ಯುಪಿಎ ಹೆತ್ತ ಕೂಸಿಗೆ ‘ಬಾಪು’ ಆಗಲು ಹೊರಟ ಎನ್ ಡಿಎ

ಸಾಂದರ್ಭಿಕ ಚಿತ್ರ (source: PTI)
ಯುಪಿಎ ಸರಕಾರದ ಅವಧಿಯಲ್ಲಿ ಜಾರಿಗೊಂಡ ಮಹತ್ವದ ಯೋಜನೆಗಳಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆ(ನರೇಗಾ)ಯೂ ಒಂದು. ವಿಶ್ವದಲ್ಲೇ ಅತಿ ದೊಡ್ಡ ಉದ್ಯೋಗ ಯೋಜನೆ ಎಂದು ನರೇಗಾ ಗುರುತಿಸಲ್ಪಟ್ಟಿದೆ. ಯುಪಿಎ ಸರಕಾರ ಈ ಯೋಜನೆಯನ್ನು ಜಾರಿಗೊಳಿಸಿದ ಸಂದರ್ಭದಲ್ಲಿ ಇದರ ವಿರುದ್ಧ ಬಿಜೆಪಿ ನಾಯಕರು ಸಾಕಷ್ಟು ಟೀಕೆಗಳನ್ನು ಮಾಡಿದ್ದರು. ಆದರೆ ಗ್ರಾಮೀಣ ಪ್ರದೇಶದಲ್ಲಿ ಇದು ಪಡೆದುಕೊಂಡ ಜನಪ್ರಿಯತೆಯಿಂದಾಗಿ ಬಳಿಕ ಅಧಿಕಾರಕ್ಕೆ ಬಂದ ಎನ್ ಡಿಎ ಸರಕಾರಕ್ಕೆ ಇದನ್ನು ತಿರಸ್ಕರಿಸಲು ಸಾಧ್ಯವಾಗಲಿಲ್ಲ. ಆರಂಭದ ಬಜೆಟ್ನಲ್ಲಿ ನರೇಗಾ ಯೋಜನೆಗೆ ಅತ್ಯಧಿಕ ಹಣವನ್ನು ಎನ್ಡಿಎ ಸರಕಾರ ಕೂಡ ಮೀಸಲಿಟ್ಟಿತ್ತು. ಗ್ರಾಮೀಣ ಪ್ರದೇಶದ ಹಸಿವನ್ನು ನೀಗಿಸುವಲ್ಲಿ ನರೇಗಾ ವಹಿಸಿರುವ ಪಾತ್ರವನ್ನು ವಿಶ್ವಸಂಸ್ಥೆ ಕೂಡ ಪ್ರಶಂಸಿಸಿದೆ. ಕೊರೋನ, ಲಾಕ್ಡೌನ್ ಕಾಲದಲ್ಲಿ ನಗರದಿಂದ ಗ್ರಾಮೀಣ ಪ್ರದೇಶಕ್ಕೆ ಮರಳಿದ ಕಾರ್ಮಿಕರನ್ನು ಸಲಹಿದ್ದು ಇದೇ ಯೋಜನೆಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ನರೇಗಾ ಯೋಜನೆಯನ್ನು ಕೇಂದ್ರ ಸರಕಾರ ನಿರ್ಲಕ್ಷಿಸುತ್ತಿರುವ ಬಗ್ಗೆ, ಅನುದಾನಗಳನ್ನು ಬಾಕಿ ಉಳಿಸಿರುವ ಬಗ್ಗೆ ಹಲವು ರಾಜ್ಯಗಳು ಆಕ್ಷೇಪಗಳನ್ನು ವ್ಯಕ್ತಪಡಿಸಿವೆ. ಇದೀಗ ಇದೇ ನರೇಗಾ ಯೋಜನೆಯನ್ನು ಪರಿಷ್ಕರಿಸಿ ಅದಕ್ಕೆ ಹೊಸ ನಾಮಕರಣವನ್ನು ಮಾಡಲು ಕೇಂದ್ರ ಸರಕಾರ ಸಿದ್ಧತೆ ನಡೆಸುತ್ತಿದೆ.
