ಪೊಲೀಸ್ ಕಾರ್ಯಾಚರಣೆಗೆ ರಾಜಕೀಯ ಬಣ್ಣ ಬೇಡ

ಸಾಂದರ್ಭಿಕ ಚಿತ್ರ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ರಾಜ್ಯದಲ್ಲಿ ಯಾವುದೇ ಪಕ್ಷದ ಸರಕಾರ ಬಂದರೂ ಕರಾವಳಿ ಪ್ರದೇಶದ ಅದರಲ್ಲೂ ದಕ್ಷಿಣ ಕನ್ನಡದ ಕೋಮು ಹಿಂಸಾಚಾರವನ್ನು ತಡೆಯಲು ಈವರೆಗೆ ಸಾಧ್ಯವಾಗಿಲ್ಲ. ಕಳೆದ ಎಪ್ರಿಲ್ ಕೊನೆಯಲ್ಲಿ ಹಿಂಸೆ ಭುಗಿಲೆದ್ದು ಮೂವರು ಸಾವಿಗೀಡಾದರು. ಈ ಹತ್ಯೆಗಳ ಬೆನ್ನಲ್ಲೇ ಹಿಂದೂ ಮತ್ತು ಮುಸ್ಲಿಮ್ ಸಮುದಾಯಗಳ ನಡುವೆ ದ್ವೇಷದ ದಳ್ಳುರಿ ಎದ್ದಿತು. ಸರಣಿಯಾಗಿ ನಡೆದ ಇತ್ತೀಚಿನ ಹತ್ಯೆಯನ್ನೇ ನೆಪವಾಗಿಟ್ಟು ಕೊಂಡು ಕರಾವಳಿಯಲ್ಲಿ ಹಿಂದೂ-ಮುಸ್ಲಿಮರ ನಡುವೆ ದ್ವೇಷದ ವಿಷಬೀಜವನ್ನು ಬಿತ್ತುವ ಹುನ್ನಾರಗಳು ತೆರೆಮರೆಯಲ್ಲಿ ನಡೆದಿವೆ. ಈ ಅಪಾಯಕಾರಿ ವಿದ್ಯಮಾನದ ಹಿನ್ನೆಲೆಯಲ್ಲಿ ತಕ್ಷಣ ಎಚ್ಚೆತ್ತುಕೊಂಡ ರಾಜ್ಯ ಸರಕಾರ ಮಂಗಳೂರಿನ ಪೊಲೀಸ್ ಆಯುಕ್ತರು ಹಾಗೂ ದಕ್ಷಿಣ ಕನ್ನಡ, ಉಡುಪಿಯ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಬೇರೆ ಕಡೆ ವರ್ಗಾವಣೆ ಮಾಡಿದೆ. ಬರೀ ಉನ್ನತ ಪೊಲೀಸಾಧಿಕಾರಿಗಳನ್ನು ವರ್ಗಾವಣೆ ಮಾಡಿದರೆ ಸಾಲದೆಂದು ಅರಿತ ಸರಕಾರ ಹಲವಾರು ವರ್ಷಗಳಿಂದ ಬೇರು ಬಿಟ್ಟಿರುವ ಹಲವು ಕೆಳ ಹಂತದ ಪೊಲೀಸಾಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ವರ್ಗಾವಣೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಹಿಂದೆ ಮಂಗಳೂರಿನಲ್ಲಿ ಕೆಲಸ ಮಾಡಿದ ಐಪಿಎಸ್ ಅಧಿಕಾರಿಗಳನ್ನು ಅಲ್ಲಿ ನಿಯೋಜಿಸಲಾಗಿದೆ.
ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ದುಷ್ಟ ಶಕ್ತಿಗಳ ನಿಗ್ರಹಕ್ಕಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಂತೆ ಪೊಲೀಸರ ಕಾರ್ಯವೈಖರಿ ಬದಲಾಗಿದೆ. ಕೋಮು ಗಲಭೆಯನ್ನು ಪ್ರಚೋದಿಸುವ ಭಾಷಣಗಳನ್ನು ಮಾಡುವವರು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ಗಳನ್ನು ಹಾಕಿ ಹಿಂಸೆಗೆ ಪ್ರಚೋದಿಸುವ ವ್ಯಕ್ತಿಗಳು, ನಿರಂತರವಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಶಾಂತಿ ಮತ್ತು ನೆಮ್ಮದಿಯನ್ನು ಕದಡುವವರ ಮೇಲೆ ಪೊಲೀಸ್ ಕಾರ್ಯಾಚರಣೆ ಆರಂಭವಾಗಿದೆ. ಕೋಮು ಹಿಂಸಾಚಾರದಲ್ಲಿ ನೇರವಾಗಿ ಭಾಗವಹಿಸುವವರನ್ನು ಪತ್ತೆ ಹಚ್ಚಿ 36 ಮಂದಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡುವ ಪ್ರಕ್ರಿಯೆ ಶುರುವಾಗಿದೆ. ವಿದೇಶಗಳಲ್ಲಿ ನೆಲೆಸಿ ಸಾಮಾಜಿಕ ಮಾಧ್ಯಮಗಳ ಮೂಲಕ ಹಿಂಸೆಯನ್ನು ಪ್ರಚೋದಿಸುವವರನ್ನು ನಿಗ್ರಹಿಸುವುದು ಅಷ್ಟು ಸುಲಭವಲ್ಲ. ಇಂತಹ ಕಿಡಿಗೇಡಿಗಳನ್ನು ಹಿಡಿಯಲು ಹೊಸ ಅಸ್ತ್ರವನ್ನು ಬಳಸುತ್ತಿರುವ ಪೊಲೀಸರು ಲುಕ್ಔಟ್ ನೋಟಿಸ್ ಹೊರಡಿಸಿ ಅಂಥವರನ್ನು ಸ್ವದೇಶಕ್ಕೆ ಕರೆಸಿಕೊಂಡು ಬಂಧಿಸಿ ಜೈಲಿಗೆ ಅಟ್ಟುತ್ತಿದ್ದಾರೆ. ಇದರಿಂದ ಜಿಲ್ಲೆಯ ಜನ ನೆಮ್ಮದಿಯಿಂದ ಇದ್ದರೂ ಕೋಮು ಹಿಂಸೆಯ ಫಲಾನುಭವಿಗಳಾದ ರಾಜಕೀಯ ನಾಯಕರಿಗೆ ಅಸಮಾಧಾನ ಉಂಟಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಮಾಯಕರ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದೆ ಎಂದು ಬಿಜೆಪಿಯ ನಾಯಕರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ತಮಗಿರುವ ಜವಾಬ್ದಾರಿಯುತ ಕೆಲಸಗಳನ್ನು ನಿರ್ವಹಿಸುವುದನ್ನು ಬಿಟ್ಟು ಮನ ಬಂದಂತೆ ಹೇಳಿಕೆಗಳನ್ನು ಕೊಡುತ್ತಿರುವ ಕೇಂದ್ರ ಸಚಿವರು, ರಾಜ್ಯ ಬಿಜೆಪಿಯ ಕೆಲವು ನಾಯಕರು ತಲೆಗೊಬ್ಬರಂತೆ ಹೇಳಿಕೆಗಳನ್ನು ನೀಡುತ್ತಾ ಪರೋಕ್ಷವಾಗಿ ಕಾನೂನು ಮತ್ತು ಸುವ್ಯವಸ್ಥೆಯ ಕಾರ್ಯವನ್ನು ನಿರ್ವಹಿಸುತ್ತಿರುವ ಪೊಲೀಸರ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಪೊಲೀಸರ ಕಾರ್ಯಕ್ಕೆ ರಾಜಕೀಯ ಬಣ್ಣವನ್ನು ಬಳಿಯುವ ಹುನ್ನಾರವೂ ನಡೆದಿದೆ. ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ದೌರ್ಜನ್ಯ ನಡೆದಿದೆಯೆಂದು ಪೊಲೀಸ್ ಕಾರ್ಯಾಚರಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಸಂಘ ಪರಿವಾರದ ಸಂಘಟನೆಗಳು ಎಷ್ಟೇ ಅಪರಾಧ ಕೃತ್ಯ ಎಸಗಲಿ ಅವರ ಮೇಲೆ ಕ್ರಮವನ್ನು ಕೈಗೊಳ್ಳಬಾರದು ಎಂಬ ದಾಟಿಯಲ್ಲಿ ಶೋಭಾ ಕರಂದ್ಲಾಜೆ ಸೇರಿದಂತೆ ಕೆಲವು ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ. ವಿಧಾನ ಸಭೆಯಲ್ಲಿ ಬಿಜೆಪಿ ನಾಯಕ ಅರವಿಂದ ಬೆಲ್ಲದ ಅವರು ಕೂಡ ಇಂತಹದೇ ಹೇಳಿಕೆ ನೀಡಿದ್ದಾರೆ. ಮಂಗಳೂರಿನಿಂದ 36 ಮಂದಿಯ ಗಡಿಪಾರಿಗಾಗಿ ಮಾಡಿದ ಪಟ್ಟಿ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಅವರ ಮನೆಯಲ್ಲಿ ಸಿದ್ಧವಾಗಿದೆ. ಸ್ಪೀಕರ್ ಖಾದರ್ ಕಾಂಗ್ರೆಸ್ ಏಜೆಂಟ್ ಎಂದು ಅತ್ಯಂತ ಅಸಭ್ಯ ಭಾಷೆಯಲ್ಲಿ ಹೇಳಿಕೆ ನೀಡಿದ್ದಾರೆ. ಸಾಂವಿಧಾನಿಕ ಸ್ಥಾನಮಾನ ಹೊಂದಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಅರವಿಂದ ಬೆಲ್ಲದ ಅವರು ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಕಾನೂನಿನ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಸರಿಯಲ್ಲ. ಧರ್ಮದ ಹೆಸರಿನಲ್ಲಿ ಸಂಘಟನೆಗಳನ್ನು ಕಟ್ಟಿಕೊಂಡು ಹಿಂಸಾಚಾರದಲ್ಲಿ ತೊಡಗುವವರನ್ನು ಕೇಂದ್ರ ಸಚಿವರು ಹಾಗೂ ಬಿಜೆಪಿಯ ನಾಯಕರು ಸಮರ್ಥಿಸುತ್ತಿರುವುದು ವಿಷಾದ ಮತ್ತು ಆತಂಕದ ಸಂಗತಿಯಾಗಿದೆ. ಇದು ಸಂವಿಧಾನಕ್ಕೆ ಬಗೆದ ಅಪಚಾರವಾಗಿದೆ.
ಅಪರಾಧಿಗಳು ಯಾರೇ ಆಗಿರಲಿ ಅವರನ್ನು ಧರ್ಮದ ಕನ್ನಡಕ ಹಾಕಿ ನೋಡುವುದು ಸರಿಯಲ್ಲ. ಮಂಗಳೂರು ಮುಂತಾದ ಕಡೆ ಹಿಂಸೆಗೆ ಪ್ರಚೋದಿಸುವವರು ಯಾವುದೇ ಸಂಘಟನೆಗೆ, ರಾಜಕೀಯ ಪಕ್ಷಕ್ಕೆ ಸೇರಿರಲಿ, ಎಷ್ಟೇ ಪ್ರಭಾವಿಯಾಗಿರಲಿ ಅಂಥವರನ್ನು ಹಿಡಿದು ಶಿಕ್ಷಿಸುವಾಗ ಯಾರೂ ಅಡ್ಡಿಯಾಗಬಾರದು. ದಕ್ಷಿಣ ಕನ್ನಡದ ಪೊಲೀಸರು ಯಾವುದೇ ಒಂದು ಸಂಘಟನೆ ಇಲ್ಲವೇ ಸಮುದಾಯಕ್ಕೆ ಸೇರಿದವರ ಮೇಲೆ ಮಾತ್ರ ಕ್ರಮ ಕೈಗೊಂಡಿಲ್ಲ. ಪೊಲೀಸರು ಸಿದ್ಧಪಡಿಸಿದ ಪಟ್ಟಿಯಲ್ಲಿ ಎಲ್ಲ ಸಮುದಾಯಗಳ ಅಪರಾಧ ಹಿನ್ನೆಲೆಯಿರುವವರು ಇದ್ದಾರೆ.
