ಜೀವಘಾತಕ ನಕಲಿ ಔಷಧಿಗಳು

ಸಾಂದರ್ಭಿಕ ಚಿತ್ರ Photo: magnific
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಅಭಿವೃದ್ಧಿಯ ಹೆಸರಿನಲ್ಲಿ ಮಾಡಬಾರದ್ದೆನ್ನಲ್ಲ ಮಾಡುವ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಜೀವಪರ, ಜನಪರ ಕಾಳಜಿಗಳಿಗಿಂತ ಲಾಭಕೋರತನವೇ ಪ್ರಧಾನವಾಗಿದೆ. ಈ ಹೃದಯಹೀನ ವ್ಯವಸ್ಥೆಯಲ್ಲಿ ಮನುಷ್ಯನ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ತಿನ್ನುವ ಆಹಾರ ಹೇಗೋ ಸುರಕ್ಷಿತವಾಗಿಲ್ಲ. ಈಗ ಮಾರಣಾಂತಿಕ ಕಾಯಿಲೆಗಳಿಂದ ಪಾರಾಗಲು ಖರೀದಿಸುವ ಔಷಧಿಗಳೂ ಪ್ರಾಣಘಾತಕವಾಗಿವೆ. ಇಂಥ ಅಪಾಯಕಾರಿ ಔಷಧಿಗಳು ಮಾರುಕಟ್ಟೆಯನ್ನು ಪ್ರವೇಶಿಸಿರುವುದರಿಂದ ಜನತೆ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕಬೇಕಾದ ದಿನಗಳು ಬಂದಿವೆ. ಅವಧಿ ಮೀರಿದ ಹಾಗೂ ತಪ್ಪು ಲೇಬಲ್ಗಳನ್ನು ಹೊಂದಿರುವ ನಕಲಿ ಔಷಧಿಗಳ ಬಹುದೊಡ್ಡ ಜಾಲವನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಪತ್ತೆ ಹಚ್ಚಲಾಗಿದೆ
ಪ್ರಾಣಘಾತಕ ಈ ನಕಲಿ ಔಷಧಿಗಳು ಈಗಾಗಲೇ ರಾಜ್ಯದ ಔಷಧಿ ಅಂಗಡಿಗಳನ್ನು ಮತ್ತು ನೂರಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಕಾನೂನು ಬದ್ಧ ಮಾರ್ಗದ ಮೂಲಕ ಸೇರಿವೆ ಎಂಬುದು ಆತಂಕದ ಸಂಗತಿಯಾಗಿದೆ. ಈ ನಕಲಿ ಔಷಧಿಗಳನ್ನು ತೆಲಂಗಾಣ, ಹಿಮಾಚಲ ಪ್ರದೇಶ, ಹರ್ಯಾಣ ಮತ್ತು ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಸಂಗ್ರಹಿಸಿ ಇಲ್ಲವೇ ಆ ರಾಜ್ಯಗಳಲ್ಲಿ ತಯಾರು ಮಾಡಿ ನಂತರ ರಹಸ್ಯತಾಣವೊಂದರಲ್ಲಿ ಸಂಸ್ಕರಿಸಿ ಬೆಂಗಳೂರು ಮತ್ತಿತರ ಕಡೆ ವಿತರಿಸಲಾಗುತ್ತಿತ್ತು ಎಂಬ ಸಂಗತಿ ಬಯಲಿಗೆ ಬಂದಿದೆ. ಅಗ್ಗದ ಹಾಗೂ ಅವಧಿ ಮೀರಿದ ಔಷಧಿಗಳನ್ನು ಮರು ಪ್ಯಾಕೇಜ್ ಮಾಡಿ, ನಕಲಿ ಲೇಬಲ್ಗಳನ್ನು ಅಂಟಿಸಿ ಶೇ. 50 ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂಬ ಸಂಗತಿ ಔಷಧಿ ನಿಯಂತ್ರಣ ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ.
