ಸೇಡಿನ ಕ್ರಮ ನಿಲ್ಲಲಿ

Photo: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ’ ಎನ್ನುವಂತೆ ನೀಟ್ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಮುಗಿದಿದೆಯಾದರೂ ಅದು ಕೆಲವು ಪೂರಕ ಚರ್ಚೆಗಳನ್ನು ಮುನ್ನೆಲೆಗೆ ತಂದಿದೆ. ಅನಿವಾರ್ಯ ಸನ್ನಿವೇಶದಲ್ಲಿ ಸರಕಾರ ಪ್ರತಿಭಟನಾಕಾರರ ಬೇಡಿಕೆಗೆ ಮಣಿದಂತೆ ವರ್ತಿಸಿದೆ ಎನ್ನುವುದು ಇದೀಗ ಸ್ಪಷ್ಟವಾಗುತ್ತಿದೆ. ಕೇಂದ್ರ ಸಚಿವರು ರಾಜೀನಾಮೆ ನೀಡಿರುವುದು ಮಾತ್ರವಲ್ಲ, ಪರೀಕ್ಷೆಗಳ ಆಮೂಲಾಗ್ರ ಸುಧಾರಣೆಗೆ ಸರಕಾರ ಕ್ರಮ ತೆಗೆದುಕೊಂಡಿದೆಯೇನೋ ನಿಜ. ಹಾಗೆಯೇ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಕಟ್ಟು ನಿಟ್ಟಿನ ಮಸೂದೆಯನ್ನು ಜಾರಿಗೆ ತರಲು ಮುಂದಾಗಿದೆ. ನೀಟ್ ಅಕ್ರಮಗಳ ಗಂಭೀರತೆಯನ್ನು ಸರಕಾರ ಸ್ವತಃ ಅರಿತಿದ್ದರೆ ಇದಕ್ಕಾಗಿ ಇಂತಹದೊಂದು ಪ್ರತಿಭಟನೆಯ ಅಗತ್ಯವೇ ಇರಲಿಲ್ಲ. ವಿದ್ಯಾರ್ಥಿಗಳು ಸಾಲು ಸಾಲಾಗಿ ಆತ್ಮಹತ್ಯೆಯ ದಾರಿ ಹಿಡಿದಾಗಲಾದರೂ ಸರಕಾರ ಸೋರಿಕೆಯ ನೈತಿಕ ಹೊಣೆಯನ್ನು ಹೊರಬೇಕಾಗಿತ್ತು. ಕೇಂದ್ರ ಸಚಿವರು ರಾಜೀನಾಮೆ ನೀಡಬೇಕಾಗಿತ್ತು. ಆದರೆ, ಅತ್ತ ಜಂತರ್ ಮಂತರ್ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವ ಹೊತ್ತಿನಲ್ಲೇ ಇತ್ತ ಪ್ರಧಾನಿ ನರೇಂದ್ರ ಮೋದಿಯವರು ಧರ್ಮೇಂದ್ರ ಪ್ರಧಾನ್ ಅವರನ್ನು ಹುಟ್ಟು ದಿನದ ನೆಪದಲ್ಲಿ ಹಾಡಿ ಹೊಗಳಿದ್ದರು. ಕೇಂದ್ರ ಸಚಿವರಾಗಿ ಪ್ರಧಾನ್ನ ಸೇವೆಯನ್ನು ಶ್ಲಾಘಿಸಿದ್ದರು. ಇದು ಪರೋಕ್ಷವಾಗಿ ಪ್ರತಿಭಟನಾಕಾರರಿಗೆ ಪ್ರಧಾನಿ ಮೋದಿ ಎಸೆದ ಸವಾಲಾಗಿತ್ತು. ಇದೀಗ ಒತ್ತಡಕ್ಕೆ ಮಣಿದು