ಮುಂಬೈ ರೈಲು ಸ್ಫೋಟ: ಹಳಿ ತಪ್ಪಿದ ತನಿಖೆಗೆ ಬಲಿಯಾದವರು

PC :PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಈ ದೇಶದಲ್ಲಿ ಎಲ್ಲಿ, ಯಾರೇ ಸ್ಫೋಟಗಳನ್ನು ನಡೆಸಲಿ, ಕೃತ್ಯದ ಬೆನ್ನಿಗೇ ಆರೋಪಿಗಳನ್ನು, ಅವರ ಹಿಂದಿರುವ ಸಂಘಟನೆಗಳನ್ನು ಪೊಲೀಸ್ ಇಲಾಖೆ ಘೋಷಿಸಿ ಬಿಡುತ್ತದೆ. ಸ್ಪೋಟ ನಡೆಸಿದ ಕೆಲವೇ ಗಂಟೆಗಳಲ್ಲಿ ಮಾಧ್ಯಮಗಳು ಅದರ ಹಿಂದಿರುವ ಸಂಚುಗಳ ಬಗ್ಗೆ ಕುಳಿತಲ್ಲೇ ಕಥೆಗಳ ಮೇಲೆ ಕಥೆಗಳನ್ನು ಹೆಣೆಯುತ್ತವೆ. 2006ರಂದು ಮುಂಬೈನ ಲೋಕಲ್ ಟೈನ್ ಸ್ಫೋಟದಲ್ಲೂ ಇದೇ ನಡೆಯಿತು. 180ಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡ ಈ ಸ್ಪೋಟಕ್ಕೆ ಸಂಬಂಧಿಸಿ ಮಾಧ್ಯಮಗಳು ಪುಂಖಾನುಪುಂಖವಾಗಿ ಕಥೆಗಳನ್ನು ಹೆಣೆದವು. ಆ ಕಥೆಗಳನ್ನು ಆಧರಿಸಿಕೊಂಡು ಬಳಿಕ ತನಿಖೆ ನಡೆಯಿತು. ಪರಿಣಾಮವಾಗಿ ಕೃತ್ಯಕ್ಕೆ ಸಂಬಂಧಿಸಿ 12 ಜನರನ್ನು ಪ್ರಮುಖ ಆರೋಪಿಗಳಾಗಿ ತನಿಖೆ ಗುರುತಿಸಿತು. 2015ರಲ್ಲಿ ಐವರಿಗೆ ಮರಣದಂಡನೆ ಮತ್ತು ಏಳು ಜನರಿಗೆ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ಘೋಷಿಸಿತು. ಆದರೆ ಇದೀಗ ಸುಮಾರು 19 ವರ್ಷಗಳ ಬಳಿಕ ಮುಂಬೈ ಹೈಕೋರ್ಟ್ ಎಲ್ಲ ಆರೋಪಿಗಳನ್ನು ನಿರಪರಾಧಿಗಳೆಂದು ಬಿಡುಗಡೆ ಮಾಡಿದೆ. ಆರೋಪಿಗಳು ಸ್ಪೋಟದಲ್ಲಿ ಭಾಗವಹಿಸಿದ್ದಾರೆ ಎನ್ನುವುದಕ್ಕೆ ಯಾವ ಸಾಕ್ಷ್ಯವೂ ಇಲ್ಲ ಎನ್ನುವುದನ್ನು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ. ಹೈಕೋರ್ಟ್ ಆರೋಪಿಗಳನ್ನೇನೋ ಬಿಡುಗಡೆ ಮಾಡಲು ಆದೇಶ ನೀಡಿದೆ. ಆದರೆ ಈ 19 ವರ್ಷಗಳಲ್ಲಿ ಅವರು ತಾವು ಮಾಡದ ತಪ್ಪಿಗಾಗಿ ಅತ್ಯಂತ ಕಠಿಣ ಶಿಕ್ಷೆಯನ್ನು ಅನುಭವಿಸಿಯಾಗಿದೆ. ದೈಹಿಕವಾಗಿ ಅವರಿಗೆ ಅಧಿಕಾರಿಗಳು ಬರ್ಬರ ಚಿತ್ರ ಹಿಂಸೆಗಳನ್ನು ನೀಡಿರುವ ಬಗ್ಗೆ ನ್ಯಾಯಾಲಯವೇ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ, ಮಾನಸಿಕವಾಗಿ ಅವರು ಅನುಭವಿಸಿರುವ ಸಂಕಟಗಳಿಗೆ ಪದಗಳೇ ಇಲ್ಲ. ಶಿಕ್ಷೆಯನ್ನು ಅನುಭವಿಸಿರುವುದು ಈ ಆರೋಪಿಗಳಷ್ಟೇ ಅಲ್ಲ, ಇವರ ಕುಟುಂಬವೂ ಸಾಕಷ್ಟು ನೋವುಗಳನ್ನು ತಿಂದಿದೆ. ಭಯೋತ್ಪಾದಕರ ಸಂಬಂಧಿಕರೆಂಬ ಹಣೆಪಟ್ಟಿಯನ್ನು ಅಂಟಿಸಿಕೊಂಡು ಕಳೆದ 19 ವರ್ಷಗಳಿಂದ ಸಮಾಜದ ಪಾಲಿಗೆ ಆಸ್ಪೃಶ್ಯರಾಗಿ ಬದುಕುತ್ತಿದ್ದಾರೆ. ಬಿಡುಗಡೆಗೊಂಡ ಬಳಿಕವೂ ಈ ಹಣೆಪಟ್ಟಿಯನ್ನು ಅಳಿಸಿ ಹಾಕುವುದು ಅಷ್ಟು ಸುಲಭವಿಲ್ಲ.
