ಅನ್ಯ ಕರ್ತವ್ಯಗಳಿಂದ ಶಿಕ್ಷಕರು ಮುಕ್ತರಾಗಲಿ

ಶಾಲೆಗಳಲ್ಲಿ ಪಾಠ ಮಾಡುವುದು ಶಿಕ್ಷಕರ ಕರ್ತವ್ಯ. ಮಕ್ಕಳನ್ನು ನಾಳಿನ ನಾಗರಿಕರನ್ನಾಗಿ ರೂಪಿಸುವ ಮಹತ್ವದ ಹೊಣೆಗಾರಿಕೆ ಶಿಕ್ಷಕರ ಮೇಲಿದೆ.ಈಗ ಅಗತ್ಯವಿರುವಷ್ಟು ಶಿಕ್ಷಕರ ನೇಮಕಾತಿಯೂ ನಡೆದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಈ ಶಿಕ್ಷಕರನ್ನು ಬೋಧಕೇತರ ಕರ್ತವ್ಯಗಳಿಗೆ ನಿಯೋಜನೆ ಮಾಡಲಾಗುತ್ತಿದೆ. ಹೀಗಾಗಿ ಶಾಲೆಗಳಲ್ಲಿ ಪಾಠ ಮಾಡಲು ಶಿಕ್ಷಕರೇ ಲಭ್ಯವಿಲ್ಲದಂತಾಗಿದೆ. ಹಾಗಾಗಿಯೇ ಬೋಧಕೇತರ ಕಾರ್ಯಗಳಿಗೆ ಶಿಕ್ಷಕರನ್ನು ನಿಯೋಜನೆ ಮಾಡುವುದನ್ನು ನಿಯಂತ್ರಿಸಲು ಕಾಯ್ದೆಯೊಂದನ್ನು ರೂಪಿಸುವ ಕುರಿತು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ವಿಧೇಯಕವೊಂದನ್ನು ಮಂಡಿಸಲು ಸರಕಾರ ತಯಾರಿ ನಡೆಸಿದೆ.
ಆಗಾಗ ಬರುವ ಚುನಾವಣೆಗಳಿಗೆ ಸಂಬಂಧಿಸಿದ ಕರ್ತವ್ಯ, ಜನಗಣತಿ, ಸಮೀಕ್ಷೆಗಳು ಸೇರಿದಂತೆ ಆಡಳಿತಾತ್ಮಕ ಕೆಲಸಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ಶಾಲಾ ತರಗತಿಗಳಲ್ಲಿ ಪಾಠ ನಡೆಯುತ್ತಿಲ್ಲ. ಇದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಅವರ ಗಮನಕ್ಕೆ ಬಂದಾಗ ಸರಕಾರ ಈ ಕುರಿತು ವಿಧೇಯಕ ತರಲು ತೀರ್ಮಾನಿಸಿದೆ.
