ಪೊಲೀಸ್ ವ್ಯವಸ್ಥೆ ಜನಸ್ನೇಹಿ ಆಗಲಿ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಜನತಂತ್ರ ವ್ಯವಸ್ಥೆಯಲ್ಲಿ ಪೊಲೀಸ್ ಇಲಾಖೆಯ ಹೊಣೆಗಾರಿಕೆ ಅತ್ಯಂತ ಮಹತ್ವವುಳ್ಳದ್ದು. ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡುವ ಪ್ರಕ್ರಿಯೆಯ ಮೊದಲ ಮೆಟ್ಟಿಲು ಪೊಲೀಸ್ ಠಾಣೆಗಳಾಗಿರಬೇಕು. ದೂರು ದಾಖಲಿಸಲು ಬರುವ ಜನಸಾಮಾನ್ಯರೊಂದಿಗೆ ಸೌಜನ್ಯದಿಂದ ವರ್ತಿಸುವುದು ಎಷ್ಟು ಮುಖ್ಯವೋ ಅಪರಾಧ ಕೃತ್ಯಗಳನ್ನು ಭೇದಿಸುವ ಜಾಣ್ಮೆ, ದಕ್ಷತೆ ಮೈಗೂಡಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಜನಸ್ನೇಹಿ ನಡೆ ಮತ್ತು ಕಾರ್ಯದಕ್ಷತೆಯಿಂದ ಜನರಲ್ಲಿ ಭರವಸೆ ಮೂಡಿಸಬೇಕಾಗಿದ್ದ ಇಲಾಖೆಯ ವಿಶ್ವಾಸಾರ್ಹತೆಗೆ ಕುಂದೊದಗಿ ದಶಕಗಳೇ ಕಳೆದಿವೆ. ಪೊಲೀಸ್ ಠಾಣೆಗಳಿಗೆ ಹೋಗಲು ಜನಸಾಮಾನ್ಯರು ಹಿಂಜರಿಯುವಂತಹ ದಯನೀಯ ಸ್ಥಿತಿ ಇದೆ. ಕಾನೂನಿಗೆ ಉತ್ತರದಾಯಿ ಆಗಿರಬೇಕಾದ ಪೊಲೀಸ್ ವ್ಯವಸ್ಥೆಯು ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿದೆ. ಲೋಪಗಳನ್ನು ಸರಿಪಡಿಸುವ ಮತ್ತು ವ್ಯವಸ್ಥೆಯಲ್ಲಿ ಸುಧಾರಣೆ ತರುವ ಪ್ರಯತ್ನಗಳು ನಡೆದಿವೆಯಾದರೂ ಅವು ನಿರೀಕ್ಷಿತ ಮಟ್ಟದಲ್ಲಿ ಫಲ ಕೊಟ್ಟಿಲ್ಲ ಎಂಬುದಕ್ಕೆ ಪೊಲೀಸರ ಕಾರ್ಯವೈಖರಿಯೇ ಕನ್ನಡಿ ಹಿಡಿಯುತ್ತದೆ.
ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆ ತರುವುದೆಂದರೆ ಠಾಣೆಗಳಿಗೆ ಸುಸಜ್ಜಿತ ಕಟ್ಟಡ ಒದಗಿಸುವುದು, ಹೊಸ ವಾಹನಗಳ ಖರೀದಿ ಮತ್ತು ಆಧುನಿಕ ಉಪಕರಣಗಳನ್ನು ತಂದು ಸುರಿಯುವಂತಹ ಉಪಕ್ರಮಗಳು ಮಾತ್ರವಲ್ಲ. ಜನಸಮೂಹಕ್ಕೆ ಒದಗಿಸುವ ಸೇವೆಯ ಗುಣಮಟ್ಟ ಹೆಚ್ಚಿಸುವಂತಹ, ಸಿಬ್ಬಂದಿಯ ಮನೋಧೋರಣೆಯಲ್ಲಿ ಆಮೂಲಾಗ್ರ ಬದಲಾವಣೆ ತರುವಂತಹ ಮತ್ತು ಇಡೀ ಇಲಾಖೆಗೆ ಕಾಯಕಲ್ಪ ಕೊಡುವಂತಹ ಕೆಲಸ ಆಗಬೇಕು. ಅದು ಸಾಧ್ಯವೇ ಎಂಬುದು ಯಕ್ಷಪ್ರಶ್ನೆಯಾದರೂ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ದಿಸೆಯಲ್ಲಿ ಒಂದು ದೃಢ ಹೆಜ್ಜೆ ಇಟ್ಟಿರುವುದು ಸ್ವಾಗತಾರ್ಹ. ವ್ಯವಸ್ಥೆಗೆ ಅಂಟಿರುವ ಕೊಳೆ ತೊಳೆಯಲೇಬೇಕಾಗಿದೆ. ಇಲ್ಲವಾದಲ್ಲಿ ವ್ಯವಸ್ಥೆ ಬಗೆಗೆ ಜನರಲ್ಲಿ ಉಳಿದಿರುವ ಅಲ್ಪಸ್ವಲ್ಪ ನಂಬಿಕೆಯೂ ಕುಸಿಯಲಾರಂಭಿಸುತ್ತದೆ. ಪೊಲೀಸ್ ಸೇವೆಯನ್ನು ಸುಧಾರಿಸುವ ಮತ್ತು ಇಲಾಖೆಯ ಕಾರ್ಯದಕ್ಷತೆಯನ್ನು ಹೆಚ್ಚಿಸುವ ಅಗತ್ಯವನ್ನು ಸಚಿವರು ಮನಗಂಡಿರುವುದು ಮತ್ತು ಈ ಮೂಲಕ ಒಪ್ಪಿಕೊಂಡಿರುವುದು ಜನರಲ್ಲಿ ಒಂದಷ್ಟು ಭರವಸೆ ಮೂಡಿಸುವಂತಹುದು.
