ಸರಕಾರಿ ಶಾಲೆಗಳ ‘ಪ್ರಾರ್ಥನೆ’

ಸಾಂದರ್ಭಿಕ ಚಿತ್ರ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘ತೃತೀಯ ಭಾಷೆಯ’ ಗೊಂದಲಗಳ ನಡುವೆಯೇ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಸರಕಾರ ಮತ್ತು ಹೈಕೋರ್ಟ್ನ ಜಗ್ಗಾಟಗಳು ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎನ್ನುವುದಕ್ಕೆ ತೃತೀಯ ಭಾಷೆಯಲ್ಲಿ ಶೇ. 98.55 ಫಲಿತಾಂಶ ಬಂದಿರುವುದೇ ಸಾಕ್ಷಿ. ತೃತೀಯ ಭಾಷೆ ಹಿಂದಿಯಲ್ಲಿ 31,255 ವಿದ್ಯಾರ್ಥಿಗಳು ಶೇ. 100ರಷ್ಟು ಅಂಕಗಳನ್ನು ಪಡೆದಿದ್ದಾರೆ. ಆದುದರಿಂದ, ಗೊಂದಲಗಳಿಂದ ಪರೀಕ್ಷೆಯ ಫಲಿತಾಂಶಕ್ಕೆ ಯಾವುದೇ ರೀತಿಯ ಅಡ್ಡಿಯಾಗಿದೆ ಎಂದು ಪೋಷಕರು ಹೇಳುವಂತಿಲ್ಲ. ಉಳಿದಂತೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಎಸೆಸೆಲ್ಸಿಯಲ್ಲೂ ಸಾಧನೆ ತೋರಿಸಿದ್ದಾರೆ. ಬಾಲಕಿಯರ ಸಾಧನೆಯೂ ಗಮನಾರ್ಹವಾಗಿದೆ. ಇತ್ತೀಚೆಗೆ ಹೊರ ಬಿದ್ದ ಪಿಯುಸಿ ಫಲಿತಾಂಶದಲ್ಲೂ ರಾಜ್ಯದ ವಿದ್ಯಾರ್ಥಿಗಳ ಸಾಧನೆ ಕಡಿಮೆಯಿರಲಿಲ್ಲ. ಪಿಯುಸಿ ಫಲಿತಾಂಶದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದರು. ಸಮಾಜ ಕಲ್ಯಾಣ ಇಲಾಖೆಯ ಮೂಲಕ ದುರ್ಬಲ ಸಮುದಾಯದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹೆಚ್ಚು ಸಾಧನೆ ಮಾಡಲು ಸಾಧ್ಯವಾಗಿತ್ತು. ರಾಜ್ಯದ ವಸತಿ ಕಾಲೇಜುಗಳ ಫಲಿತಾಂಶ ಶೇ. 97.22ಕ್ಕೆ ಏರಿಕೆಯಾಗಿತ್ತು. ವಸತಿ ಶಾಲೆಯ 2,321 ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣರಾಗಿದ್ದರು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿರುವ ಮೊರಾರ್ಜಿ ದೇಸಾಯಿ ವಿಜ್ಞಾನ ಪದವಿ ಪೂರ್ವ ವಸತಿ ಕಾಲೇಜಿನಲ್ಲಿ ಕಲಿಯುತ್ತಿದ್ದ ಅಂಕಿತ್ ಭೀಮಪ್ಪ ಅವರು 598 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಪಡೆದಿದ್ದರು. ಸರಕಾರಿ ಕಾಲೇಜುಗಳಲ್ಲಿ ರ್ಯಾಂಕ್ ಪಡೆದ ಏಕೈಕ ವಿದ್ಯಾರ್ಥಿ ಎಂದು ಇವರು ಗುರುತಿಸಲ್ಪಟ್ಟಿದ್ದರು. ಮಾತ್ರವಲ್ಲ, 72 ವಸತಿ ಕಾಲೇಜುಗಳ ಪೈಕಿ 34 ವಸತಿ ಕಾಲೇಜುಗಳು ಶೇ. 100 ಫಲಿತಾಂಶವನ್ನು ನೀಡಿವ್ದವು.
