ಸರಕಾರಿ ಆಸ್ಪತ್ರೆಗಳ ದುರವಸ್ಥೆ

ಸಾಂದರ್ಭಿಕ ಚಿತ್ರ PC: edantseva.gov.in
ಇಂದಿನ ದುಬಾರಿ ದಿನಗಳಲ್ಲಿ ದುಡಿದುಂಡು ಜೀವಿಸುವ ಶ್ರಮಜೀವಿಗಳಿಗೆ ಮಾತ್ರವಲ್ಲ ಮಧ್ಯಮ ವರ್ಗಗಳ ಜನರಿಗೆ ಕೂಡ ವೈದ್ಯಕೀಯ ವೆಚ್ಚವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಒಂದು ಕುಟುಂಬದಲ್ಲಿ ಯಾರೇ ಕಾಯಿಲೆಗೆ ಒಳಗಾದರೂ ದುಡಿದ ಅಲ್ಪಮೊತ್ತವನ್ನು ಖಾಸಗಿ ದವಾಖಾನೆಗಳಿಗೆ ಹಾಕಿ ಬೀದಿಗೆ ಬೀಳುವ ಕುಟುಂಬಗಳು ಸಾಕಷ್ಟಿವೆ. ರಾಜ್ಯದಲ್ಲಿ ಸರಕಾರಿ ಆಸ್ಪತ್ರೆಗಳು ಸುಸಜ್ಜಿತವಾಗಿದ್ದರೆ, ಎಲ್ಲ ವೈದ್ಯಕೀಯ ಸೌಲಭ್ಯಗಳು ಅಲ್ಲಿ ಲಭ್ಯವಾಗುತ್ತಿದ್ದರೆ ಜನರು ದುಬಾರಿಯಾದ ಖಾಸಗಿ ಆಸ್ಪತ್ರೆಗಳೆಂಬ ದುಡ್ಡು ಮಾಡುವ ಅಂಗಡಿಗಳಿಗೆ ಹೋಗುತ್ತಿರಲಿಲ್ಲ. ಕೋವಿಡ್ ಕಾಲದಲ್ಲಿ ಈ ಖಾಸಗಿ ಆಸ್ಪತ್ರೆಗಳು ಅಸಹಾಯಕ ರೋಗಿಗಳನ್ನು ಹೇಗೆ ಸುಲಿಗೆ ಮಾಡಿದವೆಂಬುದು ಅನೇಕರಿಗೆ ಗೊತ್ತಿದೆ. ಆಗ ರಾಜ್ಯದಲ್ಲಿ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರವಿತ್ತು. ಆ ಸರಕಾರದ ಹಗರಣಗಳು ವಿಚಾರಣೆಯ ಹಂತದಲ್ಲಿವೆ. ಅದೇನೇ ಇರಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದ ಅಧಿಕಾರ ಸೂತ್ರ ಹಿಡಿದ ನಂತರ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಕೊಂಚ ಸುಧಾರಿಸಿದ್ದರೂ ಜನರ ನಿರೀಕ್ಷೆಯನ್ನು ತಲುಪಲು ಸಾಧ್ಯವಾಗಿಲ್ಲ.
