ರಾಜ್ಯಪಾಲರು ಕೇಂದ್ರ-ರಾಜ್ಯಗಳ ನಡುವೆ ಸೇತುವೆಯಾಗಲಿ

ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ನಿರಾಕರಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಈ ಮೂಲಕ ‘ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ’ ಎಂಬಂತೆ ನೆರೆಯ ತಮಿಳುನಾಡು, ಕೇರಳಕ್ಕೆ ಸೀಮಿತವಾಗಿದ್ದ ರಾಜ್ಯಪಾಲರ ಸರ್ವಾಧಿಕಾರಿ ವರ್ತನೆ ಇದೀಗ ಕರ್ನಾಟಕಕ್ಕೂ ವಿಸ್ತರಿಸಿದಂತಾಗಿದೆ. ರಾಜ್ಯದಲ್ಲಿ ಸರಕಾರ ಮತ್ತು ರಾಜ್ಯಪಾಲರ ನಡುವೆ ಸಣ್ಣ ಪುಟ್ಟ ಸಂಘರ್ಷಗಳು ಈ ಹಿಂದೆಯು ನಡೆಯುತ್ತಾ ಬಂದಿವೆಯಾದರೂ, ಜಂಟಿ ಅಧಿವೇಶದಲ್ಲಿ ರಾಜ್ಯಪಾಲರು ಭಾಷಣ ಮಾಡಲು ನಿರಾಕರಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ರಾಜ್ಯಪಾಲರ ಈ ನಿರ್ಧಾರದ ಹಿಂದಿನ ಕಾರಣವೂ ಸ್ಪಷ್ಟವಿದೆ. ನರೇಗಾ ಬದಲಿಗೆ ಕೇಂದ್ರ ಸರಕಾರ ಜಾರಿಗೆ ತಂದಿರುವ ಪರಿಷ್ಕೃತ ವಿಬಿ -ಜಿ ರಾಮ್ ಜಿ ಕಾಯ್ದೆಯ ವಿರುದ್ಧ ಈ ಬಾರಿಯ ಜಂಟಿ ಅಧಿವೇಶನದ ಜತೆ ಜತೆಗೇ ವಿಶೇಷ ಅಧಿವೇಶನವನ್ನು ಕರೆದಿರುವುದು ರಾಜ್ಯಪಾಲರ ಅಸಮಾಧಾನಕ್ಕೆ ಕಾರಣವಾಗಿದೆ. ಸರಕಾರ ಸಿದ್ಧಪಡಿಸಿರುವ ಭಾಷಣದಲ್ಲಿನ 11 ಪ್ಯಾರಾಗಳ ಬಗ್ಗೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ತಾವು ಬೊಟ್ಟು ಮಾಡಿರುವ ಅಂಶಗಳನ್ನು ಕೈ ಬಿಡದಿದ್ದರೆ ಭಾಷಣವನ್ನು ಮಾಡುವುದಿಲ್ಲ ಎಂದು ರಾಜ್ಯಪಾಲರ ಕಚೇರಿ ಸಂದೇಶ ನೀಡಿದೆ. ಈ ಸಂಬಂಧ ರಾಜ್ಯಪಾಲರ ಮನವೊಲಿಸುವ ಪ್ರಯತ್ನ ಮುಂದುವರಿದಿದೆ.
