ದಸರಾ ಉತ್ಸವಕ್ಕೆ ಆನೆಗಳ ಬಳಕೆ ಬೇಡ

PC: x.com/CliosChronicles
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಈ ಬಾರಿ ಸೆಪ್ಟೆಂಬರ್ 22ರಿಂದ 11 ದಿನಗಳ ಅದ್ದೂರಿ ದಸರಾ ಉತ್ಸವವನ್ನು ಆಚರಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಕೋವಿಡ್ ಕಾರಣಗಳಿಂದಾಗಿ 2020ರಿಂದ ದಸರಾ ಉತ್ಸವಕ್ಕೆ ಮಂಕು ಕವಿದಿತ್ತು. ಈ ನಿಟ್ಟಿನಲ್ಲಿ 11 ದಿನಗಳ ಅದ್ದೂರಿ ದಸರಾವನ್ನು ಹಿಂದೆಂದಿಗಿಂತ ಭಿನ್ನವಾಗಿ ಆಚರಿಸಲು ಸರಕಾರ ಮುಂದಾಗಿದೆ. 10 ಲಕ್ಷಕ್ಕೂ ಅಧಿಕ ಮಂದಿ ಈ ಬಾರಿಯ ದಸರಾದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, 40 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಕೆಆರ್ಎಸ್ ಅಣೆಕಟ್ಟು ತುಂಬಿ ತುಳುಕುತ್ತಿರುವುದು ಸರಕಾರದ ಉತ್ಸಾಹಕ್ಕೆ ವಿಶೇಷ ಕಾರಣವಾಗಿದೆ. ದಸರಾದ ಚಾರಿತ್ರಿಕ, ಧಾರ್ಮಿಕ, ಸಾಂಸ್ಕೃತಿಕ ಹಿನ್ನೆಲೆಯನ್ನು ಎತ್ತಿ ಹಿಡಿಯಲು ಬಗೆ ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಅಧಿಕಾರಿಗಳಿಗೆ ಸರಕಾರ ಸೂಚನೆ ನೀಡಿದೆ. ಶೀಘ್ರದಲ್ಲೇ ಉದ್ಘಾಟಕರ ಹೆಸರನ್ನು ಅಂತಿಮಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ದಸರಾ ಕೇವಲ ಐತಿಹಾಸಿಕ, ಸಾಂಸ್ಕೃತಿಕ ಹಿನ್ನೆಲೆಯಿಂದಷ್ಟೇ ಅಲ್ಲ, ಪ್ರವಾಸೋದ್ಯಮದ ದೃಷ್ಟಿಯಿಂದಲೂ ಕರ್ನಾಟಕದ ಪಾಲಿಗೆ ಬಹಳ ಮುಖ್ಯವಾಗಿದೆ. ದಸರಾದ ನೆಪದಲ್ಲಿ ವಿಶ್ವ ಮಟ್ಟದ ಪ್ರೇಕ್ಷಕರನ್ನು ಕರ್ನಾಟಕಕ್ಕೆ ಆಕರ್ಷಿಸಲು ಸಾಧ್ಯವಾಗುತ್ತದೆ. ಮೈಸೂರಿನ ಇತಿಹಾಸದ ಜೊತೆಗೆ ಕರ್ನಾಟಕದ ಇತರ ಪ್ರೇಕ್ಷಣೀಯ ಸ್ಥಳಗಳನ್ನು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಲು ದಸರಾ ಉತ್ಸವದ ಮೂಲಕ ಸಾಧ್ಯವಾಗಬೇಕು.
