Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಈ ಸಿದ್ದವಿರಾಮ, ಪೂರ್ಣ ವಿರಾಮವಾಗದಿರಲಿ!

ಈ ಸಿದ್ದವಿರಾಮ, ಪೂರ್ಣ ವಿರಾಮವಾಗದಿರಲಿ!

ವಾರ್ತಾಭಾರತಿವಾರ್ತಾಭಾರತಿ30 May 2026 8:28 AM IST
share
ಈ ಸಿದ್ದವಿರಾಮ, ಪೂರ್ಣ ವಿರಾಮವಾಗದಿರಲಿ!

ಸಿದ್ದರಾಮಯ್ಯ ಅವರ ರಾಜಕೀಯ ಬದುಕಿಗೆ ಅಲ್ಪವಿರಾಮ ಬಿದ್ದಿದೆ. ಇದರ ಜೊತೆ ಜೊತೆಗೇ ಸಿದ್ದರಾಮಯ್ಯ ಅವರ ಸಾರ್ವಜನಿಕ ರಾಜಕೀಯಕ್ಕೆ ಪೂರ್ಣ ವಿರಾಮ ಬೀಳುತ್ತದೆಯೇ ಎನ್ನುವುದು ಮಾತ್ರ ನಿರ್ಧಾರವಾಗಿಲ್ಲ. ಹಣಕಾಸು ಸಚಿವರಾಗಿ 17 ಬಾರಿ ಬಜೆಟ್ ಮಂಡಿಸಿ, ಎರಡು ಬಾರಿ ಉಪಮುಖ್ಯಮಂತ್ರಿಯಾಗಿ, ವಿಧಾನಸಭೆಯ ವಿಪಕ್ಷ ನಾಯಕರಾಗಿ, ಎರಡು ಬಾರಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಈ ರಾಜ್ಯ ರಾಜಕೀಯಕ್ಕೆ ಕೊಟ್ಟ ಕೊಡುಗೆ ಅವಿಸ್ಮರಣೀಯವಾದುದು. ದೇವರಾಜ ಅರಸು ಬಳಿಕ, ತಳಸ್ತರದ ಜನರೆಡೆಗೆ ಆಡಳಿತವನ್ನು ತಲುಪಿಸಲು ಪ್ರಯತ್ನಿಸಿದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಗುರುತಿಸಲ್ಪಡುತ್ತಿದ್ದಾರೆ. ಸಿದ್ದರಾಮಯ್ಯ ಎಂದಾಗ ಗ್ರಾಮೀಣ ಪ್ರದೇಶದ ಮಹಿಳೆಯರ ಮುಖ ಅರಳುತ್ತದೆ. ದುರ್ಬಲರ ಪರವಾಗಿರುವ ಆಡಳಿತವನ್ನು ನೀಡುವ ಕನಸುಗಳೊಂದಿಗೆ ಅವರು ಗದ್ದುಗೆಯನ್ನೇರಿದರು. ಆದರೆ ಅದನ್ನು ಎಷ್ಟರ ಮಟ್ಟಿಗೆ ಸಾಧಿಸಲು ಸಾಧ್ಯವಾಯಿತು ಎನ್ನುವುದು ಮಾತ್ರ ಪ್ರಶ್ನೆಯಾಗಿಯೇ ಉಳಿಯುತ್ತದೆ. ಮಂದಿರ, ಮಸೀದಿ, ಅದಾನಿ, ಅಂಬಾನಿಗಳ ಹೆಸರು ಜಪಿಸುತ್ತಾ ರಾಜಕೀಯ ನಡೆಸುವ ರಾಜಕಾರಣಿಗಳ ನಡುವೆ, ಅಹಿಂದ, ದಲಿತರು, ಮಹಿಳೆಯರು, ಬಡವರು, ದುರ್ಬಲರ ವಿಷಯಗಳನ್ನಿಟ್ಟುಕೊಂಡೇ ರಾಜಕೀಯ ನಡೆಸಿದರಲ್ಲ ಎನ್ನುವುದೇ ಅವರ ಬಹುದೊಡ್ಡ ಸಾಧನೆಯಾಗಿ ನಾವು ಗುರುತಿಸಬೇಕಾಗಿದೆ. ದೇವೇಗೌಡರ ಜೊತೆಗೆ ಬಿರುಕುಂಟಾಗಿ, ಜೆಡಿಎಸ್‌ನಿಂದ ಹೊರಬಂದಾಗ ಅವರು ಅಕ್ಷರಶಃ ಒಬ್ಬಂಟಿಯಾಗಿದ್ದರು. ಆ ಸಂದರ್ಭದಲ್ಲಿ ಅವರ ಯೋಗ್ಯತೆಯನ್ನು, ಮುತ್ಸದ್ದಿತನವನ್ನು ಗುರುತಿಸಿ ಪಕ್ಷಕ್ಕೆ ಸ್ವಾಗತಿಸಿ ಅವರಿಗೆ ಯೋಗ್ಯ ಸ್ಥಾನವನ್ನು ನೀಡಿದ ಕಾಂಗ್ರೆಸ್‌ಗೆ ಸಿದ್ದರಾಮಯ್ಯ ನಿರಾಶೆ ಮಾಡಲಿಲ್ಲ. ರಾಜ್ಯದಲ್ಲಿ ಹೆಬ್ಬಾವಿನಂತೆ ಹೊರಳಾಡುತ್ತಿದ್ದ ಕಾಂಗ್ರೆಸ್ ಚುರುಕು ಪಡೆದದ್ದು ಸಿದ್ದರಾಮಯ್ಯ ಪ್ರವೇಶದ ಬಳಿಕ. ವಿರೋಧಪಕ್ಷದಲ್ಲಿ ಕುಳಿತು ರೆಡ್ಡಿ ಸಹೋದರರಿಗೆ ಸವಾಲೆಸೆದು ಅವರನ್ನು ಮಕಾಡೆ ಮಲಗಿಸಿದ ಹೆಗ್ಗಳಿಕೆ ಸಿದ್ದರಾಮಯ್ಯ ಅವರಿಗೆ ಸೇರಬೇಕು. ಸಿದ್ದರಾಮಯ್ಯ ನೇತೃತ್ವದ ಬಲದಿಂದ ಬಳ್ಳಾರಿ ಪಾದಯಾತ್ರೆಯ ಚೈತನ್ಯ, ಕಾಂಗ್ರೆಸನ್ನು ಅಧಿಕಾರದೆಡೆಗೆ ತಲುಪಿಸಿತು. 2013ರಲ್ಲಿ ಕಾಂಗ್ರೆಸ್‌ನೊಳಗೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಹೊರತು ಪಡಿಸಿದ ಪರ್ಯಾಯ ಆಯ್ಕೆಯೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಯಿತು.