ಪ್ರಧಾನ್ ರಾಜೀನಾಮೆ ನೀಡಿದ್ದಾರಾದರೂ, ಆಳದಲ್ಲಿ ನೀಟ್ ಅಕ್ರಮದ ಕುರಿತಂತೆ ಕೇಂದ್ರ ಸರಕಾರಕ್ಕೆ ಯಾವುದೇ ಪಶ್ಚಾತ್ತಾಪ ಇಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಅಂತಹದೊಂದು ಪಶ್ಚಾತ್ತಾಪ ಇದ್ದಿದ್ದರೆ, ರಾಜೀನಾಮೆ ನೀಡಿದ ಪ್ರಧಾನ್ಗೆ ಸಂಸತ್ನಲ್ಲಿ ಎನ್ಡಿಎ ಮುಖಂಡರು ಹಾರ ಹಾಕಿ ಸನ್ಮಾನ ಮಾಡುತ್ತಿರಲಿಲ್ಲ. ತನ್ನ ಖಾತೆಯನ್ನು ನಿಭಾಯಿಸಲು ವಿಫಲರಾದ ಕಾರಣ, ಇಡೀ ದೇಶದ ಯುವಜನತೆಯ ಆಕ್ರೋಶಕ್ಕೆ ಮಣಿದು ಸರಕಾರ ಅವರ ಕೈಯಲ್ಲಿ ರಾಜೀನಾಮೆ ಕೊಡಿಸಿದೆ. ಇಷ್ಟಾದ ಮೇಲೆ ಅವರನ್ನು ಯಾವ ಸಾಧನೆಗಾಗಿ ಮತ್ತೆ ಸಂಸತ್ನಲ್ಲಿ ಸನ್ಮಾನಿಸಲಾಯಿತು? ಇದನ್ನು ಮೋದಿಯವರು ಯಾವ ರೀತಿಯಲ್ಲಿ ಸಮರ್ಥಿಸಿಕೊಳ್ಳುತ್ತಾರೆ. ಯಶಸ್ವಿಯಾಗಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದಕ್ಕಾಗಿ ಅವರನ್ನು ಸಂಸತ್ನಲ್ಲಿ ಅಭಿನಂದಿಸಲಾಯಿತು ಎಂದೇ ಭಾವಿಸಬೇಕಾಗುತ್ತದೆ. ಅಂದರೆ, ಆಳದಲ್ಲಿ ಸರಕಾರ ಪ್ರಧಾನ್ ಬೆನ್ನಿಗೆ ಇನ್ನೂ ನಿಂತಿದೆ ಎನ್ನುವುದನ್ನು ಇದು ಸ್ಪಷ್ಟ ಪಡಿಸಿದೆ.
ಪ್ರತಿಭಟನೆ ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಲಾಠಿ ಚಾರ್ಜ್ ಮಾಡುವುದು ಸರಿಯಲ್ಲ ಎಂದು ಸುಪ್ರೀಂಕೋರ್ಟ್ ಹೇಳುತ್ತಿದೆ. ಆದರೆ ಪ್ರತಿಭಟನೆಯ ಸಂದರ್ಭದಲ್ಲಿ ಕೇವಲ ಲಾಠಿಚಾರ್ಜ್ ನಡೆದಿರುವುದಲ್ಲ, ವಿದ್ಯಾರ್ಥಿಗಳ ವಿರುದ್ಧ ಎಕೆ-47ನ್ನು ಪೊಲೀಸರು ಬಳಸಿರುವುದು ಬೆಳಕಿಗೆ ಬಂದಿದೆ. ಬಿಹಾರದ ಸಿವಾನ್ನಲ್ಲಿ ಇತ್ತೀಚೆಗೆ ನಡೆದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ಎಕೆ-47ನ ರೈಫಲ್ನಿಂದ ಗುಂಡು