‘ಸರಸ್ವತಿ ನದಿ’ಗೆ ಒದಗಿದ ಸ್ಥಿತಿ ಗಂಗೆಗೆ ಒದಗದಿರಲಿ

PC: x.com/narendramodi
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ತ್ರಿವೇಣಿ ಸಂಗಮವೆಂದು ನಂಬಲಾಗಿರುವ ಗಂಗಾನದಿಯಲ್ಲಿ ಸ್ನಾನ ಮಾಡಿದ್ದಾರೆ. ಆದರೆ, ಇತ್ತೀಚೆಗೆ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ ಕಳಂಕವನ್ನು ಈ ಸ್ನಾನದಿಂದ ತೊಳೆದುಕೊಳ್ಳುವುದು ಅಷ್ಟು ಸುಲಭವಿಲ್ಲ. ಯಾಕೆಂದರೆ, ಕಾಲ್ತುಳಿತದ ಬಗ್ಗೆ ಕೇಳಿ ಬರುತ್ತಿರುವ ಆರೋಪಗಳ ಗಂಭೀರತೆ ನೋಡಿದರೆ ಈ ದುರಂತ ಭಾರತದ ಆಧ್ಯಾತ್ಮಿಕತೆಗೆ ಒಂದು ಕಳಂಕವಾಗಿ ಬಾಧಿಸಲಿದೆ. ಬೃಹತ್ ಹಿಂದೂ ಧಾರ್ಮಿಕ ಸಮ್ಮೇಳನವೆಂದು ಗುರುತಿಸಲ್ಪಡುತ್ತಿರುವ ಕುಂಭಮೇಳದಲ್ಲಿ ಹಿಂದೂ ಧರ್ಮೀಯರ ಸಾವು ನೋವುಗಳಿಗೆ ಕಾರಣವಾಗಿರುವ ಈ ದುರಂತವನ್ನು ‘ಹಿಂದುತ್ವದ ವಕ್ತಾರ’ ಎಂದು ಸ್ವಯಂ ಘೋಷಿಸಿಕೊಂಡ ಸರಕಾರವೇ ಮುಚ್ಚಿಡಲು ಯತ್ನಿಸುತ್ತಿದೆ. ಯಾವುದೇ ದುರಂತ ಸಂಭವಿಸಿದಾಗ ಸರಕಾರದ ನೇತೃತ್ವವನ್ನು ವಹಿಸಿದವರು ಅದರ ನೈತಿಕ ಹೊಣೆ ಹೊತ್ತು ಕೊಳ್ಳಬೇಕಾಗುತ್ತದೆ. ಆ ದುರಂತದ ಸಾವು ನೋವುಗಳ ಬಗ್ಗೆ ಗಂಭೀರ ಆರೋಪಗಳು ಕೇಳಿ ಬಂದಾಗ ಅದರ ಬಗ್ಗೆ ತನಿಖೆ ನಡೆಸುವುದಕ್ಕೆ ತಕ್ಷಣ ಒಂದು ತಂಡವನ್ನು ನೇಮಿಸುವುದು ಸರಕಾರದ ಜವಾಬ್ದಾರಿಯಾಗಿದೆ. ಕುಂಭಮೇಳದ ದುರಂತಕ್ಕೆ ಸಂಬಂಧಿಸಿ ಈವರೆಗೆ ಯಾರೂ ಹೊಣೆ ಹೊತ್ತುಕೊಂಡಿಲ್ಲ ಮಾತ್ರವಲ್ಲ, ಆರೋಪಗಳ ಕುರಿತು ತನಿಖೆ ನಡೆಸುವ ಉತ್ಸಾಹವನ್ನು ಸರಕಾರ ಪ್ರದರ್ಶಿಸಿಲ್ಲ. ಬದಲಿಗೆ ದುರಂತದಲ್ಲಿ ಸಂಭವಿಸಿದ ಸಾವು ನೋವುಗಳನ್ನು ಮುಚ್ಚಿಡುವುದಕ್ಕಾಗಿ ಗರಿಷ್ಠ ಪ್ರಯತ್ನ ನಡೆಸುತ್ತಿದೆ.
