ಬಾಲ್ಯದಿಂದ ವಂಚಿತರಾಗಿರುವ ಬಡ ಮಕ್ಕಳು

PC: istockphoto
ಭಾರತ ಸೇರಿದಂತೆ ಜಗತ್ತಿನಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಎಳೆ ಮಕ್ಕಳು ಬಡತನದ ಸುಳಿಗೆ ಸಿಲುಕಿದ್ದಾರೆ. ಜಾಗತಿಕ ಮಕ್ಕಳ ಸ್ಥಿತಿಗತಿಯ ಕುರಿತ 2025ರ ವರದಿ ಬಯಲು ಪಡಿಸಿದೆ. ಇಡೀ ಜಗತ್ತಿನಲ್ಲಿ ಬಡತನದ ಬೇಗೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿದೆ. ಆದರೆ ಭಾರತದ ಮಕ್ಕಳು ಮಾತ್ರ ಬಡತನದ ಸುಳಿಯಿಂದ ಪಾರಾಗಿಲ್ಲ, ಮಾತ್ರವಲ್ಲ ಅಂಥವರ ಪ್ರಮಾಣ ಹೆಚ್ಚುತ್ತಲೇ ಇದೆ ಎಂಬುದು ಆತಂಕಕಾರಿ ಸಂಗತಿಯಾಗಿದೆ. ಸುಮಾರು 130 ಕೆಳ ಮತ್ತು ಮಧ್ಯಮ ಆದಾಯದ ದೇಶಗಳ ಬಹು ಆಯಾಮದ ದತ್ತಾಂಶಗಳ ವಿಶ್ಲೇಷಣೆ ಪ್ರಕಾರ ಶಿಕ್ಷಣ, ಆರೋಗ್ಯ, ವಸತಿ, ಪೌಷ್ಟಿಕತೆ, ನೈರ್ಮಲ್ಯ ಮತ್ತು ಶುದ್ಧ ನೀರು ಇವುಗಳಿಂದಲೂ ಮಕ್ಕಳು ವಂಚಿತರಾಗುತ್ತಿದ್ದಾರೆ. ಹೀಗಾಗಿ ಸಹಜ ಬಾಲ್ಯವನ್ನೂ ಅವರು ಕಳೆದುಕೊಳ್ಳುತ್ತಿದ್ದಾರೆ. ಭಾರತ ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ. ಆದರೆ ಬಹುತೇಕ ಮಕ್ಕಳು ಕನಿಷ್ಠ ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಪ್ರಸಕ್ತ ವರ್ಷದ ಮುಂಗಡ ಪತ್ರದಲ್ಲಿ ಬಡ ಮಕ್ಕಳ ಉನ್ನತಿಗಾಗಿ ಸರಕಾರದಿಂದ ಬರುತ್ತಿರುವ ಅನುದಾನವನ್ನೂ ಕಡಿತ ಮಾಡಿರುವುದು ಕಳವಳದ ಸಂಗತಿಯಾಗಿದೆ.
ಆರೋಗ್ಯ ಮತ್ತು ಶಿಕ್ಷಣ ದೇಶದ ಪ್ರತಿಯೊಬ್ಬ ಮಗುವಿನ ಮೂಲಭೂತ ಹಕ್ಕು. ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ಪೂರೈಸುವುದು ಸರಕಾರಗಳ ಆದ್ಯ ಕರ್ತವ್ಯವಾಗಿದೆ. ಆದರೆ ಕೇಂದ್ರ ಸರಕಾರದ ಮುಂಗಡ ಪತ್ರದಲ್ಲಿ ವರ್ಷದಿಂದ ವರ್ಷಕ್ಕೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ನಿಗದಿ ಪಡಿಸುವ ಅನುದಾನದ ಪ್ರಮಾಣ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಈ ಹಿಂದೆ ಕೇಂದ್ರದ ಬಜೆಟ್ನಲ್ಲಿ ಮಕ್ಕಳು ಮಹಿಳೆಯರ ಅಭಿವೃದ್ಧಿ ಸಚಿವಾಲಯಕ್ಕೆ ನೀಡುವ ಅನುದಾನ ಶೇಕಡಾ 96ರಷ್ಟಿತ್ತು. ಅದು ಈಗ 2025-2026ರಲ್ಲಿ ಶೇಕಡಾ 0.5ರಷ್ಟು ಕುಸಿದಿದೆ.
ಮುಕ್ತ ಮಾರುಕಟ್ಟೆಯ ವ್ಯವಸ್ಥೆಯಲ್ಲಿ ಶಿಕ್ಷಣ, ಆರೋಗ್ಯದಂಥ ಮೂಲಭೂತ ಸೌಕರ್ಯಗಳು ಮಾಯವಾಗಿ ಎಲ್ಲವೂ ವ್ಯಾಪಾರೀಕರಣಗೊಂಡಿವೆ. ಸೇವೆಯ ಜಾಗದಲ್ಲಿ ವ್ಯಾಪಾರ ಬಂದು ಕುಳಿತಿದೆ. ಕಾರ್ಪೊರೇಟ್ ಕಂಪೆನಿಗಳ ಐದು ಲಕ್ಷ ಕೋಟಿ ರೂಪಾಯಿ ಬ್ಯಾಂಕ್ ಸಾಲವನ್ನು ಮನ್ನಾ ಮಾಡುವ ದೇಶದಲ್ಲಿ ನಾಡಿನ ಭವಿಷ್ಯದ ಸಂಪತ್ತಾದ ಮಕ್ಕಳು ಹಸಿವೆಯಿಂದ ಬಳಲುತ್ತಿರುವುದು ನಾವು ನಾಚಿಕೆ ಪಡಬೇಕಾದ ವಿಷಯವಾಗಿದೆ.
ವಾಸ್ತವವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ವರ್ಷದಿಂದ ವರ್ಷಕ್ಕೆ ಆರ್ಥಿಕ ಪ್ರಗತಿ ಕುಂಠಿತವಾಗುತ್ತಿದೆ. ಇದರಿಂದಾಗಿ ಮಕ್ಕಳ ಅಭಿವೃದ್ಧಿ ಪ್ರಗತಿ ಕೂಡ ಏಳುತ್ತಾ ಬೀಳುತ್ತಾ ಸಾಗಿದೆ. ಇದೇ ಪ್ರವೃತ್ತಿ ಮುಂದುವರಿದರೆ 2030ರ ಹೊತ್ತಿಗೆ ಜಗತ್ತಿನ ಐದು ವರ್ಷದೊಳಗಿನ 45 ಲಕ್ಷ ಮಕ್ಕಳ ಬದುಕು ಮತ್ತು ಭವಿಷ್ಯಕ್ಕೆ ಕಾರ್ಗತ್ತಲು ಕವಿಯಲಿದೆ. ಬಹುತೇಕ ಬಡ ಹಾಗೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಸಾಲದ ಭಾರದಿಂದ ತತ್ತರಿಸಿ ಹೋಗಿವೆ. ಹಲವು ದೇಶಗಳು ಆರೋಗ್ಯ ಕ್ಷೇತ್ರಕ್ಕೆ ಖರ್ಚು ಮಾಡುತ್ತಿರುವ ಹಣಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಸಾಲದ ಮೇಲಿನ ಬಡ್ಡಿಗಾಗಿ ವ್ಯಯಿಸುತ್ತಿವೆ. ಇದರ ದುಷ್ಪರಿಣಾಮ ಉಂಟಾಗುತ್ತಿರುವುದು ಮಕ್ಕಳ ಭವಿಷ್ಯದ ಮೇಲೆ ಅಂದರೆ ಅತಿಶಯೋಕ್ತಿಯಲ್ಲ. ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಪೌಷ್ಟಿಕಾಂಶದ ಆಹಾರ, ಕ್ರೀಡೆ ಇವೇ ಮೊದಲಾದ ಕ್ಷೇತ್ರಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಸಾರ್ವಜನಿಕ ಸೇವೆಯನ್ನು ಒದಗಿಸಬೇಕಾಗಿದೆ. ಎಲ್ಲಕ್ಕಿಂತ ಮೊದಲು ಮಕ್ಕಳ ಪೋಷಕರು ಆರ್ಥಿಕವಾಗಿ ಚೇತರಿಸಲು ಅನುಕೂಲವಾಗುವ ಉದ್ಯೋಗ ಅವರಿಗೆ ನೀಡಬೇಕು. ಅವರಿಗೆ ನಿಗದಿಪಡಿಸಿದ ಕನಿಷ್ಠ ವೇತನ, ಸಾಮಾಜಿಕ ಭದ್ರತಾ ಯೋಜನೆಗಳನ್ನು ನೀಡುವುದು ಸರಕಾರದ ಕರ್ತವ್ಯವಾಗಿದೆ.