ವರದಿಯೊಂದರ ಪ್ರಕಾರ, ಕೇಂದ್ರ ಸರಕಾರವು ನರೇಗಾ ಯೋಜನೆಯನ್ನು ಪರಿಷ್ಕರಿಸಿ ಕೆಲಸದ ದಿನಗಳನ್ನು 100ರಿಂದ 125ಕ್ಕೆ ಹೆಚ್ಚಿಸುವ ಸಾಧ್ಯತೆಯಿದೆ. ಅಷ್ಟೇ ಅಲ್ಲ, ಈ ಯೋಜನೆಗೆ ಪೂಜ್ಯ ಬಾಪು ಗ್ರಾಮೀಣ ರೋಜ್ಗಾರ್ ಯೋಜನಾ ಎಂದು ಮರುನಾಮಕರಣ ಮಾಡಲು ಕೇಂದ್ರ ಸರಕಾರ ಮುಂದಾಗಿದೆ. ಸರಕಾರ ನಿಜಕ್ಕೂ ನರೇಗಾ ಯೋಜನೆಯ ಕೆಲಸದ ದಿನಗಳನ್ನು ಹೆಚ್ಚಿಸಲಿದೆಯೋ ಅಥವಾ ಪರಿಷ್ಕರಣೆಯ ನೆಪದಲ್ಲಿ ಯೋಜನೆಯ ಹೆಸರನ್ನಷ್ಟೇ ಬದಲಿಸಲು ಮುಂದಾಗಿದೆಯೋ ಎನ್ನುವುದು ಇನ್ನೂ ಸ್ಪಷ್ಟವಿಲ್ಲ. ಇಷ್ಟಕ್ಕೂ ಹೆಸರನ್ನು ಬದಲಾಯಿಸುವುದರಲ್ಲಿ ಎರಡು ಉದ್ದೇಶವಿದೆ ಎಂದು ವಿರೋಧ ಪಕ್ಷ ನಾಯಕರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಒಂದು, ಇಡೀ ಯೋಜನೆಯನ್ನು ಹೊಸದಾಗಿ ಮೋದಿ ಜಾರಿಗೆ ತಂದಿರುವ ರೀತಿಯಲ್ಲಿ ಬಿಂಬಿಸುವುದು. ಎರಡನೆಯದಾಗಿ, ಯೋಜನೆಗೆ ಇಟ್ಟಿರುವ ಮಹಾತ್ಮಾ ಗಾಂಧಿಯ ಹೆಸರನ್ನು ಅಳಿಸಿ ಅದನ್ನು ಬಾಪುವಿಗೆ ಸೀಮಿತಗೊಳಿಸುವುದು. ಪೂರ್ಣ ಪ್ರಮಾಣದಲ್ಲಿ ಮಹಾತ್ಮಾಗಾಂಧಿಯ ಹೆಸರನ್ನು ಅಳಿಸಿದ್ದೇ ಆದರೆ ಅದು ವಿವಾದಕ್ಕೆ ಕಾರಣವಾಗಬಹುದು ಎಂದು, ಹೆಸರನ್ನು ಚುಟುಕುಗೊಳಿಸಲು ಮುಂದಾಗಿದೆ. ವಿಪರ್ಯಾಸವೆಂದರೆ, ಪ್ರಧಾನಿ ಮೋದಿಯವರು ಭಾಷಣವೊಂದರಲ್ಲಿ ಅತ್ಯಾಚಾರ ಆರೋಪಿ ಆಸಾರಾಂ ಬಾಪು ಅವರನ್ನೂ ಪ್ರೀತಿಯಿಂದ ‘ಬಾಪು’ ಎಂದೇ ಸಂಬೋಧಿಸಿದ್ದಾರೆ. ಇದೀಗ ಮಹಾತ್ಮಾಗಾಂಧಿಯ ಹೆಸರನ್ನು ಅಳಿಸಿ ಆ ಜಾಗಕ್ಕೆ ಆಸಾರಾಂ ‘ಬಾಪು’ವನ್ನು ತುರುಕಿಸಲು ಪ್ರಯತ್ನಿಸುತ್ತಿದ್ದಾರೆಯೇ ಎಂದು ಜನರು ಅನುಮಾನಿಸುವಂತಾಗಿದೆ.
