ಮೈಕ್ರೋಫೈನಾನ್ಸ್ ಸಾಲ, ಆತ್ಮಹತ್ಯೆ: ‘ಪರಿಹಾರ’ ಸಮಸ್ಯೆ ಪರಿಹರಿಸುವುದೆ?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಮೈಕ್ರೋ ಫೈನಾನ್ಸಿಯರ್‌ಗಳ ಕಾಟದಿಂದ ಮೃತಪಟ್ಟ ಅಥವಾ ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ಮೇಲ್ನೋಟಕ್ಕೆ ಈ ಕೊಡುಗೆ ಸಂತ್ರಸ್ತ ಕುಟುಂಬಗಳಿಗೆ ಸರಕಾರ ನೀಡುವ ಸಾಂತ್ವನದಂತೆ ಕಂಡರೂ, ಪರೋಕ್ಷವಾಗಿ ಇದು ಸಮಸ್ಯೆಯನ್ನು ಪರಿಹರಿಸದೆ ಇನ್ನಷ್ಟು ಬಿಗಡಾಯಿಸಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಈಗಾಗಲೇ ಸಾಲ ತೀರಿಸಲಾಗದೆ ಆತ್ಮಹತ್ಯೆಗೈಯುತ್ತಿರುವ ರೈತರಿಗೆ ಸರಕಾರ ಪರಿಹಾರವನ್ನು ನೀಡುತ್ತಾ ಬರುತ್ತಿದೆ. ಈ ಸಂದರ್ಭದಲ್ಲಿ ಬೆಳೆ ನಷ್ಟದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಅನುಮಾನಗಳಿರುವ ಪ್ರಕರಣಗಳಲ್ಲಿ ಪರಿಹಾರವನ್ನು ತಡೆಹಿಡಿದ ಉದಾಹರಣೆಗಳೂ ಇವೆ. ರೈತ ವೈಯಕ್ತಿಕ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೋ ಅಥವಾ ಬೆಳೆ ನಷ್ಟ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೋ ಎನ್ನುವುದನ್ನು ಸಾಬೀತು ಮಾಡಿದ ಬಳಿಕ ಪರಿಹಾರ ವಿತರಿಸಲಾಗುತ್ತದೆ. ಕೆಲವೊಮ್ಮೆ ರೈತ ಕುಡಿತದ ಚಟದಿಂದ ಅಥವಾ ಇನ್ನಿತರ ಕಾರಣಗಳಿಂದ ಆರ್ಥಿಕ, ಮಾನಸಿಕ ಸಮಸ್ಯೆಗಳನ್ನು ಎದುರಿಸಿ ಆತ್ಮಹತ್ಯೆ ಮಾಡುವುದಿದೆ. ಆಗ ಪರಿಹಾರವನ್ನು ತಡೆ ಹಿಡಿಯಲಾಗುತ್ತದೆ. ಈ ಪರಿಹಾರವನ್ನು ನೀಡುವುದಕ್ಕೆ ಕೃಷಿಯ ಮೇಲಿನ ಕಾಳಜಿಯೇ ಮುಖ್ಯ ಕಾರಣ. ಇಂದಿನ ಸಂದರ್ಭದಲ್ಲಿ ಕೃಷಿ ಎದುರಿಸುವ ಸವಾಲುಗಳಿಗೆ ರೈತ ಬಲಿಪಶುವಾಗಬಾರದು ಎನ್ನುವ ಕಾರಣದಿಂದ ರೈತನ ಸಂಕಟಗಳಿಗೆ ಸರಕಾರ ಸ್ಪಂದಿಸಲು ಮುಂದಾಗುತ್ತದೆ. ಆದರೆ ಮೈಕ್ರೋ ಫೈನಾನ್ಶಿಯರ್‌ಗಳ ಕಾಟದಿಂದ ಆತ್ಮಹತ್ಯೆ ಪ್ರಕರಣ ಭಿನ್ನವಾದುದು.
