ಹಿಂದಿಯನ್ನು ಕೈ ಬಿಟ್ಟ ಮಹಾರಾಷ್ಟ್ರ ಬಿಜೆಪಿ ಸರಕಾರ

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ PC: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರ ಬಲವಂತದ ಹಿಂದಿ ಹೇರಿಕೆಯ ವಿರುದ್ಧ ದಕ್ಷಿಣ ಭಾರತದ ಬಿಜೆಪಿಯೇತರ ಸರಕಾರಗಳು ಈಗಾಗಲೇ ತಿರುಗಿ ಬಿದ್ದಿವೆ. ಈಗ ಮಹಾರಾಷ್ಟ್ರದ ಬಿಜೆಪಿ ಸರಕಾರ ಕೂಡ ರಾಜ್ಯದ ಜನರ, ಪ್ರತಿಪಕ್ಷಗಳ, ಲೇಖಕರ, ಕಲಾವಿದರ ತೀವ್ರ ಪ್ರತಿರೋಧಕ್ಕೆ ಮಣಿದು ತ್ರಿಭಾಷಾ ಸೂತ್ರವನ್ನು ಕೈ ಬಿಡಲು ತೀರ್ಮಾನಿಸಿದೆ. ಅಂದರೆ ಪ್ರಾಥಮಿಕ ಶಾಲೆಗಳಲ್ಲಿ ಮೂರನೆಯ ಭಾಷೆಯಾಗಿ ಕಲಿಸುವುದು ಬೇಡ ಎಂದು ತೀರ್ಮಾನಿಸಿದೆ. ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಹಿಂದಿ ಹೇರಿಕೆಗೆ ಬಲವಾದ ವಿರೋಧ ಬಂದ ಕಾರಣ ತ್ರಿಭಾಷಾ ಸೂತ್ರ ಜಾರಿಯನ್ನು ತಡೆ ಹಿಡಿದಿರುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರವಿವಾರ ತಿಳಿಸಿದ್ದಾರೆ. ಈ ಕುರಿತು ಡಾ. ನರೇಂದ್ರ ಜಾಧವ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ಪಡೆದು ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.
ಕಳೆದ ಎಪ್ರಿಲ್ ತಿಂಗಳಿನಲ್ಲಿ ಮಹಾರಾಷ್ಟ್ರದ ಬಿಜೆಪಿ ಸರಕಾರ ಮರಾಠಿ ಹಾಗೂ ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಹಿಂದಿಯನ್ನು ಮೂರನೇ ಭಾಷೆಯನ್ನಾಗಿ ಕಲಿಸಲಾಗುವುದೆಂದು ಅಧಿಸೂಚನೆಯನ್ನು ಹೊರಡಿಸಿತ್ತು. ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮತ್ತು ರಾಜ್ ಠಾಕ್ರೆ ನಾಯಕತ್ವದ ಎಂಎನ್ಎಸ್ ಮಾತ್ರವಲ್ಲ ಮಹಾರಾಷ್ಟ್ರದ ಪ್ರಮುಖ ವಿರೋಧ ಪಕ್ಷಗಳು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದವು. ಅಲ್ಲದೆ, ಬೀದಿಗಿಳಿದು ಪ್ರತಿಭಟನೆಯನ್ನೂ ನಡೆಸಿದ್ದವು. ಉದ್ಧವ್ ಠಾಕ್ರೆಯವರಂತೂ ವಿಧಾನ ಮಂಡಲದ ಮುಂಗಾರು ಅಧಿವೇಶನಕ್ಕೆ ಮುನ್ನ ಶಾಲೆಗಳ ಎದುರು ಹಿಂದಿ ಭಾಷಾ ಕಲಿಕೆಯನ್ನು ಕಡ್ಡಾಯಗೊಳಿಸುವ ಮಹಾರಾಷ್ಟ್ರ ಬಿಜೆಪಿ ಸರಕಾರದ ಆದೇಶದ ಪ್ರತಿಗಳನ್ನು ಸುಟ್ಟು ಹಾಕಲು ಕರೆ ನೀಡಿದ್ದರು. ಇದೆಲ್ಲದರ ಪರಿಣಾಮವಾಗಿ ಅಲ್ಲಿನ ಬಿಜೆಪಿ ಸರಕಾರ ಹಿಂದಿಯನ್ನು ಕೈ ಬಿಟ್ಟಿದೆ.
