ಸುಟ್ಟ ಬೂದಿಯಿಂದ ತಲೆಯೆತ್ತಿದ ನ್ಯಾಯ

ನ್ಯಾಯಮೂರ್ತಿ ಯಶವಂತ್ ವರ್ಮಾ
ದಿಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ನ್ಯಾ.ಯಶವಂತ್ ವರ್ಮಾ ಅವರ ಗೋದಾಮಿನಲ್ಲಿ ಸುಟ್ಟದ್ದು ಬರೇ ನೋಟುಗಳಷ್ಟೇ ಆಗಿರಲಿಲ್ಲ. ಈ ದೇಶದ ನ್ಯಾಯ ವ್ಯವಸ್ಥೆಯೇ ಬೆಂಕಿಗೆ ಸಿಲುಕಿ ಬೂದಿಯಾಗಿತ್ತು. ಆ ಬೂದಿಯಿಂದ ನ್ಯಾಯ ವ್ಯವಸ್ಥೆಯ ಅವಶೇಷಗಳನ್ನು ಹುಡುಕಿ ತೆಗೆದು ಅದರ ಪೋಸ್ಟ್ ಮಾರ್ಟಂ ನಡೆಸುವುದು ಅತ್ಯಗತ್ಯವಾಗಿತ್ತು. ಇದೀಗ ಆ ಸುಟ್ಟ ಬೂದಿಯಿಂದ ಆಯ್ದ ಆವಶೇಷಗಳ ಮರಣೋತ್ತರ ವರದಿ ಹೊರ ಬಿದ್ದಿದೆ. ದಿಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಮನೆಯಲ್ಲಿ ನಗದು ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಲೋಕಸಭೆಯ ಸ್ಪೀಕರ್ ನೇಮಿಸಿದ್ದ ತನಿಖಾ ಸಮಿತಿಯ ವರದಿ ಬುಧವಾರ ಸಂಸತ್ತಿನ ಎರಡೂ ಸದನಗಳಲ್ಲಿ ಮಂಡನೆಯಾಗಿದೆ. ವರದಿಯ ಪ್ರಕಾರ, ಅವರ ವಿರುದ್ಧದ ಮೂರೂ ಆರೋಪಗಳು ಸಾಬೀತಾಗಿವೆ. ಮುಖ್ಯವಾಗಿ ಅವರ ನಿವಾಸದ ಗೋದಾಮಿನಲ್ಲಿ ಹಣ ಸಿಕ್ಕಿರುವುದು ಹೌದು ಎಂದು ವರದಿ ಹೇಳುತ್ತಿದೆ. ಆ ಹಣದ ಮೂಲವನ್ನು ವಿವರಿಸುವಲ್ಲಿ ವರ್ಮಾ ಅವರು ಸಂಪೂರ್ಣ ವಿಫಲರಾಗಿದ್ದಾರೆ.
2025ರ ಮಾರ್ಚ್ನಲ್ಲಿ ನಾಟಕೀಯ ಸನ್ನಿವೇಶವೊಂದರಲ್ಲಿ ನ್ಯಾ. ಯಶವಂತ್ ವರ್ಮಾ ಅವರ ಭ್ರಷ್ಟ ವ್ಯವಹಾರ ಬೆಳಕಿಗೆ ಬಂತು. ಹೊಸದಿಲ್ಲಿಯ ತುಘಲಕ್ ಕ್ರೆಸೆಂಟ್ನಲ್ಲಿರುವ ಅವರ ಅಧಿಕೃತ ನಿವಾಸದಲ್ಲಿ ಬೆಂಕಿ ಆಕಸ್ಮಿಕವೊಂದು ಸಂಭವಿಸಿತು. ಅಗ್ನಿಶಾಮಕ ದಳ ಅವರ ನಿವಾಸಕ್ಕೆ ಬೆಂಕಿ ನಂದಿಸುವುದಕ್ಕೆಂದು ಧಾವಿಸಿತು. ನಂದಿಸುವ ಕಾರ್ಯಾಚರಣೆ ಜಾರಿಯಲ್ಲಿರುವಾಗಲೇ ಕೊಠಡಿಯೊಂದರಲ್ಲಿ ಅರೆಸುಟ್ಟ, ಒದ್ದೆಯಾದ ಸ್ಥಿತಿಯಲ್ಲಿದ್ದ 500 ರೂ. ಮುಖಬೆಲೆಯ ನೋಟಿನ ಕಂತೆಗಳನ್ನು ಸಿಬ್ಬಂದಿ ಗಮನಿಸಿದರು. ಆ ಸಿಬ್ಬಂದಿಯ ಮೂಲಕವೇ ಇದು ಹೊರಜಗತ್ತಿಗೂ ತಿಳಿಯಿತು. ಮಾಧ್ಯಮಗಳ ಮೂಲಕ ಅದು ಭಾರೀ ವಿವಾದವನ್ನು ಎಬ್ಬಿಸಿತು. ಚರ್ಚೆ ತೀವ್ರವಾದಾಗ, 2025ರ ಮಾರ್ಚ್ 22ರಂದು ಸುಪ್ರೀಂಕೋರ್ಟ್ ತನಿಖೆಗಾಗಿ ಮೂವರು ಸದಸ್ಯರ ಆಂತರಿಕ ಸಮಿತಿಯನ್ನು ನೇಮಕ ಮಾಡುವುದು ಅನಿವಾರ್ಯವಾಯಿತು. ಅಷ್ಟೇ ಅಲ್ಲ, ನ್ಯಾ. ವರ್ಮಾ ಅವರಿಗೆ ಯಾವುದೇ ರೀತಿಯ ನ್ಯಾಯಾಂಗದ ಕೆಲಸವನ್ನು ಒಪ್ಪಿಸದಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿತು. ಅದೇ ವರ್ಷ ಅವರು ಅಲಹಾಬಾದ್ ಹೈಕೋರ್ಟ್ಗೆ ವರ್ಗವಾದರು. ವರದಿಯಲ್ಲಿ ವರ್ಮಾ ಅವರ ಆರೋಪ ಮೇಲ್ನೋಟಕ್ಕೆ ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲೇ ಅವರ ರಾಜೀನಾಮೆಗೆ ಸುಪ್ರೀಂಕೋರ್ಟ್ ಸೂಚನೆ ನೀಡಿತು. ಆದರೆ ಸುಪ್ರೀಂಕೋರ್ಟ್ನ ಕ್ರಮವನ್ನೇ ವರ್ಮಾ ಅವರು ಪ್ರಶ್ನಿಸಿದರು. ಕಳೆದ ವರ್ಷ ಆಗಸ್ಟ್ನಲ್ಲಿ ಈ ಬಗ್ಗೆ ತನಿಖೆ ನಡೆಸುವುದಕ್ಕೆ ಲೋಕಸಭೆಯ ಸಭಾಧ್ಯಕ್ಷರು ಮೂವರು ಸದಸ್ಯರ ಸಮಿತಿಯನ್ನು ರಚಿಸಿದರು. ತನ್ನ ವಾಗ್ದಂಡನೆಗಾಗಿ ಸಮಿತಿಯನ್ನು ರಚಿಸುವ ಲೋಕಸಭಾ ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಿ ವರ್ಮಾ ಅವರು ಸಲ್ಲಿಸಿದ ಅರ್ಜಿಯನ್ನೂ ಕಳೆದ ಜನವರಿಯಲ್ಲಿ ಸುಪ್ರೀಂಕೋರ್ಟ್ ವಜಾಗೊಳಿಸಿತ್ತು.
ಸದ್ಯ ಸ್ಪೀಕರ್ ನೇಮಿಸಿದ್ದ ತನಿಖಾ ಸಮಿತಿಯ ವರದಿಯು ನ್ಯಾ. ವರ್ಮಾ ಅವರು ದೋಷಿ ಎನ್ನುವುದನ್ನು ಸ್ಪಷ್ಟವಾಗಿ ಘೋಷಿಸಿದೆಯಾದರೂ, ಈ ಸಂದರ್ಭದಲ್ಲಿ ಸಂಭವಿಸಿದ ಲೋಪಗಳನ್ನೂ ಅದು ಎತ್ತಿ ತೋರಿಸಿದೆ. 2025ರ ಮಾರ್ಚ್ 14ರಂದು ಬೆಂಕಿ ಅವಘಡ ಸಂಭವಿಸಿದ್ದು, ಕೊಠಡಿಯಲ್ಲಿ ಬೂದಿಯಾಗಿದ್ದ, ಅರೆಸುಟ್ಟ ನೋಟಿನ ಕಂತೆಗಳನ್ನು ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಕಣ್ಣಾರೆ ಕಂಡಿದ್ದಾರೆ. ಹಾಗೆಂದು ಅವರು ಸಮಿತಿಯ ಮುಂದೆ ಹೇಳಿಕೆಯನ್ನೂ ನೀಡಿದ್ದಾರೆ. ಇಷ್ಟು ಪ್ರಮಾಣದ ಅನುಮಾನಾಸ್ಪದ ಹಣದ ಬಗ್ಗೆ ಸಿಬ್ಬಂದಿ ಹೇಳಿಕೆ ನೀಡಿದ ಬಳಿಕವೂ ಇದರ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಯಾಕೆ ತಕ್ಷಣ ಕ್ರಮವನ್ನು ತೆಗೆದುಕೊಳ್ಳಲಿಲ್ಲ ಎನ್ನುವ ಪ್ರಶ್ನೆ ಉತ್ತರವಿಲ್ಲದೆ ಬಿದ್ದುಕೊಂಡಿದೆ. ಇಂದು ಸುಟ್ಟ ನೋಟುಗಳ ಯಾವುದೇ ಅವಶೇಷಗಳು ಸಾಕ್ಷ್ಯಗಳಾಗಿ ಸಮಿತಿಯ ಮುಂದಿಲ್ಲ. ಫೋಟೊಗಳು ಮತ್ತು