ಉರಿ ಬೇಸಿಗೆ ಎದುರಿಸಲು ಸರಕಾರ ಸಿದ್ಧವಾಗಲಿ

ಸಾಂದರ್ಭಿಕ ಚಿತ್ರ PC: pinterest.com
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಈ ಸಲದ ಬೇಸಿಗೆ ಹಿಂದಿನಂತಿರುವುದಿಲ್ಲ ಎಂಬುದು ಫೆಬ್ರವರಿ ತಿಂಗಳಲ್ಲೇ ಅನುಭವಕ್ಕೆ ಬಂದಿದೆ. ಅಸಹನೀಯ ಉರಿ ಬಿಸಿಲು ಹೀಗೆಯೇ ಮುಂದುವರಿದು ಮೇ ತಿಂಗಳ ಕೊನೆಯವರೆಗೆ ಇನ್ನಷ್ಟು ಉಗ್ರ ಸ್ವರೂಪ ತಾಳಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಈ ಕಾಲಾವಧಿಯಲ್ಲಿ ಕೆಲವು ಕಡೆ ಬಿಸಿಗಾಳಿ ಬೀಸುವ ಸಂಭವವಿದೆ ಎಂದು ಪರಿಣಿತರು ತಿಳಿಸಿದ್ದಾರೆ.
1901ರ ಫೆಬ್ರವರಿ ನಂತರ ಈ ಸಲದ ಫೆಬ್ರವರಿ ತಿಂಗಳಿನ ಉರಿ ಬಿಸಿಲು ಅತಿ ಹೆಚ್ಚಿನದಾಗಿತ್ತೆಂದು ಹವಾಮಾನ ಇಲಾಖೆಯೂ ಹೇಳಿದೆ. ಈಗಾಗಲೇ ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಕಡೆ ತಾಪಮಾನ ಹಿಂದಿಗಿಂತ ಹೆಚ್ಚಾಗಿದೆ. ಇದು ಮಾರ್ಚ್ ಕೊನೆಯ ನಂತರ ಇನ್ನಷ್ಟು ಪ್ರಖರವಾಗಲಿದೆ ಎಂದು ಸದರಿ ಪರಿಣಿತರು ಎಚ್ಚರಿಸಿದ್ದಾರೆ. ಒಟ್ಟಾರೆ ಮುಂದಿನ ಮೂರು ತಿಂಗಳ ಕಾಲಾವಧಿಯಲ್ಲಿ ಕನಿಷ್ಠ ಹಾಗೂ ಗರಿಷ್ಠ ತಾಪಮಾನ ಹಿಂದಿನಂತೆ ಇರುವುದಿಲ್ಲ. ಇದರಿಂದ ದೇಶದ ಅರ್ಥ ವ್ಯವಸ್ಥೆಯ ಮೇಲೆ ಕೂಡ ದುಷ್ಪರಿಣಾಮ ಉಂಟಾಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಜನಸಾಮಾನ್ಯರ ದೈನಂದಿನ ಬದುಕು ವಿಶೇಷವಾಗಿ ಆರೋಗ್ಯ ಪರಿಸ್ಥಿತಿಯಲ್ಲಿ ಅಸ್ತವ್ಯಸ್ತ ಉಂಟಾಗುವ ಸಾಧ್ಯತೆ ಇದೆ.
ಈ ಸಲದ ಬೇಸಿಗೆಯಲ್ಲಿ ಬಿಸಿಗಾಳಿಯ ಪರಿಣಾಮವಾಗಿ ಜನರ ಆರೋಗ್ಯದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಉಂಟಾಗುವ ಸಂಭವವಿದೆ ಎಂದು ಆರೋಗ್ಯ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ದಕ್ಷಿಣ ಕನ್ನಡ ಸೇರಿದಂತೆ ಕೆಲವು ಕಡೆ ಫೆಬ್ರವರಿ ತಿಂಗಳಲ್ಲೇ ಉಷ್ಣತಾಪಮಾನ 41 ಡಿಗ್ರಿ ಸೆಲ್ಸಿಯಸ್ ದಾಟಿತ್ತು.