ಮೈಕ್ರೋ ಫೈನಾನ್ಸ್‌ಗಳು ಸಾಲಕೊಟ್ಟು ಅದರ ಮೇಲೆ ಅತಿ ಬಡ್ಡಿ, ಚಕ್ರಬಡ್ಡಿಗಳನ್ನು ವಿಧಿಸುತ್ತಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇವೆೆ.ಇಂತಹ ಫೈನಾನ್ಸ್‌ಗಳ ನಿಯಂತ್ರಣ ಬಹುತೇಕ ಅಪರಾಧ ಹಿನ್ನೆಲೆಯಿರುವ ಜನರ ಕೈಯಲ್ಲಿರುತ್ತವೆ. ಸಾಲ ವಸೂಲಿಗಾಗಿಯೇ ಇವರು ರೌಡಿಗಳನ್ನು, ಕ್ರಿಮಿನಲ್ ಹಿನ್ನೆಲೆಯಿರುವವರನ್ನು ಸಾಕುತ್ತಿರುತ್ತಾರೆ. ರೈತರೇನಾದರೂ ಇಂತಹ ಮೈಕ್ರೋಫೈನಾನ್ಸ್ ಬಲೆಗೆ ಬಿದ್ದರೆ ಅದರಿಂದ ಬಿಡುಗಡೆ ಕಷ್ಟ. ಜೀವ ಬೆದರಿಕೆ, ಮಾನ ಹಾನಿ ಇತ್ಯಾದಿಗಳಿಗೆ ಅಂಜಿ ಆತ್ಮಹತ್ಯೆಯನ್ನೇ ಅಂತಿಮ ಆಯ್ಕೆಯಾಗಿಸಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಮೈಕ್ರೋಫೈನಾನ್ಸ್ ಕಿರುಕುಳದ ಬಗ್ಗೆ ತೀವ್ರ ಆಕ್ರೋಶ ಕೇಳಿ ಬಂದ ಹಿನ್ನೆಲೆಯಲ್ಲಿ, ಇದರ ವಿರುದ್ಧ ರಾಜ್ಯ ಸರಕಾರವು ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ ಅಧ್ಯಾದೇಶವನ್ನು ಹೊರಡಿಸಿತು. ಈ ಸುಗ್ರೀವಾಜ್ಞೆಯು ರಿಸರ್ವ್ ಬ್ಯಾಂಕ್ ನೋಂದಾಯಿತವಲ್ಲದ ಮೈಕ್ರೋಫೈನಾನ್ಸ್ ಸಂಸ್ಥೆಗಳಿಂದ ಜನಸಾಮಾನ್ಯರಿಗೆ ಮುಕ್ತಿ ಕೊಡುವ ಉದ್ದೇಶವನ್ನು ಹೊಂದಿದೆ. ಬಲವಂತದ ವಸೂಲಾತಿ ಕಿರುಕುಳದಿಂದ ಇದು ಜನರನ್ನು ರಕ್ಷಿಸುತ್ತದೆ. ಆರೋಪಿಗಳ ಅಪರಾಧ ಸಾಬೀತಾದರೆ 10 ವರ್ಷ ಜೈಲು, 5 ಲಕ್ಷ ರೂಪಾಯಿಯವರೆಗೆ ದಂಡವನ್ನು ವಿಧಿಸುವ ಅವಕಾಶವಿದೆ. ಸುಗ್ರೀವಾಜ್ಞೆಯ ನಿಯಮಗಳೆಲ್ಲವೂ ರಿಸರ್ವ್ ಬ್ಯಾಂಕ್ ಜೊತೆಗೆ ನೋಂದಾಯಿತವಲ್ಲದ ಮೈಕ್ರೋಫೈನಾನ್ಸ್‌ಗೆ ಮಾತ್ರ ಅನ್ವಯವಾಗುವುದರಿಂದ, ನೋಂದಾಯಿತ ಫೈನಾನ್ಸ್‌ಗಳಿಗೆ ಕಡಿವಾಣ ಹಾಕುವವರು ಯಾರು ಎನ್ನುವ ಪ್ರಶ್ನೆಯೂ ಏಳುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಸುಗ್ರೀವಾಜ್ಞೆ ಜಾರಿಗೊಂಡ ಬಳಿಕವೂ ಅಲ್ಲಲ್ಲಿ ಮೈಕ್ರೋಫೈನಾನ್ಸ್‌ನ ಸಾಲಗಳನ್ನು ಕಟ್ಟಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸರಕಾರ ನೀಡುವ ಪರಿಹಾರ ಆತ್ಮಹತ್ಯೆಯನ್ನು ತಡೆಯಲು ಯಾವ ರೀತಿಯಲ್ಲಿ ಸಹಕಾರ ನೀಡಬಹುದು ಎನ್ನುವುದು ಚರ್ಚೆಯ ವಿಷಯವಾಗಬೇಕು.
ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ನೋಂದಾಯಿತ ಮೈಕ್ರೋಫೈನಾನ್ಸ್ ಸಂಸ್ಥೆಗಳಿಂದ ಅಂದಾಜು 60 ಸಾವಿರ ಕೋಟಿ ರೂಪಾಯಿ ಸುಮಾರು 1.09 ಕೋಟಿ ಸಾಲಗಾರರು ಪಡೆದಿದ್ದಾರೆ ಎನ್ನಲಾಗುತ್ತದೆ. ಇದೇ ಸಂದರ್ಭದಲ್ಲಿ ನೋಂದಣಿಯಾಗದ ಸಂಸ್ಥೆಗಳಿಂದ ಸಾಲ ಪಡೆದವರ ಮಾಹಿತಿ, ವಿವರ ಸ್ಪಷ್ಟವಾಗಿ ಇಲ್ಲವಾದರೂ, 40,000 ಕೋಟಿ ರೂಪಾಯಿ ಸಾಲಗಳನ್ನು ಪಡೆದಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಇಲ್ಲಿ ಮೈಕ್ರೋ ಫೈನಾನ್ಸ್ ಅತ್ಯಧಿಕ ಬಡ್ಡಿಯನ್ನು ವಿಧಿಸುತ್ತದೆ ಎನ್ನುವುದು ಗೊತ್ತಿದ್ದೂ ಜನರು ಯಾಕೆ ಇಲ್ಲಿಂದ ಸಾಲ ಪಡೆಯುತ್ತಾರೆ? ಯಾಕೆ ಅವರ ಬಲೆಗೆ ಬೀಳುತ್ತಾರೆ? ಎನ್ನುವುದು ಬಹುಮುಖ್ಯ ಪ್ರಶ್ನೆ. ಕೃಷಿಕರು ಸಹಕಾರಿ ಸಂಘ ಮತ್ತು ಇನ್ನಿತರ ಸಣ್ಣ ಪುಟ್ಟ ಬ್ಯಾಂಕ್‌ಗಳಲ್ಲಿ ಸುಲಭದಲ್ಲಿ ಸಾಲ ಸಿಗುವುದಾದರೆ ಖಂಡಿತವಾಗಿಯೂ ಫೈನಾನ್ಸ್ ಬಾಗಿಲನ್ನು ತಟ್ಟುವುದಿಲ್ಲ. ಬ್ಯಾಂಕ್‌ಗಳಲ್ಲಿ ಸಾಲ ಪಡೆಯಬೇಕಾದರೆ ಹತ್ತು ಹಲವು ನಿಯಮಗಳು, ನಿಬಂಧನೆಗಳನ್ನು ದಾಟಿ ಹೋಗಬೇಕು. ಅದಕ್ಕೆ ಬೇಕಾದ ದಾಖಲೆಗಳನ್ನು ಒದಗಿಸಿ ಅವರಿಂದ ಹಣ ಪಡೆಯುವಷ್ಟರಲ್ಲಿ ಬಿತ್ತನೆಯ ಸಮಯ ಕಳೆದು ಹೋಗಿರುತ್ತದೆ. ಈ ನಿಟ್ಟಿನಲ್ಲಿ ಕೇಳಿದಾಕ್ಷಣ ಸಿಗುತ್ತದೆ ಎನ್ನುವ ಕಾರಣಕ್ಕೆ ಫೈನಾನ್ಸ್‌ನ ಮೊರೆ ಹೋಗುತ್ತಾರೆ. ಇದೇ ಸಂದರ್ಭದಲ್ಲಿ ಸಣ್ಣ ಪುಟ್ಟ ವ್ಯಾಪಾರಿಗಳೂ ತಕ್ಷಣದ ಅಗತ್ಯಕ್ಕಾಗಿ ಫೈನಾನ್ಸ್ ಮೊರೆ ಹೋಗುತ್ತಾರೆ. ಸಾಧಾರಣವಾಗಿ ನಾಲ್ಕೈದು ತಿಂಗಳಲ್ಲಿ ಕಟ್ಟುವ ಉದ್ದೇಶವಿದ್ದು ಫೈನಾನ್ಸ್