2023ರ ಚುನಾವಣೆಯಲ್ಲಿ ಕಾಂಗ್ರೆಸ್ ವರಿಷ್ಠರು ಗ್ಯಾರಂಟಿ ಯೋಜನೆಗಳನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿದಾಗ ಅದರ ಜಾರಿಯ ನೇತೃತ್ವವನ್ನು ಸಿದ್ದರಾಮಯ್ಯ ಅವರು ವಹಿಸಿಕೊಂಡಿದ್ದರು. ಗ್ಯಾರಂಟಿ ಯೋಜನೆಗಳನ್ನು ಘೋಷಿಸುವುದೇನೋ ಸುಲಭ. ಆದರೆ ಅದನ್ನು ಅನುಷ್ಠಾನಗೊಳಿಸಬೇಕಾದರೆ, ರಾಜ್ಯದ ವಿತ್ತೀಯ ಪರಿಸ್ಥಿತಿಯ ಬಗ್ಗೆ ಅನುಭವಿಯಾಗಿರುವ ನಾಯಕನೊಬ್ಬನ ಅಗತ್ಯವಿತ್ತು. ಹಲವು ಬಾರಿ ಹಣಕಾಸು ಸಚಿವರಾಗಿ 17 ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಸಂದರ್ಭದಲ್ಲಿ ಕಂಗೆಡಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೇರಿದ ಬೆನ್ನಿಗೇ ‘ಗ್ಯಾರಂಟಿ ಯೋಜನೆಗಳನ್ನು ತಕ್ಷಣ ಜಾರಿಗೊಳಿಸಿ’ ಎಂದು ವಿರೋಧ ಪಕ್ಷದ ನಾಯಕರು ಒತ್ತಾಯಿಸ ತೊಡಗಿದ್ದರು. ಗ್ಯಾರಂಟಿ ಯೋಜನೆಗಳು ಜಾರಿಗೊಳಿಸುವುದಕ್ಕೆ ಅಸಾಧ್ಯ ಎನ್ನುವುದು ಅವರ ಗಟ್ಟಿ ನಂಬಿಕೆಯಾಗಿತ್ತು. ಆದರೆ ಸಿದ್ದರಾಮಯ್ಯ ನೇತೃತ್ವದ ಸರಕಾರ ಎಲ್ಲ ಗ್ಯಾರಂಟಿಗಳನ್ನು ಒಂದೊಂದಾಗಿ ಜಾರಿಗೊಳಿಸುತ್ತಲೇ ಹೋಯಿತ್ತು. ಅಷ್ಟೇ ಅಲ್ಲ , ಎಲ್ಲ ಆರ್ಥಿಕ ಒತ್ತಡಗಳ ನಡುವೆಯೂ ಗ್ಯಾರಂಟಿ ಯೋಜನೆಗಳಿಗೆ ಹಣದ ಕೊರತೆಯಾಗದಂತೆ ನೋಡಿಕೊಂಡಿತ್ತು. ಬಹುಶಃ 2023ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಅವರ ಬಹುದೊಡ್ಡ ಸಾಧನೆಯೆಂದರೆ, ಗ್ಯಾರಂಟಿ ಯೋಜನೆಗಳು ಸ್ಥಗಿತವಾಗದಂತೆ ನೋಡಿಕೊಂಡದ್ದು. ಆ ಮೂಲಕ ಸರಕಾರ ವಿರೋಧ ಪಕ್ಷದ ಬಾಯಿಗೆ ಆಹಾರವಾಗುವುದನ್ನು ಅವರು ತಪ್ಪಿಸಿದರು.

