Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಮಂಡ್ಯ: ಶಿವಪುರ ಧ್ವಜದ ವಿರುದ್ಧ...

ಮಂಡ್ಯ: ಶಿವಪುರ ಧ್ವಜದ ವಿರುದ್ಧ ಆರೆಸ್ಸೆಸ್ ಧ್ವಜ!

ವಾರ್ತಾಭಾರತಿವಾರ್ತಾಭಾರತಿ31 Jan 2024 9:16 AM IST
share
ಮಂಡ್ಯ: ಶಿವಪುರ ಧ್ವಜದ ವಿರುದ್ಧ ಆರೆಸ್ಸೆಸ್ ಧ್ವಜ!

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಮಂಡ್ಯ ಎಂದಾಕ್ಷಣ ದೇಶ ಮೊದಲು ಸ್ಮರಿಸುವುದು ಶಿವಪುರದ ಧ್ವಜ ಸತ್ಯಾಗ್ರಹವನ್ನು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕರ್ನಾಟಕದಲ್ಲಿ ನಡೆದ ಮಹತ್ವದ ಸತ್ಯಾಗ್ರಹಗಳಲ್ಲಿ ಮಂಡ್ಯ ಜಿಲ್ಲೆಯ ಶಿವಪುರದಲ್ಲಿ ನಡೆದ ‘ಧ್ವಜ ಸತ್ಯಾಗ್ರಹ’ವೂ ಒಂದು. ಅಂದಿನ ಬ್ರಿಟಿಷ್ ಸರಕಾರದ ನಿರ್ಬಂಧಗಳನ್ನು ಮುರಿದು, 1937ರ ಜೂನ್‌ನಲ್ಲಿ ಮೈಸೂರು ಸಂಸ್ಥಾನದ ಎಲ್ಲೆಡೆ ತ್ರಿವರ್ಣ ಧ್ವಜಗಳನ್ನು ಹಾರಿಸಲಾಯಿತು. ತ್ರಿವರ್ಣ ಧ್ವಜವನ್ನು ಹಾರಿಸಲು ಸರಕಾರ ಅಸಮ್ಮತಿ ವ್ಯಕ್ತಪಡಿಸಿದಾಗ ನಾಡಿನ ನೂರಾರು ದೇಶಭಕ್ತರು ಮದ್ದೂರಿನ ಶಿವಪುರದಲ್ಲಿ ನೆರೆದರು. ಮೂರು ದಿನಗಳ ಕಾಲ ತಮ್ಮ ಹಕ್ಕಿಗಾಗಿ ಸತ್ಯಾಗ್ರಹವನ್ನು ನಡೆಸಿದರು. ಶಿವಪುರ ಗ್ರಾಮದ ತಿರುಮಲ ಗೌಡ ಎಂಬವರ ಕೃಷಿ ಜಮೀನಿನಲ್ಲಿ ತ್ರಿವರ್ಣ ಧ್ವಜಸ್ತಂಭವನ್ನು ತಾತ್ಕಾಲಿಕವಾಗಿ ನೆಡಲಾಗಿತ್ತು. ಪೊಲೀಸರು ಧ್ವಜಸ್ತಂಭವನ್ನು ಕಿತ್ತು ಹಾಕಬೇಕು ಎನ್ನುವಷ್ಟರಲ್ಲಿ ಹೋರಾಟಗಾರರು ಬಾವುಟವನ್ನು ಹಾರಿಸಿಯೇ ಬಿಟ್ಟರು. ಈ ಸಂದರ್ಭದಲ್ಲಿ ಲಾಠಿಚಾರ್ಜ್ ನಡೆದು ಹಲವರು ಗಾಯಗೊಂಡರು. ನೂರಾರು ಜನರು ಬಂಧನಕ್ಕೊಳಗಾದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕರ್ನಾಟಕದ ಹೆಸರನ್ನು ರಾಷ್ಟ್ರಮಟ್ಟಕ್ಕೆ ತಲುಪಿಸಿದ ಶಿವಪುರ ಸತ್ಯಾಗ್ರಹದ ಸ್ಮರಣಾರ್ಥ ಶಿವಪುರ ಸತ್ಯಾಗ್ರಹ ಸೌಧವನ್ನು ನಿರ್ಮಿಸಲಾಯಿತು. ದೇವರಾಜ ಅರಸು, ಕೆಂಗಲ್ ಹನುಮಂತಯ್ಯರಂತಹ ಹಿರಿಯರ ಸಮ್ಮುಖದಲ್ಲಿ 1979ರಲ್ಲಿ ಈ ಸೌಧ ಉದ್ಘಾಟನೆಗೊಂಡಿತು. ಯಾವ ತ್ರಿವರ್ಣ ಧ್ವಜಕ್ಕಾಗಿ ಮಂಡ್ಯದ ಹಿರಿಯರು ತಮ್ಮನ್ನು ಸಮರ್ಪಿಸಿಕೊಂಡಿದ್ದರೋ, ಯಾವ ಧ್ವಜದ ಅಡಿಯಲ್ಲಿ ಈ ದೇಶದ ಸರ್ವ ಜನರು ಜಾತಿ, ಧರ್ಮ, ಭಾಷೆಗಳನ್ನು ಮರೆತು ಒಂದಾಗಿದ್ದಾರೆಯೋ ಆ ಧ್ವಜವನ್ನು ಬಿಜೆಪಿಯ ನಾಯಕನೊಬ್ಬ ‘ತಾಲಿಬಾನ್ ಧ್ವಜ’ ಎಂದು ನಿಂದಿಸಿದ್ದಾರೆ. ಅಷ್ಟೇ ಅಲ್ಲ, ಮಂಡ್ಯದ ನೆಲಕ್ಕೆ ಕಾಲಿಟ್ಟು, ಅಲ್ಲಿನ ಹಿರಿಯರ ನೇತೃತ್ವದಲ್ಲಿ ಏರಿಸಲ್ಪಟ್ಟ ತ್ರಿವರ್ಣ ಧ್ವಜವನ್ನು ಇಳಿಸಿ ಆರೆಸ್ಸೆಸ್ ಧ್ವಜವನ್ನು ಏರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ರಾಷ್ಟ್ರಧ್ವಜ ಏರಿಸುವುದಕ್ಕೆ ಬ್ರಿಟಿಷರು ಅಡ್ಡಿಯಾಗಿದ್ದರೆ, ಈ ಬಾರಿ ಮಂಡ್ಯದ ಜನರಿಗೆ ಅಡ್ಡಿಯಾಗಿರುವುದು ಸ್ವದೇಶಿ ವೇಷದಲ್ಲಿರುವ ಈ ನವ ಬ್ರಿಟಿಷರು. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರಿಗೆ ಪರೋಕ್ಷವಾಗಿ ನೆರವು ನೀಡಿ, ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಸಂಚು ನಡೆಸಿದ ಜನರೇ ಇದೀಗ ಮಂಡ್ಯದ ಸ್ವಾತಂತ್ರ್ಯ ಹೋರಾಟದ ಇತಿಹಾಸಕ್ಕೆ, ಹಿರಿಮೆಗೆ ಕಳಂಕ ತರಲು ಯತ್ನಿಸುತ್ತಿದ್ದಾರೆ.

ಆರೆಸ್ಸೆಸ್ ಈ ದೇಶದ ರಾಷ್ಟ್ರಧ್ವಜವನ್ನು ವಿರೋಧಿಸುವುದಕ್ಕೆ ಅರ್ಥವಿದೆ. ಹಿಂದೂ ಮಹಾಸಭಾ ಸ್ವಾತಂತ್ರ್ಯ ಹೋರಾಟದೊಂದಿಗೆ ಯಾವ ಸಂಬಂಧವನ್ನೂ ಹೊಂದಿರಲಿಲ್ಲ. ವಿನಾಯಕ ದಾಮೋದರ್ ಸಾವರ್ಕರ್ ತನ್ನ ವಿಶ್ರಾಂತ ಜೀವನವನ್ನು ಬ್ರಿಟಿಷರಿಂದ ಮಾಸಾಶಾನ ಪಡೆಯುತ್ತಾ ಬದುಕಿದರು. ನೇತಾಜಿ ಸುಭಾಶ್‌ಚಂದ್ರ ಬೋಸರ ಸೇನೆ ಸೇರದಂತೆ ಯುವಕರನ್ನು ತಡೆದರು. ಹಿಂದೂ ಮಹಾಸಭಾದ ಕಾರ್ಯಕರ್ತನೇ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದ ಮಹಾತ್ಮಾಗಾಂಧೀಜಿಯನ್ನು ಕೊಂದು ಹಾಕಿದ.