ಕರಾವಳಿ ಪ್ರದೇಶದಲ್ಲಿ ಕೋಮು ದ್ವೇಷದ ಹಿಂಸಾಚಾರದ ಹಿಂದೆ ಅಕ್ರಮ ಮರಳು ಸಾಗಾಣೆದಾರರು, ಮಾದಕ ವಸ್ತುಗಳ ಮಾರಾಟಗಾರರು, ಸೆಕ್ಯೂರಿಟಿ ಏಜೆನ್ಸಿ ನಡೆಸುವವರು ಮುಂತಾದವರು ಇದ್ದಾರೆ ಎಂಬುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಕಾನೂನು ಸುವ್ಯವಸ್ಥೆಗೆ ಸವಾಲಾಗಿರುವ ಇಂತಹವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾದಾಗ ಪಕ್ಷಭೇದ ಬದಿಗೊತ್ತಿ ಎಲ್ಲರೂ ಬೆಂಬಲಿಸಬೇಕು. ಆಗ ಮಾತ್ರ ಪೊಲೀಸರಿಗೆ ನೈತಿಕ ಸ್ಥೈರ್ಯ ಬರುತ್ತದೆ. ಬಹುತೇಕ ಕೋಮು ಗಲಭೆಗಳಲ್ಲಿ ನೇರವಾಗಿ ಭಾಗವಹಿಸುವವರು ಅಮಾಯಕ ಯುವಕರು. ಯಾರದೋ ಪ್ರಚೋದನೆಗೊಳಗಾಗಿ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಈ ಯುವಕರು ಪ್ರಾಣವನ್ನೂ ಕಳೆದುಕೊಳ್ಳುತ್ತಾರೆ. ಬದುಕಿದವರು ಜೈಲು ಪಾಲಾಗುತ್ತಾರೆ. ನೂರೆಂಟು ಕೇಸುಗಳಲ್ಲಿ ಸಿಲುಕಿ ಒದ್ದಾಡುತ್ತಾರೆ. ಆದರೆ ಇವರ ತಲೆಯಲ್ಲಿ ಕೋಮು ದ್ವೇಷದ ವಿಷವನ್ನು ತುಂಬುವವರು ಎಲ್ಲೋ ಸುರಕ್ಷಿತ ಜಾಗದಲ್ಲಿ ಇರುತ್ತಾರೆ. ಪೊಲೀಸರು ಇಂತಹವರನ್ನು ಪತ್ತೆ ಹಚ್ಚಿ ಹಿಡಿದು ಒಳಗೆ ಹಾಕಬೇಕು. ಯಾವುದೇ ರಾಜಕೀಯ ಪಕ್ಷದ ನೇತಾರನಾಗಲಿ, ಧಾರ್ಮಿಕ ಪಂಗಡಗಳ ನಾಯಕನಾಗಲಿ, ಹಣಕಾಸು ವ್ಯವಹಾರದ ಪ್ರಭಾವೀ ವ್ಯಕ್ತಿಯಾಗಲಿ ಅಂಥವರ ಬಗ್ಗೆ ಪೊಲೀಸರು ಮೆದು ಧೋರಣೆ ತಾಳಬಾರದು.ಕಾನೂನು ಸುವ್ಯವಸ್ಥೆ ಪಾಲನೆಯ ಪ್ರಶ್ನೆ ಬಂದಾಗ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲು ಹಿಂಜರಿಯಬಾರದು. ಪೊಲೀಸರ ಕಾನೂನು ಪಾಲನೆ ಮತ್ತು ರಕ್ಷಣೆಯ ಕಾರ್ಯದಲ್ಲಿ ಅಡ್ಡಿಯುಂಟು ಮಾಡುವವರನ್ನು ಹಿಡಿದು ಒಳಗೆ ಹಾಕಬೇಕು. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು. ಈ ದೃಷ್ಟಿಯಿಂದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಸಮರ್ಪಕವಾಗಿದೆ.
ಮಂಗಳೂರು ಘಟನೆಗಳಿಗೆ ಸಂಬಂಧಿಸಿದಂತೆ ಬಜರಂಗದಳದ ಕಾರ್ಯಕರ್ತ ಹಾಗೂ ರೌಡಿ ಶೀಟರ್ ಸುಹಾಸ ಶೆಟ್ಟಿ ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ(ಎನ್ಐಎ) ವಹಿಸಿ ಕೇಂದ್ರ ಸಚಿವಾಲಯ ಆದೇಶ ಹೊರಡಿಸಿದೆ. ರಾಜ್ಯ ಬಿಜೆಪಿ ನಾಯಕರ ಒತ್ತಾಯಕ್ಕೆ ಮಣಿದು ಈ ಕ್ರಮ ಕೈಗೊಳ್ಳಲಾಗಿದೆ. ಇದೇ ರೀತಿ ಉಳಿದ ಇಬ್ಬರ ಹತ್ಯೆಯ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕಾಗಿದೆ.ಕರಾವಳಿಯಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕಾಗಿದೆ.