ನೀಟ್ ಪರೀಕ್ಷೆ : ರದ್ದು ಮಾಡುವುದೊಂದೇ ಸುಧಾರಣೆಗಿರುವ ದಾರಿ

ಸಾಂದರ್ಭಿಕ ಚಿತ್ರ
2013ರಲ್ಲಿ ನೀಟ್ ಪರೀಕ್ಷೆ ಜಾರಿಗೊಂಡ ದಿನದಿಂದಲೇ ಅದರ ವಿರುದ್ಧ ದಕ್ಷಿಣದ ರಾಜ್ಯಗಳು ತೀವ್ರ ಪ್ರತಿರೋಧಗಳನ್ನು ವ್ಯಕ್ತಪಡಿಸಿಕೊಂಡು ಬಂದಿವೆ. ‘ನೀಟ್ ಪರೀಕ್ಷೆಯನ್ನು ಯಾಕೆ ರದ್ದುಗೊಳಿಸಬೇಕು’ ಎನ್ನುವುದಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಪ್ರತಿ ಬಾರಿ ಸಮರ್ಥನೆಯನ್ನು ಒದಗಿಸುತ್ತಲೇ ಇದೆ. ಈ ಬಾರಿಯೂ ನೀಟ್ ಪರೀಕ್ಷೆ ತನ್ನ ಅಕ್ರಮಗಳಿಗಾಗಿ ಸುದ್ದಿಯಾಗುತ್ತಿದ್ದು, ರಾಜ್ಯಗಳು ಮತ್ತೆ ನೀಟ್ ವಿರುದ್ಧ ಧ್ವನಿಯೆತ್ತುವ ಅನಿವಾರ್ಯತೆಯನ್ನು ಕೇಂದ್ರ ಸರಕಾರವೇ ನಿರ್ಮಾಣಮಾಡಿದೆ. ಮೇ 3ರಂದು ನಡೆದಿದ್ದ ನೀಟ್ -ಯುಜಿ ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆ ಸೋರಿಕೆಯ ಆರೋಪಗಳ ಕಾರಣಕ್ಕಾಗಿ ಎನ್ಟಿಎ ರದ್ದುಗೊಳಿಸಿದೆ. ಮಾತ್ರವಲ್ಲ, ಪರೀಕ್ಷೆಯ ಅಕ್ರಮಗಳ ತನಿಖೆಯನ್ನು ಕೇಂದ್ರ ಸರಕಾರ ಸಿಬಿಐಗೆ ವಹಿಸಿದೆ. ತನಿಖೆ ಆರಂಭಗೊಂಡ ಬೆನ್ನಿಗೇ ರಾಜಸ್ತಾನದ ಬಿಜೆಪಿ ಮುಖಂಡರನ್ನು ತನಿಖಾಧಿಕಾರಿಗಳು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಅಕ್ರಮಗಳಲ್ಲಿ ಬಿಜೆಪಿ ನೇತೃತ್ವದ ಸರಕಾರದೊಳಗಿರುವ ಗಣ್ಯರ ಕೈವಾಡಗಳು ಪ್ರಾಥಮಿಕ ತನಿಖೆಯಲ್ಲಿ ಬಯಲಾಗುತ್ತಿದೆ. ಪರೀಕ್ಷೆಯಲ್ಲಿ ಬರೆದು ಫಲಿತಾಂಶದ ನಿರೀಕ್ಷೆಯಲ್ಲಿದ್ದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರದಲ್ಲಿದೆ. ಈಗಾಗಲೇ ಹಲವು ಒತ್ತಡಗಳ ಜೊತೆಗೆ ಪರೀಕ್ಷೆ ಬರೆದು ಸುಸ್ತಾಗಿ ಕುಳಿತಿದ್ದ ವಿದ್ಯಾರ್ಥಿಗಳು, ಸರಕಾರದ ವೈಫಲ್ಯಕ್ಕಾಗಿ ಮತ್ತೊಮ್ಮೆ ಪರೀಕ್ಷೆ ಬರೆಯಬೇಕಾಗಿದೆ.
ನೀಟ್ನಂತಹ ಪರೀಕ್ಷೆಯಲ್ಲಿ ನಡೆಯುವ ಅಕ್ರಮಗಳು ಕೇವಲ ಶಿಕ್ಷಣ ವ್ಯವಸ್ಥೆಯ ಮೇಲೆ ಮಾತ್ರವಲ್ಲ, ಭವಿಷ್ಯದ ವೈದ್ಯಕೀಯ ಕ್ಷೇತ್ರದ ಮೇಲೂ ಅತಿ ಕೆಟ್ಟ ಪರಿಣಾಮ ಬೀರುತ್ತದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣಕ್ಕೆ ಸುಗಮ ದಾರಿಯನ್ನು ತೆರೆದುಕೊಡಬೇಕಾಗಿರುವ ನೀಟ್ ಪರೀಕ್ಷೆ ಇಂದು ಅವರ ಪಾಲಿಗೆ ದಾರಿಯ ಮುಳ್ಳಾಗಿ ಕಾಡುತ್ತಿದೆ. ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಸೋರಿಕೆ ಪ್ರತಿಭಾವಂತ ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಕುಗ್ಗಿಸುತ್ತಿದೆ ಮಾತ್ರವಲ್ಲ, ವ್ಯವಸ್ಥೆಯ ಕುರಿತ ಅವರ ನಂಬಿಕೆಯನ್ನೇ ಅಲ್ಲಾಡಿಸುತ್ತಿದೆ. ಹಣ ಬಲ ಮತ್ತು ರಾಜಕೀಯ ಬಲವಿರುವವರು ಅಕ್ರಮ ದಾರಿಯಲ್ಲಿ ಪ್ರಶ್ನೆ ಪತ್ರಿಕೆಯನ್ನು ತಮ್ಮದಾಗಿಸಿಕೊಂಡು ನೀಟ್ನ ಸ್ಥಾನಗಳನ್ನು ಕಬಳಿಸುತ್ತಿರುವುದನ್ನು ಪ್ರತಿಭಾವಂತರು ಅಸಹಾಯಕರಾಗಿ ವೀಕ್ಷಿಸಬೇಕಾದ ಸನ್ನಿವೇಶ ಪದೇ ಪದೇ ಸೃಷ್ಟಿಯಾಗುತ್ತಿದೆ. ರಾಜಕಾರಣಿಗಳ ಮತ್ತು ಹಣವಂತರ ಮಕ್ಕಳು ಅಕ್ರಮ ದಾರಿಯಲ್ಲಿ ವೈದ್ಯಕೀಯ ಸೀಟ್ಗಳನ್ನು ಕಬಳಿಸುವುದಕ್ಕಾಗಿಯೇ ನೀಟ್ ವ್ಯವಸ್ಥೆಯನ್ನು ಕೇಂದ್ರ ಸರಕಾರ ಶುರು ಮಾಡಿತೇ ಎಂದು ರಾಜ್ಯಗಳು ಅನುಮಾನ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ನೀಟ್ ಪರೀಕ್ಷೆಯ ಸೋರಿಕೆ ಆಕಸ್ಮಿಕ ಅಲ್ಲ. ಇದರ ಹಿಂದೆ ಇಡೀ ವ್ಯವಸ್ಥೆಯ ವೈಫಲ್ಯವಿದೆ ಎಂದು ರಾಷ್ಟ್ರೀಯ ವೈದ್ಯಕೀಯ ಸಂಘಗಳ ಒಕ್ಕೂಟ ಆರೋಪಿಸಿದ್ದು, ಪರೀಕ್ಷೆಯಲ್ಲಿ ಆಮೂಲಾಗ್ರ ಸುಧಾರಣೆಯನ್ನು ಮಾಡುವುದಕ್ಕಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಇದೇ ಹೊತ್ತಿಗೆ, ನೀಟ್ನ್ನು ರದ್ದುಗೊಳಿಸುವುದೇ ಶಿಕ್ಷಣ ವ್ಯವಸ್ಥೆಗೆ ಮಾಡಬಹುದಾದ ಅತ್ಯುತ್ತಮ ಸುಧಾರಣೆ ಎಂದು ರಾಜ್ಯ ಸರಕಾರಗಳು ವಾದಿಸುತ್ತಿವೆ.