ಈ ನಕಲಿ ಔಷಧಿಗಳಲ್ಲಿ ಮಾತ್ರೆಗಳನ್ನು ಸೀಮೆ ಸುಣ್ಣ, ಸ್ಟಾರ್ಚ್ ಹಾಗೂ ಕಳಪೆ ಪುಡಿಗಳನ್ನು ಸೇರಿಸಿ ತಯಾರಿಸಲಾಗುತ್ತಿತ್ತು. ಮಧು ಮೇಹ, ರಕ್ತದೊತ್ತಡ, ಹೃದಯ ಸಂಬಂಧಿಸಿದ ಕಾಯಿಲೆಗಳಿಗೆ ಹಾಗೂ ಕ್ಯಾನ್ಸರ್ಗೆ ಈ ನಕಲಿ ಔಷಧಿಗಳನ್ನು ನೀಡಲಾಗುತ್ತಿತ್ತು. ಇಂಥ ನಕಲಿ ಔಷಧಿಗಳಿಂದ ದಿಢೀರ್ ಹೃದಯಾಘಾತ ಅಥವಾ ಪಾರ್ಶ್ವವಾಯು ಕಾಯಿಲೆಗಳು ಉಲ್ಬಣಿಸುತ್ತಿದ್ದವು. ಕಳಪೆ ಗುಣಮಟ್ಟದ ಆ್ಯಂಟಿಬಯೋಟಿಕ್ಗಳು ರೋಗಕಾರಕ ಬ್ಯಾಕ್ಟೀರಿಯಗಳನ್ನು ಪೂರ್ಣವಾಗಿ ನಾಶ ಮಾಡಲು ಆಗುವುದಿಲ್ಲ ಎಂಬುದು ಕಳವಳಕಾರಿ ಸಂಗತಿಯಾಗಿದೆ. ಈ ನಕಲಿ ಔಷಧಿಗಳನ್ನು ತೆಗೆದುಕೊಂಡರೂ ಕಾಯಿಲೆ ಗುಣವಾಗದಿದ್ದಾಗ ವೈದ್ಯರ ರೋಗ ನಿರ್ಣಯ ಅಥವಾ ಚಿಕಿತ್ಸೆಯನ್ನೇ ರೋಗಿಗಳು ಮತ್ತು ಅವರ ಸಂಬಂಧಿಕರು ಸಹಜವಾಗಿ ಸಂಶಯಿಸುತ್ತಾರೆ. ಇದರಿಂದ ಗಂಭೀರ ಕಾಯಿಲೆಗಳು ಮತ್ತಷ್ಟು ಉಲ್ಬಣಿಸುತ್ತವೆ.
ಜೀವ ರಕ್ಷಕ ಔಷಧಿಗಳನ್ನು ನಂಬಿ ಕ್ಯಾನ್ಸರ್ನಂಥ ಮಾರಕ ಕಾಯಿಲೆಯ ವಿರುದ್ಧ ಸೆಣಸುತ್ತಿರುವ ವ್ಯಕ್ತಿಗೆ ತನ್ನ ಜೀವ ಉಳಿಸಬೇಕಾದ ಔಷಧಿಗಳೇ ಕಳಪೆ ಎಂಬುದು ಗೊತ್ತಾದರೆ ಕುಸಿದು ಹೋಗುತ್ತಾನೆ. ಕಳಪೆ ಔಷಧಿ, ಕಲುಷಿತ ಚುಚ್ಚು ಮದ್ದಿನ ಪರಿಣಾಮವಾಗಿ ಸೋಂಕು ಹಾಗೂ ಹಲವಾರು ಸಮಸ್ಯೆಗಳು ಉಂಟಾಗಬಹುದು. ಇಂಥ ಸಂದರ್ಭಗಳಲ್ಲಿ ಅಂದರೆ ನಕಲಿ ಔಷಧಿಗಳನ್ನು ತೆಗೆದುಕೊಂಡ ರೋಗಿ ಸ್ಪಂದಿಸದಿದ್ದಾಗ, ಔಷಧಿಯ ವಿರುದ್ಧ ಪ್ರತಿರೋಧ ಗುಣವನ್ನು ರೋಗ ಬೆಳೆಸಿಕೊಂಡಿರಬಹುದು. ವೈದ್ಯರು ತಪ್ಪಾಗಿ ನಿರ್ಣಯಿಸಿ ಹೆಚ್ಚಿನ ಡೋಸ್ ಔಷಧಿಗಳನ್ನು ನೀಡಬಹುದು. ಹೀಗಾಗದಂತೆ ಎಚ್ಚರ ವಹಿಸಬೇಕಾಗಿದೆ. ಹಾಗಾಗಿ ಅಸುರಕ್ಷಿತ ಹಾಗೂ ಅಪಾಯಕಾರಿ ಔಷಧಿಗಳನ್ನು ಉಪಯೋಗಿಸುವ ಆಸ್ಪತ್ರೆಗಳನ್ನು ತುರ್ತಾಗಿ ಗುರುತಿಸಿ ಕ್ರಮ ಕೈಗೊಳ್ಳಬೇಕಾಗಿದೆ.