ಈ ತನಿಖೆ ಅನ್ಯಾಯ ಮಾಡಿರುವುದು ಕೇವಲ ಈ 12 ಆರೋಪಿಗಳು ಮತ್ತು ಅವರ ಕುಟುಂಬಗಳಿಗಷ್ಟೇ ಅಲ್ಲ. ಸ್ಪೋಟದಲ್ಲಿ ಮೃತಪಟ್ಟ, ನೊಂದ ಅಷ್ಟೂ ಕುಟುಂಬಗಳಿಗೂ ಅನ್ಯಾಯವೆಸಗಿದೆ. ಸ್ಫೋಟ ನಡೆಸಿದ ಪಾತಕಿಗಳು ಸ್ವಚ್ಛಂದವಾಗಿ ಓಡಾಡುತ್ತಿದ್ದಾರೆ. ಇಂತಹ ಪೂರ್ವಾಗ್ರಹ ಪೀಡಿತ ತನಿಖೆ ಈ ಹಿಂದೆ ಮಕ್ಕಾ ಮಸೀದಿ ಸ್ಪೋಟ, ಸಂತಾ ಎಕ್ಸ್ ಪ್ರೆಸ್ ಸ್ಪೋಟ, ಮಾಲೆಗಾಂವ್ ಸ್ಫೋಟದಲ್ಲೂ ನಡೆದಿತ್ತು. ಈ ಸ್ಪೋಟಗಳು ನಡೆದಾಗ ಆರಂಭದಲ್ಲಿ ಅಮಾಯಕ ಮುಸ್ಲಿಮರನ್ನೇ ಬಂಧಿಸಲಾಯಿತು. ಈ ಸ್ಪೋಟಗಳ ಹಿಂದೆ ಯಾವೆಲ್ಲ ಉಗ್ರವಾದಿ ಸಂಘಟನೆಗಳ ಕೈವಾಡವಿದೆ, ಅವರೆಲ್ಲ ಪಾಕಿಸ್ತಾನದಲ್ಲಿ ಎಲ್ಲಿ, ಯಾವಾಗ ತರಬೇತಿ ಪಡೆದರು ಎನ್ನುವ ಕಥೆಗಳನ್ನು ಕಟ್ಟಿ ಮಾಧ್ಯಮಗಳು ಊಳಿಟ್ಟವು. ಆದರೆ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ತಂಡ ತನ್ನ ತನಿಖೆಯನ್ನು ಆಳಕ್ಕಿಳಿಸಿದಂತೆಯೇ ಭಯೋತ್ಪಾದಕರ 'ಬಣ್ಣ' ಬದಲಾಯಿತು. ಪುರೋಹಿತ್, ಅಸೀಮಾನಂದ, ಪ್ರಜ್ಞಾ ಸಿಂಗ್ ಠಾಕೂರ್ ಮೊದಲಾದ ಹೆಸರುಗಳು ಕೇಳಿ ಬರತೊಡಗಿದವು. ಈ ತಂಡ ಭಯೋತ್ಪಾದಕರ ಬೇರುಗಳನ್ನು ಅರಸುತ್ತಾ ಕೆಲವು ಕೇಸರಿ ಸಂಘಟನೆಗಳವರೆಗೂ ತಲುಪಿತು. ಆದರೆ ಅಷ್ಟರಲ್ಲೇ ಈ ತಂಡದ ನೇತೃತ್ವವಹಿಸಿದ್ದ ಅಷ್ಟೂ ಅಧಿಕಾರಿಗಳು ಮುಂಬಯಿ ದಾಳಿಯಲ್ಲಿ ನಿಗೂಢವಾಗಿ ಮೃತಪಟ್ಟರು. ಇದೀಗ ಮುಂಬೈ ರೈಲು ಸ್ಪೋಟದಲ್ಲಿ ಪೊಲೀಸರು ಬಂಧಿಸಿದ ಅಷ್ಟೂ ಜನರನ್ನು ನಿರಪರಾಧಿಗಳು ಎಂದು ನ್ಯಾಯಾಲಯ ಘೋಷಿಸಿದ ಬಳಿಕ, ಹಾಗಾದರೆ ರೈಲು ಸ್ಪೋಟ ನಡೆಸಿದ ನಿಜವಾದ ಭಯೋತ್ಪಾದಕರು ಯಾರು? ತನಿಖೆಯನ್ನು ಉದ್ದೇಶಪೂರ್ವಕವಾಗಿ ದಾರಿ ತಪ್ಪಿಸಲಾಯಿತೆ? ಎಂಬ ಪ್ರಶ್ನೆಗಳು ಎದ್ದಿವೆ.
