ಈರುಳ್ಳಿಯ ಕಣ್ಣೀರು !

Photo: magnific
ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಕಳೆದ ಕೆಲವು ದಿನಗಳಿಂದ ಈರುಳ್ಳಿ ಬೆಲೆ ಏರುತ್ತಿದೆ. ಒಂದು ತಿಂಗಳೊಳಗೇ ದರ ಎರಡು ಪಟ್ಟು ಹೆಚ್ಚಿದೆ. ದಾಸ್ತಾನು ಕೊರತೆ, ಪೂರೈಕೆಯಲ್ಲಿನ ನಿಧಾನ ಗತಿ ಮತ್ತು ಈರುಳ್ಳಿ ಬೆಳೆವ ರಾಜ್ಯಗಳಲ್ಲಿನ ಮಳೆ ಕೊರತೆಯಿಂದಾಗಿ ಬಿತ್ತನೆ ತಡವಾಗಿರುವುದು ಬೆಲೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ಆದರೆ ಮುಖ್ಯ ಸಮಸ್ಯೆ ಈರುಳ್ಳಿಯ ಕೊರತೆಯಲ್ಲ. ಬದಲಿಗೆ, ಅಕಾಲಿಕ ಮಳೆ ಮತ್ತು ಸಂಗ್ರಹಣೆ ಸಮಯದಲ್ಲಿ ಕೊಳೆತು ಆಗಿರುವ ಭಾರೀ ನಷ್ಟ. ಭಾರತದ ಒಟ್ಟು ಈರುಳ್ಳಿ ಉತ್ಪಾದನೆಯ ಅರ್ಧಕ್ಕಿಂತ ಹೆಚ್ಚು ಪಾಲು ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಕರ್ನಾಟಕದಂಥ ಕೆಲವೇ ರಾಜ್ಯಗಳಿಂದ ಬರುತ್ತದೆ. ಈ ಪ್ರದೇಶಗಳಲ್ಲಿ ಅಕಾಲಿಕ ಮಳೆ, ಬರ ಅಥವಾ ವಿಳಂಬ ಮಾನ್ಸೂನ್ ಪರಿಸ್ಥಿತಿ ತಲೆದೋರಿದರೆ ಇಡೀ ಪೂರೈಕೆ ಸರಪಳಿ ಮುರಿಯುತ್ತದೆ. ಈರುಳ್ಳಿ ಬೆಳೆಯುವ ಮೂರು ಹಂಗಾಮುಗಳೆಂದರೆ ಮುಂಗಾರು, ಹಿಂಗಾರು ಮತ್ತು ರಬಿ (ಚಳಿಗಾಲ). ಮೊದಲೆರಡು ಹಂಗಾಮುಗಳ ಫಸಲು ಹೆಚ್ಚು ಕಾಲ ದಾಸ್ತಾನಿಗೆ ಸೂಕ್ತವಾಗಿರುವುದಿಲ್ಲ. ಹಾಗಾಗಿ, ಹೆಚ್ಚು ಅವಲಂಬನೆ ಇರುವುದೇ ಎಪ್ರಿಲ್-ಜೂನ್ ಹೊತ್ತಲ್ಲಿ ಕಟಾವಾಗುವ ರಬಿ ಹಂಗಾಮಿನ ಈರುಳ್ಳಿ ಮೇಲೆ. ದೇಶದ ಒಟ್ಟು ಉತ್ಪಾದನೆಯ ಸುಮಾರು ಮುಕ್ಕಾಲು ಭಾಗ ಈ ಹಂಗಾಮಿನಿಂದಲೇ ಸಿಗುತ್ತದೆ ಮತ್ತು ಐದಾರು ತಿಂಗಳುಗಳವರೆಗೆ ದಾಸ್ತಾನು ಮಾಡಬಹುದು.
ವರದಿಗಳ ಪ್ರಕಾರ, ದೇಶದಲ್ಲಿ ಈ ವರ್ಷ 307.37 ಲಕ್ಷ ಟನ್ ಈರುಳ್ಳಿ ಬೆಳೆಯಲಾಗಿದ್ದು, ಇದು ದೇಶೀಯ ವಾರ್ಷಿಕ ಅಗತ್ಯವಾಗಿರುವ 204 ಲಕ್ಷ ಟನ್ಗಳಿಗಿಂತ ಹೆಚ್ಚು. ಆದರೆ ರಬಿ ಬೆಳೆಯ ಕೊಯ್ಲು ಸಮಯದಲ್ಲಿ ಬಿದ್ದ ಅಕಾಲಿಕ ಮಳೆಯಿಂದಾಗಿ ಈರುಳ್ಳಿಯಲ್ಲಿ ಹೆಚ್ಚಿನ ಪ್ರಮಾಣದ ತೇವಾಂಶ ಸೇರಿತು. ಇದು ಸಂಗ್ರಹಿಸಲಾದ ಈರುಳ್ಳಿ ದೊಡ್ಡ ಪ್ರಮಾಣದಲ್ಲಿ ಕೆಡಲು ಕಾರಣವಾಯಿತು. ಸಾಮಾನ್ಯವಾಗಿ, ಪ್ರತೀ ವರ್ಷ ಸುಮಾರು ಶೇ.25ರಷ್ಟು ಈರುಳ್ಳಿ ನಷ್ಟವಾಗುತ್ತದೆ. ಆದರೆ ಈ ವರ್ಷ ತೀವ್ರ ತೇವಾಂಶದಿಂದಾಗಿ ಕೊಳೆತು ಈ ಹಾನಿಯ ಪ್ರಮಾಣ ಶೇ. 35 ರಿಂದ ಶೇ. 40 ರಷ್ಟು ಹೆಚ್ಚಿದೆ. ಸುಮಾರು 110 ರಿಂದ 120 ಲಕ್ಷ ಟನ್ ಈರುಳ್ಳಿ ಕೊಳೆತು ಹಾಳಾಗಿದೆಯೆಂದು ಅಂದಾಜಿಸಲಾಗಿದೆ. ಈ ನಷ್ಟವನ್ನು ಉಳಿದ ಉತ್ತಮ ಈರುಳ್ಳಿಯಿಂದಲೇ ತುಂಬಿಸಿಕೊಳ್ಳಬೇಕಿರುವುದರಿಂದ, ಮಾರುಕಟ್ಟೆಗೆ ಬರುವ ಉತ್ತಮ ಗುಣಮಟ್ಟದ ಈರುಳ್ಳಿಯ ಪ್ರಮಾಣ ಕಡಿಮೆಯಾಗಿದೆ ಮತ್ತು ಬೆಲೆ ಹೆಚ್ಚಿದೆ. ಅಲ್ಲದೆ, ಅಕ್ಟೋಬರ್ ಬಳಿಕ ಮಾರುಕಟ್ಟೆಗೆ ಬರಬೇಕಿರುವ ಮುಂಗಾರು ಹಂಗಾಮಿನ ಈರುಳ್ಳಿ ಇಳುವರಿಯೂ ಕುಸಿದಿರುವ ವರದಿಗಳಿವೆ.
ಈರುಳ್ಳಿ ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರಕಾರ ಬಫರ್ ಸ್ಟಾಕ್ಗಳನ್ನು ಬಿಡುಗಡೆ ಮಾಡಿ, ನಾಸಿಕ್ನಿಂದ ದಿಲ್ಲಿ, ಚೆನ್ನೈ, ಕೊಚ್ಚಿ ಮತ್ತು ಗುವಾಹಟಿ ಸೇರಿದಂತೆ ಪ್ರಮುಖ ಬಳಕೆ ಕೇಂದ್ರಗಳಿಗೆ ಕಾಂದಾ ಎಕ್ಸ್ಪ್ರೆಸ್ ಮೂಲಕ ಸಬ್ಸಿಡಿ ದರದಲ್ಲಿ ತಲುಪಿಸುತ್ತಿದೆ. ಇನ್ನೊಂದೆಡೆ, ಈರುಳ್ಳಿ ಬೆಲೆ ಏರಿಕೆಗೆ ಮಧ್ಯವರ್ತಿಗಳು ಕಾರಣ ಎಂದು ಅದೇ ಸರಕಾರ ಹೇಳುತ್ತಿದೆ. ಕಾಳಸಂತೆ, ದಾಸ್ತಾನು ಹಿಡಿದಿಟ್ಟುಕೊಳ್ಳುವುದು ಮತ್ತು ಲಾಭಕೋರತನವೇ ಬೆಲೆ ಏರಿಕೆಗೆ ಕಾರಣ ಎಂದು ಕೇಂದ್ರ ದೂಷಿಸುತ್ತಿದೆ. ರೈತರು ಮಾರುವ ಬೆಲೆ ಮತ್ತು ಚಿಲ್ಲರೆ ಮಾರುಕಟ್ಟೆ ಬೆಲೆಗಳ ನಡುವಿನ ದೊಡ್ಡ ಅಂತರವನ್ನು ತಗ್ಗಿಸಲು ಪರಿಹಾರ ಹುಡುಕುವಂತೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಐಸಿಎಆರ್ ಅನ್ನು ಕೋರಿದ್ದಾರೆ. ಹಾಗಾದರೆ ಪ್ರಶ್ನೆ, ಈ ಮಧ್ಯವರ್ತಿಗಳು ಸರಕಾರಕ್ಕಿಂತ ಪ್ರಬಲರೆ? ಅವರನ್ನು ಇಂಥ ಆಟವಾಡಲು ಬಿಟ್ಟವರು ಯಾರು?
ನಗರ ಗ್ರಾಹಕರಿಗೆ ನೆರವಾಗಿ ಮೆಚ್ಚುಗೆ ಗಳಿಸಲು ಸರಕಾರ ಬಫರ್ ಸ್ಟಾಕ್ ಬಿಡುಗಡೆಯಂಥ ತ್ವರಿತ, ತಾತ್ಕಾಲಿಕ ಕ್ರಮಗಳನ್ನು ಬಳಸುವ ಸರಕಾರ ಮಾರುಕಟ್ಟೆ ಬೆಲೆ ಕುಸಿದಾಗ ಮತ್ತು ರೈತರು ತುಂಬಾ ಕಡಿಮೆ ಬೆಲೆಗಳನ್ನು ಪಡೆದಾಗ ಸರಕಾರ ರೈತರನ್ನು ನಿರ್ಲಕ್ಷಿಸುತ್ತದೆ. ಲಾಭದ ಮಾತು ಬದಿಗಿರಲಿ, ಬಹಳಷ್ಟು ರೈತರು ತಮ್ಮ ಉತ್ಪಾದನಾ ವೆಚ್ಚವನ್ನೂ ಮರಳಿ ಪಡೆಯಲು ಸಾಧ್ಯವಾಗುವುದಿಲ್ಲ. ಈಗ ಮಾರುಕಟ್ಟೆಯಲ್ಲಿ ಗ್ರಾಹಕರು ಪ್ರತೀ ಕೆಜಿ ಈರುಳ್ಳಿಗೆ 70 ರೂ.ವರೆಗೆ ಕೊಡಬೇಕಿರುವಾಗ, ರೈತರು ಪಡೆದಿರುವುದು ಕೆಜಿಗೆ 2ರಿಂದ 4 ರೂ. ಮಾತ್ರ. ಮಹಾರಾಷ್ಟ್ರದ ರೈತರಂತೂ ಕೆಜಿಗೆ ಕೇವಲ 1 ರೂ.ಗೆ ಈರುಳ್ಳಿ ಮಾರಬೇಕಾಯಿತು. ಸರಕಾರ ನಾಫೆಡ್ ಮತ್ತು ಎನ್ಸಿಸಿಎಫ್ ಮೂಲಕ ರೈತರಿಂದ ಕನಿಷ್ಠ ಕೆಜಿಗೆ 10 ರೂ. ದರದಲ್ಲಿ ಈರುಳ್ಳಿ ಖರೀದಿಸಿದ್ದರೆ ಇಂಥ ಸ್ಥಿತಿ ಬರುತ್ತಿರಲಿಲ್ಲ ಎಂದು ರೈತ ನಾಯಕರು ಹೇಳುತ್ತಿದ್ದಾರೆ. ಯಾವಾಗಲೂ ಬೆಲೆ ಸಿಗದೆ ಕಂಗೆಡುವವರು ರೈತರಾದರೆ, ಬೆಲೆಯೇರಿಕೆಯ ಹೊರೆ ಹೊರುವವರು ಸಾಮಾನ್ಯ ಗ್ರಾಹಕರು. ಇದರ ನಡುವೆ ನಿರಾಯಾಸದ ಲಾಭವುಣ್ಣುವವರು ಮಧ್ಯವರ್ತಿಗಳು.
