ನೈಜ ಉದ್ಯೋಗ ಖಾತರಿ ಯೋಜನೆ ಮತ್ತೆ ಬರಲಿ

ಸಾಂದರ್ಭಿಕ ಚಿತ್ರ Photo: chatgpt/civilsocietyonline.com
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಭಾರತದ ಬಹುಪಾಲು ಗ್ರಾಮೀಣ ಪ್ರದೇಶಗಳು ತೀವ್ರ ಸ್ವರೂಪದ ಆರ್ಥಿಕ ಸಮಸ್ಯೆಗಳ ಒತ್ತಡದಿಂದ ತತ್ತರಿಸಿ ಹೋಗಿವೆ. ಉದ್ಯೋಗಾವಕಾಶಗಳ ಕೊರತೆಯಿಂದ ಜನಸಾಮಾನ್ಯರು ಬಳಲುತ್ತಿದ್ದಾರೆ. ಒಂದೆಡೆ ಮಳೆಯಾದರೆ ಇನ್ನೊಂದೆಡೆ ಬರಗಾಲದ ಛಾಯೆ ಕವಿದಿದೆ. ಇಂಥ ಪರಿಸ್ಥಿತಿಯಲ್ಲಿ ನೆರವಿಗೆ ಬರುತ್ತಿದ್ದ ಉದ್ಯೋಗ ಖಾತರಿ ಯೋಜನೆಯ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಹೆಚ್ಚಿಗಿದೆ. ಇಂಥ ಸನ್ನಿವೇಶದಲ್ಲಿ ಕೇಂದ್ರ ಸರಕಾರ ಅದರ ಸ್ವರೂಪವನ್ನು ಬದಲಿಸಲು ಹೋಗಿ ಅದರ ನೈಜ ಉದ್ದೇಶವನ್ನೇ ಬುಡಮೇಲು ಮಾಡಿದೆ. ದೇಶದ ಹಿಂದಿನ ಯೋಜನೆಗಳನ್ನೆಲ್ಲ ಬದಲಿಸಿ ಅದಕ್ಕೆ ಬೇರೆ ಹೆಸರಿಟ್ಟು ಅದರ ನೈಜ ಜನಪರ ಆಶಯಗಳನ್ನು ತೆಗೆದು ಹಾಕಿ ಮತ್ತೇನನ್ನೋ ತುರುಕಿ ಮತ್ತೆ ಜಾರಿಗೆ ತರುವ ರಾಜಕೀಯ ದುರುದ್ದೇಶದ ಮಸಲತ್ತಿನಿಂದ ಜನರಿಗೆ ತೊಂದರೆಯಾಗಿದೆ.
ಮನರೇಗಾ ಹೆಸರನ್ನು ಬದಲಿಸಿ ವಿಬಿ-ಜಿ ರಾಮ್ ಜಿ ಯೋಜನೆಯನ್ನು ಜುಲೈ 1ರಿಂದ ಜಾರಿಗೆ ತರಲಾಗಿದೆ. ಇದು ಹಿಂದಿನ ಉದ್ಯೋಗ ಖಾತರಿ ಯೋಜನೆಯಂತಲ್ಲ, ಹಿಂದಿನ ಮನರೇಗಾ ಬಹುತೇಕ ಕೇಂದ್ರದ ಅನುದಾನದಿಂದ ಅನುಷ್ಠಾನಕ್ಕೆ ಬರುತ್ತಿತ್ತು. ಆದರೆ ಈಗಿನ ವಿಬಿ-ಜಿ ರಾಮ್ ಜಿ ಯೋಜನೆಯ ಶೇ. 60ರಷ್ಟು ಮಾತ್ರ ಕೇಂದ್ರ ಸರಕಾರ ಭರಿಸುತ್ತದೆ. ಉಳಿದ ಶೇ. 