ಹಾರಿಸಿರುವ ವೀಡಿಯೊ ವೈರಲ್ ಆಗಿದೆ. ಪಹಲ್ಗಾಮ್ ಅಮಾಯಕ ಪ್ರವಾಸಿಗರ ಮೇಲೆ ಉಗ್ರರು ದಾಳಿ ಮಾಡುತ್ತಿದ್ದಾಗ ಸುಮ್ಮಗಿದ್ದ ಎಕೆ-47 ಇದೀಗ ಈ ದೇಶದ ಯುವ ಸಮುದಾಯದ ಮೇಲೆ ಬಳಕೆಯಾಗುತ್ತಿರುವುದರ ಬಗ್ಗೆ ತೀವ್ರ ಕಳವಳ ವ್ಯಕ್ತವಾಗುತ್ತಿದೆ. ಮೇಲಧಿಕಾರಿಗಳಿಂದ ಆದೇಶ ಸಿಗದೇ ಪೊಲೀಸರು ಈ ರೈಫಲ್ನ್ನು ವಿದ್ಯಾರ್ಥಿಗಳ ವಿರುದ್ಧ ಬಳಸುತ್ತಾರೆಯೆ? ಗುಂಡು ಹಾರಿಸಿದ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಆದರೆ ಪೊಲೀಸರ ಕೈಗೆ ರೈಫಲ್ ಕೊಟ್ಟ ಮೇಲಧಿಕಾರಿ ಯಾರು? ಅವರನ್ನು ಗುರುತಿಸಿ ವಜಾಮಾಡುವ ಅಗತ್ಯವಿಲ್ಲವೆ? ಪೊಲೀಸರು ರೈಫಲ್ಗಳನ್ನು ಬಳಸುವಲ್ಲಿ ಬಿಹಾರ ಗೃಹ ಸಚಿವರ ಪಾತ್ರ ಇದೆಯೇ ಎನ್ನುವುದನ್ನು ತನಿಖೆ ಮಾಡುವ ಅಗತ್ಯವೂ ಇದೆ. ಯಾಕೆಂದರೆ, ಸರಕಾರದ ಕುಮ್ಮಕ್ಕಿಲ್ಲದೆ ಒಬ್ಬ ಸಾಮಾನ್ಯ ಪೊಲೀಸ್ ಸಿಬ್ಬಂದಿ ವಿದ್ಯಾರ್ಥಿಗಳ ವಿರುದ್ಧ ಎಕೆ -47 ಬಳಸುವುದು ಅಸಾಧ್ಯ.
ಇದೇ ಸಂದರ್ಭದಲ್ಲಿ ಜು. 20ರ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೆಲೆಟ್ ಬಳಕೆ ಮಾಡಿರುವುದು ಪೊಲೀಸ್ ಇಲಾಖೆಯೇ ಒಪ್ಪಿಕೊಂಡಿದೆ. ಎರಡು ಸುತ್ತು ಪ್ಲಾಸ್ಟಿಕ್ ಪೆಲೆಟ್ಗಳು ಸೇರಿದಂತೆ ಹಲವು ಸುತ್ತು ಅಪಾಯ ರಹಿತ ಶಸ್ತ್ರಾಸ್ತ್ರ ಪ್ರಯೋಗಿಸಿದೆ ಎಂದು ಪೊಲೀಸ್ ದಾಖಲೆ ಹೇಳುತ್ತಿದೆ. 55 ಇಲೆಕ್ಟ್ರಿಕಲ್ ಅಲ್ಲದ ಶೆಲ್ಗಳು, 15 ಇಲೆಕ್ಟ್ರಿಕ್ ಶೆಲ್ಗಳು, ಐದು ಅಶ್ರುವಾಯು ಗ್ರೆನೇಡ್ಗಳು, ಗಲಭೆ ವಿರೋಧಿ ಬಂದೂಕುಗಳಿಂದ ಎರಡು ಸುತ್ತು ಹಾಗೂ ಪೆಲೆಟ್ ಗನ್ಗಳಿಂದ ಎರಡು ಸುತ್ತು ಪ್ಲಾಸ್ಟಿಕ್ ಪೆಲೆಟ್ಗಳನ್ನು ಪ್ರಯೋಗಿಸಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಪೆಲೆಟ್ ಗನ್ನಿಂದಾಗಿ ಈಗಾಗಲೇ ಒಬ್ಬ ವಿದ್ಯಾರ್ಥಿಯ ಕಣ್ಣುಗಳಿಗೆ ಹಾನಿಯಾಗಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕಾಶ್ಮೀರದಲ್ಲಿ ಈ ಪೆಲೆಟ್ ಗನ್ಗಳು ಬಳಕೆಯಾಗಿರುವುದು ಈ ಹಿಂದೆ ಚರ್ಚೆಯಾದಾಗ, ಸರಕಾರ ಪರೋಕ್ಷವಾಗಿ ತನ್ನನ್ನು ಸಮರ್ಥಿಸಿಕೊಂಡಿತ್ತು. ಇದೀಗ ನೀಟ್ ಅಕ್ರಮಗಳ ವಿರುದ್ಧ ಹೋರಾಡುತ್ತಿರುವ ವಿದ್ಯಾರ್ಥಿಗಳನ್ನು ಕಾಶ್ಮೀರದ ಪ್ರತ್ಯೇಕತಾವಾದಿ ಹೋರಾಟಗಾರರೊಂದಿಗೆ ನಿಲ್ಲಿಸಿ ಅವರ ವಿರುದ್ಧ ಪೆಲೆಟ್ ಗನ್ ಬಳಸಿದೆ. ಇದೇ ಸಂದರ್ಭದಲ್ಲಿ ಸಾರ್ವಜನಿಕ ಪ್ರತಿಭಟನೆಯ ವಿರುದ್ಧ ಪೆಲೆಟ್ ಗನ್ಗಳನ್ನು ಬಳಸುವುದು ಎಷ್ಟು ಸರಿ ಎನ್ನುವುದು ಚರ್ಚೆಯ ವಿಷಯವಾಗುತ್ತಿದೆ. ಇದರ ವಿರುದ್ಧ ಮಾಜಿ ಐಪಿಎಸ್ ಅಧಿಕಾರಿ ಸೇರಿದಂತೆ ಮೂವರು ಸುಪ್ರೀಂಕೋರ್ಟ್ನ ಮೊರೆ ಹೋಗಿದ್ದಾರೆ.
ಸರಕಾರ ಬೇಡಿಕೆಗೆ ಒಪ್ಪಿದಂತೆ ನಟಿಸಿ ಪ್ರತಿಭಟನಾ ಕಾರರನ್ನು ಜಂತರ್ ಮಂತರ್ನಿಂದ ತೆರವುಗೊಳಿಸಿದೆ. ಆದರೆ, ಪ್ರತಿಭಟನಾಕಾರರ ಮೇಲೆ ಸೇಡಿನ ಕ್ರಮವನ್ನು ಮಾತ್ರ ಮುಂದುವರಿಸಿದೆ. ಪ್ರತಿಭಟನೆ ಹಿಂದೆಗೆದುಕೊಂಡ ದಿನಗಳನಂತರ ಇದೀಗ ಪ್ರತಿಭಟನೆಗೆ ಸಂಬಂಧಿಸಿ ಅಲ್ಲಲ್ಲಿ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಬಂಧಿಸುತ್ತಿರುವುದು, ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸುತ್ತಿರುವುದು ಕಂಡು ಬರುತ್ತಿದೆ. ಹಾಗೆಯೇ ಪ್ರತಿಭಟನೆಗೆ ಬೆಂಬಲ ನೀಡಿದ ಕೆಲವು ನಿರ್ದಿಷ್ಟ ವ್ಯಕ್ತಿಗಳ ನಿವಾಸಗಳ ಮೇಲೆ ದಾಳಿಗಳೂ ನಡೆಯುತ್ತಿವೆ. ಪ್ರತಿಭಟನಾಕಾರರ ಬೇಡಿಕೆಗಳನ್ನು ಸರಕಾರ ಒಪ್ಪಿರುವುದು