ಕಳೆದ ಮೂರು ದಶಕಗಳಿಂದ ಭಯೋತ್ಪಾದನೆಗಳನ್ನು ಮುಂದಿಟ್ಟುಕೊಂಡು ಕೆಲವು ರಾಜಕೀಯ ಪಕ್ಷಗಳು ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆಲ್ಲುತ್ತಾ ಬರುತ್ತಿವೆ. ಮೊದಲು ಸ್ಪೋಟಗಳು ಸಂಭವಿಸುತ್ತವೆ. ಇಲ್ಲಿ ನೂರಾರು ಅಮಾಯಕರು ಬಲಿಯಾಗುತ್ತಾರೆ. ಇದಾದ ಬಳಿಕ ಭಯೋತ್ಪಾದನೆಗಾಗಿ ಒಂದು ಧರ್ಮವನ್ನು ಹೊಣೆ ಮಾಡುತ್ತಾ ಇನ್ನೊಂದು ಧರ್ಮದ ವಿರುದ್ಧ ಎತ್ತಿಕಟ್ಟಲು ಶುರು ಹಚ್ಚುತ್ತಾರೆ. ತನಿಖೆ ನಡೆಯುವ ಮೊದಲೇ ಆರೋಪಿಗಳನ್ನು ಗುರುತಿಸಿ ಬಂಧಿಸುವ ಕೆಲಸಗಳು ನಡೆಯುತ್ತವೆ. ಪೊಲೀಸರ ತನಿಖೆ ಆರಂಭವಾಗುವ ಮೊದಲೇ ಮಾಧ್ಯಮಗಳು ಆರೋಪಿಗಳನ್ನು ವಿಚಾರಣೆ ನಡೆಸಿ, ಅವರನ್ನು ಗಲ್ಲಿಗೇರಿಸಿಯೇ ಬಿಡುತ್ತವೆ. ಇಲ್ಲಿ ಇಂತಹ ತನಿಖೆಗಳನ್ನು ನಡೆಸುವುದರ ಹಿಂದೆ ರಾಜಕೀಯ ದುರುದ್ದೇಶಗಳೂ ಇರುತ್ತವೆ. ಆರೋಪವನ್ನು ಒಂದು ಸಮುದಾಯದ ತಲೆಗೆ ಕಟ್ಟುವುದು ಮೊದಲ ಉದ್ದೇಶವಾದರೆ, ನಿಜವಾದ ಆರೋಪಿಗಳನ್ನು ರಕ್ಷಿಸುವುದು ಎರಡನೇ ಉದ್ದೇಶ.