ರಾಜ್ಯದ ನೆಲ, ಜಲ, ಭಾಷೆಯ ಪ್ರಶ್ನೆ ಬಂದಾಗ ಮಹಾರಾಷ್ಟ್ರದ ಜನತೆ ಪಕ್ಷಭೇದ ಬದಿಗಿಟ್ಟು ಜೊತೆಗೂಡಿ ಧ್ವನಿಯೆತ್ತುತ್ತಾರೆ, ಬೀದಿಗಿಳಿದು ಹೋರಾಟ ಮಾಡುತ್ತಾರೆ. ಆದರೆ ಕರ್ನಾಟಕದ ಬಿಜೆಪಿ ನಾಯಕರಿಗೆ ದಿಲ್ಲಿ ಹೈಕಮಾಂಡ್ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಎದುರು ನಿಂತು ಮಾತಾಡುವ ತಾಕತ್ತಿಲ್ಲ. ಇವರು ದಿಲ್ಲಿಗೆ ಹೋದರೆ ಇವರಿಗೆ ಭೇಟಿಯ ಅವಕಾಶವೂ ಸಿಗುವುದಿಲ್ಲ. ಹಿಂದಿ ಹೇರಿಕೆಯ ಪ್ರಶ್ನೆಯಲ್ಲಿ ಕೂಡ ಕನ್ನಡದ ಹಿತಾಸಕ್ತಿಯ ಪರವಾಗಿ ನಿಲ್ಲದ ಬಿಜೆಪಿ ನಾಯಕರು ಅದನ್ನು ಸಮರ್ಥಿಸಿ ಅಮಿತ್ ಶಾ ಅವರನ್ನು ಓಲೈಸಲು ನಿಂತರು. ಒಬ್ಬರಾದರೂ ಹಿಂದಿ ಹೇರಿಕೆ ಬೇಡ ಎಂದು ಬಾಯಿಬಿಟ್ಟು ಹೇಳಲೇ ಇಲ್ಲ.
ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದ ಆದೇಶದಂತೆ ಹಿಂದಿಯನ್ನು ಇಡೀ ಭಾರತದ ಮೇಲೆ ಬಲವಂತವಾಗಿ ಹೇರಿ ಕನ್ನಡ, ತಮಿಳು, ತೆಲಗು, ಮಲಯಾಳಂ, ಮರಾಠಿ ಮೊದಲಾದ ಪ್ರಾದೇಶಿಕ ಭಾಷೆಗಳನ್ನು ನಿರ್ನಾಮ ಮಾಡಲು ಹೊರಟ ಕೇಂದ್ರದ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಅದರಲ್ಲೂ ವಿಶೇಷವಾಗಿ ಗೃಹ ಮಂತ್ರಿ ಅಮಿತ್ ಶಾ ಅವರು ಈ ವಿಷಯದಲ್ಲಿ ತುಂಬಾ ಹಠ ಹಿಡಿದಿರುವುದು ಸರಿಯಲ್ಲ. ಹಿಂದಿ ಯಾವುದೇ ಪ್ರಾದೇಶಿಕ ಭಾಷೆಗಳ ವಿರೋಧಿ ಅಲ್ಲ ಎಂದು ಇತ್ತೀಚೆಗೆ ಅಮಿತ್ ಶಾ ಹೇಳಿದ್ದಾರೆ. ನಿಜ, ಯಾವುದೇ ಭಾಷೆಗೆ ಇನ್ನೊಂದು ಭಾಷೆ ವಿರೋಧಿಯಲ್ಲ. ಆದರೆ ಕೇಂದ್ರದ ಬಿಜೆಪಿ ಸರಕಾರ ಹಿಂದಿಯನ್ನು ಬಲವಂತವಾಗಿ ಹೇರುವ ಮೂಲಕ ಪ್ರಾದೇಶಿಕ ಭಾಷೆಗಳ ವಿರುದ್ಧ ಎತ್ತಿ ಕಟ್ಟಿ ಅದನ್ನು ವಿರೋಧಿಸುವಂತೆ ಮಾಡಿದ್ದಾರೆ. ಉತ್ತರದ ಜನ ಕನ್ನಡ ಸೇರಿದಂತೆ ದಕ್ಷಿಣದ ಭಾಷೆಗಳನ್ನು ಹಾಗೂ ದಕ್ಷಿಣದ ಜನ ಹಿಂದಿಯನ್ನು ಇಷ್ಟಪಟ್ಟು ಕಲಿಯಲು ಯಾರ ತಕರಾರೂ ಇಲ್ಲ. ಆದರೆ ಕಡ್ಡಾಯ ಮಾಡಲು ಮುಂದಾದರೆ ಸಹಜವಾಗಿ ಬಲವಾದ ಪ್ರತಿರೋಧ ಬರುತ್ತದೆ.
