ತೃತೀಯ ಭಾಷೆಗೆ ಅಂಕ: ಮುಗಿಯದ ಗೊಂದಲ

ಸಾಂದರ್ಭಿಕ ಚಿತ್ರ | PC : freepik
ಈ ಬಾರಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆ ಮಕ್ಕಳಿಗೆ ನುಂಗಲೂ ಆಗದ, ಉಗುಳಲೂ ಆಗದ ಬಿಸಿ ತುಪ್ಪವಾಗಿದೆ. ಪರೀಕ್ಷೆ ನಡೆಯುತ್ತಿರುವ ಹೊತ್ತಿಗೇ ಸರಕಾರ ತೃತೀಯ ಭಾಷೆಯ ಕುರಿತಂತೆ ಮಹತ್ತರ ನಿರ್ಧಾರಕ್ಕೆ ಬಂತು. ಎಸೆಸೆಲ್ಲಿಯಲ್ಲಿ ತೃತೀಯ ಭಾಷೆಯ ಅಂಕಗಳನ್ನು ಪರಿಗಣಿಸಲಾಗುವುದಿಲ್ಲ ಬದಲಿಗೆ ಗ್ರೇಡನ್ನು ನೀಡಲಾಗುತ್ತದೆ ಎಂದು ಸರಕಾರ ನಿರ್ಧರಿಸಿತ್ತು. ಸರಕಾರದ ಈ ನಿರ್ಧಾರದ ಬಗ್ಗೆ ಪರ-ವಿರೋಧ ಅಭಿಪ್ರಾಯ ಎರಡೂ ಕೇಳಿ ಬಂದಿದ್ದವು. ಮುಖ್ಯವಾಗಿ ಹಿಂದಿ ಭಾಷೆಯನ್ನು ಪಠ್ಯಗಳಲ್ಲಿ ಹೇರುವ ಅಗತ್ಯ ಏನಿದೆ ಎನ್ನುವ ಪ್ರಶ್ನೆಯ ಬಗ್ಗೆ ಬಹುತೇಕ ಜನರಿಗೆ ಭಿನ್ನಾಭಿಪ್ರಾಯವಿರಲಿಲ್ಲ. ಇಂಗ್ಲಿ ಷ್, ಕನ್ನಡದ ಮೂಲಕ ಶಿಕ್ಷಣವನ್ನು ತನ್ನದಾಗಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯೇ ಇಲ್ಲದಿರುವಾಗ, ಸ್ಥಳೀಯವಲ್ಲದ ಹಿಂದಿ ಭಾಷೆಯನ್ನು ವಿದ್ಯಾರ್ಥಿಗಳ ಮೇಲೆ ಹೇರುವ ಅಗತ್ಯ ಏನಿದೆ ಎನ್ನುವ ಪ್ರಶ್ನೆ ಇಂದು ನಿನ್ನೆಯದಲ್ಲ. ಹಿಂದಿ ಭಾಷಿಗರ ರಾಜ್ಯದಲ್ಲಿ ದಕ್ಷಿಣ ಭಾರತದ ಯಾವುದೇ ಭಾಷೆಗಳನ್ನು ತೃತೀಯ ಭಾಷೆಯಾಗಿ ಕಡ್ಡಾಯಗೊಳಿಸಿಲ್ಲ. ಹೀಗಿರುವಾಗ, ಕನ್ನಡ ವಿದ್ಯಾರ್ಥಿಗಳು ಹಿಂದಿ ಭಾಷೆಯನ್ನು ಯಾಕೆ ಕಡ್ಡಾಯವಾಗಿ ಕಲಿಯಬೇಕು? ನೆರೆಯ ತಮಿಳುನಾಡು ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಇಲ್ಲದ ನಿಯಮ ರಾಜ್ಯದ ವಿದ್ಯಾರ್ಥಿಗಳಿಗೇಕೆ? ಈ ಎಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು, ಅನಗತ್ಯ ಒತ್ತಡಗಳನ್ನು ವಿದ್ಯಾರ್ಥಿಗಳ ತಲೆಯ ಮೇಲಿಂದ ಇಳಿಸುವ ಸಲುವಾಗಿ ಸರಕಾರ ಹಿಂದಿ ಪರೀಕ್ಷೆಯ ಅಂಕವನ್ನು ಪರಿಗಣಿಸದಿರಲು ನಿರ್ಧರಿಸಿತ್ತು. ಹಿಂದಿ ಭಾಷೆಯ ಕಾರಣದಿಂದ ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆಯುವಂತಾಗಬಾರದು ಎನ್ನುವುದು ಇದರ ಮುಖ್ಯ ಉದ್ದೇಶವಾಗಿತ್ತು. ಸರಕಾರ ತೆಗೆದುಕೊಂಡ ನಿರ್ಧಾರ ಸರಿಯೇ ಆಗಿದ್ದರೂ, ಸಂದರ್ಭ ಮಾತ್ರ ಸರಿಯಾಗಿರಲಿಲ್ಲ. ಪರಿಣಾಮವಾಗಿ ಸರಕಾರಕ್ಕೆ ಹೈಕೋರ್ಟ್ನಲ್ಲಿ ಇದೀಗ ಹಿನ್ನಡೆಯಾಗಿದೆ.