ಈ ಸಂಬಂಧ ಸಮಗ್ರವಾಗಿ ಪರಿಶೀಲನೆ ನಡೆಸಿ, ಶಿಫಾರಸುಗಳನ್ನು ಸಲ್ಲಿಸುವ ಜವಾಬ್ದಾರಿಯನ್ನು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಆರ್.ಕೆ. ದತ್ತ, ಎಂ.ಎನ್. ರೆಡ್ಡಿ ಮತ್ತು ಕಮಲ್ ಪಂತ್ ಅವರಿಗೆ ವಹಿಸಲಾಗಿದೆ. ಎರಡು ತಿಂಗಳಲ್ಲಿ ಶಿಫಾರಸು ಸಲ್ಲಿಸುವಂತೆಯೂ ಸಚಿವರು ಸೂಚಿಸಿದ್ದಾರೆ. ದತ್ತ ನೇತೃತ್ವದ ಸಮಿತಿಯು ಎಫ್‌ಐಆರ್ ದಾಖಲಿಸುವುದು, ದೂರುಗಳ ನಿರ್ವಹಣೆ, ಠಾಣೆಗಳ ಕಾರ್ಯವೈಖರಿ ಸೇರಿದಂತೆ ಇಲಾಖೆಯು ನಾಗರಿಕರಿಗೆ ಒದಗಿಸುತ್ತಿರುವ ಸೇವೆಗಳ ಗುಣಮಟ್ಟವನ್ನು ಪರಿಶೀಲಿಸಲಿದೆ. ಅವುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ, ಪಾರದರ್ಶಕವಾಗಿ ಒದಗಿಸುವ ಕುರಿತು ಸಲಹೆಗಳನ್ನು ನೀಡಲಿದೆ. ಪೊಲೀಸರು ಮತ್ತು ಸಾರ್ವಜನಿಕರ ನಡುವಿನ ನೇರ ಸಂವಹನವನ್ನು ಬಲಪಡಿಸುವುದಕ್ಕಾಗಿ ಸಮುದಾಯ ಆಧಾರಿತ ಪೊಲೀಸ್ ವ್ಯವಸ್ಥೆಯ ಸಾಧಕ-ಬಾಧಕ ಕುರಿತೂ ಪರಿಶೀಲನೆ ನಡೆಸಲಿದೆ. ರೆಡ್ಡಿ ನೇತೃತ್ವದ ಸಮಿತಿಯು ಸೈಬರ್ ಅಪರಾಧ, ಕೃತಕ ಬುದ್ಧಿಮತ್ತೆ, ವಿಧಿವಿಜ್ಞಾನ ಸೌಲಭ್ಯಗಳು, ತುರ್ತು ಸ್ಪಂದನ, ತರಬೇತಿಯ ಅಗತ್ಯ ಒಳಗೊಂಡ ಸುಧಾರಣಾ ಯೋಜನೆಯನ್ನು ಸಿದ್ಧಪಡಿಸಲಿದೆ. ಅಪರಾಧಗಳ ಸ್ವರೂಪದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸಿ, ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸವಾಲುಗಳಿಗೆ ಇಲಾಖೆಯನ್ನು ಸನ್ನದ್ಧಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳತ್ತ ಈ ಸಮಿತಿಯು ದೃಷ್ಟಿ ಹಾಯಿಸಲಿದೆ. ಪಂತ್ ನೇತೃತ್ವದ ಸಮಿತಿಯು ಇಲಾಖೆಯಲ್ಲಿ ಈಗ ಇರುವ ಕಾರ್ಯಭಾರ, ನೇಮಕಾತಿ ಪ್ರಕ್ರಿಯೆ ಮತ್ತು ಅದಕ್ಕೆ ಸಂಬಂಧಿಸಿದ ನಿಯಮ, ಸಿಬ್ಬಂದಿಯ ಸಂಖ್ಯೆ ಮತ್ತು ಸಾಮರ್ಥ್ಯ ವೃದ್ಧಿಗೆ ಕೈಗೊಳ್ಳಬೇಕಾದ ಕ್ರಮ, ಮುಂಭಡ್ತಿ ಮುಂತಾದ ಅಂಶಗಳ ಬಗ್ಗೆ ಪರಿಶೀಲನೆ ನಡೆಸಲಿದೆ.