ಜೀವ ಕೊಲ್ಲುವ ಈ ನಕಲಿ ಔಷಧಿಗಳ ಜಾಲವನ್ನು ಪತ್ತೆ ಹಚ್ಚಿ ಕಾರ್ಯಾಚರಣೆಗೆ ಇಳಿದ ವಿಶೇಷ ತನಿಖಾ ತಂಡ(ಎಸ್ಐಟಿ) ಹಲವಾರು ಅಪಾಯಕಾರಿ ಅಂಶಗಳನ್ನು ಬಯಲಿಗೆಳೆದಿದೆ. ಕೆಲವು ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದಿದೆ. ಇದು ಇಷ್ಟಕ್ಕೆ ನಿಲ್ಲಬಾರದು. ನಕಲಿ ಔಷಧಿಗಳ ಉತ್ಪಾದಕರಿಂದ ಹಿಡಿದು ಔಷಧಿ ಅಂಗಡಿಗಳು ಹಾಗೂ ಚಿಕಿತ್ಸಾಲಯಗಳವರೆಗೆ ಹರಡಿದ ಕಾನೂನು ಬಾಹಿರ ಜಾಲವನ್ನು ಸದೆ ಬಡಿಯಲು ಕಠಿಣ ಕ್ರಮಗಳು ಅನಿವಾರ್ಯವಾಗಿವೆ. ನಕಲಿ ಔಷಧಿ ತಯಾರಿಕೆ ಹಾಗೂ ವಿತರಣೆಯನ್ನು ಕೊಲೆ ಯತ್ನದ ಆರೋಪ ಎಂದು ಪರಿಗಣಿಸಬೇಕು. ಪಾತಕಿಗಳಿಗೆ ಜಾಮೀನು ಸಿಗದಂಥ ಕಲಂಗಳನ್ನು ಹಾಕಬೇಕು. ಜೀವಾವಧಿ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಇದರಲ್ಲಿ ಶಾಮೀಲಾದವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು.
ಯಾವುದೇ ದೇಶದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಸರಕಾರದ ನಿಯಂತ್ರಣದಲ್ಲಿ ಇರಬೇಕು. ಆದರೆ ಖಾಸಗೀಕರಣದ ಇಂದಿನ ದಿನಗಳಲ್ಲಿ ಅವೆರಡು ಲಾಭದಾಯಕ ದಂಧೆಗಳಾಗಿವೆ. ಔಷಧಿ ವ್ಯಾಪಾರದಲ್ಲಿ ಅತಿ ಹೆಚ್ಚಿನ ಲಾಭ ಬರುವುದರಿಂದ ಉತ್ತರ ಭಾರತದ ಕೆಲವು ಕಂಪೆನಿಗಳು ಈ ದಂಧೆಯಲ್ಲಿ ತೊಡಗಿವೆ. ಪೇಟೆಂಟ್ ಪಡೆದ ಔಷಧಿಗಳಲ್ಲಿ ಲಾಭ ಬಂದಿದ್ದರೂ ಅನೇಕ ಜೀವ ರಕ್ಷಕ ಔಷಧಿಗಳ ಬೆಲೆ ಕಡಿಮೆಯಾಗುವುದಿಲ್ಲ.ಅದರಲ್ಲೂ ವಿಶೇಷವಾಗಿ ಮಧುಮೇಹ, ಹೃದಯ ಕಾಯಿಲೆ ಹಾಗೂ ಕ್ಯಾನ್ಸರ್ ಔಷಧಿಗಳನ್ನು ನಿರಂತರವಾಗಿ ಬಳಸುವುದರಿಂದ ಅದರಲ್ಲಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಬರುತ್ತದೆ. ಹೀಗಾಗಿ ಬಡವರು ದುಬಾರಿ ಬೆಲೆಯ ಔಷಧಿಗಳನ್ನು ಖರೀದಿಸಲು ಪರದಾಡುವಂತಾಗಿದೆ. ಖರೀದಿಸಿದ ಔಷಧಿಗಳು ನಕಲಿ ಎಂದು ಗೊತ್ತಾದಾಗ ಔಷಧಿಗಳ ಮೇಲಿನ ನಂಬಿಕೆಯೇ ಹೊರಟು ಹೋಗುತ್ತದೆ.