ನಿಂದ ಸಾಲ ಪಡೆದರೆ ಸಮಸ್ಯೆಯಾಗುವುದಿಲ್ಲ. ಆದರೆ ಸಾಲದ ಕಂತು ಉದ್ದವಾದಷ್ಟೂ ಸಾಲ ಪಡೆದಾತ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾನೆ. ನಷ್ಟವಾಗಿ ಕಟ್ಟುವುದು ಸಾಧ್ಯವೇ ಇಲ್ಲ ಎಂದಾದರೆ, ಬಡ್ಡಿಯ ಮೇಲೆ ಬಡ್ಡಿ ಬಿದ್ದು ಅದರಿಂದ ಹೊರಬರುವುದು ಕಷ್ಟವಾಗಿ ಬಿಡುತ್ತದೆ. ಅಂತಿಮವಾಗಿ ಫೈನಾನ್ಸ್ ಕಿರುಕುಳ ತಾಳಲಾರದೆ ಮನೆ, ಮಠಗಳನ್ನು ಮಾರಬೇಕಾಗುತ್ತದೆ ಅಥವಾ ಕೊನೆಗೆ ಸಾಲಗಾರ ಆತ್ಮಹತ್ಯೆಗೆ ಶರಣಾಗುತ್ತಾನೆ.
ಫೈನಾನ್ಸಿಯರ್‌ಗಳ ಕಾಟದಿಂದ ಆತ್ಮಹತ್ಯೆ ಮಾಡಿಕೊಂಡವರಿಗೆ ಪರಿಹಾರ ನೀಡುವುದು ಕೆಲವೊಮ್ಮೆ ತಪ್ಪು ಸಂದೇಶವನ್ನು ನೀಡಬಹುದು. ಕಾಟವನ್ನು ಎದುರಿಸುತ್ತಿರುವವರಿಗೆ, ಸರಕಾರವೇ ಆತ್ಮಹತ್ಯೆಯ ದಾರಿಯೊಂದನ್ನು ತೆರೆದುಕೊಟ್ಟಂತಾಗಬಹುದು. ಆತ್ಮಹತ್ಯೆಗೆ ಕಾರಣರಾದವರನ್ನು ಶಿಕ್ಷಿಸುವುದು ಸರಿ. ಇದೇ ಸಂದರ್ಭದಲ್ಲಿ ಸಾಲ ಪಡೆದವರು ಯಾವ ಕಾರಣಕ್ಕೆ ಸಾಲ ಪಡೆದಿದ್ದಾರೆ, ಅದನ್ನು ಕಟ್ಟಲು ಅವರಿಗೆ ಯಾಕೆ ಕಷ್ಟವಾಯಿತು ಎನ್ನುವುದನ್ನು ಪರಿಶೀಲನೆ ಮಾಡುವುದು ಅತ್ಯಗತ್ಯ. ಕೃಷಿ ಅಥವಾ ಸಣ್ಣ ಉದ್ದಿಮೆಯ ಕಾರಣಕ್ಕಾಗಿ ಸಾಲ ಪಡೆದು