ಪ್ರಜಾಪ್ರಭುತ್ವದಲ್ಲಿ ಜನ ಸಾಮಾನ್ಯರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಬೇಕಾದುದು ಸರಕಾರದ ಮುಖ್ಯ ಕರ್ತವ್ಯವಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಔಷಧಿಗಳು, ನುರಿತ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ, ಸುಸಜ್ಜಿತ ಪ್ರಯೋಗಾಲಯಗಳು ಇವೆಲ್ಲ ಲಭ್ಯವಿರಬೇಕು. ಆದರೆ ವಿಷಾದದ ಸಂಗತಿಯೆಂದರೆ ಹಿಂದಿನ ಬಿಜೆಪಿ ಸರಕಾರವಿದ್ದಾಗ ಹದಗೆಟ್ಟಿದ್ದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಇನ್ನೂ ಸುಧಾರಿಸಲು ಸಾಧ್ಯವಾಗಿಲ್ಲ. ಈ ಸರಕಾರಿ ಆಸ್ಪತ್ರೆಗಳಿಗೆ ಕಡಿಮೆ ಗುಣಮಟ್ಟದ ನಕಲಿ ಔಷಧಿಗಳು ಹೇಗೆ ಪೂರೈಕೆಯಾಗುತ್ತವೆ ಎಂಬ ಸಂಗತಿ ಈಗ ಬಯಲಿಗೆ ಬಂದಿದೆ. ನಗರ ಪ್ರದೇಶಗಳಲ್ಲಿ ಜನ ಸಾಮಾನ್ಯರು ತಾವು ದುಡಿದದ್ದನ್ನೆಲ್ಲ ಖಾಸಗಿ ಆಸ್ಪತ್ರೆಗಳಿಗೆ ವ್ಯಯಿಸಬೇಕಾಗಿ ಬಂದಿದೆ. ಬಡಜನರಿಗೆ ಸರಕಾರಿ ಆಸ್ಪತ್ರೆಗಳು ಜೀವ ಕಾಪಾಡುವ ಸಂಜೀವಿನಿಯಾಗಿವೆ. ಆದ್ದರಿಂದ ಸರಕಾರಿ ಆಸ್ಪತ್ರೆಗಳ ಸುಧಾರಣೆಗೆ ಮೊದಲ ಆದ್ಯತೆ ನೀಡಬೇಕಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇವೆಲ್ಲ ಗೊತ್ತಿಲ್ಲವೆಂದಲ್ಲ, ಅವರು ಪದೇ ಪದೇ ಹಿರಿಯ ಅಧಿಕಾರಿಗಳ ಸಭೆ ಕರೆದು ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಆದರೂ ಪರಿಸ್ಥಿತಿ ಸುಧಾರಿಸಿಲ್ಲ ಎಂಬುದು ಕಟು ಸತ್ಯ.
ರಾಜ್ಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಇವೆ. ಆಧುನಿಕ ಸರಕಾರಿ ಆಸ್ಪತ್ರೆಗಳು ಹಾಗೂ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗಳಿಗೂ ಕೊರತೆಯಿಲ್ಲ. ಇಷ್ಟೆಲ್ಲಾ ಇದ್ದರೂ ಇವುಗಳಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಜನರಿಗೆ ಸೂಕ್ತವಾದ ಸೇವೆ ಲಭ್ಯವಾಗುತ್ತಿಲ್ಲ.
ಇದನ್ನು ಗಮನಿಸಿದ ಮಹಾಲೇಖಪಾಲರು(ಸಿಎಜಿ), ವಿಧಾನ ಮಂಡಲಕ್ಕೆ ಸಲ್ಲಿಸಿದ ಲೆಕ್ಕ ಪರಿಶೋಧನಾ ವರದಿಯಲ್ಲಿ ರಾಜ್ಯದ ವಿವಿಧೆಡೆ ರೂ. 228.37 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಆರು ಆಸ್ಪತ್ರೆಗಳನ್ನು ಯಾಕೆ ಬಳಕೆ ಮಾಡುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂಬ ರಾಜಕಾರಣದಲ್ಲಿ ಆಸ್ಪತ್ರೆಗಳತ್ತ ಯಾರೂ ಗಮನ ನೀಡುತ್ತಿಲ್ಲ. ನಗರ ಪ್ರದೇಶ ಮಾತ್ರವಲ್ಲ, ಗ್ರಾಮೀಣ ಪ್ರದೇಶಗಳಲ್ಲೂ ಜನಸಾಮಾನ್ಯರು ತಮಗೆ ಬರುವ ಕಾಯಿಲೆ-ಕಸಾಲೆಗಳಿಗಾಗಿ ಸರಕಾರಿ ಆಸ್ಪತ್ರೆಗಳನ್ನೇ ಅವಲಂಬಿಸಿದ್ದಾರೆ. ಆದರೆ ಚಿಕಿತ್ಸೆಗೆಂದು ಬರುವವರಿಗೆ ಸೂಕ್ತ ಚಿಕಿತ್ಸೆ ನೀಡಿ ಆರೈಕೆ ಮಾಡುವ ಸ್ಥಿತಿಯಲ್ಲಿ ಸರಕಾರಿ ಆಸ್ಪತ್ರೆಗಳಿಲ್ಲ. ಒಂದೆಡೆ ಆಧುನಿಕ ಯಂತ್ರೋಪಕರಣಗಳಿದ್ದರೂ, ಅಲ್ಲಿ ಅಗತ್ಯ ವೈದ್ಯಕೀಯ ಸಿಬ್ಬಂದಿ ಇಲ್ಲ. ಇನ್ನೊಂದು ಕಡೆ ಸಾಕಷ್ಟು ವೈದ್ಯಕೀಯ ಸಿಬ್ಬಂದಿ ಇದ್ದರೂ ಅಲ್ಲಿ ಅಗತ್ಯದ ಯಂತ್ರೋಪಕರಣಗಳಿಲ್ಲ. ರೋಗವನ್ನು ಪತ್ತೆ ಮಾಡುವ ಸಲಕರಣೆಗಳಿಲ್ಲ. ಶಸ್ತ್ರ ಚಿಕಿತ್ಸೆಗೆ ಅಗತ್ಯವಿರುವ ತೀವ್ರ ನಿಗಾ ಘಟಕಗಳಿಲ್ಲ.ಔಷಧಿ ಸಂಗ್ರಹವೂ ಇರುವುದಿಲ್ಲ.