ಇಲೆಕ್ಟ್ರಾನಿಕ್ಸ್ ಸಾಕ್ಷ್ಯಗಳಷ್ಟೇ ಅದರ ಮುಂದಿವೆ. ನೋಟುಗಳ ಒಟ್ಟು ಮೌಲ್ಯದ ಬಗ್ಗೆಯೂ ಮಾಹಿತಿಯಿಲ್ಲ. ನೋಟುಗಳ ಜಪ್ತಿ ಮಾಡಲಾಗಿಲ್ಲ. ಪಂಚನಾಮೆಯೂ ನಡೆದಿಲ್ಲ. ನೋಟುಗಳ ಅವಶೇಷಗಳ ಯಾವುದೇ ಭೌತಿಕ ಪರಿಶೀಲನೆ ನಡೆದಿಲ್ಲ. ಇಷ್ಟೊಂದು ದೊಡ್ಡ ಲೋಪ ಸಂಭವಿಸಲು ಹೇಗೆ ಸಾಧ್ಯ? ಅಗ್ನಿಶಾಮಕ ಸಿಬ್ಬಂದಿ ನೀಡಿದ ಹೇಳಿಕೆಯನ್ನು ಸಂಬಂಧ ಪಟ್ಟ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಂಡು ತಕ್ಷಣ ಸಾಕ್ಷ್ಯವನ್ನು ಉಳಿಸಿ ಅವುಗಳ ಪಂಚನಾಮೆ ನಡೆಸಿದ್ದರೆ, ವರ್ಮಾ ಅವರು ನುಣುಚಿಕೊಳ್ಳುವುದು ಸುಲಭವಿರಲಿಲ್ಲ.
ಇದೇ ಸಂದರ್ಭದಲ್ಲಿ, ವರ್ಮಾ ಅವರು ಆರಂಭದಲ್ಲಿ ಹಣ ಅಲ್ಲಿ ಹೇಗೆ ಬಂತು ಎನ್ನುವ ಬಗ್ಗೆ ತಮಗಾಗಲಿ, ತಮ್ಮ ಕುಟುಂಬಕ್ಕಾಗಲಿ ಮಾಹಿತಿಯಿಲ್ಲ ಎಂದಿದ್ದರು. ಬಳಿಕ ತಮ್ಮ ಹೇಳಿಕೆಯನ್ನು ಬದಲಿಸಿದ್ದರು. ‘ನೋಟುಗಳನ್ನು ಜಪ್ತಿ ಮಾಡಿಲ್ಲ’ ಎನ್ನುವುದನ್ನೇ ತಮಗೆ ಪೂರಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದರು. ನಗದನ್ನು ಅಲ್ಲಿ ಇಡುವ ಮೂಲಕ ತನ್ನ ವಿರುದ್ಧ ಪಿತೂರಿ ಮಾಡಲಾಗಿದೆ ಎಂದೂ ಅವರು ಆರೋಪಿಸಿದ್ದರು. ಅಕ್ರಮ ನಡೆಸಿರುವ ಆರೋಪ ಮಾತ್ರವಲ್ಲ, ಸಾಕ್ಷ್ಯವನ್ನು ನಾಶ ಮಾಡಿದ ಆರೋಪವೂ ವರ್ಮಾ ಮೇಲಿದೆ. ಇದನ್ನು ಯಾವುದೇ ಸಾಮಾನ್ಯ ವ್ಯಕ್ತಿಯೊಬ್ಬ ಮಾಡಿದ್ದರೆ ಅದು ಮಹದಪರಾಧವಾಗಿ ಬಿಡುತ್ತಿತ್ತು. ಹೈಕೋರ್ಟ್ನ ನ್ಯಾಯಾಧೀಶರೊಬ್ಬರು ನಡೆಸಿದ ಅಕ್ರಮ ಇದಾಗಿರುವುದರಿಂದಲೇ ಅವರು ಇನ್ನೂ ಕಾನೂನಿನ ಉರುಳಿಗೆ ಬೀಳದೆ ಸ್ವತಂತ್ರವಾಗಿದ್ದಾರೆ. ಇದೀಗ ತನಿಖಾ ವರದಿ ನ್ಯಾ. ವರ್ಮಾ ಅವರನ್ನು ದೋಷಿ ಎಂದು ಘೋಷಿಸಿದೆಯಾದರೂ, ಅವರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಬೇಕು ಎನ್ನುವುದರ ಕುರಿತಂತೆ ಸರಕಾರ ಗೊಂದಲದಲ್ಲಿದೆ. ಯಾಕೆಂದರೆ, ವರ್ಮಾ ಅವರು ಈಗಾಗಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ದೋಷಿ ಎಂದು ಕಂಡು ಬಂದರೂ ಅವರನ್ನು ಹುದ್ದೆಯಿಂದ ವಜಾಗೊಳಿಸುವ ಪ್ರಸ್ತಾವವನ್ನು ಇನ್ನು ಮುಂದೆ ಮಂಡಿಸಲು ಸಾಧ್ಯವಿಲ್ಲ.