ನಿಜವೇ ಆಗಿದ್ದರೆ, ಈ ಸೇಡಿನ ಕ್ರಮವನ್ನು ಯಾಕೆ ತೆಗೆದುಕೊಳ್ಳುತ್ತಿದೆ? ಪ್ರತಿಭಟನಾಕಾರರ ಬೇಡಿಕೆ ನ್ಯಾಯಯುತ ಎಂದ ಮೇಲೆ, ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳುತ್ತಿರುವ ಉದ್ದೇಶವೇನು? ಪ್ರತಿಭಟನಾಕಾರರ ಮೇಲೆ ಯಾವ ಕ್ರಮವನ್ನೂ ತೆಗೆದುಕೊಳ್ಳಬಾರದು, ಅಪ್ರಾಪ್ತ ವಯಸ್ಕ ಯುವಕರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿಕೆ ನೀಡಿದ್ದರೂ ಸರಕಾರ ಅದನ್ನು ನಿರ್ಲಕ್ಷಿಸಿ ಪ್ರತಿಭಟನಾಕಾರರ ವಿರುದ್ಧ ಸೇಡಿನ ಕಾರ್ಯಾಚರಣೆ ಮುಂದುವರಿಸುತ್ತಿರುವುದು ಅದರ ಅಪಾಯಕಾರಿ ಮನಸ್ಥಿತಿಯನ್ನು ಹೇಳುತ್ತದೆ. ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯದ ಬಗ್ಗೆ ಸ್ವತಂತ್ರ ತನಿಖೆಯೊಂದು ನಡೆಯುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಇಂಗಿತ ವ್ಯಕ್ತಪಡಿಸಿದೆ. ಆದರೆ ಅಂತಹದೊಂದು ತನಿಖೆಗೆ ಇನ್ನೂ ಅಧಿಕೃತ ಆದೇಶವನ್ನು ನೀಡಿಲ್ಲ. ಬರೇ ಬಾಯಿ ಮಾತಿನಲ್ಲಿ ಅನುಕಂಪವನ್ನು ಸೂಚಿಸುತ್ತಾ, ಇನ್ನೊಂದೆಡೆ ವಿದ್ಯಾರ್ಥಿಗಳ ದಮನ ಕಾರ್ಯ ನಡೆಯುತ್ತಿರುವುದು ನೋಡುತ್ತಿದ್ದರೆ, ಸುಪ್ರೀಂಕೋಟ್ ಚಾಟಿ ಬೀಸಿದಂತೆ ನಟಿಸುತ್ತಿದೆ, ಸರಕಾರ ಅತ್ತಂತೆ ನಟಿಸುತ್ತಿದೆ ಎನ್ನುವುದು ಸ್ಪಷ್ಟವಾಗುತ್ತಿದೆ. ನೀಟ್ ಸೋರಿಕೆಯಲ್ಲಿ ಭಾಗಿಯಾಗಿರುವ ಭ್ರಷ್ಟರಿಗೆ ಶಿಕ್ಷೆಯಾಗುತ್ತದೆಯೋ ಇಲ್ಲವೋ ಆದರೆ ನೀಟ್ ಅಕ್ರಮವನ್ನು ವಿರೋಧಿಸಿದ ವಿದ್ಯಾರ್ಥಿಗಳಂತೂ ಈಗಾಗಲೇ ಮಾನಸಿಕ, ದೈಹಿಕವಾಗಿ ಶಿಕ್ಷೆಯನ್ನು ಅನುಭವಿಸತೊಡಗಿದ್ದಾರೆ. ಇದನ್ನು ದೇಶ ಸಂಘಟಿತವಾಗಿ ವಿರೋಧಿಸುವ ಅಗತ್ಯವಿದೆ.