ಅರಣ್ಯದೊಳಗಿನ ನದಿ ತೊರೆಗಳು ಬತ್ತಿ ಹೋಗುತ್ತಿವೆ. ನೀರಿನ ಅಭಾವದಿಂದಾಗಿ ಕಾಡಿನಲ್ಲಿ ಇರುವ ಪ್ರಾಣಿಗಳು ಯಾತನೆ ಅನುಭವಿಸುತ್ತಿವೆ. ವಾತಾವರಣದಲ್ಲಿ ಉಷ್ಣಾಂಶ ಒಮ್ಮಿಂದೊಮ್ಮೆಲೆ 2ರಿಂದ 3 ಡಿಗ್ರಿ ಜಾಸ್ತಿಯಾದಾಗ ಕಾಡುಪ್ರಾಣಿಗಳು, ಪಶು ಪಕ್ಷಿಗಳು ನಿರ್ಜಲೀಕರಣದಿಂದ ತತ್ತರಿಸಿ ಹೋಗುತ್ತವೆ. ಉರಿ ಬಿಸಿಲಿನಿಂದ ಆಘಾತಕ್ಕೊಳಗಾದ ಪ್ರಾಣಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವನ್ಯ ಜೀವಿ ವೈದ್ಯಕೀಯ ಮೂಲಗಳು ತಿಳಿಸಿವೆ.
ಇಷ್ಟು ವರ್ಷ ಬೇಸಿಗೆಯ ಆರಂಭಕ್ಕೆ ಮುನ್ನವೇ ಇಷ್ಟೊಂದು ಸಂಖ್ಯೆಯಲ್ಲಿ ಪ್ರಾಣಿ, ಪಕ್ಷಿಗಳು ಇಂಥ ಸಮಸ್ಯೆಯನ್ನು ಎದುರಿಸಿರಲಿಲ್ಲ ಎಂದು ವನ್ಯಜೀವಿ ವೈದ್ಯರು ಕಳವಳದಿಂದ ಹೇಳುತ್ತಾರೆ. ಅರಣ್ಯ ಇಲಾಖೆಯೇನೋ ಪ್ರಾಣಿಗಳಿಗೆ ತೊಂದರೆಯಾಗಬಾರದೆಂದು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ರಕ್ಷಿತಾರಣ್ಯದಲ್ಲಿ ಕೆರೆ ಮತ್ತು ನೀರಿನ ಹೊಂಡಗಳನ್ನು ನಿರ್ಮಿಸಲಾಗಿದೆ. ತೊರೆಗಳ ನೀರನ್ನು ಸಂಗ್ರಹಿಸಿ ಬೇಸಿಗೆಯಲ್ಲೂ ಅಭಾವ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಆದರೂ ಸೆಕೆ ತಾಳದೇ ಹುಲಿ, ಚಿರತೆಗಳ ಸಹಿತ ಸಕಲ ಪ್ರಾಣಿಗಳು ಜನವಸತಿ ಪ್ರದೇಶಗಳಿಗೆ ಬರುತ್ತಿವೆ.
ಈ ಸಲವಂತೂ ಪಶ್ಚಿಮ ಘಟ್ಟದಲ್ಲಿ ಹಾಗೂ ಅದರ ತಪ್ಪಲು ಪ್ರದೇಶದಲ್ಲಿ ಇರುವ ನದಿ ತೊರೆಗಳಲ್ಲಿ ನೀರಿನ ಕೊರತೆಯಾಗಬಹುದೆಂಬ ಆತಂಕವೂ ಎದುರಾಗಿದೆ. ಡಿಸೆಂಬರ್ ಕೊನೆಯ ತನಕ ಚೆನ್ನಾಗಿ ಮಳೆಯಾಗಿರುವುದರಿಂದ ಘಟ್ಟ ಪ್ರದೇಶದ ನದಿ ತೊರೆಗಳಲ್ಲಿ ಮಾರ್ಚ್ ಕೊನೆಯವರೆಗೆ ನೀರು ಕೊರತೆಯಾಗುವುದಿಲ್ಲ ಎಂದು ಅರಣ್ಯ ಇಲಾಖೆಯ ಸಂರಕ್ಷಣಾಧಿಕಾರಿಗಳು ಭಾವಿಸಿದ್ದರು. ಆದರೆ ಬಹುತೇಕ ತೊರೆಗಳು ಫೆಬ್ರವರಿ ಕೊನೆಯಲ್ಲೇ ಬತ್ತಿ ಹೋಗಿವೆ. ಹೀಗಾಗಿ ಪರಿಸ್ಥಿತಿ ಕಳವಳಕಾರಿಯಾಗಿದೆ.
