ತ್ರೀ ಭಾಷಾ ನೀತಿಯ ಹಳಿಯಲ್ಲಿ ಸಾಗಲಿ ಕೇಂದ್ರದ ರೈಲು ಬಂಡಿ

ಸಾಂದರ್ಭಿಕ ಚಿತ್ರ
ಎಲ್ಲಾ ಭಾಷೆಗಳ ಬೋಗಿಗಳನ್ನು ಜೊತೆಯಾಗಿಸಿಕೊಂಡು ಹಳಿಯ ಮೇಲೆ ಸಾಗಬೇಕಾದ ರೈಲು ಬಂಡಿ, ಕನ್ನಡದ ಬೋಗಿಯನ್ನು ಕೈ ಬಿಟ್ಟು ಮತ್ತೆ ವಿವಾದದಲ್ಲಿದೆ. ನೈಋತ್ಯ ರೈಲ್ವೆಯ ಮೈಸೂರು ವಿಭಾಗವು 2025, ಫೆಬ್ರವರಿಯಲ್ಲಿ ಅಧಿಸೂಚನೆ ಹೊರಡಿಸಿದ ಗ್ರೂಪ್ ಸಿ ಮತ್ತು ಡಿ ಉದ್ಯೋಗಿಗಳ ಪದೋನ್ನತಿ ಅಥವಾ ಭಡ್ತಿ ಅವಕಾಶಗಳಿಗಾಗಿ ನಡೆಸುವ ಪರೀಕ್ಷೆಯನ್ನು ಮಾರ್ಚ್ 17ಕ್ಕೆ ನಿಗದಿ ಪಡಿಸಲಾಗಿತ್ತು. 194 ಸರಕು ರೈಲು ವ್ಯವಸ್ಥಾಪಕರಿಗಾಗಿ ನಡೆಯಲಿರುವ ಈ ಪರೀಕ್ಷೆಯಲ್ಲಿ ಹಾಲಿ ಉದ್ಯೋಗಿಗಳಿಗೆ ಶೇ. 60ರಷ್ಟು ಮೀಸಲಾತಿಯನ್ನು ನೀಡಲಾಗಿದೆ. ರಾಜಧಾನಿ ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ ಕೇಂದ್ರಗಳಲ್ಲಿ ಈ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಇಲಾಖೆಯ ರೈಲು ಈ ಬಾರಿಯೂ ಸರಿಯಾದ ಹಳಿಯಲ್ಲಿ ಓಡಲಿಲ್ಲ. ಪರೀಕ್ಷಾ ಅಧಿಸೂಚನೆ ಮೊದಲು ಬಿಡುಗಡೆಯಾದಾಗ ಪರೀಕ್ಷೆಯಲ್ಲಿ ತ್ರಿಭಾಷೆ ಅಂದರೆ ಹಿಂದಿ, ಇಂಗ್ಲಿಷ್ ಮತ್ತು ಕನ್ನಡವನ್ನು ಉಲ್ಲೇಖಿಸಲಾಗಿತ್ತು. ಆದರೆ ಆನಂತರದ ಅಧಿಸೂಚನೆಯಲ್ಲಿ ಹಿಂದಿ ಮತ್ತು ಇಂಗ್ಲಿಷನ್ನು ಮಾತ್ರ ಉಲ್ಲೇಖಿಸಲಾಗಿತ್ತು. ಇದು ಕನ್ನಡಿಗರನ್ನು ಕೆರಳಿಸಿತ್ತು ಮಾತ್ರವಲ್ಲ, ತ್ರಿಭಾಷಾ ನೀತಿಯಂತೆ ಪರೀಕ್ಷೆ ನಡೆಸಬೇಕು ಎಂದು ಸಂಬಂಧಪಟ್ಟವರನ್ನು ವಿವಿಧ ಕನ್ನಡಸಂಘಟನೆಗಳು