ಸರಕಾರದ ನಿರ್ಧಾರದ ವಿರುದ್ಧ ಕೆಲವು ವಿದ್ಯಾರ್ಥಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದು , ಪರೀಕ್ಷೆಯ ಹೊತ್ತಿನಲ್ಲೇ ಇಂತಹದೊಂದು ನಿರ್ಧಾರ ತೆಗೆದುಕೊಂಡಿರುವುದರಿಂದ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವಾದಿಸಿದ್ದರು. ಈ ವಾದದಲ್ಲಿ ಹುರುಳಿಲ್ಲದೇ ಇಲ್ಲ. ಈಗಾಗಲೇ ಹಿಂದಿ ಪರೀಕ್ಷೆಗಾಗಿ ಸಮಯ ಮೀಸಲಿಟ್ಟು ಓದಿದವರಿಗೆ ಸರಕಾರದ ನಿರ್ಧಾರದಿಂದ ನಿರಾಸೆೆಯಾಗಬಹುದು. ಮುಖ್ಯವಾಗಿ ಹಿಂದಿ ಭಾಷೆಯಲ್ಲಿ ಅಂಕಗಳನ್ನು ಪಡೆಯುವುದು ಕನ್ನಡ, ಇಂಗ್ಲಿಷ್ನಂತೆ ಕಠಿಣವಲ್ಲ. ಅದರ ಪ್ರಶ್ನೆ ಪತ್ರಿಕೆಯನ್ನು ಅತ್ಯಂತ ಸರಳವಾಗಿ ರೂಪಿಸಲಾಗಿರುತ್ತದೆ. ಅಂಕಗಳನ್ನು ಪಡೆಯುವುದು ಬಹಳ ಸುಲಭ. ಹೆಚ್ಚಿನ ವಿದ್ಯಾರ್ಥಿಗಳು ಹಿಂದಿಯ ಬಗ್ಗೆ ಒಲವು ತೋರಿಸಲು ಕಾರಣ ಹಿಂದಿ ಭಾಷೆಯ ಮೇಲಿನ ಪ್ರೀತಿಯಿಂದಲ್ಲ. ಹಿಂದಿ ಪರೀಕ್ಷೆಯಲ್ಲಿ ಸುಲಭವಾಗಿ ಅಂಕಗಳನ್ನು ಪಡೆಯಬಹುದು ಎನ್ನುವ ಕಾರಣಕ್ಕಾಗಿ. ಶಾಲೆಯಲ್ಲಿ ಹಿಂದಿ ಭಾಷೆಯನ್ನು ತನ್ನದಾಗಿಸಿಕೊಳ್ಳುವುದಂತೂ ಅಷ್ಟರಲ್ಲೇ ಇದೆ. ಹೀಗೆ ಸುಲಭದಲ್ಲಿ ಅಂಕ ಸಂಗ್ರಹ ಮಾಡುವ ಗುರಿಯುಳ್ಳ ವಿದ್ಯಾರ್ಥಿಗಳಿಗೆ ಸರಕಾರದ ಅನಿರೀಕ್ಷಿತ ನಿರ್ಧಾರದಿಂದ ನಿರಾಸೆಯಾಗಿರಬಹುದು. ಇದೇ ಹೊತ್ತಿಗೆ ಇನ್ನೊಂದು ಅಂಶದತ್ತ ನ್ಯಾಯಾಲಯ ಬೆಟ್ಟು ಮಾಡಿದೆ. ತಮಿಳು, ಉರ್ದು, ತೆಲುಗು ಮೊದಲ ಭಾಷೆಯಾಗಿರುವ ಕೆಲವು ಶಾಲೆಗಳಲ್ಲಿ ಕನ್ನಡ ತೃತೀಯ ಭಾಷೆಯಾಗಿದೆ. ಅಂತಹ ಶಾಲೆಗಳಲ್ಲಿ ಕನ್ನಡದ ಮೇಲೆ ಪರಿಣಾಮ ಬೀರುವುದಿಲ್ಲವೇ ಎಂದು ನ್ಯಾಯಾಲಯ ಕೇಳಿದೆ. ಕನ್ನಡ ತೃತೀಯ ಭಾಷೆಯಾಗಿ ಕಲಿಸುವ ಶಾಲೆಗಳಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳದೆಯೇ ಏಕಾಏಕಿ ತೃತೀಯ ಭಾಷೆಯನ್ನು ನಿರ್ಲಕ್ಷಿಸುವುದು ಎಷ್ಟು ಸರಿ? ಎನ್ನುವ ಪ್ರಶ್ನೆಯನ್ನು ಹೈಕೋರ್ಟ್ ಕೇಳಿದೆ. ಮೇಲಿನ ಎಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಹೈಕೋರ್ಟ್, ಎಪ್ರಿಲ್ 15ರಂದು ತೃತೀಯ ಭಾಷೆಗೆ ಅಂಕ ನೀಡಬೇಕು ಎನ್ನುವ ತನ್ನ ಆದೇಶವನ್ನು ಮಂಗಳವಾರ ಎತ್ತಿ ಹಿಡಿಯಿತು.
ಹೈಕೋರ್ಟ್ ತೀರ್ಪಿನಿಂದ ಸಮಸ್ಯೆ ಪೂರ್ತಿಯಾಗಿ ಬಗೆಹರಿಯಿತು ಎಂದು ಹೇಳುವಂತಿಲ್ಲ. ಸರಕಾರದ ನಿರ್ಧಾರವನ್ನು ನಂಬಿ ಸಾವಿರಾರು ವಿದ್ಯಾರ್ಥಿಗಳು ಹಿಂದಿ ಪರೀಕ್ಷೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಅಂಕಗಳು ಪರಿಗಣನೆಯಾಗುವುದಿಲ್ಲವಾದುದರಿಂದ ಹಿಂದಿ ಪರೀಕ್ಷೆಗೆ ವ್ಯಯ ಮಾಡುವ ಸಮಯವನ್ನು ಇತರ ವಿಷಯಗಳಿಗೆ ಹೊಂದಿಸಿಕೊಂಡಿದ್ದಾರೆ. ಅವರೆಲ್ಲರ ಗತಿಯೇನಾಗಬೇಕು? ಸರಕಾರ ಮತ್ತು ಹೈಕೋರ್ಟ್ ತಿಕ್ಕಾಟಗಳ ನಡುವೆ ವಿದ್ಯಾರ್ಥಿಗಳ ಸ್ಥಿತಿ ಚಿಂತಾಜನಕವಾಗಿದೆ. ಹಿಂದಿ ಪರೀಕ್ಷೆಯ ಒತ್ತಡದಿಂದ ಪಾರು ಮಾಡಬೇಕು ಎನ್ನುವ ಸದುದ್ದೇಶದಿಂದ ಸರಕಾರ ತೆಗೆದುಕೊಂಡ ನಿರ್ಧಾರದಿಂದಲೇ ವಿದ್ಯಾರ್ಥಿಗಳು ಇನ್ನಷ್ಟು ಒತ್ತಡ ಅನುಭವಿಸುವಂತಾಗಿದೆ. ಇದೀಗ ಪರೀಕ್ಷೆ ಮುಗಿದು, ಫಲಿತಾಂಶ ಹೊರ ಬೀಳುವ ಹೊತ್ತಿನಲ್ಲಿ ಹೈಕೋರ್ಟ್ ಇಂತಹದೊಂದು ತೀರ್ಪನ್ನು ನೀಡುವ ಅನಿವಾರ್ಯತೆಯಿತ್ತೇ ಎನ್ನುವ ಪ್ರಶ್ನೆಯೂ ತಲೆಯೆತ್ತ್ತಿದೆ. ಸರಕಾರ ಕೂಡ ಯೋಚಿಸಿ, ಮುಂದಿನ ವರ್ಷಕ್ಕೆ ಅನ್ವಯವಾಗುವಂತೆ ಈ ನಿರ್ಧಾರವನ್ನು ಘೋಷಿಸಿದ್ದರೆ ಸಮಸ್ಯೆ ಉದ್ಭವಿಸುತ್ತಿರಲಿಲ್ಲವೇನೋ. 