ಕೆಪಿಎಸ್ಸಿ: ನೇಮಕಾತಿ ಅಕ್ರಮಕ್ಕೆ ಕೊನೆ ಎಂದು?

Photo: facebook.com/kpscblr
ಸರಕಾರಿ ಉದ್ಯೋಗ ಆಕಾಂಕ್ಷಿ ಯುವಕ-ಯುವತಿಯರಲ್ಲಿ ಭರವಸೆ ತುಂಬಬೇಕಾಗಿದ್ದ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ), ಯುವಸಮೂಹದ ಭ್ರಮನಿರಸನಕ್ಕೆ ಕಾರಣವಾಗಿರುವುದು ನಾಡಿನ ದುರಂತ. ಅಕ್ರಮಗಳಿಗೆ, ಸ್ವಜನ ಪಕ್ಷಪಾತಕ್ಕೆ ಮತ್ತು ಭ್ರಷ್ಟಾಚಾರಕ್ಕೆ ಈ ಆಯೋಗವು ಅನ್ವರ್ಥನಾಮ ಎಂಬಂತಾಗಿದೆ. ಈ ದುಃಸ್ಥಿತಿ ಇಂದು ನಿನ್ನೆಯದಲ್ಲ. ರಾಜ್ಯದಲ್ಲಿ ಸರಕಾರವನ್ನು ಮುನ್ನಡೆಸುವ ಪಕ್ಷಗಳು ಬದಲಾಗಿವೆ, ವ್ಯಕ್ತಿಗಳು ಬದಲಾಗಿದ್ದಾರೆ. ಆಯೋಗದ ಸದಸ್ಯರು ಮತ್ತು ಅಧ್ಯಕ್ಷರು ಬದಲಾಗಿದ್ದಾರೆ. ಆದರೆ ಆಯೋಗಕ್ಕೆ ಮೆತ್ತಿಕೊಂಡಿರುವ ಮಸಿ ಅಳಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ತೇಪೆ ಹಚ್ಚುವ ಕೆಲಸ ಆಗೊಮ್ಮೆ ಈಗೊಮ್ಮೆ ನಡೆದಿದೆಯಾದರೂ ಅದರಿಂದ ಯಾವುದೇ ಪ್ರಯೋಜನ ಆಗಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಇದೆ. ಆಯೋಗವು ಹೇಗೆ ಅಕ್ರಮಗಳ ಸುಳಿಗೆ ಸಿಲುಕಿದೆ ಎಂಬುದನ್ನು ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿವೆ ಎನ್ನಲಾದ ಅಕ್ರಮಗಳು ಮತ್ತೊಮ್ಮೆ ನಾಡಿನ ಮುಂದೆ ತೆರೆದಿಟ್ಟಿವೆ.
2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ಆಯೋಗ ನಡೆಸಿದ್ದ ಪರೀಕ್ಷೆಯಲ್ಲಿ ಎಸಗಲಾದ ಅಕ್ರಮಗಳಿಗೆ ಸಂಬಂಧಿಸಿದ ಬೆಳವಣಿಗೆಗಳಿಗೆ ಕೊನೆ ಎಂಬುದೇ ಇಲ್ಲವಾಗಿದೆ. 362 ಅಭ್ಯರ್ಥಿಗಳ ಆಯ್ಕೆಗೆ ಜರುಗಿದ ಪರೀಕ್ಷೆಯಲ್ಲಿ ನಡೆದ ಅಕ್ರಮಗಳು ಬಯಲಾಗಿ ಹದಿಮೂರು ವರ್ಷಗಳಾದರೂ ಪ್ರಕರಣಕ್ಕೆ ಇನ್ನೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಗೊಳ್ಳುತ್ತಲೇ ಅಕ್ರಮಗಳಿಗೆ ಸಂಬಂಧಿಸಿದ ಆರೋಪಗಳು ಹೊಗೆಯಾಡಲು ಶುರುವಾದವು. ಪರೀಕ್ಷೆ ಬರೆದಿದ್ದ ಅಭ್ಯರ್ಥಿಯೊಬ್ಬರು ಅಡ್ವೊಕೇಟ್ ಜನರಲ್ಗೆ ಈ ಕುರಿತು ದೂರು ನೀಡಿದ್ದರು. ಅಡ್ವೊಕೇಟ್ ಜನರಲ್ ಸೂಚನೆ ಮೇರೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ವಿಧಾನಸೌದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಅಕ್ರಮಗಳು ನಡೆದಿವೆ ಎಂಬ ಆರೋಪಗಳ ಬಗೆಗೆ ತನಿಖೆ ನಡೆಸುವ ಹೊಣೆಯನ್ನು ಸಿದ್ದರಾಮಯ್ಯ ನೇತೃತ್ವದ ಸರಕಾರವು ಸಿಐಡಿಗೆ ವಹಿಸಿತು. ಸಿಐಡಿ ನೀಡಿದ ಮಧ್ಯಂತರ ವರದಿಯ ಆಧಾರದ ಮೇಲೆ ಸರಕಾರವು ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿತು. ಅದನ್ನು ಪ್ರಶ್ನಿಸಿ ಕೆಲವರು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಮೊರೆ ಹೋದರು. ಮಂಡಳಿಯು ಆಯ್ಕೆಯಾದ ಅಭ್ಯರ್ಥಿಗಳ ಪರ ಆದೇಶ ನೀಡಿತು. ಅದನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್ಗೆ ಹೋದರು. ಕೆಎಟಿ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿತು. ಆ ಬಳಿಕ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು.
ಈ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳಾಗಿರುವುದು ಸಿಐಡಿ ತನಿಖೆಯಿಂದ ದೃಢಪಟ್ಟಿತ್ತು. ನೇಮಕಾತಿಯನ್ನು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ರದ್ದುಪಡಿಸಿದ್ದವು. ಆದರೂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರವು ಅಕ್ರಮ ಸಕ್ರಮಕ್ಕೆ ಮಸೂದೆ ರೂಪಿಸಿತು. ಅದು ಕಾಯ್ದೆಯಾಗಿ ಜಾರಿಗೆ ಬಂತು. ಅಭ್ಯರ್ಥಿಗಳ ನೇಮಕಕ್ಕೆ ಕರ್ನಾಟಕ ಸರಕಾರ ಅನುಷ್ಠಾನಕ್ಕೆ ತಂದಿದ್ದ ಈ ಕಾಯ್ದೆಯನ್ನು (2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಗಳ ಆಯ್ಕೆ ಮತ್ತು ನೇಮಕಾತಿ ಸಿಂಧುಗೊಳಿಸುವಿಕೆ ಕಾಯ್ದೆ-2022) ಸುಪ್ರೀಂ ಕೋರ್ಟ್ ಈಗ ರದ್ದುಗೊಳಿಸುವ ಮೂಲಕ ಸರಕಾರದ ಕಿವಿ ಹಿಂಡಿದೆ. ಅಕ್ರಮಗಳಾಗಿದ್ದರೂ ಅದರ ವಿರುದ್ಧ ನ್ಯಾಯಾಲಯಗಳು ತೀರ್ಪು ನೀಡಿದ್ದರೂ ಹೊಸ ಕಾಯ್ದೆ ಮೂಲಕ ಅಕ್ರಮಗಳನ್ನು ಸಕ್ರಮಗೊಳಿಸಬಹುದು ಎಂಬ ಶಾಸಕಾಂಗದ ಅಹಂಕಾರಕ್ಕೆ ಛಡಿ ಏಟು ಕೊಟ್ಟಿದೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನಲ್ಲಿ ರದ್ದುಪಡಿಸಲಾದ ನೇಮಕಾತಿಗೆ ಸಂಬಂಧಿಸಿ ಕಾನೂನು ತರುವ ಮೂಲಕ ನ್ಯಾಯಾಲಯದ ತೀರ್ಪುಗಳನ್ನು ಅಮಾನ್ಯಗೊಳಿಸುವ ಅಧಿಕಾರ ಶಾಸಕಾಂಗಕ್ಕೆ ಇಲ್ಲ ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲ ಮತ್ತು ವಿನೋದ್ ಚಂದ್ರನ್ ಅವರಿದ್ದ ನ್ಯಾಯಪೀಠವು ಸ್ಫಟಿಕ ಸ್ಪಷ್ಟವಾಗಿ ಹೇಳಿದೆ. ಶಾಸನಗಳನ್ನು ರೂಪಿಸುವ ಅಧಿಕಾರ ಹೊಂದಿರುವ ನಮ್ಮ ಶಾಸಕರು ಮತ್ತು ಸಂಸದರು ನ್ಯಾಯಾಲಯದ ಈ ಮಾತುಗಳನ್ನು ಸದಾ ನೆನಪಿನಲ್ಲಿ ಇರಿಸಿಕೊಳ್ಳುವುದು ಒಳ್ಳೆಯದು.
2011ರ ನೇಮಕಾತಿ ಪ್ರಕ್ರಿಯೆಯನ್ನು ಮಾನ್ಯಗೊಳಿಸಲು ಯಾವುದೇ ಸಕಾರಣ ಇಲ್ಲ. ಇಡೀ ಪ್ರಕ್ರಿಯೆ ದೋಷಗಳಿಂದ ಮತ್ತು ಅಕ್ರಮಗಳಿಂದ ಕೂಡಿತ್ತು. ವ್ಯಾಪಕ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ಈ ಪ್ರಕ್ರಿಯೆಯನ್ನು ಕಲುಷಿತಗೊಳಿಸಿತ್ತು. ಈ ಕಾರಣದಿಂದಾಗಿಯೇ ನೇಮಕಾತಿಯನ್ನು ರದ್ದುಗೊಳಿಸಲಾಗಿತ್ತು ಎಂದು ನ್ಯಾಯಪೀಠ ಹೇಳಿರುವುದು ಸರಿಯಾಗಿಯೇ ಇದೆ. ಈ ಅಕ್ರಮ ನೇಮಕಾತಿಯನ್ನು ಸಿಂಧುಗೊಳಿಸುವ ಉದ್ದೇಶದ ರಾಜ್ಯ ಸರಕಾರದ ಕಾಯ್ದೆಯು ಭ್ರಷ್ಟಾಚಾರವನ್ನು ಬೆಂಬಲಿಸುವಂತಿತ್ತು. ಈಗ ಹೊರಬಂದಿರುವ ಸುಪ್ರೀಂ ಕೋರ್ಟ್ ತೀರ್ಪು, ಅಕ್ರಮ ನೇಮಕಾತಿಗಳನ್ನು ಸಕ್ರಮಗೊಳಿಸುವ ಕೆಟ್ಟ ಚಾಳಿಗೆ ತಡೆಯೊಡ್ಡಿದೆ. ಅಲ್ಲದೆ, ಶಾಸಕಾಂಗಕ್ಕೆ ಪರೋಕ್ಷವಾಗಿ ಕಿವಿಮಾತು ಕೂಡ ಹೇಳಿದೆ. ಸುಪ್ರೀಂ ಕೋರ್ಟ್, ಶಾಸಕಾಂಗವನ್ನು ಮಾತ್ರ ತರಾಟೆಗೆ ತೆಗೆದುಕೊಂಡಿಲ್ಲ. ಹೈಕೋರ್ಟ್ ಕಾರ್ಯವೈಖರಿಯನ್ನೂ ಟೀಕಿಸಿದೆ. ರಾಜ್ಯ ಸರಕಾರ ಜಾರಿಗೆ ತಂದಿದ್ದ ಕಾನೂನನ್ನು ಎತ್ತಿಹಿಡಿದ ಹೈಕೋರ್ಟ್ ತೀರ್ಪಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. ಕಾನೂನಿನ ಎಲ್ಲ ಅಂಶಗಳನ್ನು ಗಾಳಿಗೆ ತೂರಿ ಶಾಸಕಾಂಗವು ತನ್ನ ವ್ಯಾಪ್ತಿಯನ್ನು ಮೀರಿ ಜಾರಿಗೆ ತಂದ ಕಾಯ್ದೆಯನ್ನು ಎತ್ತಿಹಿಡಿದಿರುವುದು ಅಸಂಬದ್ಧ ಎಂದು ಹೇಳಿರುವುದು ಸರಿಯಾಗಿದೆ.
ಈ ತೀರ್ಪು, ಆಡಳಿತ ನಡೆಸುವವರ ಕಣ್ಣು ತೆರೆಸಬೇಕಾಗಿದೆ. ಕೆಪಿಎಸ್ಸಿ ಶುದ್ಧೀಕರಣಕ್ಕೆ ಇದು ಪ್ರೇರಣೆಯಾಗಬೇಕು. ಉನ್ನತ ಹುದ್ದೆಗಳಿಗೆ ನಡೆಸುವ ನೇಮಕಾತಿ ಪ್ರಕ್ರಿಯೆಯೇ ಲೋಪಗಳಿಂದ ಕೂಡಿದ್ದರೆ, ಅಕ್ರಮಗಳಿಗೆ ಅಲ್ಲಿ ಅವಕಾಶಗಳಿದ್ದರೆ ಆ ಮೂಲಕ ಆಯ್ಕೆಯಾಗುವ ಅಭ್ಯರ್ಥಿಗಳಿಂದ ಜನಪರ, ಪಾರದರ್ಶಕ ಆಡಳಿತ ನಿರೀಕ್ಷಿಸುವುದಾದರೂ ಹೇಗೆ? ಬೇವು ಬಿತ್ತಿ ಮಾವಿನ ಫಸಲು ಬಯಸಿದರೆ ಆದೀತೇ? ಪದೇ ಪದೇ ಮುಗ್ಗರಿಸಿ ಬೀಳುವುದನ್ನೇ ಮೈಗೂಡಿಸಿಕೊಂಡಿರುವ ಆಯೋಗವು ಉದ್ಯೋಗ ಆಕಾಂಕ್ಷಿ ಯುವಸಮೂಹದ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಈ ಶಾಪದಿಂದ ವಿಮೋಚನೆ ಸಿಗುವ ದಾರಿ ಇಲ್ಲವೇ? ಸಂಪೂರ್ಣ ಶುದ್ಧೀಕರಣಕ್ಕೆ ಸರಕಾರ ಈಗಲಾದರೂ ದೃಢ ಸಂಕಲ್ಪ ಮಾಡುವುದೇ?






