ವೈದ್ಯ ಶಿಕ್ಷಣ ‘ಸೀಟು’ ಕೇಳುವವರಿಲ್ಲದ ದುಸ್ಥಿತಿ

ಸಾಂದರ್ಭಿಕ ಚಿತ್ರ | Photo credit : AI
ದೇಶದ ಅತ್ಯಂತ ಬೇಡಿಕೆಯ ಶಿಕ್ಷಣ ಕವಲು ವೈದ್ಯಕೀಯ ಶಿಕ್ಷಣ. ಅದಕ್ಕೆ ಎಷ್ಟೊಂದು ಬೇಡಿಕೆ ಎಂದರೆ, 2026-27ನೇ ಸಾಲಿನಲ್ಲಿ ದೇಶದ 823 ವೈದ್ಯಕೀಯ ಕಾಲೇಜುಗಳಲ್ಲಿರುವ 1,36,939 ಎಂಬಿಬಿಎಸ್ ಸೀಟುಗಳಿಗೆ ಪರೀಕ್ಷೆ ಬರೆದವರು 19,99,895 ವಿದ್ಯಾರ್ಥಿಗಳು. ಅಂದರೆ ಪ್ರತೀ ಸೀಟಿಗೆ ಬಹುತೇಕ 20 ಮಂದಿ ಆಕಾಂಕ್ಷಿಗಳು! ಅವರಲ್ಲಿ ಪರೀಕ್ಷೆಯ ಮೂಲಕ ಅರ್ಹತೆ ಪಡೆದುಕೊಂಡವರು 11,21,185 ಮಂದಿ. ಅರ್ಥಾತ್ ಪ್ರತೀ ಸೀಟಿಗೆ 11 ಮಂದಿ ಅರ್ಹರು.
ಇದನ್ನು ಕರ್ನಾಟಕಕ್ಕೆ ಅನ್ವಯಿಸಿಕೊಂಡು ಅರ್ಥಮಾಡಿಕೊಳ್ಳಬೇಕೆಂದರೆ, ಇಲ್ಲಿನ ಅಂದಾಜು 74 ವೈದ್ಯಕೀಯ ಕಾಲೇಜುಗಳಲ್ಲಿ, ಈ ವರ್ಷ 15,395 ವೈದ್ಯಕೀಯ ಸೀಟುಗಳು ಲಭ್ಯವಿದ್ದು, 1,42,369 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆದು, 69,170 ವಿದ್ಯಾರ್ಥಿಗಳು ಎಂಬಿಬಿಎಸ್ಗೆ ಅರ್ಹತೆ ಪಡೆದಿದ್ದಾರೆ. ಅರ್ಥಾತ್, ಪ್ರತೀ ಸೀಟಿಗೆ 10 ಮಂದಿ ಆಸಕ್ತರು ಮತ್ತು 5 ಮಂದಿ ಅರ್ಹ ಸ್ಪರ್ಧಾಳುಗಳು.
ವಾಸ್ತವ ಹೀಗಿರುವಾಗ ಒಂದು ವಿಲಕ್ಷಣವಾದ ಬೆಳವಣಿಗೆ ನಡೆದಿರುವುದು ನಿಮ್ಮ ಗಮನಕ್ಕೆ ಬಂದಿದೆಯೇ? ನಾಲ್ಕು ವಿಸ್ತರಿತ ಸುತ್ತುಗಳ ಸೀಟು ಹಂಚಿಕೆಯ ಬಳಿಕವೂ ರಾಜ್ಯದಲ್ಲಿ 191 ವೈದ್ಯಕೀಯ ಸೀಟುಗಳು ಪಡೆದುಕೊಳ್ಳುವವರಿಲ್ಲದೇ ಖಾಲಿ ಬಿದ್ದಿವೆ! ಅದರ ಹಿಂದಿನ ಸುತ್ತಿನಲ್ಲಿ 273 ಸೀಟುಗಳು ಕೇಳುವವರಿಲ್ಲದೆ ಖಾಲಿ ಉಳಿದಿದ್ದವು. ಪ್ರತೀ ಸೀಟಿಗೆ 5 ಉಮೇದುವಾರರಿರುವಾಗ ಈ ಪ್ರಮಾಣದಲ್ಲಿ ಸೀಟುಗಳು ಖಾಲಿ ಬಿದ್ದಿರುವುದಕ್ಕೆ ಕಾರಣ ಏನು?