ಈ ಸಲದ ಬೇಸಿಗೆ ಮತ್ತು ಬಿಸಿಗಾಳಿಯಿಂದ ಜನರ ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡುವುದೆಂಬುದನ್ನು ಭಾರತೀಯ ಹವಾಮಾನ ಇಲಾಖೆ ವಿವರವಾಗಿ ಈಗಾಗಲೇ ತಿಳಿಸಿರುವುದರಿಂದ ಹವಾಮಾನದ ವೈಪರೀತ್ಯ ಹಾಗೂ ಬಿಸಿಗಾಳಿಯ ದುಷ್ಪರಿಣಾಮವನ್ನು ನಿಭಾಯಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈಗಿನಿಂದಲೇ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ರಾಜಕಾರಣಿಗಳು ಪರಸ್ಪರ ಕೆಸರೆರಚಾಟವನ್ನು ನಿಲ್ಲಿಸಿ ಸಾರ್ವಜನಿಕ ಆಸ್ಪತ್ರೆಗಳನ್ನು ಇನ್ನಷ್ಟು ಸುಸಜ್ಜಿತಗೊಳಿಸಲು ಶ್ರಮಿಸಬೇಕು. ಬೇಸಿಗೆಯ ಅವಧಿಯಲ್ಲಿ ನೀರು ಮತ್ತು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಂಭವವೂ ಇದೆ. ಅದನ್ನು ಎದುರಿಸಲು ಸರಕಾರ ಈಗಿನಿಂದಲೇ ತಯಾರಿ ಮಾಡಿಕೊಳ್ಳುವುದು ಅಗತ್ಯ.
ಇತ್ತೀಚೆಗೆ ಹವಾಮಾನದ ನಿಖರವಾದ ವರದಿ, ವಿಶ್ಲೇಷಣೆಗಳು ಬರುತ್ತಲೇ ಇಲ್ಲ. ಹವಾಮಾನದಲ್ಲಿ ಊಹಿಸಲಾಗದಷ್ಟು ಬದಲಾವಣೆಯಾಗಿರುವುದರಿಂದ ಸಂಬಂಧಿತ ಇಲಾಖೆಗೆ ಅಂದಾಜು ಮಾಡುವುದೂ ಕಷ್ಟಕರವೆನ್ನಲಾಗುತ್ತಿದೆ. ಒಂದೇ ಭೂ ಪ್ರದೇಶದ ಅಕ್ಕಪಕ್ಕಗಳಲ್ಲೇ ಒಂದೆಡೆ ವಿಪರೀತ ಮಳೆ ಇನ್ನೊಂದೆಡೆ ಅಸಹನೀಯವಾದ ಬಿಸಿಲನ್ನು ನೋಡುತ್ತಿದ್ದೇವೆ. ಇದರ ಬಗ್ಗೆ ಸಾರ್ವಜನಿಕರಿಗೆ ಖಚಿತ ವೈಜ್ಞಾನಿಕ ಮಾಹಿತಿ ನೀಡಲು ಸರಕಾರ ಈಗಲೇ ಕಾರ್ಯೋನ್ಮುಖವಾಗಬೇಕಾಗಿದೆ.
ಮಾರ್ಚ್ ತಿಂಗಳಿನಿಂದ ಬೇಸಿಗೆ ತೀವ್ರವಾಗುತ್ತಿದ್ದಂತೆ ಎಲ್ಲ ಕಡೆ ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗುವ ಸೂಚನೆಗಳು ಕಂಡು ಬರುತ್ತಿವೆ. ಹಾಗಾಗಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಸರಕಾರ ಮುಂಜಾಗ್ರತಾ ಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕು. ಆರೋಗ್ಯ ಸಮಸ್ಯೆ ಉಲ್ಬಣಿಸದಂತೆ ಸರಕಾರಿ ಆಸ್ಪತ್ರೆಗಳನ್ನು ಸಜ್ಜುಗೊಳಿಸಬೇಕು. ಜನಪ್ರತಿನಿಧಿಗಳು ಜನರ ಬಳಿ ಹೋಗಿ ಅವರ ಸಮಸ್ಯೆಯನ್ನು ಸಂಗ್ರಹಿಸಿ ಸರಕಾರದ ಮೇಲೆ ಒತ್ತಡ ತರಬೇಕು.ಅಧಿಕಾರದಲ್ಲಿ ಇರುವವರೂ ಮತ್ತು ಪ್ರತಿಪಕ್ಷದ ಜನಪ್ರತಿನಿಧಿಗಳು ಇಂಥ ಸಂದರ್ಭದಲ್ಲಿ ಒಂದುಗೂಡಿ ಕೆಲಸ ಮಾಡುವುದು ಅನಿವಾರ್ಯವಾಗಿದೆ.