ಪೊಲೀಸ್ ಎನ್ಕೌಂಟರ್ಗೆ ಬಲಿಯಾದ ನ್ಯಾಯ ವ್ಯವಸ್ಥೆ

ಸಾಂದರ್ಭಿಕ ಚಿತ್ರ | PC : ANI
ಎರಡು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಪೈಶಾಚಿಕ ಕೃತ್ಯವೊಂದು ನಾಡಿನಾದ್ಯಂತ ಚರ್ಚೆಯ ವಿಷಯವಾಯಿತು. ಮನೆ ಬಳಿ ಆಟವಾಡುತ್ತಿದ್ದ ಐದು ವರ್ಷದ ಬಾಲಕಿಗೆ ಚಾಕಲೇಟ್ ಕೊಡಿಸುವ ಆಮಿಷವೊಡ್ಡಿದ ದುಷ್ಕರ್ಮಿಯೊಬ್ಬ, ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಗೈದು ಭೀಕರವಾಗಿ ಕೊಂದು ಹಾಕಿದ್ದ. ಪುಟ್ಟ ಮಗುವಿನ ಮೇಲೆ ಆತ ಎಸಗಿದ್ದ ಬರ್ಬರ ಕೃತ್ಯಕ್ಕೆ ನಾಡಿಗೆ ನಾಡೇ ಬೆಚ್ಚಿ ಬಿದ್ದಿತ್ತು. ಇಂತಹ ಕೃತ್ಯಗಳು ಉತ್ತರ ಭಾರತದಿಂದ ಆಗಾಗ ವರದಿಯಾಗುತ್ತವೆಯಾದರೂ, ಕರ್ನಾಟಕದ ಪಾಲಿಗೆ ಇದು ಎದೆ ಝಲ್ಲೆನ್ನಿಸುವ ಘಟನೆಯಾಗಿದೆ. ಹಾಗೆಂದು ಇಲ್ಲಿ ಅತ್ಯಾಚಾರ, ಕೊಲೆಗಳು ನಡೆದೇ ಇಲ್ಲ ಎಂದಲ್ಲ. ಕೆಲವು ವರ್ಷಗಳ ಹಿಂದೆ ದಾನಮ್ಮ ಎನ್ನುವ ದಲಿತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಭಾರೀ ಸುದ್ದಿ ಮಾಡಿತ್ತು. ವಿವಿಧ ಸಂಘಟನೆಗಳು ಇದರ ವಿರುದ್ಧ ಬೀದಿಗಿಳಿದು ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದವು. ದಾನಮ್ಮ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಬೇಕಾದರೆ ದಲಿತ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ಮಾಡಬೇಕಾಯಿತು. ಯಾವ ಹಿಂದೂ ಸಂಘಟನೆಗಳೂ ದಾನಮ್ಮನ ಕೊಲೆ ಆರೋಪಿಗಳ ವಿರುದ್ಧ ಪ್ರತಿಭಟನೆ ನಡೆಸಿರಲಿಲ್ಲ. ಆಕೆಯ ಸಾವಿಗೆ ಕಾಟಾಚಾರಕ್ಕೂ ಕಣ್ಣೀರು ಸುರಿಸಿರಲಿಲ್ಲ. ಯಾವ ಸ್ವಾಮೀಜಿಗಳೂ ಖಂಡಿಸಿರಲಿಲ್ಲ. ದಾನಮ್ಮನ ವಯಸ್ಸು ಹದಿನಾಲ್ಕು ಇದ್ದಿದ್ದರೆ, ಹುಬ್ಬಳ್ಳಿಯಲ್ಲಿ ಅತ್ಯಾಚಾರಕ್ಕೊಳಗಾದ ಮಗುವಿಗೆ ಬರೇ ಐದು ವರ್ಷ. ಈ ಪುಟ್ಟ ಮಗುವಿನ ಮೇಲೆ ಅತ್ಯಾಚಾರಗೈದು, ಕೊಲ್ಲಬೇಕಾದರೆ ಅವನೆಂತಹ ಸೈಕೋಪಾತ್ ಆಗಿರಬೇಕು? ಘಟನೆ ಬಹಿರಂಗವಾಗುತ್ತಿದ್ದಂತೆಯೇ ಸ್ಥಳೀಯರು ಸಹಜವಾಗಿಯೇ ಆಕ್ರೋಶಗೊಂಡಿದ್ದರು.
ಈ ಪ್ರಕರಣ ತಿರುವು ಪಡೆದದ್ದು ಪೊಲೀಸರ ಕಾರ್ಯಾಚರಣೆಯಿಂದಾಗಿ. ಪೊಲೀಸರು ಈ ಪ್ರಕರಣವನ್ನು ಅದೆಷ್ಟು ಬೇಗ ಮುಗಿಸಿದರು ಎಂದರೆ, ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಿ, ಆತ ಅಪರಾಧಿ ಎನ್ನುವುದನ್ನು ಸಾಬೀತು ಪಡಿಸಿ ಮರಣದಂಡನೆ ಶಿಕ್ಷೆಯನ್ನು ನೀಡಿಯೂ ಬಿಟ್ಟರು. ಬಿಹಾರ ಮೂಲದ ಕಾರ್ಮಿಕ ಆರೋಪಿಯೆನ್ನುವುದು ಸಿಸಿ ಕ್ಯಾಮರಾದಿಂದ ಪೊಲೀಸರು ಪತ್ತೆ ಹಚ್ಚಿದ್ದರು. ಆರೋಪಿಯ ಹಿನ್ನೆಲೆ ಪೊಲೀಸರಿಗೆ ವಿಚಾರಣೆಯ ದಾರಿಯನ್ನು ಸುಲಭ ಮಾಡಿಕೊಟ್ಟಿತು. ಆರೋಪಿಯನ್ನು ಪೊಲೀಸರು ಬಂಧಿಸಲು ತೆರಳಿದಾಗ ಆತ ಪೊಲೀಸರೆಡೆಗೆ ಕಲ್ಲುತೂರಾಟ ನಡೆಸಿದ್ದ. ಈ ಸಂದರ್ಭದಲ್ಲಿ ಪೊಲೀಸರಿಗೂ ಗಾಯಗಳಾಗಿತ್ತಂತೆ. ‘ಅನಿವಾರ್ಯ’ವಾಗಿ ಪೊಲೀಸರು ಆರೋಪಿಯ ಮೇಲೆ ಗುಂಡು ಹಾರಿಸಬೇಕಾಯಿತು. ಆ ಎನ್ಕೌಂಟರ್ನಲ್ಲಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಾರ್ಯಾಚರಣೆಯ ಸಂದರ್ಭದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳುವ ಎಲ್ಲ ಅಧಿಕಾರವೂ ಪೊಲೀಸರಿಗಿದೆ. ತೀರಾ ಅನಿವಾರ್ಯ ಸಂದರ್ಭದಲ್ಲಿ ಪೊಲೀಸರು ತಮ್ಮ ಕೋವಿಯನ್ನು ಬಳಸಬಹುದು. ಆದರೆ ಅದಕ್ಕೂ ಕೆಲವು ನಿಯಮಗಳಿವೆ. ನೇರವಾಗಿ ಎದೆಗೆ ಗುಂಡಿಕ್ಕದೆ ಕಾಲಿಗೆ ಗುಂಡಿಕ್ಕಬೇಕು. ಆದರೆ ಇಲ್ಲಿ ಪೊಲೀಸರ ಗುಂಡು ಸೊಂಟದ ಮೇಲಕ್ಕೆ ಬಿದ್ದಿದೆ. ಪರಿಣಾಮವಾಗಿ ಆತ ಸತ್ತಿದ್ದಾನೆ. ಆರೋಪಿಗೆ ಸ್ಥಳದಲ್ಲೇ ಶಿಕ್ಷೆಯಾಗಿರುವುದು ಆಕ್ರೋಶಗೊಂಡ ಸ್ಥಳೀಯರಿಗೆ ಸಮಾಧಾನ ಕೊಟ್ಟಿದೆ. ಅವರು ಸಹಜವಾಗಿಯೇ ಪೊಲೀಸರಿಗೆ ಜೈಕಾರ ಕೂಗಿದ್ದಾರೆ. ಸತ್ತ ಆರೋಪಿಗೆ ಯಾವುದೇ ಧಾರ್ಮಿಕ, ಸಾಮಾಜಿಕ ಹಿನ್ನೆಲೆ ಇಲ್ಲದೇ ಇರುವುದರಿಂದ, ಆತನಿಗಾಗಿ ಮಿಡಿಯುವವರು ಯಾರೂ ಇದ್ದಿರಲಿಲ್ಲ. ಕನಿಷ್ಟ ಆತನೇ ಆ ಕೃತ್ಯವನ್ನು ಎಸಗಿದ್ದಾನೆ ಎನ್ನುವುದು ನಿರ್ಧಾರವಾಗುವ ಮೊದಲೇ ಆತನಿಗೆ ಮರಣದಂಡನೆ ಶಿಕ್ಷೆಯನ್ನು ನೀಡುವ ಅಧಿಕಾರ ನಿಮಗೆ ಯಾರು ನೀಡಿದರು? ಎನ್ನುವುದನ್ನು ಅಲ್ಲಿ ಆತನ ಪರವಾಗಿ ಕೇಳುವವರು ಯಾರೂ ಇರಲಿಲ್ಲ.
ಮುಖ್ಯವಾಗಿ ಆರೋಪಿಯ ಬಳಿ ಯಾವುದೇ ಮಾರಕ ಶಸ್ತ್ರಾಸ್ತ್ರ ಇರಲಿಲ್ಲ. ಕನಿಷ್ಠ ಚೂರಿಯಂತಹ ಆಯುಧಗಳಾದರೂ ಇದ್ದಿದ್ದರೆ ಪೊಲೀಸರು ಹಾರಿಸಿದ ಗುಂಡನ್ನು ಸಮರ್ಥಿಸಬಹುದಿತ್ತು. ಕಲ್ಲು ತೂರಾಟ ನಡೆಸಿದ ಕಾರಣಕ್ಕಾಗಿ ಪ್ರತಿಯಾಗಿ ಆತನ ಎದೆಗೆ ಗುಂಡು ಹಾರಿಸುವುದು ಎಷ್ಟರ ಮಟ್ಟಿಗೆ ಸಮರ್ಥನೀಯ ಎನ್ನುವುದನ್ನು ಪೊಲೀಸ್ ವರಿಷ್ಠರೇ ವಿವರಿಸಬೇಕು. ಆ ಅತ್ಯಾಚಾರಿ ಎಲ್ಲ ರೀತಿಯಲ್ಲೂ ಗಲ್ಲುಶಿಕ್ಷೆಗೆ ಅರ್ಹನಾಗಿದ್ದಾನೆ. ಆದರೆ ಅದನ್ನು ನಿರ್ಧರಿಸಬೇಕಾದುದು ನ್ಯಾಯಾಲಯ. ಆದರೆ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ನಿಧಾನವಾಗಬಹುದು. ಹಾಗೆಂದು, ಪೊಲೀಸರು ಯಾವುದೇ ವಿಚಾರಣೆ ನಡೆಸದೆ ಸ್ಥಳದಲ್ಲೇ ಆತನಿಗೆ ಶಿಕ್ಷೆ ವಿಧಿಸುವಂತೆ ಇಲ್ಲ. ಪೊಲೀಸರ ಎನ್ಕೌಂಟರ್ನಿಂದ ಆ ಮಗುವಿನ ಅತ್ಯಾಚಾರ ಕೊಲೆ ತನಿಖೆಯ ಹಾದಿಯೆಲ್ಲ ಏಕಾಏಕಿ ಮುಚ್ಚಿ ಹೋಯಿತು. ಆ ಕೃತ್ಯದಲ್ಲಿ ಆತನ ಜೊತೆಗೆ ಇನ್ನಾರಾದರೂ ಶಾಮೀಲಾಗಿದ್ದರೆ ಅಥವಾ ಆ ಕೃತ್ಯವನ್ನು ಬೇರೆ ಯಾರೋ ಎಸಗಿದ್ದರೆ ಅದನ್ನು ತಿಳಿಯುವ ದಾರಿ ಎಲ್ಲಿದೆ? ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಸೌಜನ್ಯಾ ಎನ್ನುವ ತರುಣಿಯನ್ನು ಭೀಕರವಾಗಿ ಅತ್ಯಾಚಾರಗೈದು ಕೊಲೆ ಮಾಡಿದ ಪ್ರಕರಣದಲ್ಲಿ ಸಂತೋಷ್ ಎಂಬ ಆರೋಪಿಯನ್ನು ಎಷ್ಟೋ ವರ್ಷಗಳ ಬಳಿಕ ನ್ಯಾಯಾಲಯ ನಿರಪರಾಧಿ ಎಂದು ಘೋಷಿಸಿ ಬಿಡುಗಡೆ ಮಾಡಿತು. ಆತನನ್ನು ಬಂಧನ ಮಾಡುವ ಬದಲು ಪೊಲೀಸರು ಅಲ್ಲೇ ಗುಂಡಿಟ್ಟು ಕೊಂದಿದ್ದರೆ ಸೌಜನ್ಯ ಪ್ರಕರಣ ಶಾಶ್ವತವಾಗಿ ಮುಚ್ಚಿ ಹೋಗುತ್ತಿತ್ತಲ್ಲವೆ? ಬಹುಶಃ ಹುಬ್ಬಳ್ಳಿಯಲ್ಲಿ ಮಗುವಿನ ಮೇಲೆ ನಡೆದ ಅತ್ಯಾಚಾರ, ಕೊಲೆಯನ್ನು ತನಿಖೆ ನಡೆಸಿ ಆರೋಪಿ ಯಾರು ಎನ್ನುವುದನ್ನು ನ್ಯಾಯಾಲಯದ ಮುಂದಿಡುವ ಹೊಣೆಗಾರಿಕೆಯಿಂದ ನುಣುಚಿಕೊಂಡಿರುವ ಪೊಲೀಸರು ಆತುರಾತುರವಾಗಿ ಆರೋಪಿಯನ್ನು ಸಾಯಿಸುವ ಮೂಲಕ, ಪ್ರಕರಣದ ತನಿಖೆಯ ಹಾದಿಯನ್ನು ಮುಚ್ಚಿ ಹಾಕಿದರು. ಆತ ಮಗುವನ್ನು ಎತ್ತಿಕೊಂಡು ಹೋಗಿರುವುದು ಸಿಸಿ ಟಿವಿಯಲ್ಲಿ ದಾಖಲಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆತ ಆ ಮಗುವನ್ನು ಅಪಹರಿಸಿ ಇನ್ನಾರಿಗೋ ನೀಡಿದ್ದಿದ್ದರೆ? ಇತರ ದುಷ್ಕರ್ಮಿಗಳು ಕೃತ್ಯದಲ್ಲಿ ಶಾಮೀಲಾಗಿದ್ದರೆ? ಈ ಎನ್ಕೌಂಟರ್ನಿಂದಾಗಿ ಅವರೆಲ್ಲರೂ ಕಾನೂನಿನ ಕುಣಿಕೆಯಿಂದ ಪಾರಾದಂತೆಯೇ ಅಲ್ಲವೆ?
ಸರಿ. ಪೊಲೀಸರು ಗುಂಡು ಹಾರಿಸಲೇ ಬೇಕಾದ ಅನಿವಾರ್ಯ ಸ್ಥಿತಿಗೆ ಸಿಲುಕಿದ್ದರು ಎಂದೇ ಇಟ್ಟುಕೊಳ್ಳೋಣ. ಆದರೆ ಸರಕಾರದ ಉನ್ನತ ಹುದ್ದೆಯಲ್ಲಿರುವ ಜನಪ್ರತಿನಿಧಿಗಳು ಅದನ್ನು ಸಂಭ್ರಮಿಸುವುದು ಎಷ್ಟು ಸರಿ? ಎನ್ಕೌಂಟರ್ ಮಾಡಿದ ಪೊಲೀಸ್ ಸಿಬ್ಬಂದಿಗೆ ಸಚಿವರೊಬ್ಬರು ಸಾರ್ವಜನಿಕವಾಗಿ ಸೆಲ್ಯೂಟ್ ನೀಡಿ ಗೌರವಿಸಿರುವುದು ಮಾಧ್ಯಮಗಳಲ್ಲಿ ವರದಿಯಾಯಿತು. ಅಷ್ಟೇ ಅಲ್ಲ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಎನ್ಕೌಂಟರ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ಹಲವರು ಪೊಲೀಸರ ಕೃತ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಇದು ಆಘಾತಕಾರಿಯಾಗಿದೆ. ಈ ಮೂಲಕ, ಎನ್ಕೌಂಟರ್ನ್ನು ಎಲ್ಲರೂ ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದಾರೆ. ಇದನ್ನು ಪೊಲೀಸರ ಸಾಹಸವಾಗಿ, ಹೆಗ್ಗಳಿಕೆಯಾಗಿ ಬಿಂಬಿಸುವ ಪ್ರಯತ್ನವನ್ನು ಮಾಡಿದ್ದಾರೆ. ಬಿಹಾರದ ಒಬ್ಬ ಕೂಲಿಕಾರ್ಮಿಕ ಈ ಕೃತ್ಯವನ್ನು ಎಸಗಿರುವುದರಿಂದಷ್ಟೇ ಆರೋಪಿಗೆ ತಕ್ಷಣ ಶಿಕ್ಷೆಯಾಗಿದೆ. ಆದರೆ ಸಮಾಜದ ಉನ್ನತ ಜಾತಿ, ವರ್ಗದ ಜನರು ಈ ಕೃತ್ಯವನ್ನು ಎಸಗಿದರೆ ಅವರಿಗೆ ಇದೇ ರೀತಿಯಲ್ಲಿ ಶಿಕ್ಷೆಯಾಗುತ್ತದೆಯೆ? ಜಮ್ಮುವಿನಲ್ಲಿ ಆಸೀಫಾ ಎನ್ನುವ ಮಗುವನ್ನು ದೇವಸ್ಥಾನದ ಆವರಣದಲ್ಲಿ ಒಂದು ಗುಂಪು ಸಾಮೂಹಿಕವಾಗಿ ಅತ್ಯಾಚಾರಗೈದು, ಬರ್ಬರವಾಗಿ ಕೊಂದು ಹಾಕಿತು. ಈ ಆರೋಪಿಗಳನ್ನು ಬಹಿರಂಗವಾಗಿ ಸಮರ್ಥಿಸಿಕೊಳ್ಳಲಾಯಿತು ಮಾತ್ರವಲ್ಲ, ಅವರ ಬಂಧನವಾದಾಗ ಅದನ್ನು ವಿರೋಧಿಸಿ ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಸಾಮೂಹಿಕ ಅತ್ಯಾಚಾರ, ಕೊಲೆಗಳನ್ನು ನಡೆಸಿದ ಆರೋಪದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 11 ಆರೋಪಿಗಳನ್ನು ಸರಕಾರವೇ ಮುಂದೆ ನಿಂತು ಬಿಡುಗಡೆ ಮಾಡಿತು. ಜೈಲಿನಿಂದ ಬಿಡುಗಡೆಗೊಂಡ ಅವರನ್ನು ಮಹಿಳೆಯರೇ ಆರತಿ ಎತ್ತಿ, ಹೂಹಾರ ಹಾಕಿ ಸ್ವಾಗತಿಸಿದರು. ಹುಬ್ಬಳ್ಳಿಯಲ್ಲಿ ಐದು ವರ್ಷದ ಮಗುವನ್ನು ಕೊಂದು ಹಾಕಿದ ಆರೋಪಿ ಸಂಘಪರಿವಾರದ ಕಾರ್ಯಕರ್ತನೋ, ಉನ್ನತ ಜಾತಿಗೆ ಸೇರಿದವನೋ ಆಗಿದ್ದಿದರೆ ಅಷ್ಟು ಶೀಘ್ರದಲ್ಲಿ ನ್ಯಾಯ ತೀರ್ಮಾನವಾಗಿ ಬಿಡುತ್ತಿತ್ತೆ? ಆಗಿದ್ದರೆ ಅದನ್ನು ಜನರು ಸಂಭ್ರಮದಿಂದ ಸ್ವಾಗತಿಸುತ್ತಿದ್ದರೆ? ಹುಬ್ಬಳ್ಳಿ ಎನ್ಕೌಂಟರ್ನಲ್ಲಿ ನಿಜಕ್ಕೂ ಬಲಿಯಾಗಿರುವುದು ನಮ್ಮ ನ್ಯಾಯ ವ್ಯವಸ್ಥೆ ಎನ್ನುವುದರಲ್ಲಿ ಎರಡು ಮಾತಿಲ್ಲ.