ಬಾಲಕರಿಗಿಂತ ಬಾಲಕಿಯರ ಪರಿಸ್ಥಿತಿ ಇನ್ನೂ ದಾರುಣವಾಗಿದೆ. ನಮ್ಮ ಕರ್ನಾಟಕದ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರು ಗರ್ಭ ಧರಿಸುವ ಪ್ರಕರಣಗಳು ರಾಜ್ಯದಲ್ಲಿ ನಿರಂತರವಾಗಿ ಹೆಚ್ಚಾಗುತ್ತಲೇ ಇವೆ. ಸುರಕ್ಷತೆ ಮತ್ತು ಸೂಕ್ತ ಶಿಕ್ಷಣ ಒದಗಿಸಬೇಕಾದ ಸರಕಾರಿ ಹಾಸ್ಟೆಲ್ಗಳಲ್ಲಿ ಗರ್ಭಧಾರಣೆ ಪ್ರಕರಣಗಳು ಹೆಚ್ಚುತ್ತಿವೆ. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಹಳ್ಳಿಯೊಂದರಲ್ಲಿ ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಶೌಚಾಲಯದಲ್ಲಿ 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮನೀಡಿದ ಘಟನೆ ವರದಿಯಾಗಿದೆ. ಇಂಥ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ಇದರಿಂದಾಗಿ ಸರಕಾರಿ ವಸತಿ ನಿಲಯಗಳಲ್ಲಿ ಹೆಣ್ಣು ಮಕ್ಕಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಉದ್ಭವವಾಗಿದೆ.
ಸರಕಾರ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲವೆಂದಲ್ಲ. ಹಾಸ್ಟೆಲ್ಗಳಲ್ಲಿ ಸಿ.ಸಿ. ಟಿವಿ ಅಳವಡಿಕೆ, ಕಡ್ಡಾಯವಾಗಿ ಮಹಿಳಾ ಸಿಬ್ಬಂದಿ ನೇಮಕ ಮೊದಲಾದ ಕ್ರಮಗಳನ್ನು ಕೈಗೊಂಡಿದೆ. ಆದರೂ ಈ ಎಲ್ಲ ಕ್ರಮಗಳ ನಡುವೆಯೂ ಬಾಲಕಿಯರು ಸುರಕ್ಷಿತವಾಗಿಲ್ಲ ಎಂಬುದು ಆತಂಕದ ಸಂಗತಿಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ದೇಶದಲ್ಲಿ 14ರಿಂದ 18ನೇ ವಯಸ್ಸಿನ ಮೂರು ಲಕ್ಷಕ್ಕೂ ಹೆಚ್ಚು ಬಾಲಕಿಯರು ಗರ್ಭ ಧರಿಸಿರುವುದು ಅಧಿಕೃತವಾಗಿ ಬೆಳಕಿಗೆ ಬಂದಿದೆ. ಬಾಲಕಿಯರಿಗೆ ದೈಹಿಕ ಬದಲಾವಣೆಯ ಬಗ್ಗೆ ತಿಳುವಳಿಕೆ ಅಗತ್ಯವಾಗಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಯಲು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಶಿಕ್ಷಕರು, ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಕಾವಲು ಸಮಿತಿಗಳನ್ನು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಚಿಸಲಾಗಿದೆ. ಆದರೂ ಬಾಲ ಗರ್ಭಿಣಿಯರು ಹೆಚ್ಚುತ್ತಿರುವುದು ಕಾವಲು ಸಮಿತಿಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಾಗ ಮುಚ್ಚಿ ಹಾಕಲು ಪ್ರಭಾವಿ ಶಕ್ತಿಗಳು ಮಸಲತ್ತು ಮಾಡುತ್ತವೆ. ಅದಕ್ಕೆ ಅವಕಾಶ ಕೊಡಬಾರದು. ಪೊಕ್ಸೊ ಕಾನೂನಿನ ಅಡಿಯಲ್ಲಿ ಸದರಿ ಪ್ರಕರಣವನ್ನು ದಾಖಲಿಸಿಕೊಳ್ಳಬೇಕು.