ಈ ವಿಧೇಯಕದ ಪ್ರಕಾರ ಬೋಧಕೇತರ ಶಿಕ್ಷಕರನ್ನು ನಿಯೋಜಿಸುವುದಕ್ಕೆ ಕಠಿಣ ಕರಾರುಗಳನ್ನು ವಿಧಿಸಲಾಗುತ್ತದೆ. ಶಾಲೆಯಲ್ಲಿ ಇತರ ಸಿಬ್ಬಂದಿ ಲಭ್ಯವಿಲ್ಲ ಎನ್ನುವುದನ್ನು ದೃಢೀಕರಿಸುವ ಪ್ರಮಾಣಪತ್ರವನ್ನು ಪಡೆಯಬೇಕಾಗುತ್ತದೆ. ಶಿಕ್ಷಕರ ನಿಯೋಜನೆಯಿಂದ ಶಾಲೆಗಳು ಮುಚ್ಚುವ ಪರಿಸ್ಥಿತಿ ಉಂಟಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿ-ಶಿಕ್ಷಕರ ಅನುಪಾತಕ್ಕೆ ತೊಂದರೆಯಾಗದಂತೆ ಖಾತರಿ ಪಡಿಸುವುದು ಹಾಗೂ ನಷ್ಟವಾದ ಬೋಧನಾ ಸಮಯವನ್ನು ಸರಿದೂಗಿಸಲು ಅಗತ್ಯ ಏರ್ಪಾಟನ್ನು ಮಾಡುವುದು ಸದರಿ ಕರಾರುಗಳಲ್ಲಿ ಸೇರಿವೆ. ಸಾರ್ವಜನಿಕ ಸೇವೆಯನ್ನು ನಿರ್ವಹಿಸಲು ಸ್ವಪ್ರೇರಣೆಯಿಂದ ಮುಂದೆ ಬರುವ ಶಿಕ್ಷಕರ ಪಟ್ಟಿಯನ್ನು ಸಿದ್ಧಪಡಿಸಲು ಈ ವಿಧೇಯಕ ಉದ್ದೇಶಿಸಿದೆ.
ಬೋಧಕೇತರ ಕೆಲಸಗಳಿಗೆ ಶಿಕ್ಷಕರ ನಿಯೋಜನೆಯಿಂದ ಎಷ್ಟೆಲ್ಲ ತೊಂದರೆಯಾಗುತ್ತದೆ ಎಂಬುದಕ್ಕೆ ಪ್ರಸ್ತುತ ನಡೆಯುತ್ತಿರುವ ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್‌ಐಆರ್) ಒಂದು ಉದಾಹರಣೆಯಾಗಿದೆ. ಇದಕ್ಕಾಗಿ ಸುಮಾರು ಎರಡು ತಿಂಗಳಿಗಿಂತ ಹೆಚ್ಚಿನ ಅವಧಿ ಶಿಕ್ಷಕರನ್ನು ಶಾಲಾ ತರಗತಿಗಳಿಂದ ಹೊರಗಿಡಲಾಗಿದೆ. ಇದರ ಪರಿಣಾಮವಾಗಿ ಶೈಕ್ಷಣಿಕ ಚಟುವಟಿಕೆಗಳು ಸಂಪೂರ್ಣ ಅಸ್ತವ್ಯಸ್ತಗೊಂಡಿವೆ.ಖಾಸಗಿ ಶಾಲೆಗಳ ದುಬಾರಿ ಶುಲ್ಕವನ್ನು ಭರಿಸಲಾಗದೆ ಹಾಗೂ ಟ್ಯೂಷನ್‌ಗೆ ಹೋಗಲು ಸಾಮರ್ಥ್ಯವಿಲ್ಲದ ಮಕ್ಕಳು ಕಲಿಕೆಗಾಗಿ ಸರಕಾರಿ ಶಾಲೆಗಳನ್ನೇ ಅವಲಂಬಿಸಿದ್ದಾರೆ. ರಾಜ್ಯ ಸರಕಾರ ನೀಡಿದ್ದ ಎಂಟು ಶೈಕ್ಷಣಿಕ ಗ್ಯಾರಂಟಿಗಳಲ್ಲಿ ಅಗತ್ಯ ಸಂಖ್ಯೆಯ ಬೋಧಕೇತರ ಸಿಬ್ಬಂದಿಯ ನೇಮಕವೂ ಒಂದಾಗಿದೆ. ಈ ಆಶ್ವಾಸನೆ ಕಾರ್ಯರೂಪಕ್ಕೆ ಬಂದಲ್ಲಿ ಶಿಕ್ಷಕರನ್ನು ಬೋಧನೆಯಿಂದ ಬಿಡಿಸಿ ಬೇರೆ ಕಡೆ ನಿಯೋಜಿಸುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಬಹದು. ವಾಸ್ತವವಾಗಿ ಕೇಂದ್ರ ಸರಕಾರದ ಕೆಲವು ಕಾನೂನುಗಳು ರಾಜ್ಯ ಸರಕಾರದ ಈ ಸದುದ್ದೇಶದ ವಿಧೇಯಕಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕಾಗಿದೆ. ಶಿಕ್ಷಕರನ್ನು ಬೋಧಕೇತರ ಕರ್ತವ್ಯಗಳಿಗೆ ಬಳಸಿಕೊಳ್ಳುವುದು ಇದೇ ಮೊದಲ ಬಾರಿಯೇನಲ್ಲ. ಸ್ವಾತಂತ್ರ್ಯ ಬಂದಾಗಿನಿಂದ ನಡೆದ ಎಲ್ಲ ಜನಗಣತಿ, ಚುನಾವಣೆ ಹಾಗೂ ಸಮೀಕ್ಷೆ ಸೇರಿದಂತೆ ಇತ್ಯಾದಿ ಕಾರ್ಯಗಳಿಗೆ ಶಿಕ್ಷಕರನ್ನು ಧಾರಾಳವಾಗಿ ಬಳಸಿಕೊಳ್ಳುತ್ತಾ ಬರಲಾಗಿದೆ.