ಈ ಕಾರಣಗಳನ್ನು ಹುಡುಕಿಕೊಂಡು ಹೊರಟರೆ, ಇದು ನೇರವಾಗಿ ತಲುಪುವುದು ರಾಜ್ಯದ ಅತ್ಯಂತ ಬಲಿಷ್ಠ ವೈದ್ಯಕೀಯ ಶಿಕ್ಷಣ ಲಾಬಿಯತ್ತ. ಬೇಡಿಕೆ ಇದೆ ಎಂಬ ಕಾರಣಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಖಾಸಗಿ ವೈದ್ಯಕೀಯ ಕಾಲೇಜುಗಳನ್ನು ತೆರೆಯುವಲ್ಲಿ ಬಹಳ ಲಿಬರಲ್ ನೀತಿಯನ್ನು ಅನುಸರಿಸುತ್ತಿವೆ. ಹಾಗಾಗಿ, ವೈದ್ಯಕೀಯ ಕಾಲೇಜುಗಳ ಸಂಖ್ಯೆ ಹೆಚ್ಚುತ್ತಿವೆೆ ಮತ್ತು ಅವುಗಳ ಮುಗಿಲೆತ್ತರದ ಶಿಕ್ಷಣ ಶುಲ್ಕಗಳು ಆಸಕ್ತರಿಗೆ ಸೀಟುಗಳು ಕೈಗೆ ಎಟಕದಂತೆ ಮಾಡಿವೆ ಎಂಬ ವಾಸ್ತವ ಕಣ್ಣಿಗೆ ರಾಚುತ್ತದೆ. ಒಂದು ಖಾಸಗಿ ವೈದ್ಯಕೀಯ ಕಾಲೇಜು ತೆರೆಯುವುದೆಂದರೆ ಸುಮಾರು 400-500 ಕೋಟಿ ರೂ.ಗಳ ಬೃಹತ್ ಹೂಡಿಕೆ. ಒಮ್ಮೆ ಕಾಲೇಜು ತೆರೆಯಿತೆಂದರೆ ಅದು ಈಗ ಖಾಸಗಿಯವರ ಪಾಲಿಗೆ ಚಿನ್ನದ ಗಣಿ. ಬಹುತೇಕರು ತಮ್ಮ ಒಂದಿದ್ದ ವೈದ್ಯಕೀಯ ಕಾಲೇಜುಗಳ ಜಾಗದಲ್ಲಿ ದಶಕದ ಒಳಗೇ 2-3 ವೈದ್ಯಕೀಯ ಕಾಲೇಜುಗಳ ಮಾಲಕರಾಗಿದ್ದಾರೆ! ಹೀಗೆ ತೆರೆಯುತ್ತಾ ಹೋಗಿರುವ ವೈದ್ಯಕೀಯ ಕಾಲೇಜುಗಳ ದುರಾಸೆ ಯಾವ ಹಂತಕ್ಕೆ ತಲುಪಿದೆ ಎಂದರೆ, ಈ ವರ್ಷ 191 ಸೀಟುಗಳು ಖಾಲಿ ಇವೆ ಎಂದರೂ, ಅದಕ್ಕೆ ಅಷ್ಟೊಂದು ಹಣ ಪಾವತಿಸಿ, ಆ ಸೀಟುಗಳನ್ನು ಖರೀದಿಸಲು ಗಿರಾಕಿಗಳಿಲ್ಲ!
