ಸಾರ್ವಜನಿಕ ಆಸ್ತಿ ಮಾರಾಟ ಬೇಡ

Photo credit : AI
ರಾಜ್ಯದ ರಾಜಧಾನಿ ಬೆಂಗಳೂರು ನಿರಂತರವಾಗಿ ನಡೆಯುತ್ತಿರುವ ವಲಸೆಯ ಪರಿಣಾಮವಾಗಿ ತತ್ತರಿಸಿ ಹೋಗಿದೆ. ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಕೆಲ ರಾಜ್ಯಗಳಿಂದ ಪ್ರತಿನಿತ್ಯ ಸಾವಿರಾರು ಜನರು ಉದ್ಯೋಗವನ್ನು ಅರಸಿ ಬೆಂಗಳೂರಿಗೆ ಬರುತ್ತಾರೆ. ಹೀಗಾಗಿ ಎಂಭತ್ತರ ದಶಕದಲ್ಲಿ ಕೇವಲ 30 ಲಕ್ಷದಷ್ಟಿದ್ದ ಉದ್ಯಾನ ನಗರಿಯ ಜನಸಂಖ್ಯೆ ಈಗ ಒಂದೂವರೆ ಕೋಟಿಯಾಗಿದೆ. ಇದರ ಜೊತೆ ಅಗತ್ಯಕ್ಕೆ ತಕ್ಕಂತೆ ವಿಸ್ತಾರಗೊಳ್ಳದ ರಸ್ತೆಗಳಲ್ಲಿ ಸುಮಾರು ಒಂದು ಕೋಟಿ ವಾಹನಗಳು ಓಡಾಡುತ್ತಿವೆ. ಹೀಗಾಗಿ ಉಸಿರಾಡಲೂ ಪರದಾಡಬೇಕಾದ ಪರಿಸ್ಥಿತಿ ಬಂದಿದೆ.
ಇಂಥ ಪರಿಸ್ಥಿತಿಯಲ್ಲಿ ಸಾರ್ವಜನಿಕ ಬಳಕೆಗೆ ಸಾಕಷ್ಟು ಭೂಮಿಯ ಅಗತ್ಯವಿದೆ. ಆದರೆ ಸಾರ್ವಜನಿಕರಿಗೆ ಅಗತ್ಯವಿರುವ ಭೂಮಿ ಕಾಣೆಯಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಭಾರತ ಟೆಲಿಫೋನ್ ಇಂಡಸ್ಟ್ರಿಗೆ (ಐಟಿಐ)ಸೇರಿದ 44 ಎಕರೆ ಭೂಮಿಯನ್ನು ಖಾಸಗಿಯವರಿಗೆ ಹರಾಜಿನ ಮೂಲಕ ವಿಲೇವಾರಿ ಮಾಡಲು ತಯಾರಿ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಹಳೆಯ ಮದ್ರಾಸ್ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಿರುವ ಈ ಭೂಮಿಯನ್ನು ರಾಷ್ಟ್ರೀಯ ಭೂ ನಗದೀಕರಣ ನಿಗಮವು 1,685.4 ಕೋಟಿ ರೂ. ಬೆಲೆಯನ್ನು ನಿಗದಿ ಪಡಿಸಿ ಇ-ಹರಾಜಿಗೆ ಇರಿಸಿದೆ. ಇದಕ್ಕಿಂತ ಮೊದಲು 21 ಎಕರೆ ಭೂಮಿಯನ್ನು ರೂ. 914.31 ಕೋಟಿಗೆ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಇಲಾಖೆಗೆ ಐಟಿಐ ಮಾರಾಟ ಮಾಡಿತ್ತು. ಈಗ ಮತ್ತೆ ಐಟಿಐನ ಜಾಗದ ಮಾರಾಟ ಪ್ರಕ್ರಿಯೆ ವಿವಾದಕ್ಕೆ ಕಾರಣವಾಗಿದೆ. ಇದು ಸಂಪನ್ಮೂಲಗಳ ದುರುಪಯೋಗ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಟುವಾಗಿ ಟೀಕಿಸಿರುವುದರಲ್ಲಿ ಅತಿಶೋಕ್ತಿಯೇನಿಲ್ಲ. ಮುಖ್ಯಮಂತ್ರಿಗಳ ಆಕ್ರೋಶಕ್ಕೂ ಒಂದು ಸಕಾರಣವಿದೆ. 1948ರಲ್ಲಿ ಹಿಂದಿನ ಮೈಸೂರು ಸಂಸ್ಥಾನವು ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ಐಟಿಐಗೆ ನೀಡಿತ್ತು. ರಾಜ್ಯದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಸದುದ್ದೇಶದಿಂದ ಉತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿರುವ ಕೈಗಾರಿಕೆಗಳಿಗೆ ಮೈಸೂರು ಸಂಸ್ಥಾನ ಈ ಭೂಮಿಯನ್ನು ನೀಡಿತ್ತು. ಈಗ ನಷ್ಟದಲ್ಲಿ ಇರುವ ಸಾರ್ವಜನಿಕ ಉದ್ಯಮಗಳ ಬಳಿ ಇರುವ ಹೆಚ್ಚುವರಿ ಭೂಮಿಯ ಮೌಲ್ಯವನ್ನು ಅನಾವರಣಗೊಳಿಸುವುದು ಕೇಂದ್ರದ ಆಸ್ತಿ ನಗದೀಕರಣ ನೀತಿಯ ಉದ್ದೇಶವಾಗಿದೆ. ಆದರೆ ರಿಯಲ್ ಎಸ್ಟೇಟ್ ಮೌಲ್ಯದ ಕಾರಣಕ್ಕಾಗಿ ಈಗಿರುವ ಆಸ್ತಿಯನ್ನು ಮಾರಾಟ ಮಾಡುವುದನ್ನು ಸಮರ್ಥಿಸುವುದು ಸರಿಯಲ್ಲ.
ವಾಸ್ತವವಾಗಿ ಈ ಭೂಮಿ ನಿರ್ದಿಷ್ಟ ಸಾರ್ವಜನಿಕ ಉದ್ದೇಶಕ್ಕಾಗಿ ನೀಡಿದ ಭೂಮಿಯಾಗಿದೆ. ರಾಜ್ಯ ಸರಕಾರದ ಒಪ್ಪಿಗೆಯಿಲ್ಲದೆ ಖಾಸಗಿ ವ್ಯಾಪಾರಿ ಆಸ್ತಿಯಾಗಿ ಇದನ್ನು ಪರಿವರ್ತಿಸುವುದು ಸರಿಯಲ್ಲ ಎಂಬ ಕಂದಾಯ ಇಲಾಖೆಯ ವಾದ ಸಮರ್ಪಕವಾಗಿದೆ. ಐಟಿಐ ವಿಲೇವಾರಿ ಮಾಡಲು ಹೊರಟಿರುವ ಭೂಮಿಯನ್ನು ತನ್ನ ವಶಕ್ಕೆ ವಾಪಸು ಪಡೆಯಲು ಸರಕಾರ ಮುಂದಾಗಿದೆ. ಹೀಗಾಗಿ ಭೂಮಿಯ ಮಾಲಕತ್ವ ಹಾಗೂ ಅದರ ಮಾರುಕಟ್ಟೆ ಮೌಲ್ಯ ವಿವಾದದಲ್ಲಿದೆ. ಹಾಗಾಗಿಯೇ ಹರಾಜಿನಲ್ಲಿ ಭಾಗವಹಿಸಬಾರದು ಎಂದು ಸಂಭಾವ್ಯ ಖರೀದಿದಾರರಿಗೆ ಸರಕಾರ ಎಚ್ಚರಿಕೆ ನೀಡಿದೆ
ಇಷ್ಟೇ ಅಲ್ಲ ಸದರಿ ಆಸ್ತಿಗೆ ಹೊಂದಿಕೊಂಡಿರುವ ಹಾಗೂ ಸಾಗುವಳಿ ಮಾಡಲು ಯೋಗ್ಯವಲ್ಲದ ಖರಾಬ್ ಭೂಮಿಯನ್ನು ಹರಾಜು ಪ್ರಕ್ರಿಯೆಯಲ್ಲಿ ಸೇರಿಸಿರುವ ಬಗ್ಗೆ ಸಹಜವಾಗಿ ಆಕ್ಷೇಪ ವ್ಯಕ್ತವಾಗಿದೆ. ಈ ಭೂಮಿಯ ಮಾಲಕತ್ವ ರಾಜ್ಯದ್ದಾಗಿದೆ ಎಂದು ರಾಜ್ಯ ಸರಕಾರ ಸರಿಯಾಗಿ ಪ್ರತಿಪಾದಿಸಿದೆ. ಹಿಂದಿನ ಹಿಂದೂಸ್ತಾನ್ ಮೆಷೀನ್ ಟೂಲ್ಸ್ (ಎಚ್.ಎಂ.ಟಿ.) ಅನುಭವ ಐಟಿಐ ವಿಷಯದಲ್ಲಿ ರಾಜ್ಯ ಸರಕಾರಕ್ಕೆ ಎಚ್ಚರಿಕೆಯ ಪಾಠವಾಗಬೇಕಾಗಿದೆ. ಎಚ್.ಎಂ.ಟಿ.ಯ ಬಳಿ ಇದ್ದ 430 ಎಕರೆಗೂ ಜಾಸ್ತಿಯಿದ್ದ ಭೂಮಿ ಮೂಲತಃ ಅರಣ್ಯ ಪ್ರದೇಶವಾಗಿದೆ. ಅದನ್ನು ಕಾನೂನು ಬದ್ಧವಾಗಿ ಅರಣ್ಯ ಪ್ರದೇಶದ ವ್ಯಾಪ್ತಿಯಿಂದ ಎಂದಿಗೂ ಕೈ ಬಿಟ್ಟಿರಲಿಲ್ಲ ಎಂದು ಸರಕಾರ ಪ್ರತಿಪಾದಿಸಿತ್ತು. ಆದರೂ ಎಚ್.ಎಂ.ಟಿ.ಗೆ ಸೇರಿದ ಭೂಮಿಯ ಕೆಲವು ಭಾಗಗಳನ್ನು ಖಾಸಗಿಯವರಿಗೆ ವರ್ಗಾಯಿಸಲಾಗಿದೆ.ಅಲ್ಲಿ ಅಪಾರ್ಟ್ಮೆಂಟ್ಗಳು ನಿರ್ಮಾಣಗೊಂಡಿವೆ. ಈ ಅಪಾರ್ಟ್ಮೆಂಟ್ಗಳನ್ನು ಖರೀದಿಸಿದವರು ಕಾನೂನಿನ ಬಲೆಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದಾರೆ. ಈ ಪರಿಸ್ಥಿತಿ ಐಟಿಐ ವಿಷಯದಲ್ಲಿ ಮರು ಕಳಿಸಲು ಅವಕಾಶ ನೀಡಬಾರದು.
ಬೆಳೆಯುತ್ತಿರುವ ಬೆಂಗಳೂರಿಗೆ ಸಾರ್ವಜನಿಕ ಸೌಕರ್ಯಗಳು ಹಾಗೂ ಸಂಪೂರ್ಣ ಮುಕ್ತ ಪ್ರದೇಶದ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಇಂಥ ಪರಿಸ್ಥಿತಿಯಲ್ಲಿ ಐಟಿಐ ಭೂಮಿಯನ್ನು ಖಾಸಗಿಯವರಿಗೆ ಬಿಟ್ಟುಕೊಡುವ ವಿಚಾರದಲ್ಲಿ ದುಡುಕಿನ ತೀರ್ಮಾನವನ್ನು ತೆಗೆದುಕೊಳ್ಳಬಾರದು. ಮಳೆಗಾಲದಲ್ಲಿ ಮಳೆಯಿಂದ ಉಂಟಾಗುವ ಪ್ರವಾಹ ಪರಿಸ್ಥಿತಿ ಹಾಗೂ ಸಂಚಾರ ದಟ್ಟಣೆ ಮತ್ತು ಪರಿಸರ ಮಾಲಿನ್ಯ ಹಾಗೂ ಅಸಮರ್ಪಕ ನಾಗರಿಕ ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿರುವ ಬೆಂಗಳೂರು ಮಹಾ ನಗರದಲ್ಲಿ ಪ್ರಸ್ತುತ ಲಭ್ಯವಿರುವ ಖಾಲಿ ಪ್ರದೇಶಗಳು ಕೂಡ ಕಾಂಕ್ರಿಟ್ ಕಟ್ಟಡಗಳು ಹಾಗೂ ಅಪಾರ್ಟ್ಮೆಂಟ್ಗಳಾಗಿ ಬದಲಾಗುವುದನ್ನು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ.
ಈಗ ಏನೇ ಆಗಿರಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುವಾಗ ಮುಂದಿನ ತಲೆಮಾರುಗಳನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನಗಳನ್ನು ಕೈಗೊಳ್ಳಬೇಕು. ಈಗಾಗಲೇ ಈ ಮಹಾನಗರದ ಬಹುತೇಕ ಕೆರೆಗಳನ್ನು ನುಂಗಿ ನೀರು ಕುಡಿದಂತಾಗಿದೆ. ಕಾಂಕ್ರಿಟ್ ಕಾಡಾಗಿ ಬದಲಾಗಿರುವ ಬೆಂಗಳೂರಿನಲ್ಲಿ ಉಸಿರಾಡಲು ಶುದ್ಧ ಗಾಳಿ ಕೂಡ ಸಿಗದಂತಾಗಿದೆ. ಹಾಗಾಗಿ ಕೆಲವೇ ಕೆಲವೆಡೆ ಉಳಿದಿರುವ ಖಾಲಿ ಜಾಗಗಳಲ್ಲಿ ವಿಶಾಲ ಉದ್ಯಾನಗಳನ್ನಾಗಿ ಬದಲಿಸಬೇಕಾಗಿದೆ ಹಾಗೂ ಸಾರ್ವಜನಿಕರ ದೀರ್ಘಕಾಲೀನ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಖಾಲಿ ಜಾಗಗಳನ್ನು ಬಳಸಿಕೊಳ್ಳಬೇಕಾಗಿದೆ. ಐಟಿಐಗೆ ಸೇರಿದ ಭೂಮಿಯನ್ನು ಪರಭಾರೆ ಮಾಡುವುದನ್ನು ತಡೆಯಲು ಸರಕಾರ ತಕ್ಷಣಕ್ಕೆ ನ್ಯಾಯಾಲಯದ ಮೆಟ್ಟಿಲು ಹತ್ತಿ ತಡೆಯಾಜ್ಞೆ ತರಬೇಕು. ಯಾವುದೇ ಸಾರ್ವಜನಿಕ ಜಾಗ ಒಮ್ಮೆ ಕಾಂಕ್ರಿಟ್ ಕಟ್ಟಡವಾಗಿ ಬದಲಾದರೆ ಅದನ್ನು ಮೂಲ ಸ್ವರೂಪದಲ್ಲಿ ಮರಳಿ ಪಡೆಯುವುದು ಸಾಧ್ಯವಿಲ್ಲ. ಬೆಂಗಳೂರಿನ ಮತ್ತೊಂದು ಅಮೂಲ್ಯ ಪ್ರದೇಶ ಶಾಶ್ವತವಾಗಿ ಕಳೆದು ಹೋಗಲು ಅವಕಾಶ ನೀಡಬಾರದು. ದೃಢವಾದ ತೀರ್ಮಾನವನ್ನು ಕೈಗೊಳ್ಳುವುದು ತುರ್ತು ಅಗತ್ಯವಾಗಿದೆ.






