ಬೀದಿ ದನಗಳ ಬಗ್ಗೆಯೂ ನ್ಯಾಯಾಲಯ ಮಾತನಾಡಲಿ

ಸಾಂದರ್ಭಿಕ ಚಿತ್ರ PC: freepik
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಬೀದಿ ನಾಯಿಗಳ ವಿರುದ್ಧ ಸುಪ್ರೀಂಕೋರ್ಟ್ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ‘ರಸ್ತೆಗಳನ್ನು, ಬೀದಿಗಳನ್ನು ನಾಯಿಗಳಿಂದ ಮುಕ್ತವಾಗಿರಿಸಬೇಕು. ಬೀದಿ ನಾಯಿಗಳ ವಿಷಯದಲ್ಲಿ ಚಿಕಿತ್ಸೆಗಿಂತ ಮುನ್ನೆಚ್ಚರಿಕೆಯೇ ಮದ್ದು ’ ಎಂದಿರುವ ಸುಪ್ರೀಂಕೋರ್ಟ್, ‘ದೇಶದಲ್ಲಿ ಜನರು ಸಾಯುತ್ತಿರುವುದು ನಾಯಿ ಕಡಿತದಿಂದ ಮಾತ್ರ ಅಲ್ಲ. ರಸ್ತೆಗಳಲ್ಲಿ ಇತರ ಪ್ರಾಣಿಗಳಿಂದ ಉಂಟಾಗುವ ಅಪಘಾತಗಳಿಂದಲೂ ಜೀವಹಾನಿ ಸಂಭವಿಸುತ್ತಿವೆೆ. ಕಳೆದ 20 ದಿನಗಳಲ್ಲಿ ಇಬ್ಬರು ನ್ಯಾಯಮೂರ್ತಿಗಳೂ ಪ್ರಾಣಿಗಳಿಂದಾಗಿ ಹೆದ್ದಾರಿಗಳಲ್ಲಿ ಅಪಘಾತಕ್ಕೆ ಒಳಗಾಗಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದೆ. ‘‘ನಾಯಿಗಳು ದಾಳಿ ಮಾಡುವುದರಿಂದ ಮಾತ್ರವಲ್ಲ, ದಿಢೀರ್ ರಸ್ತೆಗೆ ನುಗ್ಗುವುದರಿಂದಲೂ ಅಪಘಾತಗಳು ಸಂಭವಿಸಿ ಜೀವಹಾನಿ ಸಂಭವಿಸುತ್ತವೆ. ಹಾಗಾಗಿ ರಸ್ತೆಗಳನ್ನು ನಾಯಿಗಳಿಂದ ಮುಕ್ತವಾಗಿಸುವುದೇ ಈ ಸಮಸ್ಯೆಗೆ ಪರಿಹಾರ’’ ಎಂದು ಸುಪ್ರೀಂಕೋರ್ಟ್ ಹೇಳಿದೆ. ‘‘ಬೀದಿ ನಾಯಿಗಳಿಗೆ ಆಶ್ರಯ ಒದಗಿಸುವುದು ಈ ಸಮಸ್ಯೆಗೆ ಪರಿಹಾರ ಅಲ್ಲ. ಇದು ಭೌತಿಕವಾಗಿ ಸಾಧ್ಯವಿಲ್ಲ. ಆರ್ಥಿಕವಾಗಿಯೂ ಅಸಾಧ್ಯ. ವೈಜ್ಞಾನಿಕ ರೀತಿಯಲ್ಲಿ ಇದಕ್ಕೆ ಪರಿಹಾರ ಹುಡುಕಬೇಕು’’ ಎಂದು ಅದು ಅಭಿಪ್ರಾಯ ಪಟ್ಟಿದೆ. ಈ ದೇಶದಲ್ಲಿ ಸುಪ್ರೀಂಕೋರ್ಟ್ ನಿಜಕ್ಕೂ ಚರ್ಚಿಸಬೇಕಾದುದು, ಸಮಾಜ ನಿಜಕ್ಕೂ ಕಾಳಜಿ ವ್ಯಕ್ತಪಡಿಸಬೇಕಾದುದು ಬೀದಿ ಮಕ್ಕಳ ಬಗ್ಗೆ. ಈ ದೇಶದಲ್ಲಿ ಒಂದೂವರೆ ಕೋಟಿಗೂ ಅಧಿಕ ಮಕ್ಕಳು ನಗರದ ಬೀದಿಗಳಲ್ಲಿ ಬದುಕು ನಡೆಸುತ್ತಿದ್ದಾರೆ ಮತ್ತು ಸಮಾಜ ಇವರ ಮೇಲೆ ಬೀದಿ ನಾಯಿಗಳಿಗಿಂತಲೂ ಕ್ರೂರವಾಗಿ ಎರಗುತ್ತಿವೆ. ಆದರೆ, ಬೀದಿ ಮಕ್ಕಳ ಮೇಲೆ ಪ್ರತಿ ದಿನ ನಡೆಯುತ್ತಿರುವ ದೌರ್ಜನ್ಯಗಳು ಸುಪ್ರೀಂಕೋರ್ಟ್ನಲ್ಲಿ ಚರ್ಚೆಗೊಳಗಾದುದು ತೀರಾ ಕಡಿಮೆ. ಹಲವು ಸಂಘಟನೆಗಳು ಬೀದಿ ಮಕ್ಕಳಿಗಾಗಿ ಕೆಲಸ ಮಾಡುತ್ತಿವೆಯಾದರೂ ನಗರ ಬೆಳೆದಂತೆ ಈ ಮಕ್ಕಳ ಸಂಖ್ಯೆಯೂ ಹೆಚ್ಚುತ್ತಿವೆ. ಆಗಾಗ ಸರಕಾರ ನಗರದ ಕೊಳೆಗೇರಿಗಳಲ್ಲಿ ನಡೆಸುವ ಬುಲ್ಡೋಜರ್ ಕಾರ್ಯಾಚರಣೆಯಲ್ಲಿ ಸಂತ್ರಸ್ತರಾದ ಮಕ್ಕಳಿಗೆ ಅಂತಿಮವಾಗಿ ಆಶ್ರಯ ನೀಡುವುದು ನಗರದ ಬೀದಿಗಳು. ಈ ಬೀದಿ ಬದಿಯಲ್ಲಿರುವ ಎಳೆ ಮಕ್ಕಳ ಮೇಲೆಯೇ ಅತಿ ಹೆಚ್ಚು ಅತ್ಯಾಚಾರಗಳು ನಡೆಯುತ್ತವೆ. ಕೊಲೆಗಳೂ ನಡೆಯುತ್ತವೆ. ಬೀದಿ ನಾಯಿಗಳಿಗೆ ಇರುವ ಬೆಲೆಯೂ ಇವರ ಜೀವಕ್ಕಿಲ್ಲ ಎನ್ನುವ ಸ್ಥಿತಿ ದೇಶದಲ್ಲಿದೆ. ಬೀದಿ ನಾಯಿಗಳು ಈ ಮಕ್ಕಳ ಬದುಕನ್ನು ಹರಿದು ತಿಂದರೂ ಅದರ ಬಗ್ಗೆ ಸಮಾಜಕ್ಕಾಗಲಿ, ನ್ಯಾಯಾಲಯಕ್ಕಾಗಲಿ ಕಾಳಜಿಯಿಲ್ಲ. ಹೊಟ್ಟೆ ತುಂಬಿದವರು ಇಂದು ಬೀದಿ ನಾಯಿಗಳ ಹಕ್ಕಿನ ಬಗ್ಗೆ ಮಾತನಾಡುತ್ತಿದ್ದಾರೆ ಮತ್ತು ಚರ್ಚಿಸುತ್ತಿದ್ದಾರೆ. ಬೀದಿ ಮಕ್ಕಳನ್ನು ರಕ್ಷಿಸಿ ಅವರಿಗೆ ಆಶ್ರಯ ನೀಡುವಲ್ಲಿ ಯಶಸ್ವಿಯಾದಾಗ ಮಾತ್ರ ನಾವು ಬೀದಿ ನಾಯಿಗಳಿಗೆ ಆಶ್ರಯ ನೀಡುವ ಬಗ್ಗೆ ಮಾತನಾಡಲು ನೈತಿಕವಾಗಿ ಅರ್ಹರಾಗುತ್ತೇವೆ.
ಇಂದು ರಸ್ತೆಗಳನ್ನು ಬೀದಿನಾಯಿಗಳು ಮಾತ್ರವಲ್ಲ ಉಂಡಾಡಿ ದನಗಳು ಕೂಡ ಸಮಸ್ಯೆಗಳಾಗಿ ಕಾಡುತ್ತಿವೆ. ಸರಕಾರ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತಂದ ಆನಂತರ ತಾವು ಸಾಕುತ್ತಿರುವ ಅನುಪಯುಕ್ತ ಗೋವುಗಳನ್ನು ಮಾರಾಟ ಮಾಡಲಾಗದೆ ಅವುಗಳನ್ನು ರೈತರು ರಸ್ತೆಗೆ ಬಿಡುತ್ತಿದ್ದಾರೆ. 2020ರಲ್ಲಿ ಬಿಡುಗಡೆಯಾದ ಜಾನುವಾರು ಗಣತಿಯ ಪ್ರಕಾರ ಭಾರತದಲ್ಲಿ ಐವತ್ತು ಲಕ್ಷಕ್ಕೂ ಅಧಿಕ ಬೀದಿ ದನಗಳಿವೆ. ಇಷ್ಟೂ ದನಗಳು ಕಾಡಿನಿಂದ ದಾರಿ ತಪ್ಪಿ ಬಂದವುಗಳಲ್ಲ. ರೈತರು ತಾವು ಸಾಕಿದ ದನಗಳನ್ನು ಅನಿವಾರ್ಯವಾಗಿ ಬೀದಿಗೆ ಬಿಡುತ್ತಿದ್ದಾರೆ. ಜಾನುವಾರುಗಳನ್ನು ಮಾರಾಟ ಮಾಡಲು ಒಂದೆಡೆ ಕಾನೂನಿನ ಭಯ. ಇನ್ನೊಂದೆಡೆ ಗೋರಕ್ಷಕರ ವೇಷದಲ್ಲಿರುವ ಸಂಘಪರಿವಾರ ಗೂಂಡಾಗಳ ಭಯ. ಅಂತಿಮವಾಗಿ ಜಾನುವಾರುಗಳು ಬೀದಿ ಪಾಲಾಗುತ್ತಿವೆ. ಎರಡು ವರ್ಷಗಳ ಹಿಂದೆ ಉತ್ತರ ಭಾರತದಲ್ಲಿ ಜಾನುವಾರುಗಳ ನಡುವೆ ಸಾಂಕ್ರಾಮಿಕ ರೋಗಗಳು ಹರಡಲೂ ಈ ಬೀದಿ ದನಗಳೇ ಕಾರಣವಾಗಿದ್ದವು. ನೂರಾರು ದನಗಳು ಬೀದಿಗಳಲ್ಲೇ ಮೃತಪಟ್ಟಿದ್ದವು. ಉತ್ತರ ಭಾರತದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವುದು ಬೀದಿ ದನಗಳಿಂದ. ಅಷ್ಟೇ ಅಲ್ಲ, ಹಲವು ರೈಲು ಅವಘಡಗಳಿಗೂ ಈ ಉಂಡಾಡಿ ದನಗಳು ಕಾರಣವಾಗಿವೆ. ಅಷ್ಟೇ ಯಾಕೆ, ವಿಮಾನ ನಿಲ್ದಾಣಗಳಿಗೂ ಈ ದನಗಳು ನುಗ್ಗಿವೆ. ರನ್ವೇಗಳಲ್ಲಿ ದನಗಳು ನುಗ್ಗುವುದು, ವಿಮಾನಗಳಿಗೆ ಅಡ್ಡಿಯುಂಟು ಮಾಡುವುದು ಸಾಮಾನ್ಯವಾಗಿವೆ. 2018ರಲ್ಲಿ ಅಹ್ಮದಾಬಾದ್ ವಿಮಾನ ನಿಲ್ದಾಣದ ರನ್ವೇಗೆ ನುಗ್ಗಿದ ಆಕಳೊಂದು ಭಾರೀ ಗೊಂದಲ ಸೃಷ್ಟಿಸಿತ್ತು. ಇದರಿಂದಾಗಿ ಎರಡು ವಿಮಾನಗಳು ಲ್ಯಾಂಡಿಂಗ್ನ್ನು ಅರ್ಧಕ್ಕೇ ನಿಲ್ಲಿಸಬೇಕಾಯಿತು. ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ಗೇಟ್ನ ಭದ್ರತೆಯನ್ನು ಮೀರಿ ಆಕಳು ನುಗ್ಗಿದ್ದರಿಂದ ಒಂದು ಸರಕು ಸಾಗಣೆ ವಿಮಾನವನ್ನು ಮುಂಬೈಗೆ ತಿರುಗಿಸಲಾಯಿತು. ಐದು ದೇಶೀಯ ವಿಮಾನಗಳ ಸಂಚಾರ ವಿಳಂಬವಾಯಿತು.