ಎಸೆಸೆಲ್ಸಿ ಪರೀಕ್ಷೆಯಲ್ಲೂ ಇಂತಹ ಗಮನಾರ್ಹ ಸಾಧನೆಗಳನ್ನು ನಾವು ಈ ಬಾರಿ ಗಮನಿಸಬಹುದು. ಈ ಬಾರಿ ರಾಜ್ಯದ ಏಳು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಬಂದಿದ್ದಾರೆ. ಇವರಲ್ಲಿ ಬೆಳಗಾವಿಯ ಅಥಣಿ ತಾಲೂಕಿನ ಕಟಗೇರಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯೊಬ್ಬರು ಸೇರ್ಪಡೆಯಾಗಿರುವುದು ಸರಕಾರದ ಪಾಲಿಗೆ ಹೆಮ್ಮೆಯ ವಿಷಯವಾಗಬೇಕು. ಸರಕಾರಿ ಶಾಲೆಯೆಂದು ಮೂಗುಮುರಿಯುವವರಿಗೆ ವಿದ್ಯಾರ್ಥಿನಿ ಪ್ರಾರ್ಥನಾ ನಾಗಪ್ಪ ಬಿರಾದಾರ ಅವರು ತನ್ನ ಸಾಧನೆಯ ಮೂಲಕ ಸಂದೇಶವೊಂದನ್ನು ನೀಡಿದ್ದಾರೆ. ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದ ಅವರು ಈ ಮೂಲಕ ಸರಕಾರಿ ಶಾಲೆಗಳನ್ನು ಇನ್ನಾದರೂ ಉಳಿಸಿ ಬೆಳೆಸಿ ಎನ್ನುವ ಪ್ರಾರ್ಥನೆಯನ್ನು ಸರಕಾರಕ್ಕೆ ಸಲ್ಲಿಸಿದ್ದಾರೆ. ಮೂಲಭೂತ ಸೌಕರ್ಯಗಳ ಕೊರತೆಗಳ ನಡುವೆಯೇ ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿನಿಯೊಬ್ಬಳು ರಾಜ್ಯಕ್ಕೆ ಪ್ರಥಮ ಬರಬಹುದು ಎಂದಾದರೆ, ಖಾಸಗಿ ಶಾಲೆಗಳಿಗಿರುವ ಮೂಲಭೂತ ಸೌಕರ್ಯಗಳು ಈ ಸರಕಾರಿ ಶಾಲೆಗಳಿಗೆ ದೊರಕಿದರೆ ಅವರು ಆತ್ಮವಿಶ್ವಾಸದಿಂದ ಮುನ್ನುಗ್ಗಬಲ್ಲರು, ಖಾಸಗಿ ಶಾಲೆಗಳನ್ನು ಹಿಂದಿಕ್ಕಬಲ್ಲರು ಎನ್ನುವುದನ್ನು ಪ್ರಾರ್ಥನಾ ತನ್ನ ಅಂಕದ ಮೂಲಕ ನಾಡಿಗೆ ಮನವರಿಕೆ ಮಾಡಿಸಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಯಾಗುತ್ತಿದೆ ಎಂಬ ನೆಪವನ್ನು ಮುಂದೊಡ್ಡಿ ಸರಕಾರ ಈಗಾಗಲೇ 3,000ಕ್ಕೂ ಅಧಿಕ ಸರಕಾರಿ ಶಾಲೆಗಳನ್ನು ಮುಚ್ಚಿದೆ. ಇನ್ನಷ್ಟು ಶಾಲೆಗಳನ್ನು ಮುಚ್ಚಲು ನೆಪಗಳನ್ನು ಹುಡುಕುತ್ತಿದೆ. ಪೋಷಕರಲ್ಲೂ ಸರಕಾರಿ ಶಾಲೆಗಳ ಬಗ್ಗೆ ಪೂರ್ವಾಗ್ರಹಗಳು ಹೆಚ್ಚುತ್ತಿವೆ. ಪ್ರಾರ್ಥನಾಳ ಸಾಧನೆ ಈ ಪೂರ್ವಾಗ್ರಹಗಳನ್ನು ನಿವಾರಿಸುವಂತಿದೆ. ಖಾಸಗಿ ಶಾಲೆಗಳು ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಯ ಮೂಲಕ ನಿರ್ವಹಿಸಲ್ಪಟ್ಟರೆ ಸರಕಾರಿ ಶಾಲೆಗಳು ಒಂದು ಸರಕಾರದಿಂದ ನಿರ್ವಹಿಸಲ್ಪಡುತ್ತವೆ. ಸರಕಾರಿ ಶಾಲೆಗಳ ಅಧ್ಯಾಪಕ ಯಾವುದೇ ಖಾಸಗಿ ಶಿಕ್ಷಕನಿಗಿಂತ ಹೆಚ್ಚು ವೇತನವನ್ನು ಪಡೆಯುತ್ತಾನೆ. ಆತ ಶಿಕ್ಷಕ ಹುದ್ದೆಯನ್ನು ಪಡೆಯಬೇಕಾದರೆ ಸಾಕಷ್ಟು ಅರ್ಹತೆಯನ್ನು ಹೊಂದಿರಬೇಕಾಗುತ್ತದೆ. ಇವೆಲ್ಲವೂ ಖಾಸಗಿ ಶಾಲೆಗಳ ಶಿಕ್ಷಕರಿಗೆ ಇರಬೇಕಾಗಿಲ್ಲ. ಆದರೆ ಫಲಿತಾಂಶ ಬರುವ ಸಂದರ್ಭದಲ್ಲಿ ಯಾಕೆ ಸರಕಾರಿ ಶಾಲೆಗಳು ಹಿನ್ನಡೆ ಅನುಭವಿಸುತ್ತವೆೆ? ಇದಕ್ಕೂ ಉತ್ತರ ಕಂಡುಕೊಳ್ಳಬೇಕಾಗಿದೆ. ಶೈಕ್ಷಣಿಕವಾಗಿ ಕಳಪೆ ಸಾಧನೆ ಮಾಡುತ್ತಿರುವ ರಾಯಚೂರು ಜಿಲ್ಲೆಯ ವಿದ್ಯಾರ್ಥಿಯೂ ಈ ಬಾರಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದಿದ್ದಾನೆ. ಈತನ ಸಾಧನೆಯೂ ಅಭಿನಂದನಾರ್ಹವಾಗಿದೆ.