ಕೇಂದ್ರ ಸರಕಾರದ ಜನೌಷಧಿ ಮಳಿಗೆಗಳಲ್ಲಿ ಕೆಲವು ಔಷಧಿಗಳು ಕಡಿಮೆ ದರದಲ್ಲಿ ಸಿಗುತ್ತವೆ. ಆದರೆ ಲಾಭವನ್ನು ದೋಚುವ ಖಾಸಗಿ ಔಷಧಿ ಮಾಫಿಯಾ ಸರಕಾರದ ಮೇಲೆ ಪ್ರಭಾವವನ್ನು ಬೀರಿ ಜನಸಾಮಾನ್ಯರು ಓಡಾಡುವ ಜನನಿಬಿಡ ಪ್ರದೇಶಗಳಲ್ಲಿ ಜನೌಷಧಿ ಮಳಿಗೆ ಆರಂಭವಾಗದಂತೆ ನೋಡಿಕೊಳ್ಳುತ್ತವೆ. ಕೆಲವು ಖಾಸಗಿ ವೈದ್ಯರು ಜನೌಷಧಿ ಮಳಿಗೆಗಳಲ್ಲಿ ಔಷಧಿ ಖರೀದಿಸದಂತೆ ರೋಗಿಗಳಿಗೆ ಮತ್ತು ಅವರ ಸಂಬಂಧಿಕರಿಗೆ ತಾಕೀತು ಮಾಡುತ್ತಾರೆ. ಔಷಧಿ ಉತ್ಪಾದನೆ ಮಾಡುವ ದೊಡ್ಡ ಕಂಪೆನಿಗಳು ವೈದ್ಯರಿಗೆ ಆಸೆ, ಆಮಿಷ ತೋರಿಸಿ, ಭಕ್ಷೀಸು ನೀಡಿ ತಮ್ಮ ಕಂಪೆನಿಯ ಔಷಧಿ ಬರೆದು ಕೊಡುವಂತೆ ಪುಸಲಾಯಿಸುತ್ತಾರೆ.
ದೇಶವ್ಯಾಪಿಯಾಗಿರುವ ನಕಲಿ ಔಷಧಿ ಜಾಲವನ್ನು ಸಂಪೂರ್ಣವಾಗಿ ನಿರ್ನಾಮ ಮಾಡಬೇಕಾಗಿದೆ. ಇದರಲ್ಲಿ ಕೇಂದ್ರ ಸರಕಾರದ ಪಾತ್ರ ತುಂಬಾ ಮುಖ್ಯವಾಗಿದೆ. ಕೇಂದ್ರ ಸರಕಾರ ಆಯ್ದ ಟಾಪ್ ಬ್ರಾಂಡ್ಗಳಿಗೆ ಕಡ್ಡಾಯ ಮಾಡಿರುವ ಟ್ರ್ಯಾಕ್ ಆಂಡ್ ಟ್ರೇಸ್ ಬಾರ್ ಕೋಡ್ ವ್ಯವಸ್ಥೆಯನ್ನು ರಾಜ್ಯದಲ್ಲಿ ಮಾರಾಟವಾಗುವ ಪ್ರತಿಯೊಂದು ಔಷಧಿಗೂ ವಿಸ್ತರಿಸುವುದು ಅಗತ್ಯವಾಗಿದೆ. ಸಾರ್ವಜನಿಕರು ಸ್ಕ್ಯಾನ್ ಮಾಡಿ ಅಧಿಕೃತತೆಯನ್ನು ಪರಿಶೀಲಿಸುವ ವ್ಯವಸ್ಥೆ ಸುಲಭವಾಗಬೇಕು. ಅತಿಯಾದ ರಿಯಾಯಿತಿ ನೀಡುವ ಅನಧಿಕೃತ ಆನ್ಲೈನ್ ಪೋರ್ಟಲ್ಗಳು ಹಾಗೂ ಅನುಮಾನಾಸ್ಪದ ಮಳಿಗೆಗಳಿಂದ ನಕಲಿ ಔಷಧಿಗಳನ್ನು ಖರೀದಿಸದಂತೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ.