ನಷ್ಟಕ್ಕೀಡಾಗಿ ಆತ್ಮಹತ್ಯೆ ಮಾಡಿಕೊಂಡವರಿಗೆ ಪರಿಹಾರವನ್ನು ನೀಡುವುದು ಅತ್ಯಗತ್ಯ. ಅನೇಕ ಸಂದರ್ಭದಲ್ಲಿ ಇನ್ನಿತರ ಕಾರಣಗಳಿಗೆ ಸಾಲ ಪಡೆದು, ಅದನ್ನು ಜೂಜು, ಮದ್ಯ ಸೇವನೆ ಇತ್ಯಾದಿಗಳಿಗೆ ದುರ್ಬಳಕೆ ಮಾಡಿ ಅಂತಿಮವಾಗಿ ಸಾಲದಸುಳಿಯಿಂದ ಹೊರ ಬರಲಾರದೆ ಆತ್ಮಹತ್ಯೆ ಮಾಡಿಕೊಳ್ಳುವವರಿದ್ದಾರೆ. ಹಾಗೆಯೇ, ಸರಕಾರ ನೀಡಿದ ಆತ್ಮಹತ್ಯೆ ಪರಿಹಾರ ಧನದಿಂದಲೇ ಕುಟುಂಬ ಫೈನಾನ್ಸ್‌ನ ಸಾಲ ತೀರಿಸುವ ಸ್ಥಿತಿ ನಿರ್ಮಾಣವಾಗಬಹುದು. ಆದುದರಿಂದ ಸಾಲ ಕೊಟ್ಟವರೇ ಆತ್ಮಹತ್ಯೆಗೆ ಕುಮ್ಮಕ್ಕು ನೀಡುವ ಸಾಧ್ಯತೆಗಳಿರುತ್ತವೆ. ಸರಕಾರದ ಘೋಷಣೆ ಕೆಲವೊಮ್ಮೆ ಆತ್ಮಹತ್ಯೆ ಪ್ರಕರಣಗಳನ್ನು ಹೆಚ್ಚಿಸಬಹುದು. ಆತ್ಮಹತ್ಯೆಗೆ ಕಾರಣರಾದವರ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಹಾಗೂ ಸಾಧ್ಯವಾದಷ್ಟು ಫೈನಾನ್ಸ್‌ಗಳಿಂದ ಸಾಲ ಪಡೆಯದಂತೆ ಜನರಿಗೆ ಪ್ರೇರಣೆ ನೀಡುವುದು ಸರಕಾರದ ಜವಾಬ್ದಾರಿ. ಸಹಕಾರಿ ಸಂಘಗಳು, ಕಿರು ಬ್ಯಾಂಕುಗಳು ರೈತರಿಗೆ, ಸಣ್ಣ ಉದ್ದಿಮೆದಾರರಿಗೆ ಸುಲಭದಲ್ಲಿ ಸಾಲ ನೀಡುವಂತಾದಾಗ, ಜನರು ಫೈನಾನ್ಸ್‌ನ
ಬಾಗಿಲು ತಟ್ಟುವುದನ್ನು ನಿಲ್ಲಿಸತೊಡಗುತ್ತಾರೆ. ಆತ್ಮಹತ್ಯೆ ಮಾಡಿಕೊಂಡವರಿಗೆ ಪರಿಹಾರ ನೀಡುವ ಬದಲು, ಜನರು ಆತ್ಮಹತ್ಯೆ ಮಾಡಿಕೊಳ್ಳದೇ ಇರಲು ಬೇಕಾದ ಕ್ರಮವನ್ನು ತೆಗೆದುಕೊಳ್ಳುವುದು ಅತ್ಯುತ್ತಮವಾಗಿದೆ.