2025ರ ಅಕ್ಟೋಬರ್ 28ರಂದು ಎಸೆಸೆಲ್ಸಿ ಪರೀಕ್ಷೆ ನಡೆಸುವ ಸಂಬಂಧ ಸುತ್ತೋಲೆ ಹೊರಡಿಸಿದ ಬಳಿಕ ಅದರ ಅನ್ವಯವೇ ಪರೀಕ್ಷೆಯನ್ನು ನಡೆಸಬಹುದಿತ್ತು. ನ್ಯಾಯಾಲಯ ಕೂಡ ಇದನ್ನೇ ಮುಂದಿಟ್ಟುಕೊಂಡು ತೀರ್ಪು ನೀಡಿದೆ. ‘ಭವಿಷ್ಯದಲ್ಲಿ ಈ ಸಂಬಂಧ ರಾಜ್ಯ ಸರಕಾರ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಬಹುದಾಗಿದೆ. ಈ ವಿಚಾರದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸುಸುವುದಿಲ್ಲ’’ ನ್ಯಾಯ ಪೀಠ ಸ್ಪಷ್ಟಪಡಿಸಿದೆ.
ಈ ವರ್ಷದಲ್ಲಿ ತೃತೀಯ ಭಾಷೆಯ ಅಂಕಗಳನ್ನು ಪರಿಗಣಿಸುವುದೇ ಉಚಿತವೆನಿಸುತ್ತದೆ. ಹಾಗೆಯೇ ಮುಂದಿನ ಸಾಲಿನಲ್ಲಿ ತೃತೀಯ ಭಾಷೆಯ ಅಂಕಗಳನ್ನು ಪರಿಗಣಿಸುವ ಬಗ್ಗೆ ಶಿಕ್ಷಣ ತಜ್ಞರಿಂದ ಸೂಕ್ತಸಲಹೆಗಳನ್ನು ಪಡೆದು, ಸುದೀರ್ಘ ಚರ್ಚೆ ನಡೆಸಿ ಒಂದು ತೀರ್ಮಾನಕ್ಕೆ ಬರಬೇಕಿದೆ. ಹಾಗೆಯೇ ಸರಕಾರದ ನಿರ್ಧಾರ ತೃತೀಯ ಭಾಷೆಯಾಗಿ ಕನ್ನಡ ಕಲಿಯುತ್ತಿರುವ ಮಕ್ಕಳ ಮೇಲೆ ಪರಿಣಾಮ ಬೀರಬಾರದು. ಈಗಾಗಲೇ ಕನ್ನಡದ ಬಗ್ಗೆ ಇರುವ ಅಸಡ್ಡೆ ಇನ್ನಷ್ಟು ಹೆಚ್ಚುವುದಕ್ಕೆ ಕಾರಣವಾಗಬಾರದು. ಒಟ್ಟಿನಲ್ಲಿ ‘ಆತುರಗಾರನಿಗೆ ಬುದ್ಧಿ ಮಟ್ಟ’ ಎನ್ನುವ ಗಾದೆಯು ತೃತೀಯ ಭಾಷೆಗೆ ಸಂಬಂಧಿಸಿ ಸರಕಾರ ತೆಗೆದುಕೊಂಡ ಆತುರದ ನಿರ್ಧಾರಕ್ಕೆ ಒಪ್ಪುವಂತಿದೆ.