ವರ್ಮಾ ಪ್ರಕರಣವನ್ನು ಮುಂದಿಟ್ಟುಕೊಂಡು, ವಜಾಗೊಳಿಸುವ ಪ್ರಕ್ರಿಯೆಯನ್ನು ಎದುರಿಸುತ್ತಿರುವ ನ್ಯಾಯಾಧೀಶರ ರಾಜೀನಾಮೆ ಸ್ವೀಕರಿಸುವ ಅಧಿಕಾರವನ್ನು ರಾಷ್ಟ್ರಪತಿಗಿಂತ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ನೀಡುವುದು ಒಳಿತು ಎಂದು ಹಲವು ಸಂವಿಧಾನ ತಜ್ಞರು ಅಭಿಪ್ರಾಯ ಪಡುತ್ತಾರೆ. ಈ ನಿಟ್ಟಿನಲ್ಲಿ ಸಂವಿಧಾನ ತಿದ್ದುಪಡಿಯ ಅಗತ್ಯವಿದೆ ಎಂದು ಅವರು ಭಾವಿಸುತ್ತಾರೆ. ನ್ಯಾಯಾಧೀಶರು ರಾಜೀನಾಮೆ ನೀಡಿದ್ದರೂ ಕಾಯ್ದೆಯಡಿಯಲ್ಲಿ ರಚಿಸಲಾದ ತನಿಖಾ ಸಮಿತಿಯು ಸಲ್ಲಿಸಿದ ವರದಿಯನ್ನು ಸಂಸತ್ತು ಚರ್ಚಿಸಲು ಬಯಸಿದರೆ ಅದಕ್ಕೆ ಅವಕಾಶ ನೀಡುವಂತೆ ನ್ಯಾಯಾಧೀಶರ ವಿಚಾರಣಾ ಕಾಯ್ದೆಯನ್ನು ಸೂಕ್ತವಾಗಿ ತಿದ್ದುಪಡಿ ಮಾಡಬೇಕಾಗಿದೆ. ಹಾಗೆಯೇ ನ್ಯಾ. ವರ್ಮಾ ವಿರುದ್ಧದ ಆರೋಪಗಳು ಸಾಬೀತಾಗಿರುವುದರಿಂದ ಅವರ ವಿರುದ್ಧ ಕ್ರಿಮಿನಲ್ ಪ್ರಕ್ರಿಯೆ ಆರಂಭಿಸುವುದಕ್ಕೆ ಅವಕಾಶವಿದೆಯೇ ಎನ್ನುವುದರ ಬಗ್ಗೆಯೂ ಸರಕಾರ ಗಂಭೀರವಾಗಿ ಯೋಚಿಸಬೇಕು.
ನ್ಯಾ. ವರ್ಮಾ ಅವರ ನಿವಾಸದಲ್ಲಿ ಪತ್ತೆಯಾದ ಹಣ ಭ್ರಷ್ಟ ಮೂಲದಿಂದ ಬಂದಿರುವುದು ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಹೀಗಿರುವಾಗ, ಅವರು ತಮ್ಮ ಅಧಿಕಾರಾವಧಿಯಲ್ಲಿ ನೀಡಿದ ತೀರ್ಪುಗಳ ವಿಶ್ವಾಸಾರ್ಹತೆಯ ಗತಿಯೇನು? ಅವರ ತೀರ್ಪುಗಳಿಂದ ನ್ಯಾಯ ವ್ಯವಸ್ಥೆಗೆ ಆಗಿರುವ ಹಾನಿಗೆ ಪರಿಹಾರವೇನು? ಎನ್ನುವುದರ ಬಗ್ಗೆಯೂ ಚರ್ಚೆ ನಡೆಯಬೇಕಾಗಿದೆ.






