ಕರಾವಳಿಯಲ್ಲಿ ಅಮಾಯಕನ ಕೊಲೆ: ಗೃಹ ಇಲಾಖೆಯೇ ಮೊದಲ ಆರೋಪಿ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಮಂಗಳೂರಿನಲ್ಲಿ ಇನ್ನೊಬ್ಬ ಅಮಾಯಕನ ಬರ್ಬರ ಕೊಲೆಯಾಗಿದೆ. ಇತ್ತೀಚೆಗಷ್ಟೇ ಗುಂಪು ಥಳಿತದಿಂದ ಅಶ್ರಫ್ ಎನ್ನುವ ಕೇರಳ ಮೂಲದ ವಲಸೆ ಕಾರ್ಮಿಕನೊಬ್ಬನನ್ನು ಆತನ ಧರ್ಮ, ಭಾಷೆಯ ಕಾರಣಕ್ಕಾಗಿಯೇ 30 ಜನರ ಗುಂಪೊಂದು ಥಳಿಸಿ ಕೊಂದಿತ್ತು. ಪೊಲೀಸರು ಈ ಗುಂಪು ಹತ್ಯೆಯ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಇನ್ನೂ ಮೀನಮೇಷ ಎಣಿಸುತ್ತಿದ್ದಾರೆ. ಅಷ್ಟರಲ್ಲೇ, ಯಾವುದೇ ಕ್ರಿಮಿನಲ್ ಹಿನ್ನೆಲೆಯಿಲ್ಲದ, ಟೆಂಪೋ ಚಾಲಕನೊಬ್ಬನನ್ನು ದುಷ್ಕರ್ಮಿಗಳು ಕೊಂದು ಹಾಕಿದ್ದು, ಇನ್ನೊಬ್ಬನ ಮೇಲೆ ಗಂಭೀರವಾಗಿ ದಾಳಿ ನಡೆಸಿದ್ದಾರೆ. ಯಾವುದೇ ರಾಜಕೀಯ ಸಂಘಟನೆಗಳೊಂದಿಗೆ ಸಂಬಂಧವಿಲ್ಲದ, ಟೆಂಪೋದಲ್ಲಿ ದುಡಿದು ಕುಟುಂಬ ನಡೆಸುತ್ತಿದ್ದ ಈ ಯುವಕನನ್ನು ಆತನ ಧರ್ಮದ ಕಾರಣಕ್ಕಾಗಿಯೇ ಕೊಂದು ಹಾಕಲಾಗಿದೆ ಎಂಬ ಅನುಮಾನಗಳು ವ್ಯಕ್ತವಾಗಿವೆ. ಈ ಬಗ್ಗೆ ಪೊಲೀಸರು ಇನ್ನೂ ಸ್ಪಷ್ಟ ಹೇಳಿಕೆಗಳನ್ನು ನೀಡಿಲ್ಲ. ಈ ಕೊಲೆಯ ಹಿಂದೆ, ಕರಾವಳಿಯನ್ನು ಕ್ಯಾನ್ಸರ್‌ನಂತೆ ಕಿತ್ತು ತಿನ್ನುತ್ತಿರುವ ರೌಡಿಶೀಟರ್‌ಗಳು, ಹಿಂದುತ್ವದ ಮುಖವಾಡಗಳಲ್ಲಿ ಕ್ರಿಮಿನಲ್ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರುವ ಕೆಲವು ಶಕ್ತಿಗಳ ಕೈವಾಡಗಳಿವೆ ಎಂದು ಸ್ಥಳೀಯರು ಅನುಮಾನಿಸುತ್ತಿದ್ದಾರೆ. ಸತ್ಯಾಸತ್ಯತೆ ಇನ್ನಷ್ಟೇ ಹೊರ ಬರಬೇಕಾಗಿದೆ. ಇದೇ ಸಂದರ್ಭದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ರಿಮಿನಲ್‌ಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲು ವಿಫಲವಾಗಿರುವ ಪೊಲೀಸ್ ಇಲಾಖೆಯೇ ಈ ಸರಣಿ ಕೊಲೆಗಳ ಮುಖ್ಯ ಆರೋಪಿ ಎನ್ನುವುದನ್ನು ಜನಸಾಮಾನ್ಯರು ಬಹಿರಂಗವಾಗಿಯೇ ಆಡಿಕೊಳ್ಳುತ್ತಿದ್ದಾರೆ.
ನಾಲ್ಕು ವಾರಗಳ ಹಿಂದೆ ಸುಹಾಸ್ ಶೆಟ್ಟಿ ಎನ್ನುವ ರೌಡಿ ಶೀಟರ್‌ನನ್ನು ಮಂಗಳೂರಿನಲ್ಲಿ ಕ್ರಿಮಿನಲ್ ಹಿನ್ನೆಲೆಯಿರುವ ಕೆಲವರು ಸೇರಿ ಕೊಂದು ಹಾಕಿದ್ದರು. ಸುಹಾಸ್ ಶೆಟ್ಟಿ 2020ರಲ್ಲಿ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿ ಬಡಗ ಎಕ್ಕಾರು ಗ್ರಾಮದ 20 ವರ್ಷದ ಯುವಕ ಕೀರ್ತಿ ಎಂಬವನನ್ನು ಕೊಂದ ಪ್ರಮುಖ ಆರೋಪಿಗಳಲ್ಲಿ ಒಬ್ಬ. ಹಾಗೆಯೇ 2022ರಲ್ಲಿ ಫಾಝಿಲ್ ಎನ್ನುವ ಅಮಾಯಕ ಯುವಕನನ್ನು ಕೂಡ ಯಾವ ಕಾರಣವೂ ಇಲ್ಲದೆ ಧರ್ಮದ ಕಾರಣಕ್ಕಾಗಿಯೇ ಕೊಂದು ಹಾಕಿದ್ದ. ಅಷ್ಟೇ ಅಲ್ಲ, ಸುಹಾಸ್ ಶೆಟ್ಟಿಯ ಮೇಲೆ ದಲಿತ ದೌರ್ಜನ್ಯ ಸಹಿತ ಹಲವು ಪ್ರಕರಣಗಳು ದಾಖಲಾಗಿದ್ದವು. ಬಿಜೆಪಿ ಸರಕಾರದ ಅವಧಿಯಲ್ಲಿ ಈತ ರೌಡಿ ಶೀಟರ್ ಆಗಿ ಗುರುತಿಸಿಕೊಂಡಿದ್ದ. ಈತನನ್ನು ಕೊಂದು ಹಾಕಿದವರು ಕೂಡ ಕ್ರಿಮಿನಲ್ ಹಿನ್ನೆಲೆಯಿರುವವರೇ. ಕೀರ್ತಿ ಮತ್ತು ಫಾಝಿಲ್ ಕೊಲೆಯೇ ಈತನನ್ನು ಬಲಿತೆಗೆದುಕೊಂಡಿತು ಎಂದು ಪೊಲೀಸ್ ಇಲಾಖೆ ಹೇಳುತ್ತಿದೆ. ಈತನನ್ನು ಕೊಲೆಗೈದ ಆರೋಪಿಗಳಲ್ಲಿ ಎಲ್ಲ ಧರ್ಮಕ್ಕೆ ಸೇರಿದ ಕ್ರಿಮಿನಲ್‌ಗಳೂ ಇದ್ದರು. ಆದರೆ ಬಿಜೆಪಿ ನಾಯಕರು ಮತ್ತು ಸಂಘಪರಿವಾರದ ಕೆಲವು ಮುಖಂಡರು ಈತನ ಸಾವನ್ನು ವೈಭವೀಕರಿಸಿದರು. ಹಿಂದುತ್ವಕ್ಕಾಗಿ ಈತ ಪ್ರಾಣ ಕಳೆದುಕೊಂಡ ಎಂದು ಹೇಳಿಕೆ ನೀಡಿದರು. ಆತ ನಿಜಕ್ಕೂ ಹಿಂದುತ್ವದ ವಾರಸುದಾರನೇ ಆಗಿದ್ದರೆ ಬಿಜೆಪಿ ತನ್ನ ಸರಕಾರದ ಅವಧಿಯಲ್ಲಿ ಆತನ ಮೇಲೆ ಯಾಕೆ ರೌಡಿಶೀಟರ್ ಹಾಕಿತು? ಎನ್ನುವ ಪ್ರಶ್ನೆಗೆ ಯಾವ ಬಿಜೆಪಿ ನಾಯಕರೂ ಈವರೆಗೆ ಉತ್ತರಿಸಿಲ್ಲ. ಸುಹಾಸ್ ಶೆಟ್ಟಿ ಎನ್ನುವ ರೌಡಿ ಶೀಟರ್ ಹಿಂದುತ್ವದ ನಾಯಕನಾದರೆ, ಹಿಂದುತ್ವ ಎಂದರೆ ಏನು? ಎನ್ನುವ ಪ್ರಶ್ನೆಯನ್ನು ಸ್ವತಃ ಹಿಂದೂ ಧಾರ್ಮಿಕ ಸಜ್ಜನರೇ ಕೇಳುವಂತಹ ಸ್ಥಿತಿ ಕರಾವಳಿಯಲ್ಲಿ ನಿರ್ಮಾಣವಾಗಿದೆ. ಈತನ ಹತ್ಯೆಯ ಬಳಿಕ ಸಂಘಪರಿವಾರದ ಮುಖಂಡರೆಂದು ಕರೆಸಿಕೊಂಡ ಹಲವರು ದ್ವೇಷ ಭಾಷಣಗಳನ್ನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯ ಮೇಲೆ ಬಂದ್‌ನ್ನು ಹೇರಿದರು. ಹಲವೆಡೆ ಚೂರಿ ಇರಿತಗಳಾದವು. ಇವುಗಳ ಹಿಂದಿರುವವರನ್ನು ಕಠಿಣ ಕ್ರಮಗಳ ಮೂಲಕ ನಿಯಂತ್ರಿಸಬೇಕಾಗಿದ್ದ ಪೊಲೀಸ್ ಇಲಾಖೆ ಅಸಹಾಯಕತೆಯನ್ನು ಪ್ರದರ್ಶಿಸಿತು. ಗೃಹ ಸಚಿವರು ಎಂದಿನಂತೆಯೇ ‘ಆ್ಯಂಟಿ ಕಮ್ಯುನಲ್ ಫೋರ್ಸ್’ ಎನ್ನುವ ಐಸ್‌ಕ್ಯಾಂಡಿಯ ಭರವಸೆಯನ್ನು ಪತ್ರಿಕಾಗೋಷ್ಠಿಯಲ್ಲಿ ಉಚಿತವಾಗಿ ವಿತರಿಸಿ ಬೆಂಗಳೂರಿಗೆ ವಾಪಾಸಾದರು. ಆದರೆ ಕರಾವಳಿಯಲ್ಲಿ ರೌಡಿ ಶೀಟರ್‌ನ ಕೊಲೆಯನ್ನು ಮುಂದಿಟ್ಟುಕೊಂಡು ಸಾರ್ವಜನಿಕ ಸಭೆಗಳನ್ನು ನಡೆಸಿ, ಅಲ್ಲಿ ಭಾಷಣಗಳ ಹೆಸರಿನಲ್ಲಿ ದ್ವೇಷದ ವಿಷ ಕಾರುವುದು ಮುಂದುವರಿಯುತ್ತಲೇ ಇತ್ತು. ಪೊಲೀಸ್ ಇಲಾಖೆ ಮತ್ತು ಅದರ ಆ್ಯಂಟಿ ಕಮ್ಯುನಲ್ ಫೋರ್ಸ್‌ಗಳು ಕಿವಿಯಿದ್ದು ಕಿವುಡಾಗಿದ್ದವು. ಇದರ ಪರಿಣಾಮವಾಗಿಯೇ ಬಂಟ್ವಾಳದಲ್ಲಿ ಯಾವುದೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ಗುರುತಿಸಲ್ಪಡದ ಅಮಾಯಕ ವ್ಯಕ್ತಿಯೊಬ್ಬನ ಹೆಣ ಬಿದ್ದಿದೆ.