ಇದೀಗ ರಾಜ್ಯದಲ್ಲಿ ಮುಖ್ಯಮಂತ್ರಿಯ ಬದಲಾವಣೆಯ ಅಗತ್ಯವಿತ್ತೇ? ಎನ್ನುವ ಪ್ರಶ್ನೆಗೆ ಅರ್ಥವೇ ಇಲ್ಲ. ಇಂತಹದೊಂದು ಬದಲಾವಣೆಯ ಮಾತುಕತೆಯ ತಳಹದಿಯ ಮೇಲೆ ಸಿದ್ದರಾಮಯ್ಯ ಅವರು 2023ರಲ್ಲಿ ಮುಖ್ಯಮಂತ್ರಿಯಾಗಿರುವುದು ನಿಜವೇ ಆಗಿದ್ದರೆ ಅವರ ರಾಜೀನಾಮೆ ರಾಜ್ಯ ಕಾಂಗ್ರೆಸ್‌ನ ಭವಿಷ್ಯದ ದೃಷ್ಟಿಯಿಂದ ಅನಿವಾರ್ಯವಾಗಿತ್ತು. ಆದುದರಿಂದ, ಅವರ ಆಡಳಿತದ ಸಫಲತೆ, ವೈಫಲ್ಯಗಳನ್ನು ಈ ರಾಜೀನಾಮೆಯ ಮೂಲಕ ಅಳೆದು ತೂಗುವುದೂ ಸಾಧ್ಯವಿಲ್ಲ. ಒಂದು ರೀತಿಯಲ್ಲಿ ಸಿದ್ದರಾಮಯ್ಯ ಅವರಿಂದ ರಾಜ್ಯದ ಜನತೆಗೆ ಅಗಾಧ ನಿರೀಕ್ಷೆಗಳಿದ್ದವು. ಆ ನಿರೀಕ್ಷೆಗಳೇ ಅವರಿಗೆ ಮುಳುವಾದವು. ಬಹುಶಃ ಸಿದ್ದರಾಮಯ್ಯ ಹೊರತು ಪಡಿಸಿದ ಬೇರಾವುದೇ ನಾಯಕ ರಾಜ್ಯದ ಗದ್ದುಗೆಯನ್ನೇರಿದ್ದರೆ ಅವರಿಂದ ಈ ನಿರೀಕ್ಷೆಗಳನ್ನು ಜನರು ಇಟ್ಟುಕೊಳ್ಳುತ್ತಿರಲಿಲ್ಲ. ಸಮಾಜವಾದಿ ಹಿನ್ನೆಲೆಯಿಂದ ಬಂದಿರುವ ಸಿದ್ದಾರಾಮಯ್ಯ , ಕಾಂಗ್ರೆಸ್‌ನೊಳಗಿನ ಮೊಸಳೆಗಳ ನಡುವೆ ಈಜಿ ಈವರೆಗೆ ಜೀವ ಉಳಿಸಿಕೊಂಡದ್ದೇ ದೊಡ್ಡದು. ಹಾಗೆ ನೋಡಿದರೆ, 2013ರ ಅವಧಿಯಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ, ಪಕ್ಷದೊಳಗೆ ಅಪಸ್ವರ ಕೇಳಿ ಬಂದಾಗ, ‘‘ಇದು ನನ್ನ ಕೊನೆಯ ಅವಧಿ. ಇನ್ನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ’’ ಎಂದು ಘೋಷಿಸಿ ಕಾಂಗ್ರೆಸ್‌ನೊಳಗಿರುವ ಅತೃಪ್ತ ನಾಯಕರ ಮೂಗಿಗೆ ಬೆಣ್ಣೆ ಸವರಿದ್ದರು. ಆದರೆ, ಕಾಂಗ್ರೆಸ್‌ನಲ್ಲಿ ಅದಾಗಲೇ ತನ್ನ ಮುತ್ಸದ್ದಿತನದ ಬಲದಿಂದ ಬೇರನ್ನು ಆಳಕ್ಕಿಳಿಸಿದ ಸಿದ್ದರಾಮಯ್ಯ, 2023ರ ಚುನಾವಣೆಯಲ್ಲಿ ಹಿಂದೆ ಸರಿಯಲಿಲ್ಲ. ಆ ಚುನಾವಣೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜಂಟಿ ನೇತೃತ್ವವನ್ನು ವಹಿಸಿಕೊಂಡಿದ್ದರು. ಬರೇ ಸಿದ್ದರಾಮಯ್ಯ ಅವರ ಜನಪ್ರಿಯತೆಯಿಂದ ಚುನಾವಣೆ ಗೆಲ್ಲುವುದು ಕಾಂಗ್ರೆಸ್‌ಗೆ ಸಾಧ್ಯವಿರಲಿಲ್ಲ. ಡಿ.ಕೆ. ಶಿವಕುಮಾರ್ ಅವರ ಜಾತಿ ಬಲ, ಹಣಬಲವೂ ಸಾಕಷ್ಟು ಕೆಲಸ ಮಾಡಿತ್ತು. ಇದನ್ನು ನಿರಾಕರಿಸುವುದು ಕಾಂಗ್ರೆಸ್ ವರಿಷ್ಠರಿಗೂ ಸಾಧ್ಯವಿರಲಿಲ್ಲ.

2023ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಹತ್ತು ಹಲವು ಶರತ್ತುಗಳ ತಂತಿಯ ಮೇಲೆ ನಡೆಯಬೇಕಾಗಿತ್ತು. ಈ ಒತ್ತಡಗಳು ಆರಂಭದಲ್ಲೇ ಅವರನ್ನು ಅಸಹಾಯಕರನ್ನಾಗಿಸಿತ್ತು. ಅದರ ಜೊತೆ ಜೊತೆಗೆ ‘ಗ್ಯಾರಂಟಿ ಹುಲಿ ಸವಾರಿ’ ಬೇರೆ. ಆ ಹುಲಿ ಸರಕಾರವನ್ನು ತಿಂದು ಹಾಕದ ಹಾಗೆಯೂ ಜಾಗರೂಕತೆಯನ್ನು ವಹಿಸಬೇಕಾಗಿತ್ತು. ಒಂದು ವೇಳೆ ಉತ್ತಮ ಆಡಳಿತ ನೀಡಿದ್ದರೂ ಸಿದ್ದರಾಮಯ್ಯ ರಾಜೀನಾಮೆ ನೀಡಲೇ ಬೇಕಾಗಿತ್ತು ಎನ್ನುವುದು ವಾಸ್ತವ. ಈ ಬದಲಾವಣೆ ಕಾಂಗ್ರೆಸ್ ಪಕ್ಷದ ಹಿತಾಸಕ್ತಿಯನ್ನು ದೃಷ್ಟಿಯಲ್ಲಿಟ್ಟು ನಡೆದಿರುವುದೇ ಹೊರತು, ರಾಜ್ಯದ ಹಿತಾಸಕ್ತಿಯಿಂದಲ್ಲ. ಇದೀಗ ಅಧಿಕಾರದ ರಿಲೇ ಕೋಲನ್ನು ಹಿಡಿದು ಡಿ.ಕೆ.ಶಿವಕುಮಾರ್ ಓಟವನ್ನು ಮುಂದುವರಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಿಕೊಂಡು, ಕೇಂದ್ರ ಸರಕಾರದ ಈ.ಡಿ. ಬಾಣಗಳಿಂದ ತಪ್ಪಿಸಿಕೊಂಡು ಡಿ.ಕೆ. ಶಿವಕುಮಾರ್ ತನ್ನ ಗುರಿಯನ್ನು ತಲುಪಬೇಕಾಗಿದೆ. ಇದು ಸುಲಭದ ವಿಷಯವೇನೂ ಅಲ್ಲ.