ರೈಲ್ವೇ ಇಲಾಖೆಯ ಆಂತರಿಕ ದತ್ತಾಂಶಗಳ ಪ್ರಕಾರ, 2019ರಲ್ಲಿ ಭಾರತದಲ್ಲಿ ಪ್ರತಿ ದಿನ ಸುಮಾರು 70ರಿಂದ 80 ದನಕರುಗಳು ರೈಲಿಗೆ ಸಿಲುಕುತ್ತಿದ್ದವು. 2017-18ರಲ್ಲಿ 18,900 ಪ್ರಕರಣಗಳು ಸಂಭವಿಸಿದ್ದರೆ, 2019ರಲ್ಲಿ 43,000ಕ್ಕೆ ತಲುಪಿತ್ತು. ವಂದೇಭಾರತ್ ಎಕ್ಸ್ಸ್ಪ್ರೆಸ್ ಉದ್ಘಾಟನೆಯಾಗಿ ಎರಡನೇ ದಿನದ ಸಂಚಾರದಲ್ಲೇ ಆಕಳಿಗೆ ಢಿಕ್ಕಿ ಹೊಡೆದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಬೀದಿ ನಾಯಿಗಳಿಂದ ರಸ್ತೆ ಅಪಘಾತಗಳಷ್ಟೇ ನಡೆದರೆ ಬೀದಿ ದನಗಳಿಂದ ರೈಲು, ವಿಮಾನ ಅಪಘಾತಗಳೂ ಸಂಭವಿಸಿವೆ. ಇಷ್ಟಾದರೂ ನ್ಯಾಯಾಲಯಗಳು ಈ ಬೀದಿ ದನಗಳ ಹಿಂದಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಮುಂದಾಗಿಲ್ಲ. ಯಾಕೆಂದರೆ ಬೀದಿ ನಾಯಿಗಳಿಗೆ ಪರಿಹಾರ ಸೂಚಿಸಿದಂತೆ ಬೀದಿ ದನಗಳಿಗೆ ಪರಿಹಾರ ಸೂಚಿಸ ಹೊರಟರೆ, ಆಗ ಸರಕಾರದ ಅವೈಜ್ಞಾನಿಕ ಜಾನುವಾರು ಮಾರಾಟಕ್ಕೆ ಸಂಬಂಧಿಸಿದ ಕಾಯ್ದೆಯನ್ನು ಬದಲಿಸುವುದಕ್ಕೆ ಸೂಚನೆ ನೀಡಬೇಕಾಗುತ್ತದೆ. ಬೀದಿ ದನಗಳಿಗೆ ಕೆಲವು ರಾಜಕೀಯ ಪಕ್ಷಗಳ, ಕೇಂದ್ರ ಸರಕಾರದ ಬೆಂಬಲವಿದೆ. ಬೀದಿನಾಯಿಗಳಿಗೆ ಆ ಬೆಂಬಲವಿಲ್ಲ. ಆದುದರಿಂದಲೇ ಬೀದಿ ನಾಯಿಗಳ ವಿಷಯದಲ್ಲಿ ನಮ್ಮ ನ್ಯಾಯಮೂರ್ತಿ ಉದ್ದುದ್ದವಾದ ಭಾಷಣವನ್ನು ಧಾರಾಳವಾಗಿ ನೀಡಬಲ್ಲರು.
ಇದೇ ಸಂದರ್ಭದಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ರೇಬಿಸ್ ಪ್ರಕರಣಗಳನ್ನೂ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ರೇಬಿಸ್ ಕಾರಣದಿಂದಾಗಿ ಪ್ರತಿ ವರ್ಷ 20,000 ಸಾವುಗಳು ಸಂಭವಿಸುತ್ತವೆ ಎಂದು ಅಂಕಿಅಂಶಗಳು ಹೇಳುತ್ತಿವೆ. ಹೀಗೆ ಮೃತಪಟ್ಟ ಪ್ರಕರಣಗಳಲ್ಲಿ ಶೇ. 30-ಶೇ.60ರಷ್ಟು 15 ವರ್ಷದ ಒಳಗಿನವರಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ರೇಬಿಸ್ ಬಗ್ಗೆ ಇನ್ನೂ ಜಾಗೃತಿ ಮೂಡಿಲ್ಲ. ಬಹುತೇಕ ಆರೋಗ್ಯ ಇಲಾಖೆಗಳಲ್ಲಿ ನಾಯಿ ಕಚ್ಚಿದಾಗ ಅದಕ್ಕೆ ಸಂಬಂಧಿಸಿದ ಔಷಧಿಗಳೇ ಇಲ್ಲ. ರೇಬಿಸ್ ಔಷಧಿಗಳನ್ನು ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಸಿಗುವಂತೆ ಮಾಡುವಲ್ಲಿ ಸರಕಾರ ಯಾಕೆ ವಿಫಲವಾಗಿದೆ ಎನ್ನುವುದನ್ನು ಕೂಡ ನ್ಯಾಯಾಲಯ ಈ ಸಂದರ್ಭದಲ್ಲಿ ಕೇಳಬೇಕು.