ಎಸೆಸೆಲ್ಸಿಯಲ್ಲಿ ಅಲ್ಪಸಂಖ್ಯಾತರ ನಿರ್ದೇಶನಾಲಯದ ವಸತಿ ಶಾಲೆಗಳಲ್ಲಿ ಶೇ. 98.06 ಫಲಿತಾಂಶ ಹೊರಬಿದ್ದಿದೆ. 84 ವಸತಿ ಶಾಲೆಗಳಲ್ಲಿ 3,462 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, 3,395 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಈ ವಸತಿ ಶಾಲೆಗಳು ಶೇ. 81 ಫಲಿತಾಂಶವನ್ನು ತನ್ನದಾಗಿಸಿಕೊಂಡಿದ್ದು, ಈ ಬಾರಿ ಹೆಚ್ಚಳವಾಗಿದೆ. ಅದೇ ರೀತಿ 198 ಮೌಲಾನಾ ಆಝಾದ್ ಶಾಲೆಗಳಲ್ಲಿ ಶೇ. 90.14ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷ ಶೇ. 51.01 ಫಲಿತಾಂಶ ಬಂದಿತ್ತು. ಅಲ್ಪಸಂಖ್ಯಾತ ಸಮುದಾಯ ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಬರಬೇಕು ಎನ್ನುವ ಒತ್ತಾಯಕ್ಕೆ ಇದು ಪೂರಕವಾಗಿದೆ. ಸಾಚಾರ್ ವರದಿಯು ಅಲ್ಪಸಂಖ್ಯಾತ ಸಮುದಾಯವು ಶೈಕ್ಷಣಿಕವಾಗಿ ಅನುಭವಿಸುತ್ತಿರುವ ಹಿನ್ನಡೆಯ ಬಗ್ಗೆ ಈ ಹಿಂದೆ ಬೆಳಕು ಚೆಲ್ಲಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸರಕಾರದ ನೇತೃತ್ವದಲ್ಲೇ ಅಲ್ಪಸಂಖ್ಯಾತರ ಶೈಕ್ಷಣಿಕ ಬದುಕಿಗೆ ಪೂರಕವಾಗಿರುವ ಹಲವು ಸವಲತ್ತುಗಳಿಗೆ, ಅನುದಾನಗಳಿಗೆ ಕತ್ತರಿ ಬೀಳ ತೊಡಗಿತ್ತು. ಕೋಮು ರಾಜಕಾರಣದ ದುಷ್ಪರಿಣಾಮ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಮೇಲೂ ಬೀಳತೊಡಗಿತ್ತು. ಎಲ್ಲ ಅಡೆತಡೆಗಳ ನಡುವೆ ಅಲ್ಪಸಂಖ್ಯಾತ ವಸತಿ ಶಾಲೆಗಳ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ತೋರಿಸಿದ ಸಾಧನೆ ಆಶಾದಾಯಕ ಬೆಳವಣಿಗೆೆಯಾಗಿದೆ. ವಸತಿ ಶಾಲೆಗಳ ಬಗ್ಗೆ ಶಂಕೆ, ಅನುಮಾನಗಳಿರುವ ಪೋಷಕರಿಗೆ ಆತ್ಮವಿಶ್ವಾಸ ತುಂಬುವಂತಿದೆ ಈ ಫಲಿತಾಂಶ. ಇದೇ ಸಂದರ್ಭಲ್ಲಿ ಮುಸ್ಲಿಮ್ ಸಮುದಾಯದ ವಿದ್ಯಾರ್ಥಿನಿಯರೂ ಕೂಡ ರಾಜ್ಯಾದ್ಯಂತ ಉತ್ತರ ಫಲಿತಾಂಶವನ್ನು ನೀಡಿದ್ದಾರೆ. ಸಾಮಾಜಿಕವಾಗಿ ಹಲವು ಅಭದ್ರತೆ, ಆತಂಕಗಳ ನಡುವೆ ಮುಸ್ಲಿಮ್ ವಿದ್ಯಾರ್ಥಿನಿಯರು ಶಾಲೆ, ಕಾಲೇಜುಗಳಿಗೆ ಕಾಲಿಡುತ್ತಿದ್ದಾರೆ. ಕೆಲವು ರಾಜಕೀಯ ಪಕ್ಷಗಳು ಸೃಷ್ಟಿಸಿರುವ ಹಿಜಾಬ್ ವಿವಾದ ಅವರ ಶೈಕ್ಷಣಿಕ ಹಾದಿಯನ್ನು ಇನ್ನಷ್ಟು ಜಟಿಲಗೊಳಿಸಿದೆ. ಇವೆಲ್ಲದರ ನಡುವೆಯೂ ಅವರು ಅತಿ ಹೆಚ್ಚಿನ ಸಾಧನೆಗಳನ್ನು ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ನಡುವೆ ವಿಭಜನೆಯ ವಿಷ ಬೀಜ ಬಿತ್ತುವ ರಾಜಕಾರಣಿಗಳಿಗೆ ಈ ವಿದ್ಯಾರ್ಥಿನಿಯರು ತಮ್ಮ ಸಾಧನೆಯ ಮೂಲಕವೇ ಸಂದೇಶವನ್ನು ತಲುಪಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮೈಸೂರಿನ ನಂಜನಗೂಡು ಸಮೀಪ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಮಾಡಿಕೊಂಡಿರುವ ಘಟನೆ ನಡೆದಿದೆ. ಬಾಲಕಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದರೂ, ಅಂಕ ಸಾಕಾಗಲಿಲ್ಲ ಎಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. ಅಂಕದ ಹೆಸರಿನಲ್ಲಿ ನಮ್ಮ ವಿದ್ಯಾರ್ಥಿಗಳ ಮೇಲೆ ಹೇರಲಾಗುತ್ತಿರುವ ಒತ್ತಡಗಳಿಗೆ ಈ ಕೃತ್ಯ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರು ಮಾಡುವುದೆಂದರೆ, ಹೇಗೆ ಹೆಚ್ಚು ಅಂಕಗಳನ್ನು ಪಡೆಯುವುದು ಎನ್ನುವುದನ್ನಷ್ಟೇ ಹೇಳಿಕೊಡುವುದಲ್ಲ. ಅಂಕಗಳು ಕಡಿಮೆ ಬಂದಾಗ ಏನು ಮಾಡಬೇಕು ಎನ್ನುವುದರ ಬಗ್ಗೆಯೂ ಅವರಿಗೆ ತಿಳಿಸಿಕೊಡಬೇಕಾದುದು ಶಿಕ್ಷಕರ ಹೊಣೆ. ಕಡಿಮೆ ಅಂಕ ಬಂದ ವಿದ್ಯಾರ್ಥಿನಿಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕುವ ಅವಕಾಶವಿತ್ತು. ಅಂಕ ಕಡಿಮೆ ಬಿದ್ದರೂ ಇನ್ನಿತರ ಸೃಜನಶೀಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಬೆಳೆಯುವ ಅವಕಾಶಗಳು ಧಾರಾಳ ಇದ್ದವು. ಆದರೆ ಅದನ್ನು ಆಕೆಗೆ ಮನವರಿಕೆ ಮಾಡುವಲ್ಲಿ ಶಿಕ್ಷಕರು ಮತ್ತು ಪೋಷಕರು ವಿಫಲರಾಗಿದ್ದಾರೆ. ಎಲ್ಲ ಬಣ್ಣ ಮಸಿ ನುಂಗಿತು ಎನ್ನುವಂತೆ, ಈ ವಿದ್ಯಾರ್ಥಿನಿಯ ಸಾವಿನ ದುಃಖದ ಮುಂದೆ ಅಷ್ಟೂ ವಿದ್ಯಾರ್ಥಿಗಳ ಸಾಧನೆ ವ್ಯರ್ಥವಾದಂತಾಯಿತು.