ಮುಖ್ಯಮಂತ್ರಿ ಸ್ಥಾನದಿಂದ ಇಳಿದಾಕ್ಷಣ ಸಿದ್ದರಾಮಯ್ಯ ಹೊಣೆಗಾರಿಕೆ ಮುಗಿಯಲಿಲ್ಲ. ಅವರು ಹೋರಾಟಗಳ ಹಿನ್ನೆಲೆಯಿಂದ ಬಂದವರು. ರಾಜ್ಯದಲ್ಲಿ ಅಹಿಂದ ಚಳವಳಿಗೆ ರಾಜಕೀಯ ರೂಪ ನೀಡಲು ಶ್ರಮಿಸಿದವರು. ಡಿ. ಕೆ. ಶಿವಕುಮಾರ್ ನೇತೃತ್ವದ ಸರಕಾರಕ್ಕೆ ಕಣ್ಗಾವಲಾಗಿ ಸಿದ್ದರಾಮಯ್ಯ ಇರಬೇಕಾಗಿದೆ. ಕೋಮುವಾದ ಮತ್ತು ಜಾತಿವಾದದ ವಿರುದ್ಧದ ಹೋರಾಟಕ್ಕೆ ಈ ಅಲ್ಪವಿರಾಮವನ್ನು ಅವರು ಸಮರ್ಥವಾಗಿ ಬಳಸಿಕೊಳ್ಳಬೇಕು. ಅಧಿಕಾರದಲ್ಲಿಲ್ಲದೇ ಇದ್ದರೂ, ಕಾಂಗ್ರೆಸನ್ನು ಈ ನಾಡಿನ ಜನರು ಬೆಂಬಲಿಸುವುದಕ್ಕೆ ಸಿದ್ದರಾಮಯ್ಯ ಕುರಿತಂತೆ ಇದ್ದ ಭರವಸೆಯೂ ಒಂದು ಕಾರಣ ಎನ್ನುವುದನ್ನು ಅವರು ಮರೆಯಬಾರದು. ಈ ಸಿದ್ಧವಿರಾಮ ಯಾವತ್ತೂ ರಾಜಕೀಯವಾಗಿ ಪೂರ್ಣವಿರಾಮವಾಗಬಾರದು.

Tags

SiddarmaiahDK ShivakumarCongressGuarantee Schemes
share
ವಾರ್ತಾಭಾರತಿ
ವಾರ್ತಾಭಾರತಿ
Next Story
X