ಆರೆಸ್ಸೆಸ್ ನಾಯಕರು ಸ್ವತಂತ್ರ ಭಾರತದ ತ್ರಿವರ್ಣ ಧ್ವಜವನ್ನು ಎಂದೂ ಒಪ್ಪಿಕೊಂಡಿರಲೇ ಇಲ್ಲ. ಆರೆಸ್ಸೆಸ್ ಮುಖ್ಯ ಕಚೇರಿಯಲ್ಲಿ 2001ರವರೆಗೂ ಅಧಿಕೃತವಾಗಿ ರಾಷ್ಟ್ರಧ್ವಜವನ್ನು ಹಾರಿಸುತ್ತಿರಲಿಲ್ಲ. 2001, ಜನವರಿ 26 ಗಣರಾಜ್ಯೋತ್ಸವದ ದಿನ, ‘ರಾಷ್ಟ್ರಪ್ರೇಮಿ ಯುವ ದಳ’ದ ಮೂವರು ಕಾರ್ಯಕರ್ತರು ನಾಗಪುರದ ಆರೆಸ್ಸೆಸ್ ಮುಖ್ಯ ಕಚೇರಿಗೆ ಆಗಮಿಸಿದರು.‘ಕೇಶವ ಹೆಡಗೇವಾರ್’ಗೆ ಶ್ರದ್ಧಾಂಜಲಿ ಸಲ್ಲಿಸಲು ಬಂದಿದ್ದೇವೆ ಎಂದು ಅವರು ಮುಖ್ಯ ಕಚೇರಿಗೆ ಪ್ರವೇಶ ಪಡೆದಿದ್ದರು. ಕಚೇರಿಯ ಆವರಣಕ್ಕೆ ಪ್ರವೇಶಿಸಿದ ಕೆಲವೇ ಕ್ಷಣಗಳಲ್ಲಿ ಬಾಬಾ ಮಂಧೆ, ರಮೇಶ್ ಕಾಳಂಬಿ, ದಿಲೀಪ್ ಜಟ್ಟಾಣಿ ಎಂಬ ಆ ಮೂವರು ಯುವಕರು ತಮ್ಮ ಚೀಲದಿಂದ ತ್ರಿವರ್ಣ ಧ್ವಜವನ್ನು ಹೊರತೆಗೆದು ಕಚೇರಿಯ ಮುಂದೆ ಹಾರಿಸಿ ಬಿಟ್ಟರು.ಇವರನ್ನು ತಡೆಯಲು ಆರೆಸ್ಸೆಸ್‌ನ ಮುಖಂಡ ಸುನೀಲ್ ಕಾಥ್ಲೆ ತಂಡ ಸರ್ವ ಪ್ರಯತ್ನ ಮಾಡಿತಾದರೂ ಈ ದೇಶಪ್ರೇಮಿ ಯುವಕರ ಮುಂದೆ ಅವರು ವಿಫಲವಾದರು. ಮುಂದೆ ಆರೆಸ್ಸೆಸ್ ಕಚೇರಿ ಇವರ ಮೇಲೆ ಮೊಕದ್ದಮೆ ದಾಖಲಿಸಿತು. ಸುಮಾರು 12 ವರ್ಷ ಈ ಯುವಕರನ್ನು ನ್ಯಾಯಾಲಯದಲ್ಲಿ ಅಲೆದಾಡಿಸಿತು. 2013ರಂದು ಇವರು ದೋಷಮುಕ್ತರಾದರು. ಶಿವಪುರದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಹಾರಿಸಿದ ಧ್ವಜಕ್ಕೂ, ನಾಗಪುರ ಕಚೇರಿಯಲ್ಲಿ ಈ ದೇಶಪ್ರೇಮಿ ಯುವಕರು ಹಾರಿಸಿದ ಧ್ವಜಕ್ಕೂ ದೊಡ್ಡ ವ್ಯತ್ಯಾಸವೇನೂ ಇರಲಿಲ್ಲ. ಶಿವಪುರದ ಸ್ವಾತಂತ್ರ್ಯ ಹೋರಾಟಗಾರರು ಇವರಂತೆ 12 ವರ್ಷ ನ್ಯಾಯಾಲಯಕ್ಕೆ ಅಲೆದಾಡುವ ಪ್ರಸಂಗ ಬಂದಿರಲಿಲ್ಲ. ಧ್ವಜಸತ್ಯಾಗ್ರಹಕ್ಕಾಗಿಯೇ ಹೆಸರಾಗಿರುವ ಮಂಡ್ಯದಲ್ಲಿ, ಇದೀಗ ರಾಷ್ಟ್ರಧ್ವಜವನ್ನು ಇಳಿಸಿ ಆ ಜಾಗದಲ್ಲಿ ತಮ್ಮ ಆರೆಸ್ಸೆಸ್ ಧ್ವಜವನ್ನು ಹಾರಿಸಲು ಅದರ ನಾಯಕರು ಪ್ರಯತ್ನಿಸುತ್ತಿರುವುದನ್ನು ಈ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು.

ವಿಶೇಷವೆಂದರೆ, ಮಂಡ್ಯಕ್ಕೆ ಬೆಂಕಿ ಹಚ್ಚಿ ರಾಷ್ಟ್ರಧ್ವಜವನ್ನು ಇಳಿಸಿ ಅಲ್ಲಿ ಕೇಸರಿ ಧ್ವಜವನ್ನು ಹಾರಿಸಲು ನೇತೃತ್ವ ಕೊಡುತ್ತಿರುವವರಾರೂ ಮಂಡ್ಯದವರಲ್ಲ. ಒಬ್ಬಾತ ಕರಾವಳಿಯಲ್ಲಿ ಕೋಮುಗಲಭೆಯನ್ನು ಕಿಚ್ಚನ್ನು ಹಚ್ಚಿ, ನೂರಾರು ಯುವಕರು ಜೈಲಿನಲ್ಲಿ ಕೊಳೆಯಲು ಕಾರಣನಾಗಿರುವ ಆರೆಸ್ಸೆಸ್‌ನ ಮುಖಂಡ ಪ್ರಭಾಕರ ಭಟ್ಟ. ಈತನಿಗೆ ಮಂಡ್ಯದ ರೈತರ ಜೊತೆಗಾಗಲಿ, ಅವರ ನೋವು ನಲಿವುಗಳ ಜೊತೆಗಾಗಲಿ ಯಾವ ಸಂಬಂಧವೂ ಇಲ್ಲ. ಇನ್ನೊಬ್ಬಾತ ಚಿಕ್ಕಮಗಳೂರಿನ ಸಿ.ಟಿ. ರವಿ. ರಾಷ್ಟ್ರಧ್ವಜವನ್ನು ‘ತಾಲಿಬಾನ್ ಧ್ವಜ’ ಎಂದು ಕರೆದು, ಶಿವಪುರದ ಧ್ವಜ ಸತ್ಯಾಗ್ರಹದಲ್ಲಿ ಭಾಗವಹಿಸಿ, ಬ್ರಿಟಿಷರ ಬೂಟಿನೇಟನ್ನು ತಿಂದ ಎಲ್ಲ ಹಿರಿಯರನ್ನೂ ಆ ಮೂಲಕ ತಾಲಿಬಾನಿಗಳೆಂದು ನಿಂದಿಸಿದ್ದಾರೆ. ಇನ್ನೋರ್ವ, ಹಾಸನದವರು. ತನ್ನ ಮಕ್ಕಳಿಗೆ ರಾಜಕೀಯ ನೆಲೆಯೊಂದನ್ನು ಕಲ್ಪಿಸುವುದಕ್ಕಾಗಿಯೇ ಮಂಡ್ಯದ ನೆಲದ ಮಕ್ಕಳನ್ನು ಪರಸ್ಪರ ಕಚ್ಚಾಡಿಸುವುದಕ್ಕೆ ಮುಂದಾಗಿದ್ದಾರೆ. ಶಿವಪುರದ ಧ್ವಜ ಸತ್ಯಾಗ್ರಹದ ಹಿರಿಮೆಯ ಬಗ್ಗೆ ಒಂದಿಷ್ಟು ತಿಳಿದುಕೊಂಡಿದ್ದರೂ, ಇವರು ಮಂಡ್ಯಕ್ಕೆ ಇಂತಹದೊಂದು ದ್ರೋಹವನ್ನು ಎಸಗಲು ಮುಂದಾಗುತ್ತಿರಲಿಲ್ಲ. ತನ್ನ ಮಕ್ಕಳ ಏಳಿಗಾಗಿ ಇನ್ನೊಬ್ಬರ ಮಕ್ಕಳನ್ನು ಬಲಿಕೊಡಲು ಸಿದ್ಧ ಎನ್ನುವುದನ್ನು ಅವರು ಸಾಬೀತು ಮಾಡಿದ್ದಾರೆ.