ವಾಸ್ತವವಾಗಿ 1951ರ ಜನತಾ ಪ್ರಾತಿನಿಧ್ಯ ಕಾಯ್ದೆ ಮತ್ತು 1948ರ ಜನಗಣತಿ ಕಾಯ್ದೆಗಳು ಚುನಾವಣೆ ಹಾಗೂ ಜನಗಣತಿ ಕರ್ತವ್ಯಗಳಿಗೆ ಶಿಕ್ಷಕರನ್ನು ಮತ್ತು ಇತರ ಸಿಬ್ಬಂದಿಯನ್ನು ನಿಯೋಜಿಸಲು ಅವಕಾಶ ಕಲ್ಪಿಸಿವೆ. ಅದೇ ರೀತಿ ಶಿಕ್ಷಣದ ಹಕ್ಕು ಕಾಯ್ದೆಯು ಜನಗಣತಿ, ವಿಪತ್ತು ಪರಿಹಾರ ಹಾಗೂ ಚುನಾವಣಾ ಕರ್ತವ್ಯಗಳನ್ನು ಹೊರತು ಪಡಿಸಿ ಶಿಕ್ಷಣೇತರ ಉದ್ದೇಶಗಳಿಗಾಗಿ ಶಿಕ್ಷಕರನ್ನು ಬಳಸಿಕೊಳ್ಳುವುದನ್ನು ನಿರ್ಬಂಧಿಸುತ್ತದೆ. ಪ್ರಸಕ್ತ ರಾಜ್ಯ ಸರಕಾರ ಮಂಡಿಸಲು ಉದ್ದೇಶಿಸಿರುವ ವಿಧೇಯಕದಲ್ಲಿನ ಅಂಶಗಳು ಕೇಂದ್ರದ ಕಾನೂನುಗಳೊಂದಿಗೆ ಹೊಂದಾಣಿಕೆಯಾಗುವುದು ಅನಿವಾರ್ಯ ಎಂಬುದನ್ನು ತಳ್ಳಿ ಹಾಕಲಾಗುವುದಿಲ್ಲ. ಇದರಿಂದಾಗಿ ಶಿಕ್ಷಕರ ನಿಯೋಜನೆಗೆ ಸಂಬಂಧಿಸಿದ ಸಮಸ್ಯೆಗೆ ರಾಜ್ಯ ಮಟ್ಟದ ನಿರ್ಬಂಧಗಳು ಪೂರ್ಣವಲ್ಲದಿದ್ದರೂ ಭಾಗಶಃ ಪರಿಹಾರವನ್ನು ದೊರಕಿಸಿಕೊಡಬಹುದು.