ಏಕಧರ್ಮ, ಏಕ ಸಂಸ್ಕೃತಿ, ಏಕ ಭಾಷೆ, ಏಕ ಪಡಿತರ ಎಂಬ ತಮ್ಮ ರಹಸ್ಯ ಕಾರ್ಯಸೂಚಿಯನ್ನು ಬಲವಂತವಾಗಿ ಜಾರಿಗೆ ತರಲು ಹೊರಟವರ ಗುರಿ ಬಹುತ್ವ ಭಾರತವನ್ನು ಬಲಿ ತೆಗೆದುಕೊಳ್ಳುವುದಾಗಿದೆ. ಹಿಂದಿ ಹೇರಿಕೆಯ ಕುರಿತು ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ದಕ್ಷಿಣದ ರಾಜ್ಯಗಳಿಂದ ಬಲವಾದ ವಿರೋಧ ಬರುತ್ತಿದ್ದರೂ ಅದನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿ ಒತ್ತಾಯದಿಂದ ಹಿಂದಿಯನ್ನು ಹೇರಲು ಮುಂದಾಗಿರುವುದು ನಿರಂಕುಶ, ಸರ್ವಾಧಿಕಾರಿ ಮನೋಭಾವವಾಗಿದೆ.
ಹಿಂದೂ ಹಾಗೂ ಹಿಂದಿಯನ್ನು ತಳಕು ಹಾಕಿ ಹಿಂದಿಯನ್ನು ರಾಷ್ಟ್ರ ಭಾಷೆಯೆಂದು ಹೇರಲು ಹೊರಟಿರುವ ಮೋದಿ ಸರಕಾರ ಹಿಂದಿಯು ಹಿಂದೂಗಳೆಲ್ಲರ ಭಾಷೆಯಲ್ಲ ಎಂಬುದನ್ನು ಮರೆಯದಿರಲಿ. ಉರ್ದು ಕೂಡ ಮುಸಲ್ಮಾನರ ಭಾಷೆಯಲ್ಲ. ಯಾವುದೇ ಧರ್ಮಕ್ಕೂ ಭಾಷೆಗೂ ಸಂಬಂಧವಿಲ್ಲ. ಅದೇ ರೀತಿ ಭಾರತ ಎಂಬುದು ಯಾವುದೇ ಒಂದು ಭಾಷೆಯನ್ನಾಡುವ ಜನರ ದೇಶವಲ್ಲ. ಹಿಂದಿ ಕೇವಲ 3-4 ರಾಜ್ಯಗಳಿಗೆ ಸೀಮಿತವಾದ ಭಾಷೆ. ಸಂವಿಧಾನದ ಪ್ರಕಾರ ಅದೊಂದೇ ರಾಷ್ಟ್ರಭಾಷೆಯಲ್ಲ. ಹಿಂದಿಯಂತೆ ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ ಮುಂತಾದ 22 ಭಾಷೆಗಳು ಕೂಡ ರಾಷ್ಟ್ರ ಭಾಷೆಗಳೇ ಆಗಿವೆ. ಇದನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿ ಹಿಂದಿ ಭಾಷೆಯನ್ನು ಹಿಂದಿಯೇತರ ಭಾಷಿಕ ರಾಜ್ಯಗಳ ಮೇಲೆ ಹೇರುವುದು ಒಕ್ಕೂಟ ವ್ಯವಸ್ಥೆಗೆ ಮಾಡುವ ಅಪಚಾರವಾಗಿದೆ.
