ಬಿಸಿಯೂಟಕ್ಕೆ ಕಳಪೆ ಪದಾರ್ಥ ಬೇಡ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟದಿಂದ ಅವಕಾಶ ವಂಚಿತ ಬಡ ಕುಟುಂಬದಿಂದ ಬಂದ ಮಕ್ಕಳಿಗೆ ಸಾಕಷ್ಟು ಪ್ರಯೋಜನವಾಗಿದೆ. ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಆಸಕ್ತಿ ಹೆಚ್ಚುವುದರ ಜೊತೆಗೆ ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿರುವ ಮಕ್ಕಳಿಗೆ ತುಂಬಾ ಅನುಕೂಲವಾಗಿದೆ. ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಪ್ರಮಾಣವೂ ಹೆಚ್ಚಾಗಿದೆ. ಆದರೆ ಮಧ್ಯಾಹ್ನದ ಈ ಬಿಸಿಯೂಟಕ್ಕೆ ಪೂರೈಸಲ್ಪಡುವ ಆಹಾರ ಸಾಮಗ್ರಿಗಳ ಗುಣಮಟ್ಟದ ಬಗ್ಗೆ ಹಲವಾರು ಕಡೆಗಳಿಂದ ದೂರುಗಳು ಬಂದಿವೆ. ಈ ವರ್ಷ ಬಿಸಿಯೂಟಕ್ಕೆ ಬಳಸುವ ಬೇಳೆಯ ಗುಣಮಟ್ಟದ ಬಗ್ಗೆ ಆಕ್ಷೇಪಗಳು ಬರುತ್ತಿವೆ. ಮನುಷ್ಯನ ಸ್ವಾರ್ಥ ಎಷ್ಟು ಕೀಳುಮಟ್ಟಕ್ಕೆ ಹೋಗಿದೆಯೆಂದರೆ ಸಣ್ಣ ಮಕ್ಕಳು ಉಣ್ಣುವ ಅನ್ನವನ್ನೂ ಲಪಟಾಯಿಸುತ್ತಿರುವುದು ಅತ್ಯಂತ ಹೇಯ ಕೃತ್ಯವಾಗಿದೆ.
ಸರಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ಒದಗಿಸುವ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಕೋಳಿ ಮೊಟ್ಟೆ, ಬಾಳೆ ಹಣ್ಣು ಮತ್ತು ಹಾಲನ್ನು ನೀಡಲಾಗುತ್ತಿವೆ. ಸಾಮಾಜಿಕ ಕಾಳಜಿಯ ಈ ಯೋಜನೆಯಿಂದಾಗಿ ಮಕ್ಕಳಲ್ಲಿ ಅಪೌಷ್ಟಿಕತೆ ಕಡಿಮೆಯಾಗಿದೆ. ಈ ಯೋಜನೆಯ ಬಗ್ಗೆ ಯಾರ ಆಕ್ಷೇಪವೂ ಇಲ್ಲ. ಆದರೆ ಸರಕಾರದ ಈ ಬಿಸಿಯೂಟ ಯೋಜನೆಗೆ ಪೂರೈಸಲಾಗುವ ಆಹಾರ ಸಾಮಗ್ರಿಗಳಲ್ಲಿ ಅಪ್ರಮಾಣಿಕತೆ ಮಾತ್ರವಲ್ಲ ಭ್ರಷ್ಟಾಚಾರ ಎದ್ದು ಕಾಣುತ್ತಿದೆ. ಮಕ್ಕಳ ಅನ್ನದ ತುತ್ತನ್ನು ಕಸಿಯುವ ಈ ಹಗರಣ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಮಕ್ಕಳ ಬಿಸಿಯೂಟದ ಸಾಮಗ್ರಿಗಳ ಪೂರೈಕೆಯಲ್ಲಿ ಸರಕಾರ ಲಾಭ, ನಷ್ಟದ ಲೆಕ್ಕಾಚಾರ ಮಾಡಬಾರದು. ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಕಳಪೆ ಪದಾರ್ಥಗಳನ್ನು ಬಿಸಿಯೂಟಕ್ಕೆ ಬಳಸುವುದು ಸರಿಯಲ್ಲ.
ಮಾರುಕಟ್ಟೆಯಲ್ಲಿ ಗುಣಮಟ್ಟದ ತೊಗರಿಬೇಳೆ ಬೆಲೆ ಕೆ.ಜಿ.ಗೆ 120ರಿಂದ 140 ರೂಪಾಯಿ, ಸಗಟು ಖರೀದಿ ಮಾಡಿದರೆ 90ರಿಂದ 100 ರೂಪಾಯಿ ಇದೆ. ಆದರೆ ಬಿಸಿಯೂಟಕ್ಕೆ ತೊಗರಿ ಬೇಳೆ ಪೂರೈಸಲು ಗರಿಷ್ಠ 74.40 ರೂಪಾಯಿ ಟೆಂಡರ್ ಆಗಿರುವುದು ಸರಿಯಲ್ಲ. ಬಹುತೇಕ ಜಿಲ್ಲೆಗಳಲ್ಲಿ 71.72 ದರದಲ್ಲಿ ಬೇಳೆಯನ್ನು ಖರೀದಿಸಲಾಗಿದೆ. ಈ ಬೆಲೆಗೆ ಮಾರುಕಟ್ಟೆಯಲ್ಲಿ ಗುಣಮಟ್ಟದ ತೊಗರಿ ಬೇಳೆ ಸಿಗಲು ಸಾಧ್ಯವೇ ಇಲ್ಲ.
ಇನ್ನೊಂದೆಡೆ ಅಡುಗೆಗೆ ಬಳಸುವ ಸೂರ್ಯಕಾಂತಿ ಎಣ್ಣೆಯನ್ನು ಲೀಟರ್‌ಗೆ 141 ರೂಪಾಯಿ ನಿಗದಿ ಪಡಿಸಿ ಖರೀದಿಸಲಾಗುತ್ತಿದೆ. ಮಕ್ಕಳು ಉಣ್ಣುವ ಅನ್ನದ ಬೆಲೆಯಲ್ಲಿ ಇಂಥ ಚೌಕಾಶಿ ಮಾಡಬಾರದು. ಯಾವುದೇ ಸಂದರ್ಭದಲ್ಲಿ ಗುಣಮಟ್ಟದ ಬಗ್ಗೆ ರಾಜಿ ಮಾಡಿಕೊಳ್ಳಕೂಡದು. ಅಷ್ಟೇ ಅಲ್ಲ ಮಕ್ಕಳಿಗೆ ನೀಡುವ ಬಿಸಿಯೂಟವನ್ನು ಮಕ್ಕಳಿಗೆ ಕೇಳಿದಷ್ಟು ಕೊಡಬೇಕು. ಅದರ ಪ್ರಮಾಣವನ್ನು ಕಡಿಮೆ ಮಾಡಬಾರದು.
ಬಡತನದ ಹಿನ್ನೆಲೆಯಿಂದ ಬಂದ ಮಕ್ಕಳ ಶೈಕ್ಷಣಿಕ ಆಸಕ್ತಿ ಕುಂದಬಾರದು ಎಂಬ ಕಾಳಜಿಯಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಜಾರಿಗೆ ತರಲಾಯಿತು. ಇದು ಮೊದಲು ಅನುಷ್ಠಾನಕ್ಕೆ ಬಂದದ್ದು ತಮಿಳುನಾಡಿನಲ್ಲಿ. 1960ರಲ್ಲಿ ಅಂದಿನ ತಮಿಳುನಾಡು ಮುಖ್ಯಮಂತ್ರಿ ಕಾಮರಾಜ ನಾಡಾರ್ ಅವರು ಒಮ್ಮೆ ಕಾರಿನಲ್ಲಿ ಹೊರಟಾಗ ದನ ಕಾಯುತ್ತಿದ್ದ ಐದಾರು ಹುಡುಗರು ದಾರಿಯಲ್ಲಿ ಕಣ್ಣಿಗೆ ಬಿದ್ದರು. ಆಗ ಅವರು ‘‘ನೀವೇಕೆ ಶಾಲೆಗೆ ಹೋಗಿಲ್ಲ’’ ಎಂದು ಕೇಳಿದರು. ಆಗ ಆ ಹುಡುಗರು ‘‘ನಾವು ಶಾಲೆಗೆ ಹೋದರೆ ನಮ್ಮ ಹಸಿವು ನೀಗಿಸಲು ನೀವು ಊಟ ಕೊಡುತ್ತೀರಾ?’’ ಎಂದು ಮಾರುತ್ತರ ನೀಡಿದರು. ಈ ಘಟನೆಯೇ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡಲು ಪ್ರೇರಣೆಯಾಯಿತು. ಮೊದಲು ತಮಿಳುನಾಡಿನಲ್ಲಿ ಆರಂಭವಾದ ಬಿಸಿಯೂಟ ಯೋಜನೆ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕದಲ್ಲೂ ಜಾರಿಗೆ ಬಂತು.
ಬಿಸಿಯೂಟಕ್ಕೆ ಸಂಬಂಧಿಸಿದ ಇನ್ನೊಂದು ಸಮಸ್ಯೆಯೇನೆಂದರೆ ಮಕ್ಕಳಿಗೆ ಅಕ್ಷರ ಕಲಿಸಬೇಕಾದ ಶಿಕ್ಷಕರ ಮೇಲೆ ಬಿಸಿಯೂಟದ ಭಾರವನ್ನು ಹೊರಿಸಲಾಗಿದೆ. ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಒಂದೆಡೆಯಾದರೆ, ಇರುವ ಕಡಿಮೆ ಸಂಖ್ಯೆಯ ಶಿಕ್ಷಕರ ಮೇಲೂ ಬಿಸಿಯೂಟದ ಭಾರವನ್ನು ಹೊರಿಸಲಾಗಿದೆ. ಹೀಗಾಗಿ ತೀವ್ರ ಒತ್ತಡದಲ್ಲಿ ಶಿಕ್ಷಕರು ಕಾರ್ಯ ನಿರ್ವಹಿಸಬೇಕಾಗಿದೆ.
ಸರಕಾರಿ ಶಾಲೆಗಳ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುವ ಜೊತೆಗೆ ಜನಗಣತಿ, ಸಮೀಕ್ಷೆ, ಜಾಗೃತಿ ಅಭಿಯಾನ ಸೇರಿದಂತೆ ಹಲವಾರು ಹೊಣೆಗಾರಿಕೆಗಳನ್ನು ನಿಭಾಯಿಸಬೇಕಾಗಿದೆ. ಬಿಸಿಯೂಟ ಯೋಜನೆ ಜಾರಿಗೆ ಬಂದ ನಂತರ ಅದರ ಜವಾಬ್ದಾರಿಯನ್ನೂ ಶಿಕ್ಷಕರ ಹೆಗಲಿಗೆ ಹಾಕಲಾಗಿದೆ. ಬಿಸಿಯೂಟಕ್ಕೆ ಸೊಪ್ಪು, ತರಕಾರಿಗಳನ್ನು ಬೆಳೆಸಿಕೊಳ್ಳುವುದು ಇಲ್ಲವೇ ತರುವುದು, ಮಾರುಕಟ್ಟೆಯಿಂದ ಮೊಟ್ಟೆಯನ್ನು ತಂದು ಬೇಯಿಸಿ ಮಕ್ಕಳಿಗೆ ನೀಡುವುದು ಸೇರಿದಂತೆ ಹಲವಾರು ಹೊಣೆಗಾರಿಕೆಗಳನ್ನು ಶಿಕ್ಷಕರು ನಿಭಾಯಿಸಬೇಕಾಗಿದೆ.
ಹೀಗೆ ಹಲವಾರು ಜವಾಬ್ದಾರಿಗಳನ್ನು ನಿಭಾಯಿಸುವ ಶಿಕ್ಷಕರು ಮಕ್ಕಳಿಗೆ ಗಮನ ಕೊಟ್ಟು ಕಲಿಸಲು ಆಗುವುದಿಲ್ಲ. ಹೀಗಾಗಿ ಸರಕಾರಿ ಶಾಲೆಗಳ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಕುಸಿತ ಕಂಡು ಬರುತ್ತಿದೆ. ಈ ಕಾರಣಕ್ಕಾಗಿ ಶಿಕ್ಷಕರಿಗೆ ಸರಕಾರದಿಂದ ನೋಟಿಸ್ ಬರುತ್ತದೆ. ನೋಟಿಸ್ ನೀಡುವುದರಿಂದ ಹೆಚ್ಚಿನ ಪ್ರಯೋಜನವಿಲ್ಲ. ಬೋಧಕೇತರ ಕೆಲಸಗಳಿಂದ ಶಿಕ್ಷಕರನ್ನು ಮುಕ್ತಗೊಳಿಸಬೇಕು. ಬಿಸಿಯೂಟ ನಿರ್ವಹಣೆಗೆ ಬೇರೆ ವ್ಯವಸ್ಥೆಯನ್ನು ಮಾಡಬೇಕು. ಕೊರತೆಯಿರುವ ಜಾಗಗಳಲ್ಲಿ ಶಿಕ್ಷಕರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಬೇಕು. ಶಿಕ್ಷಕರು ಅಧ್ಯಯನ ಮಾಡಿ ಮಕ್ಕಳಿಗೆ ಕಲಿಸಲು ಸಮಯವನ್ನು ನಿಗದಿ ಪಡಿಸಬೇಕು.ಇಲ್ಲದಿದ್ದರೆ ಶಿಕ್ಷಣದ ಗುಣಮಟ್ಟ ಕುಸಿಯುತ್ತಾ ಹೋಗುತ್ತದೆ.
ಸರಕಾರಿ ಶಾಲೆಗಳಲ್ಲಿ ಎಲ್ಲ ಸಮುದಾಯಗಳಿಗೆ ಸೇರಿದ ಮಕ್ಕಳು ಅಕ್ಷರ ಕಲಿಯುತ್ತಾರೆ. ಮಕ್ಕಳಿಗೆ ಜಾತಿಭೇದ ಗೊತ್ತಿರುವುದಿಲ್ಲ. ಆದರೆ ಕೆಲವು ಕಡೆ ದಲಿತ ಸಮುದಾಯಕ್ಕೆ ಸೇರಿದ ಮಹಿಳೆಯರು ಬಿಸಿಯೂಟದ ಅಡುಗೆ ಮಾಡಿದ್ದಾರೆಂದು ಕೆಲವು ಸವರ್ಣೀಯ ಪೋಷಕರು ವಿರೋಧಿಸಿದ, ಬಹಿಷ್ಕಾರ ಹಾಕಿದ ಘಟನೆಗಳು ನಡೆದಿವೆ. ಇಂಥದಕ್ಕೆ ಅವಕಾಶ ನೀಡಬಾರದು. ಯಾವುದೇ ಅಡೆತಡೆಯಿಲ್ಲದೇ ಮಕ್ಕಳಿಗೆ ಗುಣಮಟ್ಟದ ಬಿಸಿಯೂಟವನ್ನು ಒದಗಿಸಬೇಕು.ಕಳಪೆ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಕೊಂಡು ಬಿಸಿಯೂಟಕ್ಕೆ ಬಳಸುವವರು ಯಾರೇ ಆಗಿರಲಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು.







