ಆಶಾ ಕಾರ್ಯಕರ್ತರ ಆಸೆ ಕಮರದಿರಲಿ

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರವಹಿಸುವ, ಆದರೆ ಸೇವೆಗೆ ತಕ್ಕ ಪ್ರತಿಫಲವಿಲ್ಲದೆ ಕಡುಕಷ್ಟದಲ್ಲಿರುವ ಆಶಾ ಕಾರ್ಯಕರ್ತೆಯರು ಮತ್ತೊಮ್ಮೆ ಹೋರಾಟಕ್ಕಿಳಿದು ವಾರವಾಗುತ್ತಿದೆ. ಸರಕಾರ ಬೇಡಿಕೆ ಈಡೇರಿಸಲು ಸಮಯ ಕೇಳುತ್ತ, ಹೇಗಾದರೂ ಅವರನ್ನು ಸಾಗಹಾಕಲು ನೋಡುತ್ತಿರುವಂತಿದೆ. ಹೋರಾಟ ಕೈಬಿಡಲು ಹೇಳುವುದಕ್ಕೇ ಆದ್ಯತೆ ಕೊಟ್ಟಿರುವ ಸರಕಾರ, ಆಶಾ ಕಾರ್ಯಕರ್ತೆಯರ ಸಂಕಟಕ್ಕೆ ಮೊಸಳೆ ಕಣ್ಣೀರು ಸುರಿಸುತ್ತಿದೆಯೇ ಹೊರತು ಕರಗುತ್ತಿಲ್ಲ. ರಾಜ್ಯದ ವಿವಿಧೆಡೆಯಿಂದ ಬಂದ ಸಾವಿರಾರು ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಚಳಿಯನ್ನೂ ಲೆಕ್ಕಿಸದೆ, ಅಸ್ವಸ್ಥರಾಗುತ್ತಿದ್ದರೂ ಅಂಜದೆ ಧರಣಿ ನಿರತರಾಗಿದ್ದಾಗ, ಅವರಿಗೆ ‘ಅಣ್ಣ’ ಎಂದು ಹೇಳಿಕೊಂಡ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಔತಣಕೂಟದ ರಾಜಕೀಯದಲ್ಲಿ ಮುಳುಗಿದ್ದುದು ಇನ್ನೊಂದು ವಿರೋಧಾಭಾಸವಾಗಿತ್ತು. ಇಂಥ ನಾಟಕ, ಬೃಹನ್ನಾಟಕಗಳನ್ನೆಲ್ಲ ನೋಡಿಯೇ ರೋಸಿಹೋಗಿರುವ ಆಶಾ ಕಾರ್ಯಕರ್ತೆಯರು, ಈ ಸಲ ಮೌಖಿಕ ಭರವಸೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ ಮತ್ತು ಬೇಡಿಕೆ ಈಡೇರಿಸುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ.
ಅವರ ಆಕ್ರೋಶ ಈ ಮಟ್ಟ ಮುಟ್ಟುವುದಕ್ಕೂ ಕಾಂಗ್ರೆಸ್ ಸರಕಾರವೇ ಕಾರಣ. 2025ರ ಜನವರಿಯಲ್ಲಿಯೂ ಆಶಾ ಕಾರ್ಯಕರ್ತೆಯರು ಬೃಹತ್ ಪ್ರತಿಭಟನೆ ನಡೆಸಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಆ ಹೊತ್ತಲ್ಲಿ, ಗೌರವಧನ ಹೆಚ್ಚಿಸುವ ಭರವಸೆ ನೀಡಲಾಗಿತ್ತು. ಹಾಗೆ ಹೇಳಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಿದ್ದ ಸರಕಾರ ಕಡೆಗೆ ಮಾತು ತಪ್ಪಿತು. ಆಶಾ ಕಾರ್ಯಕರ್ತೆಯರ ಸೇವೆಯನ್ನು ತೋರಿಕೆಗಷ್ಟೇ ಹಾಡಿ ಹೊಗಳಲಾಗುತ್ತದೆ ಮತ್ತು ಅವರ ಪರಿಸ್ಥಿತಿಯ ಬಗ್ಗೆ ಚರ್ಚೆಯಾಗುತ್ತಿದ್ದಂತೆ ಹೊಣೆ ತಪ್ಪಿಸಿಕೊಳ್ಳಲಾಗುತ್ತದೆ ಎಂಬುದಕ್ಕೆ ಸರಕಾರದ ಇಂಥ ನಯವಂಚಕತನವೇ ಸಾಕ್ಷಿ.
