ಕಾಶ್ಮೀರಿಗಳನ್ನು ಉಗ್ರರಿಗೆ ಒಪ್ಪಿಸದಿರೋಣ

ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ (Photo: PTI)
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘‘ದಿಲ್ಲಿ ಸ್ಫೋಟಕ್ಕೆ ಕಾರಣರಾಗಿರುವ ಎಲ್ಲರ ಮೇಲೂ ಕಠಿಣ ಕ್ರಮ ಕೈಗೊಳ್ಳಬೇಕು. ಆದರೆ ಇದರ ಹೆಸರಿನಲ್ಲಿ ಅಮಾಯಕ ನಾಗರಿಕರನ್ನು ಅನುಮಾನದಿಂದ ನೋಡುವುದನ್ನು ತಪ್ಪಿಸಬೇಕು. ಎಲ್ಲ ಕಾಶ್ಮೀರಿಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅವರ ಮೇಲೆ ದೌರ್ಜನ್ಯವೆಸಗಬಾರದು’’ ಹೀಗೆಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಭಾರತ ಸರಕಾರಕ್ಕೆ ಮನವಿ ಮಾಡಿದ್ದಾರೆ. ನ. 10ರಂದು ದಿಲ್ಲಿಯಲ್ಲಿ ನಡೆದ ಸ್ಫೋಟದ ಬಳಿಕ ಇಬ್ಬರು ಕಾಶ್ಮೀರಿ ವೈದ್ಯರನ್ನು ಬಂಧಿಸಲಾಗಿದೆ. ಸ್ಫೋಟದಲ್ಲಿ ಕಾಶ್ಮೀರದಲ್ಲಿರುವ ಉಗ್ರರ ಕೈವಾಡಗಳನ್ನು ಶಂಕಿಸಲಾಗಿದ್ದು ಈ ದಿಕ್ಕಿನಲ್ಲಿ ತನಿಖೆ ನಡೆಯುತ್ತಿದೆ. ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ಕೆಲವರನ್ನು ವಿಚಾರಣೆ ನಡೆಸಿದ ಎನ್ಐಎ ಬಳಿಕ ಬಿಡುಗಡೆಯನ್ನೂ ಮಾಡಿದೆ. ಆದರೆ ಮಾಧ್ಯಮಗಳು ತನಿಖೆ ಪೂರ್ತಿಯಾಗುವ ಮೊದಲೇ ಇಡೀ ಕಾಶ್ಮೀರಿಗಳನ್ನು ಸ್ಫೋಟಕ್ಕೆ ಹೊಣೆಗಾರರನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ. ಊಹಾಪೋಹಗಳ ವರದಿಗಳನ್ನು ಹರಿಯ ಬಿಟ್ಟು ಒಂದು ನಿರ್ದಿಷ್ಟ ಪ್ರದೇಶದ, ನಿರ್ದಿಷ್ಟ ಸಮುದಾಯದ ಜನರನ್ನು ಅಪರಾಧಿಗಳನ್ನಾಗಿ ಘೋಷಿಸಿ ಅವರಿಗೆ ಶಿಕ್ಷೆ ನೀಡುವ ಪ್ರಯತ್ನ ನಡೆಸುತ್ತಿದೆ. ಇದರ ಪರಿಣಾಮವಾಗಿ, ಕಾಶ್ಮೀರದ ಹೊರಗೆ ವಿದ್ಯಾಭ್ಯಾಸ ನಡೆಸುತ್ತಿರುವ ಕಾಶ್ಮೀರಿಗಳನ್ನು ಅನುಮಾನದ ಕಣ್ಣಿನಿಂದ ನೋಡಲಾಗುತ್ತಿದೆ ಮಾತ್ರವಲ್ಲ, ಅವರನ್ನು ಭಯೋತ್ಪಾದಕರಂತೆ ಚಿತ್ರಿಸುವ ಪ್ರಯತ್ನ ನಡೆಯುತ್ತಿದೆ. ಪರಿಣಾಮವಾಗಿ ಅವರ ಮೇಲೆ ಕೆಲವೆಡೆ ದಾಳಿಗಳೂ ನಡೆದಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ಕೇಂದ್ರ ಗೃಹ ಸಚಿವರಿಗೆ ಮೇಲಿನ ಮನವಿಯನ್ನು ಮಾಡಿದ್ದಾರೆ.