ಒತ್ತಾಯಿಸಿದ್ದವು. ಕಳೆದ ತಿಂಗಳು ಅಖಿಲ ಭಾರತ ಒಬಿಸಿ ರೈಲ್ವೆ ನೌಕರರ ಸಂಘವು ನೈಋತ್ಯ ರೈಲ್ವೆಯ ಜನರಲ್ ಮ್ಯಾನೇಜರ್ಗೂ ಈ ಸಂಬಂಧ ಪತ್ರ ಬರೆದು ತ್ರಿಭಾಷಾ ನೀತಿಯನ್ನು ಅಳವಡಿಸಿಕೊಳ್ಳಲು ಆಗ್ರಹಿಸಿತ್ತು. ಆದರೆ ರೈಲ್ವೆ ಇಲಾಖೆ ಎಂದಿನಂತೆ ಆ ಒತ್ತಾಯಕ್ಕೆ ಉಡಾಫೆಯ ಪ್ರತಿಕ್ರಿಯೆಯನ್ನು ನೀಡಿತು. ಪರಿಣಾಮವಾಗಿ ಪರೀಕ್ಷೆಯ ದಿನ ಕನ್ನಡ ಪರ ಹೋರಾಟಗಾರರು ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು. ಪ್ರತಿಭಟನೆ ತೀವ್ರವಾಗುತ್ತಿದ್ದಂತೆಯೇ ಇಲಾಖೆಯು ಕೊನೆಯ ಕ್ಷಣದಲ್ಲಿ ಪರೀಕ್ಷೆಯನ್ನು ರದ್ದುಗೊಳಿಸುವುದು ಅನಿವಾರ್ಯವಾಯಿತು.
ಭಾರತ ಸರಕಾರದ ಅಧಿಕೃತ ಭಾಷಾ ನೀತಿಯ ಪ್ರಕಾರ ಹಾಗೂ ರೈಲ್ವೆ ಸಚಿವಾಲಯ ಕಾಲಕಾಲಕ್ಕೆ ಹೊರಡಿಸಿದ ಸೂಚನೆಗಳ ಪ್ರಕಾರ ನೌಕರರು ಪ್ರಾದೇಶಿಕ ಭಾಷೆ ಕನ್ನಡದಲ್ಲಿ ಪರೀಕ್ಷೆಗಳನ್ನು ಎದುರಿಸಲು ಅರ್ಹರಾಗುತ್ತಾರೆ. ಕನ್ನಡದಲ್ಲಿ ಪರೀಕ್ಷೆ ಬರೆಯುವುದು ತಮ್ಮ ಹಕ್ಕು ಎನ್ನುವ ಕಾರಣಕ್ಕೆ ಅವರು ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಇದು ರೈಲ್ವೆ ಮಂಡಳಿ ಕನ್ನಡಿಗರಿಗೆ ನೀಡುವ ವಿಶೇಷ ಸವಲತ್ತು ಅಥವಾ ಉಡುಗೊರೆಯಲ್ಲ ಎನ್ನುವುದನ್ನು ರೈಲ್ವೆ ಮಂಡಳಿ ಅರ್ಥ ಮಾಡಿಕೊಳ್ಳಬೇಕಾಗಿದೆ. 1992ರ ಸುತ್ತೋಲೆಯಲ್ಲಿ ಹೊರಡಿಸಲಾದ ರೈಲ್ವೆ ಮಂಡಳಿಯ ಮಾರ್ಗಸೂಚಿಗಳ ಪ್ರಕಾರ ಎಲ್ಲ ಇಲಾಖೆಗಳ ಪರೀಕ್ಷೆಗಳನ್ನು ಹಿಂದಿ, ಇಂಗ್ಲಿಷ್ ಮತ್ತು ಆಯಾ ಪ್ರಾದೇಶಿಕ ಭಾಷೆಯಲ್ಲಿ ನಡೆಸಬೇಕು.
ಕೇಂದ್ರ ಸರಕಾರಿ ಹುದ್ದೆಗಳ ಪರೀಕ್ಷೆಯ ಸಂದರ್ಭದಲ್ಲಿ ತಮ್ಮ ಮೇಲೆ ಹಿಂದಿಯನ್ನು ಹೇರಲು ಹೊರಡುವ ಎಲ್ಲ ಪ್ರಯತ್ನಗಳನ್ನು ದಕ್ಷಿಣದ ರಾಜ್ಯಗಳು ವಿರೋಧಿಸುತ್ತಲೇ ಬಂದಿವೆೆ. ಸಾರ್ವಜನಿಕ ವಲಯದ ಬ್ಯಾಂಕುಗಳು, ಭಾರತೀಯ ರೈಲ್ವೆ ಮತ್ತು ಇತರ ಕೇಂದ್ರೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಸ್ಥಳೀಯ ನೇಮಕಾತಿಯನ್ನು ಉತ್ತೇಜಿಸಲು ನೇಮಕಾತಿಯಲ್ಲಿ ತ್ರಿಭಾಷಾ ನೀತಿಯನ್ನು ದಕ್ಷಿಣ ಭಾರತದ ರಾಜ್ಯಗಳು ಪ್ರತಿಪಾದಿಸುತ್ತಾ ಬಂದಿವೆಯಾದರೂ, ಕೇಂದ್ರ ಇದಕ್ಕೆ ಜಾಣ ಕಿವುಡುತನವನ್ನು ಪ್ರದರ್ಶಿಸುತ್ತಾ ಬಂದಿದೆ.
ಈ ತಿಕ್ಕಾಟ ಇಂದು ನಿನ್ನೆಯದೇನೂ ಅಲ್ಲ. 2008ರಲ್ಲಿ ಸುಮಾರು 4,000 ಡಿ ಗ್ರೂಪ್ ಹುದ್ದೆಗಳ ನೇಮಕಾತಿಯನ್ನು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ನಡೆಸಲು ಹವಣಿಸಿದಾಗ ಇದರ ವಿರುದ್ಧ ಕನ್ನಡಿಗರು ದೊಡ್ಡ ಮಟ್ಟದಲ್ಲಿ ಧ್ವನಿಯೆತ್ತಿದ್ದರು. ಬಳಿಕ ಅದನ್ನು ಕೈ ಬಿಡಲಾಯಿತು. ಆದರೆ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಅದು ಹಿಂದಿಯನ್ನು ಇಡೀ ದೇಶದ ಭಾಷೆಯನ್ನಾಗಿಸಲು ಪ್ರಯತ್ನಿಸುತ್ತಿದೆ.
ಬೇರೆ ಬೇರೆ ರೂಪಗಳಲ್ಲಿ ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಹೇರಿಕೆಗೆ ಪ್ರಯತ್ನಿಸುತ್ತಿದೆ. ಆ ಪ್ರಯತ್ನದ ಭಾಗವಾಗಿಯೇ ಪರೀಕ್ಷೆಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಅವಕಾಶ ನೀಡದೇ ಇರುವುದು. ಈ ಮೂಲಕ ಕೇಂದ್ರ ಒಂದು ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಒಡೆಯಲು ಯತ್ನಿಸುತ್ತಿದೆ.