ಇಂದು ಸರಕಾರ ನರೇಗಾ ಯೋಜನೆಯನ್ನು ಹೊಸದಾಗಿ ಪರಿಷ್ಕರಿಸುವ ಅಗತ್ಯವೇನೂ ಇಲ್ಲ. ಇರುವ ಯೋಜನೆಯ ಪರಿಣಾಮಕಾರಿಯಾಗಿ ಜಾರಿಗೊಳಿಸುವುದಕ್ಕಾಗಿ ಬಾಕಿ ಉಳಿಸಿರುವ ಅನುದಾನಗಳನ್ನು ಬಿಡುಗಡೆ ಮಾಡಿದರೆ ಅಷ್ಟೇ ಸಾಕು. ನರೇಗಾ ಯೋಜನೆಯ ಬಗ್ಗೆ ಆರಂಭದಲ್ಲಿ ಎನ್ಡಿಎ ಸರಕಾರ ಉತ್ಸಾಹ ತೋರಿತ್ತಾದರೂ, ಕೊರೋನೋತ್ತರ ದಿನಗಳಲ್ಲಿ ಸರಕಾರವೇ ನರೇಗಾ ಯೋಜನೆಯ ಬಗ್ಗೆ ತಪ್ಪು ಮಾಹಿತಿಗಳನ್ನು ಹಂಚತೊಡಗಿತು. ಬಾಕಿ ಉಳಿಸಿರುವ ಅನುದಾನಗಳನ್ನು ಪಾವತಿ ಮಾಡಲು ವಿಫಲವಾದ ಕೇಂದ್ರ ಸರಕಾರ ನಿಧಾನಕ್ಕೆ ಯೋಜನೆಯನ್ನೇ ಅಪ್ರಸ್ತುತ ಎಂದು ಘೋಷಿಸುವುದಕ್ಕೆ ನೆಪಗಳನ್ನು ಹುಡುಕತೊಡಗಿತು. 2022ರಲ್ಲಿ ಕೇಂದ್ರ ಸರಕಾರವು ನರೇಗಾ ಯೋಜನೆಯಡಿ ಸುಮಾರು 8,305 ಕೋಟಿ ರೂಪಾಯಿ ಮೊತ್ತಗಳನ್ನು ಬಾಕಿಯಿರಿಸಿತ್ತು. ಆಂಧ್ರಪ್ರದೇಶ, ಪಶ್ಚಿಮಬಂಗಾಳಗಳಿಗೆ ಅತಿ ಹೆಚ್ಚು ಹಣ ಪಾವತಿಯಾಗುವುದಕ್ಕಿದೆ. ಕರ್ನಾಟಕದಲ್ಲೂ ಕಾರ್ಮಿಕರಿಗೆ ಕೋಟ್ಯಂತರ ರೂಪಾಯಿ ಪಾವತಿಯಾಗಲು ಬಾಕಿ ಉಳಿದಿದೆ. ಆರು ತಿಂಗಳಿಂದ ಹಣ ವಾಪತಿಯಾಗದ ಕಾರಣ ಇತ್ತೀಚೆಗೆ ಉಡುಪಿಯಲ್ಲಿ ನರೇಗಾ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು. ‘ಗೃಹ ಲಕ್ಷ್ಮಿ ಹಣ ಬಿದ್ದಿಲ್ಲ’ ಎಂದು ಕೂಗೆಬ್ಬಿಸುವ ಬಿಜೆಪಿ ನಾಯಕರು ಕೇಂದ್ರದಿಂದ ಬರಲು ಬಾಕಿಯಾಗಿರುವ ನರೇಗಾ ಕಾರ್ಮಿಕರ ಹಣದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಪ್ರಶ್ನೆಗೆ ಬಿಜೆಪಿ ನಾಯಕರು ಈವರೆಗೆ ಯಾವುದೇ ಉತ್ತರ ನೀಡಿಲ್ಲ. ವಿಪರ್ಯಾಸವೆಂದರೆ, ಬಾಕಿ ಉಳಿಸಿರುವ ಹಣ ಪಾವತಿಯ ಬಗ್ಗೆ ಸ್ಪಷ್ಟೀಕರಣ ನೀಡಬೇಕಾಗಿದ್ದ ವಿತ್ತ ಸಚಿವರು, ಲೋಕಸಭೆಯಲ್ಲಿ ‘ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಗಳಿಗೆ ಬೇಡಿಕೆ ತಗ್ಗುತ್ತಿದೆ’ ಎಂಬ ಬೇಜವಾಬ್ದಾರಿ ಹೇಳಿಕೆಯನ್ನು ನೀಡಿದ್ದರು. ಆದರೆ ‘ಫ್ಯಾಕ್ಟ್ಚೆಕ್’ ಬೇರೆಯೇ ಹೇಳುತ್ತಿತ್ತು. 