ಇಬ್ಬರು ಕಾಶ್ಮೀರಿ ವೈದ್ಯರ ಬಂಧನದ ಬಳಿಕ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಓದುತ್ತಿರುವ ಕಾಶ್ಮೀರಿ ವೈದ್ಯರು ಆತಂಕದಿಂದ ದಿನ ಕಳೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಭದ್ರತೆಯ ಹೆಸರಿನಲ್ಲಿ ಕಿರುಕುಳ ನೀಡುವುದು, ತಾರತಮ್ಯ ಎಸಗುವುದು, ಅಪಮಾನಿಸುವುದು ದಿನ ನಿತ್ಯ ನಡೆಯುತ್ತಿವೆಎಂದು ಅವರು ಆರೋಪಿಸುತ್ತಿದ್ದಾರೆ. ಸ್ಥಳೀಯ ಅಂಗಡಿಗಳು ಅವರಿಗೆ ದಿನಸಿ ವಸ್ತುಗಳನ್ನೂ ನಿರಾಕರಿಸುತ್ತಿವೆ ಎಂದು ಕೆಲವು ವಿದ್ಯಾರ್ಥಿಗಳು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ಫರೀದಾಬಾದ್ನಲ್ಲಿ ಸ್ಥಳೀಯ ಪೊಲೀಸರು ಕಾಶ್ಮೀರಿ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸುಮಾರು 2,000 ವಿದ್ಯಾರ್ಥಿಗಳಿಗೆ ಅವರು ತನಿಖೆಯ ಹೆಸರಿನಲ್ಲಿ ಕಿರುಕುಗಳನ್ನು ನೀಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇಂತಹ ಅವಮಾನ, ಹಿಂಸೆ, ದೌರ್ಜನ್ಯಗಳು ಕಾಶ್ಮೀರಿಗಳಿಗೆ ಹೊಸದೇನೂ ಅಲ್ಲ. ಕಾಶ್ಮೀರದಲ್ಲಿ ಉಗ್ರವಾದಿಗಳು ನಡೆಸುತ್ತಾ ಬರುವ ಎಲ್ಲ ಕೃತ್ಯಗಳ ಹೊಣೆಗಳನ್ನು ಇವರ ತಲೆಗೆ ಕಟ್ಟಿ ಅವರನ್ನು ನಾವು ಶಿಕ್ಷಿಸುತ್ತಾ ಬಂದಿದ್ದೇವೆ. ಇಷ್ಟಾದರೂ ಕಾಶ್ಮೀರಿಗಳು ಭಾರತದೊಂದಿಗೆ ಗುರುತಿಸುವುದಕ್ಕೆ ಇಷ್ಟ ಪಡುತ್ತಿದ್ದಾರೆ. ಕಳೆದ ಒಂದು ದಶಕದಲ್ಲಿ ಕಾಶ್ಮೀರಿಗಳನ್ನು ಭಾರತದ ವಿರುದ್ಧ ಎತ್ತಿಕಟ್ಟಲು ಉಗ್ರರು ಶತಪ್ರಯತ್ನ ನಡೆಸುತ್ತಾ ಬಂದಿದ್ದಾರೆ. ಆದರೆ ಕಾಶ್ಮೀರಿಗಳು ಆ ಪ್ರಯತ್ನವನ್ನು ವಿಫಲಗೊಳಿಸುತ್ತಲೇ ಬರುತ್ತಿದ್ದಾರೆ. ಒಂದೆಡೆ ಉಗ್ರವಾದಿಗಳ ಹಿಂಸಾಚಾರ, ಮಗದೊಂದೆಡೆ ಪೊಲೀಸರ, ಸೇನೆಯ ಅನುಮಾನದ ಕಣ್ಣುಗಳು. ಇವುಗಳ ನಡುವೆ ಕಾಶ್ಮೀರಿಗಳು ತಮ್ಮ ಭಾರತದ ಮೇಲಿನ ಪ್ರೇಮವನ್ನು ಸಾಬೀತುಪಡಿಸಬೇಕಾಗಿದೆ. ಕಾಶ್ಮೀರದ ಹೊರಗಡೆ ಬೇರೆ ಬೇರೆ ವಿಶ್ವವಿದ್ಯಾನಿಲಯಗಳಲ್ಲಿರುವ ವಿದ್ಯಾರ್ಥಿಗಳು ಭಾರತ-ಕಾಶ್ಮೀರದ ನಡುವಿನ ಕೊಂಡಿಗಳಾಗಿದ್ದಾರೆ, ಸೇತುವೆಗಳಾಗಿದ್ದಾರೆ. ಅವರನ್ನು ಅನುಮಾನಿಸಿ ಅವರ ಮೇಲೆ ದಾಳಿ ನಡೆಸುವುದೆಂದರೆ ಆ ಸೇತುವೆಗಳನ್ನು ನಾವೇ ಧ್ವಂಸಗೊಳಿಸಿದಂತೆ.
ಪಹಲ್ಗಾಮ್ ದಾಳಿಯ ಸಂದರ್ಭವನ್ನೇ ತೆಗೆದುಕೊಳ್ಳೋಣ. ಭದ್ರತಾ ವೈಫಲ್ಯದ ಲಾಭ ಪಡೆದು ನಾಲ್ಕು ಮಂದಿ ಉಗ್ರರು ಭಾರತದ ಪ್ರವಾಸಿಗರ ಮೇಲೆ ಯದ್ವಾತದ್ವಾ ಗುಂಡಿನ ಸುರಿಮಳೆಗೈದರು. ಈ ಸಂದರ್ಭದಲ್ಲಿ ತಮ್ಮ ಜೀವವನ್ನು ಒತ್ತೆಯಿಟ್ಟು ಸ್ಥಳೀಯ ಕಾಶ್ಮೀರಿಗಳು ಪ್ರವಾಸಿಗರನ್ನು ರಕ್ಷಿಸಿದರು. ಉಗ್ರರ ವಿರುದ್ಧ ಹೋರಾಡುತ್ತಲೇ ಓರ್ವ ಕಾಶ್ಮೀರಿ ಹುತಾತ್ಮನಾದ. ಅಂದು ಸ್ಥಳೀಯ ಕಾಶ್ಮೀರಿಗಳು ಪ್ರವಾಸಿಗರ ನೆರವಿಗೆ ಧಾವಿಸದೇ ಇದ್ದರೆ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುತ್ತಿತ್ತು. ತಮ್ಮನ್ನು ರಕ್ಷಿಸಿದ ಕಾಶ್ಮೀರಿಗಳ ಬಗ್ಗೆ ಪ್ರವಾಸಿಗರೇ ಕೃತಜ್ಞತೆಯ ಮಾತುಗಳನ್ನಾಡಿದ್ದಾರೆ. ಘಟನೆ ನಡೆದ ಒಂದು ಗಂಟೆಯ ಬಳಿಕ ಭದ್ರತಾ ಸಿಬ್ಬಂದಿ ಆಗಮಿಸಿದರು.ಅಲ್ಲಿಯವರೆಗೆ ಪ್ರವಾಸಿಗರನ್ನು ಕಾಪಾಡಿದ್ದು, ಅವರಿಗೆ ಧೈರ್ಯ ಹೇಳಿದ್ದು ಸ್ಥಳೀಯ ಕಾಶ್ಮೀರಿಗಳಾಗಿದ್ದರು. ಒಂದು ವೇಳೆ ಕಾಶ್ಮೀರಿಗಳೆಲ್ಲ ಉಗ್ರವಾದಿಗಳಾಗಿದ್ದರೆ ಇದು ಸಾಧ್ಯವಾಗುತ್ತಿತ್ತೆ? ಇಂದು ಕಾಶ್ಮೀರದಲ್ಲಿ ಉಗ್ರವಾದಿಗಳ ಸಂಖ್ಯೆ ಬೆರಳೆಣಿಕೆಯಷ್ಟೇ ಇದೆ. ಇವರಿಗೆ ಹೋಲಿಸಿದರೆ, ಭಾರತದ ಒಳಗೆ ಗೋವಿನ ಹೆಸರಿನಲ್ಲಿ, ಹಿಂದುತ್ವದ ಹೆಸರಿನಲ್ಲಿ ಜಾತಿಯ ಹೆಸರಿನಲ್ಲಿ ಹಿಂಸಾಚಾರಗಳನ್ನು ನಡೆಸುವ, ಕೊಲೆಗಳನ್ನು ಮಾಡುವ ಉಗ್ರವಾದಿಗಳ ದೊಡ್ಡ ಪಡೆಯೇ ಇದೆ. ಉತ್ತರ ಪ್ರದೇಶ ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಇಲ್ಲಿ ಅಲ್ಪಸಂಖ್ಯಾತರ ಮೇಲೆ ಹಿಂದುತ್ವದ ಹೆಸರಿನಲ್ಲಿ ಪದೇ ಪದೇ ದಾಳಿಗಳು ನಡೆಯುತ್ತಿವೆ. ಇಲ್ಲಿ ನಡೆಯುವ ಗುಂಪುದಾಳಿಗಳು ಕಾಶ್ಮೀರದಲ್ಲಿಯೂ ನಡೆಯುವುದಿಲ್ಲ. ಹಾಗೆಂದು ಇಡೀ ಉತ್ತರ ಪ್ರದೇಶದ ಜನರನ್ನೇ ನಾವು ಅನುಮಾನಾಸ್ಪದವಾಗಿ ನೋಡಲು ಸಾಧ್ಯವೆ? ಮಣಿಪುರದಲ್ಲಿ ಕುಕಿ ಬುಡಕಟ್ಟು ಸಮುದಾಯದ ಮೇಲೆ ಬರ್ಬರ ಹಿಂಸಾಚಾರಗಳನ್ನು ನಡೆಸಿದ ಉಗ್ರರು ಕಾಶ್ಮೀರಿಗಳೇನೂ ಅಲ್ಲ.