ಪೊಲೀಸ್ ಸೇವೆಗಳ ಗುಣಮಟ್ಟ ಸುಧಾರಣೆ, ನೇಮಕಾತಿ ನಿಯಮಗಳಲ್ಲಿ ಬದಲಾವಣೆ, ಆಧುನಿಕ ತಂತ್ರಜ್ಞಾನದ ಸಮರ್ಪಕ ಬಳಕೆ ಮತ್ತು ಮುಂದೆ ಎದುರಾಗಬಹುದಾದ ಸವಾಲುಗಳಿಗೆ ಇಲಾಖೆಯನ್ನು ಸನ್ನದ್ಧಗೊಳಿಸುವ ಉದ್ದೇಶದಿಂದ ಈ ಸಮಿತಿಗಳನ್ನು ರಚಿಸಿರುವುದಾಗಿ ಗೃಹ ಸಚಿವರು ಹೇಳಿದ್ದಾರೆ. ಇವೆಲ್ಲ ಅಗತ್ಯವಿರುವ ಕ್ರಮಗಳು ಎಂಬುದರಲ್ಲಿ ಎರಡು ಮಾತಿಲ್ಲ. ತಜ್ಞರು ತಮಗೆ ನೀಡಿರುವ ಗಡುವಿನೊಳಗೆ ಶಿಫಾರಸುಗಳನ್ನು ಕೂಡ ಸಲ್ಲಿಸಬಹುದು. ಆದರೆ ಶಿಫಾರಸುಗಳ ಯಶಸ್ಸು ಅವುಗಳ ಅನುಷ್ಠಾನದ ಬಗೆಯನ್ನು ಆಧರಿಸಿರುತ್ತದೆ ಎಂಬುದನ್ನು ಮರೆಯಬಾರದು. ಶಿಫಾರಸುಗಳು ಎಷ್ಟೇ ಉನ್ನತ ಮಟ್ಟದಲ್ಲಿರಲಿ, ವೈಜ್ಞಾನಿಕವಾಗಿರಲಿ; ಅವುಗಳನ್ನು ಅನುಷ್ಠಾನಗೊಳಿಸುವ ಕೈಗಳು ಸಂಕಲ್ಪಶಕ್ತಿಯನ್ನು ಹೊಂದಿರದಿದ್ದರೆ ಅವು ಕಡತದೊಳಗೆ ಹುದುಗಿ ಕುಳಿತಿರಬೇಕಾಗುತ್ತದೆ. ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಪ್ರಯತ್ನ ಹೊಸದೇನೂ ಅಲ್ಲ. ಈ ಹಿಂದೆ, ರಾಷ್ಟ್ರೀಯ ಪೊಲೀಸ್ ಆಯೋಗ, ರೆಬೆರೊ ಸಮಿತಿ, ಪದ್ಮನಾಭಯ್ಯ ಸಮಿತಿ ಒಳಗೊಂಡಂತೆ ಹಲವು ಸಮಿತಿಗಳನ್ನು ರಚಿಸಲಾಗಿತ್ತು. ಪೊಲೀಸರನ್ನು ರಾಜಕೀಯ ಪ್ರಭಾವದಿಂದ ಮುಕ್ತಗೊಳಿಸಲು, ವರ್ಗಾವಣೆಗಳನ್ನು ಹೆಚ್ಚು ಪಾರದರ್ಶಕ ಆಗಿಸಲು ಹಲವು ಉಪಕ್ರಮಗಳನ್ನು ಅವು ಸೂಚಿಸಿದ್ದವು. ಸ್ವತಂತ್ರವಾದ ದೂರು ಪ್ರಾಧಿಕಾರಗಳ ರಚನೆಯನ್ನು, ಪ್ರಮುಖ ಹುದ್ದೆಗಳಲ್ಲಿ ಇರುವವರಿಗೆ ಕನಿಷ್ಠ ಅವಧಿ ನಿಗದಿಪಡಿಸುವುದನ್ನು ಶಿಫಾರಸು ರೂಪದಲ್ಲಿ ನೀಡಿದ್ದವು. ಇಷ್ಟಾಗಿಯೂ ವ್ಯವಸ್ಥೆ ಸುಧಾರಿಸಿಲ್ಲ ಎಂಬುದು ಕಹಿಸತ್ಯ.