ಯಾವುದೇ ನಾಗರಿಕ ಸಮಾಜದಲ್ಲಿ ಮಕ್ಕಳ ಬದುಕು, ಭವಿಷ್ಯ ಮೊದಲ ಆದ್ಯತೆಯಾಗಿರಬೇಕು. ತಮ್ಮ ಅವಶ್ಯಕತೆ ಮತ್ತು ಸುರಕ್ಷತೆಗಾಗಿ ಸಂಘಟಿತರಾಗಿ ಧ್ವನಿಯೆತ್ತುವ ಸಾಮರ್ಥ್ಯವಿಲ್ಲದ ಮಕ್ಕಳು ಮತ್ತು ಹಿರಿಯ ನಾಗರಿಕರ ಸಂರಕ್ಷಣೆಯ ಹೊಣೆಯನ್ನು ಸಮಾಜ ಮತ್ತು ಸರಕಾರಗಳೇ ಹೊತ್ತುಕೊಳ್ಳಬೇಕು. ಈ ದೇಶದಲ್ಲಿ ದೇವರು ಮತ್ತು ದೇವರ ಹೆಸರಿನಲ್ಲಿ ಸಂಘಟನೆಗಳನ್ನು ಕಟ್ಟಿಕೊಂಡು ಸಾಮಾಜಿಕ ನೆಮ್ಮದಿ ಮತ್ತು ಶಾಂತಿಯನ್ನು ಕದಡುವ ಸಾಕಷ್ಟು ಸಂಘಟನೆಗಳಿವೆ. ಅಂಥ ಸಂಘಟನೆಗಳು ಅಮಾಯಕ ಮಕ್ಕಳ ಬದುಕಿನ ಬಗ್ಗೆ ಸುರಕ್ಷತೆ ಬಗ್ಗೆ ಎಂದೂ ಸ್ಪಂದಿಸುವುದಿಲ್ಲ. ಇಲ್ಲಿ ಧರ್ಮಗುರುಗಳು, ಮಠಾಧೀಶರಿಗೇನೂ ಕೊರತೆ ಇಲ್ಲ. ಅವರೂ ಕೂಡ ಮಕ್ಕಳ ಬಗ್ಗೆ ಯಾವುದೇ ಕಾಳಜಿಯನ್ನು ತೋರಿಸುವುದಿಲ್ಲ. ಇಂಥ ಸನ್ನಿವೇಶದಲ್ಲಿ ಆರೋಗ್ಯಕರ ಮನಸ್ಸುಗಳು, ಜೀವ ಪರ ಕಾಳಜಿಯ ಸಂಘ, ಸಂಸ್ಥೆಗಳು ಮಕ್ಕಳ ನೋವು, ಯಾತನೆಗಳ ಬಗ್ಗೆ ಸ್ಪಂದಿಸಿ ಅವರ ನೆರವಿಗೆ ಬರಬೇಕು. ಸರಕಾರ ವಿಶೇಷ ಆಸಕ್ತಿ ವಹಿಸಿ ಬಡತನದ ಹಾಗೂ ಯಾತನೆಯ ಕೂಪದಿಂದ ಮಕ್ಕಳನ್ನು ಹೊರಗೆ ತಂದು ಅವರಿಗೆ ನೆಮ್ಮದಿಯ ಬದುಕನ್ನು ಕಟ್ಟಿಕೊಡುವುದು ತುರ್ತು ಅಗತ್ಯವಾಗಿದೆ.