ವಾಸ್ತವವಾಗಿ ಅರಣ್ಯ, ಆರೋಗ್ಯ ಸೇರಿದಂತೆ ಅಗತ್ಯ ಸೇವೆಗಳಿಗೆ ಸಂಬಂಧಿಸಿದ ಇಲಾಖೆಗಳ ನೌಕರರಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿಯನ್ನು ನೀಡುವ ಅವಕಾಶ ಚುನಾವಣಾ ಆಯೋಗದ ಮಾರ್ಗಸೂಚಿಗಳಲ್ಲಿ ಈಗಾಗಲೇ ಇದೆ. ನಿರ್ಣಾಯಕ ಸೇವೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಈ ವಿನಾಯಿತಿಯ ಉದ್ದೇಶವಾಗಿದೆ. ಆದರೆ ಶಿಕ್ಷಣ ಇಲಾಖೆಗೆ ಇದು ಯಾಕೆ ಅನ್ವಯಿಸುವುದಿಲ್ಲ? ಇನ್ನು ಮುಂದೆ ಹೀಗಾಗಬಾರದು. ಹಾಗಾಗಿ ಸಂಬಂಧಿತ ಕಾಯ್ದೆಗಳಿಗೆ ತಿದ್ದುಪಡಿ ತಂದು ಶಿಕ್ಷಣ ಇಲಾಖೆಯ ಸಿಬ್ಬಂದಿಗೂ ಈ ಅವಕಾಶವನ್ನು ಕಲ್ಪಿಸಿಕೊಡಬೇಕು. ನಿರ್ದಿಷ್ಟ ಸಂದರ್ಭಗಳನ್ನು ಹೊರತು ಪಡಿಸಿ ಬೋಧಕೇತರ ಕರ್ತವ್ಯಗಳಿಗೆ ಶಿಕ್ಷಕರ ನಿಯೋಜನೆಯನ್ನು ನಿರ್ಬಂಧಿಸುವ ಬಗ್ಗೆ ಸಂಸತ್ತು ತೀರ್ಮಾನಿಸಬೇಕಾಗಿದೆ. ಆಡಳಿತಾತ್ಮಕ ಕರ್ತವ್ಯಗಳಿಗೆ ಹೆಚ್ಚಿನ ಮಾನವ ಸಂಪನ್ಮೂಲ ಅಗತ್ಯವಾದಾಗಲೆಲ್ಲ ಶಿಕ್ಷಕರೇ ಸರಕಾರದ ಕಣ್ಣಿಗೆ ಕಾಣುವುದು ಏಕೆ ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ. ಅತ್ಯಂತ ವಿರಳವಾದ, ಅನಿವಾರ್ಯವಾದ ಸಂದರ್ಭಗಳಲ್ಲಿ ಶಿಕ್ಷಕರನ್ನು ಇತರ ಕರ್ತವ್ಯಗಳಿಗೆ ನಿಯೋಜನೆ ಮಾಡುವ ಸನ್ನಿವೇಶ ಎದುರಾದರೂ ತರಗತಿಗಳಿಂದ ಶಿಕ್ಷಕರನ್ನು ದೂರವಿಡದೆ ಶಾಲೆಗಳ ರಜಾ ಅವಧಿಗೆ ಇದನ್ನು ಸೀಮಿತಗೊಳಿಸಬೇಕು. ಆಡಳಿತಾತ್ಮಕ ಅನುಕೂಲಕ್ಕಾಗಿ ಮಕ್ಕಳ ಶೈಕ್ಷಣಿಕ ಹಿತ ಮತ್ತು ಭವಿಷ್ಯವನ್ನು ಬಲಿ ಕೊಡಬಾರದು. ಗುಣಮಟ್ಟದ ಶಿಕ್ಷಣದ ಭರವಸೆಯನ್ನು ನೀಡುವ ಸರಕಾರ ಶಿಕ್ಷಕರಿಗೆ ಬೋಧನಾ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಿಕೊಡಬೇಕು.






