದ್ದ ಸಚಿವ ಸ್ಥಾನಮಾನವನ್ನು ವಾಪಸ್ ತೆಗೆದುಕೊಳ್ಳಲಾಗಿದೆ. ಈ ಸಂಬಂಧ ಸರಕಾರ ಆದೇಶವೊಂದನ್ನು ಹೊರಡಿಸಿದ್ದು, 2023ರ ಜನವರಿ 5ರಂದು ಮಹೇಶ್ ಜೋಶಿಗೆ ನೀಡಲಾಗಿದ್ದ ರಾಜ್ಯ ಸಚಿವ ಸ್ಥಾನಮಾನವನ್ನು ಹಾಗೂ ರಾಜ್ಯ ಸಚಿವರ ದರ್ಜೆಗೆ ಅನ್ವಯಿಸುವ ಎಲ್ಲ ಸೌಲಭ್ಯಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂದಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕನ್ನಡ ಸಾಹಿತ್ಯ ಪರಿಷತ್ ಒಂದು ಸ್ವಾಯತ್ತ ಸಂಸ್ಥೆ. ಅದನ್ನು ಸಾಹಿತಿಗಳು, ಕನ್ನಡ ಓದುಗರು, ಸಾಹಿತ್ಯಾಭಿಮಾನಿಗಳು ಸೇರಿ ಕಟ್ಟಿ ಬೆಳೆಸಿದ್ದಾರೆ. ಕನ್ನಡದ ಹಿತಾಸಕ್ತಿಗೆ ಧಕ್ಕೆ ಬಂದಾಗಲೆಲ್ಲ ಕನ್ನಡ ಸಾಹಿತ್ಯ ಪರಿಷತ್ ಯಾವ ಮುಲಾಜುಗಳಿಲ್ಲದೆ ಸರಕಾರವನ್ನು ಪ್ರಶ್ನಿಸುತ್ತಾ ಬಂದಿದೆ. ಸಾಹಿತ್ಯ ಸಮ್ಮೇಳನಗಳು ಸರಕಾರದ ಅನುದಾನವನ್ನು ಪಡೆಯುತ್ತಾ ಬರುತ್ತದೆಯಾದರೂ, ಅದು ಸರಕಾರದ ಅಧೀನದಲ್ಲಿ ಕೆಲಸ ಮಾಡುತ್ತಿಲ್ಲ. ಈ ಸ್ವಾಯತ್ತತೆಯೇ ಕನ್ನಡ ಸಾಹಿತ್ಯ ಪರಿಷತ್‌ನ ಹೆಗ್ಗಳಿಕೆಯಾಗಿದೆ. ಕನ್ನಡ ಸಂಸ್ಕೃತಿ, ಭಾಷೆಯನ್ನು ಉಳಿಸಿ ಬೆಳೆಸುವುದಕ್ಕೆ ಸರಕಾರದ ವ್ಯಾಪ್ತಿಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆ, ಸಾಹಿತ್ಯ ಅಕಾಡಮಿಗಳು ಅಸ್ತಿತ್ವದಲ್ಲಿವೆ. ಅದರ ನೇಮಕಗಳು ಸರಕಾರದ ಮೂಲಕವೇ ನಡೆಯುತ್ತದೆ. ಆದುದರಿಂದಲೇ ನೂತನ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಈ ಅಕಾಡಮಿ, ಇಲಾಖೆಗಳು, ಪ್ರಾಧಿಕಾರಕ್ಕೆ ಅಧ್ಯಕ್ಷರಾಗುವ ಹಂಬಲಿಕೆಯುಳ್ಳ ಸಾಹಿತಿಗಳು, ಲೇಖಕರು ರಾಜಕಾರಣಿಗಳ ಹಿಂದೆ ಓಡಾಡತೊಡಗುತ್ತಾರೆ. ರಾಜಕಾರಣಿಗಳಿಗೆ ಬಕೆಟ್ ಹಿಡಿಯ ತೊಡಗುತ್ತಾರೆ. ಈ ಇಲಾಖೆ, ಅಕಾಡಮಿಗಳ ಅಧ್ಯಕ್ಷರು ಸರಕಾರವನ್ನು ಪ್ರಶ್ನಿಸುವ ನೈತಿಕತೆಯನ್ನು ಕಳೆದುಕೊಳ್ಳುವುದು ಇದೇ ಕಾರಣಕ್ಕಾಗಿ. ಕನ್ನಡ ಸಾಹಿತ್ಯ ಪರಿಷತ್ ಇದಕ್ಕಿಂತ ಭಿನ್ನವಾದುದು. ಇದರ ಅಧ್ಯಕ್ಷರನ್ನು ಪರಿಷತ್‌ನ ಸದಸ್ಯತ್ವ ಪಡೆದ ಕನ್ನಡ ಭಾಷಿಗರೇ ಆಯ್ಕೆ ಮಾಡುತ್ತಾರೆ. ಈ ಆಯ್ಕೆ ಪ್ರಜಾಸತ್ತಾತ್ಮಕವಾಗಿ ನಡೆಯುತ್ತದೆ. ಸರಕಾರದ ಹಂಗು ಇಲ್ಲದೆ ಇರುವುದೇ ಕಸಾಪ ಅಧ್ಯಕ್ಷ ಸ್ಥಾನದ ಬಹುದೊಡ್ಡ ಹಿರಿಮೆಯಾಗಿದೆ. ಆದರೆ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರು ಎರಡು ವರ್ಷಗಳ ಹಿಂದೆ ಲಾಬಿ ನಡೆಸಿ, ಅಧ್ಯಕ್ಷರಿಗೆ ಸಚಿವ ಸ್ಥಾನಮಾನವನ್ನು ನೀಡಬೇಕು ಎಂದು ಸರಕಾರಕ್ಕೆ ಒತ್ತಡ ಹಾಕಿದರು ಮಾತ್ರವಲ್ಲ, ಅದನ್ನು ಪಡೆಯುವಲ್ಲಿ ಯಶಸ್ವಿಯೂ ಆದರು.
ಕನ್ನಡ ಸಾಹಿತ್ಯ ಪರಿಷತ್ ಒಳ ರಾಜಕೀಯದಿಂದಾಗಿ ಅದಾಗಲೇ ಗಬ್ಬೆದ್ದು ಹೋಗಿತ್ತು. ಕನ್ನಡ ನಾಡು, ನುಡಿಯ ಪರವಾಗಿ ಸಾಹಿತ್ಯ ಸಮ್ಮೇಳನಗಳು ತೆಗೆದುಕೊಂಡ ನೂರಾರು ನಿರ್ಣಯಗಳು ಕಸಾಪದ ಕಸದಬುಟ್ಟಿ ಸೇರಿವೆ. ಅವುಗಳನ್ನು ಜಾರಿಗೆ ತರುವಂತೆ ಸರಕಾರದ ಮೇಲೆ ಒತ್ತಡ ಹೇರುವ ಇಚ್ಛಾಶಕ್ತಿಯನ್ನು ಕಸಾಪ ಎಂದೋ ಕಳೆದುಕೊಂಡಿದೆ. ಇತ್ತೀಚಿನ ದಿನಗಳಲ್ಲಂತೂ ಕಸಾಪ ಸಂಸ್ಥೆಯು ಅಧ್ಯಕ್ಷರ ತೆವಲಿಗೆ ಬಲಿಯಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಇಂತಹ ಹೊತ್ತಿಗೆ, ಅಧ್ಯಕ್ಷರಿಗೆ ನೀಡಿರುವ ಸಚಿವ ಸ್ಥಾನದಿಂದ ಕಸಾಪಕ್ಕೆ ನಷ್ಟವೇ ಹೊರತು ಲಾಭವೇನೂ ಇಲ್ಲ. ಅಧ್ಯಕ್ಷರಿಗೆ ಸಚಿವ ಸ್ಥಾನಮಾನ ನೀಡಿದರೆ, ಅವರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎನ್ನುವ ಮಾತುಗಳೂ ಇವೆ. ಆದರೆ, ಸರಕಾರದ ನೆಲೆಯಲ್ಲಿ ಕನ್ನಡಕ್ಕಾಗಿ ಕಾರ್ಯನಿರ್ವಹಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಂಸ್ಕೃತಿ ಇಲಾಖೆ, ಪುಸ್ತಕ ಪ್ರಾಧಿಕಾರ, ವಿವಿಧ ಅಕಾಡಮಿಗಳು ಇರುವಾಗ, ಕನ್ನಡ ಸಾಹಿತ್ಯ ಪರಿಷತ್‌ನ್ನು ಕೂಡ ಸರಕಾರದ ಕೈಗೊಂಬೆಯಾಗಿಸುವ ಅಗತ್ಯವಿದೆಯೆ? ಎನ್ನುವ ಪ್ರಶ್ನೆಯನ್ನು ಈಗಾಗಲೇ ಹಲವರು ಕೇಳಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಸಚಿವ ಸ್ಥಾನಮಾನ ನೀಡುವ ಸರಕಾರದ ಉದ್ದೇಶವೇ ಕಸಾಪವನ್ನು ಪರೋಕ್ಷವಾಗಿ ತನ್ನ ಜೋಳಿಗೆಯೊಳಗೆ ಹಾಕಿಕೊಳ್ಳುವ ಸಂಚಾಗಿದೆ. ಈ ಸಂಚಿಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಯಾವ ನಾಚಿಕೆಯೂ ಇಲ್ಲದೆ ತಲೆಬಾಗಿದರು. ಸರಕಾರ ಸ್ಥಾನಮಾನ ನೀಡಿದ ಬೆನ್ನಿಗೇ ಅದನ್ನು ಸಂಭ್ರಮದಿಂದ ಸ್ವೀಕರಿಸಿದರು. ಕಾರು ಮತ್ತು ಇತರ ಸೌಲಭ್ಯಗಳನ್ನು ಕನ್ನಡ ಸಾಹಿತ್ಯದ ಹೆಸರಿನಲ್ಲಿ ಅನುಭವಿಸಿದರು. ಈ ಗೂಟದ ಕಾರು ಸಿಕ್ಕಿದ ಬೆನ್ನಿಗೇ ಸಾಹಿತಿಗಳೂ ರಾಜಕಾರಣಿಗಳಾಗಿ ಬಿಡುತ್ತಾರೆ. ಅದರ ಪರಿಣಾಮವೇ ಇರಬೇಕು, ಇತ್ತೀಚಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ರಾಜಕೀಯ ಕಾರಣಗಳಿಗಾಗಿಯೇ ಸುದ್ದಿಯಾಗುತ್ತಿದ್ದರು. ಇದೀಗ ಕೆಲವು ಸಾಹಿತಿಗಳ ದೂರುಗಳನ್ನು ಮನ್ನಿಸಿ ಅಧ್ಯಕ್ಷರ ಸಚಿವ ಸ್ಥಾನಮಾನವನ್ನು ಸರಕಾರ ಕಿತ್ತು ಹಾಕಿದೆ.ಒಂದು ರೀತಿಯಲ್ಲಿ ಈ ಸ್ಥಾನಮಾನವನ್ನು ಪಾಪಸ್ ತೆಗೆದುಕೊಂಡಿರುವುದು ಶ್ಲಾಘನೀಯ ಕೆಲಸವಾಗಿದೆ ಮತ್ತು ಯಾವ ಕಾರಣಕ್ಕೂ ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಸಚಿವ ಸ್ಥಾನಮಾನವನ್ನು ನೀಡಬಾರದು. ಕಸಾಪ ಯಾವತ್ತೂ ಸರಕಾರದ ಅಧೀನದಲ್ಲಿರುವ ಸಂಸ್ಥೆಯಾಗಿ ಗುರುತಿಸಲ್ಪಡಬಾರದು. ರಾಜಕೀಯ ಮುಖಂಡರ ಋಣಭಾರದಲ್ಲಿ ಕಸಾಪ ಅಧ್ಯಕ್ಷರು ಕೆಲಸ ಮಾಡುವಂತಾಗಬಾರದು.
ಉಳಿದಂತೆ, ಕನ್ನಡ ಸಾಹಿತ್ಯ ಪರಿಷತ್‌ಸುಧಾರಣೆಯಾಗಬೇಕಾದರೆ ಕನ್ನಡ ನಾಡು, ನುಡಿಯನ್ನು ಪ್ರತಿನಿಧಿಸುವವರು ಯೋಗ್ಯರಾಗಿರಬೇಕಾಗುತ್ತದೆ. ಅಂತಹ ಯೋಗ್ಯರನ್ನು ಆಯ್ಕೆ ಮಾಡುವ ಯೋಗ್ಯತೆಯೂ ಕನ್ನಡ ಸಾಹಿತ್ಯ ಪರಿಷತ್‌ನ ಸದಸ್ಯರಿಗಿರಬೇಕು. ಕಸಾಪವನ್ನು ಟೀಕೆ ಮಾಡುವ ಮೊದಲು, ಕನ್ನಡ ಸಾಹಿತ್ಯ ಲೋಕದ ಎಷ್ಟು ಮಂದಿ ಪ್ರಜ್ಞಾವಂತರು, ಜಾಗೃತ ಲೇಖಕರು, ಓದುಗರು, ಸಾಹಿತ್ಯಾಭಿಮಾನಿಗಳು ಕನ್ನಡ ಸಾಹಿತ್ಯ ಪರಿಷತ್‌ನ ಸದಸ್ಯರಾಗಿದ್ದಾರೆ? ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಕಸಾಪ ರಾಜಕೀಯ ಸಂಸ್ಥೆಯಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ವ್ಯಕ್ತಿಗಳು ಈ ಸಂಸ್ಥೆಯ ಮೇಲೆ ಕಣ್ಣಿಟ್ಟಿದ್ದಾರೆ. ಈ ಸಂಸ್ಥೆಯನ್ನು ಹೈಜಾಕ್ ಮಾಡಲು ಬೇರೆ ಬೇರೆ ಸಿದ್ಧಾಂತಗಳ ಜನರು ಹೊಂಚು ಹಾಕಿ ಕಾಯುತ್ತಿದ್ದಾರೆ. ಪರಿಣಾಮವಾಗಿ ನಿಜವಾದ ಕನ್ನಡಾಭಿಮಾನಿಗಳು, ಸಾಹಿತ್ಯಾಭಿಮಾನಿಗಳು ಈ ಸಂಸ್ಥೆಯಿಂದ ದೂರ ಸರಿಯುತ್ತಿದ್ದಾರೆ. ಕನ್ನಡದ ಮೇಲೆ ನಿಜವಾದ ಕಾಳಜಿಯಿರುವವರು ಯಾವ ಕಾರಣಕ್ಕೂ ಕಸಾಪದಿಂದ ದೂರ ಸರಿಯಬಾರದು. ಕನ್ನಡ ನಾಡು, ನುಡಿ, ಸಂಸ್ಕೃತಿಯ ಕುರಿತಂತೆ ಕಾಳಜಿಯಿರುವ ಎಲ್ಲ ಸಹೃದಯಿಗಳು ಸಂಘಟಿತರಾಗಿ ಕಸಾಪ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಆಗ ಮಾತ್ರ ಕಸಾಪಕ್ಕೆ ಯೋಗ್ಯ ನೇತೃತ್ವ ಸಿಕ್ಕಿ, ಅದು ತನ್ನ ಉದ್ದೇಶವನ್ನು ಸಾಧಿಸುವುದಕ್ಕೆ ಸಾಧ್ಯ. ಕನ್ನಡ ನಾಡು, ನುಡಿಯ ಹಿತಾಸಕ್ತಿಯ ಪ್ರಶ್ನೆ ಬಂದಾಗ ಸರಕಾರಕ್ಕೆ ಸೆಡ್ಡು ಹೊಡೆಯುವ ಸ್ವಂತಿಕೆಯನ್ನು ಕಸಾಪ ಕಳೆದುಕೊಳ್ಳದಂತೆ ಅದನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಸಕಲ ಕನ್ನಡಿಗರದ್ದಾಗಿದೆ.