ಹತ್ಯೆಗೀಡಾದ ರೌಡಿಶೀಟರ್‌ನ ಪರವಾಗಿ ಎರಡು ದಿನಗಳ ಹಿಂದೆಯಷ್ಟೇ ಬಜಪೆಯಲ್ಲಿ ಪೊಲೀಸ್ ಇಲಾಖೆಯ ಅನುಮತಿಯಿಲ್ಲದೆಯೇ ಸಂಘಪರಿವಾರ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿತ್ತು. ಈ ಸಮಾವೇಶ ರಾಜ್ಯದ ಗೃಹಸಚಿವರಿಗೂ ಮತ್ತು ಅವರ ಆ್ಯಂಟಿ ಕಮ್ಯುನಲ್ ಟಾಸ್ಕ್ ಫೋರ್ಸ್‌ಗೂ ಕರಾವಳಿಯ ಕ್ರಿಮಿನಲ್‌ಗಳು ಹಾಕಿದ ಬಹಿರಂಗ ಸವಾಲಾಗಿತ್ತು. ಈ ಸಮಾವೇಶದಲ್ಲಿ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಲಾಗಿತ್ತು. ಈಗಾಗಲೇ ಈ ನಾಡಿನ ಕಾನೂನಿಗೆ ಸವಾಲಾಗಿದ್ದ ರೌಡಿಶೀಟರ್ ಒಬ್ಬನನ್ನು ಇನ್ನೊಂದಿಷ್ಟು ಆತನ ಪ್ರತಿಸ್ಪರ್ಧಿ ರೌಡಿಗಳು ಕೊಂದು ಹಾಕಿರುವುದಕ್ಕೆ ಎನ್‌ಐಎ ತನಿಖೆ ಯಾಕೆ ನಡೆಯಬೇಕು? ದೇಶದ ಆಂತರಿಕ ಭದ್ರತೆಯೊಂದಿಗೆ ಆತನ ಸಾವಿಗೆ ಯಾವ ಸಂಬಂಧವಿದೆ? ಸಮಾವೇಶದಲ್ಲಿ ಆತನ ಮೇಲೆ ರೌಡಿಶೀಟರ್‌ನ್ನು ಹಾಕಿರುವ ಬಗ್ಗೆ ಟೀಕೆ ಮಾಡಲಾಗಿದೆ. ಟೀಕಿಸುವುದಿದ್ದರೆ, ಖಂಡಿಸುವುದಿದ್ದರೆ ಆತನ ಮೇಲೆ ರೌಡಿ ಶೀಟರ್ ಹಾಕಿದ್ದ ಅಂದಿನ ಬಿಜೆಪಿ ನಾಯಕರನ್ನು ಟೀಕಿಸಬೇಕು, ಖಂಡಿಸಬೇಕು. ಎರಡು ಕೊಲೆಗಳಲ್ಲಿ ಗುರುತಿಸಿಕೊಂಡ, ಹಲವು ಕ್ರಿಮಿನಲ್ ಚಟುವಟಿಕೆಗಳಲ್ಲಿ ಆರೋಪಿಯಾದವನ ಮೇಲೆ ರೌಡಿ ಶೀಟರ್ ಹಾಕಬಾರದು ಎಂದು ಸಾರ್ವಜನಿಕವಾಗಿ ಘಂಟಾಘೋಷವಾಗಿ ಹೇಳಿದವನನ್ನು ತಕ್ಷಣವೇ ಬಂಧಿಸುವುದು ಪೊಲೀಸ್ ಇಲಾಖೆಯ ಕೆಲಸ. ಬಜ್ಪೆಯಲ್ಲಿ ಕಾನೂನು ಬಾಹಿರವಾಗಿ ಸಭೆ ನಡೆಸಿ, ಪೊಲೀಸ್ ಇಲಾಖೆಗೆ, ಸಮಾಜಕ್ಕೆ, ಸರಕಾರಕ್ಕೆ ಬೆದರಿಕೆ ಹಾಕಿದ, ಬಹಿರಂಗ ಕೊಲೆ, ಹಿಂಸೆಗೆ ಕರೆ ನೀಡಿದ ವ್ಯಕ್ತಿಯನ್ನು ಬಂಧಿಸಲು ಸಾಧ್ಯವಾಗದ ಪೊಲೀಸ್ ಇಲಾಖೆಯೇ ಬಂಟ್ವಾಳದಲ್ಲಿ ನಡೆದ ಕೊಲೆಯ ಮೊದಲ ಆರೋಪಿ ಎನ್ನುವುದರಲ್ಲಿ ಎರಡು ಮಾತೇ ಇಲ್ಲ.
ಗುಂಪು ಹತ್ಯೆಯಲ್ಲಿ ವಲಸೆ ಕಾರ್ಮಿಕನನ್ನು ಕೊಂದು ಹಾಕಿದ ಪ್ರಮುಖ ಆರೋಪಿಗಳನ್ನು ಬಂಧಿಸಿ ಅವರ ಮೇಲೆ ಕಠಿಣ ಕ್ರಮವನ್ನು ತೆಗೆದುಕೊಳ್ಳಲು ಪೊಲೀಸ್ ಇಲಾಖೆಗೆ ಈವರೆಗೆ ಸಾಧ್ಯವಾಗಿಲ್ಲ. ಇದು ಕರಾವಳಿಯಲ್ಲಿ ಕ್ರಿಮಿನಲ್‌ಗಳು ವಿಜೃಂಭಿಸಲು ಕುಮ್ಮಕ್ಕು ನೀಡಿದಂತಾಗಿದೆ. ಒಂದೆಡೆ ದುಷ್ಕರ್ಮಿಗಳಿಗೆ ಬಲಿಯಾದ ಅಮಾಯಕ ಸಂತ್ರಸ್ತರನ್ನು ಸಂತೈಸುವ ಕೈಗಳೇ ಇಲ್ಲ. ಪರಿಹಾರವಂತೂ ದೂರದ ಮಾತು. ಕಾನೂನು ವ್ಯವಸ್ಥೆಯ ವೈಫಲ್ಯದಿಂದ ಗುಂಪು ಥಳಿತಕ್ಕೆ ಬಲಿಯಾದವರಿಗೆ, ಕ್ರಿಮಿನಲ್‌ಗಳ ಕತ್ತಿಗಳಿಗೆ ಕುತ್ತಿಗೆ ಕೊಟ್ಟ ಅಮಾಯಕರಿಗೆ ಸರಕಾರ ಯಾವುದೇ ಪರಿಹಾರ ನೀಡಿಲ್ಲ. ಇದೇ ಸಂದರ್ಭದಲ್ಲಿ ರೌಡಿಶೀಟರ್‌ಗಳು, ಕ್ರಿಮಿನಲ್‌ಗಳು ತಮ್ಮ ಕೃತ್ಯಗಳಿಗಾಗಿ ಹಲವು ಲಕ್ಷ ರೂಪಾಯಿಗಳನ್ನು ಪರಿಹಾರ ರೂಪದಲ್ಲಿ, ಬಹುಮಾನ ರೂಪದಲ್ಲಿ, ಸುಪಾರಿ ರೂಪದಲ್ಲಿ ಬಹಿರಂಗವಾಗಿ ಪಡೆಯುತ್ತಿದ್ದಾರೆ. ಯುವಕರು ಈ ಕ್ರಿಮಿನಲ್ ಚಟುವಟಿಕೆಗಳನ್ನು ಲಾಭದಾಯಕ ದಂಧೆಯಾಗಿ ನೋಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕರಾವಳಿಯು ಕ್ರಿಮಿನಲ್‌ಗಳನ್ನು, ರೌಡಿಶೀಟರ್‌ಗಳನ್ನು ತಯಾರಿಸುವ ಕಾರ್ಖಾನೆಯಾಗಿ ಹೊರ ಹೊಮ್ಮಿದರೆ ಅದರ ಸಂಪೂರ್ಣ ಹೆಗ್ಗಳಿಕೆಯನ್ನು ಗೃಹ ಇಲಾಖೆಗೆ ನೀಡಬೇಕಾಗಿದೆ.