ದೇಶದಲ್ಲಿ ನಡೆದ ಹೆಚ್ಚಿನ ಭಯೋತ್ಪಾದನಾ ಕೃತ್ಯಕ್ಕೆ ಸಂಬಂಧಿಸಿದ ತನಿಖೆಗಳಲ್ಲಿ ಇದುವೇ ನಡೆದಿದೆ. ಅಮಾಯಕರು ಆರೋಪಿಗಳಾಗಿ ಕಟಕಟೆಯಲ್ಲಿ ನಿಂತರೆ, ನಿಜವಾದ ಆರೋಪಿಗಳು 'ದೇಶಭಕ್ತ'ರ ವೇಶದಲ್ಲಿ ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಭಯೋತ್ಪಾದಕರ ಕುರಿತಂತೆ ಸರಕಾರ ಮತ್ತು ತನಿಖಾ ಸಂಸ್ಥೆಗಳ ಈ ದ್ವಂದ್ವ ನಿಲುವುಗಳೇ ಭಾರತದಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ಪೋಷಿಸುತ್ತಾ ಬಂದಿವೆ. ಒಂದೆಡೆ ಈ ದೇಶದ ಒಂದು ನಿರ್ದಿಷ್ಟ ಸಮುದಾಯವನ್ನು ಭಯೋತ್ಪಾದನೆಯ ಹೆಸರಿನಲ್ಲಿ ಮಾನಸಿಕವಾಗಿ, ದೈಹಿಕವಾಗಿ ಹಿಂಸಿಸಿ ಅವರಿಗೆ ಭಾರತದ ನ್ಯಾಯ ವ್ಯವಸ್ಥೆಯ ಮೇಲೆ ಭ್ರಮನಿರಸನವನ್ನು ಉಂಟು ಮಾಡಲು ಹವಣಿಸಲಾಗುತ್ತದೆ. ಮಗದೊಂದೆಡೆ, ಶಂಕಿತ ಉಗ್ರಗಾಮಿಗಳಿಗೆ ಪಕ್ಷದಿಂದ ಚುನಾವಣಾ ಟಿಕೆಟ್ ನೀಡಿ ಗೆಲ್ಲಿಸಿ ಸಂಸತ್ ಪ್ರವೇಶಿಸುವಂತೆ ಮಾಡುತ್ತದೆ. ಮಾಲೆಗಾಂವ್ ಸ್ಫೋಟ ಆರೋಪಿ ಪ್ರಜ್ಞಾಸಿಂಗ್ ಭಯೋತ್ಪಾದನಾ ಕೃತ್ಯದ ಆರೋಪ
ಎದುರಿಸುತ್ತಿರುವಾಗಲೇ, ಬಿಜೆಪಿ ಆಕೆಗೆ ಟಿಕೆಟ್ ನೀಡಿತು. ಇದೀಗ ತನಿಖಾ ತಂಡ, ಅದೇ ಪ್ರಜ್ಞಾಸಿಂಗ್ಗೆ ಸ್ಪೋಟ ಕೃತ್ಯಕ್ಕೆ ಸಂಬಂಧಿಸಿ ಗರಿಷ್ಠ ಶಿಕ್ಷೆಯನ್ನು ನೀಡಬೇಕು ಎಂದು ನ್ಯಾಯಾಲಯವನ್ನು ಕೇಳಿಕೊಂಡಿದೆ. ನಮ್ಮ ಸರಕಾರ, ಒಂದೆಡೆ ನಾಥರಾಂ ಗೋಡೆಯನ್ನು ವೈಭವೀಕರಿಸುವವರ ಜೊತೆಗೆ ಕೈ ಜೋಡಿಸುತ್ತಾ ಮಗದೊಂದೆಡೆ ಸಿಖ್ ಉಗ್ರಗಾಮಿಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತದೆ. ಮುಂಬೈ ರೈಲು ಸ್ಪೋಟ ತನಿಖೆ ಹಳಿತಪ್ಪುವುದಕ್ಕೆ ಭಯೋತ್ಪಾದನೆಯ ಕುರಿತಂತೆ ಸರಕಾರ ಹೊಂದಿರುವ ಇಂತಹ ದ್ವಂದ್ವ ನಿಲುವುಗಳೇ ಕಾರಣ. 19 ವರ್ಷಗಳ ಕಾಲ ಮಾಡದ ತಪ್ಪಿಗೆ ಭಯಾನಕ ಶಿಕ್ಷೆಯನ್ನು ಅನುಭವಿಸಿದ ಅಷ್ಟೂ ಜನರಿಗೆ ಗರಿಷ್ಠ ಪರಿಹಾರವನ್ನು ನೀಡಿ, ಅವರ ಹಳಿತಪ್ಪಿದ ಬದುಕನ್ನು ಸರಿಪಡಿಸುವುದಕ್ಕೆ ಸರಕಾರ ಇನ್ನಾದರೂ ಮುಂದಾಗಬೇಕಾಗಿದೆ. ಹಾಗೆಯೇ ತನಿಖೆಯಲ್ಲಿ ಬೇಜವಾಬ್ದಾರಿಯನ್ನು ಪ್ರದರ್ಶಿಸಿದ ಅಷ್ಟೂ ತನಿಖಾಧಿಕಾರಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದೆ.