40ರಷ್ಟು ವೆಚ್ಚವನ್ನು ಆಯಾ ರಾಜ್ಯ ಸರಕಾರಗಳು ಭರಿಸಬೇಕಾಗುತ್ತದೆ. ಇದರಿಂದಾಗಿ ಈಗಲೇ ಸಂಪನ್ಮೂಲಗಳ ಕೊರತೆಯಿಂದ ಬಳಲುತ್ತಿರುವ ರಾಜ್ಯಗಳು ಇನ್ನಷ್ಟು ಆರ್ಥಿಕ ಒತ್ತಡದಿಂದ ತೀವ್ರ ತೊಂದರೆಗೆ ಒಳಗಾಗುತ್ತವೆ. ಹಾಗಾಗಿಯೇ ಬಿಜೆಪಿ ನೇತೃತ್ವದ ರಾಜ್ಯ ಸರಕಾರಗಳಿಂದಲೂ ಇದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಹಿಂದಿನ ಕೇಂದ್ರದ ಯುಪಿಎ ಸರಕಾರ ಜಾರಿಗೆ ತಂದಿದ್ದ ‘ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ’ (ಮನರೇಗಾ) ಅನುಷ್ಠಾನದಲ್ಲಿ ಹಲವಾರು ತಾಂತ್ರಿಕ ತೊಂದರೆಗಳಿದ್ದರೂ ದೇಶದ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಸಮಸ್ಯೆಗೆ ಪರಿಹಾರವನ್ನು ನೀಡುವಲ್ಲಿ ಅದು ಯಶಸ್ವಿಯಾಗಿತ್ತು.ಹಾಗಾಗಿಯೇ ನರೇಂದ್ರ ಮೋದಿಯವರ ನೇತೃತ್ವದ ಸರಕಾರ ಕೂಡ ಈ ಮನರೇಗಾ ಯೋಜನೆಗೆ ಇರುವ ಜನಸಾಮಾನ್ಯರ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಜನರ ಬೆಂಬಲವನ್ನು ಗಮನಿಸಿ ಇದನ್ನು ಮುಂದುವರಿಸಿಕೊಂಡು ಹೋಗಲು ತೀರ್ಮಾನಿಸಿತ್ತು. ಆದರೆ ಇದಕ್ಕೆ ಆರ್ಥಿಕ ನೆರವನ್ನು ಕ್ರಮೇಣ ಕಡಿಮೆ ಮಾಡುತ್ತಾ ಬಂದಿತ್ತು. ಕಳೆದ ವರ್ಷ ಉದ್ಯೋಗ ಖಾತರಿ ಯೋಜನೆಯನ್ನು ಸಂಪೂರ್ಣವಾಗಿ ಪರಿಷ್ಕರಿಸಿ ಅದನ್ನು ವಿಬಿ-ಜಿ ರಾಮ್ ಜಿ ಹೆಸರಿನಲ್ಲಿ ಮರು ಬ್ರಾಂಡ್ ಮಾಡಿ ಜಾರಿಗೆ ತಂದಿತು. ಆದರೆ ಈ ಯೋಜನೆಯ ಹೊಸ ಸ್ವರೂಪ ಅದರ ವ್ಯಾಪ್ತಿ ಮತ್ತು ಉಪಯುಕ್ತತೆಯನ್ನು ಸೀಮಿತಗೊಳಿಸಿ ಬಿಟ್ಟಿತು.
ಮನರೇಗಾ ಉದ್ಯೋಗಾಕಾಂಕ್ಷಿಗಳ ಹಕ್ಕು ಆಧರಿತವಾಗಿತ್ತು. ಆದರೆ ಹೊಸ ಹೆಸರನ್ನು ಹೊತ್ತುಕೊಂಡು ಬಂದ ಈ ಯೋಜನೆ ಇನ್ನು ಮುಂದೆ ಕಾಮಗಾರಿಯ ಬೇಡಿಕೆಯನ್ನು ಆಧರಿಸಿ ಜಾರಿಗೆ ಬರಲಿದೆ. ಹೆಚ್ಚಿನ ಹಾಗೂ ಕರಾರು ಬದ್ಧವಾಗಿ ನಿಧಿ ಬಿಡುಗಡೆ ವಿಬಿ-ಜಿ ರಾಮ್ ಜಿ ಯೋಜನೆಯ ಮುಖ್ಯ ಅಂಶವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗವನ್ನು ಖಾತರಿ ಪಡಿಸುವ ತನ್ನ ಮೂಲ ಉದ್ದೇಶದಿಂದ ದೂರ ಸರಿದಿರುವುದು ಇದರಿಂದ ಸ್ಪಷ್ಟವಾಗುತ್ತದೆ.