ಷರತ್ತುಬದ್ಧ ಪ್ರೋತ್ಸಾಹಧನದ ಬದಲು ತಿಂಗಳಿಗೆ ಕನಿಷ್ಠ 15,000 ರೂ. ನಿಶ್ಚಿತ ಮಾಸಿಕ ಗೌರವಧನ ನಿಗದಿಪಡಿಸಬೇಕು ಮತ್ತು ತಿಂಗಳುಗಳಿಂದ ಬಾಕಿಯಿರುವ ಪ್ರೋತ್ಸಾಹಧನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂಬುದು ಮಾತ್ರವಲ್ಲದೆ, ವೇತನ ಸಹಿತ ಹೆರಿಗೆ ರಜೆ, ಗಂಭೀರ ಅನಾರೋಗ್ಯಕ್ಕೆ ಆರ್ಥಿಕ ನೆರವು, ನಿವೃತ್ತಿ ಸೌಲಭ್ಯದ ಬೇಡಿಕೆಯನ್ನೂ ಆಶಾ ಕಾರ್ಯಕರ್ತೆಯರು ಇಟ್ಟಿದ್ದಾರೆ. ಇಂಟರ್ನೆಟ್ ಸಂಪರ್ಕ ಮತ್ತು ಸೂಕ್ತ ತರಬೇತಿ ನೀಡದೆ ಆ್ಯಪ್ ಮೂಲಕ ಕೆಲಸ ಮಾಡಲು ಬಲವಂತ ಮಾಡಲಾಗುತ್ತಿರುವ ಬಗ್ಗೆಯೂ ಆಕ್ರೋಶ ವ್ಯಕ್ತವಾಗಿದೆ. ಹೆಚ್ಚುವರಿ ಮತ್ತು ಸಂಬಂಧವಿಲ್ಲದ ಕೆಲಸಗಳಿಂದ ಬಿಡುಗಡೆಗಾಗಿಯೂ ಕೇಳುತ್ತಿದ್ದಾರೆ.
ಕರ್ನಾಟಕ ಸರಕಾರದ ಪೋರ್ಟಲ್ ಉಲ್ಲೇಖಿಸಿರುವಂತೆ, ರಾಜ್ಯದಲ್ಲಿ ಸುಮಾರು 41,000ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರಿದ್ದಾರೆ. ಗ್ರಾಮೀಣ ಭಾಗಕ್ಕೆ 39,195, ನಗರಕ್ಕೆ 3,329 ಸೇರಿ ಒಟ್ಟು 42,524 ಹುದ್ದೆಗಳು ಮಂಜೂರಾಗಿದ್ದು, ಪ್ರಸ್ತುತ 41,785 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ 1,000 ಜನಸಂಖ್ಯೆಗೆ ಒಬ್ಬ ಆಶಾ ಕಾರ್ಯಕರ್ತೆ ಮತ್ತು ನಗರ, ಕೊಳೆಗೇರಿ ಅಥವಾ ಹಿಂದುಳಿದ ಪ್ರದೇಶದಲ್ಲಿ 2,500 ಜನಸಂಖ್ಯೆಗೆ ಒಬ್ಬ ಆಶಾ ಕಾರ್ಯಕರ್ತೆ ಇರುತ್ತಾರೆ. ಒಬ್ಬರಿಗೆ ಸರಾಸರಿ 250-300 ಕುಟುಂಬಗಳ ಸಂಪರ್ಕವಿರುತ್ತದೆ. ಆರಂಭದಲ್ಲಿ ತಾಯಿ ಮತ್ತು ಶಿಶು ಮರಣ ಪ್ರಮಾಣ ತಗ್ಗಿಸಲು ನೇಮಕವಾದರೂ, ಈಗ ಆನ್ಲೈನ್ ವರದಿ, ಸಮೀಕ್ಷೆಗಳು, ಲಸಿಕೆ ಅಭಿಯಾನ, ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಶಾಲಾ ಭೇಟಿ ಮತ್ತು ಸ್ವಂತ ಮೊಬೈಲ್ನಲ್ಲಿ ಆ್ಯಪ್ ಮೂಲಕ ಮಾಹಿತಿ ದಾಖಲಿಸುವುದು ಸೇರಿದಂತೆ ಹಲವು ಜವಾಬ್ದಾರಿಗಳನ್ನು ನೀಡಲಾಗಿದೆ. ಆದರೆ ರಾಜ್ಯ ಸರಕಾರದ ಮಾಸಿಕ ಗೌರವಧನ 5,000 ರೂ. ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿ 37 ಚಟುವಟಿಕೆಗಳಿಗೆ ಪ್ರೋತ್ಸಾಹಧನವಾಗಿ ಕೇಂದ್ರ ಸರಕಾರ ನೀಡುವ 2,000 ರೂ. ಮತ್ತು ರಾಜ್ಯದಿಂದ ಒಂದು ಸಾವಿರ ರೂ. ಪ್ರೋತ್ಸಾಹಧನವೂ ಸೇರಿ ಅವರಿಗೆ ಸಿಗುವುದು ಸುಮಾರು 8,000 ರೂ. ಮಾತ್ರ. ಅದೂ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಹೊತ್ತು ಗೊತ್ತೆನ್ನದೆ ಕೆಲಸ ಮಾಡಬೇಕಾದ ಸ್ಥಿತಿಯಿದೆ, ಮುಗಿಸಲಾರದಷ್ಟು ಕೆಲಸದ ಹೊರೆಯಿದೆ, ಒತ್ತಡವಿದೆ ಎಂಬುದು ಅವರ ದೂರು. 2005ರಿಂದ ಆಶಾ ಕಾರ್ಯಕರ್ತೆಯರ ನೇಮಕ ಶುರುವಾಗಿದ್ದರೂ, ಇವತ್ತಿನವರೆಗೂ ಅವರ ಸ್ಥಿತಿ ಸುಧಾರಿಸುವುದಕ್ಕೆ ಸರಕಾರ ಕಾಳಜಿವಹಿಸಿಲ್ಲ. ಈಗಿನಂತೆ ದೊಡ್ಡ ಮಟ್ಟದಲ್ಲಿ ಹೋರಾಟಕ್ಕಿಳಿದೊಡನೆ ಮನವೊಲಿಸಿ ಮನೆಗೆ ಕಳಿಸುವುದನ್ನು ಸರಕಾರ ರೂಢಿ ಮಾಡಿಕೊಂಡುಬಿಟ್ಟಿದೆ. ಆದರೆ ಈ ಸಲ ಸರಕಾರದ ಈ ಆಟ ನಡೆಯುತ್ತಿಲ್ಲ.
ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಿದರೆ ಅಂಗನವಾಡಿ ಕಾರ್ಯಕರ್ತೆಯರು, ಅತಿಥಿ ಉಪನ್ಯಾಸಕರು ಸೇರಿದಂತೆ ಇತರರೂ ಬೇಡಿಕೆಗಳನ್ನಿಡುತ್ತಾರೆ. ಅದರಿಂದ ಸರಕಾರಕ್ಕೆ ಹೊರೆಯಾಗುತ್ತದೆ ಎಂದು ಸರಕಾರ ಹೇಳುತ್ತಿದೆ. ಆದರೆ ಅದೇ ಸರಕಾರಕ್ಕೆ, ಯಾವ್ಯಾವುದೋ ಸಮಿತಿಗಳ ಹೆಸರಲ್ಲಿ ತನ್ನ ಜನರಿಗೆ ಕ್ಯಾಬಿನೆಟ್ ಸ್ಥಾನಮಾನದ ಹುದ್ದೆ ಕೊಡುವಾಗ, ಶಾಸಕರ ಸೌಲಭ್ಯ ಹೆಚ್ಚಿ
ಸುವಾಗ, ಸಚಿವರುಗಳಿಗೆ ಹೊಸ ಕಾರುಗಳಿಗಾಗಿ ಕೋಟಿಗಟ್ಟಲೆ ದುಂದು ವೆಚ್ಚ ಮಾಡುವಾಗ ಹಣದ ಕೊರತೆಯಿರುವುದಿಲ್ಲ. ಸಣ್ಣ ಗೌರವಧನದಲ್ಲಿ ಬದುಕು ತೂಗಿಸಲಾರದೆ ಹೈರಾಣಾಗುತ್ತಿರುವವರಿಗೆ ಕೊಡಬೇಕೆಂದರೆ ಸರಕಾರಕ್ಕೆ ಹೊಟ್ಟೆಯುರಿಯುತ್ತದೆ.