ಕಾಲ್ತುಳಿತದಲ್ಲಿ ನಿಖರವಾಗಿ 30 ಜನರು ಸತ್ತಿದ್ದಾರೆ ಎಂದು ಸ್ಥಳೀಯ ಜಿಲ್ಲಾಡಳಿತ ಮಾಧ್ಯಮಗಳಿಗೆ ಅಂಕಿಅಂಶವನ್ನು ಈಗಾಗಲೇ ಬಿಡುಗಡೆ ಮಾಡಿದೆ. ಆದರೆ ಇದರ ಬೆನ್ನಿಗೇ ಕಾಲ್ತುಳಿತದಲ್ಲಿ ಸತ್ತಿರುವುದು 30 ಜನರಲ್ಲ, ನೂರಾರು ಜನರು ಮೃತಪಟ್ಟಿದ್ದು ಅಂಕಿಅಂಶಗಳನ್ನು ಸರಕಾರ ಮುಚ್ಚಿಟ್ಟಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಲು ಪತ್ರಕರ್ತರಿಗೆ ಪೊಲೀಸರು ಅವಕಾಶ ನೀಡುತ್ತಿಲ್ಲ. ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ‘ದುರಂತದಲ್ಲಿ ಸಾವಿರಾರು ಮಂದಿ ಮೃತಪಟ್ಟಿದ್ದಾರೆ’’ ಎಂದು ರಾಜ್ಯ ಸಭೆಯಲ್ಲೇ ಆರೋಪಿಸಿದ್ದಾರೆ. ಅದಕ್ಕೆ ಆಕ್ಷೇಪ ವ್ಯಕ್ತವಾದಾಗ ‘‘ತನ್ನ ಅಂದಾಜು ತಪ್ಪಾಗಿದ್ದರೆ ಸರಕಾರ ನಿಖರ ಸಂಖ್ಯೆಯನ್ನು ನೀಡಲಿ’’ ಎಂದು ಸವಾಲು ಹಾಕಿದ್ದಾರೆ. ಆದರೆ ಸರಕಾರ ಆ ಸವಾಲನ್ನು ಈವರೆಗೆ ಸ್ವೀಕರಿಸಿಲ್ಲ. ಇದರ ಬೆನ್ನಿಗೇ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ‘‘ನೂರಾರು ಜನರು ಸತ್ತಿದ್ದು, ಉತ್ತರ ಪ್ರದೇಶ ಸರಕಾರ ಸಾವಿನ ಸಂಖ್ಯೆಗಳನ್ನು ಅಡಗಿಸುತ್ತಿದೆ. ಪರಿಹಾರ ನೀಡಬೇಕಾಗುತ್ತದೆ ಮತ್ತು ಜನರ ಆಕ್ರೋಶ ಎದುರಿಸಬೇಕಾಗುತ್ತದೆ ಎನ್ನುವ ಕಾರಣಕ್ಕೆ ಸರಕಾರ ತನ್ನ ವೈಫಲ್ಯವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ’’ ಎಂದು ಆರೋಪಿಸಿದ್ದಾರೆ. ಇದಕ್ಕೂ ಉತ್ತರ ಪ್ರದೇಶ ಸರಕಾರ ಪ್ರತಿಕ್ರಿಯೆ ನೀಡಿಲ್ಲ. ಸಮಾಜವಾದಿ ಪಕ್ಷದ ನಾಯಕಿ ಸಂಸದೆ ಜಯಾ ಬಚ್ಚನ್ ಅವರು ಇದಕ್ಕಿಂತಲೂ ಗಂಭೀರವಾದ ಆರೋಪವನ್ನು ಮಾಡಿದ್ದಾರೆ. ‘‘ಕಾಲ್ತುಳಿತಕ್ಕೆ ಬಲಿಯಾದ ಮೃತದೇಹಗಳನ್ನು ಗಂಗಾನದಿಗೆ ಎಸೆಯಲಾಗಿದೆ. ಆದುದರಿಂದ, ಅಲ್ಲಿನ ನೀರು ಅತ್ಯಂತ ಕಲುಷಿತವಾಗಿದೆ. ಇದೇ ನೀರನ್ನು ಅಲ್ಲಿನ ಜನರು ಬಳಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಆದರೆ ಸರಕಾರ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ’’ ಎಂದು ಅವರು ಆರೋಪಿಸಿದ್ದಾರೆ. ಶಿವಸೇನಾ ಸಂಸದ ಸಂಜಯ್ ರಾವತ್ ಅವರು ರಾಜ್ಯಸಭೆಯಲ್ಲಿ ಮಾತನಾಡುತ್ತಾ ‘‘ಕುಂಭಮೇಳದಲ್ಲಿ 2,000 ಜನರು ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ’’ ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ. ‘‘ಬೇರೆ ದೇಶದಲ್ಲಾದರೆ ಈ ದುರಂತಕ್ಕಾಗಿ ಅಲ್ಲಿನ ಪ್ರಧಾನಿ ರಾಜೀನಾಮೆ ನೀಡಬೇಕಾಗುತ್ತಿತ್ತು’’ ಎಂದು ಹೇಳಿದ್ದಾರೆ. ಹಿಂದೂ ಧರ್ಮದ ಹಿತಾಕಾಂಕ್ಷಿಯೆಂದು ಬಿಂಬಿಸುತ್ತಿರುವ ಸರಕಾರವೊಂದು, ತನ್ನ ಮೇಲೆ ಇಂತಹದೊಂದು ಆರೋಪ ಮಾಡುತ್ತಿರುವಾಗ ಅದರ ಕಳಂಕವನ್ನು ತೊಳೆದುಕೊಳ್ಳುವ ಭಾಗವಾಗಿ ತಕ್ಷಣ ಸ್ವತಂತ್ರ ಸಂಸ್ಥೆಗೆ ತನಿಖೆಗೆ ಆದೇಶ ನೀಡಬೇಕಾಗಿತ್ತು. ಆದರೆ ಸರಕಾರ ಅದನ್ನು ಮಾಡಿಲ್ಲ. ಅಂದರೆ ಸರಕಾರಕ್ಕೆ ಸತ್ಯ ಏನು ಎನ್ನುವುದು ಹೊರಗೆ ಬರುವುದು ಬೇಕಿಲ್ಲ. ಸರಕಾರ ದುರಂತದ ತನಿಖೆ ನಡೆಸುವ ಬದಲು ಆರೋಪ ಮಾಡಿದ ವಿರೋಧ ಪಕ್ಷದ ನಾಯಕರ ಮೇಲೆಯೇ ಪ್ರಕರಣವನ್ನು ದಾಖಲಿಸಲು ಮುಂದಾಗಿದೆ. ಈಗಾಗಲೇ ಸಮಾಜವಾದಿ ಪಕ್ಷದ ನಾಯಕನೊಬ್ಬನ ಮೇಲೆ ಸರಕಾರ ದೂರು ದಾಖಲಿಸಿದೆ.
ಆಘಾತಕಾರಿ ವಿಷಯವೆಂದರೆ, ಜನಸಾಮಾನ್ಯರ ಸಾವಿನ ಕುರಿತಂತೆ ಅಸೂಕ್ಷ್ಮವಾಗಿ ಬಿಜೆಪಿ ನಾಯಕರು ಹೇಳಿಕೆಗಳನ್ನು ನೀಡುತ್ತಿರುವುದು. ಬಿಜೆಪಿ ಸಂಸದೆ ಹೇಮಾಮಾಲಿನಿಯ ಪ್ರಕಾರ, ಕಾಲ್ತುಳಿತ ದುರಂತ ದೊಡ್ಡ ಸಂಗತಿಯೇ ಅಲ್ಲವಂತೆ. ಬೃಹತ್ ಮೇಳದಲ್ಲಿ ಇಂತಹ ದುರಂತಗಳು ಸಂಭವಿಸುವುದು ಸಾಮಾನ್ಯವಾಗಿರುವುದರಿಂದ, ಇದಕ್ಕೆ ಸರಕಾರ ಉತ್ತರ ದಾಯಿಯಲ್ಲ ಎಂದು ಅವರು ಹೇಳಿದ್ದಾರೆ. ಒಬ್ಬ ಸಂತನಂತೂ ಈ ಬಗ್ಗೆ ಹೇಳಿಕೆ ನೀಡುತ್ತಾ ‘‘ಕಾಲ್ತುಳಿತಕ್ಕೊಳಗಾದವರು ಸತ್ತಿಲ್ಲ. ಮೋಕ್ಷವನ್ನು ಪಡೆದಿದ್ದಾರೆ’’ ಎಂಬ ಬೇಜವಾಬ್ದಾರಿ ಹೇಳಿಕೆಯನ್ನು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಕೆಲವು ಸಾಧು ಸಂತರು, ಈ ಕಾಲ್ತುಳಿತದ ಬಗ್ಗೆ ತೀವ್ರ ಕಳವಳವನ್ನು ವ್ಯಕ್ತಪಡಿಸಿದ್ದು, ಇದಕ್ಕೆ ಸರಕಾರವನ್ನೇ ಹೊಣೆಯಾಗಿಸಿದ್ದಾರೆ. ವಿಐಪಿಗಳಿಗೆ ಒಂದು, ಶ್ರೀಸಾಮಾನ್ಯರಿಗೆ ಒಂದು ರೀತಿಯ ವ್ಯವಸ್ಥೆಯನ್ನು ಮಾಡಿರುವುದು ದುರಂತಕ್ಕೆ ಕಾರಣವಾಯಿತು ಎಂದು ಆರೋಪಿಸಿದ್ದಾರೆ. ಸಂಘಪರಿವಾರವನ್ನು ಬೆಂಬಲಿಸುವ, ಮುಖ್ಯಮಂತ್ರಿ ಆದಿತ್ಯನಾಥ್ ಅವರ ಭಕ್ತನೆಂದು ಗುರುತಿಸಲ್ಪಟ್ಟಿರುವ ದಾಸ್ನಾದ ಶಿವಶಕ್ತಿ ಧಾಮದ ಪೀಠಾಧೀಶ್ವರ ಯತಿ ನರಸಿಂಹಾನಂದ ಅವರು, ಸರಕಾರಕ್ಕೆ ತನ್ನ ರಕ್ತದಿಂದ ಪತ್ರ ಬರೆದು ಜಿಲ್ಲಾಡಳಿತದ ಅವ್ಯವಸ್ಥೆಯನ್ನು ಟೀಕಿಸಿದ್ದಾರೆ. ಈ ಸಾವು ನೋವುಗಳಿಗೆ ಸರಕಾರವೇ ಹೊಣೆ ಎಂದು ಆರೋಪಿಸಿದ್ದಾರೆ. ಈ ದುರಂತದಿಂದಾಗಿ ಹಿಂದೂ ಧರ್ಮಕ್ಕೆ ದೊಡ್ಡ ಹಿನ್ನಡೆಯಾಗಿದೆ ಎಂದು ಅವರು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.
ಇಲ್ಲಿ ಎರಡು ಮಹಾಪರಾಧಗಳು ನಡೆದಿರುವ ಬಗ್ಗೆ ಶಂಕಿಸಲಾಗಿದೆ. ಒಂದು, ನಡೆದ ಸಾವು ನೋವಿನ ಅಂಕಿಸಂಕಿಗಳನ್ನು ಮುಚ್ಚಿಡಲಾಗಿದೆಯಾದರೆ, ಹೆಣಗಳನ್ನು ಸರಕಾರ ಏನು ಮಾಡಿತು ಎನ್ನುವ ಪ್ರಶ್ನೆ ಏಳುತ್ತದೆ. ಈಗಾಗಲೇ ಆರೋಪಿಸಿರುವಂತೆ ನದಿಗಳಿಗೆ ಎಸೆಯಲಾಗಿದೆಯಾದರೆ ಅದು ಇನ್ನೊಂದು ಮಹಾಪರಾಧ. ಈಗಾಗಲೇ ಗಂಗಾನದಿಯನ್ನು ಶುದ್ಧೀಕರಿಸಲು ಸಾವಿರಾರು ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ. ಕುಂಭಮೇಳದಿಂದಾಗಿ ಗಂಗಾನದಿ ಮತ್ತೆ ಭಾರೀ ಮಾಲಿನ್ಯಕ್ಕೊಳಗಾಗಿದೆ. ಇದರ ಜೊತೆಜೊತೆಗೇ ದುರಂತದಲ್ಲಿ ಸಂಭವಿಸಿದ ಹೆಣಗಳನ್ನು ರಾತ್ರೋರಾತ್ರಿ ಗಂಗಾನದಿಗೆ ಎಸೆಯಲಾಗಿದೆಯಾದರೆ, ಅದು ಗಂಗೆಯ ಕಗ್ಗೊಲೆಯೇ ಸರಿ. ದುರಂತದಲ್ಲಿ ಸಂಭವಿಸಿದ ಸಾವುನೋವುಗಳ ಸತ್ಯಾಸತ್ಯತೆ ತಿಳಿಯಬೇಕಾದರೆ, ಕುಂಭಮೇಳದಲ್ಲಿ ನಾಪತ್ತೆಯಾದವರ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಬೇಕಾಗಿದೆ. ಈಗಾಗಲೇ ನಾಪತ್ತೆಯಾಗಿರುವವರ ಬಗ್ಗೆ ಹಲವು ದೂರುಗಳು ದಾಖಲಾಗಿದ್ದು, ಅವರ ಸ್ಥಿತಿ ಏನಾಗಿದೆ ಎನ್ನುವುದು ತನಿಖೆ ನಡೆದರೆ, ಕಾಲ್ತುಳಿತ ದುರಂತದ ನಿಜವಾದ ಅಂಕಿಅಂಶಗಳೂ ಬಹಿರಂಗವಾಗಬಹುದು. ಇದೇ ಸಂದರ್ಭದಲ್ಲಿ ಗಂಗಾ ನದಿಗೆ ಉಗುಳಿದರೆ ಅಪರಾಧ ಎಂದು ಕಾನೂನು ಮಾಡಿದವರೇ ಇಂದು ಇಡೀ ಗಂಗಾನದಿಯನ್ನು ಸಾಮೂಹಿಕವಾಗಿ ಕಲುಷಿತಗೊಳಿಸುವ ಯೋಜನೆಯ ನೇತೃತ್ವವನ್ನು ವಹಿಸಿದ್ದಾರೆ. ಕುಂಭಮೇಳದಲ್ಲಿ ತ್ರಿವೇಣಿ ಸಂಗಮವಾಗುವ ಜಾಗದಲ್ಲಿ ಸ್ನಾನ ಮಾಡಲಾಗುತ್ತದೆ ಎನ್ನುವ ನಂಬಿಕೆಯಿದೆ. ಆದರೆ ಇಲ್ಲಿ ಇದೆ ಎಂದು ನಂಬಲಾಗಿರುವ ಸರಸ್ವತಿ ನದಿಗೆ ಯಾವುದೇ ವೈಜ್ಞಾನಿಕ ಪುರಾವೆಯಿಲ್ಲ. ಪುರಾಣಕಾಲದಲ್ಲಿ ಇದು ಜೀವಂತವಿತ್ತು, ಈಗ ಅದು ಅಂತರ್ಗಾಮಿಯಾಗಿ ಅಂದರೆ ಭೂಮಿಯೊಳಗಿಂದ ಹರಿಯುತ್ತಿದೆ ಎಂದು ನಂಬಲಾಗುತ್ತಿದೆ. ಬಹುಶಃ ಮನುಷ್ಯನ ಕೈಗೆ ಸಿಲುಕಿದರೆ ತನ್ನ ಸ್ಥಿತಿಯೂ ಗಂಗಾನದಿಯಂತೆಯೇ ಚಿಂತಾಜನಕವಾಗಬಹುದು ಎನ್ನುವ ಭಯದಿಂದ ಅದು ಭೂಮಿಯ ಒಳಗಿಂದ ಹರಿಯುತ್ತಿರಬೇಕು. ಗಂಗೆಯ ಮೇಲೆ ಈ ದಾಳಿ ಹೀಗೇ ಮುಂದುವರಿಂದರೆ ಮುಂದಿನ 143 ವರ್ಷಗಳ ಬಳಿಕ ನಡೆಯುವ ಕುಂಭಮೇಳದ ಹೊತ್ತಿಗೆ ಗಂಗಾನದಿ ಕೂಡ ಮನುಷ್ಯನಿಂದ ತಲೆಮರೆಸಿಕೊಂಡು ಅಂತರ್ಗಾಮಿಯಾಗುವ ಸಾಧ್ಯತೆಗಳಿವೆ. ಮನುಷ್ಯರಿಗೆ ತಲೆ ಮರೆಸಿಕೊಂಡು ಹರಿಯುವ ಸರಸ್ವತಿಯ ಸ್ಥಿತಿ ಯಾವತ್ತೂ ಗಂಗಾನದಿಗೆ ಬರದಿರಲಿ ಎಂದು ನಾವು ಆಶಿಸೋಣ. ಕುಂಭಮೇಳದಲ್ಲಿ ಗಂಗೆಗಾದ ಅನ್ಯಾಯಕ್ಕೆ ಸರಕಾರ ನ್ಯಾಯ ನೀಡಲೇಬೇಕಾಗಿದೆ.