ಈ ಅವ್ಯವಸ್ಥೆಗೆ ಹಲವಾರು ಉದಾಹರಣೆಗಳಿವೆ. ಬೆಂಗಳೂರಿನ ಗೋವಿಂದ ರಾಜ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೊಳಪಟ್ಟಿರುವ ಅಗ್ರಹಾರ ದಾಸರ ಹಳ್ಳಿಯಲ್ಲಿ 106 ಕೋಟಿ ರೂ. ಖರ್ಚು ಮಾಡಿ ನಿರ್ಮಿಸಿದ, 2023ರ ಮಾರ್ಚ್ ತಿಂಗಳಿನಲ್ಲಿ ಉದ್ಘಾಟಿಸಲಾಗಿದ್ದ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಅಗತ್ಯವಿರುವಷ್ಟು ವೈದ್ಯಕೀಯ ಹಾಗೂ ಇತರ ಸಿಬ್ಬಂದಿಯನ್ನು ಒದಗಿಸದಿರುವುದರಿಂದ ಪೂರ್ಣ ಪ್ರಮಾಣದಲ್ಲಿ ಅದನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಆರೋಗ್ಯ ಇಲಾಖೆಯ ನಿಯಂತ್ರಣದಲ್ಲಿರುವ ಸದರಿ ಆಸ್ಪತ್ರೆಯ ನಾಲ್ಕು ಅಂತಸ್ತಿನ ಬೃಹತ್ ಕಟ್ಟಡದಲ್ಲಿ ಆಧುನಿಕ ಯಂತ್ರೋಪಕರಣಗಳು ಹಾಗೂ ಇತರ ಸೌಕರ್ಯಗಳು ಇದ್ದರೂ ತುರ್ತು ಚಿಕಿತ್ಸಾ ಘಟಕ ಮಾತ್ರ ಇಲ್ಲ. ಹೀಗಾಗಿ 300 ಹಾಸಿಗೆಗಳ ಈ ಆಸ್ಪತ್ರೆ ಇದ್ದೂ ಇಲ್ಲದಂತಾಗಿದೆ. ಇಂತಹ ಅನೇಕ ಅವ್ಯವಸ್ಥೆಯ ಆಸ್ಪತ್ರೆಗಳು ರಾಜ್ಯದಲ್ಲಿ ಇವೆ. ಇವುಗಳಿಗೆ ಜೀವ ನೀಡಬೇಕಾಗಿದೆ.
ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ತಜ್ಞ ವೈದ್ಯರ ಕೊರತೆ ಶೇ. 52ರಷ್ಟಿದೆ. ಈ ಕೊರತೆಗೆ ಕಾರಣವೇನೆಂದರೆ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡಲು ವೈದ್ಯರು ನಿರಾಕರಿಸುತ್ತಾರೆ. ಹೀಗಾಗಿ ವೈದ್ಯರಿಗಾಗಿ ಕಟ್ಟಿಸಿರುವ ಮನೆಗಳು ಖಾಲಿ ಬಿದ್ದಿವೆ. ವೈದ್ಯರು ಮಾತ್ರವಲ್ಲ, ದಾದಿಯರು ಹಾಗೂ ಇತರ ವೈದ್ಯಕೀಯ ಸಿಬ್ಬಂದಿಯ ಕೊರತೆ ಸಾಕಷ್ಟಿದೆ. ತಾಲೂಕು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರು ಇಲ್ಲದಿದ್ದರೆ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ಕಳಿಸಿಕೊಡಲಾಗುತ್ತದೆ. ಹೀಗೆ ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ರೋಗಿಗಳನ್ನು ಸಾಗಿಸುವುದು ಸರಿಯಲ್ಲ. ಈ ಅಲೆದಾಟದಲ್ಲಿ ರೋಗಿಯ ಕಾಯಿಲೆ ಉಲ್ಬಣಗೊಂಡರೆ ಯಾರು ಹೊಣೆ? ವಾಸ್ತವವಾಗಿ ಪ್ರತೀ ಹತ್ತು ಸಾವಿರ ಜನರಿಗೆ ಒಂಭತ್ತು ಮಂದಿ ವೈದ್ಯರು ಸೇವೆಗೆ ಲಭ್ಯವಿರಬೇಕು. ಆದರೆ ಈಗ ಪ್ರತೀ ಹತ್ತು ಸಾವಿರ ಜನಸಂಖ್ಯೆಗೆ ಒಬ್ಬರು ವೈದ್ಯರಿದ್ದಾರೆ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕೇವಲ ಹೆಸರಿಗೆ ಮಾತ್ರ ಇವೆ.
ನಮ್ಮ ಸರಕಾರಿ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಎಷ್ಟು ಅವ್ಯವಸ್ಥೆಯಿಂದ ಕೂಡಿವೆ ಎಂಬುದು ಕೋವಿಡ್ ಕಾಲದಲ್ಲಿ ಬಯಲಿಗೆ ಬಂತು. ಸರಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ, ಆಮ್ಲಜನಕ ಪೂರೈಕೆಯ ಅವ್ಯವಸ್ಥೆ, ಯಂತ್ರೋಪಕರಣಗಳು ಮತ್ತು ಔಷಧಿಯ ಕೊರತೆ, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಇಲ್ಲದಿರುವುದು ಹೀಗೆ ಹಲವಾರು ಸಮಸ್ಯೆಗಳಿಂದ ಅಧ್ವಾನಗೊಂಡಿವೆ. ಈ ಹಿನ್ನೆಲೆಯಲ್ಲಿ ಅವುಗಳನ್ನು ಸುಸಜ್ಜಿತಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಸರಕಾರ ಹೇಳಿತ್ತು. ಆದರೆ ಸುಧಾರಣಾ ಕ್ರಮಗಳು ಅನುಷ್ಠಾನಕ್ಕೆ ಸರಿಯಾಗಿ ಬರದಿರುವುದರಿಂದ ಸರಕಾರಿ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಇನ್ನೂ ಹೆಚ್ಚಿನ ಬದಲಾವಣೆಗಳನ್ನು ಕಂಡಿಲ್ಲ.
ಸರಕಾರಿ ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡ ನಿರ್ಮಾಣ ಕಾರ್ಯಕ್ಕೆ ತೋರಿಸುವ ಆಸಕ್ತಿಯನ್ನು ಅಲ್ಲಿ ವೈದ್ಯಕೀಯ ಸೌಕರ್ಯಗಳನ್ನು ಕಲ್ಪಿಸುವ ವಿಷಯದಲ್ಲೂ ತೋರಿಸಬೇಕು. ಅಲ್ಲದೆ ಸರಕಾರಿ ಆಸ್ಪತ್ರೆಗಳಲ್ಲಿ ಔಷಧಿ ಖರೀದಿಗೆ ಸಂಬಂಧಿಸಿದಂತೆ ಪಾರದರ್ಶಕತೆಯನ್ನು ಕಾಪಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಭ್ರಷ್ಟಾಚಾರದ ಪ್ರಕರಣಗಳಲ್ಲಿ ಮುಲಾಜಿಲ್ಲದೆ ಕ್ರಮಗಳನ್ನು ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ನಿರಾಕರಿಸುವ ವೈದ್ಯರ ಮನವೊಲಿಸಿ ಹಳ್ಳಿಗಾಡು ಪ್ರದೇಶಕ್ಕೆ ಕಳುಹಿಸಿಕೊಡಬೇಕು. ಸಾರ್ವಜನಿಕ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳಿಗೆ ಕಡಿಮೆಯಿಲ್ಲದಂತೆ ಕಾರ್ಯನಿರ್ವಹಿಸಬೇಕು. ಆಗ ಜನರಿಗೆ ನಂಬಿಕೆ ಬರುತ್ತದೆ.