ಮುಖ್ಯಮಂತ್ರಿಯವರು, ಆಶಾ ಕಾರ್ಯಕರ್ತೆಯರ ಸೇವೆ, ಆರ್ಥಿಕ ಸಂಕಷ್ಟದ ಬಗ್ಗೆ ಸರಕಾರಕ್ಕೆ ಸಂಪೂರ್ಣ ಸಹಾನುಭೂತಿ ಇದೆ. ಗೌರವಧನ ಹೆಚ್ಚಳದ ಬೇಡಿಕೆ ತಳ್ಳಿಹಾಕುವುದಿಲ್ಲ. ಅವರು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಅವರ ಸಮಸ್ಯೆಗಳ ಬಗ್ಗೆ ಅರಿವಿದೆ ಎನ್ನುತ್ತಾರೆ. ಆದರೆ ಬೇಡಿಕೆ ಈಡೇರಿಕೆ ಒಂದೇ ದಿನದಲ್ಲಿ ತೀರ್ಮಾನವಾಗುವುದಿಲ್ಲ. ಸಂಪುಟ ಸಭೆ ಹಾಗೂ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನ ಮಾಡಬೇಕು ಎಂಬ ಸಬೂಬು ಕೊಡುತ್ತಾರೆ. ಆ ಮಾತಿನಲ್ಲಿ, ಬೇಡಿಕೆ ಈಡೇರಿಸುವ ದೃಢತೆಯ ಕೊರತೆ ಮಾತ್ರ ಎದ್ದು ಕಾಣುತ್ತಿದೆ.
ಸಹೋದರಿಯರು ಎಂದು ಕರೆದೊಡನೆ ಅವರ ಕಷ್ಟಗಳು ಬಗೆಹರಿಯುವುದಿಲ್ಲ. ಬೆಣ್ಣೆಯಿಂದ ಕೂದಲು ತೆಗೆದಂತೆ ಮಾತಾಡಿಬಿಟ್ಟರೆ ಮುಗಿಯುವುದಿಲ್ಲ. ಕಷ್ಟದಲ್ಲಿರುವವರ ಮುಂದೆ ಮನಸ್ಸಿಗೊಪ್ಪಿ ನಡೆಯಬೇಕಲ್ಲದೆ, ಅಲ್ಲೂ ರಾಜಕೀಯ ಬುದ್ಧ್ದಿ ತೋರಿಸುವುದು ಸಲ್ಲದು. ಸರಕಾರ ಕನಿಷ್ಠ ಆತ್ಮಸಾಕ್ಷಿಯೂ ಇಲ್ಲದಂತೆ ನಡೆದುಕೊಳ್ಳದೆ, ಭರವಸೆಗಳಲ್ಲೇ ಅವರನ್ನು ಮುಳುಗಿಸದೆ, ಆ ಗುಲಾಬಿ ಮನಸ್ಸುಗಳ ಬಗ್ಗೆ ಕಾಳಜಿ ವಹಿಸಬೇಕಿದೆ. ಅವರಿಲ್ಲದೆ ಇಡೀ ಆರೋಗ್ಯ ವ್ಯವಸ್ಥೆ ಎಷ್ಟು ಅಯೋಮಯವಾಗಬಹುದು ಎಂಬ ಎಚ್ಚರ ಸರಕಾರಕ್ಕೆ ಇರಬೇಕಿದೆ. ಕೊಟ್ಟ ಮಾತನ್ನೂ ಈಡೇರಿಸದೆ, ಈಗ ನೂರೆಂಟು ನೆಪಗಳನ್ನು ಸರಕಾರ ಮುಂದೆ ಮಾಡುತ್ತಿರುವುದು ಲಜ್ಜೆಗೇಡಿ ನಡೆಯಾಗಿದೆ. ಇನ್ನೂ ಬೇಸರದ ಸಂಗತಿಯೆಂದರೆ, ಪ್ರಾಮಾಣಿಕ ಮತ್ತು ನ್ಯಾಯಯುತ ಬೇಡಿಕೆಗಳೊಂದಿಗೆ ನಡೆಯುವ ಪ್ರತಿಭಟನೆಯ ವಿಷಯದಲ್ಲಿ ಕಾಂಗ್ರೆಸ್ ಸರಕಾರದ ಧೋರಣೆ ಕೂಡ ಬಿಜೆಪಿಗಿಂತ ಭಿನ್ನವಾಗಿಯೇನೂ ಇಲ್ಲವೆನ್ನುವುದು. ಇದು ಗದ್ದುಗೆ ಹಿಡಿದವರ ಮಾನಸಿಕ ದಾರಿದ್ರ್ಯ.