ಮೊದಲನೆಯದಾಗಿ, ಹಿಂದಿ ಮತ್ತು ಇಂಗ್ಲಿಷನ್ನು ಸಮಾನ ಸ್ಥಾನದಲ್ಲಿ ತಂದು ನಿಲ್ಲಿಸುವುದು. ಹಿಂದಿಯೂ ಎಲ್ಲ ಪ್ರಾದೇಶಿಕ ಭಾಷೆಗಳಂತೆಯೇ ಒಂದು ಭಾಷೆಯಾಗಿದೆ. ಸಂವಿಧಾನದಲ್ಲಿ ಅದಕ್ಕೆ ಯಾವುದೇ ವಿಶೇಷ ಸ್ಥಾನಮಾನ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಹಿಂದಿ ಭಾಷೆಯನ್ನಾಡುವ ರಾಜ್ಯಗಳಿಗಿಂತ ಹಿಂದಿ ಅರಿಯದ ದಕ್ಷಿಣದ ರಾಜ್ಯಗಳು ಅಭಿವೃದ್ಧಿಯಲ್ಲಿ ಎಲ್ಲ ರೀತಿಯಲ್ಲಿ ಮುಂದುವರಿದಿವೆೆ. ಪರಿಣಾಮವಾಗಿ ಉದ್ಯೋಗ ಅರಸಿಕೊಂಡು ಹಿಂದಿ ಭಾಷಿಗರು ದಕ್ಷಿಣದ ರಾಜ್ಯಕ್ಕೆ ವಲಸೆ ಬರುತ್ತಿದ್ದಾರೆ.
ಬ್ಯಾಂಕುಗಳ ಏಕೀಕರಣದ ಬಳಿಕವಂತೂ ಇದು ಇನ್ನಷ್ಟು ಹೆಚ್ಚಳವಾಗಿದೆ. ದಕ್ಷಿಣ ಭಾರತದಲ್ಲಿ ಹಿಂದಿ ಚಲಾವಣೆಗೆ ಬಂದರೆ ಉತ್ತರ ಭಾರತದಿಂದ ಉದ್ಯೋಗ ಅರಸಿಕೊಂಡು ಬರುವವರಿಗೆ ಅನುಕೂಲವಾಗುತ್ತದೆ ಎನ್ನುವುದು ಕೇಂದ್ರ ವರಿಷ್ಠರ ಲೆಕ್ಕಾಚಾರ. ಬ್ಯಾಂಕುಗಳಲ್ಲಿ, ರೈಲ್ವೆ ಇಲಾಖೆಗಳಲ್ಲಿ ತುಂಬಿಕೊಂಡಿರುವ ಹಿಂದಿ ಭಾಷಿಗರು ಕನ್ನಡಿಗರನ್ನು ಈಗಾಗಲೇ ಅನ್ಯರಂತೆ ನೋಡುತ್ತಿದ್ದಾರೆ. ಕನ್ನಡಿಗರು ಹಿಂದಿ ಕಲಿಯಬೇಕು ಎಂದು ಒತ್ತಾಯಿಸುವ ಮಟ್ಟಕ್ಕೆ ಬಂದಿದ್ದಾರೆ.
ಇಂತಹ ಸಂದರ್ಭದಲ್ಲಿ ರೈಲ್ವೆ ಇಲಾಖೆಗಳ ಪರೀಕ್ಷೆಯಲ್ಲಿ ಪ್ರಾದೇಶಿಕ ಭಾಷೆಗಳನ್ನು ನಿರ್ಲಕ್ಷಿಸುವುದು ಉತ್ತರ ಭಾರತೀಯರ ಪ್ರಾಬಲ್ಯಕ್ಕೆ ಕಾರಣವಾಗುತ್ತದೆ. ಉತ್ತರ ಭಾರತದ ಬಹುತೇಕ ರಾಜ್ಯಗಳು ಹಿಂದಿಯನ್ನು ಅವಲಂಬಿಸಿವೆ. ಪರೀಕ್ಷೆಯಲ್ಲಿ ಹಿಂದಿಗೆ ಅವಕಾಶ ನೀಡುವುದು ಎಂದರೆ ಅವರಿಗೆ ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವುದು ಎಂದು ಅರ್ಥ. ಇತ್ತ ಕನ್ನಡಿಗರು ತಮ್ಮದಲ್ಲದ ಭಾಷೆಯಲ್ಲಿ ಒಂದೋ ಇಂಗ್ಲಿಷ್ನಲ್ಲಿ ಅಥವಾ ಹಿಂದಿಯಲ್ಲಿ ಪರೀಕ್ಷೆ ಬರೆಯಬೇಕು. ಇದು ಸಹಜವಾಗಿಯೇ ರೈಲ್ವೆಯಲ್ಲಿರುವ ಕನ್ನಡಿಗರಿಗೆ ಹಿನ್ನಡೆಯುಂಟು ಮಾಡುತ್ತದೆ.