ಇದೇ ಸಂದರ್ಭದಲ್ಲಿ ಲಕ್ಷಾಂತರ ಜನರು ಸೇರುವ ಸ್ಥಳದಲ್ಲಿ ನೂಕುನುಗ್ಗಲು ಸಂಭವಿಸಿದರೆ ಅದರ ಅಂತಿಮ ಪರಿಣಾಮ ಏನಾಗಬಹುದು ಎನ್ನುವುದನ್ನು ಇತ್ತೀಚೆಗಷ್ಟೇ ನಾಡು ಕಣ್ಣಾರೆ ಕಂಡಿದೆ. ಆರ್ಸಿಬಿ ವಿಜಯೋತ್ಸವ ಅಂತಿಮವಾಗಿ ಹಲವರ ಸಾವು ಮತ್ತು ನೋವುಗಳಲ್ಲಿ ಮುಕ್ತಾಯ ಕಂಡಿತ್ತು. ಇಂತಹ ಯಾವುದೇ ಅನಾಹುತಗಳು ಸಂಭವಿಸದಂತೆ ದಸರಾ ಉತ್ಸವದಲ್ಲಿ ಮುನ್ನೆಚ್ಚರಿಕೆಯನ್ನು ವಹಿಸುವುದು ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ದಸರಾದಲ್ಲಿ ಆನೆಗಳನ್ನು ಬಳಸುವ ಬಗ್ಗೆ ರಾಜ್ಯ ಸರಕಾರ ಒಂದು ಸ್ಪಷ್ಟ ತೀರ್ಮಾನಕ್ಕೆ ಬರಬೇಕಾಗಿದೆ. ಲಕ್ಷಾಂತರ ಜನರು ಸೇರುವಲ್ಲಿ ಮನರಂಜನೆಗಾಗಿ ಆನೆಗಳನ್ನು ಬಳಸುವುದು ಎಷ್ಟು ಸರಿ ಎನ್ನುವ ಕುರಿತಂತೆ ಚರ್ಚೆಗಳು ನಡೆಯುತ್ತಲೇ ಇವೆ. ಕೇರಳದಲ್ಲಿ ಆನೆಗಳನ್ನು ಬಂಧಿಸಿಟ್ಟು ಸಾಕುತ್ತಿರುವ ಬಗ್ಗೆ, ಜಾತ್ರೆಗಳಲ್ಲಿ ಆನೆಗಳು ನಡೆಸಿದ ದಾಂಧಲೆಗಳನ್ನು ಮುಂದಿಟ್ಟುಕೊಂಡು ಅಲ್ಲಿನ ಹೈಕೋರ್ಟ್ 2024ರಲ್ಲಿ ತೀರ್ಪನ್ನು ನೀಡಿದೆ. ದೇವಸ್ಥಾನಗಳಲ್ಲಿ ಆನೆಗಳ ಬಳಕೆಯ ಬಗ್ಗೆ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿದ್ದ ಹೈಕೋರ್ಟ್, ಆನೆಗಳು ಧಾರ್ಮಿಕ ಅಗತ್ಯವಲ್ಲ. ಆಡಳಿತ ಮಂಡಳಿಯ ಪೈಪೋಟಿಯೇ ಆನೆಯ ಬಳಕೆಗೆ ಮುಖ್ಯ ಕಾರಣ. ಉತ್ಸವಗಳಲ್ಲಿ ಆನೆಗಳನ್ನು ಬಳಸುವ ಸಂದರ್ಭದಲ್ಲಿ ಅವುಗಳಿಗೆ ಗರಿಷ್ಠ ಹಿಂಸೆಯನ್ನು ನೀಡಲಾಗುತ್ತದೆ. ಇದನ್ನು ನಿಲ್ಲಿಸಬೇಕು ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿತ್ತು. ಹಲವು ಉತ್ಸವಗಳಲ್ಲಿ ಆನೆಗಳು ನಡೆಸಿದ ದಾಂಧಲೆಗಳ ಕಾರಣದಿಂದ ಅಪಾರ ನಾಶ, ನಷ್ಟವುಂಟಾಗಿರುವುದನ್ನೂ ಹೈಕೋರ್ಟ್ ಈ ಸಂದರ್ಭದಲ್ಲಿ ಸ್ಮರಿಸಿಕೊಂಡಿತ್ತು. ಸಾವಿರಾರು ಜನರು ಸೇರುವ ಸ್ಥಳದಲ್ಲಿ ಆನೆಗಳು ದಾಂಧಲೆ ನಡೆಸಿದರೆ ಅದಕ್ಕೆ ಯಾರು ಹೊಣೆ? ಎಂದು ಕೇಳಿತ್ತು. ತಮಿಳುನಾಡಿನಲ್ಲೂ ಆನೆಗಳ ವ್ಯಾಪಕ ಬಳಕೆಯಿದೆ. ಸರ್ಕಸ್ಗಳಲ್ಲಿ ಆನೆಗಳಿಗೆ ನೀಡುವ ಚಿತ್ರ ಹಿಂಸೆಗಳಿಗಿಂತ ಇಲ್ಲಿ ಭಿನ್ನವಾಗಿಯೇನೂ ಇಲ್ಲ. ಆನೆಗಳನ್ನು ಪಳಗಿಸುವ ನೆಪದಲ್ಲಿ ನೀಡುವ ಚಿತ್ರಹಿಂಸೆ, ಸಂಕಲೆಗಳಲ್ಲಿ ಅವುಗಳನ್ನು ಬಂಧಿಸಿಟ್ಟು ನಡೆಸುವ ದೌರ್ಜನ್ಯಗಳ ಬಗ್ಗೆ ಕೇರಳ ಹೈಕೋರ್ಟ್ ತನ್ನ ಆದೇಶದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿತ್ತು.
ಇತ್ತೀಚೆಗೆ ಒಡಿಶಾದಲ್ಲಿ ನಡೆದ ಜಗನ್ನಾಥ ರಥಯಾತ್ರೆಯಲ್ಲಿ ಕಾಲ್ತುಳಿತ ಸಂಭವಿಸಿ ಮೂರು ಜನರು ಮೃತಪಟ್ಟರು. ಈ ಸಂದರ್ಭದಲ್ಲಿ ಪರಿಸ್ಥಿತಿ ಹದಗೆಡಲು ಕೇವಲ ಕಾಲ್ತುಳಿತ ಮಾತ್ರ ಕಾರಣವಲ್ಲ. ಅಲ್ಲಿ ಬಳಸಲ್ಪಟ್ಟ ಆನೆಗಳು ಇದ್ದಕ್ಕಿದ್ದಂತೆ ಹುಚ್ಚೆದ್ದು ಓಡತೊಡಗಿದವು. ಇದರಿಂದ ಇನ್ನಷ್ಟು ಅನಾಹುತಗಳು ಸಂಭವಿಸಿದವು. ಮೈಸೂರಿನ ಜಂಬೂಸವಾರಿಗೆ ತರಬೇತಿ ನೀಡಿರುವ ಆನೆಗಳನ್ನು ಬಳಸಲಾಗುತ್ತದೆ ನಿಜ. ಆದರೆ, ಆನೆಗಳ ಸ್ವಭಾವದ ಬಗ್ಗೆ ಭರವಸೆಯೇನೂ ಇಲ್ಲ. ಒಂದು ವೇಳೆ ಆ ಜನ ಸಮೂಹದ ಮಧ್ಯೆ ಆನೆಗಳು ಯಾವುದೋ ಕಾರಣಕ್ಕೆ ಹುಚ್ಚೆದ್ದು ಬಿಟ್ಟರೆ ಅಲ್ಲಿ ಸಂಭವಿಸಬಹುದಾದ ನೂಕುನುಗ್ಗಲು, ಜನರ ಹಾಹಾಕಾರ, ಕಾಲ್ತುಳಿತ ಇತ್ಯಾದಿಗಳನ್ನು ಕಲ್ಪಿಸಿಕೊಳ್ಳಲೂ ಅಸಾಧ್ಯ. ಅದಕ್ಕೆ ಯಾರನ್ನು ಹೊಣೆ ಮಾಡುವುದು? ಮಾವುತರನ್ನೇ? ಲಕ್ಷಾಂತರ ಮಾವುತರನ್ನೇ? ಲಕ್ಷಾಂತರ ಜನರು ಸೇರುವಲ್ಲಿ ಆನೆಯಂತಹ ವನ್ಯ ಜೀವಿಯನ್ನು ಬಳಸಿದ ಜಿಲ್ಲಾಡಳಿತ ಮತ್ತು ಸರಕಾರವೇ ಅದರ ಹೊಣೆ ಹೊತ್ತುಕೊಳ್ಳಬೇಕಾಗುತ್ತದೆ. ಈಗಾಗಲೇ ಸಂಭವಿಸಿರುವ ಬೆಂಗಳೂರಿನ ಕಾಲ್ತುಳಿತ ದುರಂತದ ಆಘಾತಗಳಿಂದ ಕರ್ನಾಟಕ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಿರುವಾಗ, ಲಕ್ಷಾಂತರ ಜನರು ಸೇರುವ ದಸರಾ ಉತ್ಸವದಲ್ಲಿ ಆನೆಗಳನ್ನು ಬಳಸಿ ಮತ್ತೊಮ್ಮೆ ಆನಾಹುತಗಳನ್ನು ಮೈಮೇಲೆ ಎಳೆದುಕೊಳ್ಳುವುದು ಎಷ್ಟು ಸರಿ? ಈ ಬಗ್ಗೆ ಸರಕಾರ ಗಂಭೀರವಾಗಿ ಯೋಚಿಸಬೇಕು.
ಭಾರತದಲ್ಲಿ ವನ್ಯಜೀವಿ ಕಾಯ್ದೆ ಹೆಸರಿಗಷ್ಟೇ ಇದೆ. ವನ್ಯ ಜೀವಿ ಕಾಯ್ದೆಯನ್ನು ಬಡ ಆದಿವಾಸಿಗಳನ್ನು ಕರಡಿ, ಕೋತಿಯಾಡಿಸುವವರನ್ನು ಬೆದರಿಸಲು ಬಳಕೆ ಮಾಡಲಾಗುತ್ತಿದೆ. ಅಪರೂಪಕ್ಕೆ ಯಾವನೋ ನಟನ ಕೊರಳಲ್ಲಿ ಹುಲಿಯುಗುರು ಕಂಡರೆ ಮಾಧ್ಯಮಗಳು ಸುದ್ದಿ ಮಾಡುತ್ತವೆ. ಹಾಗೆಯೇ ಇಂದು ಜನರ ಮೌಡ್ಯ, ಬೇಜವಾಬ್ದಾರಿ, ಶೋಕಿಗಳಿಗೆ ಹುಲಿ, ಕರಡಿಗಳು ಬಲಿಯಾಗುತ್ತಿರುವುದನ್ನಷ್ಟೇ ವೈಭವೀಕರಿಸಲಾಗುತ್ತಿದೆ. ದೇವಸ್ಥಾನಗಳಲ್ಲಿ, ಉತ್ಸವ, ಜಾತ್ರೆಗಳಲ್ಲಿ ಆನೆಗಳನ್ನು ಬಳಸುವುದನ್ನು ಸಹಜ ಎಂಬಂತೆ ಸ್ವೀಕರಿಸಲಾಗುತ್ತಿದೆ. ಮಾತ್ರವಲ್ಲ ಇದನ್ನು ಬಹಿರಂಗವಾಗಿಯೇ ಸಮರ್ಥಿಸಲಾಗುತ್ತದೆ. ದೇವಸ್ಥಾನಗಳು ತಮ್ಮ ಜಾತ್ರೆಯನ್ನು, ಉತ್ಸವವನ್ನು ಅಂದಗಾಣಿಸಲು ಆನೆಗಳನ್ನು ಬಳಸಬಹುದಾದರೆ, ಕರಡಿಯಾಡಿಸುವವರು, ಕೋತಿ ಆಡಿಸುವವರು ತಮ್ಮ ಹೊಟ್ಟೆಪಾಡಿಗಾಗಿ ವನ್ಯ ಪ್ರಾಣಿಗೆ ತರಬೇತಿ ನೀಡಿ ಅವುಗಳನ್ನು ಯಾಕೆ ಆಡಿಸಬಾರದು? ಭಾರತೀಯರು ಆನೆಗಳನ್ನು ಅತ್ಯಂತ ಪೂಜನೀಯವಾಗಿ ಕಾಣುತ್ತಾರೆ. ಆನೆ ಭಾರತದ ಘನತೆಯಾಗಿದೆ. ಇಂತಹ ಆನೆಗಳನ್ನು ಭಾರತದಷ್ಟು ನಿಕೃಷ್ಟವಾಗಿ ಯಾವ ದೇಶವೂ ನಡೆಸುವುದಿಲ್ಲ ಎಂದು ಅಧ್ಯಯನ ವರದಿ ಹೇಳುತ್ತದೆ. ನಾವೆಲ್ಲರೂ ದಸರಾದಲ್ಲಿ ಜಂಬೂ ಸವಾರಿಯನ್ನು ಸಂಭ್ರಮದಿಂದ ಕಣ್ಣುಂಬಿಕೊಂಡಿದ್ದೇವೆ. ಆದರೆ ಈ ಜಂಬೂ ಸವಾರಿಗೆ ಬಳಕೆಯಾದ ಆನೆಗಳ ಕಣ್ಣಿನಲ್ಲಿ ಆ ಸಂಭ್ರಮಗಳಿದ್ದವೆ? ಆ ಜಂಬೂ ಸವಾರಿ ಸಂದರ್ಭದಲ್ಲಿ ಆನೆಗಳೇನಾದರೂ ಸಿಡಿದೆದ್ದರೆ ನಮ್ಮ ಸಂಭ್ರಮ ಗಳೆಲ್ಲ ನುಚ್ಚು ನೂರಾಗಬಹುದು. ಸುರಕ್ಷತೆಯ ದಸರಾ ಆಚರಣೆ ಇಂದಿನ ಅಗತ್ಯವಾ ಗಿದೆ. ಅದ್ದೂರಿ ಜಂಬೂಸವಾರಿಗಾಗಿ ಜನರ ಪ್ರಾಣವನ್ನು ಒತ್ತೆಯಿಡುವುದು ದುಸ್ಸಾಹಸವೇ ಸರಿ. ಆದುದರಿಂದ ದಸರಾ ಉತ್ಸವದಲ್ಲಿ ಆನೆಗಳ ಬಳಕೆಯನ್ನು ನಿಷೇಧಿಸುವ ಐತಿಹಾಸಿಕ ನಿರ್ಧಾರಕ್ಕೆ ಸರಕಾರ ಇನ್ನಾದರೂ ಮುಂದಾಗಬೇಕು. ಆನೆಗಳ ಮೇಲೆ ನಡೆಯುವ ದೌರ್ಜನ್ಯಗಳಿಗೂ, ಜಂಬೂಸವಾರಿಯ ಹೆಸರಿನಲ್ಲಿ ನಡೆಯುತ್ತಿರುವ ರಾಜ ಪ್ರಭುತ್ವದ ವೈಭವೀಕರಣಕ್ಕೂ ಈ ಮೂಲಕ ಏಕಕಾಲದಲ್ಲಿ ಕೊನೆಹಾಡಬೇಕಾಗಿದೆ.