ಕಾಶ್ಮೀರವೆಂದರೆ ಕೇವಲ ಭೂಭಾಗವಲ್ಲ. ಬರೇ ಸೇನೆಯ ಕೋವಿಯ ಮೂಲಕ ಅದನ್ನು ನಮ್ಮದಾಗಿಸಲು ಸಾಧ್ಯವಿಲ್ಲ ಎನ್ನುವುದನ್ನು ಕಳೆದ ಒಂದು ದಶಕದಿಂದ ಕಂಡುಕೊಂಡಿದ್ದೇವೆ. ಎಲ್ಲಿಯವರೆಗೆ ಕಾಶ್ಮೀರಿಗಳು ನಮ್ಮವರಾಗಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ಕಾಶ್ಮೀರ ನಮ್ಮದಾಗಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಕಾಶ್ಮೀರದ ಜನರ ಭಾವನೆಗಳನ್ನು ನಾವು ಗೌರವಿಸಬೇಕು. ಕಾಶ್ಮೀರಿಯತ್ ಉಳಿದಾಗ ಮಾತ್ರ ಕಾಶ್ಮೀರ ಭಾರತದ ಭಾಗವಾಗಿ ಉಳಿಯಲು ಸಾಧ್ಯ. ಕಾಶ್ಮೀರದ ಹೊರಗೆ ನಾವು ಕಾಶ್ಮೀರಿಗಳನ್ನು ಹೇಗೆ ನಡೆಸಿಕೊಳ್ಳುತ್ತೇವೆ ಎನ್ನುವುದರ ಆಧಾರದಲ್ಲಿ ಕಾಶ್ಮೀರದೊಳಗೆ ಭಾರತದ ಕುರಿತಂತೆ ಅಭಿಪ್ರಾಯವೊಂದು ರೂಪುಗೊಳ್ಳುತ್ತದೆ. ಕಾಶ್ಮೀರದ ಹೊರಗಿರುವ ಕಾಶ್ಮೀರಿಗಳಲ್ಲಿ ಆತ್ಮವಿಶ್ವಾಸವನ್ನು ಬಿತ್ತುವುದು ಭಾರತೀಯರ ಕರ್ತವ್ಯವಾಗಿದೆ. ಭಾರತದ ಭಾಗವಾಗಿದ್ದಾಗ ಮಾತ್ರ ನಾವು ನೆಮ್ಮದಿಯ, ಭದ್ರತೆಯ ಬದುಕನ್ನು ಕಾಣಲು ಸಾಧ್ಯ ಎನ್ನುವುದನ್ನು ಕಾಶ್ಮೀರಿಗಳಿಗೆ ಮನವರಿಕೆ ಮಾಡಬೇಕು ಮತ್ತು ಅವರು ಆ ನಂಬಿಕೆಯ ಜೊತೆಗೆ ಕಾಶ್ಮೀರಕ್ಕೆ ಮರಳಿ ಅಲ್ಲಿ ಭಾರತದ ಪರವಾಗಿ ಜನರಲ್ಲಿ ಅಭಿಪ್ರಾಯಗಳನ್ನು ಬಿತ್ತಬೇಕು. ಕಾಶ್ಮೀರಿಗಳನ್ನು ನಾವಾಗಿಯೇ ಉಗ್ರವಾದಿಗಳ ಕೈಗೆ ಒಪ್ಪಿಸುವಂತಹ ಕೆಲಸವನ್ನು ಯಾವ ಕಾರಣಕ್ಕೂ ಮಾಡಬಾರದು. ಕಾಶ್ಮೀರಿಗಳ ಮೇಲೆ ಅನ್ಯಾಯವಾಗಿ ಹಲ್ಲೆ, ದೌರ್ಜನ್ಯಗಳು ನಡೆದಷ್ಟೂ ಅದರ ಲಾಭವನ್ನು ಕಾಶ್ಮೀರಿ ಪ್ರತ್ಯೇಕತಾ ವಾದಿಗಳು ಮತ್ತು ನೆರೆಯ ಪಾಕಿಸ್ತಾನ ತಮ್ಮದಾಗಿಸುತ್ತವೆ ಎನ್ನುವ ಎಚ್ಚರಿಕೆ ನಮಗಿರಬೇಕು.