ಈಗಾಗಲೇ ರೈಲ್ವೆ ಇಲಾಖೆಯಲ್ಲಿ ಕನ್ನಡಿಗರ ಸಂಖ್ಯೆ ತೀರಾ ಕಡಿಮೆಯಿದೆ. ಕರ್ನಾಟಕದ ಬಹುತೇಕ ರೈಲ್ವೆ ಕಚೇರಿಗಳಲ್ಲಿ ಉತ್ತರ ಭಾರತೀಯರೇ ತುಂಬಿದ್ದು ಕನ್ನಡ ಭಾಷಿಗರನ್ನು ಅಸ್ಪಶ್ಯರಂತೆ ನೋಡುತ್ತಿದ್ದಾರೆ. ಇದೀಗ ಪದೋನ್ನತಿ ಅಥವಾ ಭಡ್ತಿ ಪರೀಕ್ಷೆಯಲ್ಲಿ ಕನ್ನಡಕ್ಕೆ ಒದಗಿರುವ ದುರ್ಗತಿ ರೈಲ್ವೆ ಇಲಾಖೆಯಲ್ಲಿ ಕನ್ನಡಿಗರನ್ನು ಇನ್ನಷ್ಟು ತಬ್ಬಲಿಗಳನ್ನಾಗಿ ಮಾಡುತ್ತದೆ. ಮಾತ್ರವಲ್ಲ, ಕನ್ನಡಿಗರು ಹಿಂದಿ ಕಲಿಯುವುದು ಅನಿವಾರ್ಯ ಎನ್ನುವ ಸ್ಥಿತಿ ನಿರ್ಮಾಣವಾಗತೊಡಗುತ್ತದೆ. ಈ ಕಾರಣಕ್ಕಾಗಿಯೇ ರೈಲ್ವೆ ಪರೀಕ್ಷೆಯಲ್ಲಿ ಕನ್ನಡ ಭಾಷೆಗೆ ಆದ ಅನ್ಯಾಯವನ್ನು ಕನ್ನಡಿಗರು ಒಕ್ಕೊರಲಿನಲ್ಲಿ ಪ್ರತಿಭಟಿಸಬೇಕು.
ರಾಜ್ಯ ಸಂಸದರ ನೇತೃತ್ವದಲ್ಲಿ ನಿಯೋಗವೊಂದು ಕೇಂದ್ರ ರೈಲ್ವೆ ಸಚಿವರನ್ನು ಭೇಟಿ ಮಾಡಿ ಕನ್ನಡದ ಹಿತಾಸಕ್ತಿಯನ್ನು ಎತ್ತಿ ಹಿಡಿಯಬೇಕು. ಈಗಾಗಲೇ ಪರೀಕ್ಷೆ ರದ್ದುಗೊಂಡಿದೆ. ಇಷ್ಟಕ್ಕೇ ಕನ್ನಡಿಗರಿಗೆ ನ್ಯಾಯ ಸಿಕ್ಕಿದಂತಾಗುವುದಿಲ್ಲ. ಆದಷ್ಟು ಬೇಗ ತ್ರಿಭಾಷಾ ನೀತಿಯನ್ವಯ ಪರೀಕ್ಷೆಯನ್ನು ಹಮ್ಮಿಕೊಳ್ಳಲು ನಿಯೋಗ ಒತ್ತಾಯಿಸಬೇಕು







