ಜನಿವಾರಕ್ಕೆ ಸಿಕ್ಕಿದ ಭರವಸೆ ಹಿಜಾಬ್ ಧಾರಿಣಿಯರಿಗೂ ಸಿಗಲಿ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಇತ್ತೀಚೆಗೆ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ತಪಾಸಕರು ವಿದ್ಯಾರ್ಥಿಯೊಬ್ಬನ ಜನಿವಾರವನ್ನು ತೆಗೆದಿರುವುದು ಸಾಕಷ್ಟು ಚರ್ಚೆಗಳಿಗೆ, ವಿವಾದಗಳಿಗೆ ಕಾರಣವಾಗಿದೆ. ಈ ಮೂಲಕ ವಿದ್ಯಾರ್ಥಿಯೊಬ್ಬನ ಧಾರ್ಮಿಕ ನಂಬಿಕೆಗೆ ಧಕ್ಕೆ ತರಲಾಗಿದೆ ಎಂದು ಕೆಲವರು ಆರೋಪಿಸಿದ್ದಾರೆ. ಈ ಘಟನೆಯು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಸರಕಾರ, ತಕ್ಷಣ ತಪಾಸಣಾ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮವನ್ನು ತೆಗೆದುಕೊಂಡಿತು. ಇದೇ ಸಂದರ್ಭದಲ್ಲಿ, ಸಚಿವರೊಬ್ಬರು ‘ಸಂತ್ರಸ್ತ’ ವಿದ್ಯಾರ್ಥಿಗೆ ಉಚಿತ ಸೀಟು ನೀಡುವ ಭರವಸೆಯನ್ನು ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘‘ಜನಿವಾರ ತೆಗೆಸಿದ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ’’ ತೆಗೆದುಕೊಳ್ಳುವುದಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘‘ಪರೀಕ್ಷೆಯ ಹೆಸರಿನಲ್ಲಿ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸಿದರೆ ಕಠಿಣ ಶಿಕ್ಷೆ’’ ಎಂದು ಎಚ್ಚರಿಸಿದ್ದಾರೆ. ‘ಧರ್ಮಾಚರಣೆಗೆ ಯಾರೂ ಅಡ್ಡಿ ಪಡಿಸುವಂತಿಲ್ಲ. ಹಿರಿಯರು ಮಾಡಿರುವ ಆಚರಣೆಗಳಿಗೆ ಅಡ್ಡಿ ಮಾಡಿದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಸರಕಾರ ಬದ್ಧವಿದೆ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಒಟ್ಟಿನಲ್ಲಿ, ಒಂದು ಜನಿವಾರವನ್ನು ಸಿಬ್ಬಂದಿಯೊಬ್ಬ ಮುಟ್ಟಿದ್ದಕ್ಕೆ ಇಡೀ ಸರಕಾರವೇ ಸ್ಪಷ್ಟೀಕರಣ ನೀಡುವ ಸ್ಥಿತಿ ನಿರ್ಮಾಣವಾಗಿದೆ.
ಸಿಇಟಿ, ನೀಟ್‌ನಂತಹ ಪರೀಕ್ಷಾ ಕೇಂದ್ರಗಳಲ್ಲಿ ತಪಾಸಣಾಧಿಕಾರಿಗಳು ವಿದ್ಯಾರ್ಥಿಗಳ ಕೈಬಳೆ, ಸರ, ಆಭರಣ ಬಿಚ್ಚಿಸುವುದು ಸದಾ ಚರ್ಚೆಗೊಳಗಾಗುತ್ತಲೇ ಇವೆ. ಇತ್ತೀಚೆಗೆ ಪರೀಕ್ಷಾ ಕೇಂದ್ರವೊಂದರಲ್ಲಿ ವಿದ್ಯಾರ್ಥಿನಿಯರ ಬಟ್ಟೆಯನ್ನು ಕತ್ತರಿಸಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ತಪಾಸಣೆಯ ಹೆಸರಿನಲ್ಲಿ ಕೆಲವೊಮ್ಮೆ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುವುದು, ಅವರ ಒಳಉಡುಪುಗಳನ್ನು ಮುಟ್ಟುವುದು ಇತ್ಯಾದಿಗಳು ನಡೆಯುತ್ತವೆ. ಇಲ್ಲಿ ಅತಿ ಹೆಚ್ಚು ಸಂತ್ರಸ್ತರಾಗುವುದು ವಿದ್ಯಾರ್ಥಿನಿಯರು. ಇದೀಗ ‘ಜನಿವಾರ’ಕ್ಕೆ ಕೈ ಹಾಕಿದ ಕಾರಣದಿಂದ ಪ್ರಕರಣ ಗಂಭೀರ ರೂಪವನ್ನು ಪಡೆದಿದೆ. ಇಂತಹ ತಪಾಸಣೆಗಳು ಎಷ್ಟು ಸರಿ? ಎಂಬ ಪ್ರಶ್ನೆ ಎದ್ದಿದೆ. ರಾಜ್ಯ ಸರಕಾರ ‘ತಪಾಸಣಾ ಕೇಂದ್ರದ ಸಿಬ್ಬಂದಿ’ಯನ್ನು ಅಮಾನತು ಮಾಡಿ ಪ್ರಕರಣಕ್ಕೆ ನ್ಯಾಯ ನೀಡಲು ಮುಂದಾಗಿದೆ. ಆದರೆ ಪ್ರಕರಣಕ್ಕೆ ಸಂಬಂಧಿಸಿ ಸಿಬ್ಬಂದಿಯನ್ನು ಬಲಿಪಶು ಮಾಡುವುದು ಎಷ್ಟು ಸರಿ? ಎನ್ನುವ ಪ್ರಶ್ನೆಯನ್ನು ಕೆಲವರು ಕೇಳುತ್ತಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳು ಏನನ್ನು ಧರಿಸಬೇಕು, ಧರಿಸಬಾರದು ಎನ್ನುವ ನಿಯಮವನ್ನು ಮಾಡಿರುವುದು ಪರೀಕ್ಷಾ ಪ್ರಾಧಿಕಾರವೇ ಹೊರತು, ಪರೀಕ್ಷಾ ಕೇಂದ್ರದ ಸಿಬ್ಬಂದಿಯಲ್ಲ. ತಮಗೆ ಸಿಕ್ಕಿದ ಸೂಚನೆಯಂತೆ ಅವರು ಕೆಲಸ ನಿರ್ವಹಿಸಿದ್ದಾರೆ. ಒಂದು ವೇಳೆ ಈ ಸೂಚನೆಯನ್ನು ಪಾಲಿಸದೇ ಇದ್ದರೂ ಅವರ ಮೇಲೆ ಸರಕಾರ ಕ್ರಮ ತೆಗೆದುಕೊಳ್ಳಬಹುದಾಗಿದೆ. ಲೋಹದ ಸರಗಳು, ಆಭರಣಗಳನ್ನು ಧರಿಸಲು ಅವಕಾಶ ನೀಡಬಾರದು ಎನ್ನುವ ಸ್ಪಷ್ಟ, ಲಿಖಿತ ಆದೇಶಗಳಿರುವಾಗ, ಮಹಿಳೆಯರ ತಾಳಿಯನ್ನು ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಧರಿಸುವುದಕ್ಕೆ ಅನುಮತಿ ನೀಡುವುದು ಸರಿಯೆ? ತಾಳಿಯನ್ನು ಧರಿಸಲು ಅನುಮತಿ ನೀಡಬಹುದು ಎಂದಾದರೆ, ಉಳಿದ ಸರಗಳನ್ನು ಯಾಕೆ ಧರಿಸಲು ಅವಕಾಶ ನೀಡಬಾರದು? ಎನ್ನುವ ಪ್ರಶ್ನೆಯೂ ಏಳುತ್ತದೆ. ವಿದ್ಯಾರ್ಥಿನಿಯರು ಕೈ ಬಳೆಯನ್ನು ಕಡ್ಡಾಯವಾಗಿ ತೆಗೆಯಬೇಕು ಎಂದಾದರೆ, ಹುಡುಗನೊಬ್ಬನ ಅಂಗಿಯಿಂದ ಹೊರಗೆ ಇಣುಕುತ್ತಿರುವ ಜನಿವಾರಕ್ಕೆ ಅವಕಾಶಕೊಡಬೇಕೋ, ಬೇಡವೋ ಎನ್ನುವ ಗೊಂದಲ ಸೃಷ್ಟಿಯಾಗುವುದು ಸಹಜವೇ ಆಗಿದೆ. ಈ ಹಿನ್ನೆಲೆಯಲ್ಲಿ ಜನಿವಾರವನ್ನು ಕಳಚಲು ತಪಾಸಣಾ ಸಿಬ್ಬಂದಿ ಹೇಳಿರಬಹುದು. ಈ ನಿಟ್ಟಿನಲ್ಲಿ, ಸರಕಾರ ಪರೀಕ್ಷಾ ಕೇಂದ್ರದಲ್ಲಿ ಏನನ್ನು ಧರಿಸಿಕೊಂಡು ಹೋಗಬೇಕು, ಹೋಗಬಾರದು ಎನ್ನುವ ಸುತ್ತೋಲೆಯಲ್ಲಿ ಬದಲಾವಣೆ ಮಾಡಬೇಕು. ಬೇಕಾದರೆ ಸುತ್ತೋಲೆ ಹೊರಡಿಸಿದ ಅಧಿಕಾರಿಯ ಮೇಲೆ ಕ್ರಮ ತೆಗೆದುಕೊಳ್ಳಬಹುದೇ ಹೊರತು, ತಪಾಸಣಾ ಕೇಂದ್ರದ ಸಿಬ್ಬಂದಿಯನ್ನು ಅಮಾನತು ಮಾಡುವುದು ನ್ಯಾಯವಲ್ಲ. ಆದುದರಿಂದ ಮೊದಲು ಸಿಬ್ಬಂದಿಯ ಅಮಾನತನ್ನು ಸರಕಾರ ಹಿಂದೆಗೆದುಕೊಂಡು, ಸುತ್ತೋಲೆ ಹೊರಡಿಸಿದ ಅಧಿಕಾರಿಯ ಮೇಲೆ ಕ್ರಮ ತೆಗೆದುಕೊಳ್ಳಬೇಕು ಮತ್ತು ಆ ಸುತ್ತೋಲೆಯನ್ನು ಬದಲಿಸಬೇಕು.
ಇದೇ ಸಂದರ್ಭದಲ್ಲಿ ಸಚಿವರೊಬ್ಬರು ‘ಸಂತ್ರಸ್ತ ಜನಿವಾರಧಾರಿ ವಿದ್ಯಾರ್ಥಿ’ಗೆ ಉಚಿತ ಸೀಟನ್ನು ನೀಡುವುದಾಗಿ ಘೋಷಿಸಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ಅದೆಷ್ಟೋ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳು ನಿಯಮಕ್ಕೆ ತಲೆಬಾಗಿ ಜನಿವಾರ ಕಳಚಿಟ್ಟು ಪರೀಕ್ಷೆಯನ್ನು ಬರೆದಿದ್ದಾರೆ. ಇದೀಗ ನಿಯಮಕ್ಕೆ ತಲೆಬಾಗದ ವಿದ್ಯಾರ್ಥಿಗೆ ಉಚಿತ ಸೀಟನ್ನು ನೀಡಿದರೆ, ನಿಯಮಕ್ಕೆ ತಲೆಬಾಗಿ ಪರೀಕ್ಷೆ ಬರೆದ ಜನಿವಾರಧಾರಿ ವಿದ್ಯಾರ್ಥಿಗಳ ಪಾಡೇನಾಗಬೇಕು? ನಿಯಮವನ್ನು ಪಾಲಿಸಿದ್ದು ನಮ್ಮ ತಪ್ಪೇ? ಎಂದು ಅವರು ಕೇಳುವಂತಾಗುತ್ತದೆ. ಮುಂದಿನ ದಿನಗಳಲ್ಲಿ, ನಿಯಮಗಳನ್ನು ಉಲ್ಲಂಘಿಸಲು ಇತರ ವಿದ್ಯಾರ್ಥಿಗಳಿಗೆ ಅದುವೇ ಸ್ಫೂರ್ತಿಯಾಗಬಹುದು. ತಪಾಸಣಾಧಿಕಾರಿಗಳು ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳನ್ನು ತಪಾಸಣೆಗೈಯುವುದೇ ಅಪರಾಧ ಎನ್ನುವ ಸ್ಥಿತಿ ನಿರ್ಮಾಣವಾಗಬಹುದು. ಆದುದರಿಂದ, ಸಂತ್ರಸ್ತ ವಿದ್ಯಾರ್ಥಿಗೆ ಮತ್ತೊಮ್ಮೆ ಜನಿವಾರದ ಜೊತೆಗೇ ಪರೀಕ್ಷೆ ಬರೆಯಲು ಅವಕಾಶಕೊಡಬಹುದೇ ಹೊರತು, ಯಾವ ಕಾರಣಕ್ಕೂ ಉಚಿತವಾಗಿ ಸೀಟನ್ನು ನೀಡಬಾರದು. ಅದು ಕೆಟ್ಟ ಸಂಪ್ರದಾಯವೊಂದಕ್ಕೆ ನಾಂದಿಹಾಡಬಹುದಾಗಿದೆ.
ಜನಿವಾರ ವಿವಾದದ ಜೊತೆ ಜೊತೆಗೇ ‘ವಿದ್ಯಾರ್ಥಿನಿಯರ ಹಿಜಾಬ್’ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಜನಿವಾರ ಕಳಚಲು ಹೇಳುವ ಮೂಲಕ ಬ್ರಾಹ್ಮಣ ವಿದ್ಯಾರ್ಥಿಗಳ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಹೇಳಿಕೆ ನೀಡುತ್ತಿರುವವರೇ ಕೆಲವು ವರ್ಷಗಳ ಹಿಂದೆ, ಮುಸ್ಲಿಮ್ ವಿದ್ಯಾರ್ಥಿನಿಯರು ತಲೆ ವಸ್ತ್ರಗಳ ಜೊತೆಗೆ ಶಾಲೆ ಪ್ರವೇಶಿಸಬಾರದು ಎಂದು ತಡೆ ಒಡ್ಡಿದ್ದರು. ಒಂದೆಡೆ ಸರಕಾರ ವಿದ್ಯಾರ್ಥಿನಿಯರು ಶಾಲೆ ತೊರೆಯದಂತೆ ಮಾಡಲು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿರುವಾಗ, ಕರ್ನಾಟಕದಲ್ಲಿ ತಲೆವಸ್ತ್ರದ ನೆಪವೊಡ್ಡಿ ವಿದ್ಯಾರ್ಥಿನಿಯರನ್ನು ಶಾಲೆ ಪ್ರವೇಶಿಸದಂತೆ ಸರಕಾರದ ನೇತೃತ್ವದಲ್ಲಿ ತಡೆಯಲಾಯಿತು. ‘ಧಾರ್ಮಿಕ ನಂಬಿಕೆ’ಯ ವಿಷಯ ಪಕ್ಕಕ್ಕಿರಲಿ. ಕನಿಷ್ಠ ಪ್ರಧಾನಿ ಮೋದಿಯವರ ‘ಬೇಟಿ ಬಚಾವೋ ಬೇಟಿ ಪಢಾವೋ’ ಘೋಷಣೆಗಾದರೂ ಬೆಲೆಕೊಟ್ಟು ವಿದ್ಯಾರ್ಥಿನಿಯರಿಗೆ ಶಾಲೆಯ ಬಾಗಿಲನ್ನು ತೆರೆಯಬೇಕಾಗಿತ್ತು. ಆದರೆ ಈ ಸಂದರ್ಭದಲ್ಲಿ ಕೆಲವರು ‘ನಿಮಗೆ ಧರ್ಮ ಮುಖ್ಯವೋ? ಶಿಕ್ಷಣ ಮುಖ್ಯವೋ?’ ಎಂದು ವಿದ್ಯಾರ್ಥಿನಿಯರ ಬಳಿ ಕೇಳಿದರು. ಹಾಗೆ ಪ್ರಶ್ನಿಸಿದ ಅದೇ ಮಂದಿ ಇದೀಗ ‘ನಮಗೆ ಶಿಕ್ಷಣಕ್ಕಿಂತ ಜನಿವಾರ ಮುಖ್ಯ’ ಎಂದು ಹೇಳುತ್ತಿರುವುದು ವಿಪರ್ಯಾಸವಾಗಿದೆ. ಅದೇನೇ ಇರಲಿ, ಜನಿವಾರದ ಕಾರಣದಿಂದಲಾದರೂ ರಾಜ್ಯ ಸರಕಾರ, ಶಿಕ್ಷಣ ಕ್ಷೇತ್ರದಲ್ಲಿ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗಲು ಬಿಡುವುದಿಲ್ಲ ಎಂಬ ಭರವಸೆಯನ್ನು ನೀಡಿದೆ. ಜನಿವಾರಧಾರಿಗಳಿಗೆ ಸಿಕ್ಕಿದ ಈ ಭರವಸೆ, ಶಾಲೆಗೆ ತೆರಳಲು ಹಂಬಲಿಸುವ ಹಿಜಾಬ್ ಧಾರಿಣಿ ವಿದ್ಯಾರ್ಥಿಗಳಿಗೂ ಸಿಗಬೇಕಾಗಿದೆ. ಸಿಇಟಿ ಪರೀಕ್ಷೆ ಬರೆಯುವುದಕ್ಕಿಂತಲೂ ಅತ್ಯಗತ್ಯವಾಗಿದೆ ಮಹಿಳೆಯರಿಗೆ ಶಿಕ್ಷಣ. ಶಿಕ್ಷಣಕ್ಕಾಗಿ ಸಮವಸ್ತ್ರಗಳಿರುವುದೇ ಹೊರತು, ಸಮವಸ್ತ್ರಕ್ಕಾಗಿ ಶಿಕ್ಷಣವಿರುವುದಲ್ಲ. ಇದನ್ನು ಇನ್ನಾದರೂ ಬಿಜೆಪಿ-ಕಾಂಗ್ರೆಸ್ ನಾಯಕರು ಅರ್ಥಮಾಡಿಕೊಂಡು ವಿದ್ಯಾರ್ಥಿನಿಯರಿಗೆ ಕಲಿಕೆಯ ಬಾಗಿಲನ್ನು ತೆರೆದುಕೊಡಬೇಕಾಗಿದೆ.







