ಯುದ್ಧವಲ್ಲ, ನರಮೇಧ!

PC: x.com/sardesairajdeep
ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ನಲ್ಲಿ ಯುದ್ಧದ ಹೆಸರಿನಲ್ಲಿ ಶಾಲೆಯೊಂದರ ಮೇಲೆ ಕ್ಷಿಪಣಿ ದಾಳಿ ನಡೆಸಿ ನೂರಕ್ಕೂ ಅಧಿಕ ಹೆಣ್ಣು ಮಕ್ಕಳನ್ನು ಬಲಿತೆಗೆದುಕೊಂಡ ಕೃತ್ಯದಿಂದ ಜಗತ್ತು ಇನ್ನೂ ಚೇತರಿಸಿಲ್ಲ. ಇತ್ತ ಪಾಕಿಸ್ತಾನ ಅಫ್ಘಾನಿಸ್ತಾನದ ಆಸ್ಪತ್ರೆಯೊಂದರ ಮೇಲೆ ದಾಳಿ ನಡೆಸಿ 400ಕ್ಕೂ ಅಧಿಕ ಮಂದಿಯನ್ನು ಕೊಂದು ಹಾಕಿದೆ. ಮಾದಕ ವ್ಯಸನಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ನಗರದ ಆಸ್ಪತ್ರೆಯೊಂದರ ಮೇಲೆ ಪಾಕಿಸ್ತಾನ ಪಡೆಗಳು ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 440 ಮಂದಿ ಮೃತಪಟ್ಟು 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಸರಕಾರ ಪ್ರಕಟಿಸಿದೆ.
ಮಾದಕ ವ್ಯಸನಕ್ಕಿಂತಲೂ ಅಪಾಯಕಾರಿಯಾದುದು ಯುದ್ಧವೆಂಬ ವ್ಯಸನ. ಇರಾನ್ನಲ್ಲಿ ಮಕ್ಕಳ ಮೇಲೆ ನಡೆದ ನರಮೇಧ ಮತ್ತು ಅಫ್ಘಾನಿಸ್ತಾನದಲ್ಲಿ ರೋಗಿಗಳ ಮಾರಣ ಹೋಮ ಕೃತ್ಯಗಳೆರಡೂ ಅಮೆರಿಕದ ಕಿರೀಟಕ್ಕೆ ಜೋಡಿಸಿದ ರಕ್ತಸಿಕ್ತ ಗರಿಗಳು.
ಯುದ್ಧದ ಹೆಸರಿನಲ್ಲಿ ನಡೆದ ಈ ನರಮೇಧಗಳನ್ನ್ನು ಜಗತ್ತು ಸಹಿಸಿಕೊಂಡಿರುವುದನ್ನು ನೋಡಿ ಗೋರಿಯೊಳಗಿರುವ ಹಿಟ್ಲರ್ ಗಹಗಹಿಸಿ ನಗುತ್ತಿರಬಹುದು. ಹಿಟ್ಲರ್ ನಡೆಸಿದ ನರಮೇಧಗಳೇ ಎರಡನೇ ಮಹಾಯುದ್ಧಕ್ಕೆ ಕಾರಣ ಎಂದು ನಾವೆಲ್ಲ ನಂಬಿಕೊಂಡು ಬಂದಿದ್ದೇವೆ. ಆದರೆ ಇಸ್ರೇಲ್ ಕೆಲವು ವರ್ಷಗಳಿಂದ ಗಾಝಾದಲ್ಲಿ ನಡೆಸುತ್ತಾ ಬಂದಿರುವ ಮಕ್ಕಳು ಮತ್ತು ಮಹಿಳೆಯರ ನರಮೇಧದ ಮುಂದೆ ಹಿಟ್ಲರ್ ಅಮಾಯಕನಂತೆ ಗೋಚರಿಸುತ್ತಾನೆ. ತಾನು ಮಾಡಿದ ಕೃತ್ಯಕ್ಕಾಗಿ ಹಿಟ್ಲರ್ ಇತಿಹಾಸದಲ್ಲಿ ನರಹಂತಕನಾಗಿ ದಾಖಲಾಗಿದ್ದಾನೆ. ಆದರೆ, ಇಂದು ಗಾಝಾ, ಇರಾನ್, ಅಫ್ಘಾನಿಸ್ತಾನದಲ್ಲಿ ಅಮಾಯಕರ ಮಾರಣ ಹೋಮ ನಡೆಸುತ್ತಿರುವ ಅಮೆರಿಕ ತನ್ನನ್ನು ತಾನು ಜಗದ್ರಕ್ಷಕ ಎಂದು ಬಿಂಬಿಸಿಕೊಳ್ಳುವ ಪ್ರಯತ್ನದಲ್ಲಿದೆ. ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಮಾರಣಹೋಮದ ಬಗ್ಗೆ ಅರಿವಿದ್ದೂ ಅದರ ವಿರುದ್ಧ ಧ್ವನಿಯೆತ್ತಲಾಗದ ಸ್ಥಿತಿಯಲ್ಲಿದೆ ಜಗತ್ತು. ರಶ್ಯ ಮತ್ತು ಚೀನಾದಂತಹ ಬಲಾಢ್ಯ ದೇಶಗಳು ಈ ರಕ್ತದಮಡುವಿನಲ್ಲಿ ಮೀನು ಹಿಡಿಯುವ ಕೆಲಸವನ್ನಷ್ಟೇ ಮಾಡುತ್ತಿದೆ.
2014ರಲ್ಲಿ ಅಫ್ಘಾನಿಸ್ತಾನಕ್ಕಾಗಿ ತಾಲಿಬಾನ್ ಹೋರಾಟಗಾರರು ಅಮೆರಿಕದ ವಿರುದ್ಧ್ದ ಹೋರಾಟ ನಡೆಸುತ್ತಿರುವಾಗ, ಉಗ್ರರು ಪಾಕಿಸ್ತಾನದ ಸೇನಾ ನೆಲೆಯಲ್ಲಿರುವ ಶಾಲೆಯೊಂದರ ಮೇಲೆ ದಾಳಿ ನಡೆಸಿದ್ದರು. 130ಕ್ಕೂ ಅಧಿಕ ಮಕ್ಕಳು ಈ ದಾಳಿಗೆ ಬಲಿಯಾಗಿದ್ದರು. ಪಾಕಿಸ್ತಾನ ಸೇನೆಯು ನಡೆಸುತ್ತಿರುವ ಉಗ್ರ ವಿರೋಧಿ ಕಾರ್ಯಾಚರಣೆಗೆ ಪ್ರತಿಯಾಗಿ ಈ ದಾಳಿಯನ್ನು ನಡೆಸಿದ್ದೇವೆ ಎಂದು ತಾಲಿಬಾನ್ ಹೋರಾಟಗಾರರು ಸಮರ್ಥಿಸಿಕೊಂಡಿದ್ದರು. ಅದಾಗಲೇ ಉಗ್ರರ ವಿರುದ್ಧದ ಕಾರ್ಯಾಚರಣೆಯ ಹೆಸರಿನಲ್ಲಿ ಅಮೆರಿಕ ಮತ್ತು ಪಾಕಿಸ್ತಾನ ಪಡೆಗಳಿಗೆ ಅಫ್ಘಾನಿಸ್ತಾನದ ನೂರಾರು ಮಕ್ಕಳು ಬಲಿಯಾಗಿದ್ದರು. ಆದರೆ ಅವೆಲ್ಲವನ್ನೂ ಅಮೆರಿಕ ‘ಉಗ್ರ ವಿರೋಧಿ ಕಾರ್ಯಾಚರಣೆ’ಯ ಹೆಸರಿನಲ್ಲಿ ದಕ್ಕಿಸಿಕೊಂಡಿತ್ತು. ತಾಲಿಬಾನ್ ಉಗ್ರರು ಶಾಲಾ ಮಕ್ಕಳ ಮೇಲೆ ನಡೆದ ದಾಳಿಯನ್ನು ಇಡೀ ಜಗತ್ತು ವಿರೋಧಿಸಿತ್ತು ಮಾತ್ರವಲ್ಲ, ಭಯೋತ್ಪಾದನೆಯ ಜೊತೆಗೆ ಧರ್ಮವನ್ನು ತಳಕು ಹಾಕಿ ಜಗತ್ತು ಅತ್ಯುತ್ಸಾಹದಿಂದ ಚರ್ಚಿಸಿತ್ತು. ಆದರೆ ಅಮೆರಿಕ ಎಲ್ಲವನ್ನೂ ಸರ್ವನಾಶ ಮಾಡಿ ಅಂತಿಮವಾಗಿ ಅಫ್ಘಾನಿಸ್ತಾನವನ್ನು ತಾಲಿಬಾನ್ಗಳ ಕೈಗೆ ಒಪ್ಪಿಸಿ ಪಲಾಯನ ಮಾಡಿತು.
ತಾಲಿಬಾನ್ ಸರಕಾರ ರಚನೆಯಾದ ದಿನದಿಂದ ಅಫ್ಘಾನಿಸ್ತಾನ ಮತ್ತೆ ನಿಧಾನಕ್ಕೆ ಚೇತರಿಸತೊಡಗಿತ್ತು ಮಾತ್ರವಲ್ಲ, ಇತರ ದೇಶಗಳ ಜೊತೆಗೆ ಸಂಬಂಧ ಸುಧಾರಣೆಗೆ ಆದ್ಯತೆ ನೀಡತೊಡಗಿತ್ತು. ಭಾರತವೂ ಅಫ್ಘಾನಿಸ್ತಾನದ ತಾಲಿಬಾನ್ ಸರಕಾರದ ಜೊತೆಗೆ ಕೈ ಜೋಡಿಸಿತು. ಯಾಕೆಂದರೆ, ಭಾರತವು ಅಫ್ಘಾನಿಸ್ತಾನದಲ್ಲಿ ಭಾರೀ ಹೂಡಿಕೆಯನ್ನು ಮಾಡಿದೆ. ಆದರೆ ಅಮೆರಿಕದ ಹಸ್ತಕ್ಷೇಪ ಮತ್ತೆ ಅಫ್ಘಾನಿಸ್ತಾನವನ್ನು ವಿಚ್ಛಿದ್ರಗೊಳಿಸತೊಡಗಿದೆ. ಪಾಕಿಸ್ತಾನವನ್ನು ಮುಂದಿಟ್ಟುಕೊಂಡು ಅಮೆರಿಕ ಪರೋಕ್ಷ ಯುದ್ಧವನ್ನು ಮಾಡುತ್ತಿದೆ. ಅದರ ಭಾಗವಾಗಿಯೇ ಇದೀಗ ಪಾಕಿಸ್ತಾನವು ಅಫ್ಘಾನಿಸ್ತಾನದ ಆಸ್ಪತ್ರೆಯೊಂದರ ಮೇಲೆ ದಾಳಿ ನಡೆಸಿದೆ.
ಇತ್ತೀಚೆಗೆ ಅಫ್ಘಾನಿಸ್ತಾನವು ಭಾರತಕ್ಕೆ ಹತ್ತಿರವಾಗುತ್ತಿರುವುದು ಪಾಕಿಸ್ತಾನಕ್ಕೆ ಸಹ್ಯವಾಗುತ್ತಿಲ್ಲ. ಇದೇ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ದಾಳಿಯಲ್ಲಿ ತಾಲಿಬಾನ್ಗಳ ಕೈವಾಡವನ್ನು ಪಾಕಿಸ್ತಾನ ಶಂಕಿಸುತ್ತಿದೆ. ಜೊತೆಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಅಮೆರಿಕಕ್ಕೆ ಜೀ ಹುಜೂರ್ ಎನ್ನಲೇ ಬೇಕಾದಂತಹ ಅನಿವಾರ್ಯ ಸ್ಥಿತಿಗೆ ಪಾಕಿಸ್ತಾನ ಬಂದು ನಿಂತಿದೆ. ಇರಾನ್ನ ವಿರುದ್ಧ ದಾಳಿ ನಡೆಸಲು ಇಸ್ರೇಲ್ ಒಡ್ಡಿದ ನೆಪವನ್ನೇ, ಅಫ್ಘಾನಿಸ್ತಾನದ ವಿರುದ್ಧ ದಾಳಿ ನಡೆಸಲು ಪಾಕಿಸ್ತಾನ ಮುಂದಿಟ್ಟಿದೆ. ಸ್ವತಃ ಪಾಕಿಸ್ತಾನವೇ ಬಿತ್ತಿ ಬೆಳೆದ ಫಸಲು ತಾಲಿಬಾನ್ಗಳು. ಅಫ್ಘಾನಿಸ್ತಾನದಲ್ಲಿ ರಶ್ಯದ ವಿರುದ್ಧ ತಾಲಿಬಾನ್ಗಳು ಹೋರಾಡುತ್ತಿದ್ದಾಗ ಇದೇ ಅಮೆರಿಕ ಅವರನ್ನು ‘ಸ್ವಾತಂತ್ರ್ಯ ಹೋರಾಟಗಾರರು’ ಎಂದು ಕರೆದಿತ್ತು. ಅಮೆರಿಕವು ಪಾಕಿಸ್ತಾನದ ಮೂಲಕ ತಾಲಿಬಾನ್ಗಳನ್ನು ಪೋಷಿಸಿತ್ತು. ಇಂದು ಅದೇ ಅಮೆರಿಕವು ಪಾಕಿಸ್ತಾನದ ಮೂಲಕವೇ ತಾಲಿಬಾನ್ ಸರಕಾರದ ಮೇಲೆ ದಾಳಿ ನಡೆಸುತ್ತಿದೆ. ಆದರೆ, ಅದಕ್ಕೆ ಮತ್ತೆ ಬಲಿಯಾಗುತ್ತಿರುವುದು ಅಘ್ಘಾನಿಸ್ತಾನದ ಅಮಾಯಕರು. ಒಂದು ಕಾಲದಲ್ಲಿ ತಾಲಿಬಾನ್ಗಳು ಪಾಕಿಸ್ತಾನದ ಶಾಲಾ ಮಕ್ಕಳ ಮೇಲೆ ದಾಳಿ ನಡೆಸಿದ ಕೃತ್ಯವನ್ನು ಖಂಡಿಸಿದ್ದ ಜಗತ್ತು, ಇಂದು ಪಾಕಿಸ್ತಾನವು ಅಫ್ಘಾನಿಸ್ತಾನದಲ್ಲಿ ಎಸಗಿದ ಈ ನರಮೇಧದ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಯುದ್ಧದ ಹೆಸರಿನಲ್ಲಿ ಅಮಾಯಕ ಮಕ್ಕಳು, ರೋಗಿಗಳನ್ನು ಕೊಲ್ಲುವುದು ಭಯೋತ್ಪಾದನಾ ಕೃತ್ಯದಷ್ಟೇ ನೀಚತನದಿಂದ ಕೂಡಿದ್ದು. ಉಗ್ರರು ಎಸಗಿದಾಗ ಖಂಡನಾರ್ಹವಾದ ಕೃತ್ಯ, ದೇಶವೊಂದು ಯುದ್ಧ ಹೆಸರಿನಲ್ಲಿ ನಡೆಸಿದಾಗ ಅದು ಮಾನ್ಯವಾಗಬಾರದು.
ಪಾಕಿಸ್ತಾನವು ಅಫ್ಘಾನಿಸ್ತಾನದ ಮೇಲೆ ನಡೆಸಿದ ದಾಳಿಯನ್ನು ಭಾರತವು ತೀವ್ರವಾಗಿ ಖಂಡಿಸಿದೆ. ತಾಲಿಬಾನ್ ಸರಕಾರದ ಜೊತೆಗಿನ ಭಾರತದ ಸಂಬಂಧವೂ ಸಾಕಷ್ಟು ಚರ್ಚೆ, ಟೀಕೆಗಳಿಗೆ ಗುರಿಯಾಗಿದೆ. ತಾಲಿಬಾನ್ಗಳನ್ನು ತೋರಿಸಿ ಭಾರತದ ಮುಸ್ಲಿಮರ ತಲೆಗೆ ಭಯೋತ್ಪಾದಕ ಪಟ್ಟ ಕಟ್ಟಲು ತುದಿಗಾಲಲ್ಲಿ ನಿಂತಿರುವ ನಾಯಕರೇ ತಾಲಿಬಾನ್ ಸರಕಾರದ ಜೊತೆಗೆ ಕೈಜೋಡಿಸಿರುವುದರ ಬಗ್ಗೆ ಸ್ವತಃ ಬಿಜೆಪಿಯೊಳಗೇ ಅಸಮಾಧಾನವಿದೆ. ಅಫ್ಘಾನಿಸ್ತಾನದಲ್ಲಿ ಅಮಾಯಕರ ಮೇಲಿನ ದಾಳಿಯ ವಿರುದ್ಧ ಭಾರತದ ಖಂಡನೆ ಪ್ರಾಮಾಣಿಕವೇ ಆಗಿದ್ದರೆ, ಇರಾನ್ನ ನೂರಕ್ಕೂ ಅಧಿಕ ವಿದ್ಯಾರ್ಥಿನಿಯರ ಹತ್ಯಾಕಾಂಡದ ಕುರಿತಂತೆ ಭಾರತ ಯಾಕೆ ಇನ್ನೂ ಮೌನವಾಗಿದೆ ಎನ್ನುವ ಪ್ರಶ್ನೆಯೇಳುತ್ತದೆ. ಅಫ್ಘಾನಿಸ್ತಾನಕ್ಕೆ ಹೋಲಿಸಿದರೆ ಇರಾನ್ ಭಾರತಕ್ಕೆ ಹೆಚ್ಚು ನಿಕಟವಾಗಿರುವ ದೇಶ. ಎರಡೂ ದೇಶಗಳ ನಡುವೆ ನಡೆಯುತ್ತಿರುವ ವ್ಯಾಪಾರಗಳ ಮೇಲೆ ಈ ದಾಳಿ ಭಾರೀ ದುಷ್ಪರಿಣಾಮ ಬೀರಿದೆ. ಅದನ್ನು ಭಾರತದ ಜನರು ಬೇರೆ ಬೇರೆ ರೂಪದಲ್ಲಿ ಈಗಾಗಲೇ ಅನುಭವಿಸತೊಡಗಿದ್ದಾರೆ. ಈ ಕಾರಣದಿಂದಲೇ, ಇರಾನ್ಗೆ ಬೆಂಬಲ ವ್ಯಕ್ತಪಡಿಸದೇ ಇದ್ದರೂ, ಇರಾನ್ನ ಅಮಾಯಕ ಮಕ್ಕಳ ಮೇಲೆ, ನಾಗರಿಕರ ಮೇಲೆ ನಡೆದ ದಾಳಿಯನ್ನು ಭಾರತ ಖಂಡಿಸುವ ನೈತಿಕ ಸ್ಥೈರ್ಯವನ್ನು ಪ್ರದರ್ಶಿಸಬೇಕಾಗಿತ್ತು. ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿರುವುದು ಪಾಕಿಸ್ತಾನವೇ ಆಗಿದ್ದರೂ ಅದಕ್ಕೆ ಕುಮ್ಮಕ್ಕು ನೀಡಿರುವುದು ಮತ್ತೆ ಅಮೆರಿಕವೇ ಆಗಿದೆ. ಇಂದು ಎಲ್ಲ ಉಗ್ರಗಾಮಿ ಸಂಘಟನೆಗಳನ್ನು ಮೀರಿಸುವ ಉಗ್ರವಾದಿಯಾಗಿ, ಭಯೋತ್ಪಾದಕನಾಗಿ ಅಮೆರಿಕ ಬೆಳೆದು ನಿಂತಿದೆ. ಅದು ಎಸಗುತ್ತಿರುವ ನರಮೇಧಗಳನ್ನು, ಭಯೋತ್ಪಾದನಾ ಕೃತ್ಯಗಳನ್ನು ಕಂಡೂ ಕಾಣದಂತೆ ಇದ್ದು, ಆಯ್ದ ಪ್ರಕರಣಗಳಿಗೆ ಅನುಕೂಲಕ್ಕೆ ತಕ್ಕಂತೆ ನೀಡುವ ಖಂಡನೆಗಳು ಯಾವ ಪರಿಣಾಮವನ್ನೂ ಉಂಟು ಮಾಡಲಾರವು.