ಭಾರತದಲ್ಲಿ ಇರುವುದು ಒಕ್ಕೂಟ ವ್ಯವಸ್ಥೆ. ಇದು ಸಂವಿಧಾನದ ಅನ್ವಯ ಫೆಡರಲ್ ಸ್ಟೇಟ್. ಆಯಾ ರಾಜ್ಯಗಳಿಗೆ ತಮ್ಮ ಗಡಿಯೊಳಗೆ ಸಾರ್ವಭೌಮತ್ವವನ್ನು ಕಲ್ಪಿಸುವುದು ಮಾತ್ರವಲ್ಲ ರಾಜ್ಯಗಳ ಪ್ರಾದೇಶಿಕ ಭಾಷೆಗಳನ್ನು ಮನ್ನಿಸಿ ಗೌರವಿಸುವುದು ಸಂವಿಧಾನದ ತಿರುಳಾಗಿದೆ. ಸಂವಿಧಾನದ 348 (1)(ಬಿ.) ವಿಧಿಯು ದೇಶದ ಎಲ್ಲ ಶಾಸನಗಳ ಅಧಿಕೃತ ಪಠ್ಯವು ಇಂಗ್ಲಿಷ್ ಭಾಷೆಯಲ್ಲಿ ಇರಬೇಕೆಂದು ಹೇಳುತ್ತದೆ. ಅಂದರೆ ವಿಧೇಯಕಗಳು, ತಿದ್ದುಪಡಿಗಳು ಶಾಸನ ಸಭೆಗಳಲ್ಲಿ ಅಂಗೀಕರಿಸಲಾಗುವ ಕಾಯ್ದೆಗಳು ಇಂಗ್ಲಿಷ್ ಭಾಷೆಯಲ್ಲಿ ಇರಬೇಕೆಂದು ಸಂವಿಧಾನ ಹೇಳುತ್ತದೆ. ಇದನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪಾಲಿಸಲೇ ಬೇಕಾಗುತ್ತದೆ. ಇದನ್ನು ಮರೆ ಮಾಚಿ ರಾಜ್ಯಗಳ ಜನರಾಡುವ ಭಾಷೆ ಮತ್ತು ಅಸ್ಮಿತೆಯನ್ನು ಕಡೆಗಣಿಸಿ ಹಿಂದಿಯನ್ನು ಹೇರುವುದು ಸರಿಯಲ್ಲ. ಈಗಾಗಲೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ, ಕೇಂದ್ರ ಸರಕಾರ ಸಂಬಂಧಿ ಕಚೇರಿಗಳಲ್ಲಿ ಹಿಂದಿ ಹೇರಿಕೆ ಅವ್ಯಾಹತವಾಗಿ ನಡೆದಿದೆ.
ಭಾರತಕ್ಕೆ ಸ್ವಾತಂತ್ರ್ಯ ಬಂದಾಗಲೇ ಹಿಂದಿಯನ್ನು ಸಂಪರ್ಕ ಭಾಷೆಯನ್ನಾಗಿ ರಾಜ್ಯಗಳ ಮೇಲೆ ಹೇರುವ ಹುನ್ನಾರ ನಡೆದಿತ್ತು. ಆದರೆ ಹಿಂದಿಯೇತರ ರಾಜ್ಯಗಳು ಇದಕ್ಕೆ ಅವಕಾಶವನ್ನು ನೀಡಲಿಲ್ಲ. ಪ್ರಾದೇಶಿಕ ಭಾಷೆಯೇ ರಾಜ್ಯಗಳ ಆಡಳಿತ ನಿರ್ವಹಣೆಯ ಭಾಷೆ ಇರಬೇಕೆಂಬ ಕೂಗು ಎಲ್ಲೆಡೆ ಕೇಳಿ ಬಂತು. ಆಗ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ತ್ರಿಭಾಷಾ ಸೂತ್ರವೊಂದನ್ನು ತಂದರು. ಅದರ ಪ್ರಕಾರ ಯಾವುದೇ ರಾಜ್ಯದಲ್ಲಿ ಅಲ್ಲಿನ ಪ್ರಾದೇಶಿಕ ಭಾಷೆ ಹಾಗೂ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಸರ್ವಸಮ್ಮತ ಸೂತ್ರವನ್ನು ರೂಪಿಸಲಾಯಿತು. ಈಗ ಅದೂ ಅಪ್ರಸ್ತುತವಾಗಿದೆ. ಎಲ್ಲ ರಾಜ್ಯಗಳಲ್ಲಿ ದ್ವಿಭಾಷಾ ಸೂತ್ರದ ಪರವಾಗಿ ಆಗ್ರಹ ವ್ಯಕ್ತವಾಗುತ್ತಿವೆ. ಇದನ್ನು ನಿರ್ಲಕ್ಷಿಸಿ ಹಿಂದಿಯನ್ನು ಹೇರಲು ಹೊರಟರೆ ಹಿಂದೆ ತಮಿಳುನಾಡಿನಲ್ಲಿ ಕೇಳಿ ಬಂದಂತೆ ಎಲ್ಲ ಕಡೆ ಪ್ರತ್ಯೇಕತಾವಾದ ಕೂಗು ಕೇಳಿ ಬಂದರೆ ಅಚ್ಚರಿ ಪಡಬೇಕಾಗಿಲ್ಲ.