ಈರುಳ್ಳಿ ಬೆಲೆಯಲ್ಲಿನ ಏರಿಳಿತ ವರ್ಷವೂ ಕಾಡುವ ಸಮಸ್ಯೆ. ಹಾಗಿರುವಾಗಲೂ ಅದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳುವ ಮನಸ್ಸು ಸರಕಾರಕ್ಕಿಲ್ಲ. ಬೆಂಕಿ ಬಿದ್ದಾಗ ಬಾವಿ ತೋಡುವುದನ್ನು ಬಿಟ್ಟು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಸ್ಥಿರ ರಫ್ತು ನೀತಿಗಳು, ಸುಧಾರಿತ ಮತ್ತು ಸಕಾಲಿಕ ಸಂಗ್ರಹಣೆ, ಬೆಲೆ ಕುಸಿತದಂಥ ಸ್ಥಿತಿಯಲ್ಲಿ ರೈತರನ್ನು ರಕ್ಷಿಸುವ ಕ್ರಮಗಳಿಂದ ಮಾತ್ರವೇ ಇಂಥ ಬಿಕ್ಕಟ್ಟನ್ನು ಕಡಿಮೆ ಮಾಡಲು ಸಾಧ್ಯ ಎಂದು ತಜ್ಞರು ಹೇಳುತ್ತಾರೆ. ಮಾರುಕಟ್ಟೆ ಬೆಲೆಗಳು ತೀವ್ರ ಕನಿಷ್ಠ ಮಟ್ಟಕ್ಕೆ ಇಳಿದಾಗ ರಕ್ಷಣೆಯಿಲ್ಲದೆ ರೈತರು ಆರ್ಥಿಕವಾಗಿ ಪೆಟ್ಟು ತಿನ್ನುತ್ತಾರೆ. ಚಿಲ್ಲರೆ ಬೆಲೆಗಳು ದ್ವಿಗುಣಗೊಂಡ ನಂತರವೇ ರಂಗ ಪ್ರವೇಶಿಸಿ ಸದ್ದು ಮಾಡುವ ಸರಕಾರ ತನ್ನ ಬೆನ್ನು ತಟ್ಟಿಕೊಳ್ಳಬಹುದೇ ಹೊರತು, ರೈತರ ಪಾಲಿಗೆ ಇಲ್ಲಿ ಪರಿಹಾರವಿಲ್ಲ. ರೈತರನ್ನು ನಿರ್ಲಕ್ಷಿಸಿದಾಗ, ನಿರುತ್ಸಾಹಗೊಳಿಸಿದಾಗ, ಹತಾಶರನ್ನಾಗಿಸಿದಾಗ, ಮುಂದೆ ಸಂಭವಿಸುವ ನಷ್ಟ ಸಣ್ಣದಾಗಿರುವುದಿಲ್ಲ.