ಮಂಡ್ಯ ಎಂದರೆ ನೆನಪಾಗುವುದು ಶಿವಪುರ. ಮಂಡ್ಯ ಎಂದರೆ ನೆನಪಾಗುವುದು ಏಶ್ಯ ಖಂಡದಲ್ಲೇ ಮೊದಲ ಬಾರಿಗೆ ಸಹಕಾರಿ ಸಂಸ್ಥೆಯನ್ನು ಸ್ಥಾಪಿಸಿದ ಕೆ. ವಿ. ಶಂಕರೇಗೌಡರು. ಮಂಡ್ಯ ಎಂದರೆ ನೆನಪಾಗುವುದು ರೈತ ಚಳವಳಿ. ಮಂಡ್ಯ ಎಂದರೆ ಕಾವೇರಿ ನದಿ ನೀರಿಗಾಗಿ ಬೀದಿಗಿಳಿದು ಹೋರಾಡಿದ ಮಾದೇಗೌಡರು. ಮಂಡ್ಯ ಎಂದರೆ ಕಬ್ಬು ಬೆಳೆದು ದೇಶಕ್ಕೆ ಸಕ್ಕರೆ ಹಂಚಿದ ರೈತರು. ಕಾವೇರಿ ನೀರಿಗಾಗಿ ಪೊಲೀಸರ ಏಟು ತಿಂದ ಹೋರಾಟಗಾರರು. ಇವರೆಲ್ಲರೂ ಈ ದೇಶದ ತ್ರಿವರ್ಣ ಧ್ವಜದ ಅಡಿಯಲ್ಲಿ ಒಂದಾಗಿ ತಮ್ಮ ಚಳವಳಿಗಳನ್ನು ಮುನ್ನಡೆಸಿದರು. ಮಂಡ್ಯದಲ್ಲಿ ತ್ರಿವರ್ಣ ಧ್ವಜವನ್ನು ಇಳಿಸುವ ಸಂಚಿನ ಹಿಂದೆ, ಮಂಡ್ಯದ ಎಲ್ಲ ರೈತಪರ, ಜನಪರ ಹೋರಾಟಗಳನ್ನು ನಾಶ ಮಾಡುವ ಉದ್ದೇಶವಿದೆ. ಮಂಡ್ಯದ ಜನರು ತಮ್ಮ ಮಾನ, ಪ್ರಾಣವನ್ನು ಒತ್ತೆಯಿಟ್ಟು ಶಿವಪುರದಲ್ಲಿ ಹಾರಿಸಿದ ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಆ ಜಾಗದಲ್ಲಿ ಕೇಸರಿ ಧ್ವಜ ಹಾರಿಸಲು ಮುಂದಾಗಿರುವ ಈ ‘ಹೊರಗಿನವರನ್ನು’ ಓಡಿಸುವ ನವ ಸ್ವಾತಂತ್ರ್ಯ ಹೋರಾಟವನ್ನು ಕರ್ನಾಟಕದಲ್ಲಿ ಮಂಡ್ಯದ ಜನರೇ ಉದ್ಘಾಟಿಸಲಿದ್ದಾರೆ. ‘ಕಲ್ಲಡ್ಕ ಪ್ರಭಾಕರ ಭಟ್ಟ-ಕುಮಾರಸ್ವಾಮಿ’ ಎನ್ನುವ ಉರಿಗೌಡ-ನಂಜೇಗೌಡ ಎಂಬ ನಕಲಿ ಪಾತ್ರಗಳ ಬಣ್ಣ ಶೀಘ್ರದಲ್ಲೇ ಮಂಡ್ಯದ ಜನರು ಬಯಲು ಮಾಡಲಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X