ಪೊಲೀಸ್ ವ್ಯವಸ್ಥೆಯನ್ನು ಲಂಚದ ಕೂಪದಿಂದ ಹೊರಗೆ ತರುವುದು ಮತ್ತು ಇಲಾಖೆಯ ವ್ಯವಹಾರಗಳಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ತಡೆಯುವುದು ಸವಾಲಿನ ಕೆಲಸ. ತಮಗೆ ಬೇಕಾದ ಅಧಿಕಾರಿಗಳನ್ನು ತಮ್ಮ ಕ್ಷೇತ್ರದ ವ್ಯಾಪ್ತಿಯ ಠಾಣೆಗಳಿಗೆ ನಿಯೋಜಿಸುವಂತೆ ಶಾಸಕರು ಒತ್ತಡ ಹೇರುವುದು ಹೊಸ ವಿದ್ಯಮಾನವೇನೂ ಅಲ್ಲ. ಇಲಾಖೆಯಲ್ಲಿ ವರ್ಗಾವಣೆ ಎಂಬುದು ದಂಧೆಯ ಸ್ವರೂಪ ಪಡೆದಿದೆ. ಹಣ, ಜಾತಿ, ರಾಜಕೀಯ ಪ್ರಭಾವ ವಿಪರೀತಕ್ಕೆ ಹೋಗಿದೆ. ದುಷ್ಟರ ಜೊತೆ ಪೊಲೀಸರೇ ಕೈಜೋಡಿಸುವಂತಹ ಪ್ರವೃತ್ತಿ ದಿನೇ ದಿನೇ ಹೆಚ್ಚುತ್ತಿದೆ. ನಿಯಮಾನುಸಾರ ಕ್ರಮ ಜರುಗಿಸುವುದನ್ನು ಬಿಟ್ಟು ಕೆಲವು ಅಧಿಕಾರಿಗಳು ರಾಜಿ ಪಂಚಾಯಿತಿಗಳ ಮೂಲಕ ಪ್ರಕರಣಗಳ ಇತ್ಯರ್ಥಕ್ಕೆ ಮುಂದಾಗುತ್ತಿರುವುದು ಗುಟ್ಟಿನ ಸಂಗತಿಯೇನಲ್ಲ. ಭೂದಂಧೆ ವ್ಯವಹಾರಗಳಲ್ಲಿ ತೊಡಗಿರುವವರ ಜೊತೆ ಅಕ್ರಮವಾಗಿ ಸ್ನೇಹಹಸ್ತ ಚಾಚುವ ಚಾಳಿಯೂ ಹೆಚ್ಚುತ್ತಿದೆ ಎಂಬ ಆರೋಪಗಳಿವೆ. ಇಂತಹ ಪ್ರವೃತ್ತಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದಲ್ಲಿ ಸುಧಾರಣೆ ಉದ್ದೇಶದ ಯಾವುದೇ ಪ್ರಯತ್ನ ನಿರೀಕ್ಷಿತ ಫಲ ಕೊಡಲಾರದು. ಈ ದಿಸೆಯಲ್ಲಿ ಸಚಿವರು ದೃಢ ನಿಲುವು ತಳೆಯಬೇಕಾದುದು ಅಗತ್ಯ. ಸಿಬ್ಬಂದಿಗೆ ಪ್ರಾಮಾಣಿಕತೆಯ ಪಾಠ ಹೇಳುವ ಕೆಲಸ ಮೊದಲು ಆಗಬೇಕು.