2024ರಲ್ಲಿಯೂ ನೀಟ್ ಪರೀಕ್ಷೆಯ ರ್ಯಾಂಕ್ಗಳು ಅನುಮಾನ, ಆರೋಪಗಳಿಗೆ ಕಾರಣವಾಗಿದ್ದವು. ಸುಮಾರು 67 ಮಂದಿಗೆ ಆ ಬಾರಿ ಪ್ರಥಮ ರ್ಯಾಂಕ್ ದೊರಕಿತ್ತು. ಇದು ಹೇಗೆ ಸಾಧ್ಯ? ನೀಟ್ನಲ್ಲಿ ನಾಲ್ಕಕ್ಕಿಂತ ಹೆಚ್ಚು ಮಂದಿಗೆ ಸಂಪೂರ್ಣ ಅಂಕ ಅಂದರೆ 720ರಲ್ಲಿ 720 ಅಂಕ ದೊರಕಿದ ಉದಾಹರಣೆಗಳೇ ಇರಲಿಲ್ಲ. 2022ರಲ್ಲಿ ಸಂಪೂರ್ಣ ಅಂಕ ಪಡೆದವರೇ ಇರಲಿಲ್ಲ. 2023ರಲ್ಲಿ ಎರಡು ಮಂದಿ ಟಾಪರ್ಗಳಿದ್ದರು. ಆದರೆ 2024ರಲ್ಲಿ ಪೂರ್ಣ ಅಂಕ ಪಡೆದ 67 ಮಂದಿಯ ಹೆಸರುಗಳು ಪ್ರಕಟವಾದವು. ಅಷ್ಟೇ ಅಲ್ಲ, ಪೂರ್ಣ ಅಂಕ ಪಡೆದ 67 ಮಂದಿಯಲ್ಲಿ ಆರು ಮಂದಿ ಒಂದೇ ಅನುಕ್ರಮದ ಸೀಟ್ ಸಂಖ್ಯೆಗಳನ್ನು ಹೊಂದಿದ್ದರು. ಹರ್ಯಾಣ ಪರೀಕ್ಷಾ ಕೇಂದ್ರದಲ್ಲಿ ಈ ಅಕ್ರಮಗಳು ನಡೆದಿದ್ದವು. ವಿಪರ್ಯಾಸವೆಂದರೆ ತಕ್ಷಣ ಈ ಬಗ್ಗೆ ತನಿಖೆಗೆ ಆದೇಶ ನೀಡಬೇಕಾಗಿದ್ದ ನೀಟ್, ಅದನ್ನು ಸಮರ್ಥಿಸಿತ್ತು. ಇದೀಗ ಮತ್ತೆ ನೀಟ್ ಪರೀಕ್ಷೆ ಅಕ್ರಮಗಳಿಗಾಗಿ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಒಂದೋ ನೀಟ್ನ್ನು ರದ್ದುಗೊಳಿಸಬೇಕು ಅಥವಾ, ಎನ್ಟಿಎ ಬದಲಿಗೆ ನೂತನ ಸ್ವಾಯತ್ತ ಸಂಸ್ಥೆಯನ್ನು ನೇಮಿಸುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.
ನೀಟ್ ಪರೀಕ್ಷೆಯ ಮೂಲಕ ರಾಜ್ಯಗಳ ಅದರಲ್ಲೂ ಮುಖ್ಯವಾಗಿ ದಕ್ಷಿಣ ಭಾರತದ ಪ್ರತಿಭಾವಂತ ವಿದ್ಯಾರ್ಥಿಗಳ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ ಎನ್ನುವ ಆರೋಪ ವ್ಯಾಪಕವಾಗಿದೆ. ನೀಟ್ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು 2024ರಲ್ಲಿ ನಮ್ಮ ರಾಜ್ಯದ ಉಭಯ ಸದನಗಳಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿತ್ತು. ನೆರೆಯ ತಮಿಳು ನಾಡು, ಕೇರಳ ಕೂಡ ನೀಟ್ ಪರೀಕ್ಷೆಗೆ ತೀವ್ರ ವಿರೋಧಗಳನ್ನು ವ್ಯಕ್ತಪಡಿಸುತ್ತಾ ಬಂದಿವೆ. ತಮಿಳು ನಾಡು ಸರಕಾರ ಕೂಡ ನೀಟ್ ವಿರುದ್ಧ ನಿರ್ಣಯ ಅಂಗೀಕರಿಸಿತ್ತು. ನೀಟ್ ಪರೀಕ್ಷಾ ವ್ಯವಸ್ಥೆಯು ಗ್ರಾಮೀಣ ಬಡ ಮಕ್ಕಳ ವೈದ್ಯಕೀಯ ಶಿಕ್ಷಣ ಅವಕಾಶಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಹಾಗೆಯೇ ಶಾಲಾ ಶಿಕ್ಷಣ ವ್ಯವಸ್ಥೆಯ ಉದ್ದೇಶವನ್ನೇ ಪ್ರಶ್ನಿಸುತ್ತದೆ ಎಂದು ರಾಜ್ಯ ಸರಕಾರ ಆತಂಕ ವ್ಯಕ್ತಪಡಿಸಿತ್ತು. ಅಷ್ಟೇ ಅಲ್ಲ, ನೀಟ್ನಿಂದಾಗಿ ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ಅವಕಾಶವನ್ನು ನೂರಾರು ವಿದ್ಯಾರ್ಥಿಗಳು ಕಳೆದುಕೊಂಡಿದ್ದಾರೆ. ಆ ಅವಕಾಶವನ್ನು ಹೊರ ರಾಜ್ಯದ ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡಿದ್ದಾರೆ. ಪರಿಣಾಮವಾಗಿ ಕರ್ನಾಟಕದ ದೊಡ್ಡ ಸಂಖ್ಯೆಯ ಪ್ರತಿಭಾವಂತ ವಿದ್ಯಾರ್ಥಿಗಳು ಉಕ್ರೇನ್ನಂತಹ ದೇಶಗಳಿಗೆ ಹೋಗಿ ವೈದ್ಯಕೀಯ ಶಿಕ್ಷಣವನ್ನು ಪಡೆಯಬೇಕಾಗಿದೆ. ರಶ್ಯವು ಉಕ್ರೇನ್ ಮೇಲೆ ದಾಳಿ ನಡೆಸಿದಾಗ ಇಂತಹ ನೂರಾರು ವಿದ್ಯಾರ್ಥಿಗಳು ಬೀದಿ ಪಾಲಾಗಿರುವುದು ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೊಳಗಾಗಿತ್ತು. ಕರ್ನಾಟಕಕ್ಕೆ ಸಿಇಟಿಯೇ ಅತ್ಯುತ್ತಮ ಎಂದು ರಾಜ್ಯ ಪ್ರತಿಪಾದಿಸುತ್ತಲೇ ಬಂದಿದೆ.
ಉತ್ತರ ಭಾರತದ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾದಾಗಲೆಲ್ಲ ಅದರ ಬಗ್ಗೆ ದಕ್ಷಿಣ ರಾಜ್ಯಗಳ ವಿದ್ಯಾರ್ಥಿಗಳು ಸಂಶಯ ಪಡುತ್ತಿದೆ. ಅಷ್ಟರಮಟ್ಟಿಗೆ ನೀಟ್ನ ವಿಶ್ವಾಸಾರ್ಹತೆಗೆ ಧಕ್ಕೆಯಾಗಿದೆ. ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶದಂತಹ ರಾಜ್ಯಗಳ ಶಿಕ್ಷಣ ವ್ಯವಸ್ಥೆ ಅಕ್ರಮಗಳ ಗೂಡಾಗಿರುವುದರಿಂದ, ಸೋರಿಕೆ ಅವರ ಪಾಲಿಗೆ ಸುಲಭದ ವಿಷಯವಾಗಿದೆ. ಇದರ ನೇರ ಸಂತ್ರಸ್ತರು ದಕ್ಷಿಣ ಭಾರತದ ವಿದ್ಯಾರ್ಥಿಗಳು. ಈ ನಿಟ್ಟಿನಲ್ಲಿ ನೀಟ್ನ ವಿರುದ್ಧ ಮತ್ತೊಮ್ಮೆ ದಕ್ಷಿಣ ಭಾರತದ ರಾಜ್ಯಗಳು ಸಂಘಟಿತವಾಗಿ ಧ್ವನಿಯೆತ್ತುವುದು ಅನಿವಾರ್ಯವಾಗಿದೆ. ಈ ಮೂಲಕ ಶಿಕ್ಷಣ ವ್ಯವಸ್ಥೆ ಮತ್ತು ವೈದ್ಯಕೀಯ ಕ್ಷೇತ್ರದ ಪಾವಿತ್ರ್ಯತೆ ಎರಡನ್ನೂ ಕಾಪಾಡಿಕೊಳ್ಳಲು ಮುಂದಾಗ ಬೇಕಾಗಿದೆ.