ಸರಕಾರಿ ಕಾಲೇಜುಗಳಲ್ಲಿ ವೈದ್ಯಕೀಯ ಸೀಟುಗಳಿಗೆ 65 ಸಾವಿರದಿಂದ ಒಂದು ಲಕ್ಷ ರೂ. ವಾರ್ಷಿಕ ಶುಲ್ಕವಾದರೆ, ಖಾಸಗಿ ಕಾಲೇಜುಗಳಲ್ಲಿರುವ ಸರಕಾರಿ ಸೀಟುಗಳಿಗೆ ಅದು 1.50ರಿಂದ 1.80 ಲಕ್ಷ ರೂ.ಗಳಷ್ಟು. ಖಾಸಗಿ ಕಾಲೇಜುಗಳ ಸೀಟುಗಳಿಗೆ ಈ ಮೊತ್ತವು ವಾರ್ಷಿಕ 8.5ರಿಂದ 25 ಲಕ್ಷ ರೂ.ಗಳಾದರೆ, ಮ್ಯಾನೇಜ್ಮೆಂಟ್ ಮತ್ತು ಎನ್ಆರ್ಐ ಕೋಟಾದ ಸೀಟುಗಳ ಬೆಲೆ ವಾರ್ಷಿಕ 26-45 ಲಕ್ಷ ರೂ.ಗಳು ಅರ್ಥಾತ್, ಖರೀದಿಸುವ ವೈದ್ಯಕೀಯ ಸೀಟುಗಳ ಬೆಲೆ ಎಂಬಿಬಿಎಸ್ ಮುಗಿಯುವಾಗ 1.5-2 ಕೋಟಿ ರೂ.ಗಳು. ರಾಜ್ಯದಲ್ಲಿರುವ ಸೀಟುಗಳ ಪ್ರಮಾಣವನ್ನೊಮ್ಮೆ ಗಮನಿಸಿ. ಇಲ್ಲಿ ಸರಕಾರಿ ಸೀಟುಗಳಿರುವುದು ಕೇವಲ 4,249. ಖಾಸಗಿ ಕಾಲೇಜುಗಳ ಸೀಟುಗಳ ಸಂಖ್ಯೆ ಅಂದಾಜು 9,695 ಮತ್ತು ಡೀಮ್ಡ್ ವಿವಿಗಳ ಸೀಟುಗಳ ಸಂಖ್ಯೆ ಅಂದಾಜು 2,800. ಈಗ ಕೇಳುವವರಿಲ್ಲದೇ ಖಾಲಿ ಉಳಿದಿರುವ ಸೀಟುಗಳು ವಾರ್ಷಿಕ 15ರಿಂದ 45 ಲಕ್ಷ ರೂ. ಪಾವತಿಸಬೇಕಾಗಿರುವ ಸೀಟುಗಳೇ ಆಗಿವೆ. ಅಷ್ಟೊಂದು ಹಣ ಪಾವತಿಸಲು ಸಾಧ್ಯವಿರುವವರು ರಾಜ್ಯದಲ್ಲಿ ಎಷ್ಟು ಮಂದಿ?
ಇದು ಆರ್ಥಿಕ ಲೆಕ್ಕಾಚಾರ ಆದರೆ, ಇದಕ್ಕೊಂದು ಸಾಮಾಜಿಕ ಮುಖ ಇದೆ; ಜೊತೆಗೆ ಆರೋಗ್ಯ ಕ್ಷೇತ್ರದ ಭವಿಷ್ಯದ ಕರಾಳ ಛಾಯೆಯೂ ಕಾಣಿಸಲಾರಂಭಿಸಿದೆ. ಸರಾಸರಿ 10 ವರ್ಷಗಳ ಕಾಲ ಶ್ರಮ ಹಾಕುವ ವೈದ್ಯಕೀಯ ವಿದ್ಯಾರ್ಥಿಗಳಿಗೆ, ದುಡ್ಡಿನ ಚೀಲವನ್ನೇ ಹೊತ್ತುಕೊಂಡೊಯ್ದು ಮೆಡಿಕಲ್ ಕಾಲೇಜುಗಳಿಗೆ ಸುರಿದ ಬಳಿಕ ಅವರಿಗೆ ಸಿಗುವ ಇಂಟರ್ನ್ ಶಿಪ್ ಸ್ಟೈಫಂಡ್ ಆಗಲಿ, ಬಳಿಕ ಸ್ನಾತಕೋತ್ತರ ಸ್ಟೈಫಂಡ್ ಆಗಲಿ ಅಥವಾ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಹುದ್ದೆ ಅಥವಾ ಸ್ಪೆಷಲಿಸ್ಟ್ ಹುದ್ದೆಗಳಾಗಲಿ ಕೊಡುವ ಸಂಬಳವಾಗಲಿ, ಹೆತ್ತವರು ಮಾಡುವ ಹೂಡಿಕೆಗೆ ಎಲ್ಲಿಗೂ ಸಾಕಾಗದು. ಹಾಗಾಗಿ, ಇಂದು ಮೆಡಿಕಲ್ ಶಿಕ್ಷಣ ಹಿಂದಿನಂತೆ ‘ಆಕರ್ಷಕ’ ಆಗಿ ಉಳಿದಿಲ್ಲ. ಆದರೆ, ಈ ಖಾಸಗಿ ಮೆಡಿಕಲ್ ಕಾಲೇಜುಗಳಂತೂ ಇಲ್ಲಿ ಮಾತ್ರವಲ್ಲದೆ, ಆಸ್ಪತ್ರೆಗಳಿಗೆ ಬರುವ ರೋಗಿಗಳನ್ನೂ ಸುಲಿದು ಆರೋಗ್ಯ ಸವಲತ್ತೇ ಜನರಿಗೆ ಗಗನ ಕುಸುಮವಾಗುವಂತೆ ಮಾಡಿಟ್ಟಿವೆ. ಇದಕ್ಕೆ ಯಾವುದೇ ಹಿಂಜರಿಕೆ ಅವರಲ್ಲಿಲ್ಲ. ಏಕೆಂದರೆ, ಸರಕಾರಗಳಲ್ಲಿ, ನೀತಿ ನಿರೂಪಣೆಯ ಮೇಲೆ ಪ್ರಭಾವ ಬೀರುವ ಬಲಿಷ್ಠ ಲಾಬಿ ಅವರದೇ.
ಇದರ ನೇರ ಪ್ರಭಾವ ರಾಜ್ಯದ ಆರೋಗ್ಯ ವ್ಯವಸ್ಥೆಯ ಮೇಲೆ ಆಗತೊಡಗಿದೆ. ಬನ್ನಿ ಎಂದು ಕರೆದರೂ, ರಾಜ್ಯದ ಸರಕಾರಿ ವ್ಯವಸ್ಥೆಗಳಲ್ಲಿ ಕೆಲಸ ಮಾಡಲು ವೈದ್ಯಕೀಯ ಪದವೀಧರರು ಸಿದ್ಧರಿಲ್ಲ; ವೈದ್ಯಕೀಯ ಸೇವೆಯಲ್ಲಿ ಪ್ರಾಮಾಣಿಕ ಆಸಕ್ತಿ ಇರುವ ಬಡ ವಿದ್ಯಾರ್ಥಿಗಳಿಗೆ ಸೀಟುಗಳು ಕೈಗೆಟಕುತ್ತಿಲ್ಲ; ಹೆತ್ತವರ ದುಡ್ಡು ಮತ್ತು ಪ್ರತಿಷ್ಠೆಯ ಕಾರಣಕ್ಕೆ ದುಡ್ಡಿನ ಚೀಲ ನೀಡಿ ಸೀಟು ಖರೀದಿಸಿರುವ ವಿದ್ಯಾರ್ಥಿಗಳಲ್ಲಿ ದೊಡ್ಡ ಪ್ರಮಾಣದ ಮಂದಿಗೆ ವೈದ್ಯಕೀಯ ವೃತ್ತಿಗೆ ಬೇಕಾದ ಬದ್ಧತೆಯಾಗಲಿ, ಸೇವಾ ಮನೋಭಾವವಾಗಲಿ ಇಲ್ಲ. ಹಾಗಾಗಿ, ಕ್ರಮೇಣ ವೈದ್ಯಕೀಯ ವೃತ್ತಿಯ ಕೌಶಲ, ಕಸುಬುದಾರಿಕೆ ಮುಕ್ಕಾಗತೊಡಗಿದೆ. ಸರಕಾರಗಳ ದುಡ್ಡಿದ್ದವರ ಪರ ನೀತಿಯಿಂದಾಗಿ ಇನ್ನೊಂದು ದಶಕದಲ್ಲಿ ರಾಜ್ಯದ ಆರೋಗ್ಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋದರೂ ಅಚ್ಚರಿ ಇಲ್ಲ.