ಈ ವಿಬಿ-ಜಿ ರಾಮ್ ಜಿ ಎಂಬ ಹೊಸ ಸ್ವರೂಪದ ಯೋಜನೆಯಿಂದ ಹೆಚ್ಚಿನ ಉದ್ಯೋಗ ದಿನಗಳನ್ನು ಒದಗಿಸಲು ಅವಕಾಶವಿದೆ ಎಂದು ಕೇಂದ್ರ ಸರಕಾರ ಹೇಳುತ್ತದೆ. ಆದರೆ ಈ ಭರವಸೆ ಎಷ್ಟರ ಮಟ್ಟಿಗೆ ಈಡೇರುತ್ತದೆ ಎನ್ನುವದು ಸ್ಪಷ್ಟವಿಲ್ಲ. ಕೃಷಿ ಋತುವಿನಲ್ಲಿ 60 ದಿನಗಳ ವಿರಾಮದ ಷರತ್ತನ್ನು ವಿಧಿಸಿರುವುದು ಹಾಗೂ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವು ನಿರ್ಬಂಧಗಳನ್ನು ಹಾಕಿರುವುದು ಸ್ಥಳೀಯ ಉದ್ಯೋಗದ ಅಗತ್ಯಗಳಿಗೆ ಸ್ಪಂದಿಸುವ ಯೋಜನೆಯ ಶಕ್ತಿಯನ್ನು ಕುಂದಿಸಬಹುದು. ಮಳೆಯ ಅಭಾವ ಹಾಗೂ ಬರಗಾಲದಂಥ ಸಂದರ್ಭಗಳಲ್ಲಿ ಇಂಥ ನಿಯಮಗಳು ಪ್ರತಿಕೂಲ ಪರಿಣಾಮವನ್ನುಂಟು ಮಾಡಿದರೆ ಅಚ್ಚರಿ ಪಡಬೇಕಾಗಿಲ್ಲ.
ಮನರೇಗಾ ಬದಲಿಗೆ ಅದರ ಮೂಲ ಸ್ವರೂಪವನ್ನು ಬದಲಿಸಿ ಕೇಂದ್ರ ಸರಕಾರ ತಂದಿರುವ ವಿಬಿ-ಜಿ ರಾಮ್ ಜಿ ಬಗ್ಗೆ ಹಲವಾರು ರಾಜ್ಯಗಳು ಅದರಲ್ಲೂ ಬಿಜೆಪಿ ನೇತೃತ್ವದ ಸರಕಾರಗಳಿರುವ ರಾಜ್ಯಗಳು ಯೋಜನೆಯಲ್ಲಿನ ಲೋಪಗಳ ಬಗ್ಗೆ ತೀವ್ರ ಕಳವಳವನ್ನು ವ್ಯಕ್ತಪಡಿಸಿವೆ. ಆರ್ಥಿಕ ನೆರವಿನ ವಿಧಾನವನ್ನು ಮರು ಪರಿಶೀಲಿಸುವಂತೆ ಬಿಜೆಪಿ ಆಡಳಿತದಲ್ಲಿರುವ ಮಧ್ಯ ಪ್ರದೇಶ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳು ಕೇಂದ್ರ ಸರಕಾರಕ್ಕೆ ಮನವಿ ಮಾಡಿವೆ. ಉತ್ತರಾಖಂಡ, ಸಿಕ್ಕಿಂನಂಥ ಗುಡ್ಡಗಾಡು ರಾಜ್ಯಗಳು ಒಟ್ಟು ವೆಚ್ಚದಲ್ಲಿ ಶೇ. 10ರಷ್ಟನ್ನು ಮಾತ್ರ ಭರಿಸಬೇಕಿದ್ದರೂ ಅವುಗಳು ಕೂಡ ನೆರವಿನ ವಿಧಾನದ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿವೆ. ಇನ್ನು ಕೆಲವು ರಾಜ್ಯಗಳು ವೇತನದ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಬೇಕೆಂದು ಮತ್ತು 60 ದಿನಗಳ ವಿರಾಮದ ಅವಧಿಯನ್ನು ಕೈ ಬಿಡಬೇಕೆಂದು ಆಗ್ರಹಪಡಿಸಿವೆ. ವಿಬಿ-ಜಿ ರಾಮ್ ಜಿ ಯೋಜನೆಯನ್ನು ಜಾರಿಗೊಳಿಸಲು ತೀರ್ಮಾನಿಸಿರುವ ಕರ್ನಾಟಕದ ಕಾಂಗ್ರೆಸ್ ಸರಕಾರ ಮೂಲ ಯೋಜನೆಯನ್ನು ಪರಿಷ್ಕರಿಸಿರುವ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಈ ಪರಿಷ್ಕರಣೆಯ ವಿರುದ್ಧ ತೆಲಂಗಾಣ ಸರಕಾರದ ಜೊತೆಗೆ ಸೇರಿ ಸುಪ್ರೀಂ ಕೋರ್ಟ್ನಲ್ಲಿ ದಾವೆ ಹೂಡಲು ತೀರ್ಮಾನಿಸಿದೆ.
ಮನರೇಗಾದ ಸ್ವರೂಪವನ್ನು ಬದಲಿಸಿ ವಿಬಿ-ಜಿ ರಾಮ್ ಜಿ ಹೆಸರಿನಲ್ಲಿ ತಂದಿರುವ ಹೊಸ ಯೋಜನೆಯ ಬಗ್ಗೆ ಕೇಂದ್ರ ಸರಕಾರ ರಾಜ್ಯಗಳ ಜೊತೆಗೆ ಮುಂಚೆ ಸಮಾಲೋಚಿಸಬೇಕಿತ್ತು. ಈಗಲಾದರೂ ರಾಜ್ಯಗಳ ಅಸಮಾಧಾನದ ಬಗ್ಗೆ ಸಹಾನುಭೂತಿಯಿಂದ ಕಿವಿಗೊಡಬೇಕು. ಹೊಸ ನಿಯಮಾವಳಿಗಳನ್ನು ಮರು ಪರಿಶೀಲಿಸಬೇಕು. ಸದರಿ ಯೋಜನೆಯ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಒಣ ಹಠಮಾರಿತನದ ನೀತಿಯನ್ನು ಕೈ ಬಿಡಬೇಕು. ಹಿಂದಿನ ಜನಪರವಾದ ಉದ್ಯೋಗ ಖಾತರಿ ಯೋಜನೆಯನ್ನು ಮತ್ತೆ ಅನುಷ್ಠಾನಕ್ಕೆ ತರುವ ಬಗ್ಗೆ ಪರಾಮರ್ಶಿಸಿ ತೀರ್ಮಾನವನ್ನು ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿರುವ, ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿರುವ ಈ ಸನ್ನಿವೇಶದಲ್ಲಿ ಸಾಮಾಜಿಕ ಸುರಕ್ಷಾ ಜಾಲವನ್ನು ದುರ್ಬಲಗೊಳಿಸುವುದರಿಂದ ಲಕ್ಷಾಂತರ ಬಡ ಕಾರ್ಮಿಕರು ಸಂಕಷ್ಟದ ಸುಳಿಗೆ ಸಿಲುಕುವ ಗಂಡಾಂತರವಿದೆ ಎಂಬುದನ್ನು ಅರಿತು ಹಿಂದಿನ ಉದ್ಯೋಗ ಖಾತರಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಸೂಕ್ತ ಕ್ರಮವನ್ನು ಕೈಗೊಳ್ಳಬೇಕು.