2018ರಿಂದ 2022ರ ನಡುವೆ ಯೋಜನೆಯಡಿ ಉದ್ಯೋಗಗಳಿಗೆ ಇರುವ ಬೇಡಿಕೆಯ ಬಗ್ಗೆ ನರೇಗಾ ವೆಬ್ಸೈಟ್ನಲ್ಲಿ ಪರಿಶೀಲಿಸಿದಾಗ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸಕ್ಕೆ ಬೇಡಿಕೆ ಸ್ಥಿರವಾಗಿ ಏರಿಕೆಯಾಗಿರುವುದು ಬೆಳಕಿಗೆ ಬಂತು. 2018ರಲ್ಲಿ 5.78 ಕೋಟಿ ಕುಟುಂಬಗಳಿಂದ ಅಂದರೆ ಸುಮಾರು 9.11 ಕೋಟಿ ಜನರು ಕೆಲಸಕ್ಕೆ ಬೇಡಿಕೆ ಸಲ್ಲಿಸಿದ್ದರೆ, 2019-20ರಲ್ಲಿ 6.16 ಕೋಟಿ ಕುಟುಂಬಗಳು ಅಂದರೆ ಸುಮಾರು 9.33 ಕೋಟಿ ಜನರು ಕೆಲಸಕ್ಕಾಗಿ ಬೇಡಿಕೆ ಸಲ್ಲಿಸಿದ್ದರು. ಕೋವಿಡ್ ಕಾಲದಲ್ಲಂತೂ ನಿರುದ್ಯೋಗಿಗಳಿಗೆ ನರೇಗಾ ದೊಡ್ಡ ವರದಾನವಾಗಿತ್ತು. ಆದರೆ ಬಾಕಿ ಉಳಿಸಿರುವ ವೇತನವನ್ನು ನೀಡಲು ಸಾಧ್ಯವಾಗದ ಕೇಂದ್ರ ಸರಕಾರ, ಕಾರ್ಮಿಕರ ಕೆಲಸವನ್ನು ಕಡಿತಗೊಳಿಸುವ ಬಗ್ಗೆ ಯೋಚಿಸತೊಡಗಿತು. ಅದರ ಭಾಗವಾಗಿಯೇ ವಿತ್ತ ಸಚಿವರು ಲೋಕಸಭೆಯಲ್ಲಿ ಮಾತನಾಡುತ್ತಾ ನರೇಗಾದ ಬಗ್ಗೆ ಜನರು ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬ ಹೇಳಿಕೆ ನೀಡಿದ್ದರು. ಆದರೆ ಅದೇ ಸರಕಾರ ಈಗ ನರೇಗಾವನ್ನು ಪರಿಷ್ಕರಿಸಿ, ಕೆಲಸದ ಅವಧಿಯನ್ನು ಹೆಚ್ಚಿಸಲು ಮುಂದಾಗಿದೆ. ಜನರಿಗೆ ಆಸಕ್ತಿಯಿಲ್ಲ ಎಂದಾಗಿದ್ದರೆ ಈ ಪರಿಷ್ಕರಣೆಯ ಅಗತ್ಯ ಏನಿತ್ತು? ಅಂದರೆ, ನರೇಗಾ ಯೋಜನೆಯ ಜನಪ್ರಿಯತೆ ಎನ್ಡಿಎ ಸರಕಾರಕ್ಕೆ ನುಂಗಲಾರದ ತುತ್ತಾಗಿದೆ. ಈ ಜನಪ್ರಿಯತೆಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎನ್ನುವುದು ಮನವರಿಕೆಯಾಗಿ ಇದೀಗ ಯೋಜನೆಯನ್ನು ಪರಿಷ್ಕರಿಸುವ ನೆಪದಲ್ಲಿ ಅದಕ್ಕೆ ಹೊಸ ಹೆಸರಿಡಲು ಮುಂದಾಗಿದೆ ಮತ್ತು ಇಡೀ ಯೋಜನೆಯನ್ನು ಎನ್ಡಿಎ ಕೂಸು ಎಂದು ಬಿಂಬಿಸಲು ಹೊರಟಿದೆ. ಯಾರದೋ ಕೂಸಿಗೆ ಎನ್ಡಿಎ ತಂದೆಯಾಗುವುದಕ್ಕೆ ಹೊರಟಿರುವುದು ಇದರಿಂದ ಸ್ಪಷ್ಟವಾಗುತ್ತಿದೆ