ನಿನ್ನೆಯಷ್ಟೇ ತಮಿಳುನಾಡಿನ ವಿಧಾನಸಭಾ ಅಧಿವೇಶನದಲ್ಲಿ ಭಾಷಣ ಮಾಡಲು ರಾಜ್ಯಪಾಲರು ತೋರಿಸಿದ ಅಸಹಕಾರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ತಮಿಳುನಾಡಿನಲ್ಲಿ ಸರಕಾರ ಮತ್ತು ರಾಜ್ಯಪಾಲರ ನಡುವಿನ ತಿಕ್ಕಾಟ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ತಮಿಳು ನಾಡಿನ ಅಧಿವೇಶದಲ್ಲಿ ರಾಜ್ಯಪಾಲರು ಭಾಷಣ ಮಾಡಲು ನಿರಾಕರಿಸಿರುವುದು ಮೂರನೆಯ ಬಾರಿಗೆ. ಹಾಗೆಯೇ ನಾಲ್ಕು ಬಾರಿ ಅಧಿವೇಶನದಿಂದ ಹೊರ ನಡೆದಿದ್ದಾರೆ. 2025ರಂತೆಯೇ ಈ ಬಾರಿಯೂ ರಾಜ್ಯಪಾಲ ರವಿ ಅವರು ರಾಷ್ಟ್ರಗೀತೆಗೆ ಅಪಮಾನವಾಗಿದೆ ಎಂಬ ನೆಪವನ್ನು ಮುಂದಿಟ್ಟು ಅಧಿವೇಶನದಿಂದ ಅರ್ಧದಲ್ಲೇ ಹೊರನಡೆದಿದ್ದಾರೆ. ಆದರೆ ಅವರ ಅಸಮಾಧಾನದ ಹಿಂದಿನ ಕಾರಣ ಬೇರೆಯೇ ಇದೆ. ಕೇಂದ್ರದ ಯಾವುದೇ ಯೋಜನೆಗಳನ್ನು ಅಥವಾ ನೀತಿಗಳನ್ನು ರಾಜ್ಯ ಸರಕಾರ ಸಾರಾಸಗಟಾಗಿ ವಿರೋಧಿಸಿದಾಗ ಕೆಲವೊಮ್ಮೆ ರಾಜ್ಯಪಾಲರು ಸಂದಿಗ್ಧ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ರಾಜ್ಯಪಾಲರನ್ನು ನೇಮಕ ಮಾಡಿರುವುದು ರಾಷ್ಟ್ರಪತಿಯೇ ಆಗಿದ್ದರೂ, ಅವರು ಕೇಂದ್ರ ಸರಕಾರದ ಸೂತ್ರದ ಗೊಂಬೆಗಳಾಗಿರುತ್ತಾರೆ. ಆದರೆ ತಮಿಳು ನಾಡಿನಲ್ಲಿ ರಾಜ್ಯಪಾಲರು ಜನತೆಯ ಹಿತಾಸಕ್ತಿಯನ್ನು ಮುಂದಿಟ್ಟು ಯಾವುದೇ ಪ್ರತಿರೋಧ ನಡೆಸಿದ ಉದಾಹರಣೆಯಿಲ್ಲ. ಅವರು ತನ್ನ ಅಧಿಕಾರವನ್ನು ತಮಿಳು ಅಸ್ಮಿತೆಯ ಮೇಲೆ ಪದೇ ಪದೇ ದಾಳಿ ನಡೆಸಲು ದುರುಪಯೋಗ ಪಡಿಸಿಕೊಂಡಿರುವುದು ಕಂಡು ಬರುತ್ತದೆ.
2023ರಲ್ಲಿ ಭಾಷಣದಲ್ಲಿರುವ ಅಂಬೇಡ್ಕರ್, ಪೆರಿಯಾರ್, ಕಾಮರಾಜ್ ಹೆಸರುಗಳು ರಾಜ್ಯಪಾಲರಿಗೆ ಅಪಥ್ಯವಾಯಿತು. ಅಷ್ಟೇ ಅಲ್ಲ, ಭಾಷಣದಲ್ಲಿ ಪ್ರಸ್ತಾಪಿಸಿರುವ ‘ದ್ರಾವಿಡ ಮಾದರಿ’ಯನ್ನು ಉಲ್ಲೇಖಿಸಲು ಅವರು ಇಷ್ಟ ಪಡಲಿಲ್ಲ. ರಾಜ್ಯಪಾಲರು ಭಾಷಣವನ್ನು ಅರ್ಧದಲ್ಲೇ ನಿಲ್ಲಿಸಿ ಸಭಾ ತ್ಯಾಗ ಮಾಡಿದರು. ಆವರೆಗೆ ಜನಪ್ರತಿನಿಧಿಗಳು ಕಲಾಪದ ನಡುವೆ ಸಭಾತ್ಯಾಗ ಮಾಡುವುದು ಎಷ್ಟು ಸರಿ ಎಂದು ಮಾಧ್ಯಮಗಳು ಚರ್ಚೆ ನಡೆಸುತ್ತಿದ್ದವು. ಆದರೆ ರಾಜಕಾರಣಿಗಳಂತೆ ರಾಜ್ಯಪಾಲರು ಕೂಡ ಸಭಾತ್ಯಾಗದ ರಾಜಕಾರಣಕ್ಕೆ ಮೊರೆ ಹೋದರೆ ಸರಕಾರಕ್ಕೆ ಮಾರ್ಗದರ್ಶನ ಮಾಡುವವರು ಯಾರು? ಎನ್ನುವ ಪ್ರಶ್ನೆ ಎದ್ದಿತು. ಅನಗತ್ಯವಾಗಿ ರಾಜ್ಯ ಸರಕಾರದ ನೀತಿ, ನಿಲುವುಗಳನ್ನು ಪ್ರಶ್ನಿಸುವ ಅಧಿಕಾರ ರಾಜ್ಯಪಾಲರಿಗಿಲ್ಲ. ಒಕ್ಕೂಟ ವ್ಯವಸ್ಥೆಯನ್ನು ಹಿಡಿದಿಟ್ಟುಕೊಳ್ಳುವ ಮಹತ್ತರ ಹೊಣೆಗಾರಿಕೆ ರಾಜ್ಯಪಾಲರಿಗಿದೆ. ಒಂದು ರೀತಿಯಲ್ಲಿ ಅವರು ಕೇಂದ್ರ ಮತ್ತು ರಾಜ್ಯಗಳ ನಡುವೆ ಸೇತುವೆಯಾಗಬೇಕು. ಆದರೆ ಇಂದು ರಾಜ್ಯಪಾಲರು ಗೋಡೆಯಾಗಿ ನಿಲ್ಲುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಒಂದು ರಾಜ್ಯವು ಅದು ಹತ್ತು ಹಲವು ಸಾಮಾಜಿಕ, ರಾಜಕೀಯ ಚಳವಳಿಗಳನ್ನು ಹಾದು ಬಂದಿರುತ್ತದೆ. ದ್ರಾವಿಡ ಚಳವಳಿಯನ್ನು ಹೊರಗಿಟ್ಟು ತಮಿಳು ನಾಡನ್ನು ನೋಡುವುದಕ್ಕೆ ಸಾಧ್ಯವಿಲ್ಲ. ಗೋಕಾಕ್ ಚಳವಳಿಯಂತಹ ಭಾಷಾಪರವಾದ, ರೈತಪರವಾದ ಕೆಲವು ಚಳವಳಿಗಳನ್ನು ಹೊರಗಿಟ್ಟು ಕರ್ನಾಟಕವನ್ನೂ ನೋಡಲು ಸಾಧ್ಯವಿಲ್ಲ. ಕೇಂದ್ರದಿಂದ ನೇಮಕವಾಗಿರುವ ರಾಜ್ಯಪಾಲರು ಹೊರಗಿನವರಾಗಿರುತ್ತಾರೆ. ಅವರು ಆಯಾ ರಾಜ್ಯದ ಭಾವನೆಗಳಿಗೆ ಸ್ಪಂದಿಸುತ್ತಾ ತನ್ನ ಮಾರ್ಗದರ್ಶನವನ್ನು ಮಾಡಬೇಕಾಗುತ್ತದೆ. ಮುಖ್ಯವಾಗಿ ದಕ್ಷಿಣ ರಾಜ್ಯಗಳ ಅಸ್ಮಿತೆಗಳ ಬೇರುಗಳನ್ನು ಪ್ರಶ್ನೆ ಮಾಡಿದರೆ ಅದು ಒಕ್ಕೂಟ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು. ಜನರಿಂದ ನೇರವಾಗಿ ರಚನೆಯಾಗಿರುವ ಸರಕಾರಕ್ಕೆ ಜನರ ಹಿತಾಸಕ್ತಿಯನ್ನು ಕಾಯುವ ಹೊಣೆಗಾರಿಕೆಗಳಿರುತ್ತವೆ. ಒಂದು ವೇಳೆ, ಕೇಂದ್ರದ ನಿರ್ಧಾರದಿಂದ ರಾಜ್ಯಕ್ಕೆ ಅನ್ಯಾಯವಾಗುವುದಾದರೆ ಅದರ ವಿರುದ್ಧ ನಿರ್ಣಯವನ್ನು ತೆಗೆದುಕೊಳ್ಳುವ ಅಧಿಕಾರ ರಾಜ್ಯ ಸರಕಾರಕ್ಕಿದೆ. ರಾಜ್ಯ ಸರಕಾರದ ಆಗ್ರಹವನ್ನು ಕೇಂದ್ರಕ್ಕೆ ತಲುಪಿಸುವ ಹೊಣೆಗಾರಿಕೆಯನ್ನು ರಾಜ್ಯಪಾಲರು ಈ ಸಂದರ್ಭದಲ್ಲಿ ಹೊತ್ತುಕೊಳ್ಳಬೇಕು. ಆಗ ಕೇಂದ್ರ-ರಾಜ್ಯದ ನಡುವಿನ ಬಿಕ್ಕಟ್ಟು ಶಮನವಾಗುತ್ತದೆ. ಆದರೆ ರಾಜ್ಯಪಾಲರೇ ರಾಜಕಾರಣ ಮಾಡಲು ಮುಂದಾದಾಗ ಅದು ಸಾಂವಿಧಾನಿಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ.
ಕರ್ನಾಟಕದಲ್ಲಿ ಯಾವ ಕಾರಣಕ್ಕೂ ರಾಜ್ಯಪಾಲರು ಇಂತಹದೊಂದು ಸ್ಥಿತಿ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬಾರದು. ಸಚಿವ ಸಂಪುಟ ಸಿದ್ಧ ಪಡಿಸಿದ ಭಾಷಣವನ್ನು ಓದುವುದು ರಾಜ್ಯಪಾಲರ ಕರ್ತವ್ಯವಾಗಿದೆ. ಯಾಕೆಂದರೆ ರಾಜ್ಯಪಾಲರು ರಾಜ್ಯ ಸರಕಾರವನ್ನು ಪ್ರತಿನಿಧಿಸುತ್ತಾರೆ. ಕೇಂದ್ರದ ಮೂಗಿನ ನೇರಕ್ಕೆ, ತಾವೇ ಸಿದ್ಧಪಡಿಸಿದ ಭಾಷಣ ಓದಲು ರಾಜ್ಯಪಾಲರಿಗೆ ಅವಕಾಶವಿಲ್ಲ. ಭಾಷಣದಲ್ಲಿ ಒಕ್ಕೂಟ ವ್ಯವಸ್ಥೆಗೆ ಅಥವಾ ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ಅಂಶಗಳಿದ್ದರೆ ಅದನ್ನು ಓದಲು ನಿರಾಕರಿಸಬಹುದು. ಹಾಗೆಯೇ ರಾಷ್ಟ್ರಪತಿಯ ಗಮನಕ್ಕೆ ತರಬಹುದು. ಆದರೆ, ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಕಾಯ್ದೆಯಲ್ಲಿರುವ ಅಂಶಗಳನ್ನು ಆಕ್ಷೇಪಿಸುತ್ತದೆ ಎನ್ನುವ ಕಾರಣಕ್ಕೆ ಭಾಷಣವನ್ನು ಓದದೇ ಇರುವುದು ತಪ್ಪಾಗುತ್ತದೆ. ಭಾಷಣದಲ್ಲಿರುವ ಕೆಲವು ಅಂಶಗಳ ಬಗ್ಗೆ ಸಂಶಯಗಳಿದ್ದರೆ ಅದನ್ನು ಮಾತುಕತೆಯ ಮೂಲಕ ನಿವಾರಿಸಿಕೊಳ್ಳಬಹುದು. ಆದರೆ ಭಾಷಣ ಅಂತಿಮವಾಗಿ ರಾಜ್ಯದ ಜನರ ಹಿತಾಸಕ್ತಿಯನ್ನು ಎತ್ತಿ ಹಿಡಿಯುತ್ತದೆ ಎನ್ನುವುದಾದರೆ ಅದನ್ನು ವಿರೋಧಿಸುವ ಯಾವ ಅಧಿಕಾರವೂ ರಾಜ್ಯಪಾಲರಿಗೆ ಇಲ್ಲ. ಜಿ ರಾಮ್ ಜಿ ಯನ್ನು ಒಪ್ಪಬೇಕೋ ಬೇಡವೋ ಎನ್ನುವುದನ್ನು ತೀರ್ಮಾನಿಸುವ ಅಧಿಕಾರವಿರುವುದು ರಾಜ್ಯ ಸರಕಾರಕ್ಕೆ. ರಾಜ್ಯದ ಗ್ರಾಮೀಣ ಜನತೆಯ ಉದ್ಯೋಗ ಹಕ್ಕುಗಳನ್ನು ಈ ಕಾಯ್ದೆ ನಿರಾಕರಿಸುತ್ತದೆಯಾದರೆ ಅದನ್ನು ಸರಕಾರ ವಿರೋಧಿಸಬೇಕಾಗುತ್ತದೆ. ರಾಜ್ಯಪಾಲರು ರಾಜ್ಯದ ನಿರ್ಧಾರವನ್ನು ಕೇಂದ್ರಕ್ಕೆ ತಲುಪಿಸುವ ಮೂಲಕ ಸೇತುವೆಯ ಕೆಲಸವನ್ನು ಮಾಡಬೇಕು.







